ದೆಹಲಿಯಲ್ಲಿ ಬಾಂಬ್ ಸ್ಪೋಟವಾಗಿರುವುದನ್ನು ಎಲ್ಲರೂ ಖಂಡಿಸಬೇಕು. ಜಗತ್ತಿನ ಬೇರಾವ ದೇಶದಲ್ಲಿ ಆಗಿದ್ದರೂ ಆ ದೇಶದ ಜನರಲ್ಲಿ ಇಂತಹ ವಿಷಯದ ಬಗ್ಗೆ ಬೇಧವಿರುವುದಿಲ್ಲ. ನಾವೆಲ್ಲರೂ ಒಂದು ವಿಷಯದ ಬಗ್ಗೆ ಸಹಮತ ವ್ಯಕ್ತಪಡಿಸಬೇಕು ಎಂದು ನಾನು ಬಯಸುವುದಿಲ್ಲ. ಆದರೆ ದೇಶದ ಭದ್ರತೆ ವಿಷಯದಲ್ಲಿ ನಮ್ಮ ಧ್ವನಿ ಒಂದೇ ಇರಬೇಕು.ಇದರಲ್ಲೂ ರಾಜಕೀಯ ಮಾಡುವ , ದ್ವೇಷ ಕಾರುವ ಜನರನ್ನು ಜನತೆ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಘಟನೆಯಲ್ಲಿ ಸತ್ತವರು ನಿಮ್ಮ ಕುಟುಂಬದವರಾಗಿದಿದ್ದರೆ? ಒಂದು ಕ್ಷಣ ಊಹಿಸಿಕೊಂಡು ನೋಡಿ, ಆ ಊಹೆ ನೀಡುವ ನೋವು ತಡೆದು ಕೊಳ್ಳಲು ಕಷ್ಟವಾಗುತ್ತದೆ. ಇನ್ನು ನಿಜವಾಗಿ ಪ್ರಾಣ ತೆತ್ತವರ ಮನೆಯವರ ಪರಿಸ್ಥಿತಿ ಹೇಗಿರಬಹುದು ಊಹಿಸಿಕೊಳ್ಳುವುದು ಕಷ್ಟ.
ನಮ್ಮ ದೇಶವನ್ನು ವ್ಯವಸ್ಥಿತವಾಗಿ ತುಂಡು ಮಾಡುವ ಹುನ್ನಾರಗಳು ನಡೆಯುತ್ತಲೆ ಇವೆ. ಮೊನ್ನೆಯ ಘಟನೆ ಘಟಿಸಿದ ಕಾರಣ ನಮಗೆಲ್ಲರಿಗೂ ಗೊತ್ತಾಗಿದೆ. ಅಕ್ಟೋಬರ್ ಮತ್ತು ನವೆಂಬರ್ ಮೊದಲ ವಾರದಲ್ಲಿ NIA ಸರಿಸುಮಾರು 9 ಇಂತಹ ಹುನ್ನಾರಗಳನ್ನು ತಡೆದಿದೆ. ಅಂದರೆ ಕೇವಲ 35/40ದಿನಗಳಲ್ಲಿ ಮೊನ್ನೆಯ ದೆಹಲಿ ರೂಪದಲ್ಲಿನ 9 ದಾಳಿಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ. ಭದ್ರತಾ ಲೋಪ ಎನ್ನುವ ಮುನ್ನ ಇದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅಲ್ಲದೆ ಗಮನಿಸಿ ಯಾವ ದೇಶದಲ್ಲಿ ಮನೆಯ ಒಳಗಿನ ಜನರೇ ಇಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ , ಆಗ ಭದ್ರತಾ ವ್ಯವಸ್ಥೆ ಅದೆಷ್ಟೇ ಗಟ್ಟಿಯಾಗಿದ್ದರೂ ಹತ್ತರಲ್ಲಿ ಒಂದು ಬಾರಿ ವೈಫಲ್ಯ ಕಂಡೆ ಕಾಣುತ್ತದೆ.
ಇಂತಹ ಘಟನೆಯಾದಾಗ ಒಂದೆರೆಡು ದಿನ ಅಥವಾ ವಾರ ಕೂಗಾಡಿ, ಮನಸ್ಸಿಗೆ ಬಂದದ್ದು ಬರೆದು ಸಮಾಧಾನ ಮಾಡಿಕೊಂಡು ಬಿಡುತ್ತೇವೆ. ನಾಗರಿಕರಾಗಿ ಅಲ್ಲಿಗೆ ನಮ್ಮ ಕೆಲಸ ಮುಗಿಯಿತು ಎನ್ನುವ ಮನೋಭಾವ ನಮ್ಮದು. ಇದು ತಪ್ಪು. ಸಮಾಜದಲ್ಲಿ ಆಗುತ್ತಿರುವ ಡೆಮೊಗ್ರಾಫಿಕಲ್ ಬದಲಾವಣೆಗಳನ್ನು ನಾವು ಮನೆ ಮನೆಗೂ ತಲುಪಿಸಬೇಕು. ಎಚ್ಚರಿಸುವ ಕೆಲಸವಾಗಬೇಕು. ಸುಮ್ಮನೆ ಒಂದೆರೆಡು ಭಾಷಣ ಮಾಡಿ ಮುಗಿಸಿದರೆ ಅಲ್ಲಿಗೆ ಮುಗಿಯುವುದಿಲ್ಲ. ಇಂತಹ ಭಾಷಣ ಅಥವಾ ಬರಹಗಳನ್ನು ಓದುವವರು , ಕೇಳುವವರು ಯಾರು ? ಅದದೇ ಜನ. ಅವರಿಗೆ ಈಗಾಗಲೇ ಸಮಸ್ಯೆಯ ಅರಿವಿದೆ. ನಾವು ಮಾಡಬೇಕಾದದ್ದು ಸಮಾಜದ ಎಲ್ಲಾ ವರ್ಗದ ಜನರಿಗೂ ತಲುಪುವುದು ಮತ್ತು ಸಮಸ್ಯೆಯ ಅರಿವು ಮೂಡಿಸುವುದು.
ಈ ಹಿಂದೆ ಈ ರೀತಿಯ ಕೃತ್ಯಗಳು ಆದಾಗ ಅದು ಭಾರತ-ಪಾಕಿಸ್ತಾನದ ಸಮಸ್ಯೆ ಎನ್ನುವಂತೆ ಜಗತ್ತು ನೋಡುತ್ತಿತ್ತು. ಇವತ್ತಿಗೆ ಪೂರ್ಣ ಜಗತ್ತು ಇದರ ಫಲಾನುಭವಿಯಾಗಿದೆ. ಒಂದು ವರ್ಗದ ಜನರ ಕೆಟ್ಟ ಮಾನಸಿಕತೆಯನ್ನು ಇಂದಿಗೆ ಅವರೂ ಮನಗಂಡಿದ್ದಾರೆ. ಈ ಹಿಂದೆ ಪಾಶ್ಚತ್ಯ ಸಮಾಜದ ಆಡಳಿತ ನಡೆಸುವರಿಗೆ ಗೊತ್ತಿತ್ತು. ಅವರ ಜಾಣ ಕುರುಡು, ಕಿವುಡು ಇಂದು ಅವರ ಜನರನ್ನು ಕೂಡ ದಹಿಸುತ್ತಿದೆ. ಅಲ್ಲಿನ ಜನ ಸಾಮಾನ್ಯನಿಗೆ ಸಮಸ್ಯೆಯ ಅರಿವಾಗಿದೆ. ಆತ ಇಂದು ಭಾರತವನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದಾನೆ. ಅದು ಹೇಗೆ ಭಾರತ ಇಂತಹ ನೀಚ ಮನಸ್ಥಿತಿಯ ಜನರನ್ನು ಇಷ್ಟು ವರ್ಷಗಳಿಂದ ಸಹಿಸಿಕೊಂಡು ಬರುತ್ತಿದೆ ಎಂದು ಆಶ್ಚರ್ಯವನ್ನು ಕೂಡ ವ್ಯಕ್ತಪಡಿಸಲು ಶುರು ಮಾಡಿದ್ದಾರೆ. ಇಂದಿಗೆ ಜಗತ್ತಿನ ಎಲ್ಲಾ ಪ್ರಮುಖ ದೇಶಗಳೂ ಇಂತಹ ಕೃತ್ಯಗಳು ಆದಾಗ ಭಾರತದ ಪರ ನಿಲ್ಲುತ್ತಿವೆ. ವಿಪರ್ಯಾಸವೆಂದರೆ ನಮ್ಮ ಸಮಾಜದಲ್ಲಿ ಮಾತ್ರ ಈ ಬಗ್ಗೆ ಅಪಸ್ವರಗಗಳು ಕೇಳಿಬರುತ್ತವೆ.
ನಾವು ಆರ್ಥಿಕವಾಗಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಬಲಿಷ್ಠವಾಗಬೇಕಾದರೆ ಇಂತ ಕೃತ್ಯಗಳು ಘಟಿಸದಂತೆ ತಡೆಯಬೇಕು. ಇಂತಹ ಕೃತ್ಯಗಳಲ್ಲಿ ಭಾಗಿಯಾದವರಿಗೆ ನೀಡುವ ಶಿಕ್ಷೆ ಮುಂದೆ ಇಂತಹ ಕೃತ್ಯ ಮಾಡುವ ಮುನ್ನ ನೆನಪಿಗೆ ಬಂದು ಭಯ ಉತ್ಪನ್ನವಾಗುವಂತಿರಬೇಕು. ಎಲ್ಲಕ್ಕೂ ಮೊದಲಿಗೆ ಯುನಿಫಾರ್ಮ್ ಸಿವಿಲ್ ಕೋಡ್ ಜಾರಿಗೆ ತರಬೇಕು. ಸಮಾಜದಲ್ಲಿ ಇರುವ ಕಟ್ಟುಕಟ್ಟಳೆಗಳನ್ನು ಪ್ರತಿಯೊಬ್ಬರೂ ತಪ್ಪದೆ ಪಾಲಿಸುವಂತಾಗಬೇಕು. ಇಂತಹ ನೀಚ ಕೃತ್ಯ ಮಾಡಿದವರಿಗೆ ಮಾತ್ರ ಶಿಕ್ಷೆ ಎನ್ನುವಂತಿರದೆ , ಸಮಾಜದಲ್ಲಿ ಮಾಡುವ ಸಣ್ಣಪುಟ್ಟ ತಪ್ಪುಗಳಿಗೂ ದಂಡ, ಶಿಕ್ಷೆ ನಿಗದಿಯಾಗಬೇಕು. ನಮ್ಮ ದೇಶದಲ್ಲಿ ಸಿಕ್ಕಿರುವಷ್ಟು ಸ್ವಾತಂತ್ರ್ಯ ಜಗತ್ತಿನ ಬೇರೆ ಯಾವ ದೇಶದಲ್ಲೂ ಸಿಗುವುದಿಲ್ಲ , ಸಿಗುತ್ತಿಲ್ಲ.
ದಿನನಿತ್ಯದ ಬದುಕಿನಲ್ಲಿ ರಸ್ತೆ ದಾಟುವುದರಿಂದ , ವಾಹನ ಚಲಾವಣೆ , ಉಗುಳುವುದು , ಕಸ ಎಸೆಯುವುದು ಹೀಗೆ ಹತ್ತಾರು ನಿಯಮಾವಳಿಗಳಿರುತ್ತವೆ. ಅದನ್ನು ಪಾಲಿಸದಿದ್ದರೆ ದೊಡ್ಡ ಮೊತ್ತದ ದಂಡವನ್ನು ಹಾಕಲಾಗುತ್ತದೆ. ಪದೇಪದೇ ಅದೇ ತಪ್ಪನ್ನು ಮಾಡಿದರೆ ಅದಕ್ಕೆ ತಕ್ಕಂತೆ ಶಿಕ್ಷೆಯನ್ನು ಸಹ ವಿಧಿಸಲಾಗುತ್ತದೆ. ಕೆಟ್ಟ ವಾಹನ ಚಲಾವಣೆಗೆ ತಮ್ಮ ಲೈಸನ್ಸ್ ಕಳೆದುಕೊಂಡವರ ಸಂಖ್ಯೆ ಕೂಡ ಬೇರೆ ದೇಶಗಳಲ್ಲಿ ನಾವು ಕೇಳಬಹುದು. ನಮ್ಮಲ್ಲಿ ಮಾತ್ರ ಸಾಥ್ ಕೂನ್ ಮಾಫ್ಫ್ ಎನ್ನುವ ಪರಿಸ್ಥಿತಿಯಿದೆ. ಒಂದೊಂದು ಧರ್ಮದವರಿಗೆ ಒಂದೊಂದು ಶಿಕ್ಷಣ ಎನ್ನುವುದು ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ನಾವೆಲ್ಲಾ ಕಂಡಿದ್ದೇವೆ. ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ದೊರೆಯಬೇಕು ಮತ್ತು ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಬೇಕು. ದೇಶದ ಬಗ್ಗೆ ಹೆಮ್ಮೆ , ಗೌರವ ಮೂಡಿಸುವ ಪಠ್ಯಗಳನ್ನು ಎಳವೆಯಲ್ಲಿ ಭೋದಿಸಬೇಕು. ಅರ್ಥವಿಷ್ಟೆ ನಾವು ಸಮಸ್ಯೆಯ ಮೂಲಕ್ಕೆ ಇಳಿಯದೆ ಮತ್ತು ಅದನ್ನು ಪರಿಹರಿಸಲು ಪ್ರಯತ್ನ ಪಡದೆ ಇದ್ದಲ್ಲಿ ದೆಹಲಿಯ ಘಟನೆಗಳು ಮರುಕಳಿಸುತ್ತವೆ.
ಏಕ ನಾಗರೀಕ ಸಂಹಿತೆಯಂತಹ ಕಾನೂನನ್ನು ಇಲ್ಲಿಯವರೆಗೆ ತರಲಾಗಿಲ್ಲವೇಕೆ ಎಂದು ಪರಾಮರ್ಶಿಸಿದರೆ ಕಾಣುವುದು ರಾಜಕೀಯ. ಅಧಿಕಾರವನ್ನು ಪಡೆಯಬೇಕು ಎನ್ನುವ ಹಪಾಹಪಿ ಒಂದು ವರ್ಗದ ಜನರ ತುಷ್ಟಿಕರಣಕ್ಕೆ ದಾರಿ ಮಾಡಿಕೊಡುತ್ತದೆ. ಅವರೇಕೆ ಅಧಿಕಾರ ಬಯಸುತ್ತಾರೆ ಎಂದರೆ ಭಾರತ ಎನ್ನುವುದು ಚಿನ್ನದ ಮೊಟ್ಟೆಯಿಡುವ ಕೋಳಿ ಎನ್ನುವುದು ತಳಿದು ಬರುತ್ತದೆ. ಈ ದೇಶದ ಜನರು ಬಡವರು , ಈ ದೇಶದ ಮೂಲಭೂತ ಸೌಲಭ್ಯಗಳು ಬಡವಾಗಿವೆ. ಅದಾಗಿರುವುದು ಕೂಡ ನಮ್ಮ ಭ್ರಷ್ಟ ವ್ಯವಸ್ಥೆಯಿಂದ ಮಾತ್ರ. ಉಳಿದಂತೆ ನಮ್ಮ ಆಂತರಿಕ ಬಳಕೆ ಬಹಳವಿದೆ. ಒಂದು ದಿನದಲ್ಲಿ ಇಲ್ಲಾಗುವ ವಹಿವಾಟು ಹತ್ತಾರು ಯೂರೋಪಿಯನ್ ದೇಶಗಳನ್ನು ಒಟ್ಟಾಗಿ ಸೇರಿಸಿದರೂ ಆಗುವುದಿಲ್ಲ.
ನಾವು ಚೀನಾದ ಬಗ್ಗೆ ಮಾತನಾಡುತ್ತೇವೆ. ಆದರೆ ನಾವು ಚೀನಾಕ್ಕಿಂತ ಹತ್ತಾರು ವರ್ಷ ಹಿಂದೆ ಇದ್ದೇವೆ. ಚೀನಾದಲ್ಲಿ ಕೆಲಸದ ಜಾಗದಲ್ಲಿ, ಪಬ್ಲಿಕ್ ಜಾಗಗಳಲ್ಲಿ ಯಾವುದೇ ರೀತಿಯ ನಂಬಿಕೆ ಅಥವಾ ಆಚರಣೆಯನ್ನು ದಿನ ನಿತ್ಯದ ಬದುಕಿನಲ್ಲಿ ಆಚರಿಸಲು ಬಿಡುವುದಿಲ್ಲ. ಚೀನಾದ ಶಾಲೆಯಲ್ಲಿ ಎಳವೆಯಿಂದ ಭೋದಿಸುವುದು ಒಂದೇ ಮಂತ್ರ ಅದು ರಾಷ್ಟ್ರೀಯತೆ. ಚೀನಾ ಒಂದು ಅದ್ಬುತ ದೇಶ. ಈ ದೇಶದ ಒಳಿತಿಗಾಗಿ ನಾವು ಶ್ರಮಿಸಬೇಕು. ಎಲ್ಲಕ್ಕೂ ಮುಂಚೆ ದೇಶ ಎನ್ನುವುದನ್ನು ಹೇಳಿಕೊಡಲಾಗುತ್ತದೆ. ಅಲ್ಲಿ ಬೇರೆ ರೀತಿಯ ಅಂದರೆ ಎರಡು ಅಥವಾ ಮೂರು ರೀತಿಯ ಶಿಕ್ಷಣ ವ್ಯವಸ್ಥೆಯಿಲ್ಲ. ನಾವು ಏಕ ನಾಗರೀಕ ಸಂಹಿತೆ , ಏಕ ಶಿಕ್ಷಣ ನೀತಿಯನ್ನು ತರದೆ ಇದ್ದ ಪಕ್ಷದಲ್ಲಿ ನಾವು ಮುಂದಿನ ಐವತ್ತು ವರ್ಷದಲ್ಲಿ ಸಹ ಚೀನಾದ ಸಮೀಪ ಕೂಡ ಹೋಗಲಾರೆವು. ದೇಶದ ಅಭಿವೃದ್ಧಿ , ಭದ್ರತೆಯ ವಿಷಯದಲ್ಲಿ ನಕಾರಾತ್ಮಕ ಮಾತಾಡಿವರನ್ನು ಅದೆಷ್ಟೇ ದೊಡ್ಡವರಿರಲಿ ಆ ದೇಶ ಹೆಡೆಮುರಿ ಕಟ್ಟಿ ಶಿಕ್ಷಿಸುತ್ತದೆ. ಅದು ಸಮಾಜದ ಎಲ್ಲರಿಗೂ ಪಾಠವಾಗುತ್ತದೆ. ನಮ್ಮಲ್ಲಿ ಉನ್ನತ ಹುದ್ದೆಯಲ್ಲಿರುವವರೇ ತಮ್ಮ ಮನಸ್ಸಿಗೆ ಬಂದ ಹೇಳಿಕೆಗಳನ್ನು ನೀಡುತ್ತಾರೆ.
ಕೊನೆಮಾತು : ಭಾರತದ ಮುಂದೆ ಮುಂದಿನ ಹದಿನೈದು ವರ್ಷದಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕಶಕ್ತಿಯಾಗಿ ಹೊರಹೊಮ್ಮುವ ಭವ್ಯ ಅವಕಾಶವಿದೆ. ಈ ದಾರಿಯಲ್ಲಿ ಅಡ್ಡಗಾಲು ಹಾಕಲು ಕೆಲವು ಆತಂರಿಕ ಶಕ್ತಿಗಳು ಸತತವಾಗಿ ಪ್ರಯತ್ನವನ್ನು ಪಡುತ್ತಿವೆ. ಹೊರಗಿನ ಕುಮ್ಮುಕ್ಕುಗಳು ಕೂಡ ಹೇರಳವಾಗಿದೆ. ಇವೆಲ್ಲವನ್ನೂ ಮೀರಿ ಭಾರತ ತನ್ನ ಆರ್ಥಿಕತೆಯನ್ನು ಭದ್ರ ಪಡಿಸಿಕೊಳ್ಳಬೇಕು ಎಂದರೆ ಒಂದಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಎಲ್ಲಕ್ಕೂ ಮೊದಲಿಗೆ ಭಾರತದ ಭದ್ರತೆ, ಅಖಂಡತೆ ಬಗ್ಗೆ ನಾಕಾರತ್ಮಕ ಮಾತಾಡುವ ವಾಕ್ ಸ್ವಂತಂತ್ರ್ಯಕ್ಕೆ ಕಡಿವಾಣ ಹಾಕಬೇಕಿದೆ. ಏಕ ನಾಗರೀಕ ಸಂಹಿತೆ, ಏಕ ರೂಪ ಶಿಕ್ಷಣ ಎನ್ನುವುದು ಆದ್ಯತೆಯ ಮೇರೆಗೆ ಜಾರಿಗೆ ತರಬೇಕಿದೆ. ಇಷ್ಟಾದರೆ ಭಾರತ ಆರ್ಥಿಕವಾಗಿ ಮತ್ತಷ್ಟು ಬಲಿಷ್ಠವಾಗಲಿದೆ. ನೆನಪಿರಲಿ , ಬಲಿಷ್ಠವಾದ ಸಿಂಹ , ಹುಲಿ , ಚಿರತೆಯನ್ನು ನಾವ್ಯಾರೂ ದೇವರಿಗೆ ಬಲಿ ಕೊಡುವುದಿಲ್ಲ. ಅಸಹಾಯಕ, ಶಕ್ತಿ ಹೀನ ಕುರಿ, ಕೋಳಿ , ಮೇಕೆ ಮಾತ್ರ ಬಲಿಯಾಗುತ್ತವೆ.