ನೆನಪಿನ ಶಕ್ತಿ online desk
ಅಂಕಣಗಳು

ನೆನಪಿನ ಶಕ್ತಿಗಾಗಿ ಆಹಾರ-ವಿಹಾರ (ಕುಶಲವೇ ಕ್ಷೇಮವೇ)

ದಿನನಿತ್ಯ ನಿಯಮಿತ ಕೆಲಸಕಾರ್ಯದ ವೇಳಾಪಟ್ಟಿಯನ್ನು ಅನುಸರಿಸುವುದು ಅಥವಾ ದಿನಚರ್ಯವು ಮಾನಸಿಕ ಸ್ಥಿರತೆ ಮತ್ತು ಗಮನವನ್ನು ಉತ್ತೇಜಿಸುತ್ತದೆ.

ನಮಗೆ ವಯಸ್ಸಾದಂತೆ ನೆನಪಿನ ಶಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ. ಮೊದಲಿನಂತೆ ಹಲವಾರು ವಿಷಯಗಳನ್ನು ನೆನಪಿಟ್ಟುಕೊಳ್ಳಲು ಆಗುವುದಿಲ್ಲ. ಹಲವಾರು ವಿಷಯಗಳು ಮರೆತೇ ಹೋಗುತ್ತವೆ. ಕೆಲವೊಮ್ಮೆ ಎಷ್ಟು ನೆನಪಿಟ್ಟುಕೊಂಡರೂ ಕೆಲವು ವಿಷಯಗಳನ್ನು ಮರೆಯುತ್ತೇವೆ.

ಈ ಹಿನ್ನೆಲೆಯಲ್ಲಿ ಪ್ರಾಚೀನ ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದವು ಸ್ಮರಣಶಕ್ತಿ ಮತ್ತು ಅರಿವಿನ ಕಾರ್ಯವನ್ನು ಸುಧಾರಿಸಲು ಸಮಗ್ರ ವಿಧಾನವನ್ನು ನೀಡುತ್ತದೆ. ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮ ಸಾಧನೆಯ ಮೂಲಕ ಆಯುರ್ವೇದವು ಮೆದುಳಿನ ಆರೋಗ್ಯವನ್ನು ಹೆಚ್ಚಿಸಲು ನೈಸರ್ಗಿಕ ಪರಿಹಾರಗಳು, ಜೀವನಶೈಲಿ ಅಭ್ಯಾಸಗಳು ಮತ್ತು ಆಹಾರ ಸೇವನೆಯ ಮಾರ್ಗಸೂಚಿಗಳನ್ನು ನೀಡಿದೆ.

ಆಯುರ್ವೇದ ಮತ್ತು ಸ್ಮರಣಶಕ್ತಿ ವರ್ಧಕಗಳು

ಆಯುರ್ವೇದವು ಹಲವಾರು ಗಿಡಮೂಲಿಕೆಗಳನ್ನು ಶಕ್ತಿಯುತ ಸ್ಮರಣಶಕ್ತಿ ವರ್ಧಕಗಳು ಅಥವಾ ಮೇಧ್ಯ ರಸಾಯನಗಳು ಎಂದು ಗುರುತಿಸುತ್ತದೆ. ಇವುಗಳಲ್ಲಿ ಬ್ರಾಹ್ಮಿ ಅಂದರೆ ಒಂದೆಲಗ ಸ್ಮರಣಶಕ್ತಿ, ಏಕಾಗ್ರತೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ. ಬ್ರಾಹ್ಮಿಯು ನರಮಂಡಲಕ್ಕೆ ಶಕ್ತಿ ನೀಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ಒಂದೆಲಗವನ್ನು ಸಾಮಾನ್ಯವಾಗಿ ಸೊಪ್ಪಿನಲ್ಲಿ. ಮಾಡುವ ಹಾಗೆ ಪಲ್ಯ,, ಚಟ್ನಿ ಮತ್ತು ತಂಬುಳಿಯನ್ನು ಮಾಡಿ ಸೇವಿಸಬಹುದು. ತಂಬುಳಿಯನ್ನು ಮಾಡಲು ಒಂದೆಲಗದ ಸೊಪ್ಪನ್ನು ತುಪ್ಪದಲ್ಲಿ ಸ್ವಲ್ಪ ಜೀರಿಗೆ ಮತ್ತು ಮೆಣಸಿನ ಕಾಳನ್ನು ಹುರಿದು ರುಬ್ಬಿ ನಂತರ ಮಜ್ಜಿಗೆ ಮತ್ತು ಉಪ್ಪನ್ನು ಬೆರೆಸಿ ಕುಡಿಯಬಹುದು ಅಥವಾ ಅನ್ನದೊಂದಿಗೆ ಕಲಸಿ ತಿನ್ನಬಹುದು. ಹಾಗೆಯೇ ನೀರು ಬ್ರಾಹ್ಮಿ ಸೊಪ್ಪನ್ನು ಹೀಗೆ ಬಳಸಬಹುದು.

ಶಂಖಪುಷ್ಪಿ ಸ್ಮರಣಶಕ್ತಿಯನ್ನು ಸುಧಾರಿಸುವ, ಆತಂಕವನ್ನು ಕಡಿಮೆ ಮಾಡುವ ಮತ್ತು ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸುವ ಮೆದುಳಿನ ಟಾನಿಕ್ಕಾಗಿ ಕೆಲಸ ಮಾಡುತ್ತದೆ.

ನಾಲ್ಕರಿಂದ ಆರು ಬಾದಾಮಿಯನ್ನು ಪ್ರತಿದಿನ ರಾತ್ರಿಯಿಡೀ ನೆನೆಸಿ ಬೆಳೆಸಿ ಬೆಳಗ್ಗೆ ತಿನ್ನುವುದು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ.

ಹಾಲು ಮತ್ತು ತುಪ್ಪವನ್ನು ನಿಯಮಿತವಾಗಿ ಮಿತವಾಗಿ ಸೇವಿಸುವುದು ಸ್ಮರಣಶಕ್ತಿಗೆ ಪೂರಕ. ಹಾಗೆಯೇ ವಿಟಮಿನ್ ಸಿ ಸಮೃದ್ಧವಾಗಿರುವ ಬೆಟ್ಟದ ನೆಲ್ಲಿಕಾಯಿ ಮತ್ತು ಕಿತ್ತಲೆಯಂತಹ ಹಣ್ಣುಗಳನ್ನು ಸೇವಿಸಬೇಕು.

ಶಿಸ್ತುಬದ್ಧ ಜೀವನಶೈಲಿ

ನೆನಪಿನ ಶಕ್ತಿಯನ್ನು ಹೆಚ್ಚಿಸಲು ಶಿಸ್ತುಬದ್ಧ ಜೀವನಶೈಲಿಯ ಮಹತ್ವವನ್ನು ಆಯುರ್ವೇದವು ಒತ್ತಿಹೇಳುತ್ತದೆ. ನಿಯಮಿತ ಧ್ಯಾನ ಮತ್ತು ಯೋಗದ ಅಭ್ಯಾಸವು ಮನಸ್ಸನ್ನು ಶಾಂತಗೊಳಿಸುತ್ತದೆ, ಪದ್ಮಾಸನ ಮತ್ತು ಸರ್ವಾಂಗಾಸನದಂತಹ ಯೋಗ ಭಂಗಿಗಳು ಗಮನ ಮತ್ತು ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸುತ್ತವೆ.

ದಿನವೂ ರಾತ್ರಿ ಏಳು-ಎಂಟು ಗಂಟೆಗಳ ಕಾಲ ಸಾಕಷ್ಟು ನಿದ್ರೆ ಮಾಡಿದರೆ ದೇಹ ಮತ್ತು ಮನಸ್ಸುಗಳಿಗೆ ಸರಿಯಾದ ವಿಶ್ರಾಂತಿ ಮೆದುಳು ಪುನಶ್ಚೇತನಗೊಳ್ಳುತ್ತದೆ, ನೆನಪುಗಳನ್ನು ಕ್ರೋಢೀಕರಿಸುತ್ತದೆ ಮತ್ತು ಕಲಿಕೆಯ ಅಭ್ಯಾಸವನ್ನು ಹೆಚ್ಚಿಸುತ್ತದೆ. ದಿನನಿತ್ಯ ನಿಯಮಿತ ಕೆಲಸಕಾರ್ಯದ ವೇಳಾಪಟ್ಟಿಯನ್ನು ಅನುಸರಿಸುವುದು ಅಥವಾ ದಿನಚರ್ಯವು ಮಾನಸಿಕ ಸ್ಥಿರತೆ ಮತ್ತು ಗಮನವನ್ನು ಉತ್ತೇಜಿಸುತ್ತದೆ.

ನೆನಪಿನ ಶಕ್ತಿ ಹೆಚ್ಚಳಕ್ಕೆ ಆಯುರ್ವೇದ ಪದ್ಧತಿ ಬಳಕೆ

ನಸ್ಯ (ಮೂಗಿನ ಶುದ್ಧೀಕರಣ) ಮತ್ತು ಶಿರೋಧಾರಾ (ಎಣ್ಣೆಯ ಚಿಕಿತ್ಸೆ) ನಂತಹ ಪಂಚಕರ್ಮ ಚಿಕಿತ್ಸೆಗಳ ಮೂಲಕ ಆವರ್ತಕ ನಿರ್ವಿಶೀಕರಣವು (ಡೀಟಾಕ್ಸಿಫಿಕೇಷನ್) ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ಮನಸ್ಸನ್ನು ಪುನರುಜ್ಜೀವನಗೊಳಿಸುತ್ತದೆ.

ನರಮಂಡಲವನ್ನು ಶಾಂತಗೊಳಿಸಲು ಆಯುರ್ವೇದವು ಎಳ್ಳೆಣ್ಣೆ, ಹರಳೆಣ್ಣೆಯ ಅಭ್ಯಂಗ ಮತ್ತು ಶ್ರೀಗಂಧ ತೈಲಗಳೊಂದಿಗೆ ಅರೋಮಾಥೆರಪಿಯಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

ಈ ಆಯುರ್ವೇದ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ನೆನಪಿನ ಶಕ್ತಿ ಹೆಚ್ಚಾಗುವುದಲ್ಲದೇ ಒಟ್ಟಾರೆ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಸಾಧಿಸಬಹುದು. ಒಟ್ಟಾರೆ ಹೇಳುವುದಾದರೆ ಆಯುರ್ವೇದ ಆರೋಗ್ಯಕ್ಕೆ ನೈಸರ್ಗಿಕ ಮತ್ತು ಸುಸ್ಥಿರ ಮಾರ್ಗವಾಗಿದೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ಏಳು ಸಲಹೆಗಳು

ಇದಲ್ಲದೇ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯವು ನೆನಪಿನ ಶಕ್ತಿಯನ್ನು ಚುರುಕಾಗಿಟ್ಟುಕೊಳ್ಳಲು ಏಳು ಸಲಹೆಗಳನ್ನು ಇತ್ತೀಚೆಗೆ ನೀಡಿದೆ.

  1. ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಕಾರ ಮೊದಲು ನಾವು ಹೊಸ ವಿಷಯಗಳನ್ನು ಕಲಿಯುವುದನ್ನು ಸದಾ ಕಾಲ ಮುಂದುವರೆಸಬೇಕು. ಇದರಿಂದ ನೆನಪು ಒಂದು ಅಭ್ಯಾಸವಾಗುತ್ತದೆ ಮತ್ತು ಕಲಿತ ವಿಷಯಗಳನ್ನು ನಾವು ಮರೆಯುವುದಿಲ್ಲ. ಹೀಗಾಗಿ ನೆನಪಿನ ಶಕ್ತಿಯು ಬಲಗೊಳ್ಳಲು ಸಹಾಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಮೆದುಳು ಬಳಕೆಯಾದಷ್ಟು ಹೊಸ ಸವಾಲು ಮತ್ತು ಹೊಸ ಮಾಹಿತಿಯನ್ನು ಗ್ರಹಿಸಲು ಸಮರ್ಥವಾಗುತ್ತದೆ.

  2. ಹೊಸ ವಿಷಯಗಳನ್ನು ಕಲಿಯು ನಾವು ಕಣ್ಣು, ಕಿವಿ ಹೀಗೆ ಎಲ್ಲಾ ಇಂದ್ರಿಯಗಳನ್ನು ಬಳಸಬೇಕು. ಹೆಚ್ಚು ಇಂದ್ರಿಯಗಳನ್ನು ಬಳಸಿ ಕಲಿತರೆ ಆಗ ಮೆದುಳು ನೆನಪನ್ನು ಉಳಿಸಿಕೊಳ್ಳಲು ಹೆಚ್ಚಾಗಿ ತೊಡಗುತ್ತದೆ. ಉದಾಹರಣೆಗೆ ಹೇಳುವುದಾದರೆ ಹೊಸದಾಗಿ ಕಾರ್ ಡ್ರೈವ್ ಮಾಡಲು ಯಾವುದೇ ವಯಸ್ಸಿನಲ್ಲಿ ಕಲಿತರು ಡ್ರೈವಿಂಗ್ ಮಾಹಿತಿಯು ನೆನಪಿನಲ್ಲಿ ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ.

  3. ನಾವು ಏನನ್ನಾದರೂ ಸುಲಭವಾಗಿ ನೆನಪಿಸಿಕೊಳ್ಳಬಹುದು ಮೊದಲು ನಂಬಿಕೆ ಬೆಳೆಸಿಕೊಳ್ಳಬೆಕು. ಸ್ಮರಣಶಕ್ತಿ ಸಂರಕ್ಷಣೆಯ ಬಗ್ಗೆ ಸಕಾರಾತ್ಮಕ ಆಲೋಚನೆಗಳು ನಮ್ಮದಾಗಬೇಕು. ಇದು ಎಲ್ಲಾ ವಯಸ್ಸಿನ ಜನರಿಗೂ ಅನ್ವಯವಾಗುವ ಸಲಹೆ. ಈ ನಂಬಿಕೆ ಮೊದಲು ಸರಳವಾಗಿ ಆರಂಭವಾದರೂ ನಿಧಾನವಾಗಿ ಸುಧಾರಿಸಿಕೊಳ್ಳಬಹುದು. ಇದರಿಂದ ಮನಸ್ಸನ್ನು ಚುರುಕಾಗಿಡಲು ಸಹಾಯವಾಗುತ್ತದೆ.

  4. ಹಲವಾರು ವಿಷಯಗಳನ್ನು ನೆನಪಿಸಿಕೊಳ್ಲಲು ಉದಾಹರಣೆಗೆ ಮುಖ್ಯ ದಿನಾಂಕಗಳನ್ನು ನೆನಪಿಸಿಕೊಳ್ಳಲು ಕ್ಯಾಲೆಂಡರ್, ಡೈರಿಗಳಲ್ಲಿ ಆ ದಿನಗಳನ್ನು ಮಾರ್ಕ್ ಮಾಡಿಟ್ಟುಕೊಳ್ಳಬಹುದು. ಇದರಲ್ಲದೇ ಶಾಪಿಂಗ್ ಲಿಸ್ಟ್, ಫೈಲ್ ಫೋಲ್ಡರ್ಗಳು ಮತ್ತು ವಿಳಾಸ ಪುಸ್ತಕಗಳು ದಿನನಿತ್ಯದ ಮಾಹಿತಿಯನ್ನು ಬರೆದು ಸುಲಭವಾಗಿ ಗುರುತಿಟ್ಟುಕೊಳ್ಳಲು ಸಹಾಯ ಮಾಡುತ್ತವೆ. ಪೆನ್, ಕೀಗಳು ಇತ್ಯಾದಿ ಬೇಕಾದ ವಸ್ತುಗಳನ್ನು ಸುಲಭವಾಗಿ ತೆಗೆದುಕೊಳ್ಳಲು ಅವುಗಳನ್ನು ನಿಗದಿತ ಸ್ಥಳದಲ್ಲಿ ಇಟ್ಟುಕೊಳ್ಳುವುದನ್ನು ಆಭ್ಯಾಸ ಮಾಡಿ.

  5. ಯಾವುದಾದರೂ ಓದಿದ, ಕೇಳಿದ, ಓದಿದ ಅಥವಾ ಯೋಚಿಸಿದ ವಿಷಯವನ್ನು ನೆನಪಿಟ್ಟುಕೊಳ್ಳಲು ಬಯಸಿದಾಗ ಅದನ್ನು ಗಟ್ಟಿಯಾಗಿ ಮನದಲ್ಲಿಯೇ ಪುನರಾವರ್ತಿಸಿ ಅಥವಾ ಬರೆಯಿರಿ. ಆ ರೀತಿಯಲ್ಲಿ, ಸ್ಮರಣಶಕ್ತಿ ಬಲವಾಗುತ್ತದೆ.

  6. ಪುನರಾವರ್ತನೆಯು ಕಲಿಕೆಯ ಸಾಧನವಾಗಿ ಅತ್ಯಂತ ಪ್ರಬಲವಾಗಿದೆ. ನೀವು ಏನನ್ನಾದರೂ ನೆನಪಿಟ್ಟುಕೊಳ್ಳಲು ಬಯಸಿದರೆ ಅಂತಹ ವಿಷಯಗಳನ್ನು ಗಂಟೆಗೊಮ್ಮೆ, ದಿನಕ್ಕೊಮ್ಮೆ, ಸಾಪ್ತಾಹಿಕ ಅಥವಾ ಮಾಸಿಕದಂತಹ ಸಕಾಲಿಕ ಮಧ್ಯಂತರಗಳಲ್ಲಿ ಅದನ್ನು ಪುನರಾವರ್ತಿಸುವ ಮೂಲಕ ನೆನಪಿಟ್ಟುಕೊಳ್ಳಬಹುದು.

  7. ಬೇಕಾದ ವಿಷಯಗಳನ್ನು ಮದುವೆ, ಮುಂಜಿ, ಆನಿವರ್ಸರಿ, ಗೃಹಪ್ರವೇಶ ಇತ್ಯಾದಿ ವಿಶೇಷ ಸಂದರ್ಭಗಳನ್ನು ಜ್ಞಾಪಕ ಇಟ್ಟುಕೊಳ್ಲಲು ಜ್ಞಾಪಕ ಪಟ್ಟಿಗಳನ್ನು ತಯಾರಿಸಿಕೊಳ್ಳುವುದು ಸೃಜನಶೀಲ ಮಾರ್ಗವಾಗಿದೆ. ನಿಯಮ, ಹೆಸರು ಇತ್ಯಾದಿಗಳನ್ನು ನೆನಪಿಟ್ಟುಕೊಳ್ಳಲು ಪದಗಳು, ವಾಕ್ಯಗಳು ಅಥವಾ ಕವಿತೆಗಳನ್ನು ಬಳಸಿ. ಪ್ರಾಸಬದ್ಧ ಪದಗಳನ್ನು ಹೆಚ್ಚು ತೊಂದರೆಯಿಲ್ಲದೆ ಮಾಹಿತಿಯನ್ನು ಕಲಿಯಲು ಮತ್ತು ನೆನಪಿಸಿಕೊಳ್ಳಲು ಜ್ಞಾಪಕಾರ್ಥವಾಗಿಯೂ ಬಳಸಬಹುದು. ವಿಷಯಗಳನ್ನು ಜ್ಞಾಪಕವಿಟ್ಟುಕೊಳ್ಳಲು ಹೊಸ ಹೊಸ ವಿಧಾನಗಳನ್ನು ನಾವೇ ಕಂಡುಹಿಡಿಯುವುದು ಬಹಳ ಒಳ್ಳೆಯದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT