ಜನರಲ್ ತಿಮ್ಮಯ್ಯ online desk
ಅಂಕಣಗಳು

ಜನರಲ್ ತಿಮ್ಮಯ್ಯ ಹಾಗೂ ಮಾಣಿಕ್‌ಶಾ: ರಾಜಕೀಯ ಚದುರಂಗದ ನಡುವೆ ಕರ್ತವ್ಯ ಪ್ರಜ್ಞೆ

ವಿ ಕೆ ಕೃಷ್ಣ ಮೆನನ್ ಅವರು ಭಾರತೀಯ ಸೇನಾ ಮುಖ್ಯಸ್ಥರಾದ ಜನರಲ್ ಕೆ ಎಸ್ ತಿಮ್ಮಯ್ಯ ಅವರೊಡನೆ ಉತ್ತಮ ಸಂಬಂಧ ಹೊಂದಿರಲಿಲ್ಲ.

ಒಂದು ಕಾಲದಲ್ಲಿ ಕೃಷ್ಣ ಮೆನನ್ ಮತ್ತು ಬಿ ಎಂ ಕೌಲ್ ಅವರು ಯೋಜಿಸಿದ್ದ ಕುತಂತ್ರದಿಂದ ಸ್ಯಾಮ್ ಮಾಣಿಕ್‌ಶಾ ಅವರನ್ನೂ ದೇಶ ದ್ರೋಹಿ ಎಂಬಂತೆ ಬಿಂಬಿಸುವ ಪ್ರಯತ್ನವೂ ನಡೆದಿತ್ತು!

ಭಾರತದ ಆಗಿನ ರಕ್ಷಣಾ ಸಚಿವರಾದ ವಿ ಕೆ ಕೃಷ್ಣ ಮೆನನ್ ಮತ್ತು ಸ್ಯಾಮ್ ಮಾಣಿಕ್‌ಶಾ ಅವರ ನಡುವೆ ನಡೆದ ಮೊದಲ ಚಕಮಕಿಯ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿತ್ತು. ಆ ಸಮಯದಲ್ಲಿ ಕೃಷ್ಣ ಮೆನನ್ ಅವರಿಗೆ ಆತ್ಮೀಯರಾಗಿದ್ದ ಲೆಫ್ಟಿನೆಂಟ್ ಜನರಲ್ ಬಿ ಎಂ ಕೌಲ್ ಅವರು ಭಾರತೀಯ ಸೇನೆಯಲ್ಲಿ ಮುಖ್ಯ ಸ್ಥಾನವನ್ನು ಹೊಂದಿದ್ದರು. ಅವರು ಈ ಸಂದರ್ಭದಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ವಿ ಕೆ ಕೃಷ್ಣ ಮೆನನ್ ಅವರು ಭಾರತೀಯ ಸೇನಾ ಮುಖ್ಯಸ್ಥರಾದ ಜನರಲ್ ಕೆ ಎಸ್ ತಿಮ್ಮಯ್ಯ ಅವರೊಡನೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಕೃಷ್ಣ ಮೆನನ್ ಅವರು ಜನರಲ್ ತಿಮ್ಮಯ್ಯ ಅವರನ್ನು ಸೇನಾ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಲು ಹಲವಾರು ಬಾರಿ ಪ್ರಯತ್ನ ನಡೆಸಿದ್ದರು. ಅವರು ತಿಮ್ಮಯ್ಯ ಮತ್ತು ಸೇನೆಯ ನಡುವೆ ಅಂತರ ಸೃಷ್ಟಿಸಲು ಸ್ಯಾಮ್ ಮಾಣಿಕ್‌ಶಾ ಅವರನ್ನು ಬಳಸಿಕೊಳ್ಳಲೂ ಪ್ರಯತ್ನ ನಡೆಸಿದ್ದರು!

1962ರಲ್ಲಿ ನಡೆದ ಭಾರತ - ಚೀನಾ ಯುದ್ಧದಲ್ಲಿ ಭಾರತದ ಸೋಲಿಗೆ ಆಗಿನ ರಕ್ಷಣಾ ಸಚಿವರಾಗಿದ್ದ ವಿ ಕೆ ಕೃಷ್ಣ ಮೆನನ್ ಮುಖ್ಯ ಪಾತ್ರ ವಹಿಸಿದ್ದರು ಎಂಬ ಆರೋಪಗಳಿವೆ.

ಚೀನಾ ಭಾರತಕ್ಕೆ ಅಪಾಯಕಾರಿಯಾಗಿದ್ದು, ಅದನ್ನು ಎದುರಿಸಲು ರಕ್ಷಣಾ ಸಚಿವರಾದ ಮೆನನ್ ಅವರು ಭಾರತೀಯ ಸೇನೆಯನ್ನು ಸಿದ್ಧಗೊಳಿಸಿಲ್ಲ ಎಂದು ತಿಮ್ಮಯ್ಯನವರು ನೆಹರೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಆ ಬಳಿಕ, ಮೆನನ್ ಮತ್ತು ತಿಮ್ಮಯ್ಯನವರ ನಡುವಿನ ಉದ್ವಿಗ್ನತೆ ತಲೆದೋರಿತ್ತು ಎನ್ನಲಾಗಿದೆ.

ಮೆನನ್ ಅವರು ಮಾಣಿಕ್‌ಶಾ ಅವರನ್ನು ಮಾಜಿ ಸೇನಾ ಮುಖ್ಯಸ್ಥರಾದ ತಿಮ್ಮಯ್ಯನವರಿಂದ ದೂರ ಮಾಡಲು ಪ್ರಯತ್ನಗಳನ್ನೂ ನಡೆಸಿದ್ದರು.

ಆ ಸಮಯದಲ್ಲಿ, ಜನರಲ್ ತಿಮ್ಮಯ್ಯ ಅವರು ಭಾರತೀಯ ಸೇನಾ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಆದರೆ ಪ್ರಧಾನಿ ಜವಾಹರಲಾಲ್ ನೆಹರೂ ಅವರು ತಿಮ್ಮಯ್ಯನವರನ್ನು ಸೇನಾ ಮುಖ್ಯಸ್ಥರ ಸ್ಥಾನದಲ್ಲಿ ಮುಂದುವರಿಯುವಂತೆ ಮನ ಒಲಿಸಿದರು.

ಆದರೆ ತಿಮ್ಮಯ್ಯ ಸೇನಾ ಮುಖ್ಯಸ್ಥರ ಸ್ಥಾನದಲ್ಲಿ ಮತ್ತೆ ಮುಂದುವರಿಯುವುದು ಮೆನನ್ ಅವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅವರು ತಿಮ್ಮಯ್ಯನವರನ್ನು ಸೇನಾ ಮುಖ್ಯಸ್ಥರ ಸ್ಥಾನದಿಂದ ಕೆಳಗಿಳಿಸಲು ಶತಪ್ರಯತ್ನ ಮುಂದುವರಿಸಿದ್ದರು.

1962ರ ಯುದ್ಧಕ್ಕೂ ಮುನ್ನ, ರಕ್ಷಣಾ ಸಚಿವರಾದ ಕೃಷ್ಣ ಮೆನನ್ ಭಾರತೀಯ ಸೇನೆಯ ಒಳಗೆ ಭಿನ್ನಾಭಿಪ್ರಾಯಗಳನ್ನು ಮೂಡಿಸಲು ಪ್ರಯತ್ನ ನಡೆಸಿದ್ದರು. ಅವರು ಸೇನಾ ಮುಖ್ಯಸ್ಥರ ಬೆನ್ನ ಹಿಂದಿನಿಂದ ಒಂದಷ್ಟು ಸೇನಾ ಜನರಲ್‌ಗಳ ಜೊತೆಗೂ ಸಮಾಲೋಚನೆ ನಡೆಸಿದ್ದರು. ಇದು ಭಾರತೀಯ ಸೇನಾ ನಾಯಕತ್ವದ ಒಳಗೇ ಪರಸ್ಪರ ಅಪನಂಬಿಕೆ ಮೂಡಲು ಕಾರಣವಾಯಿತು.

ಕೃಷ್ಣ ಮೆನನ್ ಮೊದಲ ಬಾರಿಗೆ ಮಾಣಿಕ್‌ಶಾ ಅವರನ್ನು ಭೇಟಿಯಾದಾಗ ಅವರು ಮೇಜರ್ ಜನರಲ್ ಹುದ್ದೆಯಲ್ಲಿದ್ದು, ಜಮ್ಮು ಪ್ರದೇಶದ ಕದನ ವಿರಾಮದ ಜವಾಬ್ದಾರಿ ಹೊಂದಿದ್ದ 26 ಡಿವಿಷನ್ ನೇತೃತ್ವ ಹೊಂದಿದ್ದರು.

ಮೆನನ್ ಸ್ಯಾಮ್ ಮಾಣಿಕ್‌ಶಾ ಅವರ ಬಳಿ ಜನರಲ್ ತಿಮ್ಮಯ್ಯ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿದ್ದರು. ವಾಸ್ತವವಾಗಿ ಜನರಲ್ ತಿಮ್ಮಯ್ಯನವರು ಓರ್ವ ಅತ್ಯುತ್ತಮ ಸೇನಾಧಿಕಾರಿಯಾಗಿದ್ದು, ತನ್ನ ಅಸಾಧಾರಣ ಕೌಶಲಗಳು ಮತ್ತು ನೈತಿಕ ಮೌಲ್ಯಗಳಿಗೆ ಹೆಸರಾಗಿದ್ದರು. ಸ್ಯಾಮ್ ಮಾಣಿಕ್‌ಶಾ ಅವರೂ ಜನರಲ್ ತಿಮ್ಮಯ್ಯ ಅವರ ಕುರಿತು ಅಪಾರ ಗೌರವ ಹೊಂದಿದ್ದರು. ಸಚಿವರ ಪ್ರಶ್ನೆಗೆ ಪ್ರತಿಯಾಗಿ, "ಸಚಿವರೇ, ನನ್ನ ಮೇಲಧಿಕಾರಿಯವರ ಕುರಿತು ನಾನು ಯಾವುದೇ ವೈಯಕ್ತಿಕ ಅಭಿಪ್ರಾಯಗಳನ್ನು ಹೊಂದುವಂತಿಲ್ಲ" ಎಂದಿದ್ದರು. "ಇಂದು ನಾನು ಅಭಿಪ್ರಾಯ ಹೇಳಿದರೆ, ನಾಳೆ ನೀವು ನನ್ನ ಬ್ರಿಗೇಡಿಯರ್‌ಗಳು ಮತ್ತು ಕರ್ನಲ್‌ಗಳ ಬಳಿಯೂ ನನ್ನ ಕುರಿತು ಅಭಿಪ್ರಾಯ ಕೇಳಲು ಆರಂಭಿಸುತ್ತೀರಿ. ಅದು ಸೇನೆಯ ಶಿಸ್ತನ್ನು ಹಾಳುಗೆಡವಲು ಅತ್ಯಂತ ಕ್ಷಿಪ್ರವಾದ ವಿಧಾನ. ಆದ್ದರಿಂದ ಇನ್ನು ಮುಂದೆ ಯಾವತ್ತೂ ದಯವಿಟ್ಟು ಇಂತಹ ಕೆಲಸ ಮಾಡಬೇಡಿ" ಎಂದು ಸ್ಪಷ್ಟವಾಗಿ ಹೇಳಿದ್ದರು.

ಮಾಣಿಕ್‌ಶಾ ಅವರ ಪ್ರತಿಕ್ರಿಯೆ ಸಚಿವರನ್ನು ಕೋಪಗೊಳಿಸಿತ್ತು. ಮೆನನ್ ಮಾಣಿಕ್‌ಶಾ ಅವರನ್ನು ಬ್ರಿಟಿಷರಂತೆ ಯೋಚಿಸುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿ, "ನಾನು ಮನಸ್ಸು ಮಾಡಿದರೆ ತಿಮ್ಮಯ್ಯನವರನ್ನು ಹುದ್ದೆಯಿಂದ ಕೆಳಗಿಳಿಸಬಲ್ಲೆ!" ಎಂದು ಎಚ್ಚರಿಸಿದ್ದರು.

ದೇಶದ ರಕ್ಷಣಾ ಸಚಿವರಿಗೆ ಸೇನಾ ಮುಖ್ಯಸ್ಥರನ್ನು ಅವರ ಹುದ್ದೆಯಿಂದ ಕೆಳಗಿಳಿಸುವ ಅಧಿಕಾರವಿದೆ ಎಂದು ಮಾಣಿಕ್‌ಶಾ ಅವರಿಗೂ ತಿಳಿದಿತ್ತು. ಆದರೆ, ಅವರು ಸೇನಾ ಮುಖ್ಯಸ್ಥರ ಕುರಿತು ತನ್ನ ಅಭಿಪ್ರಾಯವನ್ನು ಹೇಳುವುದನ್ನು ಸ್ಪಷ್ಟವಾಗಿ ನಿರಾಕರಿಸಿ, ತನ್ನ ಸೇನಾ ಮೌಲ್ಯಗಳನ್ನು ಪ್ರತಿಪಾದಿಸಿದ್ದರು.

ಇದೆಲ್ಲದರ ಜೊತೆಗೆ, ಮಾಣಿಕ್‌ಶಾ ಅವರು ಯೋಧರನ್ನು ಮನೆಗಳನ್ನು ನಿರ್ಮಿಸುವ ಕಾರ್ಯಕ್ಕೆ ನಿಯೋಜಿಸಲು ನೇರವಾಗಿಯೇ ನಿರಾಕರಿಸಿದ್ದರು. ಇಂತಹ ಕೆಲಸಗಳಿಗೆ ಸೇನೆಯನ್ನು ಬಳಸುವುದು ಸೂಕ್ತವಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು.

ನನ್ನ ಕಮಾಂಡಿನಲ್ಲಿ ಕಾರ್ಯ ನಿರ್ವಹಿಸುವ ಯೋಧರ ಕೆಲಸ ಯುದ್ಧಕ್ಕೆ ಸಿದ್ಧರಾಗುವುದೇ ಹೊರತು, ಕಡಿಮೆ ಬೆಲೆಯ ಕೂಲಿ ಕಾರ್ಮಿಕರ ಕೆಲಸ ಮಾಡುವುದಲ್ಲ ಎಂದು ಮಾಣಿಕ್‌ಶಾ ಸ್ಪಷ್ಟವಾಗಿ ಅಭಿಪ್ರಾಯ ಪಟ್ಟಿದ್ದರು. ಇದು ಮೆನನ್ ಅವರನ್ನು ಕೋಪಗೊಳಿಸಿ, ಅವರು ಮಾಣಿಕ್‌ಶಾ ಅವರನ್ನು ನಿಭಾಯಿಸಲು ಮೇಜರ್ ಜನರಲ್ ಬಿ ಎಂ ಕೌಲ್ ಅವರ ನೆರವು ಕೋರಿದ್ದರು.

ದ್ವೇಷ ಭಾವನೆಯನ್ನು ತುಂಬಿಕೊಂಡ ಮೆನನ್ ಮಾಣಿಕ್‌ಶಾ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲು ಪ್ರಯತ್ನ ನಡೆಸಿದ್ದರು. ಅವರು ಮಾಣಿಕ್‌ಶಾ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ, ನ್ಯಾಯಾಲಯದ ವಿಚಾರಣೆ ಆರಂಭಿಸುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ಬಿ ಎಂ ಕೌಲ್ ಮಾಣಿಕ್‌ಶಾ ಅವರನ್ನು ರಹಸ್ಯವಾಗಿ ಗಮನಿಸಿ, ಬೇಹುಗಾರಿಕೆ ನಡೆಸಲು ಜನರನ್ನು ಕಳುಹಿಸಿದ್ದರು. ಮಾಣಿಕ್‌ಶಾ ಅವರನ್ನು ಇನ್ನೇನು ಸೇನೆಯಿಂದ ಕಿತ್ತುಹಾಕುವ ಸಾಧ್ಯತೆಗಳಿವೆ ಎಂದು ಸಾಕಷ್ಟು ಜನರು ಭಾವಿಸಿದ್ದರು.

ನ್ಯಾಯಾಂಗ ವಿಚಾರಣೆಯ ನೇತೃತ್ವವನ್ನು ವೆಸ್ಟರ್ನ್ ಕಮಾಂಡಿನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ದೌಲತ್ ಸಿಂಗ್ ವಹಿಸಿದ್ದರು. ಅವರು ಪ್ರಾಮಾಣಿಕ ಮತ್ತು ನ್ಯಾಯಪರ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ದೌಲತ್ ಸಿಂಗ್, ಮಾಣಿಕ್‌ಶಾ ಅವರನ್ನು ಎಲ್ಲ ಪ್ರಕರಣಗಳಿಂದ ಮುಕ್ತರಾಗಿಸಿದರು.

ಮಾಣಿಕ್‌ಶಾ ಅವರನ್ನು ನ್ಯಾಯಾಲಯ ಸಂಪೂರ್ಣವಾಗಿ ದೋಷಮುಕ್ತರಾಗಿ ಘೋಷಿಸುವ ಮುನ್ನವೇ ಚೀನಾ - ಭಾರತ ಯುದ್ಧ ಆರಂಭಗೊಂಡಿತು. ವಿಚಾರಣೆ ಇನ್ನೂ ನಡೆಯುತ್ತಿದ್ದರಿಂದ, ಮಾಣಿಕ್‌ಶಾ ಅವರು ಯುದ್ಧದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.

ಇದೆಲ್ಲ ಬೆಳವಣಿಗೆಗಳ ಪರಿಣಾಮವಾಗಿ, ಭಾರತೀಯ ಸೇನೆ ಚೀನಾ ವಿರುದ್ಧದ ಯುದ್ಧದಲ್ಲಿ ಬಹುದೊಡ್ಡ ಸೋಲನ್ನು ಅನುಭವಿಸಿತು. ಭಾರತದ ಸೋಲಿಗೆ ಮೆನನ್ ಮತ್ತು ಕೌಲ್ ಅವರೇ ಕಾರಣ ಎಂದು ಆರೋಪಿಸಲಾಗಿ, ಅವರಿಬ್ಬರನ್ನೂ ಅವರ ಸ್ಥಾನಗಳಿಂದ ಕೆಳಗಿಳಿಸಲಾಯಿತು.

ನವೆಂಬರ್ 1962ರಲ್ಲಿ ಜವಾಹರಲಾಲ್ ನೆಹರೂ ಅವರು ಮಾಣಿಕ್‌ಶಾ ಬಳಿ IV ಕಾರ್ಪ್ಸ್ ಜವಾಬ್ದಾರಿ ವಹಿಸುವಂತೆ ಮನವಿ ಮಾಡಿಕೊಂಡರು. ಆದರೆ ಮಾಣಿಕ್‌ಶಾ ತನ್ನ ವಿಚಾರಣೆ ತನ್ನ ವಿರುದ್ಧದ ಷಡ್ಯಂತ್ರದ ಭಾಗವಾಗಿದ್ದು, ಅದರಿಂದಾಗಿ ತನ್ನ ಬಡ್ತಿ ಹದಿನೆಂಟು ತಿಂಗಳು ವಿಳಂಬಗೊಂಡಿತು ಎಂದಿದ್ದರು. ಅದಕ್ಕೆ ನೆಹರೂ ಮಾಣಿಕ್‌ಶಾ ಬಳಿ ಕ್ಷಮೆ ಕೋರಿದ್ದರು.

ಆ ಬಳಿಕ, ಡಿಸೆಂಬರ್ 2, 1962ರಂದು ಮಾಣಿಕ್‌ಶಾ ಅವರನ್ನು ತೇಜ್‌ಪುರದ Iv ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ಆಗಿ ನಿಯೋಜಿಸಲಾಯಿತು.

ಜನರಲ್ ತಿಮ್ಮಯ್ಯ: ಕೊಡಗಿನಿಂದ ಆರಂಭಗೊಂಡ ಹಿರಿಮೆ

ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಅವರು ಮಾರ್ಚ್ 31, 1906ರಂದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಜನಿಸಿದರು. ಅವರು ಕಾಫಿ ಬೆಳೆಗಾರರ ಕುಟುಂಬದಲ್ಲಿ, ಸುಬ್ಬಯ್ಯ ಮತ್ತು ಸೀತಮ್ಮನವರ ಪುತ್ರನಾಗಿ ಜನ್ಮತಾಳಿದರು.

ಜನರಲ್ ತಿಮ್ಮಯ್ಯ ಕೂನೂರಿನ ಸೈಂಟ್ ಜೋಸೆಫರ ಕಾಲೇಜಿನಲ್ಲಿ ಆರಂಭಿಕ ವ್ಯಾಸಂಗ ನಡೆಸಿದರು. ಬಳಿಕ ತನ್ನ ಶಿಕ್ಷಣವನ್ನು ಬೆಂಗಳೂರಿನ ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು.

ಜನರಲ್ ತಿಮ್ಮಯ್ಯನವರು ಕುಟುಂಬದಲ್ಲಿ ಎರಡನೇ ಮಗನಾಗಿದ್ದರು. ಅವರು ಇಬ್ಬರು ಸೋದರರಾದ ಪೊನ್ನಪ್ಪ ಮತ್ತು ಸೋಮಯ್ಯ, ಮೂವರು ಸೋದರಿಯರಾದ ಗಂಗು, ದಾಚು, ಮತ್ತು ಅಮ್ಮವ್ವರನ್ನು ಹೊಂದಿದ್ದರು. ಮೂವರೂ ಸಹೋದರರು ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಿದ್ದರು.

1935 ಜನವರಿಯಲ್ಲಿ ಜನರಲ್ ತಿಮ್ಮಯ್ಯ ಬೆಂಗಳೂರಿನ ನೀನಾ ಕಾರ್ಯಪ್ಪನವರನ್ನು ವಿವಾಹವಾದರು. ವಿವಾಹದ ಬಳಿಕ ಅವರು ಕ್ವೆಟ್ಟಾದಲ್ಲಿ (ಇಂದಿನ ಪಾಕಿಸ್ತಾನ) ವಾಸ್ತವ್ಯ ಹೂಡಿದರು. ಅದೇ ವರ್ಷ ಆ ಪ್ರದೇಶದಲ್ಲಿ ಭಾರೀ ಭೂಕಂಪ ಉಂಟಾಯಿತು. ಭೂಕಂಪ ಪೀಡಿತರಿಗೆ ನೆರವಾಗಲು ನೀನಾ ಸಕ್ರಿಯವಾಗಿ ಕಾರ್ಯಾಚರಿಸಿದರು. ಅವರ ನಿಸ್ವಾರ್ಥ ಸೇವೆಗಾಗಿ ಅವರಿಗೆ 'ಕೈಸರ್ ಎ ಹಿಂದ್' ಪುರಸ್ಕಾರ ನೀಡಿ ಗೌರವಿಸಲಾಯಿತು.

ಇದೇ ಸಮಯದಲ್ಲಿ, ಫೆಬ್ರವರಿ 4ರಂದು ತಿಮ್ಮಯ್ಯ ಅವರನ್ನು ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಲಾಯಿತು. ಬಳಿಕ, ಮಾರ್ಚ್ 20, 1936ರಂದು ತಿಮ್ಮಯ್ಯ ದಂಪತಿ ಮಿರೀಲಿ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಎಪ್ರಿಲ್ 1936ರಲ್ಲಿ ಮದ್ರಾಸಿನ ಯುನಿವರ್ಸಿಟಿ ಟ್ರೈನಿಂಗ್ ಕಾರ್ಪ್ಸ್‌ನ ಅಧಿಕಾರಿಯಾಗಿ ನೇಮಕಗೊಂಡರು. ಅಲ್ಲಿ ತಿಮ್ಮಯ್ಯ ಮುಂದಿನ ನಾಲ್ಕು ವರ್ಷಗಳ ಕಾಲ ಕಾರ್ಯಾಚರಿಸಿದರು.

ಮೇ 7, 1957ರಂದು ಜನರಲ್ ಸುಬ್ಬಯ್ಯ ತಿಮ್ಮಯ್ಯ ಭಾರತೀಯ ಸೇನೆಯ ಆರನೇ ಮುಖ್ಯಸ್ಥರಾಗಿ ನೇಮಕಗೊಂಡರು. 1959ರಲ್ಲಿ, ರಕ್ಷಣಾ ಸಚಿವರಾದ ವಿ ಕೆ ಮೆನನ್ ಅವರೊಡನೆ ತಲೆದೋರಿದ ಭಿನ್ನಾಭಿಪ್ರಾಯದ ಪರಿಣಾಮವಾಗಿ ರಾಜೀನಾಮೆ ಸಲ್ಲಿಸಿದರು. ಆದರೆ, ಪ್ರಧಾನಿ ಜವಾಹರಲಾಲ್ ನೆಹರೂ ಅವರು ತಿಮ್ಮಯ್ಯನವರ ರಾಜೀನಾಮೆ ಪುರಸ್ಕರಿಸದೆ, ಅವರು ಸೇವೆಯಲ್ಲಿ ಮುಂದುವರಿಯುವಂತೆ ಮನ ಒಲಿಸಿದರು. 35 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ, ಅವರು 1961ರಲ್ಲಿ ನಿವೃತ್ತಿ ಹೊಂದಿದರು.

ನಿವೃತ್ತಿ ಹೊಂದಿದ ಬಳಿಕ, ಜನರಲ್ ತಿಮ್ಮಯ್ಯ ತನ್ನ ಪತ್ನಿ ಮತ್ತು ಮಗಳೊಡನೆ ಮಡಿಕೇರಿಯ ಸನ್ನಿ ಸೈಡ್‌ನಲ್ಲಿ ವಿಶ್ರಾಂತ ಜೀವನದಲ್ಲಿದ್ದರು. 1962ರ ಯುದ್ಧದ ಬಳಿಕ, ಭಾರತದ ಭದ್ರತೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಒಂದು ಭದ್ರತಾ ಸಮಿತಿಯನ್ನು ರಚಿಸಿ, ಜನರಲ್ ತಿಮ್ಮಯ್ಯನವರನ್ನು ಅದರ ಓರ್ವ ಸದಸ್ಯರಾಗಿ ನೇಮಿಸಲಾಯಿತು. ಅವರು ಬಹಳಷ್ಟು ಪರಿಣಾಮಕಾರಿ ಸಲಹೆಗಳನ್ನು ನೀಡಿದರೂ, ಆ ಸಮಿತಿ ಅಷ್ಟೊಂದು ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿಲ್ಲ. ಅದರ ಸಭೆಗಳು ಕ್ರಮೇಣ ವಿರಳವಾಗುತ್ತಾ ಸಾಗಿದವು.

1964ರಲ್ಲಿ, ವಿಶ್ವಸಂಸ್ಥೆ ಜನರಲ್ ತಿಮ್ಮಯ್ಯನವರನ್ನು ಸೈಪ್ರಸ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿ ಸ್ಥಾಪನಾ ಪಡೆಯ ನೇತೃತ್ವ ವಹಿಸುವಂತೆ ಆಹ್ವಾನಿಸಿತು. ಅಲ್ಲಿ ಅವರಿಗೆ ಸೈಪ್ರಸ್ ಸ್ವತಂತ್ರವಾದ ಬಳಿಕ ತಲೆದೋರಿದ ಉದ್ವಿಗ್ನತೆಗಳನ್ನು ನಿಯಂತ್ರಿಸುವ ಜವಾಬ್ದಾರಿ ನೀಡಲಾಯಿತು. ದುರದೃಷ್ಟವಶಾತ್ ಈ ಬಹುಮುಖ್ಯ ಜವಾಬ್ದಾರಿಯನ್ನು ನಿರ್ವಹಿಸುವ ಸಂದರ್ಭದಲ್ಲಿ ತಿಮ್ಮಯ್ಯ ಹೃದಯಾಘಾತಕ್ಕೆ ಒಳಗಾಗಿ, ಡಿಸೆಂಬರ್ 18, 1965ರಂದು ಅಸುನೀಗಿದರು.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT