ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಡಿ ಅಮೆರಿಕಾದೊಡನೆ ಚೀನಾಗೆ ವ್ಯಾಪಾರ ಮತ್ತು ಆರ್ಥಿಕ ಉದ್ವಿಗ್ನತೆ ತಲೆದೋರಿದೆ. ಇದನ್ನು ಯಶಸ್ವಿಯಾಗಿ ನಿಭಾಯಿಸುವ ಸಲುವಾಗಿ ತಾನು ಹೊಸ ಯೋಜನೆಗಳನ್ನು ರೂಪಿಸಿರುವುದಾಗಿ ಚೀನಾ ಮಾರ್ಚ್ 5ರಂದು ಘೋಷಿಸಿತು. ಈ ಯೋಜನೆಗಳ ಪ್ರಕಾರ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕೃತಕ ಬುದ್ಧಿಮತ್ತೆ (ಎಐ), ರೊಬಾಟಿಕ್ಸ್ ಮೇಲೆ ಗಮನ ಹರಿಸಲಿದ್ದು, ಚೀನಾದ ಸ್ಥಾನವನ್ನು ಭದ್ರಪಡಿಸಲು ಆಧುನಿಕ ತಂತ್ರಜ್ಞಾನಗಳಲ್ಲಿ ಹೂಡಿಕೆ ನಡೆಸಲು ಮುಂದಾಗಿದ್ದಾರೆ.
ಚೀನೀ ಆಮದಿನ ಮೇಲೆ 20% ಸುಂಕ ವಿಧಿಸುವ ಟ್ರಂಪ್ ನಿರ್ಧಾರದ ಕುರಿತು ಬೀಜಿಂಗ್ ಅಸಮಾಧಾನ ಹೊಂದಿದೆ. ಟ್ರಂಪ್ ನಡೆ ರಫ್ತಿನ ಮೇಲೆ ಅಪಾರ ಅವಲಂಬನೆ ಹೊಂದಿರುವ ಚೀನಾದ ಆರ್ಥಿಕತೆಗೆ ನೇರವಾಗಿಯೇ ಹೊಡೆತ ನೀಡಲಿದೆ.
ಮಂಗಳವಾರ, ಮಾರ್ಚ್ 4ರ ರಾತ್ರಿ, ಚೀನಾದ ವಿದೇಶಾಂಗ ಸಚಿವಾಲಯ ಟ್ರಂಪ್ ನಿರ್ಧಾರವನ್ನು ಕಟುವಾಗಿ ಟೀಕಿಸಿದೆ. ಸಚಿವಾಲಯ ಅಮೆರಿಕಾ ಚೀನಾದ ಫೆಂಟಾನಿಲ್ ರಫ್ತನ್ನು ಒಂದು ಕುಂಟು ನೆಪವಾಗಿ ಬಳಸಿಕೊಂಡು, ಚೀನಾ ಮೇಲೆ ಸುಂಕ ವಿಧಿಸಿ, ಚೀನಾದ ಗೌರವಕ್ಕೆ ಹಾನಿ ಉಂಟುಮಾಡಿ, ದೇಶದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದೆ ಎಂದಿದೆ.
ಚೀನಾದ ಫೆಂಟಾನಿಲ್ ರಫ್ತು ಎಂದರೆ, ಫೆಂಟಾನಿಲ್ ಎಂಬ ಶಕ್ತಿಶಾಲಿ ಸಿಂಥೆಟಿಕ್ ಓಪಿಯಾಯ್ಡ್ ಮತ್ತು ಅದರ ಪದಾರ್ಥಗಳ ಉತ್ಪಾದನೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದೆ. ಇದರಲ್ಲಿನ ಕೆಲವು ರಾಸಾಯನಿಕಗಳು ಅಕ್ರಮ ಮಾದಕ ದ್ರವ್ಯಗಳ ವ್ಯಾಪಾರಕ್ಕೆ ಸಂಬಂಧಿಸಿದ್ದು, ಚೀನಾ ಮತ್ತು ಫೆಂಟಾನಿಲ್ ಸಮಸ್ಯೆ ಎದುರಿಸುತ್ತಿರುವ ಅಮೆರಿಕಾದಂತಹ ರಾಷ್ಟ್ರಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ.
ಫೆಂಟಾನಿಲ್ ಒಂದು ಪ್ರಬಲ ನೋವು ನಿವಾರಕವಾಗಿದ್ದು, ಶಸ್ತ್ರಚಿಕಿತ್ಸೆಯ ಬಳಿಕದ ತೀವ್ರ ಸ್ವರೂಪದ ನೋವಿಗೆ ಅಥವಾ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಬಳಕೆಯಾಗುತ್ತದೆ. ಇದು ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ, ಬೇರಾವುದೇ ನೋವು ನಿವಾರಕಗಳು ಪ್ರಯೋಜನವಾಗದಂತಹ ತೀವ್ರ ಸ್ವರೂಪದ ನೋವಿನ ನಿರ್ವಹಣೆಯಲ್ಲಿ ಫೆಂಟಾನಿಲ್ ಬಳಕೆಯಾಗುತ್ತದೆ. ಆದರೆ, ಅಕ್ರಮ ಫೆಂಟಾನಿಲ್ ಪೂರೈಕೆ ಮಿತಿಮೀರಿದ ಬಳಕೆಯ ಸಮಸ್ಯೆಗೆ ಕಾರಣವಾಗಿದೆ.
ಆದರೆ ಚೀನಾ ತನ್ನ ಹೇಳಿಕೆಯ ಮೂಲಕ ಅಮೆರಿಕಾದ ಬೆದರಿಕೆಗಳಿಗೆ, ಒತ್ತಡಗಳಿಗೆ, ಅಥವಾ ಶೀತಲ ಸಮರದ ಸಂದರ್ಭದಲ್ಲಿ ಬಳಸಿದಂತಹ ಕಟುವಾದ ಭಾಷೆಗೆ ತಾನು ಹೆದರುವುದಿಲ್ಲ ಎಂಬ ಸ್ಪಷ್ಟವಾದ ಸಂದೇಶವನ್ನು ರವಾನಿಸಿದೆ. ಒಂದು ವೇಳೆ ಅಮೆರಿಕಾ ಏನಾದರೂ ಸುಂಕದ ಯುದ್ಧ, ವ್ಯಾಪಾರ ಯುದ್ಧ, ಅಥವಾ ಇನ್ನಾವುದೇ ರೀತಿಯ ಯುದ್ಧವನ್ನು ಬಯಸಿದರೂ ಅದರ ವಿರುದ್ಧ ಅತ್ಯಂತ ತೀವ್ರವಾಗಿ ಹೋರಾಡಲು ತಾನು ಸಿದ್ಧ ಎಂಬ ಸಂದೇಶವನ್ನು ಚೀನಾ ನೀಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಚೀನಾದ ಹೇಳಿಕೆಗಳಿಗೆ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಪ್ರತಿಕ್ರಿಯಿಸಿದ್ದು, ಅಮೆರಿಕಾ ಸಹ 'ಸಂಪೂರ್ಣವಾಗಿ ಸಿದ್ಧವಿದೆ' ಎಂದಿದ್ದಾರೆ. ಯಾರಿಗೆ ಶಾಂತಿಯ ಅಗತ್ಯವಿದೆಯೋ, ಅವರು ಯುದ್ಧಕ್ಕೂ ಸಿದ್ಧವಾಗಿರಬೇಕಾಗುತ್ತದೆ. ಅದಕ್ಕಾಗಿ ಅಮೆರಿಕಾ ತನ್ನ ಮಿಲಿಟರಿಯನ್ನು ಬಲಪಡಿಸುತ್ತಿದೆ ಎಂದು ಹೆಗ್ಸೆತ್ ಹೇಳಿದ್ದಾರೆ.
ಮಾಧ್ಯಮಗಳೊಡನೆ ಮಾತನಾಡಿದ ಅವರು, ಚೀನಾ ಅಥವಾ ಬೇರಾವುದೇ ದೇಶದೊಡನೆ ಯುದ್ಧವನ್ನು ತಡೆಯಬೇಕಾದರೆ, ಅಮೆರಿಕಾ ಅತ್ಯಂತ ಶಕ್ತಿಶಾಲಿಯಾಗಿರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶಕ್ತಿಯಿಂದಲೇ ಶಾಂತಿಯನ್ನು ಸಾಧಿಸಲು ಸಾಧ್ಯ ಎನ್ನುವುದು ಅಧ್ಯಕ್ಷ ಟ್ರಂಪ್ ಅವರಿಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.
ಮಾರ್ಚ್ 5, ಬುಧವಾರ ಬೆಳಗ್ಗೆ ಚೀನಾದ ಪಾಲಿಟ್ ಬ್ಯೂರೋ ತನ್ನ 'ವಾರ್ಷಿಕ ವರದಿ'ಯನ್ನು ಬಿಡುಗಡೆಗೊಳಿಸಿತು. ಕಾಕತಾಳೀಯ ಎಂಬಂತೆ, ಇದೇ ಸಮಯದಲ್ಲಿ ಪ್ರಪಂಚದ ಇನ್ನೊಂದೆಡೆ, ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅವರು ಕಾಂಗ್ರೆಸ್‌ನಲ್ಲಿ ಸ್ಟೇಟ್ ಆಫ್ ದ ಯೂನಿಯನ್ ಭಾಷಣ ನಡೆಸುತ್ತಿದ್ದರು.
ಪಾಲಿಟ್ ಬ್ಯೂರೋ (ಪೊಲಿಟಿಕಲ್ ಬ್ಯೂರೋ ಎಂಬುದರ ಹೃಸ್ವರೂಪ) ಎನ್ನುವುದು ರಾಜಕೀಯ ಪಕ್ಷದ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಅಂಗವಾಗಿದ್ದು, ವಿಶೇಷವಾಗಿ ಚೀನಾದಂತಹ ಕಮ್ಯುನಿಸ್ಟ್ ದೇಶಗಳಲ್ಲಿ ಕಾರ್ಯಾಚರಿಸುತ್ತದೆ. ಪಾಲಿಟ್ ಬ್ಯೂರೋ ದೇಶದ ನೀತಿಗಳನ್ನು ರೂಪಿಸುವ, ಮತ್ತು ಮುಖ್ಯ ಸರ್ಕಾರಿ ನಿರ್ಣಯಗಳನ್ನು ಕೈಗೊಳ್ಳುವ ಹಿರಿಯ ನಾಯಕರುಗಳನ್ನು ಒಳಗೊಂಡಿರುತ್ತದೆ. ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋ ದೇಶದ ಆಡಳಿತದಲ್ಲಿ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ.
ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಉದ್ಘಾಟನಾ ಅವಧಿಯಲ್ಲಿ ಚೀನೀ ಪ್ರಧಾನಿ ಮಾಡಿದ ಭಾಷಣ ಕೇವಲ ಒಂದು ರಾಜಕೀಯ ಹೇಳಿಕೆಯಷ್ಟೇ ಆಗಿರಲಿಲ್ಲ. ಬದಲಿಗೆ, ಅದು ದೇಶದ ಆಂತರಿಕ ನೀತಿಗಳ ತಜ್ಞರಿಂದ ತಿಂಗಳುಗಟ್ಟಲೆ ಮಾಹಿತಿ ಪಡೆದು, ಜಾಗರೂಕವಾಗಿ ಸಿದ್ಧಪಡಿಸಿದ ಭಾಷಣವಾಗಿತ್ತು. ಚೀನೀ ಕಾಂಗ್ರೆಸ್ ಕೇವಲ ಒಂದು ಸಾಂಕೇತಿಕವಾಗಿದ್ದು, ಸರ್ಕಾರ ಈಗಾಗಲೇ ಕೈಗೊಂಡಿರುವ ನಿರ್ಧಾರಗಳಿಗೆ ಅಧಿಕೃತ ಒಪ್ಪಿಗೆ ಸೂಚಿಸಲು ಮಾತ್ರವೇ ಸೀಮಿತವಾಗಿದೆ. ಆದರೆ, ಪ್ರಧಾನಿಯವರ ಭಾಷಣ ಟ್ರಂಪ್ ಅವರ ಹೊಸ ನೀತಿಗಳಿಂದ ಉಂಟಾಗಿರುವ ಅನಿಶ್ಚಿತತೆಗಳಿಂದ ಪ್ರಭಾವಿತವಾಗಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು.
ಚೀನಾದ ಈಗಿನ ಪ್ರಧಾನಿಯಾಗಿರುವ ಲಿ ಕಿಯಾಂಗ್ ಅವರು ಚೀನಾದ ಆರ್ಥಿಕ ಪ್ರಗತಿ ಮತ್ತು ಖರ್ಚಿಗೆ ಸಂಬಂಧಿಸಿದಂತೆ ಜಾಗರೂಕವಾದ ಯೋಜನೆಗಳನ್ನು ರೂಪಿಸಿದ್ದು, ಜಾಗತಿಕ ಸವಾಲುಗಳ ಹೊರತಾಗಿಯೂ ಚೀನಾ ಸ್ಥಿರವಾಗಿದೆ ಎಂಬುದನ್ನು ಪದೇ ಪದೇ ಒತ್ತಿ ಹೇಳಿದೆ.
ಚೀನಾದ ಪ್ರಮುಖ ಗುರಿಗಳು ಬಹುತೇಕ ಕಳೆದ ವರ್ಷದ ಗುರಿಗಳಂತೆಯೇ ಇದ್ದವು. ಅವೆಂದರೆ, 5% ಆರ್ಥಿಕ ಪ್ರಗತಿಯ ದರವನ್ನು ಸಾಧಿಸುವುದು, ರಕ್ಷಣಾ ಬಜೆಟ್‌ನಲ್ಲಿ 7.2% ಹೆಚ್ಚಳ, ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲು ದೀರ್ಘಾವಧಿಯ ಸಾಲ ನೀಡುವುದಾಗಿವೆ. ಲಿ ಕಿಯಾಂಗ್ ಅವರು ತನ್ನ ಭಾಷಣದಲ್ಲಿ ಈ ಗುರಿಗಳನ್ನು ಮರಳಿ ಪ್ರಸ್ತಾಪಿಸಿದ್ದಾರೆ.
ಪ್ರಧಾನಿಯ ಭಾಷಣದ ಮುಖ್ಯ ಗಮನ ನೂತನ ತಂತ್ರಜ್ಞಾನ ಉದ್ಯಮಗಳಲ್ಲಿ ಚೀನಾದ ಪ್ರಗತಿಯನ್ನು ವಿವರಿಸುವುದಾಗಿತ್ತು. ಅದರಲ್ಲೂ, ಲಿ ಕಿಯಾಂಗ್ ಕಳೆದ ಜನವರಿಯಲ್ಲಿ ಆರಂಭಗೊಂಡ, ಅಮೆರಿಕಾದ ಸ್ಪರ್ಧಿಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಗೆ ಸಿದ್ಧವಾಗಿರುವ ಡೀಪ್‌ಸೀಕ್ ಕೃತಕ ಬುದ್ಧಿಮತ್ತೆ ಮಾಡೆಲ್ ಯಶಸ್ಸನ್ನು ಶ್ಲಾಘಿಸಿದ್ದಾರೆ.
ಲಿ ಕಿಯಾಂಗ್ ಅವರು ಪಾಲಿಟ್ ಬ್ಯೂರೋ 2024ರಲ್ಲಿ ಪರಿಚಯಿಸಿದ 'ಎಐ ಪ್ಲಸ್' ಯೋಜನೆ ಆರ್ಥಿಕ ಪ್ರಗತಿಯನ್ನು ಉತ್ತೇಜಿಸಲು ಅತ್ಯಂತ ಮುಖ್ಯವಾಗಿದೆ ಎಂದಿದ್ದಾರೆ. ಚೀನಾದ ಆರ್ಥಿಕತೆ ಇಂದಿಗೂ ಕುಂಟುತ್ತಿದ್ದು, ಅದರ ಮೇಲೆ ವಸತಿ ಮಾರುಕಟ್ಟೆ ಪತನ, ಕುಸಿಯುತ್ತಿರುವ ಜನನ ದರ, ಮತ್ತು ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಗಳು ಕಾರಣವಾಗಿವೆ.
'ಎಐ ಪ್ಲಸ್' ಎನ್ನುವುದು ಕೃತಕ ಬುದ್ಧಿಮತ್ತೆಯನ್ನು ಉತ್ಪಾದನೆ, ಆರೋಗ್ಯ, ಮತ್ತು ಹಣಕಾಸಿನಂತಹ ಉದ್ಯಮಗಳಲ್ಲಿ ಒಳಗೊಂಡು, ಆ ಮೂಲಕ ನಾವೀನ್ಯತೆಗೆ ಉತ್ತೇಜನ ನೀಡಿ, ದಕ್ಷತೆಯನ್ನು ಹೆಚ್ಚಿಸಿ, ಚೀನಾದ ಆರ್ಥಿಕ ಪ್ರಗತಿಯನ್ನು ಮುನ್ನಡೆಸುವ ಯೋಜನೆಯಾಗಿದೆ.
ಚೀನಾ ತನ್ನ ಉದ್ಯಮಗಳನ್ನು ಬೆಂಬಲಿಸಲು ಸಬ್ಸಿಡಿ ನೀಡುವುದನ್ನು ಮುಂದುವರಿಸಲಿದೆ ಎಂದು ಲಿ ಕಿಯಾಂಗ್ ಹೇಳಿದ್ದು, ಆ ಮೂಲಕ ಚೀನೀ ಉತ್ಪನ್ನಗಳು ಅಮೆರಿಕಾ ಮತ್ತು ಯುರೋಪ್‌ನಲ್ಲಿ ಸ್ಪರ್ಧೆ ಒಡ್ಡಲಿವೆ. ಇಂತಹ ಬೆಳವಣಿಗೆ ವಾಷಿಂಗ್ಟನ್ ಮತ್ತು ಬ್ರುಸೆಲ್ಸ್ ನಾಯಕರಿಗೆ ಅಸಮಾಧಾನ ಉಂಟುಮಾಡುವುದು ಖಂಡಿತಾ.
ಯುರೋಪಿಯನ್ ಒಕ್ಕೂಟದ ರಾಜಧಾನಿಯಂತಿರುವ ಬ್ರುಸೆಲ್ಸ್, ಯುರೋಪಿಯನ್ ಕಮಿಷನ್ ಮತ್ತು ಯುರೋಪಿಯನ್ ಕೌನ್ಸಿಲ್‌ಗಳಂತಹ ಪ್ರಮುಖ ಸಂಸ್ಥೆಗಳನ್ನು ಹೊಂದಿದೆ. ಇದು ನೀತಿಗಳು ಮತ್ತು ಆಡಳಿತದ ನಡುವೆ ಸಮನ್ವಯ ಸಾಧಿಸಲು ನೆರವಾಗುತ್ತದೆ. ಚೀನಾದ ಸಬ್ಸಿಡಿಗಳು ನ್ಯಾಯಯುತವಲ್ಲದ ಸ್ಪರ್ಧೆಗೆ ಹಾದಿ ಮಾಡಿಕೊಟ್ಟು, ಯುರೋಪಿಯನ್ ಕಂಪನಿಗಳ ಮಾರುಕಟ್ಟೆ ಪಾಲು ಮತ್ತು ಲಾಭವನ್ನು ಕಡಿಮೆಗೊಳಿಸಿ, ಉದ್ಯೋಗ ನಷ್ಟ ಉಂಟಾಗುವಂತೆ ಮಾಡಿ, ಆರ್ಥಿಕ ಸವಾಲುಗಳನ್ನು ಸೃಷ್ಟಿಸುವ ಅಪಾಯ ಇರುವುದು ಯುರೋಪಿಯನ್ ಒಕ್ಕೂಟ ಹತಾಶವಾಗುವಂತೆ ಮಾಡಿದೆ.
ಭವಿಷ್ಯದ ಉದ್ಯಮಗಳಿಗೆ ಹೂಡಿಕೆಯನ್ನು ಉತ್ತೇಜಿಸುವ ಸಲುವಾಗಿ, ಒಂದು ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಲಿ ಕಿಯಾಂಗ್ ಹೇಳಿದ್ದಾರೆ. ಇದು ಜೈವಿಕ ಉತ್ಪಾದನೆ, ಕ್ವಾಂಟಮ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಮತ್ತು 6ಜಿ ತಂತ್ರಜ್ಞಾನಗಳಂತಹ ವಲಯಗಳಿಗೆ ಬೆಂಬಲ ನೀಡುವ ಗುರಿ ಹೊಂದಿದ್ದು, ಅವುಗಳ ಬೆಳವಣಿಗೆ ಮತ್ತು ಅಭಿವೃದ್ಧಿ ಸಾಧಿತವಾಗುವಂತೆ ಮಾಡುತ್ತದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಒಂದು ವರ್ಷದ ಹಿಂದೆ ತಜ್ಞರು ಊಹಿಸಿದ್ದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ಚೀನಾ ನಿವಾರಿಸಿದೆ. ಇಂತಹ ಸವಾಲುಗಳಿಗೆ ಕೋವಿಡ್-19 ಸಾಂಕ್ರಾಮಿಕದ ಕಟ್ಟುನಿಟ್ಟಿನ ಲಾಕ್ ಡೌನ್ ಮತ್ತು ಶ್ರೀಮಂತ ಔದ್ಯಮಿಕ ನಾಯಕರ ಅಧಿಕಾರವನ್ನು ಮೊಟಕುಗೊಳಿಸಲು ಕ್ಸಿ ಜಿನ್‌ಪಿಂಗ್ ಕೈಗೊಂಡ ಕ್ರಮಗಳು ಕಾರಣವಾಗಿದ್ದವು.
ಕ್ಸಿ ಪ್ರಮುಖ ಡೆವಲಪರ್‌ಗಳಿಂದ ಹಣ ಪಡೆಯುವುದನ್ನು ಮಿತಿಗೊಳಿಸಲು ಪ್ರಯತ್ನ ನಡೆಸಿದರಾದರೂ, ಎರಡು ಪ್ರಮುಖ ಕಂಪನಿಗಳು ಬಹುತೇಕ ನೆಲಕಚ್ಚಿದಾಗ ಈ ಯೋಜನೆ ವಿಫಲವಾಯಿತು. ಇದರ ಪರಿಣಾಮವಾಗಿ, ಆಸ್ತಿ ಬೆಲೆಗಳು ತಳ ಮುಟ್ಟಿದವು. ಇದರಿಂದಾಗಿ ಸಾರ್ವಜನಿಕರು ತಮ್ಮ ಖರ್ಚನ್ನು ಕಡಿಮೆಗೊಳಿಸಿ, ಯುವಕರಲ್ಲಿ ನಿರುದ್ಯೋಗ ಸಾಕಷ್ಟು ಹೆಚ್ಚಾಯಿತು.
ಬಹಳಷ್ಟು ಚೀನೀ ಅರ್ಥಶಾಸ್ತ್ರಜ್ಞರು ಕಳೆದ ವರ್ಷದ ಅಧಿಕೃತ ವರದಿಯಂತೆ 5% ಪ್ರಗತಿಯ ದರವನ್ನು ಸಾಧಿಸಲು ಸಾಧ್ಯವಾಗಿಲ್ಲ ಎಂದು ಭಾವಿಸಿದ್ದಾರೆ. ಆದರೆ, ಇದರ ಕುರಿತು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದವರು ತೀವ್ರ ಪರಿಣಾಮವನ್ನು ಎದುರಿಸಬೇಕಾಯಿತು. ಅವರೇನಾದರೂ ಚೀನಾದ ಆರ್ಥಿಕ ವ್ಯವಸ್ಥೆಯ ಭಾಗವಾಗಿದ್ದರೆ, ಅವರನ್ನು ಶಿಕ್ಷೆಗೆ ಒಳಪಡಿಸಲಾಯಿತು. ಅವರು ಅದರಿಂದ ಹೊರಗಿನವರಾಗಿದ್ದರೆ, ಅವರಿಗೆ ಮೌನವಾಗಿರುವಂತೆ ಎಚ್ಚರಿಕೆ ನೀಡಲಾಯಿತು.
ಇಷ್ಟೆಲ್ಲ ಆಗಿದ್ದರೂ, ಒಂದಷ್ಟು ಜನರು ಚೀನಾದ ಆರ್ಥಿಕತೆ ಸಣ್ಣ ನಗರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಚೀನಾದ ಶ್ರೀಮಂತ ಪೂರ್ವ ಕರಾವಳಿ ಪ್ರದೇಶದಿಂದ ದೂರವಿರುವ, ಕಡಿಮೆ ಅಭಿವೃದ್ಧಿ ಹೊಂದಿರುವ ಪ್ರದೇಶಗಳಿಗೆ ಬೆಂಬಲ ನೀಡುವ ಕ್ರಮಗಳು ಕಡೆಗೂ ಫಲಿತಾಂಶ ನೀಡುತ್ತಿವೆ ಎಂದು ಅವರು ಭಾವಿಸಿದ್ದಾರೆ.
ಪಾಲಿಟ್ ಬ್ಯೂರೋ ಅಭಿವೃದ್ಧಿ ಮುನ್ಸೂಚನೆಯನ್ನು ಹಿಂದಿನಂತೆಯೇ ಇಟ್ಟಿದ್ದರೂ, ಕೊರತೆ ಮಿತಿಯನ್ನು ಜಿಡಿಪಿಯ 3%ದಿಂದ 4%ಗೆ ಹೆಚ್ಚಿಸಿತ್ತು. ಇದರಿಂದ ಚೀನಾ ಸರ್ಕಾರದ ಖರ್ಚನ್ನು ಹೆಚ್ಚಿಸಿ, ಆರ್ಥಿಕತೆಗೆ ಉತ್ತೇಜನ ನೀಡುವ ಪ್ರಯತ್ನ ನಡೆಸುತ್ತಿರುವಂತೆ ಕಾಣುತ್ತಿದೆ.
ಕೊರತೆಯ ಮಿತಿಯನ್ನು ಹೆಚ್ಚಿಸುವುದು ಎಂದರೆ, ಸರ್ಕಾರ ಸ್ಚತಃ ತಾನು ಹೆಚ್ಚಿನ ಸಾಲವನ್ನು ಪಡೆಯಲು ಅನುಮತಿ ನೀಡುವುದಾಗಿದ್ದು, ದೇಶದ ಒಟ್ಟು ಆದಾಯದ (ಜಿಡಿಪಿ) 3% ಇದ್ದ ಸಾಲದ ಪ್ರಮಾಣವನ್ನು ಪ್ರಮಾಣವನ್ನು ಈ ಬಾರಿ ಜಿಡಿಪಿಯ 4%ಗೆ ಹೆಚ್ಚಿಸಿದೆ.
ಚೀನೀ ಸರ್ಕಾರದ ಗುರಿ ಗ್ರಾಹಕರು ಹೆಚ್ಚಿನ ಹಣವನ್ನು ವೆಚ್ಚ ಮಾಡುವಂತೆ ಪ್ರೇರೇಪಿಸುವುದು ಎಂದು ಲಿ ಹೇಳಿದ್ದಾರೆ. ಆದರೆ, ಸದ್ಯದ ಸನ್ನಿವೇಶದಲ್ಲಿ ಚೀನಾ ಕೃತಕ ಬುದ್ಧಿಮತ್ತೆ ಮತ್ತು ರೊಬಾಟಿಕ್ಸ್‌ನಂತಹ ಆಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಪ್ರಯತ್ನ ನಡೆಸುತ್ತಿದೆ.
ಮುಂದಿನ ತಿಂಗಳು ಬೀಜಿಂಗ್ ಹಾಫ್ ಮ್ಯಾರಥಾನ್ (21.1 ಕಿಲೋಮೀಟರ್ ಅಥವಾ 13.1 ಮೈಲಿ ಓಟ) ನಡೆಯಲಿದ್ದು, ಇದರಲ್ಲಿ ರೋಬಾಟ್‌ಗಳಿಗೂ ವಿಶೇಷ ಓಟವನ್ನು ಆಯೋಜಿಸಲಾಗಿದೆ. ಅಂದರೆ, ಮಾನವರ ಓಟದೊಡನೆ, ರೋಬಾಟ್‌ಗಳೂ ಸಹ ತಮ್ಮೊಡನೆ ಸ್ಪರ್ಧಿಸಲಿವೆ. ಇದು ರೋಬಾಟಿಕ್ ಮತ್ತು ತಾಂತ್ರಿಕ ನಾವೀನ್ಯತೆಗಳತ್ತ ಚೀನಾದ ಗಮನವನ್ನು ಪ್ರದರ್ಶಿಸಿದೆ ಎಂದು ಲಿ ಹೇಳಿದ್ದಾರೆ.
ಕಳೆದ ವಾರದ ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಚೀನಾದ ತಂತ್ರಜ್ಞಾನ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಅಮೆರಿಕಾಗೆ ತೆರಳದಂತೆ ಸೂಚನೆ ನೀಡಲಾಗಿದೆ. ಈ ನಡೆ, ಅಮೆರಿಕಾದೊಡನೆ ಸ್ಪರ್ಧಿಸುವುದರ ಜೊತೆಗೆ, ಚೀನಾ ತನ್ನ ಸ್ವಂತ ತಂತ್ರಜ್ಞಾನ ಉದ್ಯಮವನ್ನೂ ಬೆಳೆಸಬೇಕು ಎನ್ನುವ ಜಾಗೃತಿಯನ್ನೂ ಮೂಡಿಸುತ್ತಿದೆ.
ಇಲ್ಲಿಯ ತನಕ, ಎರಡು ಪ್ರಮುಖ ಜಾಗತಿಕ ಶಕ್ತಿಗಳಾದ ಅಮೆರಿಕಾ ಮತ್ತು ಚೀನಾಗಳ ನಡುವೆ ಸಹಕಾರವೂ ಇತ್ತು. ಬಹಳಷ್ಟು ಚೀನೀ ವಿದ್ಯಾರ್ಥಿಗಳು ಅಮೆರಿಕಾದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ನಡೆಸಿದ್ದಾರೆ. ಅದರೊಡನೆ, ಅಮೆರಿಕಾದ ಕಂಪನಿಗಳಂತೂ ಚೀನಾದಲ್ಲಿ ಅಪಾರ ಪ್ರಮಾಣದ ಹೂಡಿಕೆ ನಡೆಸಿವೆ.
ಚೀನೀ ಕಾಂಗ್ರೆಸ್‌ನಲ್ಲಿ, ಶಿಕ್ಷಣ ಸಚಿವರಾದ ಹುವಾಯ್ ಜಿನ್‌ಪೆಂಗ್ ಅವರು ಮುಂದಿನ ವರ್ಷ ಶಾಲಾ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಜೈವಿಕ ತಂತ್ರಜ್ಞಾನವನ್ನು ಅಳವಡಿಸುವುದು ಶಿಕ್ಷಣ ಇಲಾಖೆಯ ಗುರಿ ಎಂದಿದ್ದಾರೆ. ಅವರು ಎಲ್ಲಾ ಶೈಕ್ಷಣಿಕ ಹಂತಗಳಲ್ಲಿ ಗಣಿತ ಮತ್ತು ಗಣಕ ವಿಜ್ಞಾನ ಬೋಧನೆಯನ್ನು ಉತ್ತಮಗೊಳಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.
ಇನ್ನು ರಕ್ಷಣಾ ವಿಚಾರಕ್ಕೆ ಬಂದರೆ, ಪ್ರಧಾನಿಯವರ ಭಾಷಣ ಎಂದಿನಂತೆ ತೈವಾನ್ ಅನ್ನು ಶಾಂತಿಯುತವಾಗಿ ಚೀನಾದೊಡನೆ ವಿಲೀನಗೊಳಿಸುವ ವಿಚಾರವನ್ನು ಒಳಗೊಂಡಿತ್ತು. ತೈವಾನ್ ಅಮೆರಿಕಾದೊಡನೆ ಇರುವ ಸ್ನೇಹದ ಆಧಾರದಲ್ಲಿ, ತನ್ನ ಸ್ವಾತಂತ್ರ್ಯವನ್ನು ಘೋಷಿಸದಿದ್ದರೆ, ವಿಲೀನ ಪ್ರಕ್ರಿಯೆ ಶಾಂತಿಯುತವಾಗಿ ಸಾಗಲಿದೆ ಎಂದು ಚೀನಾ ಹೇಳಿದೆ.
ಮಂಗಳವಾರ, ಮಾರ್ಚ್ 4ರಂದು ಡೊನಾಲ್ಡ್ ಟ್ರಂಪ್ ಅವರಿಂದ ರಕ್ಷಣಾ ಅಧೀನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಎಲ್‌ಬ್ರಿಜ್ ಕೋಲ್ಬಿ ಅವರು ತೈವಾನ್‌ಗೆ ಆತಂಕ ಉಂಟುಮಾಡುವಂತಹ ಹೇಳಿಕೆಯೊಂದನ್ನು ರವಾನಿಸಿದ್ದಾರೆ. ತೈವಾನ್ ಸ್ವಾತಂತ್ರ್ಯ ಅಮೆರಿಕಾದ ಆದ್ಯತೆಯಲ್ಲ ಎಂದು ಅವರು ಹೇಳಿದ್ದು, ದ್ವೀಪ ರಾಷ್ಟ್ರವಾದ ತೈವಾನ್ ತನ್ನ ರಕ್ಷಣಾ ಬಜೆಟ್ ಅನ್ನು ತನ್ನ ಜಿಡಿಪಿಯ 10%ಗೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ಲಿ ಕಿಯಾಂಗ್ ಅವರು ಚೀನೀ ಕಮ್ಯುನಿಸ್ಟ್ ಪಕ್ಷ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಡನೆ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ. ಚೀನಾ ಮೇಲೆ ವಿದೇಶಗಳಿಂದ ಒತ್ತಡ ದಿನೇ ದಿನೇ ಹೆಚ್ಚಾಗುತ್ತಿದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ಟೋನಿ ಬ್ಲೇರ್ ಇನ್ಸ್ಟಿಟ್ಯೂಟ್ ನಲ್ಲಿ ಚೀನೀ ರಾಜಕೀಯ ವಿಶ್ಲೇಷಕರಾಗಿರುವ ರೂಬಿ ಒಸ್ಮಾನ್ ಅವರು ಚೀನಾ ಪ್ರಧಾನಿಯವರ ಭಾಷಣದ ಪ್ರಮುಖ ಅಂಶ ಸ್ವಾವಲಂಬಿಯಾಗಿ ಬೆಳೆಯುವುದಾಗಿದೆ ಎಂದಿದ್ದಾರೆ. ಚೀನಾದ ನಾಯಕರು ಈಗ ಅಮೆರಿಕಾ ಚೀನಾವನ್ನು ಏಕಾಂಗಿಯಾಗಿಸಲು ಪ್ರಯತ್ನ ನಡೆಸುತ್ತಿರುವ ಸಂದರ್ಭದಲ್ಲಿ, ತಂತ್ರಜ್ಞಾನ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸಲು ಸ್ವಾವಲಂಬನೆ ಹೊಂದುವುದು ಮತ್ತು ಇತರರ ಮೇಲಿನ ಅವಲಂಬನೆ ನಿಲ್ಲಿಸುವುದು ಮುಖ್ಯ ಎಂದು ಭಾವಿಸಿದ್ದಾರೆ ಎಂಬುದಾಗಿ ರೂಬಿ ವಿವರಿಸಿದ್ದಾರೆ.
ಚೀನಾದಲ್ಲಿನ ಬೆಳವಣಿಗೆ ಜಾಗತಿಕ ಪರಿಣಾಮವನ್ನು ಬೀರುವ ಸ್ಥಳೀಯ ಸಭೆಯಾಗಿತ್ತು ಎಂದು ರೂಬಿ ಅಭಿಪ್ರಾಯ ಪಟ್ಟಿದ್ದಾರೆ. "ಚೀನಾ ಸಾಮಾನ್ಯವಾಗಿ ತನ್ನ ಹೇಳಿಕೆಗಳಲ್ಲಿ ಅಮೆರಿಕಾ ಅಥವಾ ಬೇರಾವುದೋ ದೇಶವನ್ನು ನೇರವಾಗಿ ಹೆಸರಿಸಿ ಮಾತನಾಡುವುದಿಲ್ಲ. ಆದರೆ, ಈ ಬಾರಿ ಚೀನಾ ಅಮೆರಿಕಾದ ಪ್ರಭಾವದ ಕುರಿತು ಹೆಚ್ಚಾಗಿ ಚರ್ಚಿಸಿರುವುದು, ಆ ಕುರಿತು ಕಾಳಜಿ ಹೊಂದಿರುವುದು ವ್ಯಕ್ತವಾಗಿದೆ" ಎಂದು ರೂಬಿ ಹೇಳಿದ್ದಾರೆ.
(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)