ಸಂಧಿವಾತ ನೋವು online desk
ಅಂಕಣಗಳು

ನಡೆಯುವ ವಿಧಾನ ಬದಲಿಸಿ, ಸಂಧಿವಾತ ನೋವಿನಿಂದ ದೂರವಿರಿ (ಕುಶಲವೇ ಕ್ಷೇಮವೇ)

ಹೊಸ ಸಂಶೋಧನೆಯೊಂದು ನೋವು ನಿವಾರಣೆ ಮತ್ತು ಕೀಲುಗಳ ರಕ್ಷಣೆ ಸ್ವಲ್ಪ ವಿಭಿನ್ನವಾಗಿ ನಡೆಯಲು ಕಲಿಯುವಂತಹ ಸರಳವಾದ ವಿಧಾನದ ಮೂಲಕ ಸಾಧ್ಯವಾಗಬಹುದು ಎಂದು ತೋರಿಸಿದೆ.

ಸಂಧಿವಾತವು ವಿಶ್ವಾದ್ಯಂತ ಕಂಡುಬರುವ ಅತ್ಯಂತ ಸಾಮಾನ್ಯವಾದ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ದೀರ್ಘಕಾಲದ ನೋವು, ಬಿಗಿತ ಮತ್ತು ಚಲನಶೀಲತೆಗೆ ತೊಂದರೆಯನ್ನುಂಟುಮಾಡುತ್ತದೆ. ಅಸ್ಥಿಸಂಧಿವಾತದಿಂದ ಬಳಲುತ್ತಿರುವ ಜನರಿಗೆ ವಿಶೇಷವಾಗಿ ಮೊಣಕಾಲುಗಳಲ್ಲಿ ಸಮಸ್ಯೆ ಗಂಭೀರವಾದಾಗ ಅವರ ಆಯ್ಕೆಗಳು ಔಷಧಿಗಳು, ಚುಚ್ಚುಮದ್ದುಗಳು ಅಥವಾ ಅಂತಿಮವಾಗಿ ಶಸ್ತ್ರಚಿಕಿತ್ಸೆಗೆ ಸೀಮಿತವಾಗಿವೆ ಎಂದು ಹೇಳಲಾಗುತ್ತದೆ.

ಆದರೆ ಹೊಸ ಸಂಶೋಧನೆಯೊಂದು ನೋವು ನಿವಾರಣೆ ಮತ್ತು ಕೀಲುಗಳ ರಕ್ಷಣೆ ಸ್ವಲ್ಪ ವಿಭಿನ್ನವಾಗಿ ನಡೆಯಲು ಕಲಿಯುವಂತಹ ಸರಳವಾದ ವಿಧಾನದ ಮೂಲಕ ಸಾಧ್ಯವಾಗಬಹುದು ಎಂದು ತೋರಿಸಿದೆ. ನಡೆಯುವಾಗ ರೋಗಿಗಳು ಪಾದಗಳನ್ನು ಇಡುವ ವಿಧಾನಕ್ಕೆ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಮೊಣಕಾಲಿನ ಸವೆದ ಭಾಗಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ನೋವನ್ನು ಕಡಿಮೆ ಮಾಡಲು ಮತ್ತು ಅಸ್ಥಿರುಜ್ಜು ಕ್ಷೀಣಿಸುವುದನ್ನು ನಿಧಾನಗೊಳಿಸಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ನಡೆಯುವ ವಿಧಾನ ಕುರಿತು ಸಂಶೋಧನೆ

ಈ ಸಂಶೋಧನೆಯನ್ನು ಅಮೆರಿಕದ ಉಟಾಹ್, ನ್ಯೂಯಾರ್ಕ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಪ್ರಮುಖ ಸಂಸ್ಥೆಗಳ ಸಂಶೋಧಕರು ನಡೆಸಿದ್ದಾರೆ. ಇದನ್ನು ಅಲ್ಲಿನ ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ ಮತ್ತು ಇದು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸ್ಥಿತಿಗೆ ಔಷಧೇತರ, ಶಸ್ತ್ರಚಿಕಿತ್ಸೆಯಲ್ಲದ ಪರಿಹಾರದ ಕಡೆಗೆ ಇದು ಗಮನಸೆಳೆದಿರುವುದರಿಂದ ಈಗಾಗಲೇ ಆಸಕ್ತಿಯನ್ನು ಹುಟ್ಟುಹಾಕಿದೆ. ಮಧ್ಯದ ಮೊಣಕಾಲಿನ ಅಸ್ಥಿಸಂಧಿವಾತದಿಂದ ಬಳಲುತ್ತಿರುವ ಜನರೊಂದಿಗೆ ಸಂಶೋಧಕರು ಕೆಲಸ ಮಾಡಿದ್ದಾರೆ. ಇದು ಮೊಣಕಾಲಿನ ಒಳಭಾಗವನ್ನು ಹಾನಿಗೊಳಿಸುವ ರೋಗದ ಒಂದು ರೂಪವಾಗಿದ್ದು ಸಂಧಿವಾತದ ಸಾಮಾನ್ಯ ಮಾದರಿಗಳಲ್ಲಿ ಒಂದಾಗಿದೆ (ವಿಶೇಷವಾಗಿ ಮಧ್ಯವಯಸ್ಕ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ). ರೋಗಿಗಳು ನಡೆಯುವಾಗ ಅವರ ಪಾದಗಳ ಕೋನಕ್ಕೆ ಸ್ವಲ್ಪ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ತರಬೇತಿ ನೀಡಿದರೆ ಕೀಲುಗಳ ನೋವಿನ ಭಾಗದ ಮೇಲೆ ಬೀಳುವ ಭಾರದ ಪ್ರಮಾಣವನ್ನು ಬದಲಾಯಿಸಬಹುದು ಮತ್ತು ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂಬುದು ಈ ಸಂಶೋಧನೆಯ ಕೇಂದ್ರ ಕಲ್ಪನೆ.

ಸಂಶೋಧನೆ ನಡೆಸಿದ ವಿಧಾನ

ಇದನ್ನು ಕಾರ್ಯರೂಪಕ್ಕೆ ತರಲು ಸಂಶೋಧಕರ ತಂಡವು ಮೊದಲು ಕ್ಯಾಮೆರಾಗಳು ಮತ್ತು ಮೊಣಕಾಲುಗಳಾದ್ಯಂತ ಬಲ ಹೇಗೆ ಕಾಲಿನಲ್ಲಿ ಹರಡುತ್ತದೆ ಎಂಬುದನ್ನು ವಿಶೇಷ ಟ್ರೆಡ್‌ಮಿಲ್‌ಗಳನ್ನು ಬಳಸಿಕೊಂಡು ವಿವರವಾದ ಮೌಲ್ಯಮಾಪನಗಳನ್ನು ನಡೆಸಿತು. ಪ್ರತಿಯೊಬ್ಬ ರೋಗಿಯನೂ ವಿಭಿನ್ನ ಪಾದದ ಕೋನಗಳೊಂದಿಗೆ ಪರೀಕ್ಷಿಸಲಾಯಿತು, ಉದಾಹರಣೆಗೆ ಕಾಲ್ಬೆರಳುಗಳನ್ನು ಸುಮಾರು ಐದರಿಂದ ಹತ್ತು ಡಿಗ್ರಿಗಳಷ್ಟು ಒಳಮುಖವಾಗಿ ಅಥವಾ ಹೊರಮುಖವಾಗಿ ತಿರುಗಿಸುವುದು. ಹಾನಿಗೊಳಗಾದ ಪ್ರದೇಶದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಯಾವ ಕೋನವು ಗರಿಷ್ಠ ಪರಿಹಾರವನ್ನು ನೀಡುತ್ತದೆ ಎಂಬುದನ್ನು ಸಂಶೋಧಕರು ಗುರುತಿಸಿದರು. ಯಾವುದೇ ಹೊಂದಾಣಿಕೆಯೊಂದಿಗೆ ಮೊಣಕಾಲುಗಳು ಸುಧಾರಣೆಯನ್ನು ತೋರಿಸದ ಜನರನ್ನು ಪ್ರಯೋಗದಲ್ಲಿ ಸೇರಿಸಿಕೊಳ್ಳಲಿಲ್ಲ. ಉಳಿದವರನ್ನು ಎರಡು ಗುಂಪುಗಳಾಗಿ ವಿಂಗಡಿಸಿದರು. ಒಂದು ಗುಂಪಿಗೆ ವೈಯಕ್ತಿಕಗೊಳಿಸಿದ ನಡಿಗೆ ತರಬೇತಿಯನ್ನು ನೀಡಲಾಯಿತು, ಅಲ್ಲಿ ಅವರಿಗೆ ಮೊಣಕಾಲಿನ ಒತ್ತಡವನ್ನು ಕಡಿಮೆ ಮಾಡುವ ಪಾದದ ಕೋನವನ್ನು ಬಳಸಿಕೊಂಡು ನಡೆಯಲು ಕಲಿಸಲಾಯಿತು. ಇನ್ನೊಂದು ಗುಂಪು ನಿಯಂತ್ರಣ ಗುಂಪಾಗಿ ಕಾರ್ಯನಿರ್ವಹಿಸಿತು ಮತ್ತು ಅವರಿಗೆ ಸಾಮಾನ್ಯ ರೀತಿಯಲ್ಲಿ ನಡೆಯುವುದನ್ನು ಮುಂದುವರೆಸಿ ಎಂದು ಹೇಳಲಾಯಿತು.

ರೋಗಿಗಳಿಗೆ ನಡೆಯುವ ವಿಧಾನ ಬದಲಿಸುವ ತರಬೇತಿ

ರೋಗಿಗಳಿಗೆ ತರಬೇತಿಯನ್ನು ನವೀನ ರೀತಿಯಲ್ಲಿ ನೀಡಲಾಯಿತು. ಆರಂಭಿಕ ವಾರಗಳಲ್ಲಿ, ಸಂಶೋಧಕನೆಯಲ್ಲಿ ಭಾಗವಹಿಸುವವರು ಪ್ರಯೋಗಾಲಯಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ತಮ್ಮ ನಿಗದಿತ ಪಾದದ ಕೋನದೊಂದಿಗೆ ನಡೆಯುವುದನ್ನು ಅಭ್ಯಾಸ ಮಾಡಿದರು. ಅವರಿಗೆ ಕಲಿಯಲು ಸಹಾಯ ಮಾಡಲು, ಸಂಶೋಧಕರು ಸರಿಯಾದ ಭಂಗಿಯನ್ನು ಸಾಧಿಸಿದಾಗಲೆಲ್ಲಾ ಪ್ರತಿಕ್ರಿಯೆ ನೀಡಲು ಕಾಲುಗಳ ಮೇಲೆ ಸಣ್ಣ ಕಂಪಿಸುವ ಸಾಧನಗಳನ್ನು ಬಳಸಿದರು. ಕ್ರಮೇಣ ಇದು ಹೆಚ್ಚು ಸ್ವಾಭಾವಿಕವಾಯಿತು ಮತ್ತು ರೋಗಿಗಳಿಗೆ ನಂತರ ಕನಿಷ್ಠ ಇಪ್ಪತ್ತು ನಿಮಿಷಗಳ ಕಾಲ ಮನೆಯಲ್ಲಿ ಪ್ರತಿದಿನ ಅಭ್ಯಾಸವನ್ನು ಮುಂದುವರಿಸಲು ಪ್ರೋತ್ಸಾಹಿಸಲಾಯಿತು. ಅವರು ಸರಿಯಾದ ಕೋನವನ್ನು ಕಾಯ್ದುಕೊಳ್ಳುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಫಾಲೋ-ಅಪ್ ಭೇಟಿಗಳನ್ನು ನಿಗದಿಪಡಿಸಲಾಯಿತು, ನಿಖರತೆಯನ್ನು ಒಂದು ಹಂತದೊಳಗೆ ಪರಿಶೀಲಿಸಲಾಯಿತು.

ಸಂಶೋಧನೆಯ ಫಲಿತಾಂಶ

ಒಂದು ವರ್ಷದ ನಂತರ ಫಲಿತಾಂಶಗಳು ಗಮನಾರ್ಹವಾಗಿದ್ದವು. ಸೂಕ್ತವಾಗಿ ನಡೆಯಲು ತರಬೇತಿ ಪಡೆದ ರೋಗಿಗಳು ನಿಯಂತ್ರಣ ಗುಂಪಿನಲ್ಲಿರುವ ರೋಗಿಗಳಿಗಿಂತ ನೋವು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ತಿಳಿಸಿದರು. ನೋವು ನಿವಾರಣೆಯು ಸಾಧಾರಣವಾಗಿರಲಿಲ್ಲ ಆದರೆ ಪ್ರಬಲ ನೋವುನಿವಾರಕ ಔಷಧಿಗಳನ್ನು ತೆಗೆದುಕೊಂಡ ನಂತರ ಅನೇಕ ಜನರು ಅನುಭವಿಸುವುದಕ್ಕೆ ಸಮನಾಗಿರುತ್ತದೆ ಎಂದು ಕಂಡುಬಂದಿದೆ. ಮುಖ್ಯವಾಗಿ ತಮ್ಮ ನಡಿಗೆ ಶೈಲಿಯನ್ನು ಬದಲಾಯಿಸಿದವರ ಮೊಣಕಾಲಿನ ಅಸ್ಥಿರಜ್ಜು ನಿಧಾನಗತಿಯ ಕ್ಷೀಣತೆಯನ್ನು ತೋರಿದೆ ಎಂದು ಎಂಆರ್‌ಐ ಸ್ಕ್ಯಾನ್‌ಗಳು ತೋರಿಸಿವೆ.

ಮೊದಲ ಬಾರಿಗೆ ನಡಿಗೆ ಮರುತರಬೇತಿಯು ಸಂಧಿವಾತವನ್ನು ನಿರ್ವಹಿಸುವಲ್ಲಿ ಪ್ರಬಲ ಸಾಧನವಾಗಿದೆ ಎಂಬುದನ್ನು ತೋರಿಸಿರುವುದು ಈ ಸಂಶೋಧನೆಯ ಮಹತ್ವವಾಗಿದೆ. ಇದು ದೀರ್ಘಕಾಲದ ಕೀಲು ಪರಿಸ್ಥಿತಿಗಳಿಗೆ ಬಯೋಮೆಕಾನಿಕಲ್ ವಿಧಾನಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

ಅನುಷ್ಠಾನದ ಸವಾಲುಗಳು

ಈ ವಿಧಾನವನ್ನು ನಿಯಮಿತ ಕ್ಲಿನಿಕಲ್ ಅಭ್ಯಾಸಕ್ಕೆ ತರುವಲ್ಲಿ ಅನೇಕ ಸವಾಲುಗಳಿವೆ. ಪ್ರತಿಯೊಬ್ಬ ವ್ಯಕ್ತಿಗೆ ಸೂಕ್ತವಾದ ನಡಿಗೆ ಶೈಲಿಯನ್ನು ನಿರ್ಧರಿಸಲು ಬಳಸುವ ವಿಧಾನವು ಪ್ರಸ್ತುತ ಸಂಕೀರ್ಣವಾಗಿದೆ ಮತ್ತು ಇದಕ್ಕಾಗಿ ವಿಶೇಷ ಉಪಕರಣಗಳ ಅಗತ್ಯವಿರುತ್ತದೆ. ಇಂದು ವ್ಯಾಪಕ ಬಳಕೆಗೆ ಇದು ಪ್ರಾಯೋಗಿಕವಾಗಿಲ್ಲದಿರಬಹುದು. ಆದಾರೆ ಸಂಶೋಧನೆ ಮುಂದುವರೆದರೆ ಸ್ಮಾರ್ಟ್ಫೋನ್ ವೀಡಿಯೊ ವಿಶ್ಲೇಷಣೆ ಅಥವಾ ಶೂಗಳಲ್ಲಿ ಧರಿಸಬಹುದಾದ ಸಂವೇದಕಗಳಂತಹ ಸರಳ ಸಾಧನಗಳು ವಿಶೇಷ ಪ್ರಯೋಗಾಲಯಗಳ ಹೊರಗೆ ಈ ವೈಯಕ್ತಿಕಗೊಳಿಸಿದ ತರಬೇತಿಯನ್ನು ನೀಡುವುದನ್ನು ಸುಲಭಗೊಳಿಸಬಹುದು ಎಂದು ಸಂಶೋಧಕರು ಆಶಾವಾದಿಗಳಾಗಿದ್ದಾರೆ. ಇದು ನಿಜವಾದರೆ ಮೊಣಕಾಲು ಸಂಧಿವಾತದಿಂದ ಬಳಲುತ್ತಿರುವ ಲಕ್ಷಾಂತರ ಜನರು ಮಾತ್ರೆಗಳು ಅಥವಾ ಶಸ್ತ್ರಚಿಕಿತ್ಸೆಯನ್ನು ಅವಲಂಬಿಸದೆ ನೋವನ್ನು ನಿರ್ವಹಿಸಲು ಮತ್ತು ಚಲನಶೀಲತೆಯನ್ನು ಕಾಪಾಡಿಕೊಳ್ಳಲು ಸರಳ, ಕೈಗೆಟುಕುವ ಮತ್ತು ಪರಿಣಾಮಕಾರಿ ವಿಧಾನವನ್ನು ಅನುಸರಿಸಬಹುದು.

ಈ ಆವಿಷ್ಕಾರವು ಕೆಲವೊಮ್ಮೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ದುಬಾರಿ ಅಥವಾ ಆಕ್ರಮಣಕಾರಿ ಚಿಕಿತ್ಸೆಗಳು ಬೇಕಿಲ್ಲ, ಬದಲಿಗೆ ನಾವು ನಮ್ಮ ದೇಹವನ್ನು ಹೇಗೆ ಬಳಸುತ್ತೇವೆ ಎಂಬುದರ ಸಣ್ಣ ಬದಲಾವಣೆಗಳಲ್ಲಿ ಕಾಣಬಹುದು ಎಂದು ತೋರಿಸುತ್ತದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

7 ವರ್ಷಗಳ ನಂತರ ಚೀನಾಗೆ ಆಗಮಿಸಿದ ಮೋದಿ; ಟಿಯಾಂಜಿನ್‌ನಲ್ಲಿ ಭಾರತ ಪ್ರಧಾನಿಗೆ ಭವ್ಯ ಸ್ವಾಗತ

Dharmasthala case: ಬಂಧಿತ ಸಾಕ್ಷಿ-ದೂರುದಾರ ಚಿನ್ನಯ್ಯನನ್ನು ಸ್ಥಳ ಮಹಜರಿಗೆ ಕರೆದೊಯ್ದ SIT

ಪ್ರವಾಹ ಪರಿಶೀಲನೆ ವೇಳೆ ಪಂಜಾಬ್ ಸಚಿವರಿಂದ 'ಐಷಾರಾಮಿ ಕ್ರೂಸ್ ಟ್ರಿಪ್' ಬಗ್ಗೆ ಚರ್ಚೆ: ಪ್ರತಿಪಕ್ಷಗಳು ಕಿಡಿ

Jammu Kashmir: ಮಾನವ GPS ಎಂದೇ ಕುಖ್ಯಾತನಾಗಿದ್ದ ಉಗ್ರ ಬಾಗು ಖಾನ್ ಎನ್‌ಕೌಂಟರ್‌ಗೆ ಬಲಿ!

'ಹೆಂಡತಿ ಸಾವು, ಆಕೆಯ ತಂಗಿಯೊಂದಿಗೆ ಮದುವೆ, ಈಗ ಇನ್ನೊಬ್ಬ ತಂಗಿಯೂ ಬೇಕು' ಎಂದು ವಿದ್ಯುತ್ ಟವರ್ ಏರಿದ 'ಭೂಪ', Video

SCROLL FOR NEXT