ಬದುಕಿನ ಮೂಲ ಉದ್ದಶವೇನು ಗೊತ್ತೇ? ಖುಷಿಯಾಗಿರುವುದು! ಒಂದೊಳ್ಳೆ ಜೀವನ ನಡೆಸುವುದು! ಈ ಮೂಲ ಉದ್ದೇಶಗಳನ್ನು ಈಡೇರಿಸಲಾಗದ ಯಶಸ್ಸು ಮತ್ತು ಹಣದಿಂದ ಯಾವ ಪ್ರಯೋಜನವೂ ಇಲ್ಲ. ಇದರರ್ಥ ಸಂಪತ್ತು ಸೃಷ್ಟಿಸಬಾರದು ಎಂದಲ್ಲ. ನಮಗೆ ಇಷ್ಟವಿಲ್ಲದ ಯಾವುದೇ ಕೆಲಸವನ್ನೂ ಮಾಡಲೇ ಬಾರದು ಎಂದಲ್ಲ. ಪ್ರಾಥಮಿಕವಾಗಿ ನಮಗೇನು ಬೇಕು, ನಮಗೆ ಯಾವ ಕೆಲಸ ಮಾಡುವುದು ಖುಷಿ ಕೊಡುತ್ತದೆ? ಎನ್ನುವುದನ್ನು ನಾವು ಅರಿತುಕೊಳ್ಳಬೇಕು.
ಆದರೆ ನಮ್ಮಲ್ಲಿ ಏನಾಗಿದೆ? ವಿದ್ಯಾಭ್ಯಾಸದ ಸಮಯದಲ್ಲಿಂದ ಎಡವುದು ಶುರುವಾಗುತ್ತದೆ. ಅದು ಕೆಲಸದ ವೇಳೆಯಲ್ಲೂ ಮುಂದುವರಿಯುತ್ತದೆ. ಬಹುತೇಕ ಜನ ಅವರಿಗೇನು ಇಷ್ಟ, ಅವರಿಗೇನು ಬೇಕು ಎನ್ನುವುದು ತಿಳಿದುಕೊಳ್ಳದೆ ಇಲ್ಲಿನ ಆಟವನ್ನು ಮುಗಿಸಿ ಹೊರಟು ಬಿಡುತ್ತಾರೆ. ಗಲ್ಪ್ ಎನ್ನುವ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಕಂಪನಿ 2024 ರಲ್ಲಿ ನಡೆಸಿರುವ ಸರ್ವೆಯಲ್ಲಿ ತಿಳಿದು ಬಂದಿರುವ ವಿಷಯ ಅಚ್ಚರಿ ಗೊಳಿಸುವುದಿಲ್ಲ. ಬದಲಿಗೆ ನಮ್ಮ ಸಮಾಜದಲ್ಲಿ ಇರುವ ನೋವು, ಹತಾಶೆ, ತಪ್ಪುಗಳನ್ನು ಎತ್ತಿ ತೋರಿಸುತ್ತದೆ. ಈ ಸರ್ವೇ ಪ್ರಕಾರ ಭಾರತದಲ್ಲಿ ಕೆಲಸ ಮಾಡುವ ಕೆಲಸಗಾರರಲ್ಲಿ ,ನೂರಕ್ಕೆ 86 ಪ್ರತಿಶತ ಕೆಲಸಗಾರರು 'ಸಫರಿಂಗ್' ನಲ್ಲಿದ್ದೇವೆ ಎಂದು ಹೇಳಿದ್ದಾರೆ. ಕೇವಲ 14 ಪ್ರತಿಶತ ಜನ ಮಾತ್ರ 'Thriving' ಎಂದು ಹೇಳಿದ್ದಾರೆ.
ಈ ಸಂಸ್ಥೆ ಹತ್ತಾರು ಪ್ರಶ್ನೆಗಳನ್ನು ಕೇಳಿ ಅದರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೂರು ವಿಭಾಗಗಳಲ್ಲಿ ಕೆಲಸಗಾರರನ್ನು ವಿಂಗಡಿಸಿದ್ದಾರೆ. ಅದ್ಭುತವಾಗಿ ಜೀವನದಲ್ಲಿ ಮುಂದೆ ಬರುತ್ತಿದ್ದೇವೆ, ಮಾಡುತ್ತಿರುವ ಕೆಲಸ ತುಂಬಾ ಇಷ್ಟವಾಗಿದೆ ಎಂದವರಲ್ಲಿ ಕೂಡ ಹತ್ತಕ್ಕೆ ಹತ್ತು ಅಂಕ ಗಳಿಸಿದವರಲ್ಲ ಎನ್ನುವುದನ್ನು ಗಮನಿಸಬೇಕು. ಹತ್ತರಲ್ಲಿ ಏಳು ಮತ್ತು ಅದಕ್ಕಿಂತ ಹೆಚ್ಚಿನ ಅಂಕವನ್ನು ಗಳಿಸಿದವರನ್ನು Thriving ಪಟ್ಟಿಯಲ್ಲಿ ಹಾಕಲಾಗಿದೆ. ಉಳಿದ 86 ಪ್ರತಿಶತ ಜನ ಕೆಲಸ ಮತ್ತು ಬದುಕಿನಲ್ಲಿ ಬೇಸೆತ್ತು ಹೋಗಿದ್ದೇವೆ, ಭವಿಷ್ಯದ ಬಗ್ಗೆ ನೆನಸಿಕೊಂಡರೆ ಭಯವಾಗುತ್ತದೆ ಎಂದಿದ್ದಾರೆ. ಅದರಲ್ಲೂ 40 ಪ್ರತಿಶತ ಕೆಲಸ ಮತ್ತು ಬದುಕಿನಲ್ಲಿ ಅತ್ಯಂತ ದುಃಖಿಯಾಗಿ ಇರುವುದಾಗಿ ಹೇಳಿಕೊಂಡಿದ್ದಾರೆ. ಇದು ಸೌತ್ ಏಷ್ಯಾ ದೇಶಗಳ ಕಥೆ.
ಜಗತ್ತಿನ ಲೆಕ್ಕಾಚಾರ ತೆಗೆದುಕೊಂಡರೂ ಕೇವಲ 34 ಪ್ರತಿಶತ ಜನ ಬದುಕು ಸುಂದರ, ಅದ್ಬುತ, thriving ಕೆಟಗರಿಯಲ್ಲಿ ಬರುತ್ತಾರೆ. ಉಳಿದವರ ಬಾಳು ಅದೇ ಗೋಳು. ಹೀಗೇಕೆ ಎನ್ನುವುದನ್ನು ಹುಡುಕಿ ಹೋದಾಗ ತಿಳಿಯುವ ಅಂಶ ಜಗತ್ತಿನಾದ್ಯಂತ ಸೇಮ್.
ಅವರಿಗೇನು ಬೇಕು, ಇಷ್ಟ, ಅದನ್ನು ಅವರು ಓದಿರುವುದಿಲ್ಲ. ಅವರ ಓದಿಗೆ ಯಾವ ಕೆಲಸ ಸಿಕ್ಕಿತ್ತು ಅದನ್ನು ಬದುಕು ಸಾಗಿಸಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಇಷ್ಟವಿಲ್ಲದ ಕೆಲಸದಲ್ಲಿ ಹತ್ತು ವರ್ಷ ಕಳೆಯುವ ವೇಳೆಗೆ ಬರ್ನ್ ಔಟ್ ಆಗಿ ಬಿಡುತ್ತಾರೆ. ನಲವತ್ತು ವಯಸ್ಸು ಆಗುವ ವೇಳೆಗೆ ಹೇಗಾದರೂ ಸರಿಯೇ ಮಾಡುತ್ತಿರುವ ಕೆಲಸ ಬಿಟ್ಟು, ಇಚ್ಛೆ ಪಟ್ಟ ಕೆಲಸವನ್ನು ಮಾಡಬೇಕು ಎನ್ನುವ ತವಕ ಹೆಚ್ಚಾಗುತ್ತದೆ. ಬದುಕಿನ ಶಕ್ತಿಯುತವಾದ ವರ್ಷಗಳನ್ನು ಆಗಲೇ ಕಳೆದು ಬಿಟ್ಟಿರುತ್ತಾರೆ. ಮಿಡ್ ಲೈಫ್ ಕ್ರೈಸಿಸ್ ನಲ್ಲಿ ಹೆಣಗುವ ಸಮಯದಲ್ಲಿ ಹೊಸ ಸಾಹಸ ಮಾಡಲು ಹೋಗುತ್ತಾರೆ. ಸೋಲಿಗೆ ಇದಕ್ಕಿಂತ ಉತ್ತಮ ಸನ್ನಿವೇಶ ಇನ್ನ್ಯಾವುದಿದೆ?
ಇಂದಿಗೆ ನಾವು ಯಾರನ್ನೂ ಕೋಟ್ಯಧಿಪತಿಗಳು, ಸಿರಿವಂತರು ಎನ್ನುತ್ತೇವೆ ಅವರನ್ನು ಒಮ್ಮೆ ಗಮನಿಸಿ ನೋಡಿ ಅವರಲ್ಲಿ ಎರಡು ವಿಧದ ವ್ಯಕ್ತಿಗಳನ್ನು ಕಾಣಬಹುದು. ಒಂದು ಇಷ್ಟದ ಓದು, ಇಷ್ಟದ ವೃತ್ತಿಯಲ್ಲಿ ಮುಂದುವರೆದು ಯಶಸ್ಸು ಗಳಿಸಿದವರು. ಇವರಿಗೆ ಇರುವ ಅತಿ ದೊಡ್ಡ ಲಾಭವೆಂದರೆ ಇಷ್ಟ ಪಟ್ಟು ಮಾಡುವ ಕೆಲಸದಿಂದ ಆಲಸ್ಯ, ನೋವು, ಬೇಜಾರು ಉತ್ಪನ್ನವಾಗುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ಅದು ಬದುಕುವ ರೀತಿಯಾಗಿರುತ್ತದೆ. ಅದು ಕೆಲಸ ಎನ್ನಿಸಿಕೊಳ್ಳುವುದಿಲ್ಲ. ಎರಡನೇ ವರ್ಗದ ಜನ ಓದು ಅಥಾವ ಕೆಲಸ ಎರಡರಲ್ಲಿ ಒಂದು ಅಥವಾ ಎರಡೂ ಇಷ್ಟವಿಲ್ಲದೆ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಅಪ್ಪಿಕೊಂಡಿರುತ್ತಾರೆ. ಆದರೆ ಅವರಿಗೆ ಬದುಕಿನಲ್ಲಿ ಏನು ಬೇಕು ಎನ್ನುವ ನಿಖರತೆ ಇರುತ್ತದೆ. ಅವರ ಅಲ್ಟಿಮೇಟ್ ಗೋಲ್ ಏನಿದೆ ಅದನ್ನು ಸಾಧಿಸಲು ಇದನ್ನು ಮಾರ್ಗವನ್ನಾಗಿ ಬಳಸಿಕೊಳ್ಳುತ್ತಾರೆ.
ಉದಾಹರಣೆಗೆ ಯಾರೋ ಒಬ್ಬರಿಗೆ ಸ್ಟಾಂಡ್ ಅಪ್ ಕಾಮಿಡಿಯನ್ ಆಗಬೇಕು ಎನ್ನುವ ತುಡಿತವಿರುತ್ತದೆ. ಆದರೆ ಸಮಯ, ಸನ್ನಿವೇಶ ಅದಕ್ಕೆ ಪೂರಕವಾಗಿರುವುದಿಲ್ಲ. ಹೀಗಾಗಿ ಬದುಕಿನ ಬಂಡಿ ಸಾಗಿಸಲು ಒಂದು ವೃತ್ತಿ, ಓದಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಮೊದಲ ದಿನದಿಂದ ತಮ್ಮ ಗುರಿಯ ಬಗ್ಗೆ ಅವರಿಗೆ ಗಮನವಿರುತ್ತದೆ. ಇದು ನನ್ನ ಗುರಿ ಸಾಧನೆಗೆ ಅವಶ್ಯಕವಾದದ್ದು ಎನ್ನುವ ಅರಿವಿರುವ ಕಾರಣ, ಮಾಡುವ ಕೆಲಸವನ್ನು ಪ್ರೀತಿಸಲು ಶುರು ಮಾಡುತ್ತಾರೆ. ಈ ವರ್ಗದ ಜನ ನಿಜವಾದ ಸಾಧಕರು. ಜಗತ್ತಿನಲ್ಲಿ ಬಹು ಕಡಿಮೆ ಜನರಿಗೆ ಬಯಸಿದ ಬದುಕು ದಕ್ಕುತ್ತದೆ. ಉಳಿದ ಜನ ಪ್ರಯತ್ನ ಪೂರ್ವಕವಾಗಿ ಬಯಸಿದ ಬದುಕನ್ನು ಕಟ್ಟಿಕೊಳ್ಳಬೇಕು.
ಪ್ರೀತಿಸುವ ಕೆಲಸವನ್ನು ಮಾಡುವುದು ಮತ್ತು ಮಾಡುವ ಕೆಲಸವನ್ನು ಪ್ರೀತಿಸುವುದರ ನಡುವೆ ಬಹು ದೊಡ್ಡ ಅಂತರವಿದೆ. ಇದು ನನ್ನ ಅಭಿರುಚಿಗೆ ನೂರು ಪ್ರತಿಶತ ಹೊಂದಾವಣಿಕೆ ಆಗುವುದಿಲ್ಲ, ನಾನು ಇಲ್ಲಿಗೆ ಸೇರಿದವನಲ್ಲ. ಆದರೆ ನನಗೆ ಬೇಕಾದದ್ದು ಮಾಡಲು ಇನ್ನಷ್ಟು ಆರ್ಥಿಕವಾಗಿ ಸಬಲನಾಗಬೇಕು ಎನ್ನುವ ಅಂಶವನ್ನು ಮನಗಂಡು, ಮಾಡುವ ಕೆಲಸದಲ್ಲಿ ಶ್ರದ್ದೆ, ಉತ್ಸಾಹ ತೋರುವುದು ಕೋಟ್ಯಧಿಪತಿಯಾಗಲು ಇರಬೇಕಾದ ಪ್ರಮುಖ ಗುಣಲಕ್ಷಣಗಳಲ್ಲಿ ಪ್ರಮುಖವಾದದ್ದು. ಜಗತ್ತಿನಲ್ಲಿ ಸ್ವಂತ ಬಲದಿಂದ ಸಂಪತ್ತು, ಯಶಸ್ಸು, ಹೆಸರು ಸಂಪಾದಿಸಿದ ಮುಕ್ಕಾಲು ಪಾಲು ಜನರನ್ನು ನೋಡಿ. ಅವರು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದಾರೆ. ಬೆಳಿಗ್ಗೆ ಹಾಲು, ಪೇಪರ್ ಹಾಕಿದ್ದಾರೆ, ಗುಮಾಸ್ತನ ಕೆಲಸ ಮಾಡಿದ್ದಾರೆ. ಹೀಗೆ ಜಗತ್ತು ಯಾವುದನ್ನು ನಿಕೃಷ್ಟ ಎಂದು ಪರಿಗಣಿಸುತ್ತದೆ, ಆ ಎಲ್ಲಾ ಕೇಳಾಸಗಳನ್ನು ಮಾಡಿದ್ದಾರೆ. ಆದರೆ ಅವರಿಗೆ ಆ ಕೆಲಸ ಮಾಡುವಾಗ 'ಇದು ಪ್ರಯಾಣದ ಒಂದು ಭಾಗ, ಇದು ನನ್ನ ಕೊನೆಯ ನಿಲ್ದಾಣವಲ್ಲ' ಎನ್ನುವುದು ಗೊತ್ತಿರುತ್ತದೆ. ಹೀಗಾಗಿ ಮಾಡುವ ಕೆಲಸವನ್ನು ಪ್ರೀತಿಸುತ್ತಾರೆ, ಕೊನೆಗೆ ಪ್ರೀತಿಸುವ ಕೆಲಸವನ್ನು ಕೂಡ ಮಾಡುತ್ತಾರೆ.
ಮೊದಲೇ ಹೇಳಿದಂತೆ ಪ್ರೀತಿಸುವ ಕೆಲಸ, ಇಷ್ಟ ಪಡುವ ಕೆಲಸ ಸಿಕ್ಕುವುದು ಕೆಲವೇ ಕೆಲವು ಜನರಿಗೆ. ಉಳಿದವರಲ್ಲಿ ಒಂದಷ್ಟು ಜನ ಮಾಡುವ ಕೆಲಸವನ್ನು ಪ್ರೀತಿಸುತ್ತಾರೆ. ಹೀಗಾಗಿ ಅವರು ಕೂಡ 14 ಪ್ರತಿಶತದಲ್ಲಿ ಬರುತ್ತಾರೆ. ಉಳಿದ 84 ಪ್ರತಿಶತ ಜನ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದಿಲ್ಲ, ಮಾಡುವ ಕೆಲಸವನ್ನೂ ಶ್ರದ್ದೆಯಿಂದ ಮಾಡುವುದಿಲ್ಲ. ಆಗ ನೋವು, ಹತಾಶೆ ಸಹಜ. Do what you love ಗಿಂತ Love what you do ಎನ್ನುವ ಫಿಲಾಸಫಿ ಬಹಳ ದೊಡ್ಡದು. ಒಟ್ಟಾರೆ ನಮ್ಮ ಮಾರ್ಗ ಯಾವುದೇ ಇರಲಿ ಅದನ್ನು ಮೂರು ಅಂಶಗಳು ಪ್ರೇರೇಪಿಸುತ್ತದೆ.
ಪೇಮೆಂಟ್, ಆದಾಯ, ಹಣ: ನಾವು ಯಾವುದೇ ಕೆಲಸ ಮಾಡಲಿ ಅದರಿಂದ ಒಂದಷ್ಟು ಹಣಕಾಸು ಫಲಿತಾಂಶವಾಗಿ ಸಿಗಬೇಕು. ಇದು ದೊಡ್ಡ ಮೋಟಿವೇಟರ್. ಜಗತ್ತಿನ 90 ಕ್ಕೂ ಹೆಚ್ಚು ಜನರನ್ನು ಪ್ರೇರೇಪಿಸುವುದು ಹಣ. ತಿಂಗಳ ಕೊನೆ ಸಿಕ್ಕುವ ಪೇ ಚೆಕ್, ಬಹಳಷ್ಟು ಜನ ಇನ್ನೂ ಕೆಲಸ ಮಾಡುತ್ತಿರುವುದಕ್ಕೆ ಕಾರಣವಾಗಿದೆ. ಎಷ್ಟರಮಟ್ಟಿಗೆ ಎಂದರೆ ತಮ್ಮ ಕನಸುಗಳನ್ನು ಬದಿಗಿಟ್ಟು ಚಿಟಿಕೆ ಹೊಡೆಯುವಷ್ಟರಲ್ಲಿ ಬರುವ ತಿಂಗಳ ಸಂಬಳಕ್ಕೆ ಜೋತು ಬೀಳುವಷ್ಟು! ಹಣ ಎನ್ನುವುದು ಮಾಡಿದ ಕೆಲಸಕ್ಕೆ ಸಿಗುವ ಸಣ್ಣ ಪ್ರತಿಫಲ. ಇದು ಬಹಳ ಮುಖ್ಯ. ಇದು ಇಂಧನವಿದ್ದಂತೆ, ಇದಿಲ್ಲದೆ ಅದೆಷ್ಟೇ ದೊಡ್ಡ ಕನಸುಗಾರನಾದರೂ ಬಹಳ ಕಾಲ ಬದುಕಲು, ಕನಸಿನ ಬೆಂಬೆತ್ತಲು ಸಾಧ್ಯವಿಲ್ಲ. ಆದರೆ ಇದು ಕನಸನ್ನೇ ಕೊಲ್ಲುವ ಮಟ್ಟಕ್ಕೆ ಹೋಗಬಾರದು.
ಪ್ರೆಸ್ಟೀಜ್: ಇದು ಕೆಲಸ ಮಾಡಲು ಇನ್ನೊಂದು ಪ್ರೇರಣೆ. ಕೆಲವರಿಗೆ ಕೆಲಸ ಮಾಡಿ ಅದರಿಂದ ಸೈ ಎನ್ನಿಸಿಕೊಂಡಾಗ ಸಿಗುವ ಮರ್ಯಾದೆ, ಗೌರವ ಹೆಚ್ಚಿನ ಬಲವನ್ನು, ಖುಷಿಯನ್ನು ನೀಡುತ್ತದೆ. ಸಮಾಜದಲ್ಲಿ ಹೆಚ್ಚುವ ಗೌರವಕ್ಕೆ ಅವರು ಕೆಲಸ ಮಾಡುತ್ತಾರೆ. ಹಣ ಮುಖ್ಯವಾಗಿರುತ್ತದೆ, ಆದರೆ ಅದಕ್ಕಿಂತ ಮುಖ್ಯವಾಗಿ ಕೆಲಸದ ಗೆಲುವಿನಿಂದ ಸಿಗುವ ಮರ್ಯಾದೆ ಹೆಚ್ಚಿನ ಮೌಲ್ಯವನ್ನು ಪಡೆದುಕೊಳ್ಳುತ್ತದೆ. ಜಗತ್ತಿನ ಐದಾರು ಪ್ರತಿಶತ ಜನ ಈ ವರ್ಗದಲ್ಲಿ ಬರಬಹುದು.
ಪ್ರೋಸೆಸ್: ಮಾಡುವ ಕೆಲಸವಷ್ಟೇ ಮುಖ್ಯವಾಗುವುದು ಜಗತ್ತಿನಲ್ಲಿ 0.1 ಪ್ರತಿಶತ ಜನಕ್ಕಿಂತ ಕಡಿಮೆ ಜನರಿಗೆ ಮಾತ್ರ. ಇವರಿಗೆ ಇದರಿಂದ ಸಿಗುವ ಹಣ, ಮರ್ಯಾದೆ ಯಾವುದೂ ಮುಖ್ಯವಾಗುವುದಿಲ್ಲ. ಅವರಿಗೆ ಕೆಲಸದ ಪ್ರಕ್ರಿಯೆ ಮಾತ್ರ ಮುಖ್ಯವಾಗುತ್ತದೆ. ಸೋಲು, ಗೆಲುವು, ಹಣ, ಮರ್ಯಾದೆ ಇದ್ಯಾವುದರ ಬಗ್ಗೆ ಅವರು ಚಿಂತಿಸುವುದೇ ಇಲ್ಲ. ಎಲಾನ್ ಮಸ್ಕ್ ಇಂತಹ ವ್ಯಕ್ತಿ ಎಂದು ಹೇಳಬಹುದು. ಇದೆ ರೀತಿ ಬಹಳಷ್ಟು ಜನ ವಿಜ್ಞಾನಿಗಳು, ಬರಹಗಾರರು, ಕಲಾವಿದರನ್ನು ಕೂಡ ಈ ಕೆಟಗರಿಯಲ್ಲಿ ವಿಂಗಡಿಸಬಹುದು. ಅವರಿಗೆ ಕೆಲಸ ಬಿಟ್ಟು ಬೇರೆ ಪ್ರಪಂಚದ ಅರಿವಿರುವುದಿಲ್ಲ.
ಈಗ ನಿಧಾನಕ್ಕೆ ಕುಳಿತು ಯೋಚಿಸಿ, ನಿಮ್ಮನ್ನು ಮೋಟಿವೇಟ್ ಮಾಡುವ ಅಂಶ ಯಾವುದು? ಎನ್ನುವುದನ್ನು ಕಂಡುಕೊಳ್ಳಿ. ಕೇವಲ ಹಣ ಮಾತ್ರ ಪ್ರೇರೇಪಣೆ ನೀಡುವ ಅಂಶ ಎಂದಾಗಿದ್ದರೆ ಈ ದಾರಿಯಲ್ಲಿ ಉತ್ತಮ ಭವಿಷ್ಯವಿಲ್ಲ. ಹಾಗೆ ಪ್ರೆಸ್ಟೀಜ್ಗಾಗಿ ಮಾತ್ರ ಕೆಲಸ ಮಾಡುತ್ತಿದ್ದರೆ ಅದೂ ಮಿಶ್ರ ಫಲಿತಾಂಶ ನೀಡುತ್ತದೆ. ಪೂರ್ಣ ಪ್ರೋಸೆಸ್ ಡ್ರಿವನ್ ಎಂದರೂ ಕಷ್ಟ. ಏಕೆಂದರೆ ಆ ಮಟ್ಟದ ಬದ್ಧತೆಯನ್ನು ನಾವು ಎಲ್ಲರಿಂದ ಅಪೇಕ್ಷಿಸುವುದು ಬಹಳ ಕಷ್ಟ. ಹೀಗಾಗಿ ಈ ಮೂರು ಅಂಶಗಳ ಹದವಾದ ಮಿಶ್ರಣ ಬೇಕು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com