ಬಿಹಾರವು ತನ್ನ ವಿಧಾನಸಭೆ ಚುನಾವಣೆಯನ್ನು ಮುಗಿಸಿಕೊಂಡಿರುವ ಹೊತ್ತಿದು. ನವೆಂಬರ್ 14ಕ್ಕೆ ಫಲಿತಾಂಶ ಪ್ರಕಟವಾಗುವುದಕ್ಕೆ ಮುನ್ನ ಏನಿದ್ದರೂ ಥರಹೇವಾರಿ ಲೆಕ್ಕಾಚಾರಗಳ, ಸಾಧ್ಯತೆಗಳ ರೋಚಕ ಮೆರವಣಿಗೆ ಮಾಧ್ಯಮದಲ್ಲಿ ಆಗುತ್ತಿರುತ್ತದೆ. ಮತ್ತೆ ಎನ್ ಡಿ ಎ ಅಧಿಕಾರಕ್ಕೆ ಮರಳಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಸಾರಿವೆ.
ಬೇರೆ ಬೇರೆ ರಾಜ್ಯಗಳಿಗೆ ಕೆಲಸಕ್ಕೆ ವಲಸೆ ಹೋಗಿದ್ದ ಕಾರ್ಮಿಕರೆಲ್ಲ ಈ ಬಾರಿ ಬಿಹಾರಕ್ಕೆ ವಾಪಸಾಗಿ ಹಿಂದೆಂದಿಗಿಂತ ದೊಡ್ಡ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ ಎಂಬ ವರದಿ ಇದೆ. ಇದು ತಮ್ಮ ರಾಜ್ಯದಲ್ಲಿ ಉದ್ಯೋಗ ಸಿಗುತ್ತಿಲ್ಲ ಎಂಬ ಅವರ ಆಕ್ರೋಶಕ್ಕೆ ಹಿಡಿದ ಕನ್ನಡಿಯೇ? ಅಧಿಕಾರರೂಢ ಎನ್ ಡಿ ಎ ಪೆಟ್ಟು ತಿನ್ನಬೇಕಾಗುತ್ತದೆಯೇ? ಹಾಗಲ್ಲದೇ, ಮಹಿಳೆಯರು ಮತದಾನದಲ್ಲಿ ತುಂಬ ಉತ್ಸಾಹದಿಂದ ಭಾಗವಹಿಸಿದ್ದಾರೆ ಎಂಬ ವರದಿಗಳಿರುವಾಗ, ನಿತೀಶ್ ಕುಮಾರ್ ಸರ್ಕಾರವು ಭಾಗ್ಯದ ಮಾದರಿಯಲ್ಲೇ ಮಹಿಳೆಯರನ್ನು ನಿರ್ದೇಶಿತವಾಗಿ ಹಣ ವಿತರಿಸಿರುವ ರೀತಿ ಎನ್ ಡಿ ಎ ಪರವಾಗಿಯೇ ಮತ ಸೆಳೆದಿದೆಯೇ? ಪ್ರಶಾಂತ್ ಕಿಶೋರ್ ಎಂಬ ಹೊಸ ಆಟಗಾರ ಸದ್ದು ಮಾಡಿದರೂ ಖುದ್ದು ಅವರೇ ಸ್ಪರ್ಧಿಸದೇ ಇರುವುದು ಅಂತಹ ಹವಾ ಸೃಷ್ಟಿಗೆ ಅಡ್ಡಿಯಾಯಿತೇನೋ ಎಂದೆಲ್ಲ ವಿಶ್ಲೇಷಣೆಗಳಿವೆ.
ಬೇರೆ ಬೇರೆ ಪಕ್ಷಗಳೊಂದಿಗೆ ಕೈಜೋಡಿಸಿಕೊಳ್ಳುತ್ತ ದಶಕಗಳವರೆಗೆ ಬಿಹಾರದಲ್ಲಿ ಅಧಿಕಾರ ನಡೆಸಿರುವ ನಿತೀಶ್ ಕುಮಾರರ ಬಗ್ಗೆ ಭರವಸೆ ಇಟ್ಟುಕೊಳ್ಳಬಹುದಾಗಿರುವುದು ಎಂಬಂಥದ್ದೇನಿಲ್ಲ. ಗಣನೀಯವಾಗಿ ಉದ್ಯೋಗ ಸೃಷ್ಟಿಯೇನೂ ಆಗಲಿಲ್ಲ. ಸೇತುವೆಗಳು ಕಟ್ಟಿದ ಕೆಲವು ತಿಂಗಳುಗಳಲ್ಲೇ ಧರಾಶಾಹಿಯಾಗಿ ಅಲ್ಲಿನ ಭ್ರಷ್ಟಾಚಾರದ ಕತೆ ಹೇಳುತ್ತಲೇ ಇವೆ. ಬಿಹಾರದ ಜತೆಯೇ ಇನ್ನೊಂದು ಬರಗೆಟ್ಟ ರಾಜ್ಯ ಎಂಬಂತೆ ಇದ್ದ ಉತ್ತರ ಪ್ರದೇಶವು ಯೋಗಿ ಆಡಳಿತದಲ್ಲಿ ಕಾನೂನು ವ್ಯವಸ್ಥೆ ಸುಧಾರಿಸಿಕೊಂಡು, ಹೆದ್ದಾರಿಗಳನ್ನು ಹೊದ್ದುಕೊಳ್ಳುತ್ತ, ಉದ್ಯೋಗಗಳನ್ನು ಸೃಷ್ಟಿಸುತ್ತ ಹೊಸ ಭರವಸೆಯೊಂದನ್ನು ಚಿಮ್ಮಿಸಿ ತನ್ನ ಗುರುತನ್ನು ಬದಲಿಸಿಕೊಂಡಂತೆ ನಿತೀಶರ ಕಾಲದಲ್ಲಿ ಆಗಲಿಲ್ಲ.
ಇಷ್ಟಾಗಿಯೂ, ಎಲ್ಲ ಅವಕಾಶವಾದಿತನಗಳ ನಡುವೆಯೂ ನಿತೀಶ ಕುಮಾರ್ ಬಿಹಾರವನ್ನು ಮತ್ತಷ್ಟು ಗತಿಗೆಡುವುದಕ್ಕೆ ಬಿಡಲಿಲ್ಲ ಎಂದು ಹೇಳಿದರೆ ಅದು ಅವರಿಗೆ ಸಲ್ಲುವ ಹೊಗಳಿಕೆ ಅಲ್ಲ, ಬದಲಿಗೆ ಅವರಿಗಿಂತ ಹಿಂದಿದ್ದವರು ಇನ್ನೆಷ್ಟು ಭಯಾನಕರಾಗಿದ್ದರು ಎಂಬುದಕ್ಕೆ ವ್ಯಾಖ್ಯಾನ!
ಲಾಲು ಎಂಬ ಸೆರೆವಾಸಿ ರಾಜಕಾರಣಿಯನ್ನು ಸಹ ರೊಮಾಂಟಿಕ್ ಆಗಿ ನೆನಪಿಸಿಕೊಳ್ಳುವ ಕೆಲವು ಹಳೆ ತಲೆಮಾರಿನ ಸ್ಟಾರ್ ಪತ್ರಕರ್ತರಿಗೆ ಈಗಲೂ ಬರವಿಲ್ಲ. ಆತನನ್ನು ಜೋಕ್ ಆಗಿಸುವ ಮೂಲಕ ನಿಜಕ್ಕೂ ಆ ವ್ಯಕ್ತಿಯ ವಿರುದ್ಧ ರಾಷ್ಟ್ರಮಟ್ಟದಲ್ಲಿ ಇರಬೇಕಿದ್ದ ಕೋಪವನ್ನು ತಗ್ಗಿಸಲಾಗಿದೆಯೇನೋ ಎಂದೂ ಅನ್ನಿಸುತ್ತದೆ. ಏಕೆಂದರೆ, ಅದ್ಯಾವುದೋ ಮೇವು ಹಗರಣದಲ್ಲಿ ಹಣ ತಿಂದಿರುವ ಒಂದೇ ಕಾರಣಕ್ಕಲ್ಲ ಆಕ್ರೋಶ ಇರಬೇಕಾದದ್ದು. ಬದಲಿಗೆ ಲಾಲು ಆಡಳಿತ ಮಾದರಿಯೇ ಅಧಿಕಾರಸ್ಥರಾದವರು ಜನಸಾಮಾನ್ಯರನ್ನು ಹೇಗೆ ಬೇಕಾದರೂ ಬೆತ್ತಲು ಮಾಡಿ ಮಜ ಮಾಡಬಹುದು ಎಂಬಂತಿತ್ತು. ಈಗಿನ ತಲೆಮಾರಿಗೆ ಅದು ಯಾವತ್ತೋ ಘಟಿಸಿಬಿಟ್ಟ ಸಂಗತಿಯೇ ಆಗಿದ್ದಿರಬಹುದಾದರೂ, ಅದರ ಮನನ ಆಗಾಗ ಆಗುತ್ತಿರಬೇಕು. ಪತ್ರಿಕಾ ವರದಿಗಳ ಆಧಾರಗಳಂತೂ ಢಾಳಾಗಿವೆ. ಅವತ್ತಿನ ಹಲವು ಸಿನಿಮಾಗಳಲ್ಲೂ ಪರೋಕ್ಷವಾಗಿ ಆ ಅಹಂಕಾರದ ಅಂಧಯುಗದ ಕೆಲವು ಚಿತ್ರಣಗಳು ಸೇರಿಕೊಂಡಿವೆ.
ಅಧಿಕಾರ ಇಟ್ಟುಕೊಂಡವರು ಅಸಮರ್ಥರಾಗಿರುವುದು, ನಿಷ್ಕ್ರಿಯರಾಗಿರುವುದು ಒಂದು ನಮೂನೆ. ಆದರೆ ಲಾಲು ಯುಗದಲ್ಲಿ ನಿಷ್ಕ್ರಿಯತೆ ಕಾರಣಕ್ಕಲ್ಲ ಬಿಹಾರ ನಲುಗಿದ್ದು, ಬದಲಿಗೆ, ಈ ಅಧಿಕಾರದ ಮುಂದೆ ಇನ್ನೇನೂ ಇಲ್ಲ ಎಂಬಂತೆ ಲೂಟಿ ಮಾಡಿದ ವಿಧವಿದೆಯಲ್ಲ, ಅದು ನೆನಪಿಗೆ ತಂದುಕೊಳ್ಳಬೇಕಿರುವುದು.
1990-2005ರ ಅವಧಿಯಲ್ಲಿ ಬಿಹಾರದಲ್ಲಿ 30,000 ಅಪಹರಣ ಪ್ರಕರಣಗಳು ದಾಖಲಾಗಿದ್ದವು. ಇನ್ನು ದಾಖಲಾಗದೇ ಉಳಿದಿದ್ದ ಲೆಕ್ಕ ಇನ್ನೆಷ್ಟು ಸಹಸ್ರವೋ. ಲಾಲು ಸರ್ಕಾರದಲ್ಲಿ ಪ್ರಭಾವ ಹೊಂದಿರುವ ರಾಜಕಾರಣಿ ಎಂದಾದರೆ, ಆತನ ಚೇಲಾಗಳು ಎಲ್ಲಿ ಯಾವ ಹೆಣ್ಣನ್ನು ಕೂಡ ಎತ್ತಿಕೊಂಡುಹೋಗಬಹುದಾಗಿತ್ತು ಎಂಬಂತಹ ಪರಿಸ್ಥಿತಿ. ಇನ್ನು, ಬಿಹಾರದಲ್ಲಿ ಉದ್ಯಮ ಮಾಡಿಕೊಂಡಿರುವವರ ಗೋಳಂತೂ ವರ್ಣಿಸಲಾಗದು. ಉದ್ಯಮಿಯನ್ನು ಎತ್ತಿಕೊಂಡುಹೋಗಿ, ಇಂತಿಷ್ಟು ಕೊಟ್ಟರೆ ಮಾತ್ರ ಬಿಡುಗಡೆ ಎಂಬ ಷರತ್ತು ಕುಟುಂಬದವರಿಗೆ. ಪೊಲೀಸರು ಮತ್ತು ಸರ್ಕಾರದ ಅಧಿಕಾರಸ್ಥರೇ ಈ ಜಾಲದ ಭಾಗವಾಗಿದ್ದರು. ಹೀಗಾಗಿ ಪೊಲೀಸರಂತೂ ಸಹಾಯಕ್ಕೆ ಬರುತ್ತಿರಲಿಲ್ಲ. ಸ್ಥಳೀಯ ರಾಜಕಾರಣಿಯ ಮನೆಗೆ ಎಡತಾಕುವುದು ಅಪಹೃತನ ಕುಟುಂಬದವರಿಗೆ ಅನಿವಾರ್ಯವಾಗುತ್ತಿತ್ತು. ಆ ರಾಜಕಾರಣಿ ಅಲ್ಲಿ ರೇಟು ಕುದುರಿಸುತ್ತಿದ್ದ. ಅಷ್ಟು ಹಣ ಜಮೆಯಾದ ನಂತರ, ಆತನ ಬೇಡಿಕೆಗಳನ್ನು ಈಡೇರಿಸಿದ ನಂತರ ಅಹಪೃತ ಉದ್ಯಮಿ ಬಿಡುಗಡೆಗೊಂಡು ಮನೆಗೆ ಬರುತ್ತಿದ್ದ. ಏಕೆಂದರೆ ಅಪಹರಿಸಿದವರು ಆ ರಾಜಕಾರಣಿಯ ಚೇಲಾಗಳೇ! ಇದನ್ನು ಎದುರಿಸಲು ಹೋದವರು ಹೆಣವಾಗಿಹೋದರು. ಅಪಹರಣ್ ಎಂಬ ಹಿಂದಿ ಚಲನಚಿತ್ರ ಈ ಕ್ರೂರವ್ಯಂಗ್ಯವನ್ನು ಚೆನ್ನಾಗಿಯೇ ಚಿತ್ರಿಸಿದೆ. ಸಿನಿಮಾ ಕತೆಗಳು ಹಾಗಿರಲಿ, “90ರ ದಶಕದಲ್ಲಿ ಅಪಹರಣ ಪ್ರಕರಣಗಳ ಒತ್ತೆಹಣದ ಚೌಕಾಶಿಯು ಮುಖ್ಯಮಂತ್ರಿಗಳ ಕಚೇರಿಯಲ್ಲೇ ನಡೆಯುತ್ತಿತ್ತು” ಎಂದು ಲಾಲು ಸೋದರ ಸಂಬಂಧಿ ಸುಭಾಶ್ ಯಾದವ್ ನೀಡಿದ್ದ ಹೇಳಿಕೆಗಳು ಪತ್ರಿಕೆಗಳಲ್ಲಿ ದಾಖಲಾಗಿವೆ.
ಚಂಪಾ ಬಿಸ್ವಾಸ್ ಎಂಬಾಕೆ ತನ್ನ ಮೇಲೆ 1995-97ರ ನಡುವೆ ನಿರಂತರ ಅತ್ಯಾಚಾರವಾಗಿದೆ ಎಂದು ಮಾಧ್ಯಮದೆದುರು ಬಹಿರಂಗಪಡಿಸಿದರು. ಮೃತ್ಯುಂಜಯ ಕುಮಾರ ಯಾದವ್ ಹಾಗೂ ಆತನ ತಾಯಿ ಹೇಮಲತಾ ಯಾದವ್ ಎಂಬ ರಾಜಕೀಯ ಪಡಸಾಲೆಯ ಮಂದಿ ಆರೋಪಿತರು. ಗಮನಿಸಬೇಕಾದ ವಿಚಾರ ಎಂದರೆ ಹೀಗೆ ನಿರಂತರ ಅತ್ಯಾಚಾರಕ್ಕೊಳಗಾದ ಬಗ್ಗೆ ಆರೋಪಿಸಿದ ಚಂಪಾ ಬಿಸ್ವಾಸ್ ಐಎಎಸ್ ಅಧಿಕಾರಿ. ಅವರ ಪತಿ ಸಹ ಐಎಎಸ್ ಅಧಿಕಾರಿ. 2002ರಲ್ಲಿ ವಿಚಾರಣಾ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿತಾದರೂ ನಂತರ ಹೈಕೋರ್ಟ್ ಅದನ್ನು ರದ್ದು ಪಡಿಸಿತು. ಒಬ್ಬ ಐಎಎಸ್ ಅಧಿಕಾರಿಗೇ ಅಂಥ ಸ್ಥಿತಿ ಬಂದರೆ ಬೇರೆಯವರ ಕತೆ ಏನು ಎಂಬುದು ಅವತ್ತಿಗೆ ಎಲ್ಲರನ್ನೂ ಅದುರಿಸಿದ್ದ ಪ್ರಶ್ನೆ.
ಇನ್ನು, ಭೂಮಿಹಾರರು, ರಜಪೂತರು, ಕುರ್ಮಿ, ಯಾದವ ಎಂದು ದಿನಬೆಳಗಾದರೆ ಕಾಣುವ ವಿದ್ಯಮಾನದಂತೆ ತೆರೆದುಕೊಳ್ಳುತ್ತಿದ್ದ ಜಾತಿ ಹಿಂಸಾಚಾರಗಳಿಗೆ ಲೆಕ್ಕವೇ ಇಲ್ಲ. ಲಾಲು-ರಾಬ್ರಿ ಆಡಳಿತದ ದಿನಗಳನ್ನು ಜಂಗಲ್ ರಾಜ್ ಎಂದು ಮಾಧ್ಯಮ ಮತ್ತು ಜನಾಭಿಪ್ರಾಯವು ಗುರುತಿಸುತ್ತದೆ. ಅರಣ್ಯದಲ್ಲಿ ಬಲ ಇದ್ದವರಿಗೆ ಮಾತ್ರವೇ ಬದುಕು ಎಂಬರ್ಥದಲ್ಲಿ. ಆದರೆ ಬಿಹಾರದ ಬದುಕು ಕಗ್ಗಾಡಿಗಿಂತ ಭೀಕರವೇ ಆಗಿತ್ತು. ಏಕೆಂದರೆ, ಅರಣ್ಯದಲ್ಲಿ ಸಹ ಹುಲಿ-ಸಿಂಹಗಳು ಹಸಿದಾಗ ಬೇಟೆಯಾಡುತ್ತವೆಯೇ ಹೊರತು ವಿನೋದಕ್ಕಲ್ಲ. ಆದರೆ ಬಿಹಾರದಲ್ಲಿ ಅಧಿಕಾರದ ಪಡಸಾಲೆಗೆ ನಿಷ್ಠವಾಗಿರುವ ಗುಂಪು ಯಾರ ಹಣಕ್ಕೆ, ಯಾರ ಸೆರಗಿಗೆ ಯಾವಾಗ ಬೇಕಾದರೂ ಕೈಹಾಕಬಹುದೆಂಬ ಸನ್ನಿವೇಶ ಸೃಷ್ಟಿಯಾಗಿಹೋಗಿತ್ತು.
ಇವೆಲ್ಲ ಸರಿ. ಜನಕ್ಕೇನೂ ಬುದ್ಧಿ ಇರಲಿಲ್ಲವಾ ಇವರನ್ನು ಮತ್ತೆ ಮತ್ತೆ ಆರಿಸುವುದಕ್ಕೆ ಎಂಬ ಪ್ರಶ್ನೆ ಬರಬಹುದೇನೋ. ಆದರೆ, ವೋಟ್ ಚೋರಿ ಎಂದರೆ ನಿಜಕ್ಕೂ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದ್ದರೆ ಆ ಕಾಲಕ್ಕೇ ಹೋಗಬೇಕು! 2004ಕ್ಕೂ ಮೊದಲು ನಮ್ಮ ದೇಶದಲ್ಲಿ ವಿದ್ಯುನ್ಮಾನ ಮತಯಂತ್ರಗಳು ವ್ಯಾಪಕವಾಗಿ ಬಳಕೆ ಆಗಿರಲಿಲ್ಲ. ಪ್ರಯೋಗಿಕವಾಗಿ ಮಾತ್ರ ಆಯ್ದ ರಾಜ್ಯಗಳಲ್ಲಿ ಆಗಾಗ ಬಳಕೆ. ಉಳಿದಂತೆ ಮತಚೀಟಿಯದ್ದೇ ವಿಧಾನ. ಲಾಲು ಪಾಳೆಯ ನಿರ್ಲಜ್ಜವಾಗಿ ತನ್ನ ಗೂಂಡಾಗಳ ಮೂಲಕ ಮತಗಟ್ಟೆಗಳನ್ನು ವಶಕ್ಕೆ ಪಡೆದುಕೊಂಡು ತನ್ನ ಗೆಲವು ಖಾತ್ರಿ ಮಾಡಿಕೊಂಡಿತು. ಕೆಲವೆಡೆಗಳಲ್ಲಿ ಮಾತ್ರವೇ ಚುನಾವಣಾ ಆಯೋಗ ಇಂಥ ಅಕ್ರಮ ನಡೆದಲ್ಲಿ ಮರುಮತದಾನದಂಥ ವ್ಯವಸ್ಥೆ ಮಾಡಿತಾದರೂ ಅಷ್ಟರಲ್ಲಿ ಜನಕ್ಕೆ ವಿಶ್ವಾಸವೇ ಕದಡಿಹೋಗಿತ್ತು. ಮತಪೆಟ್ಟಿಗೆ ವಿವರಗಳು ಅಧಿಕಾರಸ್ಥರ ಕೈಯಲ್ಲೇ ಇರುವಾಗ ತಾವು ಅವರ ವಿರುದ್ಧ ಮತ ಹಾಕಿ ಬದುಕುವುದು ಕಷ್ಟ ಎಂಬ ಭಾವನೆ, ಅಲ್ಲದೇ ಕೇಂದ್ರದಿಂದ ಬಂದ ಅಧಿಕಾರಿಗಳು ತಮ್ಮನ್ನು ನಿರಂತರ ಕಾಪಾಡಲಾರರೆಂಬ ವಾಸ್ತವದ ಭಯ ಇವೆಲ್ಲವೂ ಜನತಂತ್ರದಲ್ಲಿ ಜನರ ಪಾತ್ರವನ್ನು ಇದ್ದೂ ಇಲ್ಲವಾಗಿಸಿದವು.
ಒಂದು ಕಾಲದಲ್ಲಿ ಭಾರತವನ್ನು ನಿರ್ದೇಶಿಸಿದ್ದ ನೆಲ ಬಿಹಾರ. ಇವತ್ತಿಗೆ ರೋಗಗ್ರಸ್ತ ಎಂಬಂತಹ ಚಹರೆ ಹೊದ್ದಿರುವ ಈ ನೆಲವು ಚರಿತ್ರೆಯ ಹಲವು ಕಾಲಘಟ್ಟಗಳಲ್ಲಿ ಸಂಪದ್ಭರಿತ. ಮಗಧ ಪ್ರಾಂತ್ಯ, ಪಾಟಲೀಪುತ್ರವೆಂಬ ನಗರ ಇವು ಅರ್ಥವ್ಯವಸ್ಥೆಗೆ, ರಾಜನೀತಿಗೆ, ಕಲೆ-ಸಂಸ್ಕೃತಿಗಳಿಗೆ, ನಗರ ಯೋಜನೆಗೆ, ಅರ್ಥ ವ್ಯವಸ್ಥೆಗೆ ಎಲ್ಲವಕ್ಕೂ ಮಾದರಿಯಾಗಿ ಮೆರೆದಿದ್ದವು. ಚಂದ್ರಗುಪ್ತನೆಂಬ ಚಕ್ರವರ್ತಿಯನ್ನು ಸೃಜಿಸಿ ಚಾಣಕ್ಯನು ನಡೆದಾಡಿ ನೀತಿಗಳನ್ನು ರೂಪಿಸಿದ ಭೂಮಿ. ಅದಕ್ಕೂ ಮೊದಲು ಬುದ್ಧ ಆವರಿಸಿಕೊಂಡಿದ್ದ ನೆಲ. ಅಥೆನ್ಸಿಗಿಂತ ಪೂರ್ವದಲ್ಲೇ ವೈಶಾಲಿಯಲ್ಲಿ ಗಣರಾಜ್ಯದ ವ್ಯವಸ್ಥೆ ಇತ್ತು ಎನ್ನುತ್ತದೆ ಚರಿತ್ರೆ. ಈಗಿನ ಬಂಗಾಳದ ಹಲವು ಭಾಗಗಳನ್ನೂ ಒಳಗೊಂಡಿದ್ದ ಮಗಧದ ಮಣ್ಣಿನಲ್ಲೇ ನಳಂದ, ವಿಕ್ರಮಶಿಲಾ, ಓದಂತಪುರಿಯಂಥ ಜ್ಞಾನಕೇಂದ್ರಗಳು ತಲೆಎತ್ತಿದ್ದವು. ಟಿಬೆಟ್, ಚೀನಾ, ಗ್ರೀಕ್ ನೆಲಗಳಿಂದಲೂ ಜ್ಞಾನಾರ್ಥಿಗಳು ಭಾರತಕ್ಕೆ ಹರಿದುಬಂದರು. ಅಶೋಕನ ಕಾಲದ ಹೊತ್ತಿಗೆ ಮಗಧದಲ್ಲೆಲ್ಲ ಬೌದ್ಧ ವಿಹಾರಗಳ ಜಾಲವೇ ಬೆಳೆಯಿತು. ಇವೇನೂ ಕೇವಲ ಸನ್ಯಾಸಿಗಳ ತಂಗುದಾಣವಾಗಿರಲಿಲ್ಲ. ಅವತ್ತಿಗೆ ಬೌದ್ಧ ವಿಹಾರಗಳು ವ್ಯಾಪಾರಿ ಒಕ್ಕೂಟಗಳೂ ಆಗಿದ್ದವು ಎಂಬುದನ್ನು ವಿಲಿಯಂ ಡ್ಯಾಲ್ರಿಂಪಲ್ ಅವರ ಇತ್ತೀಚಿನ ಪುಸ್ತಕ ‘ದ ಗೋಲ್ಡನ್ ರೋಡ್’ ಸಾಧಾರವಾಗಿ ವಿವರಿಸಿದೆ. ವ್ಯಾಪಾರದ ಸಾರೋಟುಗಳು ವಿಶ್ರಮಿಸಿಕೊಳ್ಳುವ, ವ್ಯಾಪಾರಕ್ಕೆ ಹಣಕಾಸು ಸೌಲಭ್ಯಗಳನ್ನು ಒದಗಿಸುವ ಕೇಂದ್ರಗಳೂ ಇವಾಗಿದ್ದವು. ಅಂದರೆ, ಇವತ್ತಿನ ಬಿಹಾರದ ಆ ನೆಲ ಆರ್ಥಿಕವಾಗಿಯೂ ಸದೃಢ ಕೇಂದ್ರವಾಗಿತ್ತು. ಆಗಿನ ವಿಹಾರದ ಅಪಭ್ರಂಶವೇ ಈಗಿನ ಬಿಹಾರವಾಗಿದೆ ಎಂಬುದು ವ್ಯಾಖ್ಯಾನ.
ಇನ್ನು, ಮಹಾಭಾರತ ಮತ್ತು ರಾಮಾಯಣದ ಕಾಲಕ್ಕೆ ಸರಿದರಂತೂ ಈಗ ಬಿಹಾರವೆಂದು ಕರೆಸಿಕೊಳ್ಳುತ್ತಿರುವ ಈ ನೆಲವು ರಾಜನೀತಿಯ ಪ್ರಮುಖ ಸ್ಥಾನ ಹೇಗಾಗಿತ್ತು ಎಂಬೆಲ್ಲದರ ಬಗ್ಗೆ ರೋಚಕ ವಿವರಗಳು ತೆರೆದುಕೊಳ್ಳುತ್ತವೆ. ಸೀಮಿತ ಜಾತಿ ರಾಜಕಾರಣದ ಗುರುತುಗಳನ್ನು ಬಿಟ್ಟರೆ, ಇವತ್ತಿನ ಬಿಹಾರ ರಾಜಕಾರಣದಲ್ಲಿರುವ ಯಾವ ವ್ಯಕ್ತಿಗಳ ನಡೆನುಡಿಗಳಲ್ಲೂ ಇಂಥದೊಂದು ಚರಿತ್ರೆಯ ಸ್ಮೃತಿಯೇ ಕಾಣುತ್ತಿಲ್ಲ!
- ಚೈತನ್ಯ ಹೆಗಡೆ
cchegde@gmail.com