ಕೆಪಿಸಿಸಿ ಅಧ್ಯಕ್ಷ ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ದ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಮೌನಕ್ಕೆ ಶರಣಾಗಿದ್ದಾರೆ. ಅದೊಂದು ಥರಾ ನಿಗೂಢ , ಜಾಣ ಮೌನ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ,ಮುಖ್ಯಮಂತ್ರಿ ಪಟ್ಟದ ಅಧಿಕಾರ ಹಂಚಿಕೆ ಒಪ್ಪಂದದ ಕುರಿತಂತೆ ಪಕ್ಷದೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರಾದ ಸಚಿವರು ನಿರಂತರ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದರೂ ಯಾವುದಕ್ಕೂ ಅವರು ಪ್ರತಿಕ್ರಿಯಿಸುತ್ತಿಲ್ಲ. ಎಲ್ಲದಕ್ಕೂ ದಿಲ್ಲಿ ಹೈಕಮಾಂಡ್ ಕಡೆ ಕೈ ತೋರಿಸಿ ಜಾರಿಕೊಳ್ಳುತ್ತಿದ್ದಾರೆ.
ಹಾಗಂತ ಅವರು ಪಕ್ಷದೊಳಗೆ ತನ್ನನ್ನು ವಿರೋಧಿಸುತ್ತಿರುವ ಗುಂಪಿನ ಚಟುವಟಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದೇ ಅಸಹಾಯಕರಾಗಿ ಕುಳಿತಿದ್ದಾರಾ? ಎಂದು ನೋಡಿದರೆ ಅದೂ ಇಲ್ಲ. ತಾನು ಹೇಳಬೇಕಾದ್ಧನ್ನು, ಮಾಡಬೇಕಾದ್ದನ್ನು ಬೆಂಬಲಿಗರ ಮೂಲಕ ಮಾಡಿಸುತ್ತಿದ್ದಾರೆ. ಅವರ ಬೆಂಬಲಿಗರ ಪ್ರಕಾರ ಈಗ ಆರಂಭವಾಗಿರುವುದು ಒಂದು ಹುಸಿ ಸಮರ. ನಿಜವಾದ ಯುದ್ಧಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಆದರೆ ಮೌನವಾಗಿರುವ ಜ್ವಾಲಾಮುಖಿ ಸ್ಫೋಟಿಸುವುದಂತೂ ಖಚಿತ. ಅದಕ್ಕೆ ದಿನಗಣನೆ ಆರಂಭವಾಗಿದೆ.
ಕೆಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಹಂತ ಹಂತವಾಗಿ ಬದಲಾವಣೆ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು. ಆದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಬದಲಾವಣೆಯೂ ಆಗಲಿದೆಯೆ? ಎಂಬ ಪ್ರಶ್ನೆಗೆ ಅವರು ನಿಖರ ಉತ್ತರ ನೀಡಿಲ್ಲ.
ಇತ್ತಿಚೆಗೆ ನಡೆದ ರಾಷ್ಟ್ರದ ರಾಜಧಾನಿ ದಿಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸುದೀರ್ಘ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಒಂದೇ ಒಂದು ಸ್ಥಾನವನ್ನು ಗಳಿಸಲಾಗದೇ ನೆಲ ಕಚ್ಚಿದೆ. ಇದೊಂದು ರೀತಿಯಲ್ಲಿ ಆ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಆದ ಮುಖಭಂಗ. ಈ ಆಘಾತದಿಂದ ಕಾಂಗ್ರೆಸ್ ಇನ್ನೂ ಚೇತರಿಸಿಕೊಂಡಿಲ್ಲ. ಹಾಗೆ ನೋಡಿದರೆ ದಕ್ಷಿಣ ಭಾರತದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಬಲವಾಗಿ ಅಸ್ತಿತ್ವ ಕಂಡುಕೊಂಡಿದೆ. ಎರಡೂ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. ಇದು ಬಿಟ್ಟರೆ ಉತ್ತರ ರಾಜ್ಯಗಳಲ್ಲಿ ಅದರ ಸಂಘಟನೆ ದಿನೇ ದಿನೇ ದುರ್ಬಲವಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಅದಕ್ಕೆ ಸವಾಲಾಗಿದೆ. ಹೀಗಿರುವಾಗ ಕರ್ನಾಟಕದಲ್ಲಿನ ವಿದ್ಯಮಾನಗಳಿಗೆ ಮಹತ್ವ ಕೊಟ್ಟು ಯಾವುದೇ ತೀರ್ಮಾನ ಕೈಗೊಂಡರೂ ಅದರಿಂದ ಪಕ್ಷಕ್ಕೆ ತೀವರ ಸ್ವರೂಪದ ಹಾನಿ ಆಗಲಿದೆ ಎಂಬುದು ಕರ್ನಾಟಕದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಗೊತ್ತು. ಇದಲ್ಲದೇ ಕರ್ನಾಟಕದ ವಿಚಾರದಲ್ಲಿ ಕಾಂಗ್ರೆಸ್ ಕೇಂದ್ರ ಸಮಿತಿಯ ನಾಯಕರಲ್ಲೇ ಒಮ್ಮತ ಇಲ್ಲ.
ವೇಣುಗೋಪಾಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದರೆ ರಣದೀಪ್ ಸಿಂಗ್ ಸುರ್ಜೆವಾಲ ಡಿ.ಕೆ.ಶಿವಕುಮಾರ್ ಪರ ಒಲವು ಹೊಂದಿದ್ದಾರೆ. ಇನ್ನು ಅಧಿನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಿಲುವುಗಳಲ್ಲೂ ಗೊಂದಲ ತುಂಬಿದೆ. ಹೀಗಾಗಿ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ದಿನೇ ದಿನೇ ಸೊರಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಕರ್ನಾಟಕದ ವಿದ್ಯಮಾನಗಳಿಗೆ ಕೈ ಹಾಕಿದರೆ ಸರ್ಕಾರವೇ ಬಿದ್ದು ಹೋಗುವ ಅಪಾಯಗಳೂ ಇಲ್ಲದಿಲ್ಲ. ಇದನ್ನು ಮನಗಂಡೇ ದಿಲ್ಲಿ ನಾಯಕರು ಕರ್ನಾಟಕದಿಂದ ದೂರು ಹೊತ್ತು ಬರುವ ಎಲ್ಲ ನಾಯಕರ ಮಾತುಗಳನ್ನು ಮೌನವಾಗಿ ಕೇಳುತ್ತಾರೆ. ಆಯ್ತು ಎಲ್ಲವನ್ನೂ ಬಗೆಹರಿಸೋಣ ಎಂಬ ಆಶ್ವಾಸನೆ ಬಿಟ್ಟರೆ ಉಳಿದಂತೆ ಯಾವುದೇ ಖಚಿತ ಭರವಸೆಗಳು ಯಾವುದೇ ಗುಂಪಿಗೂ ಸಿಕ್ಕಿಲ್ಲ.
ಬಹಿರಂಗವಾಗಿ ತೋರಿಸಿಕೊಳ್ಳದೇ ತಮ್ಮ ರಣ ತಂತ್ರಗಳನ್ನು ಗೌಪ್ಯವಾಗೇ ಮುಂದುವರಸಿರುವ ಶಿವಕುಮಾರ್ ಇತ್ತೀಚೆಗೆ ದೆಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟದ ಪುನಾರಚನೆಗೆ ಹೈಕಮಾಂಡ್ ನಾಯಕರನ್ನು ಒತ್ತಾಯಿಸಿದ್ದಾರೆ. ಬರುವ ಮೇ ತಿಂಗಳಿಗೆ ರಾಜ್ಯ ಸರ್ಕಾರಕ್ಕೆ ಎರಡು ವರ್ಷಗಳು ತುಂಬಲಿದೆ. ಈ ಸಂದರ್ಭದಲ್ಲಿ ಸಚಿವ ಸಂಪುಟ ಪುನಾರಚನೆ ಅಗತ್ಯ. ಒಂದಷ್ಟು ಮಂದಿ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವುದು ಅವಶ್ಯಕವಾಗಿದೆ. ಇಲ್ಲದಿದ್ದಲ್ಲಿ ಸಚಿವ ಪದವಿಗಾಗಿ ಕಾದಿರುವ ಅಸಮಾಧಾನಿತ ಶಾಸಕರ ಸಂಖ್ಯೆ ಹೆಚ್ಚಾಗಲಿದೆ ಎಂಬ ಸೂಕ್ಷ್ಂ ಎಚ್ಚರಿಕೆ ನೀಡಿ ಬಂದಿದ್ದಾರೆ.
ಈ ಲೆಕ್ಕಾಚಾರ ಕಾರ್ಯ ರೂಪಕ್ಕೆ ಬಂದರೆ ಸಿದ್ದರಾಮಯ್ಯ ಬಣದಲ್ಲಿದ್ದು ಬಹಿರಂಗವಾಗಿ ಮುಜುಗುರ ತರುವ ಹೇಳಿಕೆಗಳನ್ನು ನೀಡುತ್ತಿರುವ ಸಚಿವರ ತಲೆದಂಡ ಖಚಿತ ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ. ಸಚಿವ ಪದವಿಗಾಗಿ ಕಾದಿರುವ ಶಾಸಕರಿಂದಲೇ ಸಂಪುಟ ಪುನಾರಚನೆಗೆ ಬಹಿರಂಗ ಒತ್ತಡ ಆರಂಭವಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಿವಾರ್ಯವಾಗಿ ಇದಕ್ಕೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ, ಆಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ತೆರೆ ಮರೆಗೆ ಸರಿಯುತ್ತದೆ ಎಂಬುದು ಒಂದು ಲೆಕ್ಕಾಚಾರ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಬೆಂಬಲಿಗ ಸಚಿವರ ಪೈಕಿ ಹೆಚ್ಚು ಮಾತನಾಡುತ್ತಿರುವವರೆಂದರೆ ಸಹಕಾರ ಸಚಿವ ಕೆ.ಎನ್. ರಾಜಣ್ಣ. ಇತ್ತೀಚೆಗೆ ಅವರು ಬಹಿರಂಗವಾಗೇ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ವರಿಷ್ಠರೂ ಅಸಮಾಧಾನಗೊಂಡಿದ್ದಾರೆ ಎಂಬ ಮಾಹಿತಿಗಳು ಇವೆ.
ಇನ್ನು ಬಹಿರಂಗವಾಗಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿರುವ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸೇರಿದಂತೆ ಕೆಲವರಿಗೆ ಭವಿಷ್ಯದಲ್ಲಿ ಕಾಂಗ್ರೆಸ್ ನಲ್ಲೇ ತಮ್ಮ ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳುವ ಅನಿವಾರ್ಯತೆಗಳಿವೆ. ಒಂದು ವೇಳೆ ಉಪ ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡರಲ್ಲಿ ಯಾವುದು ತೆರವಾದರೂ ಹಿರಿತನ ಆಧರಿಸಿ ಅದನ್ನು ಪಡೆದುಕೊಳ್ಳುವ ಮುಂದಾಲೋಚನೆ ಅವರದ್ದು.
ಇತ್ತೀಚೆಗೆ ಪರಿಶಿಷ್ಟ ಸಚಿವರ ಸಬೆಗಳನ್ನು ಹೆಚ್ಚಾಗಿ ಡಾ. ಪರಮೇಶ್ವರ್ ರವರೇ ಆಯೋಜಿಸುತ್ತಿದ್ದಾರೆ. ಪರಿಶಿಷ್ಟ ಜಾತಿ- ಪಂಗಡಗಳ ಬೃಹತ್ ಸಮಾವೇಶ ಆಯೋಜಿಸಿ ಶಕ್ತಿ ಪ್ರದರ್ಶನ ನಡೆಸುವ ಉದ್ದೇಶದ ಹಿಂದೆಯೂ ನಾನಾ ಲೆಕ್ಕಾಚಾರಗಳಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಸಚಿವ ರಾಜಣ್ಣ ಮತ್ತು ಡಾ. ಪರಮೇಶ್ವರ್ ಪ್ರತ್ಯೇಕವಾಗಿ ಭೇಟಿ ಮಾಡಿದ್ದ ಸಂದರ್ಭದಲ್ಲೂ ಖರ್ಗೆಯವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಬ್ಯಾನರ್ ಅಡಿಯಲ್ಲೇ ಸಮಾವೇಶ ಮಾಡಿ ಎಂದೂ ಸೂಚನೆ ಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲೇ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖರನ್ನು ಆಹ್ವಾನಿಸಿರುವುದಾಗಿ ಸಚಿವ ರಾಜಣ್ಣ ಹೇಳುತ್ತಿದ್ದಾರೆ.
ಸಾಮಾನ್ಯವಾಗಿ ಇಂತಹ ಸಮಾವೇಶಗಳು ಪಕ್ಷದ ರಾಜ್ಯ ಘಟಕಗಳ ಅಧ್ಯಕ್ಷರ ಉಸ್ತುವಾರಿಯಲ್ಲೇ ಅವರ ಸೂಚನೆಗನುಸಾರವಾಗಿಯೇ ನಡೆಯಬೇಕು. ಆದರೆ ಈ ವಿಚಾರದಲ್ಲಿ ಉದ್ದೇಶ ಪೂರ್ವಕವಾಗಿ ಶಿವಕುಮಾರ್ ಅವರನ್ನು ಹೊರಗಿಟ್ಟು ಕೆಲವು ಸಚಿವರು ಚಟುವಟಿಕೆ ನಡೆಸುತ್ತಿರುವುದರ ಹಿಂದೆಯೂ ಕೆಪಿಸಿಸಿ ಅಧ್ಯಕ್ಷರು ಲೆಕ್ಕಕ್ಕಿಲ್ಲ ಎಂದು ತೋರಿಸುವ ಪ್ರಯತ್ನವೇ ಆಗಿದೆ ಎಂಬ ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಮಾತನ್ನು ಇಲ್ಲಿ ಗಮನಿಸಬೇಕು. ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷರನ್ನೂ ಅನಿವಾರ್ಯವಾಗಿ ಆಹ್ವಾನಿಸಲೇ ಬೇಕಾಗುತ್ತದೆ. ಸಮಾವೇಶದ ನೆಪದಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನವಾಗುವಂತೆ ನೋಡಿಕೊಳ್ಳುವುದು ಮತ್ತು ಬಹಿರಂಗವಾಗಿ ಅವರನ್ನು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಸುವಂತೆ ಆಗ್ರಹಿಸುವುದು. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟರು, ಹಿಂದುಳಿದ ವರ್ಗಕ್ಕೆ ನೀಡುವಂತೆ ಆಗ್ರಹಿಸುವುದು. ಇದರ ಪ್ರಮುಖ ಅಜೆಂಡಾ. ಇಲ್ಲಿ ಪರೋಕ್ಷವಾಗಿ ಶಿವಕುಮಾರ್ ಶಕ್ತಿಯನ್ನು ಕುಗ್ಗಿಸುವುದೇ ಉದ್ದೇಶ ಎನ್ನಲಾಗುತ್ತಿದ್ದು ಇದಕ್ಕೆ ಸಿದ್ದರಾಮಯ್ಯ ಬೆಂಬಲವೂ ಇದೆ ಎಂಬ ಮಾತೂ ಕಾಂಗ್ರೆಸ್ ವಲಯಗಳಲ್ಲಿ ಕೇಳಿ ಬರುತ್ತಿದೆ.
ಹಾಗೊಂದು ವೇಳೆ ಪರಿಶಿಷ್ಟರ ಸಮಾವೇಶಕ್ಕೆ ಅನುಮತಿ ನೀಡಿದ್ದೇ ಆದಲ್ಲಿ ಮುಂದೆ ಇಂತಹ ಜಾತಿ ಸಮಾವೇಶಗಳನ್ನು ನಡೆಸಲೂ ಬೇಡಿಕೆ ಬರಬಹುದು. ಅಂತಹ ಸನ್ನಿವೇಶ ಒದಗಿ ಬಂದರೆ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕುವುದಂತೂ ಖಚಿತ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗಳಿಸಲು ಪ್ರಬಲ ಸಮುದಾಯಗಳೂ ಕೈ ಜೋಡಿಸಿದ್ದವು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಉಂಟಾದ ಗುಂಪುಗಾರಿಕೆಯಿಂದಾಗಿ ಅಸಮಾಧಾನಿತ ಸಮುದಾಯಗಳ ಒಂದಷ್ಟು ಮತಗಳು ಆ ಪಕ್ಷದ ಕೈ ತಪ್ಪಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ವರದಾನವಾಯಿತು. ಸಿ.ಟಿ.ರವಿ ಸ್ಪರ್ಧಿಸಿದ್ದ ಚಿಕ್ಕಮಗಳೂರು ಸೇರಿದಂತೆ ಹಿಂದೆ ಬಿಜೆಪಿ ಶಾಸಕರು ಪ್ರತಿನಿಧಿಸಿದ್ದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಪ್ರಬಲ ಸಮುದಾಯಗಳು ಬೆಂಬಲಿಸಿದ್ದೇ ಕಾರಣ. ಇದು ವಸ್ತು ಸ್ಥಿತಿ ಹೀಗಿರುವಾಗ ಮುಂದಿನ ದಿನಗಳಲ್ಲಿ ಜಾತಿ ಸಮಾವೇಶಗಳು ಹೆಚ್ಚಾದರೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು ಎಂಬ ಚಿಂತೆಗೆ ಕಾಂಗ್ರೆಸ್ ವರಿಷ್ಟರು ಬಿದ್ದಿದ್ದಾರೆ.
ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಶಿವಕುಮಾರ್ ಅವರನ್ನು ಬದಲಿಸುವ ವಿಚಾರದಲ್ಲಿ ಹೈಕಮಾಂಡ್ ಅಂತಹ ಆಸಕ್ತಿ ತೋರಿಸುತ್ತಿಲ್ಲ. ಕಾಂಗ್ರೆಸ್ ಪಾಲಿಗೆ ಸಂಜೀವಿನಿಯಂತಾಗಿರುವ ಶಿವಕುಮಾರ್ ಪ್ರಮುಖ ಸಂಪನ್ಮೂಲ ವ್ಯಕ್ತಿಯೂ ಆಗಿದ್ದಾರೆ. ವಿವಿಧ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ತಮ್ಮೆಲ್ಲ ಶಕ್ತಿಯನ್ನೂ ಪಣಕ್ಕಿಟ್ಟಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ನಿಧಾನವಾಗಿ ಸಂಘಟನಾತ್ಮಕವಾಗಿ ಕುಸಿಯುತ್ತಿರುವ ಸನ್ನಿವೇಶದಲ್ಲಿ ಒಕ್ಕಲಿಗರ ಪ್ರಮುಖ ನಾಯಕನಾಗಿ ಶಿವಕುಮಾರ್ ರೂಪುಗೊಳ್ಳುತ್ತಿದ್ದಾರೆ. ಈ ಹಂತದಲ್ಲಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಆ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ . ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ ಎಂಬ ಆತಂಕ ವರಿಷ್ಟರದ್ದು.
ಈಗಾಗಲೇ ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಮತ್ತೆ ಅಹಿಂದ ಸಮುದಾಯಕ್ಕೇ ಪಕ್ಷದ ಅಧ್ಯಕ್ಷ ಸ್ಥಾನ ಕೊಟ್ಟರೆ ಅತೃಪ್ತಿ ಭುಗಿಲೇಳುವುದು ಖಚಿತ ಎಂಬ ಭೀತಿಯೂ ಹೈಕಮಾಂಡ್ ನ್ನು ಕಾಡುತ್ತಿದೆ.
ಈ ಎಲ್ಲ ಲೆಕ್ಕಚಾರಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ರಾಜ್ಯದಲ್ಲಿ ಎರಡು ವರ್ಷಗಳ ಹಿಂದೆ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಹೈಕಮಾಂಡ್ ಮಟ್ಟದಲ್ಲಿ ಆಗಿದೆ ಎನ್ನಲಾದ ಮುಖ್ಯಮಂತ್ರಿ ಪದವಿಯ ಅಧಿಕಾರ ಹಂಚಿಕೆ ವಿಚಾರದ ಬಗ್ಗೆಯೂ ಕಾಂಗ್ರೆಸ್ ನ ದಿಲ್ಲಿ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ. ಇಂಥದೊಂದು ಒಪ್ಪಂದದ ವಿಚಾರ ಶಿವಕುಮಾರ್, ಸಿದ್ದರಾಮಯ್ಯ ಸಮ್ಮುಖದಲ್ಲಿ ಹೈಕಮಾಂಡ್ ಮಧ್ಯಸ್ಥಿಕೆಯಲ್ಲಿ ಆಗಿದ್ದು ಶಾಸಕಾಂಗ ಪಕ್ಷದ ಸಭೆಯಲ್ಲಾಗಲೀ ಹಾಗೂ ಇತರ ನಾಯಕರ ಸಮ್ಮುಖದಲ್ಲಾಗಲೀ ಚರ್ಚೆ ಆಗಿಲ್ಲ. ಸದ್ಯಕ್ಕೆ ಇದೇ ವಿವಾದದ ಮೂಲ, ಸಿದ್ದರಾಮಯ್ಯ ಸುಲಭಕ್ಕೆ ಮುಖ್ಯಮಂತ್ರಿ ಪದವಿ ಬಿಟ್ಟುಕೊಡುವ ರಾಜಕಾರಣಿ ಅಲ್ಲ. ಹಾಗೆಯೇ ಡಿ.ಕೆ.ಶಿವಕುಮಾರ್ ಕೂಡಾ ಪಟ್ಟು ಹಿಡಿದು ಕೂತಿದ್ದಾರೆ.
ಇತ್ತೀಚೆಗೆ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭ ಮೇಳದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವ್ಯಂಗ್ಯ ಭರಿತ ಟೀಕೆಗಳನ್ನು ಮಾಡಿ ಬಿಜೆಪಿ ನಾಯಕರನ್ನು ಕುಟುಕಿದ್ದರು. ಇದರ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಪ್ರಯಾಗ್ ರಾಜ್ ಗೆ ತೆರಳಿ ಕುಂಭ ಮೇಳದಲ್ಲಿ ಮುಳುಗೆದ್ದಿದ್ದಷ್ಟೇ ಅಲ್ಲ. ಉತ್ತರ ಪ್ರದೇಶದ ಸರ್ಕಾರ ಕೈಗೊಂಡ ಸಿದ್ಧತೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಉಪ ಮುಖ್ಯಮಂತ್ರಿ ಆಗಿದ್ದ ಕಾರಣಕ್ಕೆ ಅವರಿಗೆ ಅಲ್ಲಿನ ಸರ್ಕಾರ ಕಾನೂನಿನ ಪ್ರಕಾರ ಶಿಷ್ಟಾಚಾರ ಪಾಲನೆ ಮಾಡಿ ಸತ್ಕಾರ ಮಾಡಿತು. ಇದು ರಾಷ್ಟ್ರ ಮಟ್ಟದಲ್ಲೂ ದೊಡ್ಡ ಚರ್ಚೆ ಅಗುತ್ತಿದೆ. ಶಿವಕುಮಾರ್ ಅವರ ಇತ್ತೀಚಿನ ಕೆಲವು ನಡವಳಿಕೆಗಳು ಅವರು ಹಿಂದುತ್ವದ ಅಜೆಂಡಾಕ್ಕೆ ಹತ್ತಿರವಾಗುತ್ತಿದ್ದಾರಾ ಎಂಬ ಸಂದೇಹ ಮೂಡಿಸಿರುವುದಂತೂ ಸತ್ಯ. ಆದರೆ ಅವರು ಭೇಟಿ ನೀಡಿ ಬಂದ ಕೆಲವೇ ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡಾ ಕುಂಭ ಮೇಳಕ್ಕೆ ಹೋಗಿ ಪಾಲ್ಗೊಂಡಿರುವುದು ಕಾಕತಾಳೀಯವಾದರೂ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಏಕೆಂದರೆ ಇಬ್ಬರೂ ತಮ್ಮ ಪಕ್ಷಗಳಲ್ಲಿ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದೇ ವಿಶೇಷ!
-ಯಗಟಿ ಮೋಹನ್