ಐದು ವಿನಾಶಕಾರಿ ಭಾಗಗಳು: ಅಪಾಯಕಾರಿ ಐಇಡಿ ಸ್ಫೋಟಕಗಳ ಹಿಂದಿನ ಕಥೆ (ಸಂಗ್ರಹ ಚಿತ್ರ ) online desk
ಅಂಕಣಗಳು

ಐದು ಅನಾಹುತಕಾರಿ ಭಾಗಗಳು: ಅಪಾಯಕಾರಿ ಐಇಡಿ ಸ್ಫೋಟಕಗಳ ಹಿಂದಿನ ಕಥೆ

ಡೆಟೊನೇಟರ್ ಹೊರತುಪಡಿಸಿ, ಐಇಡಿಯಲ್ಲಿ ಬಳಕೆಯಾಗುವ ಬಹುತೇಕ ಭಾಗಗಳನ್ನು ಮಾಮೂಲಿ ಅಂಗಡಿಗಳಲ್ಲಿ ಲಭಿಸುವ ಸಾಮಾನ್ಯ ಉತ್ಪನ್ನಗಳನ್ನು ಬಳಸಿ ನಿರ್ಮಿಸಬಹುದು.

ದೆಹಲಿಯ ಕೆಂಪು ಕೋಟೆಯ ಬಳಿ ಇತ್ತೀಚೆಗೆ ನಡೆದ ಸ್ಫೋಟ ಇಂಪ್ರೂವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್‌ಗಳ (ಐಇಡಿ) ಕಠೋರ ವಾಸ್ತವವನ್ನು ಮತ್ತೆ ನಮ್ಮ ಮನೆ ಬಾಗಿಲಿಗೇ ತಂದು ನಿಲ್ಲಿಸಿದೆ. ಐಇಡಿ ಎನ್ನುವುದು ಮೂಲತಃ ಒಂದು ಮನೆಯಲ್ಲೇ ನಿರ್ಮಿಸುವ ರೀತಿಯ ಬಾಂಬ್ ಆಗಿದ್ದು, ಇದನ್ನು ಭಯೋತ್ಪಾದಕರು ಸಣ್ಣ ಪೆಟ್ಟಿಗೆ ಅಥವಾ ಚೀಲದಲ್ಲಿ ತುಂಬಿರುತ್ತಾರೆ. ಸ್ಫೋಟಗೊಂಡಾಗ ಅವು ಅಮಾಯಕ ಜನರನ್ನು ಗಾಯಗೊಳಿಸಿ, ಜೀವ ಕಳೆದು, ಅಮಾಯಕ ಜನರನ್ನು ಭಯಭೀತಗೊಳಿಸಬಲ್ಲವು. ಇತರರಿಗೆ ಹಾನಿ ಮಾಡುತ್ತೇವೆ ಎಂದು ನಿರ್ಧರಿಸಿರುವ, ಹಾದಿ ತಪ್ಪಿದ ಮಾನವರ ಮನಸ್ಸುಗಳು ಎಷ್ಟು ಎಷ್ಟರಮಟ್ಟಿಗೆ ಅಪಾಯಕಾರಿಯಾಗಬಲ್ಲವು ಎನ್ನುವುದನ್ನು ಈ ಘಟನೆ ತೋರಿಸಿದೆ.

ಆದರೂ, ಭಯೋತ್ಪಾದಕರು ಯಾಕೆ ಐಇಡಿಗಳನ್ನು ಬಳಸುವುದನ್ನು ಅಷ್ಟು ಇಷ್ಟಪಡುತ್ತಾರೆ? ಈ ಪ್ರಶ್ನೆಗೆ ಇರುವ ಉತ್ತರ ಅತ್ಯಂತ ಸರಳ. ಮೊದಲನೆಯದಾಗಿ, ದಾಳಿಕೋರರಿಗೆ ಐಇಡಿ ದಾಳಿ ನಡೆಸುವುದು ಕಡಿಮೆ ಅಪಾಯಕಾರಿಯಾಗಿದೆ. ಯಾಕೆಂದರೆ, ಆತ್ಮಹತ್ಯಾ ದಾಳಿಗಳನ್ನು ಹೊರತುಪಡಿಸಿ, ಸಾಮಾನ್ಯ ದಾಳಿಗಳಲ್ಲಿ ಭಯೋತ್ಪಾದಕರು ಈ ಆಯುಧಗಳನ್ನು ಅಳವಡಿಸಿ, ಸರಳವಾಗಿ ಅಲ್ಲಿಂದ ಹೊರನಡೆಯುತ್ತಾರೆ. ಎರಡನೆಯದಾಗಿ, ಐಇಡಿಗಳನ್ನು ನಿರ್ಮಿಸುವುದು ಊಹಿಸಿದ್ದಕ್ಕಿಂತಲೂ ಸುಲಭವಾಗಿದ್ದು, ಇದಕ್ಕೆ ಬೇಕಾಗುವ ಉಪಕರಣಗಳು ಸಾಮಾನ್ಯ ಅಂಗಡಿಗಳಲ್ಲಿ ಸುಲಭವಾಗಿ ಲಭಿಸುತ್ತವೆ. ಈ ಎರಡು ಅಂಶಗಳ ಸಂಯೋಜನೆ ಜಗತ್ತಿನಾದ್ಯಂತ ಇರುವ ಭಯೋತ್ಪಾದಕ ಸಂಘಟನೆಗಳಿಗೆ ಐಇಡಿ ಮೊದಲ ಆಯ್ಕೆಯ ಆಯುಧವನ್ನಾಗಿಸಿದೆ.

ಒಂದು ಸರಳ ಐಇಡಿ ಕೇವಲ ಐದು ಪ್ರಮುಖ ಭಾಗಗಳನ್ನು ಹೊಂದಿದ್ದು, ಅವು ಜೊತೆಯಾಗಿ ಅನಾಹುತಕಾರಿ ಪಜ಼ಲ್ ರೀತಿಯಲ್ಲಿ ಕಾರ್ಯಾಚರಿಸುತ್ತವೆ. ಐಇಡಿಯಲ್ಲಿ ಎಲ್ಲವನ್ನೂ ಹಿಡಿದಿಟ್ಟುಕೊಳ್ಳಲು ಒಂದು ಸಂಗ್ರಾಹಕ, ಶಕ್ತಿ ನೀಡಲು ಒಂದು ಬ್ಯಾಟರಿ, ಸ್ಫೋಟಕ್ಕೆ ಚಾಲನೆ ನೀಡಲು ಒಂದು ಡೆಟೊನೇಟರ್, ಇವೆಲ್ಲವನ್ನೂ ಆರಂಭಿಸಲು ಒಂದು ಸ್ವಿಚ್, ಮತ್ತು ಮುಖ್ಯವಾಗಿ ಸ್ಫೋಟಕ ಉಪಕರಣಗಳು ಸೇರಿವೆ. ಯಾವುದೇ ವಿಧಾನದಿಂದಲಾದರೂ ಈ ಸ್ವಿಚ್ ಚಾಲನೆಗೊಳಿಸಿದರೆ, ಅದು ಸರ್ಕ್ಯೂಟನ್ನು ಆರಂಭಿಸಿ, ಅಂತಿಮವಾಗಿ ಸ್ಫೋಟಕ್ಕೆ ಕಾರಣವಾಗುತ್ತದೆ. ಭಯೋತ್ಪಾದಕರು ಇವುಗಳಿಗೆ ಬಾಲ್ ಬೇರಿಂಗ್‌ಗಳು, ಮೊಳೆಗಳು, ಲೋಹದ ತುಣುಕುಗಳನ್ನು ಅಥವಾ ಅಪಾಯಕಾರಿ ರಾಸಾಯನಿಕಗಳನ್ನು ಸೇರಿಸಿ, ಐಇಡಿ ಸ್ಫೋಟಿಸುವಾಗ ಇನ್ನಷ್ಟು ಅಪಾಯಕಾರಿಯಾಗುವಂತೆ ಮಾಡುತ್ತಾರೆ.

ಇಲ್ಲಿ ನಿಮಗೆ ಆಶ್ಚರ್ಯಕರ ಎನಿಸಬಹುದಾದ ಇನ್ನೊಂದು ವಿಚಾರವಿದೆ. ಡೆಟೊನೇಟರ್ ಹೊರತುಪಡಿಸಿ, ಐಇಡಿಯಲ್ಲಿ ಬಳಕೆಯಾಗುವ ಬಹುತೇಕ ಭಾಗಗಳನ್ನು ಮಾಮೂಲಿ ಅಂಗಡಿಗಳಲ್ಲಿ ಲಭಿಸುವ ಸಾಮಾನ್ಯ ಉತ್ಪನ್ನಗಳನ್ನು ಬಳಸಿ ನಿರ್ಮಿಸಬಹುದು. ಕಾರ್ಖಾನೆಯಲ್ಲಿ ನಿರ್ಮಿಸಿರುವ ಡೆಟೊನೇಟರ್‌ಗಳು (ಆಸ್ಫೋಟಕ) ಹೆಚ್ಚು ನಂಬಿಕಾರ್ಹ ಮತ್ತು ನಿರೀಕ್ಷಿತ ರೀತಿಯಲ್ಲಿ ಕಾರ್ಯಾಚರಿಸುವುದರಿಂದ, ಜಗತ್ತಿನಾದ್ಯಂತ ಬಹುತೇಕ ಭಯೋತ್ಪಾದಕರು ಇವುಗಳನ್ನು ಬಳಸುತ್ತಾರೆ. ಇಂತಹ ಡೆಟೊನೇಟರ್‌ಗಳನ್ನು ಪರವಾನಗಿ ಹೊಂದಿರುವ ಕಾರ್ಖಾನೆಗಳಲ್ಲಿ ಎಲ್ಲ ಗುಣಮಟ್ಟ ನಿಯಂತ್ರಣಗಳ ನಡುವೆ ಪರೀಕ್ಷಿಸಿಯೇ ನಿರ್ಮಿಸಲಾಗುತ್ತದೆ. ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಪ್ರಮುಖ ಬಾಂಬ್ ನಿರ್ಮಾಪಕ ಇಬ್ರಾಹಿಂ ಅಲ್ ಆಸಿರಿ ತನ್ನದೇ ಆದ ಡೆಟೊನೇಟರ್‌ಗಳನ್ನು ಮನೆಯಲ್ಲೇ ನಿರ್ಮಿಸುವುದಕ್ಕೆ ಹೆಸರಾಗಿದ್ದ. ಇಷ್ಟಾದರೂ, ಮನೆಯಲ್ಲಿ ನಿರ್ಮಿಸುವ ಡೆಟೊನೇಟರ್‌ಗಳು ಅಸ್ಥಿರ ಮತ್ತು ಅಸುರಕ್ಷಿತವಾಗಿದ್ದು, ಹಲವಾರು ಕಾರಣಗಳಿಂದ ಅತ್ಯಂತ ಅಪಾಯಕಾರಿಯಾಗಿವೆ.

ತನಿಖಾಧಿಕಾರಿಗಳು ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿದಾಗ, ಅವರು ಸುಳಿವುಗಳನ್ನು ಹುಡುಕುವ ಪತ್ತೇದಾರರಾಗುತ್ತಾರೆ. 2021ರಿಂದ 2024ರ ತನಕ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್‌ನ ಮಹಾನಿರ್ದೇಶಕರಾಗಿದ್ದ ಎಂ ಎ ಗಣಪತಿ ಅವರು ತನ್ನ ಅಭಿಪ್ರಾಯವನ್ನು ವಿವರಿಸಿದ್ದು, ಅವರ ಮಾಹಿತಿಗಳು ತನಿಖೆಗಳು ಹೇಗೆ ನಡೆಯುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಯಾವ ರೀತಿಯ ಸ್ಫೋಟಕವನ್ನು ಬಳಸಲಾಗಿದೆ ಎನ್ನುವುದು ಮಹತ್ವದ ಸುಳಿವು ನೀಡುತ್ತದೆ. ಸ್ಫೋಟಕಗಳು ಮಿಲಿಟರಿ ಗುಣಮಟ್ಟದ ಟಿಎನ್‌ಟಿ ಅಥವಾ ಆರ್‌ಡಿಎಕ್ಸ್ ಆಗಿರಬಹುದು, ಡೈನಾಮೈಟ್‌ನಂತಹ ವಾಣಿಜ್ಯಿಕ ಸ್ಫೋಟಕವಾಗಿರಬಹುದು, ಅಥವಾ ಸರಳ ರಾಸಾಯನಿಕಗಳಿಂದ ಮನೆಯಲ್ಲೇ ತಯಾರಿಸುವ ಎಎನ್ಎಫ್ಒ ರೀತಿಯ ಸ್ಫೋಟಕವೂ ಆಗಿರಬಹುದು. ಪ್ರತಿಯೊಂದು ವಿಧವೂ ಸ್ಫೋಟದ ಹಿಂದೆ ಯಾವ ಉಗ್ರಗಾಮಿ ಸಂಘಟನೆಯ ಕೈವಾಡ ಇರಬಹುದು ಎನ್ನುವುದನ್ನು ಗುರುತಿಸಲು ನೆರವಾಗುತ್ತದೆ. ಯಾಕೆಂದರೆ, ಭಯೋತ್ಪಾದಕ ಗುಂಪುಗಳು ಸಾಮಾನ್ಯವಾಗಿ ಐಇಡಿ ನಿರ್ಮಾಣದಲ್ಲಿ ಒಂದೇ ವಿಧಾನವನ್ನು ಅನುಸರಿಸುತ್ತವೆ. ಈ ಗುಂಪುಗಳಿಗೆ ಆ ನಿರ್ದಿಷ್ಟ ರೀತಿಯ ಸ್ಫೋಟಕವನ್ನು ನಿರ್ಮಿಸುವಲ್ಲಿ ಅನುಭವ ಮತ್ತು ಕೌಶಲವಿದ್ದು, ಅವು ತಾವು ಕಾರ್ಯಾಚರಿಸುವ ವಿಧಾನವನ್ನು ಸಾಮಾನ್ಯವಾಗಿ ಬದಲಾಯಿಸಲು ಹೋಗುವುದಿಲ್ಲ.

ಸ್ವಿಚ್ ಕಾರ್ಯಾಚರಿಸುವ ರೀತಿಯೂ ನಮಗೆ ಆಯುಧದ ಕಥೆ ಹೇಳುತ್ತದೆ. ಇದು ಭಯೋತ್ಪಾದಕರು ಟ್ರಿಗರ್ ಮಾಡುವಂತಹ ಕಮಾಂಡ್ ಆಧಾರಿತವಾಗಿರಬಹುದು, ಟೈಮರ್ ಚಾಲಿತವಾಗಿರಬಹುದು, ಅಥವಾ ಬಲಿಪಶುಗಳಿಂದ ಚಾಲಿತವಾಗುವ ಸೂಟ್‌ಕೇಸ್ ಬಾಂಬ್‌ಗಳು ಅಥವಾ ಲ್ಯಾಂಡ್ ಮೈನ್‌ಗಳೂ ಆಗಿರಬಹುದು. ಐಇಡಿಯನ್ನು ಸಾಗಿಸಿದ ಅಥವಾ ಇಟ್ಟ ವಿಧಾನ, ಅದು ಆತ್ಮಹತ್ಯಾ ವಾಹನವಾಗಲಿ, ಸಾಮಾನ್ಯ ವಾಹನವಾಗಲಿ, ಅಥವಾ ಧರಿಸಿರುವ ವ್ಯಕ್ತಿಯಲ್ಲಾಗಲಿ ತನಿಖಾಧಿಕಾರಿಗಳಿಗೆ ಬಾಂಬಿನ ವೈಶಿಷ್ಟ್ಯ ಮತ್ತು ಭಾಗಿಯಾದ ಭಯೋತ್ಪಾದಕ ಸಂಘಟನೆಯನ್ನು ಗುರುತಿಸಲು ಸಹಾಯ ಮಾಡುತ್ತದೆ. ಎನ್ಎಸ್‌ಜಿ ಅಧೀನದಲ್ಲಿರುವ ನ್ಯಾಷನಲ್ ಬಾಂಬ್ ಡೇಟಾ ಸೆಂಟರ್ ಭಾರತದಲ್ಲಿ ನಡೆಯುವ ಎಲ್ಲ ಬಾಂಬ್ ದಾಳಿಗಳ ದಾಖಲೆಗಳನ್ನು ಇಟ್ಟುಕೊಂಡು, ಪ್ರತಿಯೊಂದು ಉಪಕರಣದ ವಿಧ ಮತ್ತು ವಿನ್ಯಾಸದ ಕುರಿತು ತಜ್ಞ ಅಭಿಪ್ರಾಯ ನೀಡುತ್ತದೆ.

ಇದೆಲ್ಲದರ ನಡುವೆಯೂ ಒಂದಷ್ಟು ಒಳ್ಳೆಯ ಸುದ್ದಿಗಳಿವೆ. ಅಂಕಿಅಂಶಗಳ ಪ್ರಕಾರ, ಗಲಭೆ ಪೀಡಿತ ಪ್ರದೇಶಗಳಲ್ಲಿ ಮತ್ತು ದೇಶದ ಒಳ ಭಾಗಗಳಲ್ಲಿ ಐಇಡಿ ಸ್ಫೋಟಗಳ ಸಂಖ್ಯೆ ಕಡಿಮೆಯಾಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಹಾಗೆಂದು ನಾವು ಅಜಾಗರೂಕತೆಯಿಂದ ಇರಲು ಸಾಧ್ಯವಿಲ್ಲ. 2019ರಲ್ಲಿ ಪುಲ್ವಾಮಾದ ಸಿಆರ್‌ಪಿಎಫ್ ವಾಹನದ ಮೇಲೆ ನಡೆದ ಆತ್ಮಹತ್ಯಾ ದಾಳಿ ಈ ಸ್ಫೋಟಕಗಳು ಎಷ್ಟು ಅಪಾಯಕಾರಿ ಎನ್ನುವುದನ್ನು ಸಾಬೀತುಪಡಿಸಿದೆ. ಆ ಐಇಡಿ ಅಂದಾಜು 200 ಕೆಜಿಯಷ್ಟು ಸ್ಫೋಟಕಗಳನ್ನು ಹೊಂದಿತ್ತು. 20 ಕೆಜಿಯಷ್ಟು ಆರ್‌ಡಿಎಕ್ಸ್ ಪಾಕಿಸ್ತಾನದಿಂದ ಬಂದಿದ್ದರೆ, ಇನ್ನುಳಿದ 180 ಕೆಜಿ ಸ್ಫೋಟಕಗಳನ್ನು ಸೂಪರ್‌ಪವರ್-90 ಎನ್ನುವ ವಾಣಿಜ್ಯಿಕ ಸ್ಫೋಟಕದಿಂದ ನಿರ್ಮಿಸಲಾಗಿತ್ತು. ಇದನ್ನು ಒಂದು ಗಣಿಗಾರಿಕಾ ಪ್ರದೇಶದಿಂದ ಅಕ್ರಮವಾಗಿ ಪಡೆಯಲಾಗಿತ್ತು. ಇದರೊಡನೆ, ಸ್ಥಳೀಯ ಅಂಗಡಿಗಳಲ್ಲಿ ಸುಲಭವಾಗಿ ಸಿಗುವ ಅಮೋನಿಯಂ ಪುಡಿ ಮತ್ತು ರಸಗೊಬ್ಬರಗಳೂ ಇದ್ದವು. ಸುಲಭವಾಗಿ ಲಭಿಸುವ ಉಪಕರಣಗಳನ್ನು ಹೇಗೆ ಅಪಾಯಕಾರಿ ಮಿಶ್ರಣವಾಗಿಸಬಹುದು ಎನ್ನುವುದಕ್ಕೆ ಇದು ಉದಾಹರಣೆಯಾಗಿತ್ತು.

ಇನ್ನೊಂದು ಆತಂಕಕಾರಿ ಬೆಳವಣಿಗೆ ಎಂದರೆ, ಪಾಕಿಸ್ತಾನ ಡ್ರೋನ್‌ಗಳ ಮೂಲಕ ಸಿದ್ಧಪಡಿಸಿರುವ ಸ್ಟಿಕಿ ಬಾಂಬ್‌ಗಳನ್ನು ಜಮ್ಮು ಮತ್ತು ಕಾಶ್ಮೀರ, ಮತ್ತು ಪಂಜಾಬ್ ಒಳಗೆ ಕಳುಹಿಸುತ್ತಿದೆ. ಈ ಕಾಂತೀಯ ಐಇಡಿಗಳು ತಮ್ಮೊಳಗೆ ಮಿಲಿಟರಿ ಗುಣಮಟ್ಟದ ಸ್ಫೋಟಕಗಳ ಸಣ್ಣ ಪೇಲೋಡ್ ಹೊಂದಿರುತ್ತವೆ. ಅದೃಷ್ಟವಶಾತ್, ಇತ್ತೀಚಿನ ವರ್ಷಗಳಲ್ಲಿ ಇಂತಹ ಡ್ರೋನ್‌ಗಳ ಸಂಖ್ಯೆ ಸಾಕಷ್ಟು ಇಳಿಕೆ ಕಂಡಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲೂ ಐಇಡಿ ಸ್ಫೋಟಗಳು ತೀವ್ರವಾಗಿ ಕಡಿಮೆಯಾಗಿವೆ.

ಆದರೆ, ಭಯೋತ್ಪಾದಕರಿಗೆ ಈ ಸ್ಫೋಟಕಗಳು ಎಲ್ಲಿಂದ ಲಭಿಸುತ್ತವೆ? ಮಿಲಿಟರಿ ಗುಣಮಟ್ಟದ ಸ್ಫೋಟಕಗಳನ್ನು ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ಡ್ರೋನ್‌ಗಳು ಅಥವಾ ಭಯೋತ್ಪಾದಕರ ಮೂಲಕ ಭಾರತಕ್ಕೆ ರವಾನಿಸುತ್ತದೆ. ಈಗ ನಮ್ಮ ಗಡಿ ಭದ್ರತೆ ಅತ್ಯಂತ ಉತ್ತಮವಾಗಿದ್ದರೂ, ನಮ್ಮ ಯೋಧರು ಸ್ಫೋಟಕಗಳ ಕಳ್ಳ ಸಾಗಣೆಯ ಪ್ರತಿಯೊಂದು ಪ್ರಯತ್ನಗಳನ್ನೂ ತಡೆಗಟ್ಟಬೇಕು ಎಂದು ಗಣಪತಿ ಅಭಿಪ್ರಾಯ ಪಡುತ್ತಾರೆ. ಆದರೆ, ಸ್ಫೋಟಗಳ ರೂವಾರಿ ಭಯೋತ್ಪಾದಕರಿಗೆ ಅದೃಷ್ಟವಿದ್ದು, ಕೇವಲ ಒಂದು ಬಾರಿ ಸ್ಫೋಟಕಗಳನ್ನು ಗಡಿ ದಾಟಿಸಿದರೂ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಾಧ್ಯವಾಗುತ್ತದೆ. ಆದ್ದರಿಂದ ಇದು ನಿರಂತರವಾಗಿ ಒಂದು ಇಲಿ ಮತ್ತು ಬೆಕ್ಕಿನ ಆಟದಂತಿದ್ದು, ನಾವು ನಮ್ಮ ಕಣ್ಗಾವಲನ್ನು ಸದಾ ಉತ್ತಮಪಡಿಸುತ್ತಲೇ ಇದ್ದು, ಯಾವಾಗಲೂ ಜಾಗೃತವಾಗಿರಬೇಕು.

ವಾಣಿಜ್ಯಿಕ ಸ್ಫೋಟಕಗಳು ಮತ್ತು ಡೆಟೊನೇಟರ್‌ಗಳನ್ನು ಗಣಿಗಾರಿಕೆ, ರಸ್ತೆ ಕಾಮಗಾರಿ, ಮತ್ತು ನಿರ್ಮಾಣ ಕಾರ್ಯಗಳಲ್ಲಿ ಕಾನೂನು ಬದ್ಧವಾಗಿ, ಪರವಾನಗಿ ಪಡೆದು ಬಳಸಲಾಗುತ್ತದೆ. ವಾಣಿಜ್ಯ ಸಚಿವಾಲಯದ ಅಧೀನ ಸಂಸ್ಥೆಯಾದ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (ಪಿಇಎಸ್ಒ) ಈ ಸ್ಫೋಟಕಗಳ ಉತ್ಪಾದನೆ, ಪೂರೈಕೆ, ಸಂಗ್ರಹಣೆ, ಮತ್ತು ಅಂತಿಮ ಬಳಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಕಳೆದ ವರ್ಷಗಳಲ್ಲಿ, ಪಿಇಎಸ್ಒ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ. ಆದರೆ, ಈ ಸಂಸ್ಥೆ ಕಡಿಮೆ ಸಿಬ್ಬಂದಿ ಮತ್ತು ವ್ಯಾಪ್ತಿ ಹೊಂದಿದೆ. ಆದ್ದರಿಂದ ಅಂತಿಮ ಬಳಕೆದಾರರ ಹಂತದಲ್ಲಿ, ಅದರಲ್ಲೂ ಉದ್ವಿಗ್ನತೆ ಇರುವ ಪ್ರದೇಶಗಳಲ್ಲಿ ಒಂದಷ್ಟು ಕಳ್ಳತನ ಮತ್ತು ದುರುಪಯೋಗಗಳು ನಡೆಯುತ್ತವೆ.

ಈ ಸವಾಲುಗಳು ಭಾರತಕ್ಕೆ ಯಾಕೆ ದೊಡ್ಡ ಹಂತದ ಕಾರ್ಯತಂತ್ರ ಮತ್ತು ನೆಲಮಟ್ಟದ ಕಾರ್ಯಾಚರಣೆ ನಡೆಸುವ, ಪೂರ್ಣ ಪ್ರಮಾಣದ ರಾಷ್ಟ್ರೀಯ ಐಇಡಿ ನಿಗ್ರಹ ನೀತಿಯ ಅಗತ್ಯವಿದೆ ಎನ್ನುವುದನ್ನು ತೋರಿಸಿವೆ. ಇದಕ್ಕಾಗಿ ಎಲ್ಲ ಸಂಸ್ಥೆಗಳೂ ಜೊತೆಯಾಗಿ, ಸ್ಪಷ್ಟ ಪಾತ್ರಗಳು ಮತ್ತು ಜವಾಬ್ದಾರಿಗಳೊಡನೆ ಕಾರ್ಯಾಚರಿಸಬೇಕಿದೆ. ಅಂತಿಮವಾಗಿ, ಜೈಷ್ ಭಿತ್ತಿಪತ್ರಗಳನ್ನು ಬುದ್ಧಿವಂತಿಕೆಯಿಂದ ಗುರುತಿಸಿದ ಶ್ರೀನಗರದ ಪೊಲೀಸ್ ಅಧಿಕಾರಿಯನ್ನೂ ಶ್ಲಾಘಿಸಬೇಕು. ಏಕೆಂದರೆ, ಅವರ ಕ್ರಮದ ಪರಿಣಾಮವಾಗಿ ಗಂಭೀರ ತನಿಖೆ ನಡೆದು, ಈ ಹೊಸ ಮಾದರಿಯ ಭಯೋತ್ಪಾದನೆಯನ್ನು ಬಯಲಿಗೆಳೆಯಲಾಯಿತು. ಭಯೋತ್ಪಾದನೆಯ ವಿರುದ್ಧ ನಮ್ಮ ಜಾಗರೂಕತೆ ಮತ್ತು ಬುದ್ಧಿವಂತೆಕೆಗಳೇ ನಮ್ಮ ಅತ್ಯುತ್ತಮ ಆಯುಧ ಎನ್ನುವುದನ್ನು ಈ ಅಧಿಕಾರಿಯ ಕಾರ್ಯ ನೆನಪಿಸುತ್ತದೆ. ಆದರೆ, ಶುಕ್ರವಾರ ರಾತ್ರಿ ನೌಗಮ್ ಪೊಲೀಸ್ ಠಾಣೆಯಲ್ಲಿ ವಶಪಡಿಸಿಟ್ಟಿದ್ದ ಸ್ಫೋಟಕಗಳು ಪರೀಕ್ಷೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಡಿದಾಗ, ಪೊಲೀಸರು ಮತ್ತು ಫೊರೆನ್ಸಿಕ್ (ವಿಧಿವಿಜ್ಞಾನ) ತಜ್ಞರು ಸೇರಿದಂತೆ, ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದು, ವಶಪಡಿಸಿಕೊಂಡ ಸ್ಫೋಟಕಗಳನ್ನು ಅಸಮರ್ಪಕವಾಗಿ ಸಂಗ್ರಹಿಸುವುದೂ ಸಹ ಅಷ್ಟೇ ಅಪಾಯಕಾರಿ ಎನ್ನುವುದನ್ನು ಸಾಬೀತುಪಡಿಸಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಲು ಶಿಕ್ಷೆಗೆ ಗುರಿಯಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಹಸ್ತಾಂತರಿಸಿ: ಭಾರತಕ್ಕೆ ಬಾಂಗ್ಲಾದೇಶ ಆಗ್ರಹ

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ರದ್ದು ಮಾಡಿದ ಹೈಕೋರ್ಟ್!

'ವಿದೇಶದಲ್ಲಿ ವಾಸ, 20 ಕೋಟಿ ರೂ ಆದಾಯ'.. Piracy ಮಾಸ್ಟರ್ ಮೈಂಡ್ Ravi immadi ಸಿಕ್ಕಿಬಿದ್ದಿದ್ದೇ ರೋಚಕ, ಪತ್ನಿಯೇ ತೋಡಿದ್ದಳು ಗುಂಡಿ!

Piracy ಮಾಸ್ಟರ್ ಮೈಂಡ್ iBomma ಮಾಲೀಕ ರವಿ ಇಮ್ಮಡಿ ಅರೆಸ್ಟ್! ಅಂದಿನ ವಾರ್ನಿಂಗ್ ಇಂದು ಮುಳುವಾಯ್ತಾ?

Delhi blast: ಪ್ರಮುಖ ಆರೋಪಿಯ ಸಹಚರನನ್ನು ಬಂಧಿಸಿದ NIA

SCROLL FOR NEXT