ಬಹಳಷ್ಟು ಯುರೋಪಿಯನ್ ದೇಶಗಳು ತಮ್ಮ ರಕ್ಷಣಾ ಪೂರೈಕೆಯನ್ನು ನಿಲ್ಲಿಸಿರುವುದರಿಂದ, ಅಥವಾ ಕಡಿಮೆಗೊಳಿಸಿರುವುದರಿಂದ ಇಸ್ರೇಲ್ ಈಗ ತನ್ನ ರಕ್ಷಣಾ ಯೋಜನೆಯನ್ನು ಮರು ಆಲೋಚಿಸುತ್ತಿದೆ. ಟೆಲ್ ಅವೀವ್ ಈಗ ಯುರೋಪಿನ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆಗೊಳಿಸಿ, ಅವಶ್ಯಕ ಆಯಧಗಳು ಮತ್ತು ರಕ್ಷಣಾ ಅಗತ್ಯಗಳಿಗೆ ಹೆಚ್ಚು ಸುರಕ್ಷಿತವಾದ ಮತ್ತು ನಂಬಿಕಾರ್ಹವಾದ ಪೂರೈಕೆ ಸರಪಳಿಯನ್ನು ನಿರ್ಮಿಸುವ ಕುರಿತು ಆಲೋಚಿಸುತ್ತಿದೆ.
ಯುರೋಪಿನ ದೇಶಗಳು ಇಸ್ರೇಲಿಗೆ ತಮ್ಮ ಸಿದ್ಧ ಆಯುಧಗಳ ಮಾರಾಟ ನಡೆಸುವುದಿಲ್ಲವಾದರೂ, ಅವು ಇಸ್ರೇಲಿಗೆ ಬೇಕಾದ ಮುಖ್ಯ ಬಿಡಿಭಾಗಗಳು ಮತ್ತು ತಂತ್ರಜ್ಞಾನಗಳನ್ನು ಒದಗಿಸುತ್ತವೆ. ಈ ಸಣ್ಣದಾದ, ಆದರೆ ಮುಖ್ಯವಾದ ಬಿಡಿಭಾಗಗಳು ಇಸ್ರೇಲಿ ಆಯುಧಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಅತ್ಯವಶ್ಯಕವಾಗಿವೆ.
ಈಗ ಜಾರಿಯಲ್ಲಿರುವ ಕಟ್ಟುನಿಟ್ಟಿನ ರಫ್ತು ನಿಯಮಗಳ ಕಾರಣದಿಂದ, ಇಸ್ರೇಲ್ ಇದನ್ನು ಒಂದು ಗಂಭೀರ ಕಾರ್ಯತಂತ್ರದ ತೊಂದರೆ ಎಂದು ಪರಿಗಣಿಸುತ್ತದೆ. ಆದರೆ, ಇವೇ ಐರೋಪ್ಯ ದೇಶಗಳು ತಮ್ಮ ಸ್ವಂತ ಮಿಲಿಟರಿಗಳಿಗೆ ಇದೇ ಇಸ್ರೇಲ್ ರಕ್ಷಣಾ ಉಪಕರಣಗಳನ್ನು ಖರೀದಿಸುತ್ತಿರುವುದು ಮಾತ್ರ ಪರಿಸ್ಥಿತಿಯ ವ್ಯಂಗ್ಯದಂತೆ ಕಂಡುಬರುತ್ತಿದೆ.
ಕೆಲವು ಯುರೋಪಿಯನ್ ಸರ್ಕಾರಗಳು ಇಸ್ರೇಲಿನಿಂದ ಆಯುಧಗಳನ್ನು ಖರೀದಿಸುತ್ತಿವೆ. ಆದರೆ, ಅದೇ ಇಸ್ರೇಲಿ ಆಯುಧಗಳ ನಿರ್ಮಾಣಕ್ಕೆ ಬೇಕಾಗುವ ಪ್ರಮುಖ ಬಿಡಿಭಾಗಗಳನ್ನು ಇಸ್ರೇಲಿಗೆ ಆಮದು ಮಾಡಿಕೊಳ್ಳಲು ಮಾತ್ರ ಅನುಮತಿ ನೀಡುತ್ತಿಲ್ಲ. ಈ ದ್ವಿಮುಖ ಕಾರ್ಯತಂತ್ರ ಇಸ್ರೇಲ್‌ಗೆ ಗೊಂದಲ ಮತ್ತು ಆತಂಕ ಎರಡನ್ನೂ ಉಂಟುಮಾಡಿದೆ. ಈ ಬೆಳವಣಿಗೆ ಇಸ್ರೇಲ್‌ಗೆ ತನ್ನ ರಕ್ಷಣಾ ಪೂರೈಕೆ ಸರಪಳಿಯನ್ನು ಎಷ್ಟು ಸುಲಭವಾಗಿ ಹಾಳುಗೆಡವಬಹುದು ಎಂಬ ಅರಿವನ್ನೂ ಮೂಡಿಸಿದೆ.
ಇಸ್ರೇಲ್ ನಿರಂತರವಾಗಿ ರಕ್ಷಣಾ ಅಪಾಯಗಳನ್ನು ಎದುರಿಸುತ್ತಲೇ ಇರುವುದರಿಂದ, ಅದು ಅತ್ಯಂತ ವೇಗವಾಗಿ, ಯಾವುದೇ ವಿಳಂಬ ಅಥವಾ ತಡೆ ಇಲ್ಲದೆ ಪ್ರಮುಖ ರಕ್ಷಣಾ ಬಿಡಿಭಾಗಗಳನ್ನು ಗಳಿಸಲೇಬೇಕು. ಇಲ್ಲವಾದರೆ, ಯಾವುದಾದರೂ ಕಾರ್ಯಾಚರಣೆ ಆರಂಭಗೊಂಡರೆ ಇಸ್ರೇಲ್ ಆಯುಧ ಕೊರತೆಯ ಸಂಕಷ್ಟಕ್ಕೆ ಸಿಲುಕಬೇಕಾಗಿ ಬರಬಹುದು.
ಈ ಕಾರಣದಿಂದಲೇ ಇಸ್ರೇಲಿನ ರಕ್ಷಣಾ ಯೋಜಕರು ಮತ್ತು ಕಂಪನಿಗಳು ತಮ್ಮ ರಕ್ಷಣಾ ಬಿಡಿಭಾಗಗಳನ್ನು ನಿರ್ಮಿಸಲು ಮತ್ತು ಖರೀದಿಸಲು ಹೊಸದಾದ ಮತ್ತು ಹೆಚ್ಚು ನಂಬಿಕಾರ್ಹವಾದ ಪ್ರದೇಶಕ್ಕೆ ಹುಡುಕಾಟ ನಡೆಸುತ್ತಿದ್ದಾರೆ. ಇದರಿಂದ ತಾವು ಕೇವಲ ಯುರೋಪಿನಂತಹ ಒಂದೇ ಪ್ರದೇಶದ ಮೇಲೆ ಅವಲಂಬಿತವಾಗುವುದು ತಪ್ಪುತ್ತದೆ ಎನ್ನುವುದು ಇಸ್ರೇಲ್ ಲೆಕ್ಕಾಚಾರ.
ಇಸ್ರೇಲ್ ತನ್ನ ನೂತನ ಯೋಜನೆಗೆ ಭಾರತವನ್ನು ಸೂಕ್ತ ಸಹಯೋಗಿ ಎಂದು ಪರಿಗಣಿಸಿದೆ. ಇಸ್ರೇಲ್ ತನ್ನ ರಕ್ಷಣಾ ಭಾಗಗಳನ್ನು ನಿರ್ಮಿಸಲು, ಪ್ರಮುಖ ಉಪ ವ್ಯವಸ್ಥೆಗಳನ್ನು ತಯಾರಿಸಲು, ಮತ್ತು ತನ್ನ ಆಯುಧಗಳಿಗೆ ದೀರ್ಘಾವಧಿಯ ಬೆಂಬಲ ಒದಗಿಸಲು ಭಾರತದ ಮೇಲೆ ಹೆಚ್ಚಿನ ಅವಲಂಬನೆ ಹೊಂದಬಹುದು ಎಂದು ಇಸ್ರೇಲಿ ಅಧಿಕಾರಿಗಳು ಅಭಿಪ್ರಾಯ ಪಡುತ್ತಿದ್ದಾರೆ.
ಭಾರತದ ರಕ್ಷಣಾ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಉತ್ಪಾದನಾ ಗುಣಮಟ್ಟವೂ ದಿನೇ ದಿನೇ ಉತ್ತಮವಾಗುತ್ತಿದೆ. ಅದರೊಡನೆ, ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತ ಇಸ್ರೇಲ್ ಜೊತೆ ಬಲವಾದ, ನಂಬಿಕಾರ್ಹವಾದ ರಕ್ಷಣಾ ಸಹಯೋಗವನ್ನು ಹೊಂದಿದೆ. ಈ ಕಾರಣಗಳಿಂದಾಗಿ ಇಂತಹ ಬದಲಾವಣೆಗಳು ಕಂಡುಬರುತ್ತಿವೆ.
ಇಸ್ರೇಲ್ ಗಾತ್ರದಲ್ಲಿ ಬಹಳ ಸಣ್ಣ ದೇಶವಾಗಿದ್ದು, ನಿರಂತರ ಭದ್ರತಾ ಅಪಾಯಗಳನ್ನು ಎದುರಿಸುತ್ತಿದೆ. ಆದ್ದರಿಂದ ಇಸ್ರೇಲ್ ಎಲ್ಲವನ್ನೂ ತನ್ನ ದೇಶದೊಳಗೇ ತಯಾರಿಸಲು ಸಾಧ್ಯವಿಲ್ಲ. ರಕ್ಷಣಾ ಉತ್ಪಾದನಾ ಕಾರ್ಯಗಳನ್ನು ತನ್ನ ಮಿತ್ರ ರಾಷ್ಟ್ರಗಳಿಗೆ ಹಬ್ಬಿಸುವುದು ಈಗ ಇಸ್ರೇಲ್ ಪಾಲಿಗೆ ಅತ್ಯಂತ ಅವಶ್ಯಕವಾದ ನಡೆಯೇ ಹೊರತು, ಕೇವಲ ವ್ಯವಹಾರಕ್ಕೆ ಸೀಮಿತವಲ್ಲ ಎಂದು ಇಸ್ರೇಲಿ ಮೂಲಗಳು ಅಭಿಪ್ರಾಯ ಪಡುತ್ತವೆ.
ಇಸ್ರೇಲ್‌ಗೆ ಈಗ ಎಲ್ಲವನ್ನೂ ದೇಶದೊಳಗೇ ತಯಾರಿಸುವುದರಿಂದ ಎದುರಾಗಬಹುದಾದ ತೊಂದರೆಗಳ ಅರಿವು ಮೂಡಿದೆ. ಅದರಲ್ಲೂ ಯುದ್ಧ ಅಥವಾ ಉದ್ವಿಗ್ನತೆಯ ಪರಿಸ್ಥಿತಿ ತಲೆದೋರಿದರೆ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಲಿದೆ. ಆದ್ದರಿಂದ, ರಕ್ಷಣಾ ಉತ್ಪಾದನೆಯನ್ನು ತನ್ನ ಯಾವುದಾದರೂ ಮಿತ್ರ ರಾಷ್ಟ್ರದಲ್ಲಿ ಸ್ಥಾಪಿಸುವುದರಿಂದ, ದೇಶಗೊಳಗಿನ ರಕ್ಷಣಾ ಉತ್ಪಾದನಾ ಕಾರ್ಖಾನೆಗಳು ತೊಂದರೆಗೆ ಸಿಲುಕಿದಾಗಲೂ ಇಸ್ರೇಲ್‌ಗೆ ಹೆಚ್ಚುವರಿ ಪೂರೈಕೆ ವ್ಯವಸ್ಥೆ ಸಕ್ರಿಯವಾಗಿರುತ್ತದೆ ಎಂದು ಇಸ್ರೇಲಿ ಮೂಲಗಳು ಹೇಳಿವೆ.
ಇನ್ನೊಂದು ಇಸ್ರೇಲಿ ಮೂಲದ ಪ್ರಕಾರ, ಇಸ್ರೇಲಿನ ನೂತನ ರಕ್ಷಣಾ ಉತ್ಪಾದನಾ ಯೋಜನೆಗೆ ಭಾರತ ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ. ಭಾರತ ಅಸಾಧಾರಣ ಗಾತ್ರದ ಉತ್ಪಾದನಾ ಸಾಮರ್ಥ್ಯ, ಕುಶಲ ಕಾರ್ಮಿಕರು, ಮತ್ತು ಬಲವಾದ ಖಾಸಗಿ ರಕ್ಷಣಾ ಉದ್ಯಮಗಳನ್ನು ಹೊಂದಿದ್ದು, ಇಸ್ರೇಲ್ ಜೊತೆಗೆ ಸರ್ಕಾರಿ ಹಂತದ ಸಂಬಂಧ ಸ್ಥಾಪಿಸಿದೆ.
ಈ ಕಾರಣಗಳಿಂದ, ಭಾರತ ಮತ್ತು ಇಸ್ರೇಲಿನ ರಕ್ಷಣಾ ಸಂಸ್ಥೆಗಳ ನಡುವೆ ಮುಂದಿನ ತಿಂಗಳುಗಳಲ್ಲಿ ರಕ್ಷಣಾ ಸಹಕಾರ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ. ಈ ಸಹಕಾರ ಕ್ಷಿಪಣಿಗಳು, ಸೆನ್ಸರ್‌ಗಳು, ಡ್ರೋನ್ ವ್ಯವಸ್ಥೆಗಳು ಮತ್ತು ಇಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆಗಳಿಗೂ ವಿಸ್ತರಿಸುವ ಸಾಧ್ಯತೆಗಳಿವೆ.
ಆದರೂ ಇಸ್ರೇಲಿ ಕಂಪನಿಗಳು ಈಗ ಬಹಳ ಜಾಗರೂಕವಾಗಿ ಮುಂದುವರಿಯುತ್ತಿವೆ. ಭಾರತದಲ್ಲಿ ಈ ಸಂಸ್ಥೆಗಳನ್ನು ಸ್ಥಾಪಿಸುವ ಇಚ್ಛೆಯಂತೂ ಇಸ್ರೇಲಿಗೆ ಹೆಚ್ಚಾಗಿದೆ. ಆದರೂ ಇಸ್ರೇಲ್ ತನ್ನ ಬೃಹತ್ ಉತ್ಪಾದನಾ ಕೇಂದ್ರಗಳನ್ನು ಭಾರತಕ್ಕೆ ವರ್ಗಾಯಿಸುವ ಮತ್ತು ಹೊಸ ಜಂಟಿ ಯೋಜನೆಗಳನ್ನು ಆರಂಭಿಸುವ ಮುನ್ನ, ಭಾರತದಲ್ಲಿ ಇನ್ನಷ್ಟು ರಕ್ಷಣಾ ಸುಧಾರಣೆಗಳು ನಡೆಯುವುದನ್ನು ಎದುರು ನೋಡುತ್ತಿದೆ.
ಈ ಸಾಂಸ್ಥಿಕ ಸಮಸ್ಯೆಗಳು ಪರಿಹಾರ ಕಂಡರೆ, ಆಗ ಇಸ್ರೇಲ್ ಯುರೋಪಿನ ಬದಲು ಭಾರತದೊಡನೆ ರಕ್ಷಣಾ ಉತ್ಪಾದನೆಗೆ ಕೈ ಜೋಡಿಸಲಿದೆ. ಇದರಿಂದ ಜಾಗತಿಕ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಭಾರತ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ.
ಭಾರತದ ಪಾಲಿಗೆ ಇಸ್ರೇಲ್‌ನ ರಕ್ಷಣಾ ಉತ್ಪಾದನೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿನ ಬದಲಾವಣೆ ಒಂದು ದೊಡ್ಡ ಅವಕಾಶವಾಗಿದೆ. ಇದು ಭಾರತಕ್ಕೆ ಆಧುನಿಕ ರಕ್ಷಣಾ ತಂತ್ರಜ್ಞಾನ, ಅತ್ಯಂತ ಮೌಲ್ಯಯುತ ಉತ್ಪಾದನೆಗಳನ್ನು ಒದಗಿಸಿ, ಭಾರತಕ್ಕೆ ಜಾಗತಿಕ ರಕ್ಷಣಾ ಪೂರೈಕೆ ಸರಪಳಿಯಲ್ಲಿ ದೊಡ್ಡ ಪಾತ್ರ ನಿರ್ವಹಿಸಲು ನೆರವಾಗಬಹುದು.
ಇನ್ನು ಈ ಕ್ರಮದಿಂದ ಇಸ್ರೇಲ್‌ಗೆ ತನ್ನ ಪೂರೈಕೆ ಸರಪಳಿಯನ್ನು ಬಲಪಡಿಸಿ, ಕಾರ್ಯತಂತ್ರದ ಸುರಕ್ಷತೆ ಸಾಧಿಸಿ, ಜಾಗತಿಕ ರಕ್ಷಣಾ ಮಾರುಕಟ್ಟೆ ಹೆಚ್ಚು ಹೆಚ್ಚು ವಿಭಜಿತವಾದರೂ ಯಾವುದೇ ತೊಂದರೆ ಉಂಟಾಗದಂತೆ ತನಗೆ ಬೇಕಾದ ಎಲ್ಲ ಪ್ರಮುಖ ರಕ್ಷಣಾ ಬಿಡಿಭಾಗಗಳನ್ನು ಪಡೆಯಲು ಸಾಧ್ಯವಾಗಲಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)