ಸಾಮಾಜಿಕ ಮಾಧ್ಯಮದಲ್ಲಿ ತುಸುಮಟ್ಟಿಗೆ ಸಕ್ರಿಯವಾಗಿದ್ದರೂ ಸಾಕು, ಕಳೆದ ನಾಲ್ಕೈದು ತಿಂಗಳುಗಳಲ್ಲಿ ಕೆಲವು ಪದಪುಂಜಗಳ ಜತೆ ನಿಮಗೆ ಮುಖಾಮುಖಿಯಾಗಿರುತ್ತದೆ. ಕರಡಿ ಕಣಿತ, ಬಿದ್ದು ಹೋಗಿರೋ ಮಾರ್ಕೆಟ್ ಇತ್ಯಾದಿಗಳು ನಮ್ಮೆಲ್ಲರ ದೃಷ್ಟಿಗೆ ತಾಗಿರುತ್ತವೆ.
ಏಕೆಂದರೆ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಸ್ನೇಹವಲಯದ ಬಹುತೇಕರು ಷೇರ್ ಮಾರ್ಕೆಟ್ ಒಂದು ಕೈ ನೋಡೋಣ ಎಂದು ಆ ಆಟಕ್ಕೆ ತಮ್ಮನ್ನು ದಾಖಲಾಗಿಸಿಕೊಂಡವರು. ಕೆಲವರಿಗೆ ಹಾಗೊಂದು ಪ್ರವೇಶಿಕೆಗೆ ಅವರದ್ದೇ ಆದ ಕಾರಣಗಳಿದ್ದವು. ಅವೇನೋ ಫೈನ್. ಆದರೆ ನೂರರಲ್ಲಿ ಅರವತ್ತು ಮಂದಿ ಆಟಕ್ಕೆ ಕಾಲಿಟ್ಟಿದ್ದೇ ಫೊಮೊ (FOMO) ಅರ್ಥಾತ್ ಫಿಯರ್ ಆಫ್ ಮಿಸ್ಸಿಂಗ್ ಔಟ್, ತಾನು ಏಕಾಂಗಿಯಾಗಿ ಉಳಿದುಬಿಟ್ಟೇನೆಂಬ ಭಯದ ಭಾವದಲ್ಲಿ. ಕಳೆದ ಮೂರು ವರ್ಷಗಳಲ್ಲಿ ಯೂಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಫಿನಫ್ಲ್ಯುಯೆನ್ಸರ್ ಪ್ರಬೇಧವು ಹುಟ್ಟಿಸಿದ್ದ ಫೊಮೊ ಪ್ರವಾಹಕ್ಕೆ ಸಿಲುಕಿದವರೇ ಅಧಿಕ.
ಹಣ ಗಳಿಕೆ ಎಂಬುದು ನಿನ್ನೆ-ಇವತ್ತು-ನಾಳೆಗಳಿಗೆಲ್ಲ ಸಲ್ಲುವ ಆಕರ್ಷಕ ಪದಪುಂಜವೇ ಆಗಿರುವುದರಿಂದ ಅದಕ್ಕೆ ಹಲವು ಪ್ರಶ್ನೆಗಳನ್ನು ಅಪ್ರಸ್ತುತವಾಗಿಸುವ ತಾಕತ್ತಿದೆ. ಹೀಗಾಗಿ, ಈ ಮೂರು ವರ್ಷಗಳಲ್ಲಿ ಹಣಕಾಸು ಪರಿಣತರೆಂದು ಆವಿರ್ಭವಿಸಿದವರ ವಾಗ್ ವೈಖರಿಗಳನ್ನು ಪ್ರಶ್ನಿಸಿದವರೇ ವಿಲನ್ ಆಗುವ ಸನ್ನಿವೇಶವಿತ್ತು. ಮಾರ್ಕೆಟ್ ಮಾತುಗಳ ಬಗ್ಗೆ ಸಂದೇಹ ವ್ಯಕ್ತಪಡಿಸುವವರೆಲ್ಲ ಈ ಆಟ ಆಡಲಾಗದ ಕೈಲಾಗದವರೆಂದೂ, ತಮಗೆಟುಕಿಸಿಕೊಳ್ಳಲಾಗದ ದ್ರಾಕ್ಷಿ ಹುಳಿಯೆನ್ನುತ್ತಿರುವ ಅಸೂಯಾಪರರೆಂದು ಗೇಲಿಗೊಳಗಾಗುವ ಸಾಧ್ಯತೆಯೇ ಹೆಚ್ಚಿತ್ತು.
ಈಗ ಹಣಕಾಸು ಪಾಠದ ಪ್ರಭಾವಿಗಳು ಕಟ್ಟಿಕೊಟ್ಟಿದ್ದ ಮಾರುಕಟ್ಟೆ ಚಿತ್ರಣವು ದೀರ್ಘಾವಧಿಗೆ ಅಲ್ಲಾಡಿರುವುದರಿಂದ ಅವರಲ್ಲಿ ಹೆಚ್ಚಿನವರು ತತ್ತ್ವಜ್ಞಾನಿಗಳಾಗಿ ಬದಲಾಗಿದ್ದಾರೆ. “ನೋಡಿ…ಏರಿಳಿತಗಳು ಮಾರುಕಟ್ಟೆ ಮತ್ತು ಬದುಕಿನಲ್ಲಿ ಸಾಮಾನ್ಯ. ಸಹನೆ ಇರಬೇಕು. ಇಳಿದಿರುವುದು ನಾಳೆ ಏರಲೇಬೇಕು. ದೀರ್ಘಾವಧಿಯ ಬಗ್ಗೆ ಯೋಚಿಸಿ. ತಾತ್ಕಾಲಿಕ ಹಿನ್ನಡೆಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು…” ಎಂದೆಲ್ಲ ಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಒಳ್ಳೆಯದೇ. ಆದರೆ ಪ್ರಶ್ನೆಯಿರುವುದು ಈ ವಿತ್ತೀಯ ಉಪದೇಶದ ಪ್ರಭಾವಿಗಳೆಲ್ಲ ಈ ಮೊದಲು ಸಮಾಧಾನಿಗಳಾಗಿದ್ದ ವರ್ಗವನ್ನು ಗೇಲಿ ಮಾಡುವುದರ ಮೂಲಕವೇ ಫೊಮೊ ಸೃಷ್ಟಿಸುತ್ತಿದ್ದಾಗ ಈ ‘ಫಿಲಾಸಫಿಕಲ್ ಜೋನ್’ ಎಲ್ಲಿ ಮಾಯವಾಗಿತ್ತು ಅನ್ನೋದು.
ಭಗವದ್ಗೀತೆ, ರಾಮಾಯಣ-ಮಹಾಭಾರತಗಳ ಪುಟ ತಿರುವಿಹಾಕಿಲ್ಲದಿದ್ದರೂ ಪರವಾಗಿಲ್ಲ. ಆದರೆ, ನೀವು ‘ರಿಚ್ ಡ್ಯಾಡ್, ಪೂರ್ ಡ್ಯಾಡ್’ ಓದಿಲ್ಲವಾಗಿದ್ದರೆ ಈ ಕಾಲಘಟ್ಟದಲ್ಲಿ ಹುಟ್ಟಿ ಬದುಕುತ್ತಿರುವುದಕ್ಕೇ ನಾಲಾಯಕ್ ಎಂಬ ಧಾಟಿಯಲ್ಲೇ ಹೆಚ್ಚಿನ ವಿತ್ತೀಯ ಪ್ರಭಾವಿಗಳ ಮಾತು ಶುರುವಾಗುತ್ತಿತ್ತು. ಆ ಮುಂದಕ್ಕೆ ಬೆಳೆದುಕೊಳ್ಳುತ್ತಿದ್ದ ಮಾತಿನ ವರಸೆಗಳೂ ತಮಾಷೆಯಾಗಿಯೇ ಇರುತ್ತಿದ್ದವು. “ಕಾರು ತೆಗೆದುಕೊಂಡು ನೀವು ದಡ್ಡತನ ಮಾಡಿದಿರಿ. ಅದು ವರ್ಷ ಕಳೆದಂತೆ ಬೆಲೆ ಕಳೆದುಕೊಳ್ಳುವ ವಸ್ತು. ಅದೇ ನೀವೇನಾದರೂ ಆರೇಳು ವರ್ಷಗಳ ಕೆಳಗೆ ಟೆಸ್ಲಾದ ಶೇರು ತೆಗೆದುಕೊಂಡಿದ್ದರೆ ಎಷ್ಟು ಲಾಭದಲ್ಲಿರುತ್ತಿದ್ದಿರಿ ಗೊತ್ತಾ” ಅಂತ ಇವರು ಗಣಿತ ಮಾಡಿ ಅಂಕಿಗಳನ್ನು ಹುಟ್ಟಿಸುತ್ತಿದ್ದಾಗಲೆಲ್ಲ ಎದುರಿನವನಿಗೆ ಕೆಲವೊಮ್ಮೆಯಾದರೂ ಅನ್ನಿಸುತ್ತಿತ್ತು - “ಹೌದು ಕಣಪ್ಪಾ… ಆದರೆ ಕಾರು ಮನೆಯಿಂದ ಆಫೀಸಿಗೆ ನನ್ನನ್ನು ಮುಟ್ಟಿಸುತ್ತೆ, ಆದರೆ ಷೇರು ಸಂಗ್ರಹಿಸಿ ಅಂಡಿನಡಿಗಿಟ್ಟುಕೊಂಡರೆ ಅದು ಕಾರಿನ ಕೆಲಸ ಮಾಡುವುದಿಲ್ಲವಲ್ಲ…” ಅಂತ. ಆದರೂ ವಿತ್ತ ಪರಿಣತರ ದೃಷ್ಟಿಯಲ್ಲಿ ಅದಾಗಲೇ ಅಜ್ಞಾನಿಗಳಾಗಿರುವ ನಾವು ಅಂಥ ಪ್ರಶ್ನೆ ಕೇಳಿ ಮತ್ತಷ್ಟು ದಡ್ಡರೆನಿಸಿಕೊಳ್ಳಲು ಆಗುತ್ತದೆಯೇ?
ಖಂಡಿತ, ಹಣಕಾಸಿನ ಜ್ಞಾನವಿಲ್ಲದೆಯೇ ಮುಂದುವರಿಯುವುದು ಒಳ್ಳೆಯ ಸ್ಥಿತಿ ಎಂಬುದೇನೂ ಇಲ್ಲಿನ ವಾದವಲ್ಲ. ಆದರೆ, ಅದು ಒಟ್ಟಾರೆ ವ್ಯಕ್ತಿತ್ವ ಅಭಿವೃದ್ಧಿಯ ಚರ್ಚೆಯಲ್ಲಿ ಒಂದು ಭಾಗವಾಗಬೇಕೇ ವಿನಹ ಅದಿದ್ದರೆ ಮಾತ್ರ ವ್ಯಕ್ತಿತ್ವ ಎಂಬುದಲ್ಲ. ಆದರೆ ವಿತ್ತೋಪನ್ಯಾಸ ಪ್ರಭಾವಿಗಳಲ್ಲಿ ಹೆಚ್ಚಿನವರು ಸೃಷ್ಟಿಸಿದ್ದ ಮಾಹೋಲ್ ಎಂತಹ ಸನ್ನಿವೇಶ ಸೃಷ್ಟಿಸುತ್ತ ಹೋಗುತ್ತಿತ್ತು ಎಂದರೆ ಮಾರ್ಕೆಟ್ಟಿನಲ್ಲಿ ಎಷ್ಟು ಹಣ ತೊಡಗಿಸುತ್ತಿದ್ದಾರೆ ಎಂಬುದರ ಮೇಲೆ ಎಲ್ಲರ ಯೋಗ್ಯತೆ-ಬುದ್ಧಿವಂತಿಕೆಗಳು ನಿರ್ಧಾರವಾಗುತ್ತವೆ ಎಂಬಂತೆ. ಒಬ್ಬ ಕೋಡರ್ ತಾನು ಎಐ ಯುಗದಲ್ಲಿ ಪ್ರಸ್ತುತವಾಗುವುದಕ್ಕೆ ಮತ್ಯಾವ ಬಗೆಯಲ್ಲಿ ಕೌಶಲ ವೃದ್ಧಿಸಿಕೊಳ್ಳುವುದೆಂಬ ಚರ್ಚೆಯಲ್ಲಿ ವ್ಯಸ್ತನಾಗಬೇಕು.
ಒಬ್ಬ ವಿಡಿಯೊ ಎಡಿಟ್ ಮಾಡಿಕೊಂಡಿರುವ ವ್ಯಕ್ತಿ ಈಗಿನ ಎಆರ್-ವಿಆರ್ ಕಾಲದಲ್ಲಿ ತಾನು ತನ್ನ ಕೆಲಸದ ಮೂಲಕ ಮತ್ಯಾವ ಹೊಸ ಅನುಭವ ಸೃಷ್ಟಿಸಬಹುದೆಂಬ ಚಿಂತೆಯನ್ನೇ ಮುಖ್ಯವಾಗಿರಿಸಿಕೊಳ್ಳಬೇಕು. ಚೆಂದದ ಕತೆ-ಕವಿತೆಗಳನ್ನು ಎಐ ಸಹ ಹೊಸೆಯಬಹುದಾದ ಕಾಲಘಟ್ಟದಲ್ಲಿ ತನ್ನ ಪಾತ್ರವೇನು ಎಂಬುದರ ಚಿಂತನೆಯ ಕೇಂದ್ರದಲ್ಲಿ ಬರಹಗಾರನಾದವನು ತನ್ನನ್ನು ಪ್ರತಿಷ್ಟಾಪಿಸಿಕೊಳ್ಳಬೇಕು. ಅದುಬಿಟ್ಟು, ಇಲ್ಲಿ ಹೀಗೆ ಉದಾಹರಣೆಗೆ ತೆಗೆದುಕೊಳ್ಳುತ್ತಿರುವವರೆಲ್ಲರ ಯೋಗ್ಯತೆಗಳು ಅವರೆಲ್ಲ ತಿಂಗಳ ದುಡಿಮೆಯಲ್ಲಿ ಎಷ್ಟನ್ನು ಮಾರುಕಟ್ಟೆಗೆ ಹಾಕುತ್ತಿದ್ದಾರೆ ಎಂಬುದರ ಮೇಲೆಯೇ ನಿರ್ಧಾರವಾಗಿಬಿಡುವ ಮಾದರಿಯೊಂದನ್ನು ವಿತ್ತೋಪದೇಶ ಪ್ರಭಾವಿಗಳ ವರ್ಗವು ಸೃಷ್ಟಿಸಿಬಿಟ್ಟಿತ್ತು. ಇಪ್ಪತ್ತೈದು ಸಾವಿರ ಮಾಸಿಕ ದುಡಿಯುವವನಿಂದ ಹಿಡಿದು ಲಕ್ಷ ರುಪಾಯಿಗಳಾಚೆಗಿನ ಸಂಬಳದವನವರೆಗೂ ಏಕರೂಪದ ಫೊಮೊ ಒಂದನ್ನು ಸೃಷ್ಟಿಸಲಾಗಿತ್ತು. ಮಾರುಕಟ್ಟೆ ಬಿದ್ದಿರುವುದು ಹಾಗೂ ಅದು ಇನ್ನೂ ಕೆಲವು ಕಾಲ ಮಲಗಿಕೊಂಡೇ ಇರುವ ಸೂಚನೆ ಕೊಟ್ಟಿರುವುದು ಈ ಅರ್ಥದಲ್ಲಿ ಒಂದು ಸಹಾಯವನ್ನೇ ಮಾಡುತ್ತಿದೆ.
ಈ ಹಿಂದೆ ವಿತ್ತ ಸಚಿವಾಲಯ ಹಾಗೂ ಪ್ರಧಾನಿ ಕಾರ್ಯಾಲಯಗಳಲ್ಲಿ ಸಲಹೆಗಾರರಾಗಿದ್ದ ಸಂಜೀವ ಸನ್ಯಾಲ್, ಕೋಟಕ್ ವಿತ್ತ ಸಾಮ್ರಾಜ್ಯದ ಉದಯ ಕೋಟಕ್, ಹಾಗೂ ಆರ್ ಪಿ ಜಿ ಸಮೂಹದ ಅಧ್ಯಕ್ಷ ಹರ್ಷ ಗೊಯೆಂಕ ಒಂದು ಧ್ವನಿಯನ್ನು ಹೊರಹಾಕಿದ್ದಾರೆ.
ಅದರ ಸಾರಾಂಶವಿಷ್ಟು- ಈ ಹಿಂದೆ ಉದ್ಯಮಪತಿಗಳ ಉತ್ತರಾಧಿಕಾರಿಗಳೆಲ್ಲ ಕಾರ್ಖಾನೆಯಲ್ಲೋ, ತಮ್ಮ ತಂದೆಯ ಕಚೇರಿಯಲ್ಲೋ ಮೊದಲಿಗೆ ಕಸಬು-ಕೌಶಲ ಕಲಿಯುತ್ತಿದ್ದರು. ಉದಾಹರಣೆಗೆ, ಒಂದು ಪ್ರಸಿದ್ಧ ಜವಳಿ ಉದ್ಯಮವಿದೆ ಎಂದುಕೊಂಡರೆ ಅದನ್ನು ನಿರ್ವಹಿಸುತ್ತಿರುವ ತಂದೆ-ತಾಯಿಯ ಮಕ್ಕಳು ಆ ಉದ್ಯಮದ ಶೋರೂಮುಗಳ ಗಲ್ಲಾಪೆಟ್ಟಿಗೆಗಳ ಮೇಲೆ ಕೂರುತ್ತಿದ್ದರು. ಆ ಉದ್ಯಮದ ವಿತರಣಾ ವ್ಯವಸ್ಥೆ ಹರಡಿಕೊಂಡಿರುವ ಸಣ್ಣಪಟ್ಟಣಗಳ ಧೂಳು-ಬಿಸಿಲುಗಳಲ್ಲಿ ಹೆಜ್ಜೆ ಸವೆಸುತ್ತಿದ್ದರು. ಹೀಗೆಲ್ಲ ಆಗುವಾಗ ಅವರಿಗೆ ಆ ಉದ್ಯಮವನ್ನು ಬೇರೆ ಆಯಾಮಗಳಲ್ಲಿ ಬೆಳೆಸಬಹುದಾದ ಸಾಧ್ಯತೆಗಳು ಗೋಚರಿಸುತ್ತಿದ್ದವು. ಕೊನೆಗೊಮ್ಮೆ ಕುಟುಂಬದ ಉದ್ಯಮಸೂತ್ರ ಇವರ ಕೈಗೆ ಬರುವ ಹೊತ್ತಿನಲ್ಲಿ ಇವರಲ್ಲಿ ಅನ್ವೇಷಣಾಮತಿ, ಹೊಸ ಶೋಧ ಸಾಧ್ಯತೆಗಳೆಲ್ಲ ಹರಳುಗಟ್ಟಿರುತ್ತಿದ್ದವು.
ಆದರೀಗ ಹೊಸ ಟ್ರೆಂಡ್. ಉದ್ಯಮಪತಿಗಳ ಮಕ್ಕಳೆಲ್ಲ ‘ಫ್ಯಾಮಿಲಿ ಆಫೀಸ್’ ಅಂತ ಮಾಡಿಕೊಂಡು ತಮಗೊಂದು ಹುದ್ದೆ ಸೃಷ್ಟಿಸಿಕೊಂಡು ಕೂರುತ್ತಿದ್ದಾರೆ. ಈ ಫ್ಯಾಮಿಲಿ ಆಫೀಸ್ ಮೂಲಕ ಮಾಡಲಾಗುತ್ತಿರುವುದೇನು? ತನ್ನಪ್ಪನ ಕಂಪನಿಯ ಹಣವನ್ನು ಯಾವ ಮ್ಯೂಚುವಲ್ ಫಂಡ್ ನಿಧಿಯಲ್ಲಿ, ಇನ್ಯಾವ ಹೆಡ್ಜ್ ಫಂಡ್ ನಲ್ಲಿ ತೊಡಗಿಸುವುದು ಎಂಬುದರ ಸುತ್ತಲಷ್ಟೇ ಸರ್ಕಸ್. ಅವರದ್ದು ದುಬೈ ಮೀಟಿಂಗ್ ಗಳು, ಗಾಲ್ಫ್ ಕೋರ್ಸಿನಲ್ಲಿ ಚರ್ಚೆಗಳು, ಒಟ್ಟಿನಲ್ಲಿ ಮಾರುಕಟ್ಟೆಯ ಊಹಾತ್ಮಕ ಮಾದರಿಯ ಮೇಲಷ್ಟೇ ಕಟ್ಟಿ ನಿಲ್ಲಿಸಿರುವ ಆಟ. ಮೂಲ ಕಸುಬಿನ ಅಂತಃಸತ್ತ್ವ ಗೊತ್ತಿಲ್ಲ, ಬೆವರು ಹರಿಸುವುದು ಬೇಕಿಲ್ಲ. ಒಂದು ಉದ್ಯಮವನ್ನು ಕರಗತ ಮಾಡಿಕೊಳ್ಳುವುದಕ್ಕೆ ವಾರಾಂತ್ಯಗಳ ಗೊಡವೆ ಇಲ್ಲದೇ, ಗಡಿಯಾರ ನೋಡದೇ ಕೆಲಸ ಮಾಡಿದ್ದ ಈ ಹಿಂದಿನ ತಲೆಮಾರು ಇವರಿಗೆಲ್ಲ ಗೇಲಿಯ ವಸ್ತು.
ಇನ್ನೂ ಒಂದು ರುಪಾಯಿ ಲಾಭ ಮಾಡಿರದೇ ವ್ಯಾಲುವೇಷನ್ ಆಟದಲ್ಲಿ ತಾನು ಬಹುಕೋಟಿ ಮೌಲ್ಯದ ನವೋದ್ದಿಮೆ ಎಂದು ಪ್ರಚಾರ ಪಡೆದುಕೊಳ್ಳುತ್ತಿರುವ ನವೋದ್ದಿಮೆಗಳೇ ಇವರ ಆದರ್ಶಗಳು! ಇವರ ಕೊಠಡಿಯ ಗೋಡೆ ಮೇಲೆ ಎಲಾನ್ ಮಸ್ಕ್ ಚಿತ್ರವಿರುತ್ತದೆ. ಆದರೆ ಕಂಪನಿ ಕಟ್ಟುವಾಗ ಕಚೇರಿಯ ನೆಲದ ಮೇಲೆ ಮಲಗೇಳುತ್ತಿದ್ದ ಆತನ ಪರಿಶ್ರಮವನ್ನಾಗಲೀ, ಇವತ್ತಿನ ಆತನ ಶೆಡ್ಯೂಲ್ ಅನ್ನೇ ಆಗಲೀ ಅನುಕರಿಸುವ ಸಾಮರ್ಥ್ಯ ಇವರಲ್ಲಿಲ್ಲ.
ಈ ಮೇಲಿನ ವಾಕ್ಯಗಳು ಉದ್ಯಮಪತಿಗಳ ಈಗಿನ ತಲೆಮಾರಿನ ಬಗ್ಗೆ ಅಸೂಯೆ ಇರಿಸಿಕೊಂಡಿರುವ ಯಾವುದೋ ಸಾಮಾನ್ಯನ ಬಡಬಡಿಕೆ ಅಲ್ಲ. ಬದಲಿಗೆ, ಆರ್ ಪಿ ಜಿ ಉದ್ಯಮ ಸಮೂಹದ ನಾಯಕತ್ತ್ವ ಸ್ಥಾನದಲ್ಲಿರುವ ಹರ್ಷ ಗೋಯಂಕ ಇತ್ತೀಚಿನ ಪತ್ರಿಕಾ ಅಂಕಣವೊಂದರಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ.
ವ್ಯಕ್ತಿ, ಸಮಾಜ, ದೇಶಗಳು ಮುನ್ನಡೆಯುವುದು ಆಯಾ ವಿಭಾಗ ಹಾಗೂ ಕಾರ್ಯಕೌಶಲಗಳಲ್ಲಿ ನಡೆಯುವ ನಿರಂತರ ಅನ್ವೇಷಣೆಗಳಿಂದ. ಕೇವಲ ಮಾರುಕಟ್ಟೆ ಮೌಲ್ಯಾಂಕನದ ಹಿಂದೆ ಬೀಳುವುದನ್ನೇ ಬದುಕಿನ ಗುರಿಯಾಗಿಸಿಕೊಳ್ಳುವ ಯಾವುದೇ ಮಾದರಿ ದೀರ್ಘಾವಧಿಯಲ್ಲಿ ಮುಗ್ಗರಿಸಲೇಬೇಕು. ಏಕೆಂದರೆ ಈ ಆಟವನ್ನಷ್ಟೇ ಧ್ಯೇಯವಾಗಿರಿಸಿಕೊಳ್ಳುವ ಸಮಾಜ ಮೂಲಶೋಧನೆ ಮತ್ತು ಪರಿಶ್ರಮಗಳಿಂದ ವಿಮುಖವಾಗುತ್ತದೆ. ಕೆಲವು ವ್ಯಕ್ತಿಗಳಿಗೆ ಈ ಆಟದಲ್ಲಿ ಸಂಪತ್ತು ಸೃಷ್ಟಿಯಾದೀತಾದರೂ ಸಮಷ್ಟಿಯ ದೃಷ್ಟಿಯಿಂದ ನೋಡಿದಾಗ ಮಾರುಕಟ್ಟೆಯ ಮೌಲ್ಯಾಂಕನದ ಆಟಕ್ಕೆ ಅಷ್ಟೆಲ್ಲ ಹೈಪ್ ಬೇಕಿಲ್ಲ.
ಮಾರುಕಟ್ಟೆ ಏರುಗತಿಯಲ್ಲಿರುವಾಗ ಇಂಥವನ್ನೆಲ್ಲ ಮಾತನಾಡಿದ್ದರೆ ಬಹುಶಃ ಅದು ನಕಾರಾತ್ಮಕ ಯೋಚನೆ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತಿತ್ತೋ ಏನೋ. ಆದರೆ ಮಾರುಕಟ್ಟೆ ಬಿದ್ದಿರುವ ಈ ಸಂದರ್ಭದಲ್ಲಿ ಕೆಲವರಿಗಾದರೂ ಈ ಆಟದಲ್ಲಿ ನಾವಿರಬೇಕಾ, ಒಂದೊಮ್ಮೆ ಇದ್ದರೂ ತೊಡಗಿಸಿಕೊಳ್ಳುವಿಕೆ ಪ್ರಮಾಣ ಎಷ್ಟಿದ್ದರೆ ಸಾಕು ಎಂಬ ಪ್ರಶ್ನೆಗಳತ್ತ ತುಡಿತ ಹುಟ್ಟೀತೇನೋ.
- ಚೈತನ್ಯ ಹೆಗಡೆ
cchegde@gmail.com