ಮೊನ್ನೆ ಫೆಬ್ರವರಿ 7ರಂದು ಕಾಮೇಶ್ವರ ಚೌಪಾಲರು ತೀರಿಕೊಂಡರು. ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರಲ್ಲೊಬ್ಬರಾಗಿದ್ದರು. ಅದಕ್ಕಿಂತ ಮುಖ್ಯವಾಗಿ, ಹಾಗೆ ಇವತ್ತಲ್ಲಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ಏಳುವುದಕ್ಕೆ ಹಿಂದುಗಳ ಸಂಘರ್ಷದ ಹಲವು ಬಿಂದುಗಳಿವೆಯಲ್ಲ, ಆ ಪೈಕಿ ಒಂದು ಪ್ರಮುಖ ಬಿಂದು ಕಾಮೇಶ್ವರ ಚೌಪಾಲರು. ಅವತ್ತಿಗೆ ವಿವಾದಿತ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದ ಜನ್ಮಭೂಮಿಯ ಬಳಿಯಲ್ಲಿ, ಮಂದಿರವನ್ನಲ್ಲೇ ಕಟ್ಟುವೆವು ಎಂಬ ಸಂಕಲ್ಪದೊಂದಿಗೆ 1989ರಲ್ಲಿ ಶಿಲಾನ್ಯಾಸದ ಕಾರ್ಯಕ್ರಮ ಮಾಡಿದ್ದ ವಿಶ್ವ ಹಿಂದು ಪರಿಷತ್, ಅಲ್ಲಿ ಮೊದಲ ಇಟ್ಟಿಗೆಯನ್ನು ಇಡುವುದಕ್ಕೆ ಆಹ್ವಾನಿಸಿದ ವ್ಯಕ್ತಿ ಎಂದರೆ ದಲಿತ ಸಮಾಜದ ಕಾಮೇಶ್ವರ ಚೌಪಾಲರನ್ನು. ಹಾಗೆಂದೇ ಅವರನ್ನು ಮೊದಲ ಕರಸೇವಕ ಅಂತಲೂ ಮಾಧ್ಯಮಗಳು ಕರೆದ್ದಿದೆ.
ಅವರಲ್ಲಿ ಇಟ್ಟಿಗೆ ಇಟ್ಟವರಲ್ಲಿ ಮೊದಲಿಗರಾಗಿದ್ದರು ಎಂಬ ಅಂಶ ಸ್ವಾರಸ್ಯಕರವೇ ಹೌದಾದರೂ, ಅದೊಂದೇ ಎಂದಾಗಿದ್ದರೆ ಕಾಮೇಶ್ವರ ಚೌಪಾಲರು ಈ ಅಂಕಣಕ್ಕೆ ವಸ್ತುವಾಗುತ್ತಿರಲಿಲ್ಲ. ಆದರೆ, ಚೌಪಾಲರ ಚರಿತ್ರೆಯಲ್ಲಿ ಹಿಂದು ಸಮಾಜದ ಹಾಗೂ ಹಿಂದು ಸಮಾಜವನ್ನು ಅವತ್ತಿಗೂ ಇವತ್ತಿಗೂ ಏಕತ್ರ ಇರಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಲೋಚನಾ ಧಾಟಿ ಮತ್ತು ನಿಜ ತುಡಿತಗಳನ್ನು ಅರ್ಥ ಮಾಡಿಕೊಳ್ಳಬಹುದೆಂಬ ಕಾರಣಕ್ಕೆ ಅಗಲಿರುವ ಕಾಮೇಶ್ವರ ಚೌಪಾಲರ ನೆನಕೆ ಪ್ರಸ್ತುತವಾಗುತ್ತದೆ.
ಹಲವು ತಪ್ಪು ತಿಳಿವಳಿಕೆ, ಅಪಪ್ರಚಾರಗಳಿಗೆ ಉತ್ತರರೂಪ
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಭಾರತೀಯರ ದೊಡ್ಡ ಸಮೂಹವೊಂದನ್ನು ಹದಗೊಳಿಸಿದ ಮಹತ್ತರ ಆಂದೋಲನವೆಂದರೆ ಅದು ರಾಮಜನ್ಮಭೂಮಿ ಹೋರಾಟ. ಹೀಗೆನ್ನುತ್ತಲೇ, ಇದೇನೋ ಭಾವನಾತ್ಮಕ ವಾದ ಎಂದು ಕೆಲವರಿಗೆ ಅನ್ನಿಸಬಹುದು. ಇವತ್ತಿಗೂ ಕೆಲವರು ರಾಮಜನ್ಮಭೂಮಿ ವಿವರಗಳನ್ನು ಈಗ ಓದಿಕೊಳ್ಳುತ್ತಿರುವವರು ಇದೇನೋ ಧಾರ್ಮಿಕ ಭಾವತೀವ್ರತೆಯನ್ನು ಮಾತ್ರ ಹೊಂದಿದ್ದ ಹೋರಾಟವಾಗಿತ್ತು ಅಂದುಕೊಳ್ಳಬಹುದೇನೋ. ಇನ್ನು ಹಲವರಿಗೆ, ಇದು ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಮಾಡಿದ ಪ್ರಯತ್ನಗಳಲ್ಲೊಂದು ಎಂದಷ್ಟೇ ಅನ್ನಿಸಿದ್ದಿರಬಹುದು. ರಾಮಜನ್ಮಭೂಮಿ ಆಂದೋಲನವೆಂಬುದು ಮೇಲ್ವರ್ಗದ ಕೆಲವರಿಗಷ್ಟೇ ಸೀಮಿತವಾಗಿತ್ತು ಎಂದು ಬಿಂಬಿಸುವ ಪ್ರಯತ್ನಗಳು ಅವತ್ತಿಗೂ ಇವತ್ತಿಗೂ ನಡೆದಿವೆ. ಕೆಳವರ್ಗ ಅಥವಾ ಕೆಳಜಾತಿಗಳೆನಿಸಿಕೊಳ್ಳುವ ವರ್ಗವನ್ನು ಮೇಲಿನವರು ಕೇವಲ ಬಳಸಿಕೊಂಡುಬಿಟ್ಟರು ಎಂದೆಲ್ಲ ಕಥನವನ್ನು ನಿಲ್ಲಿಸುವ ಪ್ರಯತ್ನಗಳೂ ಕೆಲವರಿಂದಾಗಿದ್ದಿದೆ.
ಆದರೆ, ರಾಮ ಜನ್ಮಭೂಮಿ ಆಂದೋಲನವು ಸಾಮಾಜಿಕವೂ ಆಗಿತ್ತು ಹಾಗೂ ಎಲ್ಲ ಸ್ತರದವರ ಮನೆ-ಮನಗಳನ್ನು ಮುಟ್ಟಿತ್ತು ಎಂಬುದಕ್ಕೆ ಕಾಮೇಶ್ವರ ಚೌಪಾಲರು ಬಿಟ್ಟುಹೋಗಿರುವ ವಿವರಗಳು, ಅವರ ಕತೆ, ಹಾಗೂ ಚೌಪಾಲರ ಸುತ್ತಮುತ್ತಲಿನ ಸನ್ನಿವೇಶಗಳು ಇವೆಲ್ಲ ಸಾಕ್ಷ್ಯ ಹೇಳುವಂತಿವೆ.
ರಾಮ ಮಂದಿರ, ಇದು ಸಮಸ್ತ ಹಿಂದುಗಳ ಸ್ವರ
ಒಪನ್ ನಿಯತಕಾಲಿಕಕ್ಕೆ 2017ರಲ್ಲಿ ಪತ್ರಕರ್ತ ರಾಹುಲ್ ಪಂಡಿತರು ಬರೆದಿದ್ದ ಸಂದರ್ಶನ ಲೇಖನವೊಂದರಲ್ಲಿ ಕಾಮೇಶ್ವರ ಚೌಪಾಲರು ಹೀಗೆ ಹೇಳಿದ್ದರು- “ಅವತ್ತು ಸಂಘ ಪರಿವಾರದ ದೊಡ್ಡ ನಾಯಕರೆಲ್ಲ ಇದ್ದ ವಿಎಚ್ಪಿ-ಆಯೋಜಿತ ಶಿಲಾನ್ಯಾಸ ಸಂದರ್ಭದಲ್ಲಿ ಮೊದಲ ಇಟ್ಟಿಗೆ ಇಡುವುದಕ್ಕೆ ನನ್ನನ್ನು ಕರೆದ ಘಳಿಗೆ ನನ್ನ ಪಾಲಿಗೆ ತುಂಬ ಭಾವೋತ್ಕಟತೆಯಿಂದ ಕೂಡಿತ್ತು. ಅದನ್ನು ನೆನಪಿಸಿಕೊಂಡಾಗಲೆಲ್ಲ ನನ್ನ ಮೈರೋಮಗಳು ಎದ್ದು ನಿಲ್ಲುತ್ತವೆ.”
ಹಾಗೆಂದು, ಇದೇನೋ ಆ ಕ್ಷಣದ ಕಾರ್ಯತಂತ್ರಕ್ಕೆ ವಿ ಎಚ್ ಪಿಯೋ ಅಥವಾ ಹೋರಾಟದ ಮುಂಚೂಣಿಯಲ್ಲಿದ್ದವರೋ ಚೌಪಾಲರಿಗೆ ತೋರಿದ ಗೌರವವೇನಾಗಿರಲಿಲ್ಲ. ಏಕೆಂದರೆ, ಕಾಮೇಶ್ವರ ಚೌಪಾಲರ ಪೂರ್ವೇತಿಹಾಸ ಹಾಗೂ ನಂತರ ಅವರು ರಾಮಜನ್ಮಭೂಮಿ ಟ್ರಸ್ಟ್ ಸದಸ್ಯರಾಗುವವರೆಗೆ ಅಲ್ಲೊಂದು ವೈಚಾರಿಕ ನಿರಂತರತೆ ಎರಡೂ ಕಡೆಗಳಿಂದ ಇದೆ. ಅಂದರೆ, ಖುದ್ದು ಚೌಪಾಲರಲ್ಲಿ ಹಾಗೂ ಅವರನ್ನು ಮುನ್ನೆಲೆಗೆ ತಂದ ಸಂಘ ಪರಿವಾರದಲ್ಲಿ ಈ ಸಮರಸಭಾವದ ಧಾರೆ ಇದೆ. ಚೌಪಾಲರನ್ನು ಆ ಕ್ಷಣಕ್ಕೆ ಬಳಸಿ ಮರೆಯುವುದಾಗಿದ್ದರೆ ಅವರು ಬಿಹಾರದಲ್ಲಿ ಮುಂದೆ ಬಿಜೆಪಿಯಿಂದ ಎಂಎಲ್ಸಿ ಆಗುತ್ತಿರಲಿಲ್ಲ, ಬಿಜೆಪಿ ಟಿಕೆಟ್ಟಿನಲ್ಲಿ ಚುನಾವಣೆಗೆ ನಿಲ್ಲುವ ಅವಕಾಶವೂ ಸಿಗುತ್ತಿರಲಿಲ್ಲ.
ರಾಮಮಂದಿರದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರ ಆಶಯವೇ ಅದನ್ನು ಸಮಸ್ತ ಹಿಂದುಗಳ ಹೋರಾಟವಾಗಿಸುವುದರಲ್ಲಿ ಹಾಗೂ ಜಾತಿಬೇಧಗಳಿಲ್ಲದೇ ಎಲ್ಲರಲ್ಲೂ ಭಾವಜಾಗೃತಿ ಮೂಡಿಸುವುದರಲ್ಲಿ. ಇದು ಅರ್ಥವಾಗಬೇಕಾದರೆ, ಚೌಪಾಲರ ಕತೆಯಿಂದ ಸ್ವಲ್ಪ ತಿರುವು ಪಡೆದುಕೊಂಡು, ಸ್ವತಂತ್ರ ಭಾರತದಲ್ಲಿ ರಾಮಜನ್ಮಭೂಮಿ ಆಂದೋಲನವನ್ನು ಪ್ರೇರೇಪಿಸಿದ ಪ್ರಾರಂಭಿಕ ಅಂಶಗಳನ್ನು ಅಗೆದು ನೋಡೋಣ.
ಫೆಬ್ರವರಿ 19, 1981. ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ 800 ದಲಿತರು ಏಕಕಾಲಕ್ಕೆ ಇಸ್ಲಾಮಿಗೆ ಮತಾಂತರವಾದ ಘಟನೆ ಹಿಂದು ಸಂಘಟನೆಗಳ ಅಗ್ರ ನಾಯಕತ್ವಕ್ಕೆ ಆಘಾತವಾಗಿ ಬಡಿದಿತ್ತು. ಹಾಗೆಂದು, ಹಿಂದು ನಾಯಕರು ಮತಾಂತರವಾದವರ ಮೇಲೆ ಮುನಿಸಿಕೊಳ್ಳುತ್ತ ಕೂರಲಿಲ್ಲ. ಬದಲಿಗೆ, ಅದಕ್ಕೆ ಕಾರಣವಾದ ಅಂಶ ಏನೆಂದು ವಿಶ್ಲೇಷಣೆಗಿಳಿದರು. ಅಲ್ಲಿನ ಮೇಲುಜಾತಿಗಳು ಮಾಡುತ್ತಿದ್ದ ತಾರತಮ್ಯ ಹಾಗೂ ಮುಖ್ಯವಾಗಿ ದೇವಾಲಯ ಪ್ರವೇಶದಿಂದ ದಲಿತರನ್ನು ಹೊರಗಿಟ್ಟಿದ್ದೇ ಮತಾಂತರಕ್ಕೆ ಕಾರಣವಾಗಿತ್ತು. ಹಿಂದುಗಳಲ್ಲಿ ಎಲ್ಲರಿಗೂ ದೇವಾಲಯ ಪ್ರವೇಶವಿರಬೇಕು ಎಂಬುದು ಆರೆಸ್ಸೆಸ್-ವಿ ಎಚ್ ಪಿ ಮತ್ತು ಪರಿವಾರಗಳೆಲ್ಲದರ ಮೂಲ ಪ್ರತಿಪಾದನೆಯೇ ಆಗಿತ್ತಾದ್ದರಿಂದ ಆ ವಿಷಯದಲ್ಲಿ ಹೊಸದಾಗಿ ನಿಲವು ತಳೆಯುವುದಕ್ಕೆ ಅಂತೇನೂ ಇರಲಿಲ್ಲ. ಆದರೆ, ಸಮಾಜಕ್ಕೆ ಈ ಸಂದೇಶವನ್ನು ದೊಡ್ಡದಾಗಿ ಹೇಳಬೇಕಲ್ಲ….ಮತ್ತದು ತಾರತಮ್ಯ ಧೋರಣೆಯಲ್ಲಿರುವವರೂ ಸೇರಿದಂತೆ ಎಲ್ಲರಿಗೂ ತಾಗಬೇಕಲ್ಲ? ಹಾಗೆಂದೇ, ವಿ ಎಚ್ ಪಿ ದೇಗುಲಗಳ ಮುಕ್ತ ಪ್ರವೇಶದ ಬಗ್ಗೆ ವ್ಯಾಪಕ ಜನಮತ ರೂಪಿಸುವುದಕ್ಕೆ ಮುಂದಾಯಿತು. 1984ರಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ವಿ ಎಚ್ ಪಿ ಧರ್ಮ ಸಂಸತ್ ಸಭೆ ನಡೆಸಿದಾಗ ಅದರಲ್ಲಿ ನಾನಾ ಪಂಥಗಳ ನೂರಾರು ಸಾಧು-ಸಂತರೆಲ್ಲ ಒಟ್ಟಿಗೇ ಒಂದು ವೇದಿಕೆಗೆ ಬಂದಿದ್ದರು. ಆ ಸಭೆ ಪಕ್ಷಾತೀತವೂ ಆಗಿತ್ತು. ವೇದಿಕೆಯಿಂದ ಅಶೋಕ ಸಿಂಘಲ್ ಅವರು ರಾಮನನ್ನು ನೆನಪಿಸಿಕೊಂಡರು. ಆಗ ಕಾಂಗ್ರೆಸ್ಸಿನಲ್ಲಿದ್ದ ಕರಣ್ ಸಿಂಗ್ ಅವರು ವೇದಿಕೆ ಮೇಲೆ ನಿಂತು, ಅಯೋಧ್ಯೆಯಲ್ಲಿ ರಾಮನೆದುರು ಒಂದು ದೀಪವನ್ನು ಹಚ್ಚಿಡಲಾಗದ ರೀತಿಯಲ್ಲಿ ಬೀಗ ಬಿದ್ದಿರುವುದರ ಬಗ್ಗೆ ಆಕ್ರೋಶ ಹೊರಹಾಕಿದರು. ಅದೇ ಸಭೆಯ ನಿರ್ಣಯವಾಗಿ ಹೊರಬಿದ್ದ ಅಂಶವೇ - ಹಿಂದುಗಳು ತಮ್ಮ ಪ್ರಮುಖ ಶ್ರದ್ಧಾಕೇಂದ್ರಗಳಾದ ಅಯೋಧ್ಯೆ, ಕಾಶಿ, ಮಥುರಾಗಳಲ್ಲಿ ದೇವಾಲಯ ಜಾಗವನ್ನು ಸಂಪೂರ್ಣ ಮರುಪಡೆದುಕೊಳ್ಳಬೇಕು ಎಂಬುದು. ಹೀಗೆ, ಮಂದಿರ ಆಂದೋಲನದ ಸ್ವರಬೀಜವಿರುವುದೇ ಹಿಂದು ಏಕತೆಯಲ್ಲಿ.
ರಾಮಜನ್ಮಭೂಮಿ ಆಂದೋಲನವೇನಾದರೂ ಸಮಸ್ತ ಹಿಂದುಗಳ ಕುರಿತ ಚಿಂತನೆಯನ್ನು ಎದೆಯಲ್ಲಿಟ್ಟುಕೊಳ್ಳದೇ ಕೇವಲ ರಾಜಕೀಯ ಉದ್ದೇಶ ಹೊಂದಿದ್ದರೆ ಯಾವತ್ತೋ ಭ್ರಮನಿರಸನಗೊಂಡು ಮಾಸಿಹೋಗುತ್ತಿತ್ತೇನೋ. ಏಕೆಂದರೆ, ಜನ್ಮಸ್ಥಾನದ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಆಂದೋಲನವು ತುಂಬ ಸುಲಭವಾಗಿ ಬಿಜೆಪಿಗೇನೂ ಮತ ಗಳಿಸಿಕೊಡಲಿಲ್ಲ. ಏಕೆಂದರೆ ಒಬಿಸಿ ಮೀಸಲು ವಿಷಯವನ್ನು ಮುನ್ನೆಲೆಗೆ ತಂದು 1990ರಲ್ಲೇ ವಿ ಪಿ ಸಿಂಗ್ ಕಮಂಡಲಕ್ಕೆ ಮಂಡಲ್ ವರದಿ ಪ್ರತ್ಯುತ್ತರ ಎಂಬರ್ಥದಲ್ಲಿ ರಾಜಕೀಯವಾಗಿ ಹಿಂದು ಮತಗಳನ್ನು ಚದುರಿಸಿದ್ದರು. 1993ರಲ್ಲಿ ಸಮಾಜವಾದಿ ಹಾಗೂ ಬಿಎಸ್ಪಿ ಒಟ್ಟಾಗಿ ಹವಾ ಸೃಷ್ಟಿಸಿದಾಗಲಂತೂ, ‘ಮಿಲೇ ಮುಲಾಯಂ-ಕಾನ್ಶಿರಾಂ, ಹವಾ ಮೆ ಉಡ್ ಗಯೆ ಜೈಶ್ರೀರಾಂ’ ಎಂದು ಗೇಲಿ ಮಾಡಲಾಯಿತು. ಆದರೆ, ರಾಜಕೀಯ ಒಂದು ಆಯಾಮವಾಗಿದ್ದರೂ ಕೇವಲ ಅದರ ಸುತ್ತ ಕಟ್ಟಿದ್ದ ಚಳವಳಿಯೇ ಇದಲ್ಲವಾಗಿತ್ತಾದ್ದರಿಂದ ರಾಮ ಮಂದಿರ ಆಂದೋಲನ ಇವೆಲ್ಲವನ್ನು ಮೀರಿ ತನ್ನ ಗುರಿ ಸಾಧಿಸಿಕೊಂಡಿತು.
ಚೌಪಾಲರು ಸಂಘಕ್ಕೆ ಬಂದ ಬಗೆ
ಬಿಹಾರದ ಕೋಸಿ ನದಿ ತೀರದ ಹಳ್ಳಿಯೊಂದರಲ್ಲಿ ದಲಿತ ಕುಟುಂಬದಲ್ಲಿ ಹುಟ್ಟಿದವರು ಕಾಮೇಶ್ವರ ಚೌಪಾಲರು. ಬದುಕನ್ನು ಆಗೀಗ ಅಸ್ತವ್ಯಸ್ತಗೊಳಿಸುತ್ತಿದ್ದ ಪ್ರವಾಹ, ಬಡತನ, ಜಾತಿಯ ಕಾರಣದಿಂದ ದೇವಾಲಯಗಳಿಗೆ ಪ್ರವೇಶ ನಿರಾಕರಣೆಯ ಅವಮಾನ ಇವೆಲ್ಲವುಗಳ ನಡುವೆಯೇ ಬೆಳೆದ ಚೌಪಾಲರು ತಂದೆಯ ಒತ್ತಾಸೆಯಿಂದ ಪಕ್ಕದ ಜಿಲ್ಲೆಯಲ್ಲಿ ಹೈಸ್ಕೂಲ್ ಶಿಕ್ಷಣಕ್ಕೆ ಸೇರುತ್ತಾರೆ. ಅಲ್ಲಿನ ದೈಹಿಕ ಶಿಕ್ಷಕರು ಸಂಘದ ಸ್ವಯಂಸೇವಕರು. ವಿದ್ಯಾರ್ಥಿಗಳಿಗೆ ವ್ಯಾಯಾಮ ಮಾಡಿಸುವಾಗಲೂ ಸಂಘದ ಶಾಖೆಯ ಹಲವು ಆಯಾಮಗಳನ್ನು ಅವರು ಪರಿಚಯಿಸುತ್ತಿದ್ದರೆಂದು ಚೌಪಾಲರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅದಿರಲಿ…ಈ ಶಿಕ್ಷಕರಿಗೆ ಅವತ್ತಿಗೆ ಚೌಪಾಲರ ಮೇಲೆ ಕಾಳಜಿ ಬಂತು. ಸಮಾಜದ ಕೆಳಸ್ತರದಲ್ಲಿರುವವರಿಗೆ ತುಡಿಯುವ ಸಂಘ ಸಂಸ್ಕಾರದ ಸಹಜ ಫಲಶೃತಿಯೇ ಇದ್ದಿರಬಹುದು. ಇವರೇ ಮುಂದೆ ಚೌಪಾಲರನ್ನು ಕಾಲೇಜಿಗೆ ಸೇರಿಸುವುದಕ್ಕೆ ಕಾರಣರಾದರು. ಪರಿಚಯ ಪತ್ರವೊಂದನ್ನು ಕೊಟ್ಟು, ಕಾಲೇಜಿನಲ್ಲಿ ಹೋಗಿ ಭೇಟಿಯಾಗಬೇಕಾದ ವ್ಯಕ್ತಿಯನ್ನು ಸೂಚಿಸಿ, ನಿನ್ನ ಮುಂದಿನ ಅಗತ್ಯವನ್ನೆಲ್ಲ ಅವರು ನೋಡಿಕೊಳ್ಳುತ್ತಾರೆ ಎಂದರಂತೆ. ಅದರಂತೆ ಆಯಿತು. ಬಿಎ ಮುಗಿಸಿದ ನಂತರ ಕಾಮೇಶ್ವರ ಚೌಪಾಲರು ಪೂರ್ಣಾವಧಿ ಪ್ರಚಾರಕರಾದರು. ಮಧುಬನಿಯಲ್ಲಿ ಅವರು ಜಿಲ್ಲಾ ಪ್ರಚಾರಕರಾಗಿದ್ದಾಗಲೇ ಕಾಮಾಕ್ಷಿಪುರದಲ್ಲಿ ನಡೆದ ಘಟನೆ ಅವರನ್ನೂ ತಾಗಿತ್ತು. ಮುಂದೆ ಅದೇ ಕಂಪನವು ಹುಟ್ಟುಹಾಕಿದ ಇತಿಹಾಸದಲ್ಲಿ ಮುಖ್ಯ ಪಾತ್ರಧಾರಿಗಳಲ್ಲೊಬ್ಬರಾದರು ಕಾಮೇಶ್ವರ ಚೌಪಾಲ್.
ಇಂದು ಅಯೋಧ್ಯೆಯಲ್ಲಿ ವಿರಾಜಮಾನರಾಗಿರುವ ರಾಮಲಲ್ಲಾ ಸಾಕಾರದ ಹಿಂದೆ ಕೆಲಸ ಮಾಡಿರುವ ಉದಾತ್ತ ಹಿಂದು ಮನೋಭೂಮಿಕೆಯನ್ನು ಅರ್ಥಮಾಡಿಕೊಳ್ಳಬೇಕಾದರೆ, ವಿವಾದಗಳ ಆಚೆಗಿನ ರಾಮ ಮಂದಿರದ ಅಂತಃಸತ್ತ್ವವನ್ನು ಎದೆಗಿಳಿಸಿಕೊಳ್ಳಬೇಕಾದರೆ ಕಾಮೇಶ್ವರ ಚೌಪಾಲರ ನೆನಪುಗಳು ಅಂತಹದೊಂದು ಮಾರ್ಗ ಹೊಳೆಯಿಸುವ ಬೆಳಕಿನ ಪುಂಜಗಳಾಗುತ್ತವೆ.
- ಚೈತನ್ಯ ಹೆಗಡೆ
cchegde@gmail.com