ಬಹುತೇಕ ಆಧುನಿಕ ಯುದ್ಧ ವಿಮಾನಗಳು ಎರಡು ಆಸನಗಳ ಬದಲು ಕೇವಲ ಒಂದೇ ಆಸನವನ್ನು ಏಕೆ ಹೊಂದಿರುತ್ತವೆ ಎಂದು ಆಲೋಚಿಸಿದ್ದೀರಾ? ಇದು ವೈಮಾನಿಕ ತಂತ್ರಜ್ಞಾನದಲ್ಲಿನ ಒಂದು ಆಸಕ್ತಿಕರ ಬದಲಾವಣೆಯಾಗಿದ್ದು, ವಾಯು ಯುದ್ಧದ ಕುರಿತು ನಾವು ಆಲೋಚಿಸುವ ರೀತಿಯನ್ನೇ ಬದಲಾಯಿಸುತ್ತಿದೆ. ಈ ಬದಲಾವಣೆ ಯಾಕಾಗಿ ಉಂಟಾಗಿದೆ? ಭವಿಷ್ಯದ ವಾಯು ರಕ್ಷಣೆಯ ಮೇಲೆ ಇದರ ಪರಿಣಾಮ ಏನು ಎಂದು ಈ ಲೇಖನದಲ್ಲಿ ಗಮನಿಸೋಣ.
ಬಹಳ ಹಿಂದೆ ಏನಲ್ಲ, ಬಹುತೇಕ ಇತ್ತೀಚಿನ ತನಕವೂ ಯುದ್ಧ ವಿಮಾನಗಳಲ್ಲಿ ಇಬ್ಬರು ಪೈಲಟ್‌ಗಳು ಇರುವುದು ಅತ್ಯಂತ ಅವಶ್ಯಕ ಎಂಬಂತೆ ಭಾವಿಸಲಾಗಿತ್ತು. ಎಫ್-15ಇ ಸ್ಟ್ರೈಕ್ ಈಗಲ್, ಸುಖೋಯಿ ಸು-30 ಎಂಕೆಐ, ಮತ್ತು ಪ್ರಸಿದ್ಧವಾದ ಮೆಕ್‌ಡಾನೆಲ್ ಡಗ್ಲಾಸ್ ಎಫ್-4ನಂತಹ ಪ್ರಸಿದ್ಧವಾದ, ಎರಡು ಆಸನಗಳ ಯುದ್ಧ ವಿಮಾನಗಳು ಆಗಸದಲ್ಲಿ ತಮ್ಮ ಪಾರಮ್ಯ ಸಾಧಿಸಿದ್ದವು. ತಮ್ಮ ಸಾಧನೆಗಳಿಂದಲೇ ಹೆಸರಾಗಿದ್ದವು. ಓರ್ವ ಪೈಲಟ್ ವಿಮಾನವನ್ನು ಚಲಾಯಿಸುತ್ತಿದ್ದರೆ, ಇನ್ನೋರ್ವ ಪೈಲಟ್ ಸಂಕೀರ್ಣವಾದ ರೇಡಾರ್ ವ್ಯವಸ್ಥೆಗಳು, ನ್ಯಾವಿಗೇಶನ್ (ಸಂಚರಣೆ), ಮತ್ತು ಆಯುಧ ನಿಯಂತ್ರಣಗಳನ್ನು ನಿರ್ವಹಿಸುತ್ತಿದ್ದ. ನಾರ್ಥ್ರಾಪ್ ಟಿ-38 ಟಾಲನ್ ನಂತಹ ತರಬೇತಿ ವಿಮಾನಗಳು ಇಂದಿಗೂ ಎರಡು ಆಸನಗಳ ವ್ಯವಸ್ಥೆಯನ್ನು ಹೊಂದಿವೆ. ತರಬೇತುದಾರ ಪೈಲಟ್ ಜೊತೆಗೆ ಕುಳಿತಿರಬೇಕಾಗಿರುವುದು ಇದಕ್ಕೆ ಕಾರಣವಾಗಿದೆ. ದೀರ್ಘ ವ್ಯಾಪ್ತಿಯ ಕಾರ್ಯಾಚರಣೆಗಳಿಗೆ ಇಬ್ಬರು ಪೈಲಟ್‌ಗಳನ್ನು ಹೊಂದಿರುವುದು ಒಂದು ರೀತಿ ಸರಿಯಾದ ಕ್ರಮ ಎನಿಸುತ್ತಿತ್ತು. ಇಬ್ಬರು ಪೈಲಟ್‌ಗಳು ಕೆಲಸದ ಭಾರವನ್ನು ಹಂಚಿಕೊಳ್ಳಬಹುದಿತ್ತು. ಆ ಮೂಲಕ ಯಾರೂ ಅತಿಯಾಗಿ ಬಳಲದಂತೆ ಕಾರ್ಯಾಚರಣೆ ಪೂರೈಸಲಾಗುತ್ತಿತ್ತು. ಆದರೆ, ವಿಚಾರ ಇಲ್ಲೇ ಹೆಚ್ಚು ಆಸಕ್ತಿಕರವಾಗುತ್ತದೆ.
ತಂತ್ರಜ್ಞಾನ ವಿಮಾನದ ಕಾಕ್‌ಪಿಟ್ ಅನ್ನು ಸಂಪೂರ್ಣವಾಗಿ ಮಾರ್ಪಡಿಸಿದೆ. ಎಫ್-35ಎ, ಎಫ್-35ಬಿ, ಮತ್ತು ಎಫ್-35ಸಿ ಆವೃತ್ತಿಗಳನ್ನು ಒಳಗೊಂಡಿರುವ ಎಫ್-35 ವರ್ಗದಂತಹ ಆಧುನಿಕ ಯುದ್ಧ ವಿಮಾನಗಳೆಲ್ಲವೂ ಒಂಟಿ ಆಸನದ ಯುದ್ಧ ವಿಮಾನಗಳಾಗಿವೆ. ಯಾಕೆ? ಯಾಕೆಂದರೆ, ಎರಡನೇ ಪೈಲಟ್ ನಡೆಸುತ್ತಿದ್ದ ಬಹುತೇಕ ಕೆಲಸಗಳನ್ನು ಇಂದು ಕೃತಕ ಬುದ್ಧಿಮತ್ತೆ (ಎಐ) ಮತ್ತು ಆಧುನಿಕ ಕಂಪ್ಯೂಟರ್ ಸಿಸ್ಟಮ್‌ಗಳು ನಡೆಸುತ್ತವೆ. ಕಾಕ್‌ಪಿಟ್ ಇಂದು ಸ್ಮಾರ್ಟ್ ಸಿಸ್ಟಮ್‌ಗಳಿಂದ ತುಂಬಿದ್ದು, ಪೈಲಟ್‌ಗಳ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿವೆ. ಬಹುತೇಕ ಪ್ರಮುಖ ಮಾಹಿತಿಗಳಂತೂ ಸ್ವಯಂಚಾಲಿತವಾಗಿ ಭೂ ಕೇಂದ್ರಗಳಿಗೆ ರವಾನೆಯಾಗುತ್ತವೆ. ಇದಕ್ಕೆ ಇಂದು ಯಾವುದೇ ರೀತಿಯ ಮಾನವ ಆದೇಶಗಳ ಅಗತ್ಯವಿಲ್ಲ. ಈ ವ್ಯವಸ್ಥೆಗಳು ಒಂದು ರೀತಿಯಲ್ಲಿ ಕಣ್ಣಿಗೆ ಕಾಣಿಸದ, ಸಾಫ್ಟ್‌ವೇರ್ ಮೂಲಕ ತಯಾರಿಸಿರುವ ಸಹಾಯಕ ಪೈಲಟ್ ಅನ್ನು ಹೊಂದಿರುವಂತಹ ಅನುಭವ ನೀಡುತ್ತವೆ.
ಏಕಾಂಗಿ ಪೈಲಟ್ ಕಾರ್ಯಾಚರಿಸುವುದರಿಂದ ಒಂದಷ್ಟು ಪ್ರಾಯೋಗಿಕ ಅನುಕೂಲತೆಗಳೂ ಇವೆ. ಒಂಟಿ ಆಸನದ ಯುದ್ಧ ವಿಮಾನಗಳು ಹಗುರವಾಗಿದ್ದು, ಹೆಚ್ಚು ದೂರ ಹಾರಬಲ್ಲವು, ಹೆಚ್ಚಿನ ಆಯುಧಗಳನ್ನು ಒಯ್ಯಬಲ್ಲವು, ಮತ್ತು ಕದನದ ಸಂದರ್ಭದಲ್ಲಿ ಹೆಚ್ಚು ತೀಕ್ಷ್ಣವಾಗಿ ಚಲಿಸಬಲ್ಲವು. ಕೇವಲ ಒಂದು ಕಾಕ್‌ಪಿಟ್‌ಗೆ ಸೀಮಿತವಾಗುವ ಉಪಕರಣಗಳನ್ನು ಹೊಂದಿರುವುದರಿಂದ ವಿಮಾನದ ನಿರ್ವಹಣೆಯೂ ಸುಲಭವಾಗುತ್ತದೆ. ಕಾರ್ಯತಂತ್ರದ ದೃಷ್ಟಿಯಿಂದ ನೋಡುವುದಾದರೆ, ಯುದ್ಧದಲ್ಲಿ ಒಬ್ಬ ಪೈಲಟ್ ಅನ್ನು ಕಳೆದುಕೊಳ್ಳುವುದೇ ಅತ್ಯಂತ ಯಾತನಾದಾಯಕವಾಗಿರುವಾಗ, ಒಂದೇ ವಿಮಾನ ಪತನದಲ್ಲಿ ಇಬ್ಬರು ಪೈಲಟ್‌ಗಳನ್ನು ಕಳೆದುಕೊಳ್ಳುವುದೆಂದರೆ ಯಾವುದೇ ವಾಯು ಸೇನೆಗೂ ಸಹಿಸಲಸಾಧ್ಯವಾದ ಸಂಗತಿಯಾಗಲಿದೆ.
ರಷ್ಯಾದ ಸು-57 ಎರಡು ಆಸನಗಳ ಆಯ್ಕೆಯನ್ನು ಪರಿಶೀಲಿಸುತ್ತಿದೆ. ಆದರೆ, ಇದು ದೂರದಿಂದ ಡ್ರೋನ್‌ಗಳನ್ನು ನಿಯಂತ್ರಿಸುವಂತಹ ನಿರ್ದಿಷ್ಟ ಕಾರ್ಯಾಚರಣೆಗಳಿಗೆ ಸೀಮಿತವಾಗಿರಲಿದೆ. ಫ್ರಾನ್ಸಿನ ರಫೇಲ್ ಯುದ್ಧ ವಿಮಾನವೂ ಒಂದು ಮತ್ತು ಎರಡು ಆಸನಗಳ ಆಯ್ಕೆಯನ್ನು ಹೊಂದಿದ್ದು, ಅದು ಭೂ ಕಾರ್ಯಾಚರಣೆಯೋ, ಅಥವಾ ನೌಕಾಪಡೆಯ ಕಾರ್ಯಾಚರಣೆಯೋ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಆದರೆ, ಜಾಗತಿಕ ಟ್ರೆಂಡ್ ಈಗ ಅತ್ಯಂತ ಸ್ಪಷ್ಟವಾಗಿದ್ದು, ನಾವು ಇಂದು ಅತ್ಯಾಧುನಿಕ ಮತ್ತು ಅಸಾಧಾರಣ ತಂತ್ರಜ್ಞಾನವನ್ನು ಒಳಗೊಂಡಿರುವ, ಒಂಟಿ ಆಸನದ ಯುದ್ಧ ವಿಮಾನಗಳತ್ತ ಸಾಗುತ್ತಿದ್ದೇವೆ. ಬಹುಶಃ ಭವಿಷ್ಯದಲ್ಲಿ ಈ ತಂತ್ರಜ್ಞಾನಗಳ ನೆರವಿನಿಂದ ವಿಮಾನವನ್ನು ದೂರದಿಂದಲೇ ಚಲಾಯಿಸುವಂತಾಗಬಹುದು. ಅಥವಾ ಸಂಪೂರ್ಣ ಸ್ವಾಯತ್ತವಾದ ಯುದ್ಧ ವಿಮಾನಗಳ ನಿರ್ಮಾಣವೂ ಆಗಬಹುದು.
ಹೀಗಿರುವಾಗ, ನೀವು ಎಐ ಸಹಾಯ ಹೊಂದಿರುವ, ಒಂಟಿ ಪೈಲಟ್ ಚಾಲನೆಯ ಯುದ್ಧ ವಿಮಾನದ ಮೇಲೆ ವಿಶ್ವಾಸ ಇರಿಸುತ್ತೀರೋ? ಅಥವಾ ಕಾಕ್‌ಪಿಟ್ ಒಳಗೆ ಇಬ್ಬರು ಪೈಲಟ್‌ಗಳ ಮೆದುಳು ಕಾರ್ಯಾಚರಿಸುವುದು ಉತ್ತಮ ಎಂದು ನಿಮಗನಿಸುತ್ತದೋ?
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com