ಪ್ರಧಾನಿ ನರೇಂದ್ರ ಮೋದಿ- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ online desk
ಅಂಕಣಗಳು

ಹೊಸಕಿ ಹಾಕಲು ಭಾರತ ಬಾಂಗ್ಲಾವಲ್ಲ! ಭಾರತವೀಗ ಗ್ಲೋಬಲ್ ಲೀಡರ್! (ಹಣಕ್ಲಾಸು)

ಭಾರತಕ್ಕೆ ನಷ್ಟ ಮಾಡಬೇಕು ಎಂದು ಬಯಸಿದ್ದ ಯೂರೋಪಿನ ಸ್ಥಿತಿ ಈಗ ಇಂಗು ತಿಂದ ಮಂಗನಂತಾಗಿದೆ. ಹೌದು ಯೂರೋಪಿಗೆ ರಫ್ತಾಗುತ್ತಿದ್ದ ತೈಲ ಇದೀಗ ಆಫ್ರಿಕನ್ ದೇಶಗಳಿಗೆ ಮತ್ತು ಬಾಂಗ್ಲಾಗೆ ರಫ್ತಾಗುತ್ತಿದೆ. (ಹಣಕ್ಲಾಸು-467)

ಕೇವಲ ನಾಲ್ಕು ದಿನದ ಹಿಂದೆ ಯೂರೋಪಿಯನ್ ಒಕ್ಕೂಟ ಮತ್ತು ಕೆನಡಾ ದೇಶಗಳು ಭಾರತದ ನಯರ ಎನರ್ಜಿ ಎನ್ನುವ ಸಂಸ್ಥೆಯನ್ನು ಬ್ಯಾನ್ ಮಾಡುವುದರ ಮೂಲಕ ಭಾರತದಲ್ಲಿ ರಿಫೈನ್ ಆಗಿ ಬರುವ ತೈಲವನ್ನು ಕೊಳ್ಳುವುದಿಲ್ಲ ಎಂದಿವೆ. ಜಾಗತಿಕ ಪರಿಭಾಷೆಯಲ್ಲಿ ಇದಕ್ಕೆ ಸ್ಯಾಂಕ್ಷನ್(sanctions) ಎನ್ನಲಾಗುತ್ತದೆ. ಇದಕ್ಕೆ ಕಾರಣ ಬಹಳ ಸರಳ. ಭಾರತ ರಷ್ಯಾ ದೇಶದಿಂದ ತೈಲವನ್ನು ಖರೀದಿಸುತ್ತಿದೆ ಎನ್ನುವುದು. ಯೂರೋಪಿಯನ್ ಒಕ್ಕೂಟವಿರಬಹುದು ಅಥವಾ ಅಮೇರಿಕಾ ಇವೆರಲ್ಲರದೂ ಡಬಲ್ ಸ್ಟ್ಯಾಂಡರ್ಡ್. ಎಲ್ಲಿಯರೆಗೆ ತಮಗೆ ಲಾಭವಾಗುತ್ತಿರುತ್ತದೆ ಅಲ್ಲಿಯವರೆಗೆ ಎಲ್ಲವೂ ಸರಿ ಎನ್ನುತ್ತವೆ. ಅವರಿಗೆ ಲಾಭ ನಿಂತ ತಕ್ಷಣ ಅದೇ ನೀತಿಗಳು ಕೆಟ್ಟವು, ಜಗತ್ತಿಗೆ ಮಾರಕ ಎಂದು ಬೊಬ್ಬೆ ಹೊಡೆಯಲು ಶುರು ಮಾಡುತ್ತವೆ. ನಿಮಗೆಲ್ಲಾ ಗೊತ್ತಿರಲಿ ಇದೆ ಯೂರೋಪು ನಿನ್ನೆ ಮೊನ್ನೆಯವರೆಗೂ ಭಾರತದಿಂದ ತೈಲವನ್ನು ಖರೀದಿಸುತ್ತಿದ್ದವು. ರಿಫೈನ್ಡ್ ಇನ್ ಇಂಡಿಯಾ ಟ್ಯಾಗ್ ನೊಂದಿಗೆ ಅವು ಯೂರೋಪು ಪ್ರವೇಶಿಸುತ್ತಿದ್ದವು. ಆದರೆ ಅವುಗಳ ಮೂಲ ರಷ್ಯಾವೇ ಆಗಿತ್ತು.

ಉಕ್ರೈನ್ ಮತ್ತು ರಷ್ಯಾ ಯುದ್ಧದ ನಂತರ ಯೂರೋಪು ನೇರವಾಗಿ ರಷ್ಯಾದೊಂದಿಗೆ ತೈಲವನ್ನು ಖರೀದಿಸುವುದು ಬಿಟ್ಟಿತು. ಆದರೆ ತನಗೆ ಬೇಕಾದ ತೈಲದ ಅವಶ್ಯಕತೆಯನ್ನು ಅದು ಹೇಗೆ ತಾನೇ ಕಡಿಮೆ ಮಾಡಿಕೊಳ್ಳಲು ಸಾಧ್ಯ. ಹೀಗಾಗಿ ಅದು ಭಾರತದೊಂದಿಗೆ ಕೊಳ್ಳಲು ಶುರು ಮಾಡಿತು. ಭಾರತವೇನೂ ತನ್ನ ನೆಲದಲ್ಲಿ ತೈಲವನ್ನು ಉತ್ಪಾದನೆ ಮಾಡುತ್ತಿರಲಿಲ್ಲ. ಅದು ರಷ್ಯಾದ ಕಚ್ಚಾ ತೈಲವನ್ನು ತರಿಸಿಕೊಂಡು ಅದನ್ನು ಡೀಸೆಲ್, ಪೆಟ್ರೋಲ್ ಇನ್ನಿತರ ತೈಲವನ್ನಾಗಿ ರಿಫೈನ್ ಮಾಡುತಿತ್ತು ಅಷ್ಟೇ. ಇದು ಅಮೇರಿಕಾ , ಯೂರೋಪು ಮತ್ತಿತರ ಎಲ್ಲಾ ದೇಶಗಳಿಗೂ ಗೊತ್ತಿದೆ. ಹೀಗಿದ್ದೂ ಅವು ಕೊಳ್ಳುತ್ತಿದ್ದವು. ಅಮೇರಿಕಾ ರಷ್ಯಾದ ತೈಲ ಕೊಳ್ಳುವುದು ಬೇಡ ಎನ್ನುವ ಧಮಕಿಯನ್ನು ಭಾರತಕ್ಕೆ ಹಾಕುತ್ತದೆ. ಭಾರತ ಅದಕ್ಕೆ ಕವಡೆ ಕಾಸಿನ ಬೆಲೆಯನ್ನು ನೀಡದೆ ರಷ್ಯಾದ ತೈಲವನ್ನು ಕೊಳುತ್ತದೆ.

ನಿಮಗೆ ಗೊತ್ತಿರಲಿ ಅಮೆರಿಕಾದ ಕೆಲವು ಪ್ರೈವೇಟ್ ರಿಫೈನರೀಸ್ ಕೂಡ ರಷ್ಯಾದ ತೈಲವನ್ನು ಕೊಳ್ಳುತ್ತವೆ. ಅದು ಸೌದಿ ಮೂಲಕ ಹಾದು ಹೋಗುವುದರಿಂದ ಅದಕ್ಕೆ ದೋಷವಿಲ್ಲ. ಆದರೆ ಅವುಗಳ ಮೂಲ ಕೂಡ ರಷ್ಯಾ. ಕಳೆದ ಎರಡು ವರ್ಷಗಳಲ್ಲಿ ಭಾರತ ಹೀಗೆ ರಷ್ಯಾದ ಮೂಲಕ ಕಚ್ಚಾ ತೈಲ ಖರೀದಿಸಿ ಅವುಗಳನ್ನು ರಿಫೈನ್ ಮಾಡಿ ಮಾರುವುದರ ಮೂಲಕ ಬಹಳಷ್ಟು ಹಣವನ್ನು ಸಂಪಾದಿಸಿದೆ. ಇದು ಯೂರೋಪಿಯನ್ ಯೂನಿಯನ್ ಕಣ್ಣು ಕುಕ್ಕಿದೆ. ಇದಿಷ್ಟೇ ಕಾರಣವಾಗಿದ್ದರೆ ಯೂರೋಪಿಯನ್ ಯೂನಿಯನ್ ಭಾರತದ ವಿರುದ್ಧ, ಭಾರತದ ನಯರ ಎನೆರ್ಜಿಯನ್ನು ಬಹಿಸ್ಕರಿಸುವ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಇದರ ಹಿಂದೆ ಜಾಗತಿಕ ರಾಜಕೀಯ ಕೆಲಸ ಮಾಡಿದೆ.

ಕೇವಲ ವಾರದ ಹಿಂದೆ ಅಮೆರಿಕಾದ ಸೆನೆಟರ್ ಲಿಂಡ್ಸೆ ಗ್ರಹಾಮ್ ಎನ್ನುವಾತ ನೀವು ಹೀಗೆ ರಷ್ಯಾದ ತೈಲವನ್ನು ಖರೀದಿ ಮಾಡುತ್ತಿದ್ದರೆ ನಾವು ನಿಮ್ಮ ಆರ್ಥಿಕತೆಯನ್ನು ನೆಲ ಕಚ್ಚಿಸುತ್ತೇವೆ ಎನ್ನುವ ಬೆದರಿಕೆಯ ಮಾತನ್ನು ಆಡಿದ್ದಾರೆ. ಅವರು ಚೀನಾ, ಬ್ರೆಝಿಲ್ ಮತ್ತು ಭಾರತವನ್ನು ಕುರಿತು ಈ ಮಾತುಗಳನ್ನು ಆಡಿದ್ದಾರೆ. ಇದಕ್ಕೆ ಪೂರಕವಾಗಿ ಬ್ರಿಕ್ಸ್ ದೇಶಗಳ ಮೇಲೆ ತೆರಿಗೆಯನ್ನು ಹೆಚ್ಚಳ ಮಾಡಿದ್ದಾರೆ. ಇದರಿಂದ ಬ್ರಿಕ್ಸ್ ದೇಶಗಳಿಗೆ ಒಂದು ರೂಪಾಯಿ ನಷ್ಟವಾದರೆ ಅಮೇರಿಕಾ ಮತ್ತು ಯೂರೋಪಿಯನ್ ಯೂನಿಯನ್ ಕನಿಷ್ಠ ಮೂರು ಪಟ್ಟು ಹೆಚ್ಚು ನಷ್ಟವನ್ನು ಅನುಭವಿಸುತ್ತವೆ.

ಶಾಡೋ ಸಪ್ಲೈ ಚೈನ್ ಬಳಸುತ್ತಿದೆ ಯೂರೋಪಿಯನ್ ಯೂನಿಯನ್

ಮಜಾ ನೋಡಿ. ಯೂರೋಪಿಗೆ 100 ಲೀಟರ್ ತೈಲದ ಅವಶ್ಯಕತೆಯಿದೆ ಎಂದುಕೊಳ್ಳಿ. ಅದು ಉಕ್ರೈನ್ ಯುದ್ಧಕ್ಕೆ ಮೊದಲು ರಷ್ಯಾದಿಂದ ಕೊಳ್ಳುತಿತ್ತು. ಉಕ್ರೈನ್ ದೇಶದ ಕ್ರಿಮಿಯಾ ಎನ್ನುವ ನೆಲದಿಂದ ತೈಲದ ಪೈಪ್ ಲೈನ್ ಹಾದು ಹೋಗುತ್ತದೆ. ರಷ್ಯಾ ಮತ್ತು ಯೂರೋಪಿಗೆ ಕ್ರಿಮಿಯ, ಉಕ್ರೈನ್ ವ್ಯಾಪಾರ ಮತ್ತು ವಹಿವಾಟಿನ ಕೊಂಡಿ ಅಥವಾ ಬ್ರಿಡ್ಜ್ ನಂತೆ ಕಾರ್ಯ ನಿರ್ವಹಿಸುತ್ತಿತ್ತು. ಯೂರೋಪು, ಅಮೇರಿಕಾ ಯಾವಾಗ ಇದನ್ನು ನಿಯಂತ್ರಿಸಲು ಬಯಸಿತು ಆಗ ರಷ್ಯಾ ದಾಳಿ ಮಾಡಿ ಕ್ರಿಮಿಯ ಎನ್ನುವ ಪ್ರದೇಶವನ್ನು ವಶಪಡಿಸಿಕೊಂಡಿತು. ಇದಾಗಿದ್ದು ಜಗತ್ತಿಗೆ ಉಕ್ರೈನ್ ಯುದ್ಧ ಗೊತ್ತಾಗುವುದಕ್ಕಿಂತ ಹಲವಾರು ವರ್ಷಗಳ ಮುಂಚೆ. ಹೀಗಾಗಿ ಕ್ರಿಮಿಯ ರಷ್ಯಾದ ತೆಕ್ಕೆಗೆ ಬಂದು ದಶಕವಾಯ್ತು.

ಇನ್ಫ್ಯಾಕ್ಟ್ 2014ರಲ್ಲೇ ಇದನ್ನು ರಷ್ಯಾ ವಶಪಡಿಸಿಕೊಂಡಿತ್ತು. ಈಗ ಯೂರೋಪು ರಷ್ಯಾದಿಂದ ತೈಲ ತರಿಸಿಕೊಳ್ಳುತ್ತಿಲ್ಲ. ತನಗೆ ಬೇಕಾದ 100 ಲೀಟರ್ ತೈಲವನ್ನು ಭಾರತದ ಮೂಲಕ ತರಿಸಿಕೊಳ್ಳಲು ಶುರು ಮಾಡಿತು. ಪರೋಕ್ಷವಾಗಿ ಅದು ರಷ್ಯಾದ ತೈಲವನ್ನೇ ಕೊಳ್ಳುತ್ತಿತ್ತು. ಹೀಗಿದ್ದೂ ಅದು ಭಾರತ ರಷ್ಯಾದ ಯುದ್ಧಕ್ಕೆ ಫಂಡ್ ಮಾಡುತ್ತಿದೆ. ಅಲ್ಲಿಂದ ತೈಲ ಖರೀದಿಸುತ್ತಿದೆ ಎನ್ನುವ ನಾಟಕವನ್ನು ಜಾಗತಿಕ ಮಟ್ಟದಲ್ಲಿ ಆಡುತಿತ್ತು. ಇದೀಗ ಭಾರತದ ನಯರ ದಿಂದ ಕೊಳ್ಳುವುದಿಲ್ಲ ಎನ್ನುವ ಮಾತನ್ನು ಆಡಿದೆ. ಆದರೆ ಅದಕ್ಕೆ 100 ಲೀಟರ್ ತೈಲ ಬೇಕೇ ಬೇಕು. ಈಗ ಅದು ಕಳ್ಳ ಮಾರ್ಗಗಳ ಮೂಲಕ ಇದೆ ರಷ್ಯಾದಿಂದ ತೈಲವನ್ನು ಖರೀದಿ ಮಾಡುತ್ತದೆ. ಮುಖ್ಯವಾಹಿನಿ ಸಪ್ಲೈ ಚೈನ್ ಜೊತೆಗೆ ಇನ್ನೊಂದು ವಾಮ ಮಾರ್ಗ ಸದಾ ಕಾರ್ಯ ನಿರ್ವಹಿಸುತ್ತದೆ. ಇದು ಅನಾದಿ ಕಾಲದಿಂದ ನಡೆದು ಬರುತ್ತಿದೆ. ಇದನ್ನು ಶಾಡೋ ಸಪ್ಲೈ ಚೈನ್ ಎನ್ನಲಾಗುತ್ತದೆ.

ಯೂರೋಪಿಯನ್ ಯೂನಿಯನ್ ಅಥವಾ ಅಮೇರಿಕಾ ಇವರೆಡರ ಉದ್ದೇಶ ಭಾರತವನ್ನು ಕಟ್ಟಿ ಹಾಕುವುದು. ಭಾರತ ಶರವೇಗದಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಇನ್ನೊಂದು ಇಪ್ಪತ್ತು ವರ್ಷದಲ್ಲಿ ಅದು ಇನ್ನೊಂದು ಚೀನಾ ಆಗುವ ಸಾಧ್ಯತೆಯನ್ನು ಅಲ್ಲಗಳೆಯಲು ಬಾರದು. ಅಮೇರಿಕಾ ಮತ್ತು ಯೂರೋಪು ಚೀನಾ ದೇಶವನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಅದು ಇಂದು ದೈತ್ಯವಾಗಿ ಬೆಳೆದು ಕುಳಿತಿದೆ. ಭಾರತವೂ ಆ ಮಟ್ಟಕ್ಕೆ ಬೆಳೆದು ಬಿಟ್ಟರೆ ಅಲ್ಲಿಗೆ ಯೂರೋಪು ಮತ್ತು ಅಮೇರಿಕಾ ದೇಶಗಳ ಪಾರುಪತ್ಯಕ್ಕೆ ಕೊನೆ ಹಾಡಿದಂತೆ ಎನ್ನುವುದು ಅವುಗಳಿಗೆ ಗೊತ್ತಾಗಿದೆ. ಹೀಗಾಗಿ ಅವುಗಳ ಬರಿ ಇರುವ ಬಹಿಷ್ಕಾರ ಎನ್ನುವ ಅಸ್ತ್ರವನ್ನು ಬಳಸುತ್ತಿವೆ.

ಸ್ಯಾಂಕ್ಷನ್ಸ್ ಗೆ ಹೆದರುವ ದಿನಗಳಿಂದ ಭಾರತ ಬಹು ದೂರ ಸಾಗಿ ಬಂದಿದೆ

ಹೌದು ಭಾರತ ಇಂದಿಗೆ ಬಹಳ ಶಕ್ತಿಶಾಲಿ ದೇಶವಾಗಿದೆ. ಅದು ಗ್ಲೋಬಲ್ ನೆಗೋಷಿಯೇಟರ್ ಮಟ್ಟಕ್ಕೆ ಬೆಳೆದು ನಿಂತಿದೆ. ಚೀನಾ ದೇಶಕ್ಕೆ ಅಮೆರಿಕಾದ ತೆರಿಗೆ ಇನ್ನಿತರ ಗೊಡ್ಡು ಬೆದರಿಕೆಗಳು ಹೇಗೆ ತಟ್ಟುವುದಿಲ್ಲ ಥೇಟ್ ಹಾಗೆ ಭಾರತಕ್ಕೂ ತಟ್ಟುವುದಿಲ್ಲ. ಭಾರತದ ಶಕ್ತಿ ಅದರ ಜನಸಂಖ್ಯೆ. ಭಾರತದ ಜನಸಂಖ್ಯೆಯನ್ನು ಶಾಪ ಎನ್ನುವಂತೆ ಬಿಂಬಿಸಲಾಗುತಿತ್ತು. ಇಂದಿಗೆ ಅದೇ ಜನಸಂಖ್ಯೆಯನ್ನು ಭಾರತ ವಿಶ್ವ ಮಟ್ಟದಲ್ಲಿ ವರವನ್ನಾಗಿಸಿ ಕೊಂಡಿದೆ. ತನ್ನ ಆಂತರಿಕ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ಕಾರಣ ಮತ್ತು ಇನ್ನಿತರ ಸಣ್ಣಪುಟ್ಟ ದೇಶಗಳ ಜೊತೆಗೆ ಉತ್ತಮ ಬಾಂಧ್ಯವ್ಯ ಹೊಂದುವ ಮೂಲಕ ಅದು ತನ್ನ ಮೇಲೆ ಹೇರುವ ನಿರ್ಬಂಧಗಳನ್ನು ಸಲೀಸಾಗಿ ನಿಭಾಯಿಸಲು ಕಲಿತಿದೆ.

ಯೂರೋಪು ನಯರ ಎನೆರ್ಜಿ ಮೇಲೆ ನಿರ್ಬಂಧ ಹೇರಿದ ಕೆಲವೇ ತಾಸುಗಳಲ್ಲಿ ಭಾರತ ಸರಕಾರ ಆ ಸಂಸ್ಥೆಯ ಆಡಳಿತ ಮಂಡಳಿಯ ಜೊತೆಗೆ ಮಾತುಕತೆ ನಡೆಸುತ್ತದೆ. ಯೂರೋಪಿಗೆ ಹೋಗುತ್ತಿದ್ದ ಪೂರ್ಣ ತೈಲವನ್ನು ನಿಲ್ಲಿಸುತ್ತದೆ. ಅದನ್ನು ಮುಂದಿನ ಎರಡು ದಿನದಲ್ಲಿ ಇಂದಿಗೆ ನಮ್ಮೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ಆಫ್ರಿಕನ್ ಒಕ್ಕೂಟದ ದೇಶಗಳಿಗೆ ರಫ್ತು ಮಾಡಲು ಶುರು ಮಾಡುತ್ತದೆ. ನಮ್ಮ ಮೇಲೆ ಗುರ್ ಎನ್ನುತ್ತಿದ್ದ ಬಾಂಗ್ಲಾ ಇಂದಿಗೆ ಬಾಲ ಮುದುರಿಕೊಂಡು ಕುಳಿತಿರುವುದು ಮಾತ್ರವಲ್ಲದೆ ನಮ್ಮ ತೈಲವನ್ನು ಕೊಳ್ಳುತ್ತಿದೆ. ಭಾರತಕ್ಕೆ ನಷ್ಟ ಮಾಡಬೇಕು ಎಂದು ಬಯಸಿದ್ದ ಯೂರೋಪಿನ ಸ್ಥಿತಿ ಈಗ ಇಂಗು ತಿಂದ ಮಂಗನಂತಾಗಿದೆ. ಹೌದು ಯೂರೋಪಿಗೆ ರಫ್ತಾಗುತ್ತಿದ್ದ ತೈಲ ಇದೀಗ ಆಫ್ರಿಕನ್ ದೇಶಗಳಿಗೆ ಮತ್ತು ಬಾಂಗ್ಲಾಗೆ ರಫ್ತಾಗುತ್ತಿದೆ. ಭಾರತ ತೈಲವನ್ನು ರೀ ರೂಟ್ ಮಾಡುವುದರ ಮೂಲಕ ಗೆದ್ದಿದೆ. ಅದೇ ಸಮಯದಲ್ಲಿ ಯೂರೋಪಿನ ಡಬಲ್ ಸ್ಟ್ಯಾಂಡರ್ಡ್ ಮತ್ತು ಶಾಡೋ ಸಪ್ಲೈ ಚೈನ್ ಮೂಲಕ ತೈಲ ಕೊಳ್ಳುವುದನ್ನು ಜಗತ್ತಿಗೆ ತೋರಿಸುತ್ತಿದೆ. ಯೂರೋಪಿಗೆ ತೈಲ ಬೇಕೇಬೇಕು ಅದಕ್ಕೆ ಬೇರೆ ದಾರಿಯಿಲ್ಲ. ಹೀಗಾಗಿ ಕಳ್ಳ ದಾರಿ ಹಿಡಿದಿದೆ. ನಯರ ಎನೆರ್ಜಿ ತನ್ನ ಉತ್ಪಾದನಾ ಸಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಾಗಿ ಹೇಳಿಕೆ ನೀಡುತ್ತದೆ. ಮತ್ತು ಆ ನಿಟ್ಟಿನಲ್ಲಿ ಏಳು ಸಾವಿರ ಕೋಟಿ ರೂಪಾಯಿ ಹೊಸ ಬಂಡವಾಳವನ್ನು ಹೂಡಿಕೆ ಮಾಡಿರುವುದಾಗಿ ಘೋಷಣೆ ಮಾಡಿದೆ.

ಎನರ್ಜಿ ಸೆಕ್ಯುರಿಟಿ ಮತ್ತು ಎಕನಾಮಿಕ್ ಸ್ಟೆಬಿಲಿಟಿ ನಮ್ಮ ಆದ್ಯತೆ ಹೀಗಾಗಿ ನಾವು ರಷ್ಯಾದ ತೈಲವನ್ನು ಕೊಳ್ಳುತ್ತಿದ್ದೇವೆ ಎಂದು ಭಾರತ ಹೇಳಿದೆ. ಭಾರತದ ವಿದೇಶಾಂಗ ಮಂತ್ರಿ ಜಯಶಂಕರ್ ಅವರು ನಾವು ಗ್ರಹಾಮ್ ಜೊತೆಗೆ ಸಂಪರ್ಕದಲ್ಲಿದ್ದೇವೆ ಅವರು ತರುವ ಕಾನೂನುಗಳನ್ನು ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಭಾರತ ಸರಕಾರ ಯೂರೋಪಿಗೆ ಕಳಿಸುತ್ತಿದ್ದ ತೈಲವನ್ನು ಆಫ್ರಿಕಾ ಮತ್ತು ಬಾಂಗ್ಲಾ ಗೆ ರೀ ರೂಟ್ ಮಾಡಿ ಸುಮ್ಮನೆ ಕುಳಿತಿಲ್ಲ. ಅದು ಇಂಟರ್ನ್ಯಾಷನಲ್ ಕೋರ್ಟಿನಲ್ಲಿ ಯೂರೋಪಿನ ವಿರುದ್ಧ, ಅದರ ಸ್ಯಾಂಕ್ಷನ್ ವಿರುದ್ಧ ದಾವೆಯನ್ನು ಹೂಡಲು ಸಿದ್ಧತೆ ನಡೆಸುತ್ತಿದೆ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಕೋರ್ಟಿಗೆ ಎಳೆಯುತ್ತೇವೆ ಎನ್ನುವ ಮಾತನ್ನು ಆಡಿದೆ.

ಇವತ್ತಿಗೆ ಜಗತ್ತಿನಲ್ಲಿ ಯಾರು, ಯಾರೊಂದಿಗೆ ವ್ಯಾಪಾರ ಮಾಡಬೇಕು ಮತ್ತು ಮಾಡಬಾರದು ಎನ್ನುವುದನ್ನು ಯಾರೂ ನಿರ್ದೇಶಿಸುವಂತಿಲ್ಲ. ಯೂರೋಪು, ಅಮೇರಿಕಾಕ್ಕೆ ಬೇಡ ಎನ್ನಿಸಿದರೆ ಅವರು ರಷ್ಯಾದಿಂದ ತೈಲವನ್ನು ಕೊಂಡುಕೊಳ್ಳುವುದು ಬೇಡ. ಆದರೆ ಭಾರತಕ್ಕೆ, ಬ್ರೆಝಿಲ್ ಅಥವಾ ಚೀನಾಕ್ಕೆ ಕೊಳ್ಳಬೇಡಿ ಎಂದು ತಾಕೀತು ಮಾಡುವ ಹಕ್ಕು, ಅಧಿಕಾರ ಅವಕ್ಕಿಲ್ಲ. ಹೀಗಾಗಿ ಇಂಟರ್ನ್ಯಾಷನಲ್ ಕೋರ್ಟಿನಲ್ಲಿ ಭಾರತದ ಗೆಲುವು ಶತಸಿದ್ಧ.

ಕೊನೆಮಾತು: ಜಾಗತಿಕವಾಗಿ ಹಣ ಮತ್ತು ಅಧಿಕಾರದ ಮೇಲಿನ ಹಿಡಿತಕ್ಕೆ ಹಗ್ಗಜಗ್ಗಾಟ ಬಹಳ ಜೋರಾಗಿ ನಡೆಯುತ್ತಿದೆ. ಹೀಗೆ ನಡೆಯುತ್ತಿರುವ ಆಟದಲ್ಲಿ ಯೂರೋಪು ಮತ್ತು ಅಮೆರಿಕಾದ ಸೋಲು ನಿಶ್ಚಿತ. ಇನ್ನೊಬ್ಬ ಆಟಗಾರ ಇಂಗ್ಲೆಂಡ್ ಸದ್ದಿಲ್ಲದೇ ಭಾರತದ ಜೊತೆಗೆ ಮುಕ್ತ ವ್ಯಾಪಾರ ಮಾಡಿಕೊಂಡು ಭಾರತಕ್ಕೆ ಒಂದರ್ಥದಲ್ಲಿ ಶರಣಾಗಿದ್ದಾನೆ. ಅಮೇರಿಕಾ ಮತ್ತು ಯೂರೋಪಿಯನ್ ಒಕ್ಕೂಟ ಸುಲಭವಾಗಿ ಮಣಿಯುವುದಿಲ್ಲ. ಹೀಗಾಗಿ 2027ರ ವೇಳೆಗೆ ಜಗತ್ತು ಇನ್ನೊಂದು ಮಹಾಯುದ್ಧವನ್ನು ನೋಡುವ ಸಂಭಾವ್ಯತೆ ಹೆಚ್ಚು. ನನ್ನ ಊಹೆ ಸುಳ್ಳಾಗಲಿ. ಜಗತ್ತಿನಲ್ಲಿ ಶಾಂತಿ ನೆಲಸಲಿ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BBMPಯಲ್ಲಿ ಭ್ರಷ್ಟಾಚಾರ: ನಾಗಮೋಹನ ದಾಸ್ ಆಯೋಗದಿಂದ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

ಛಲ ಬಿಡದ ಪ್ರಯತ್ನಕ್ಕೆ ಫಲ: 216 ಗಂಟೆ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆ ಬರೆದ ಉಡುಪಿಯ ದೀಕ್ಷಾ!

ಕ್ವಾಡ್ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುವ ಯೋಜನೆ ಕೈ ಬಿಟ್ಟ ಟ್ರಂಪ್‌; ನ್ಯೂಯಾರ್ಕ್ ಟೈಮ್ಸ್ ವರದಿ

ಬಿಹಾರದಲ್ಲಿ ಆರಂಭವಾದ 'Voter Adhikar Yatra' ದೇಶಾದ್ಯಂತ ವಿಸ್ತರಿಸಲಿದೆ: ರಾಹುಲ್ ಗಾಂಧಿ

ರಾಜ್ಯದ ಜನತೆಗ ಮತ್ತೊಂದು ಶಾಕ್: ಆಸ್ತಿ ನೋಂದಣಿ ಶುಲ್ಕ ಹೆಚ್ಚಳ; ನಾಳೆಯಿಂದಲೇ ಜಾರಿ

SCROLL FOR NEXT