ಪುಟಿನ್, ಝೆಲೆನ್ಸ್ಕಿ, ಟ್ರಂಪ್, ಮೆಕ್ರಾನ್, ಜಾರ್ಜಿಯಾ ಮೆಲನಿ ಹೀಗೆಲ್ಲ ಒಂದಿಷ್ಟು ಹೆಸರುಗಳು ಜಾಗತಿಕ ರಾಜಕಾರಣದಲ್ಲಿ ಚರ್ಚೆಯಾಗುತ್ತಿರುತ್ತವೆ.. ಸರಿ ಕಾರಣಗಳಿಗೋ, ತಪ್ಪು ಕಾರಣಗಳಿಗೋ ಎಂಬುದು ಬೇರೆ ವಿಷಯ. ಆದರೆ ಇವೆಲ್ಲ ಹೆಸರುಗಳು ಬೇರೆ ಬೇರೆ ವಿಧದ ಸುದ್ದಿಗಳಿಗೆ ಸುತ್ತಿಕೊಂಡು ನಮ್ಮ ಕಿವಿಗಳನ್ನು ಬಡಿಯುತ್ತಿರುತ್ತವೆ. ಇನ್ನೊಂದಿಷ್ಟು ಹೆಸರುಗಳನ್ನೂ ಈ ಪಟ್ಟಿಗೆ ಸೇರಿಸಿಕೊಳ್ಳಬಹುದು.
ಆದರೆ, ಇದೊಂದು ಹೆಸರನ್ನು ನೀವು ಜಾಗತಿಕ ಚರ್ಚೆಯ ಮುಖ್ಯಬಿಂದುವಿನ ರೂಪದಲ್ಲಿ ಕೇಳಿರುವ ಪ್ರಮೇಯ ಬಹಳ ಕಡಿಮೆ. ಆ ಹೆಸರೆಂದರೆ ಇಬ್ರಾಹಿಂ ತ್ರಾವೊರೆ. ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ಎಂಬ ದೇಶವನ್ನು ಕಳೆದೆರಡು ವರ್ಷಗಳಿಂದ ಮುನ್ನಡೆಸುತ್ತಿರುವ ನಾಯಕ. ಆಫ್ರಿಕಾದಲ್ಲಿ ಅಷ್ಟೇನೂ ಹೆಸರು ಪ್ರಚಲಿತದಲ್ಲಿರದೇ ಹೋಗಿರುವ ಎಷ್ಟೋ ದೇಶಗಳಿವೆ. ಅಲ್ಲಿನ ದೇಶಗಳ ಮುಖ್ಯಸ್ಥರು ಸಹ ಜಾಗತಿಕ ಸುದ್ದಿವಲಯ, ಹೂಡಿಕೆಗಳ ಮೇಲಾಟ ಇಂಥ ಯಾವ ಆಯಾಮಗಳಲ್ಲೂ ಪ್ರವರ್ಧಮಾನಕ್ಕೆ ಬಂದಿರುವವರೇನಲ್ಲ. ಹೀಗಿರುವಾಗ ಅಲ್ಲೆಲ್ಲೋ ಆಫ್ರಿಕಾದ ನಡುವೆ ಸುತ್ತಲೆಲ್ಲ ಬೇರೆ ಬೇರೆ ದೇಶಗಳ ಭೂಭಾಗಗಳಿಂದ ಸುತ್ತುವರಿದುಕೊಂಡಿರುವ ಬುರ್ಕಿನಾ ಫಾಸೊ ಎಂಬ ಚಿಕ್ಕ ದೇಶದ ಬಗೆಗಾಗಲೀ, ಅಲ್ಲಿನ ನಾಯಕನ ಬಗೆಗಾಗಲೀ ನಮ್ಮ ಯೋಚನೆಗಳಲ್ಲಿ ಜಾಗ ಕೊಡುವುದಕ್ಕೇನಿದೆ ಎಂದು ನೀವು ಕೇಳಬಹುದೇನೋ.
ಅದೂ ಅಲ್ಲದೇ, ತಕ್ಷಣಕ್ಕೆ ಈ ವ್ಯಕ್ತಿಯ ಹೆಸರು ಟೈಪಿಸಿ ಮೇಲುಮೇಲಿನ ಮಾಹಿತಿ ಓದಿಕೊಂಡರೆ ಈತನೊಬ್ಬ ಮಿಲಿಟರಿ ಸರ್ವಾಧಿಕಾರಿ ಎಂಬ ವಿವರ ಸಿಕ್ಕಿಬಿಡುತ್ತದೆ. ಇರುವ ಸರ್ಕಾರ ಕೆಡವಿ ಅಧಿಕಾರಕ್ಕೆ ಬಂದಿರುವ ಯಾವುದೋ ಇಬ್ರಾಹಿಂ ತ್ರಾವೊರೆ ಬಗ್ಗೆ ತಿಳಿದುಕೊಳ್ಳುವುದಕ್ಕೇನಿದೆ ಅಂತಲೂ ತಟ್ಟನೇ ಅನ್ನಿಸಿಬಿಡಬಹುದು. ಮುಖ್ಯವಾಹಿನಿ ಮಾಧ್ಯಮದಲ್ಲಿ 34ರ ಹರೆಯದ ಈ ಮಿಲಿಟರಿ ಕರ್ನಲ್ ಬಗ್ಗೆ ತೀರ ವಿವರಗಳೇನೂ ಸಿಕ್ಕುವುದಿಲ್ಲ. ಆದರೆ, ಇವತ್ತಿನ ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಮಾಧ್ಯಮದಲ್ಲಿ ತಡಕಿದಾಗ ಇಬ್ರಾಹಿಂ ತ್ರಾವೊರೆ ಬಗ್ಗೆ ಆಫ್ರಿಕಾದ ವ್ಲಾಗರ್ ಮಂದಿ ಮಾಡಿಬಿಟ್ಟಿರುವ ಪ್ರಶಂಸೆಯ ಸರಕುಗಳು ಸಾಕಷ್ಟು ಸಿಗುತ್ತವೆ. ಕೆಲವು ಎಐ ನಿರ್ಮಿತ ವಿಡಿಯೋಗಳೂ ಇವೆ. ಟಿಕ್ಟಾಕ್ ಚಾಲ್ತಿಯಲ್ಲಿರುವ ದೇಶಗಳಲ್ಲಿ ಈ ಅಧ್ಯಕ್ಷನ ಕ್ಲಿಪ್ಪುಗಳು ಬಹಳ ವೈರಲ್ ಎಂಬ ಮಾಹಿತಿ ಇದೆ. ಅಂಥದೇ ಪ್ರಶಂಸೆಯ ಕ್ಲಿಪ್ಪುಗಳು ಫೇಸ್ಬುಕ್ಕಿನಲ್ಲಿ ಸಹ ಸಿಗುತ್ತವೆ.
ಈ ದೃಶ್ಯಾವಳಿಗಳು ಹಾಗೂ ವಿಶ್ಲೇಷಣೆಗಳ ಪೈಕಿ ಕೆಲವು ಉತ್ಪ್ರೇಕ್ಷೆಯದ್ದೂ ಆಗಿರಬಹುದು, ಇನ್ನು ಕೆಲವು ಅಧ್ಯಕ್ಷನ ಹಿಂಬಾಲಕರ ಪಡೆ ಸೃಷ್ಟಿಸಿದ್ದೂ ಆಗಿದ್ದಿರಬಹುದು. ಹಾಗಂತ ಎಲ್ಲ ಮಾಹಿತಿಗಳನ್ನೂ ತಳ್ಳಿಹಾಕುವುದಕ್ಕಾಗುವುದಿಲ್ಲ. ದೊಡ್ಡಮಟ್ಟದ ಪ್ರಚಾರ ಕಾರ್ಯಗಳನ್ನು ಪ್ರಜಾಪ್ರಭುತ್ವದಲ್ಲಿರುವ ಆಡಳಿತಗಾರರೂ ಮಾಡುತ್ತಾರಾದ್ದರಿಂದ, ಈತ ಸರ್ವಾಧಿಕಾರಿ ಎಂಬ ಒಂದು ಕಾರಣ ಕೊಟ್ಟು ಆತನ ಜನಪ್ರಿಯತೆಯನ್ನು ಸುಳ್ಳೇ ಸುಳ್ಳು ಎಂದು ಹೇಳಲಾಗುವುದಿಲ್ಲ. ಹಾಗಾದರೆ, ಬುರ್ಕಿನಾ ಫಾಸೊದ ಯುವ ಮಿಲಿಟರಿ ಆಡಳಿತಗಾರ ಅಲ್ಲಿನ ಯುವಕರ ನಡುವೆ ಪ್ರಸಿದ್ಧಿ ಗಳಿಸುತ್ತಿರುವುದೇಕೆ?
ಆಫ್ರಿಕಾ ಎಂದಕೂಡಲೇ ಬಡತನದ ಚಿತ್ರವೊಂದು ಮನಸ್ಸಿನಲ್ಲಿ ಅಚ್ಚೊತ್ತಿಬಿಡುತ್ತದೆ. ಆದರೆ, ಆಫ್ರಿಕಾವು ಚಿನ್ನ, ಕೊಬಾಲ್ಟ್, ತಾಮ್ರ, ವಜ್ರ ಸೇರಿದಂತೆ ಹಲವು ವಿಷಯಗಳಲ್ಲಿ ಶ್ರೀಮಂತ. ಅದರ ನೈಸರ್ಗಿಕ ಸಂಪತ್ತು ಜಗತ್ತಿನಲ್ಲೇ ಅನನ್ಯ. ಹೀಗಿದ್ದೂ ಆಫ್ರಿಕಾದ ದೇಶಗಳು ಏಕೆ ಬಡವಾಗಿವೆ ಎಂಬುದಕ್ಕೆ ಉತ್ತರ- ಅವುಗಳ ಸಂಪತ್ತನ್ನು ಬೇರೆ ದೇಶಗಳು, ವಿಶೇಷವಾಗಿ ಯುರೋಪ್ ಹೀರಿಕೊಂಡು ಬಂತು ಎನ್ನುವುದು.
ಇಂಥದೊಂದು ಮಾದರಿಗೆ ಇಬ್ರಾಹಿಂ ತ್ರಾವೊರೆ ಎದುರು ನಿಂತಿದ್ದಾನೆಂಬುದೇ ಆ ವ್ಯಕ್ತಿಯ ಬಗ್ಗೆ ಇಲ್ಲಿ ಬರೆಯುವುದಕ್ಕಿರುವ ಕಾರಣ. ಹಾಗಂತ ಮಿಲಿಟರಿ ಸರ್ವಾಧಿಕಾರದ ಮಾದರಿಯನ್ನು ಅನುಮೋದಿಸಬೇಕು ಅಂತಲೋ, ತಾವೋರ್ ವೈಭವೀಕರಣ ಮಾಡಬೇಕು ಎಂಬುದೋ ಬರಹದ ಉದ್ದೇಶವಲ್ಲ. ಹಾಗಂತ, ಡೆಮಾಕ್ರಸಿ ಇದ್ದಾಗ ಮಾತ್ರ ದೇಶವೊಂದು ಸರಿದಾರಿಯಲ್ಲಿರುತ್ತದೆ ಎಂಬಂತೆ ಪಾಶ್ಚಾತ್ಯರು ನೆಲೆಗೊಳಿಸಿರುವ ಗ್ರಹಿಕೆಯನ್ನೂ ಕಣ್ಮುಚ್ಚಿಕೊಂಡು ಒಪ್ಪಬೇಕಿಲ್ಲ. ಮಿಲಿಟರಿ ಆಡಳಿತ ಎಂಬುದು ಎಲ್ಲ ಕಾಲಕ್ಕೂ ಅಸಹ್ಯದ ಸಂಗತಿ ಎಂದೇ ಕಾಣಲಾಗುವುದಿಲ್ಲ. ಆಯಾ ಕಾಲದೇಶಗಳ ಪರಿಸ್ಥಿತಿ ಅವಲೋಕಿಸಿಯಷ್ಟೇ ಒಳ್ಳೆಯದ್ದು-ಕೆಟ್ಟದ್ದರ ನಿರ್ಧಾರವಾಗಬೇಕಾಗುತ್ತದೆ. ವಂಶಾಡಳಿತದ ರಾಜನೋ, ಮಿಲಿಟರಿ ಬಲದಿಂದ ಅಧಿಕಾರ ಪಡೆದವನೋ, ಇಲ್ಲವೇ ಮತದಾನ ಪ್ರಕ್ರಿಯೆಯಿಂದ ನಾಯಕನಾದವನೋ ಈ ಎಲ್ಲ ಸಂದರ್ಭಗಳಲ್ಲೂ ಜನರಿಗೆ ಆತ ಅಥವಾ ಆಕೆ ಮಾಡುತ್ತಿರುವುದು ಒಳ್ಳೆಯದಾ ಎಂಬುದರ ಮೇಲೆ ಮಾತ್ರವೇ ಸರಿ-ತಪ್ಪುಗಳ ನಿಷ್ಕರ್ಷೆಯಾಗುತ್ತದೆ.
ಅದಿರಲಿ. ಈ ಇಬ್ರಾಹಿಂ ತ್ರಾವೊರೆ ಅಲ್ಲಿನ ಜನರ ನಡುವೆ ಏಕೆ ಪ್ರಸಿದ್ಧ ಗೊತ್ತೇ? ಹೆಸರಿಗಷ್ಟೇ ಸ್ಥಳೀಯ ಸರ್ಕಾರವೊಂದನ್ನು ಗದ್ದುಗೆಯಲ್ಲಿ ಕೂರಿಸಿ, ಬುರ್ಕಿನಾ ಫಾಸೊದ ಸಂಪನ್ಮೂಲವನ್ನೆಲ್ಲ ತಾನು ದೋಚಿಕೊಂಡಿದ್ದ ಫ್ರಾನ್ಸ್ ಎಂಬ ದೇಶದ ಉಪಸ್ಥಿತಿಯನ್ನು ತನ್ನ ನೆಲದಿಂದ ಇಡಿ ಇಡಿಯಾಗಿ ಒದ್ದು ಹೊರಹಾಕಿರುವುದಕ್ಕೆ ಇಬ್ರಾಹಿಂ ತ್ರಾವೊರೆ ಪ್ರಸಿದ್ಧ.
ಬುರ್ಕಿನಾ ಫಾಸೊದಲ್ಲಿ ಚಿನ್ನ ಸೇರಿದಂತೆ ಪ್ರಮುಖ ಗಣಿಗಾರಿಕೆಗಳನ್ನೆಲ್ಲ ಫ್ರಾನ್ಸಿನ ಕಂಪನಿಗಳು ನಿರ್ವಹಿಸುತ್ತಿದ್ದವು. ಆ ದೇಶದ ಜನರಿಗೆ ಕರೆನ್ಸಿ ವಿತರಿಸುತ್ತಿದ್ದದ್ದು ಫ್ರಾನ್ಸ್. ಈ ದೇಶಕ್ಕೆ ತನ್ನದೆನ್ನುವ ಸೆಂಟ್ರಲ್ ಬ್ಯಾಂಕ್ ಇದ್ದಿರಲಿಲ್ಲ. ಎಲ್ಲವನ್ನೂ ಫ್ರಾನ್ಸಿಗೆ ಅಡವಿಡಲಾಗಿತ್ತು. “ನಿಮ್ಮ ವ್ಯಾಪಾರ-ವಹಿವಾಟು ನಮ್ಮ ಕೈಲಿಡಿ, ಅದಕ್ಕೆ ಪ್ರತಿಯಾಗಿ ನಿಮ್ಮ ರಕ್ಷಣೆಯನ್ನು ನಾವು ನಿರ್ವಹಿಸುತ್ತೇವೆ. ಏಕೆಂದರೆ ನಮ್ಮಲ್ಲಿ ಆಧುನಿಕ ರಕ್ಷಣಾ ತಂತ್ರಜ್ಞಾನವಿದೆ” ಎನ್ನುವ ಧಾಟಿಯ ಆಟವೊಂದನ್ನು ಅಮೆರಿಕ ಸೇರಿದಂತೆ ಪಾಶ್ಚಾತ್ಯರೆಲ್ಲ ಬಹಳ ವರ್ಷಗಳಿಂದ ಆಡಿಕೊಂಡು ಬಂದಿದ್ದಾರೆ. ಅದೇ ರೀತಿ ಬುರ್ಕಿನಾ ಫಾಸೊದಲ್ಲಿ ಸಹ ಫ್ರೆಂಚ್ ಸೇನೆ ಬಿಡುಬಿಟ್ಟಿತ್ತು. ಆದರೆ, ಅವರ ನೈಜ ಉದ್ದೇಶ ಅಲ್ಲಿನ ಗಣಿಗಾರಿಕೆ ಮತ್ತು ಉದ್ದಿಮೆಗಳಲ್ಲಿ ಫ್ರಾನ್ಸಿನ ಹಿತಾಸಕ್ತಿಗಳಿಗೆ ರಕ್ಷಣೆ ಕೊಡುವುದೇ ಹೊರತು ಜನರ ರಕ್ಷಣೆಯೇನೂ ಆಗಿರಲಿಲ್ಲ. ಹಾಗೆಂದೇ ಐಎಸ್ಐಎಸ್ ಮತ್ತು ಅಲ್ ಕಾಯಿದಾಗಳಿಗೆ ಸೇರಿದ ಬಣಗಳು ಹಳ್ಳಿಗಳನ್ನೆಲ್ಲ ಆಕ್ರಮಿಸಿಕೊಂಡು ತಮ್ಮ ಹಿಂಸಾಚಾರ ಹಾಗೂ ಅಧಿಕಾರ ಚಲಾವಣೆಗಳಲ್ಲಿ ಮಗ್ನರಾಗಿದ್ದಾಗಲೂ ಫ್ರಾನ್ಸ್ ಯಾವ ರಕ್ಷಣೆಯನ್ನೂ ಕೊಡಲಿಲ್ಲ.
ಖುದ್ದು ಇಬ್ರಾಹಿಂ ತ್ರಾವೊರೆ ಬುರ್ಕಿನಾ ಫಾಸೊದ ಸೇನೆಯಲ್ಲಿದ್ದುಕೊಂಡು ಇಸ್ಲಾಂ ತೀವ್ರವಾದಿಗಳ ವಿರುದ್ಧ ಹೋರಾಡಿದಾತ. ಅದು ಮುಸ್ಲಿಂ ಬಾಹುಳ್ಯ ದೇಶವೇ ಆದರೂ ಅಲ್ಲಿನ ಜನಮಾನಸಕ್ಕೆ ತೀರ ಅಲ್ ಕಾಯಿದಾ ಥರದ ತೀವ್ರವಾದಕ್ಕೆ ಒಡ್ಡಿಕೊಳ್ಳುವ ಇಚ್ಛೆ ಇಲ್ಲ. ಆದರೆ, ಈ ತೀವ್ರವಾದದ ವಿರುದ್ಧ ಹೋರಾಡುವುದಕ್ಕೆ ಸ್ಥಳೀಯ ಮಿಲಿಟರಿಯ ಬಳಿ ಶಸ್ತ್ರ ಬಲವೇ ಇಲ್ಲವಾಗಿತ್ತು. ಫ್ರಾನ್ಸ್ ಸೇನೆಯ ಉದ್ದೇಶವಂತೂ ಬೇರೆಯದ್ದೇ ಆಗಿತ್ತು. ಇದು ಅಲ್ಲಿನ ಮಿಲಿಟರಿಯ ಹತಾಶೆಗೂ ಕಾರಣವಾಗಿತ್ತು. ಇತ್ತ, ಬುರ್ಕಿನಾ ಫಾಸೊದ ಜನರೂ ಸಹ ಸುರಕ್ಷತೆ ಮತ್ತು ಉದ್ಯೋಗಾವಕಾಶ ಇವೆರಡೂ ಇರದೇ ಸೊರಗಿದ್ದರು. ಅಲ್ಲಿನ ಆಡಳಿತ ಫ್ರಾನ್ಸಿನ ಕೈಗೊಂಬೆ ಎಂಬುದು ಎಲ್ಲರಿಗೂ ನಿಚ್ಚಳವಾಗಿತ್ತಾದ್ದರಿಂದ, ಸೆಪ್ಟೆಂಬರ್ 2022ರಲ್ಲಿ ಕ್ಯಾಪ್ಟನ್ ಇಬ್ರಾಹಿಂ ತ್ರಾವೊರೆ ಕ್ಷಿಪ್ರಕ್ರಾಂತಿ ಮೂಲಕ ಅಧಿಕಾರ ಕೈಗೆತ್ತಿಕೊಂಡಾಗ ಸ್ಥಳೀಯರಿಂದ ಸ್ವಾಗತವೇ ಸಿಕ್ಕಿತು.
ಇಬ್ರಾಹಿಂ ತ್ರಾವೊರೆ ಸದ್ಯದ ಮಟ್ಟಿಗಂತೂ ಆಡಳಿತದಲ್ಲಿ ಡೆಲಿವರ್ ಮಾಡಿರುವುದು ಸ್ಪಷ್ಟ. ಫ್ರಾನ್ಸ್ ಅನ್ನು ಹೊರಕ್ಕಟ್ಟಿ, ಅಲ್ಲಿನ ಗಣಿ ವ್ಯವಹಾರಗಳ ಹೆಚ್ಚಿನ ಪಾಲು ಸರ್ಕಾರದ ಬೊಕ್ಕಸಕ್ಕೆ ಬರುವಂತೆ ಕ್ರಮ ಕೈಗೊಂಡಿದ್ದಾಗಿದೆ. ಹತ್ತು ಸಾವಿರ ಮಂದಿಯನ್ನು ಹೊಸದಾಗಿ ಸೈನ್ಯಕ್ಕೆ ಸೇರಿಸಿಕೊಂಡು ಮಿಲಿಟರಿ ಬಲ ಹೆಚ್ಚಿಸುವ ಕೆಲಸವಾಗಿದೆ. ಹಲವು ದಶಕಗಳ ನಂತರ ಅಲ್ಲಿನ ಸರ್ಕಾರಿ ನೌಕರರಿಗೆ 10ರಿಂದ 15 ಶೇಕಡದಷ್ಟು ಸಂಬಳ ಏರಿಕೆ ಆಗಿದೆ. ದೇಶದಲ್ಲಿ ಮೊದಲ ಚಿನ್ನದ ಸಂಸ್ಕರಣ ಘಟಕವನ್ನು ಹೊಂದುವ ಕೆಲಸವಾಗುತ್ತಿದೆ. ಎರಡು ವರ್ಷಗಳಲ್ಲಿ ದೇಶದ ಹಲವೆಡೆ ರೈಲ್ವೆ ಜಾಲ ಹಬ್ಬಿಸಿರುವ ಖ್ಯಾತಿ ಇಬ್ರಾಹಿಂ ತ್ರಾವೊರೆಯದ್ದು.
ನ್ಯಾಯಾಲಯಗಳಲ್ಲಿ ಗೌನುಗಳನ್ನು ತೂಗಿಕೊಂಡಿರುವ ವಸಾಹತು ಪದ್ಧತಿಯಿಂದ ಹೊರಗೆ ಬರೋಣ ಎನ್ನುತ್ತ ಸ್ಥಳೀಯ ರಿವಾಜಿನ ಸಮವಸ್ತ್ರವನ್ನು ತಂದಿದ್ದಾಗಿದೆ. ಸ್ಥಳೀಯ ಭಾಷೆ. ಸ್ಥಳೀಯ ಧಿರಿಸುಗಳನ್ನು ಅಪ್ಪಿಕೊಳ್ಳೋಣ ಎನ್ನುತ್ತಲೇ ಬಿಬಿಸಿ, ನ್ಯೂಯಾರ್ಕ್ಸ್ ಟೈಮ್ ಇತ್ಯಾದಿಗಳೆಲ್ಲ ನಮ್ಮ ಬಗ್ಗೆ ಏನೆಂದು ವಿಶ್ಲೇಷಿಸುತ್ತಿವೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂಬ ಖಡಾಖಡಿ ಮಾತುಗಳನ್ನೂ ತ್ರಾವೊರೆ ಆಡಿದ್ದಾರೆ.
ನಿಜ. ಬುರ್ಕಿನಾ ಫಾಸೊಗೆ ರಷ್ಯದ ಬೆಂಬಲವಿದೆ. ಚೀನಾ-ಟರ್ಕಿಗಳಿಂದಲೂ ಮಿಲಿಟರಿ ಉಪಕರಣಗಳನ್ನು ತರಿಸಿಕೊಂಡಿದ್ದಾರೆ. ವಾಸ್ತವದ ನೆಲೆಗಟ್ಟಿನಲ್ಲಿ ನೋಡಿದಾಗ, ಹೀಗೊಂದು ಮೈತ್ರಿ ಇರಿಸಿಕೊಳ್ಳದೇ ಯುರೋಪಿನ ಬಲಗಳ ವಿರುದ್ಧ ಸೆಣೆಸುವುದಕ್ಕೆ ಆಗುವುದಿಲ್ಲವಲ್ಲ. ಈ ಹಿಂದೆ ವೈಯಕ್ತಿಕವಾಗಿ ಸೆಣೆಸುವುದಕ್ಕೆ ಪ್ರಯತ್ನಿಸಿ ಹೇಳಹೆಸರಿಲ್ಲದವರಂತೆ ಆದವರು ಅವೆಷ್ಟು ಮಂದಿಯೋ. ಹೀಗಾಗಿ ಇಂಥದೊಂದು ಸಮತೋಲನ ಅನಿವಾರ್ಯವೇ ಹೌದು.
ಬುರ್ಕಿನಾ ಫಾಸೊ ಎಂಬ ಚಿಕ್ಕ ದೇಶ ಹಾಗೂ ಇಬ್ರಾಹಿಂ ತ್ರಾವೊರೆ ಎಂಬ ಇತ್ತೀಚಿಗುದಯಿಸಿದ ವ್ಯಕ್ತಿ ಏಕೆ ಮುಖ್ಯವಾಗುತ್ತಾರೆಂದರೆ, ಇದು ಆಫ್ರಿಕಾದ ಇತರ ದೇಶಗಳಲ್ಲೂ ತೀವ್ರಗೊಳ್ಳಬಹುದಾದ ರಾಷ್ಟ್ರೀಯ ಪ್ರಜ್ಞೆಯೊಂದರ ಮುನ್ನುಡಿಯಾ ಎಂಬ ಪ್ರಶ್ನೆಯ ಕಾರಣದಿಂದ. ಏಕೆಂದರೆ, ಬುರ್ಕಿನಾ ಫಾಸೊದ ಪಕ್ಕದ ದೇಶಗಳಾದ ಮಾಲಿ ಹಾಗೂ ನಿಜರ್ ಎರಡೂ ಅದಾಗಲೇ ಫ್ರಾನ್ಸ್ ಅನ್ನು ತಮ್ಮ ಜಾಗದಿಂದ ಹೊರಗೆ ಕಳಿಸಿವೆ. ನಿಜರ್ ದೇಶದ ಯುರೇನಿಯಂ ಸಂಪತ್ತನ್ನು ಫ್ರಾನ್ಸ್ ತೀರ ಮೊನ್ನೆ ಮೊನ್ನೆಯವರೆಗೂ ಬಹಳ ಅಗ್ಗಕ್ಕೆ ಕೊಳ್ಳೆ ಹೊಡೆದುಕೊಂಡಿತ್ತು.
ಇದೀಗ ಬುರ್ಕಿನಾ ಫಾಸೊ, ನಿಜರ್, ಮಾಲಿಗಳು ಸೇರಿಕೊಂಡು ಒಕ್ಕೂಟವೊಂದನ್ನು ಮಾಡಿಕೊಂಡಿವೆ. ಇದಕ್ಕೆ ಇಬ್ರಾಹಿಂ ತ್ರಾವೊರೆಯದ್ದೆ ನಾಯಕತ್ವ. ಇಕೊವಾಸ್ ಎಂಬ ಮಿಲಿಟರಿ ಒಕ್ಕೂಟವೊಂದು ಆಫ್ರಿಕಾದ ಹಲವು ದೇಶಗಳ ನಡುವೆ ಅಸ್ತಿತ್ವದಲ್ಲಿದೆ. ಆದರೆ ಇದು ಪಾಶ್ಚಾತ್ಯರು ತಮ್ಮ ಅನುಕೂಲಕ್ಕೆ ಸೃಷ್ಟಿಸಿರುವ ಕೂಟ. ಇದರಿಂದ ಈ ಮೂರೂ ದೇಶಗಳು ಹೊರಬಂದಿವೆ.
ಫ್ರಾನ್ಸ್ ಮತ್ತು ಪಾಶ್ಚಾತ್ಯ ದೇಶಗಳು ಆಫ್ರಿಕಾಕ್ಕೆ ತಾವು ಎಷ್ಟು ಮಿಲಿಯನ್ ಡಾಲರ್ ಹಣ ಕೊಟ್ಟೆವು ಎಂಬುದನ್ನು ಹೆಡ್ಲೈನ್ ಮಾಡುತ್ತವೆ, ಆದರೆ ಈ ನೆಲದ ವಿರಳ ಸಂಪನ್ಮೂಲಗಳ ಗಣಿಗಾರಿಕೆ ಮೂಲಕ ಎಷ್ಟು ಬಿಲಿಯನ್ ಡಾಲರ್ ಲಾಭ ಮಾಡಿಕೊಂಡಿದ್ದಾರೆಂಬುದನ್ನು ಹೇಳುವುದಿಲ್ಲ. ಇಂಥ ಗುಲಾಮಿ ವ್ಯವಸ್ಥೆ ನಮಗೇಕೆ ಬೇಕು? ನಮ್ಮ ಆಡಳಿತ ನಾವು ಮಾಡಿಕೊಳ್ಳೋಣ, ನಮ್ಮ ಸಂಪನ್ಮೂಲಗಳನ್ನು ನಾವೇ ನಿರ್ವಹಿಸೋಣ… ಎನ್ನುವ ಧಾಟಿ ಇಬ್ರಾಹಿಂ ತ್ರಾವೊರೆಯದ್ದು. ಬುರ್ಕಿನಾ ಫಾಸೊ ಹಾಗೂ ಸುತ್ತಮುತ್ತಲಿನ ದೇಶಗಳಲ್ಲಿ ಜನಪ್ರಿಯವಾಗುತ್ತಿರುವ, ವಿಶೇಷವಾಗಿ ಯುವಕರನ್ನು ಸೆಳೆಯುತ್ತಿರುವ ಈ ವಿಚಾರಧಾಟಿ ನಿಧಾನಕ್ಕೆ ಆಫ್ರಿಕಾದ ಬೇರೆ ದೇಶಗಳನ್ನೂ ಆವರಿಸಿಕೊಂಡೀತಾ ಎಂಬುದೀಗ ಕೌತುಕದ ಪ್ರಶ್ನೆ.
ಹೀಗೆಲ್ಲ ರಾಷ್ಟ್ರೀಯ ಪ್ರಜ್ಞೆ ಜಾಗೃತಗೊಂಡಾಗಲೆಲ್ಲ ವಸಾಹತು ಶಕ್ತಿಗಳು ಆ ನೆಲದ ನಾಯಕರನ್ನೇ ಮುಗಿಸಿರುವ, ಅಧಿಕಾರ ಬದಲಾವಣೆ ಮಾಡಿಸಿರುವ ಸಾಕಷ್ಟು ಉದಾಹರಣೆಗಳಿವೆ. ಇದೇ ಬುರ್ಕಿನಾ ಫಾಸೊದಲ್ಲಿ 1983ರಲ್ಲಿ ಥಾಮಸ್ ಸಂಕಾರಾ ಎಂಬ ಮಿಲಿಟರಿ ವ್ಯಕ್ತಿ ಕ್ಷಿಪ್ರಕ್ರಾಂತಿ ಮೂಲಕ ಅಧಿಕಾರಕ್ಕೆ ಬಂದಿದ್ದ. ಆತ ರೈತರಿಗೆ ಭೂಮಿ ಹಂಚಿದ, ಸಾಕ್ಷರತೆ ಹರಡಿದ, ಮಹಿಳೆಯರ ಸಮಾನತೆ ಮತ್ತು ಘನತೆಗೆ ಅಡ್ಡಿಯಾಗುತ್ತದೆ ಎಂದು ಬಹುಪತ್ನಿತ್ವವನ್ನೇ ನಿಷೇಧಿಸಿದ್ದ. ಸಂಪನ್ಮೂಲಗಳ ನಿರ್ವಹಣೆಯಲ್ಲಿ ವಿದೇಶಿ ಶಕ್ತಿಗಳ ಪಾಲ್ಗೊಳ್ಳುವಿಕೆಯನ್ನು ನಿರ್ಬಂಧಿಸಿ, ಅಭಿವೃದ್ಧಿ ಕಾರ್ಯಗಳಿಗೆ ಚುರುಕನ್ನೂ ಕೊಟ್ಟ. ಆದರೆ 1987ರ ಹೊತ್ತಿಗೆಲ್ಲ ಇನ್ನೊಬ್ಬ ಮಿಲಿಟರಿ ಅಧಿಕಾರಿಯಿಂದ ಆತನನ್ನು ಹತ್ಯೆ ಮಾಡಿಸಿ, ಪರೋಕ್ಷವಾಗಿ ಪಾಶ್ಚಾತ್ಯ ಶಕ್ತಿಗಳು ಮತ್ತೆ ಅಧಿಕಾರ ಸೂತ್ರ ತಮ್ಮಲ್ಲಿರಿಸಿಕೊಂಡವು.
ಇದೀಗ ಇಬ್ರಾಹಿಂ ತ್ರಾವೊರೆ ಕೂಡ ಸಂಕಾರಾ ತಮ್ಮ ರೋಲ್ ಮಾಡೆಲ್ ಎಂದು ಹೇಳುತ್ತ, ಅದೇ ದಾರಿಯಲ್ಲಿ ಸಾಗಿರುವಾಗ ಪಾಶ್ಚಾತ್ಯರು ಏನೆಲ್ಲ ಆಟ ಕಟ್ಟಲಿದ್ದಾರೆಂಬುದು ಗಮನದಲ್ಲಿರಿಸಬೇಕಾದ ವಿಷಯ.
- ಚೈತನ್ಯ ಹೆಗಡೆ
cchegde@gmail.com