ಜಿಎಸ್ ಟಿ ನೋಂದಣಿ (ಸಾಂಕೇತಿಕ ಚಿತ್ರ) online desk
ಅಂಕಣಗಳು

GST ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದರಿಂದ ಸಣ್ಣ ಉದ್ದಿಮೆದಾರರಿಗೆ ನಷ್ಟವೇನೂ ಇಲ್ಲ! (ಹಣಕ್ಲಾಸು)

ಅವರ ಮೇಲೆ ನೋಟಿಸ್ ದಾಳಿ ಮಾಡಿ ಒಂದಷ್ಟು ದಿನ ಸಮಾಜದಲ್ಲಿ ಭದ್ರವಾಗಿ ನೆಲೆಯೂರಿರುವ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅಲುಗಾಡಿಸಿದ್ದು ಮಾತ್ರ ಸಾಧನೆ

ಸಣ್ಣ ಉದ್ಯಮಿಗಳಿಗೆ ವಾಣಿಜ್ಯ ತೆರಿಗೆ ನೀಡಿದ್ದ ನೋಟೀಸ್ ಸುಖಾಂತ್ಯ ಕಂಡಿದೆ. ಉದ್ದಿಮೆದಾರರ ಹಳೆಯ ತೆರಿಗೆಯನ್ನು ಮನ್ನಾ ಮಾಡಲಾಗಿದ್ದು ನೋಟೀಸ್ ಪಡೆದ ಎಲ್ಲಾ ವ್ಯಾಪಾರಿಗಳು ಕೂಡ ಕಡ್ಡಾಯವಾಗಿ ಜಿಎಸ್ಟಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು ಎನ್ನುವ ಹೇಳಿಕೆಯನ್ನು ನೀಡಲಾಗಿದೆ. ಇದರಲ್ಲಿ ನಾವು ಎರಡು ಅಂಶಗಳನ್ನು ಗಮನಿಸಬೇಕಾಗುತ್ತದೆ. ಮೊದಲಿನದು ಅವರ ತೆರಿಗೆಯನ್ನು ಮನ್ನಾ ಮಾಡಲಾಗಿದೆ ಎನ್ನುವುದು. ಇದು ನಿಜಕ್ಕೂ ಹಾಸ್ಯಾಸ್ಪದ ವಿಷಯ. ಅವರು ಸಂಗ್ರಹಿಸಿದೆ ಇರುವ ತೆರಿಗೆಯನ್ನು ಕಟ್ಟಲು ಹೇಗೆ ಸಾಧ್ಯ? ಹೀಗಾಗಿ ಅವರು ತೆರಿಗೆ ಕಟ್ಟಬೇಕಾಗಿರಲಿಲ್ಲ.

ಅವರ ಮೇಲೆ ನೋಟಿಸ್ ದಾಳಿ ಮಾಡಿ ಒಂದಷ್ಟು ದಿನ ಸಮಾಜದಲ್ಲಿ ಭದ್ರವಾಗಿ ನೆಲೆಯೂರಿರುವ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅಲುಗಾಡಿಸಿದ್ದು ಮಾತ್ರ ಸಾಧನೆ. ಎರಡನೇ ಅಂಶ ನೋಟೀಸ್ ಪಡೆದವರು ಕಡ್ಡಾಯವಾಗಿ ಜಿಎಸ್ಟಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು ಎನ್ನುವುದು . ಖಂಡಿತ ಇದು ಸ್ವಾಗತಾರ್ಹ. ಕೇವಲ ನೋಟೀಸ್ ಪಡೆದವರು ಮಾತ್ರವಲ್ಲ , ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಜಿಎಸ್ಟಿಯಿಂದ ಕೆಲವೊಂದು ಪದಾರ್ಥಗಳನ್ನು ಮತ್ತು ಸೇವೆಯನ್ನು ಮುಕ್ತಗೊಳಿಸಲಾಗಿದೆ. ಹೀಗೆ ಯಾವುದೆಲ್ಲಾ ಜಿಎಸ್ಟಿ ಅಡಿಯಲ್ಲಿ ಬರುವುದಿಲ್ಲ ಆ ಉದ್ದಿಮೆದಾರರನ್ನು ಹೊರತುಪಡಿಸಿ ಬೇರೆಲ್ಲರೂ ಜಿಎಸ್ಟಿ ನೋಂದಾವಣಿ ಮಾಡಿಸಿಕೊಳ್ಳುವುದು ಉತ್ತಮ. ನೆನಪಿರಲಿ ಇಂದಿಗೆ ನಲವತ್ತು ಲಕ್ಷ ದಾಟಿದೆ ಎನ್ನುವ ಕಾರಣಕ್ಕೆ ಯಾರಿಗೆಲ್ಲಾ ನೋಟೀಸ್ ಬಂದಿದೆ ಅವರು ಕಂಪೋಸಿಷನ್ ಸ್ಕೀಮ್ ಅಡಿಯಲ್ಲಿ ನೋಂದಾವಣಿ ಮಾಡಿಸ್ಕೊಳ್ಳುವುದು ಉತ್ತಮ.

ಜಿಎಸ್ಟಿ ಕಂಪೊಸಿಶನ್ ಸ್ಕೀಮ್ ಅಡಿಯಲ್ಲಿ ವಾರ್ಷಿಕ ಒಂದೂವರೆ ಕೋಟಿ ರುಪಾಯಿ ತನಕ ವಹಿವಾಟು ನಡೆಸುವ ವ್ಯಾಪಾರಿಗಳು ಒಟ್ಟು 1 ರಿಂದ 6% ಜಿಎಸ್ಟಿ ಪಾವತಿಸಿದರೆ ಸಾಕಾಗುತ್ತದೆ. ಉದಾಹರಣೆಗೆ ಸಣ್ಣ ವ್ಯಾಪಾರಿಯೊಬ್ಬ ವರ್ಷಕ್ಕೆ ಒಂದೂವರೆ ಕೋಟಿ ರುಪಾಯಿಗಳಷ್ಟು ವ್ಯಾಪಾರ ಮಾಡಿದರೆ ಆಗ ಒಂದೂವರೆ ಲಕ್ಷ ರುಪಾಯಿ ಜಿಎಸ್ಟಿ ಕಟ್ಟಿದರೆ ಸಾಕಾಗುತ್ತದೆ. ಹೀಗಾಗಿ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ಈ ಸ್ಕೀಮ್ ವರದಾನವಾಗಲಿದೆ. ಕೆಳಗಿನ ಟೇಬಲ್ ನಲ್ಲಿ ಇದನ್ನು ವಿವರವಾಗಿ ನೋಡಬಹುದು. ಗಮನಿಸಿ ಈಶಾನ್ಯ ರಾಜ್ಯಗಳು ಮತ್ತು ಹಿಮಾಚಲ ಪ್ರದೇಶದಲ್ಲಿದ ವ್ಯಾಪಾರಿಗಳಿಗೆ ಇದರ ಮಿತಿ ವಾರ್ಷಿಕ 75 ಲಕ್ಷ ರುಪಾಯಿಗಳ ವಹಿವಾಟು ಮಿತಿ ತನಕ 1 ಪ್ರತಿಶತ ಜಿಎಸ್ಟಿ ಇರುತ್ತದೆ.

ಇನ್ನೊಂದು ಅಂಶ ಕೂಡ ನೆನಪಿನಲ್ಲಿರಲಿ ಈ ಕಂಪೋಸಿಷನ್ ಸ್ಕೀಮ್ ಅಡಿಯಲ್ಲಿ ಅಂತಾರಾಜ್ಯ ಬಿಸಿನೆಸ್ ನಡೆಸಲು ಸಾಧ್ಯವಾಗುವುದಿಲ್ಲ ಮತ್ತು ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಅಲ್ಲದೆ ಇಲ್ಲಿ ಪ್ರತಿ ತಿಂಗಳೂ ಜಿಎಸ್ಟಿ ಡಿಕ್ಲೇರ್ ಮಾಡುವ ಬದಲು ಮೂರು ತಿಂಗಳಿಗೊಮ್ಮೆ ಮಾಡಿದರೆ ಸಾಕಾಗುತ್ತದೆ. ಇದನ್ನು ಬಿಟ್ಟು ಇನ್ನು ಎರಡು ರೀತಿ ಜಿಎಸ್ಟಿ ವಿಧಾನಗಳಿಗೆ ಒಂದು ರೆಗ್ಯುಲರ್ ಅಂದರೆ ಎಲ್ಲರೂ ಬಳಸಬೇಕಾಗಿರುವುದು QRPM ಅಂದರೆ ಕ್ವಾರ್ಟರ್ಲಿ ರಿಟರ್ನ್ ಮಂತ್ಲಿ ಪೇಮೆಂಟ್. ಪ್ರತಿ ತಿಂಗಳು ರಿಟರ್ನ್ ಫೈಲ್ ಮಾಡಬೇಕಾಗುತ್ತದೆ. ಆದರೆ ಐಎಸ್ಟಿ ಹಣವನ್ನು ಮೂರು ತಿಂಗಳಿಗೊಮ್ಮೆ ಕಟ್ಟಿದರೆ ಸಾಕಾಗುತ್ತದೆ. ಈ ಮೂರರಲ್ಲಿ ಯಾವುದು ನಮಗೆ ಹೆಚ್ಚು ಸೂಕ್ತ ಎನ್ನಿಸುತ್ತದೆ ಅದರಡಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಇದರ ಜೊತೆಗೆ ಪದಾರ್ಥದಿಂದ ಪದಾರ್ಥಕ್ಕೆ ಜಿಎಸ್ಟಿ ರೇಟ್ ಬದಲಾಗುತ್ತದೆ. ತಿಂಗಳಲ್ಲಿ ನೂರಾರು ಮಾರಾಟದ, ಖರೀದಿಯ ಬಿಲ್ ಗಳು ಉತ್ಪನ್ನವಾಗುತ್ತವೆ. ಹೀಗಾಗಿ ಇದನ್ನು ಸರಿಯಾಗಿ ನೋಡಿಕೊಳ್ಳಲು ವೃತ್ತಿಪರ ಸಹಾಯ ಪಡೆಯುವುದು ಉತ್ತಮ. ಆ ಕಾರಣದಿಂದ ಜಿಎಸ್ಟಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಇದನ್ನು ಎಷ್ಟೇ ಓದಿದರೂ ಅದನ್ನು ಸರಿಯಾಗಿ ಮೇಂಟೈನ್ ಮಾಡಲು ವೃತ್ತಿಪರರ ಅವಶ್ಯಕತೆ ಖಂಡಿತ ಇದೆ. ಹೀಗಾಗಿ ಇದರ ಬಗ್ಗೆ ವೃತ್ತಿಪರರನ್ನು ಭೇಟಿ ಮಾಡಿ ಅವರ ಸಲಹೆ ಪಡೆಯುವುದು ಉತ್ತಮ.

ಜಿಎಸ್ಟಿ ಕೂಡ ವೃತ್ತಿಪರ ಚಾರ್ಟರ್ಡ್ ಅಕೌಂಟೆಂಟ್ ಅಥವಾ ಕಂಪನಿ ಸೆಕ್ರೆಟರಿ ಅವರ ಸಹಾಯದಿಂದ ಪಡೆದುಕೊಳ್ಳಬಹುದು. ಅಥವಾ ಆನ್ಲೈನ್ ನಲ್ಲಿ ಕೂಡ ಅಪ್ಪ್ಲೈ ಮಾಡಬಹುದು.

ಸಾಮಾನ್ಯವಾಗಿ ಜಿಎಸ್ಟಿ ಅಪ್ಪ್ಲೈ ಮಾಡಲು ಬೇಕಾಗಿರುವ ಅನುಮತಿ ಪತ್ರಗಳು ಹೀಗಿವೆ:

  1. ಪರ್ಮನೆಂಟ್ ಅಕೌಂಟ್ ನಂಬರ್

  2. ಬ್ಯಾಂಕ್ ಡೀಟೇಲ್ಸ್

  3. ಅಡ್ರೆಸ್ ಪ್ರೂಫ್

  4. ಆಥೋರೈಸ್ಡ್ ಸಿಗ್ನೇಟರಿಯ ಪಾನ್ ಮತ್ತು ಆಧಾರ್ ಕಾರ್ಡ್

  5. ಎಲ್ಲಾ ನಿರ್ದೇಶಕರ ಪಾನ್ ಮತ್ತು ಆಧಾರ್ ಕಾರ್ಡ್

  6. ಮೆಮೊರೆಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್

  7. ಆಥೋರೈಸ್ಡ್ ಸಿಗ್ನೆಟರಿ ನೇಮಕ ಮಾಡಿರುವ ಠರಾವು ಪತ್ರ

  8. ಸರ್ಟಿಫಿಕೇಟ್ ಆಫ್ ಇನ್ಕಾರ್ಪೋರೇಶನ್

  9. ನಿರ್ದೇಶಕರ ಭಾವಚಿತ್ರಗಳು

ಕೆಳಗಿನ ಲಿಂಕ್ ಬಳಸಿಕೊಂಡು, ಕೆಳಗೆ ನಮೂದಿಸಿರುವ ಹಂತಗಳನ್ನು ಬಳಸಿಕೊಂಡು ಜಿಎಸ್ಟಿ ನಂಬರ್ ಪಡೆದುಕೊಳ್ಳಬಹುದು.

https://services.gst.gov.in/services/quicklinks/registration

STEP 1: Access the GST Portal.

STEP 2: Click on “Register Now”

STEP 3: Select Taxpayer.

STEP 4: Select State/UT and District.

STEP 5: Enter Business Name.

STEP 6: Enter PAN Number.

STEP 7: Enter Email Address.

STEP 8: Enter Mobile Number.

STEP 9: Enter Captcha

STEP 10: Temporary Reference Number (TRN)

ಹೀಗೆ ಸಿಕ್ಕಿದ ಟೆಂಪರರಿ ರೆಫರೆನ್ಸ್ ನಂಬರ್ ಮೂಲಕ ಮತ್ತೆ ಜಿಎಸ್ಟಿ ವೆಬ್ ಸೈಟ್ ಗೆ ಲಾಗಿನ್ ಆಗಬೇಕು. ಆಧಾರ್ ಬಳಸಿಕೊಂಡು ಬರುವ ಒಟಿಪಿ ಹಾಕುವುದರ ಮೂಲಕ ಗುರುತು ಪ್ರಾಮಾಣಿಕವಾದದ್ದು ಎಂದು ವೆರಿಫೈ ಮಾಡಿದ ನಂತರ ಜಿಎಸ್ಟಿ ಅಪ್ಲಿಕೇಶನ್ ರೆಫರೆನ್ಸ್ ನಂಬರ್ ಸಿಗುತ್ತದೆ. ಎಲ್ಲಾ ದಾಖಲೆ ಪತ್ರಗಳು ಪರಿಶೀಲಿಸಿ ಸರಿಯಾಗಿದ್ದ ಪಕ್ಷದಲ್ಲಿ ಜಿಎಸ್ಟಿ 6 ಕೆಲಸದ ದಿನದಲ್ಲಿ ನೀಡಲಾಗುತ್ತದೆ.

ಕೊನೆ ಮಾತು: ಇವತ್ತಿನ ದಿನದಲ್ಲಿ ನಲವತ್ತು ಲಕ್ಷ ಟರ್ನ್ ಓವರ್ ಅದೂ ಒಂದು ವರ್ಷದಲ್ಲಿ ಬಹಳ ಹೆಚ್ಚೇನಲ್ಲ. ಹೀಗಾಗಿ ಬಹಳಷ್ಟು ಜನ ನೋಂದಾವಣಿ ಮಾಡಿಕೊಳ್ಳಬೇಕಾದ ಅವಶ್ಯಕತೆ ಬರುತ್ತದೆ. ನಾವು ಡಿಜಿಟಲ್ ಕರೆನ್ಸಿ ಬಳಸುವುದಿಲ್ಲ ಎನ್ನುವುದು ಸಮಸ್ಯೆಗೆ ಪರಿಹಾರವಾಗುವುದಿಲ್ಲ. ಸರಕಾರ ಮಾಡಿದ ತಪ್ಪಿಗೆ ಗ್ರಾಹಕರ ಮೇಲೆ ಸೇಡು ತೀರಿಸಿಕೊಂಡಂತೆ ಆಗುತ್ತದೆ ಅಷ್ಟೇ. ಆದರೆ ಸಣ್ಣ ಉದ್ದಿಮೆದಾರರ ಬಳಿ ಬೇರೆ ಆಯ್ಕೆ ಕೂಡ ಇರಲಿಲ್ಲ. ಗಮನಿಸಿ ಅವರು ತೆರಿಗೆಯನ್ನು ಸಂಗ್ರಹ ಮಾಡಿರಲಿಲ್ಲ. ಅಂದರೆ ತಮ್ಮ ಪದಾರ್ಥವನ್ನು ಅಥವಾ ಸೇವೆಯನ್ನು ನೀಡುವಾಗ ಅವರು ಜಿಎಸ್ಟಿಯನ್ನು ಗ್ರಾಹಕರಿಂದ ಪಡೆದುಕೊಂಡಿಲ್ಲ. ಅಂದಮೇಲೆ ಅವರು ಹೇಗೆ ಮತ್ತು ಎಲ್ಲಿಂದ ತೆರಿಗೆ ಹಣವನ್ನು ತಂದುಕೊಡಲು ಸಾಧ್ಯ? ಈ ಒಂದು ಸಣ್ಣ ಸಾಮಾನ್ಯ ಜ್ಞಾನ ಅಧಿಕಾರಿಗಳಲ್ಲಿ ಇದ್ದಿದ್ದರೆ ಸಾಕಾಗಿತ್ತು. ಅವರು ಎಚ್ಚರಿಕೆ ನೋಟೀಸ್ ನೀಡಬಹುದಿತ್ತು. ನೋಡಿ ನಿಮ್ಮ ಟರ್ನ್ಓವರ್ ೪೦ ಲಕ್ಷ ಮೀರುತ್ತಿದೆ. ಹೀಗಾಗಿ ನೀವು ಜಿಎಸ್ಟಿ ನೋಂದಾವಣಿ ಮಾಡಿಕೊಳ್ಳಿ . ಇಲ್ಲದಿದ್ದಲ್ಲಿ ಮುಂದಿನ ವರ್ಷದಿಂದ ತೆರಿಗೆ ಸಂಗ್ರಹಿಸಿರಿ ಅಥವಾ ಬಿಡಿ, ನೀವು ಕಟ್ಟಬೇಕಾಗುತ್ತದೆ ಎನ್ನುವ ನೋಟೀಸ್ ನೀಡಿದ್ದರೆ ಸಾಕಾಗಿತ್ತು. ಐದಾರು ದಿನ ಲಕ್ಷಾಂತರ ಜನರ ನೆಮ್ಮದಿ ಕೆಡವುವ ಕೆಲಸ ಬೇಕಾಗಿರಲಿಲ್ಲ. ನಿಧಾನವಾದರೂ ಸರಕಾರ ತನ್ನ ತಪ್ಪು ತಿದ್ದುಕೊಂಡಿದೆ. ಪ್ರಹಸನ ಸುಖಾಂತ್ಯ ಕಂಡಿದೆ. ಆದರೆ ವರ್ತಕರೇ ಎಚ್ಚರ! ಆದಷ್ಟು ಬೇಗೆ ಜಿಎಸ್ಟಿ ನೋಂದಾವಣಿ ಮಾಡಿಕೊಳ್ಳಿ. ಇದರಲ್ಲಿ ನೀವು ಕಳೆದುಕೊಳ್ಳುವುದು ಏನಿಲ್ಲ. ನೀವು ಗ್ರಾಹಕನಿಂದ ಸಂಗ್ರಹಿಸಿ ಮತ್ತು ಅದನ್ನು ಸರಕಾರಕ್ಕೆ ಕಟ್ಟಿದರೆ ಸಾಕು. ವೃತ್ತಿಪರರಿಗೆ ನೀಡುವ ಫೀಸ್ ಮಾತ್ರ ನಿಮ್ಮ ಖರ್ಚಿನ ಪಟ್ಟಿ ಸೇರುತ್ತದೆ. ಅದೊಂದು ಹೆಚ್ಚುವರಿ ತೂಕ ನಿಮ್ಮ ಮೇಲೆ ಬೀಳಲಿದೆ. ಆದರೆ ಗಮನಿಸಿ ಈ ಜಿಎಸ್ಟಿ ರಿಟರ್ನ್ಸ್ ಸರಿಯಾಗಿ ಕಟ್ಟಿದ್ದರೆ ಅದರ ಆಧಾರದ ಮೇಲೆ ಕೂಡ ಬ್ಯಾಂಕುಗಳು ಸಾಲ ನೀಡುತ್ತವೆ. ಎಲ್ಲವೂ ಡಿಕ್ಲೇರ್ ಆಗಿದ್ದಾಗ ಅದರಿಂದ ಹೆಚ್ಚಿನ ಲಾಭ ಉದ್ದಿಮೆಗೆ ಮತ್ತು ಉದ್ದಿಮೆದಾರರಿಗೆ ಆಗುತ್ತದೆ. ಹೀಗಾಗಿ ನೋಂದಾವಣಿ ಮಾಡಿಸಿಕೊಳ್ಳಲು ತಡ ಮಾಡುವುದು ಬೇಡ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವಿಶ್ವಸಂಸ್ಥೆ ನಿರ್ಣಯಗಳ ಆಧಾರದ ಮೇಲೆ ಕಾಶ್ಮೀರ ಸಮಸ್ಯೆ ಪರಿಹರಿಸಬೇಕು: ಭಾರತದ ವಿರುದ್ಧ ಮತ್ತೆ ಕ್ಯಾತೆ ತೆಗೆದ ಟರ್ಕಿ ಅಧ್ಯಕ್ಷ..!

ಗಾಝಾ ಯುದ್ಧ ನಿಲ್ಲಿಸಿದ್ರೆ ಮಾತ್ರ ಟ್ರಂಪ್'ಗೆ ನೊಬೆಲ್ ಪ್ರಶಸ್ತಿ; ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್

ಜಾತಿಗಳಿದ್ದ ಮಾತ್ರಕ್ಕೆ ಧರ್ಮ ಒಡೆಯುತ್ತದೆಯೇ? ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಂಬಿಸುವುದು ಬಿಜೆಪಿಯ ಏಕೈಕ ಅಜೆಂಡಾ!

"ನನ್ನನ್ನು ರಸ್ತೆಯಲ್ಲಿ ತಡೆದಿದ್ದಾರೆ": ಟ್ರಂಪ್‌ಗೇ ಮ್ಯಾಕ್ರನ್ ಫೋನ್ ಕಾಲ್, ನ್ಯೂಯಾರ್ಕ್‌ ಬೀದಿಯಲ್ಲಿ ಹೈಡ್ರಾಮಾ...!

ತೈವಾನ್‌ನಲ್ಲಿ ʻರಾಗಸʼ ಚಂಡಮಾರುತದ ಅಬ್ಬರ: 14 ಬಲಿ, 124 ಮಂದಿ ನಾಪತ್ತೆ

SCROLL FOR NEXT