ಸಾಂದರ್ಭಿಕ ಚಿತ್ರ online desk
ಅಂಕಣಗಳು

ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಸಹಕಾರಿ ಆಹಾರ (ಕುಶಲವೇ ಕ್ಷೇಮವೇ)

ಅನಾರೋಗ್ಯಕರ ಕರುಳು ಮಲಬದ್ಧತೆ ಮತ್ತು ಹೊಟ್ಟೆಯ ಉಬ್ಬುವಿಕೆಯಿಂದ ಉರಿಯೂತದವರೆಗೆ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು.

ನಾವು ಆರೋಗ್ಯವಾಗಿರಲು ಕರುಳಿನ ಆರೋಗ್ಯಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ. ಕರುಳಿನ ಆರೋಗ್ಯ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಜೀರ್ಣಾಂಗ ವ್ಯವಸ್ಥೆಯ ಸಮತೋಲನ ಸಾಧಿಸಲು ನಾವು ಸೇವಿಸುವ ಆಹಾರ ಮುಖ್ಯ.

ಅನಾರೋಗ್ಯಕರ ಕರುಳು ಮಲಬದ್ಧತೆ ಮತ್ತು ಹೊಟ್ಟೆಯ ಉಬ್ಬುವಿಕೆಯಿಂದ ಉರಿಯೂತದವರೆಗೆ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ನಮ್ಮ ಜೀರ್ಣಾಂಗ ವ್ಯವಸ್ಥೆಯು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಮತ್ತು ಕರುಳಿನಲ್ಲಿರುವ ಸೂಕ್ಷ್ಮಾಣುಜೀವಿಗಳನ್ನು (ಪ್ರೋಬಯಾಟಿಕ್) ಆರೋಗ್ಯಕರವಾಗಿಡಲು ಹಲವಾರು ಆಹಾರಗಳು ಸಹಾಯ ಮಾಡುತ್ತವೆ. ಅಂತಹ ಕೆಲವು ಆಹಾರಗಳು ಹೀಗಿವೆ:

ಮೊಸರು ನೈಸರ್ಗಿಕ ಪ್ರೋಬಯಾಟಿಕ್

ಪ್ರೋಬಯಾಟಿಕ್‌ಗಳ ಸರಳ ಮೂಲಗಳಲ್ಲಿ ಮೊಸರು ಕೂಡ ಒಂದು. ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳು ಹೆಚ್ಚಾಗಲು ಮೊಸರು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸುಗಮವಾಗಲು ನಾವು ನಿಯಮಿತವಾಗಿ ಮೊಸರನ್ನು ಸೇವಿಸಬೇಕು. ಇದರಲ್ಲಿರುವ ಲ್ಯಾಕ್ಟೋಸ್ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಗೆ ಪರಿಹಾರವಾಗಿದೆ. ಸಿಹಿ ಇರದ ತಾಜಾ ಮೊಸರನ್ನು ಸೇವಿಸುವುದು ಬಹಳ ಆರೋಗ್ಯಕಾರಿ. ಅತಿಯಾಗಿ ಹುಳಿಯಾಗಿರುವ ಎರಡು ಮೂರು ದಿನ ಶೇಖರಿಸಿಡುವ ಮೊಸರು ಉತ್ತಮವಲ್ಲ.

ಹೊಟ್ಟೆ ಉಬ್ಬುವಿಕೆ-ಉರಿಯೂತ ನಿವಾರಕ ಶುಂಠಿ

ಶುಂಠಿಯನ್ನು ಶತಮಾನಗಳಿಂದ ವಾಕರಿಕೆ, ಹೊಟ್ಟೆಯ ಉಬ್ಬುವಿಕೆ ಮತ್ತು ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ಬಳಸಲಾಗುತ್ತಿದೆ. ಇದು ಜೀರ್ಣಕಾರಿ ಕಿಣ್ವ ಉತ್ತೇಜಕ, ಹೊಟ್ಟೆಯಲ್ಲಿ ಆಹಾರದ ಚಲನಶೀಲತೆಗೆ ಉತ್ತೇಜನಕಾರಿ ಮತ್ತು ಕರುಳಿನ ಪ್ರದೇಶವನ್ನು ಶಾಂತಗೊಳಿಸುತ್ತದೆ. ಶುಂಠಿ ಚಹಾವನ್ನು ಕುಡಿಯುವುದರಿಂದ ಹಿತಕರ ಅನುಭವವಾಗುತ್ತದೆ ಮತ್ತು ನಿಧಾನ ಜೀರ್ಣಕ್ರಿಯೆಯಿಂದಾಗಿ ಉಬ್ಬುವಿಕೆಯನ್ನು ತಡೆಯುತ್ತದೆ.

ಕರುಳಿನ ಉರಿಯೂತ ನಿವಾರಕ ಅರಿಶಿನ

ಅರಿಶಿನದ ಸಕ್ರಿಯ ಘಟಕಾಂಶವಾದ ಕರ್ಕ್ಯುಮಿನ್ ಹೆಚ್ಚು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕವಾಗಿದೆ. ಕರ್ಕ್ಯುಮಿನ್ನನ್ನು ಕರುಳಿನಲ್ಲಿ ಉರಿಯೂತವನ್ನು ಶಮನಗೊಳಿಸಲು ಬಳಸಲಾಗುತ್ತದೆ (ವಿಶೇಷವಾಗಿ ಅಲ್ಸರೇಟಿವ್ ಕೊಲೈಟಿಸ್ ಮತ್ತು ಕ್ರೋನ್ಸ್ ಕಾಯಿಲೆಯಲ್ಲಿ). ಅರಿಶಿನವು ಪಿತ್ತರಸದ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಕೊಬ್ಬಿನ ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ.

ಸುಗಮ ಆಹಾರ ಜೀರ್ಣಕ್ರಿಯೆಗೆ ಸಹಾಯಕ ಬಾಳೆಹಣ್ಣು

ಬಾಳೆಹಣ್ಣುಗಳು ಒಟ್ಟಾರೆ ಆರೋಗ್ಯಕ್ಕೆ ಹೆಚ್ಚು ಅನುಕೂಲಕರ ಹಣ್ಣುಗಳಾಗಿವೆ. ಇವುಗಳಿಂದ ಎರಡು ಪ್ರಯೋಜನಗಳಿವೆ. ಬಾಳೆಹಣ್ಣಿನಲ್ಲಿರುವ ನಾರು ಜೀರ್ಣಕ್ರಿಯೆಯನ್ನು ಕ್ರಮಬದ್ಧಗೊಳಿಸುತ್ತದೆ ಮತ್ತು ಇದರಲ್ಲಿರುವ ನೈಸರ್ಗಿಕ ಆಂಟಾಸಿಡ್ ಪರಿಣಾಮವು ಹೊಟ್ಟೆಯ ಆಮ್ಲವನ್ನು ಪ್ರತಿರೋಧಿಸುತ್ತದೆ. ಆದ್ದರಿಂದ ಇವು ಆಮ್ಲದ ಹಿಮ್ಮುಖ ಹರಿವನ್ನು ನಿವಾರಿಸಲು ಪ್ರಯೋಜನಕಾರಿ. ಬಾಳೆಹಣ್ಣಿನಂತಹ ಪೆಕ್ಟಿನ್ (ಸಸ್ಯೋತ್ಪನ್ನಗಳಲ್ಲಿರುವ ಕರಗಬಲ್ಲ ನಾರು) ಅಧಿಕವಾಗಿರುವ ಹಣ್ಣುಗಳು ಅತಿಸಾರವಾದಾಗ ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತವೆ.

ಕಿಣ್ವಭರಿತ ಪಪ್ಪಾಯ ಹಣ್ಣು

ಪಪ್ಪಾಯ ಹಣ್ಣಿನಲ್ಲಿರುವ ಪ್ರೋಟೀನ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಪ್ರೋಟಿಯೋಲೈಟಿಕ್ ಕಿಣ್ವ ಪಪೈನ್ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಹೆಚ್ಚು ಪ್ರೋಟೀನುಭರಿತ ಆಹಾರಗಳನ್ನು ಸೇವಿಸಿದ ನಂತರ ಇದು ವಿಶೇಷವಾಗಿ ಉಪಯುಕ್ತವಾಗಿದೆ. ಹೊಟ್ಟೆ ಉಬ್ಬುವುದು ಮತ್ತು ಅಜೀರ್ಣ ಸಮಸ್ಯೆಯನ್ನು ಬೇಗ ಶಮನಗೊಳಿಸುತ್ತದೆ. ಇದರ ನಾರಿನ ಮತ್ತು ನೀರಿನ ಅಂಶವು ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ.

ಮಲಬದ್ಧತೆಗೆ ಪರಿಹಾರ ಕಿವಿ ಹಣ್ಣು

ಆರೋಗ್ಯಕರ ಕಿಣ್ವಗಳು (ದೇಹಕ್ಕೆ ಉಪಯುಕ್ತವಾದ ರಾಸಾಯನಿಕಗಳು) ಮತ್ತು ನಾರಿನಿಂದ ಸಮೃದ್ಧವಾಗಿರುವ ಕಿವಿ ಹಿಣ್ಣು ಮಲಬದ್ಧತೆ ಪರಿಹಾರಕ್ಕೆ ಅತ್ಯುತ್ತಮ. ದಿನಕ್ಕೆ ಎರಡು ಕಿವಿ ಹಣ್ಣುಗಳನ್ನು ಸೇವಿಸುವುದು ಐಬಿಎಸ್ (ಇರಿಟೇಬಲ್ ಬೋವೆಲ್ ಸಿಂಡ್ರೋಮ್) ರೋಗಿಗಳಿಗೆ ಬಹಳ ಅನುಕೂಲ. ಇದರ ಉರಿಯೂತ ನಿವಾರಕ ಗುಣಗಳು ಮತ್ತು ನೀರಿನ ಅಂಶವು ಹೊಟ್ಟೆಗೆ ಕಿರಿಕಿರಿಯಾದಾಗ ಹಿತವನ್ನುಂಟುಮಾಡುತ್ತದೆ.

ಹುದುಗಿಸಿದ ಆಹಾರಗಳು ಉತ್ತಮ

ದೇಹವು ಸಾಕಷ್ಟು ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸಲು ಪರಿಣಾಮಕಾರಿಯಾಗಿ ಸಾಧ್ಯವಾಗದಿದ್ದಾಗ, ಅನಾನಸ್ (ಬ್ರೊಮೆಲೈನ್), ಪಪ್ಪಾಯಿ (ಪಪೈನ್) ಮತ್ತು ಹುದುಗಿಸಿದ ಆಹಾರಗಳಂತಹ ನೈಸರ್ಗಿಕ ಕಿಣ್ವಭರಿತ ಆಹಾರಗಳನ್ನು ಸೇವಿಸುವುದರಿಂದ ಪೋಷಕಾಂಶ ಹೀರಿಕೊಳ್ಳುವಿಕೆ ಹೆಚ್ಚಾಗುತ್ತದೆ ಮತ್ತು ಜೀರ್ಣಕ್ರಿಯೆಯ ಮೇಲೆ ಆಗುವ ಒತ್ತಡ ಕಡಿಮೆಯಾಗುತ್ತದೆ.

ಹುದುಗಿಸಿದ ಆಹಾರಗಳು (ಇಡ್ಲಿ, ಗಂಜಿ ಮತ್ತು ದೋಸೆ) ಪ್ರೋಬಯಾಟಿಕ್ಕುಗಳಿಂದ ಸಮೃದ್ಧವಾಗಿವೆ. ಈ ಆಹಾರಗಳು ಕರುಳಿನ ಬ್ಯಾಕ್ಟೀರಿಯಾಗಳ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ನೈಸರ್ಗಿಕವಾಗಿ ಹುದುಗಿಸಿದ ಆಹಾರಗಳ ನಿಯಮಿತ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಟೆಯ ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಚೆನ್ನಾಗಿ ಹುದುಗಿಸಿದ ಇಡ್ಲಿ ಮತ್ತು ದೋಸೆ ಹಿಟ್ಟನ್ನು ತಾಜಾ ಆಗಿ ಒಂದು ದಿನ ಬಳಸಬೇಕು. ಹೆಚ್ಚು ಹಿಟ್ಟನ್ನು ಮಾಡಿ ಫ್ರಿಜ್ಜಿನಲ್ಲಿಟ್ಟು ಅತಿಯಾಗಿ ಹುಳಿ ಬಂದ ನಂತರ ಮೂರು-ನಾಲ್ಕು ದಿನಗಳ ಕಾಲ ಬಳಸುವುದು ಬಳಸುವುದು ಕರುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.

ಕೊನೆಮಾತು: ಒಟ್ಟಾರೆ ಹೇಳುವುದಾದರೆ ಆಹಾರ ಚೆನ್ನಾಗಿ ಜೀರ್ಣವಾಗಲು ಮತ್ತು ಕರುಳು ಆರೋಗ್ಯವಾಗಿರಲು ನಾವು ಸೇವಿಸುವ ಆಹಾರ ಬಹಳ ಮುಖ್ಯ. ಮೊಸರು, ಕಿವಿ, ಶುಂಠಿ, ಅರಿಶಿನ, ಬಾಳೆಹಣ್ಣು ಮತ್ತು ಪಪ್ಪಾಯಿಯಂತಹ ಹೊಟ್ಟೆಗೆ ಮತ್ತು ಕರುಳಿಗೆ ಅನುಕೂಲಕರ ಆಹಾರಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು. ಆರೋಗ್ಯಕರ ಕರುಳು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುವುದಲ್ಲದೆ ರೋಗನಿರೋಧಕ ಶಕ್ತಿ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಜಾಗರೂಕರಾಗಿ ಆಹಾರ ಆಯ್ಕೆಗಳನ್ನು ಮಾಡುವ ಮೂಲಕ ಮತ್ತು ಕರುಳುಸ್ನೇಹಿ ಆಹಾರಗಳಿಗೆ ಆದ್ಯತೆ ನೀಡುವ ಮೂಲಕ ನಾವು ಸದಾ ಕಾಲ ಆರೋಗ್ಯವಂತರಾಗಿರಬಹುದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT