ಉದ್ದಿಮೆ ಕಟ್ಟಬೇಕು ಎಂದು ನಿರ್ಧಾರ ಮಾಡಿದ ನಂತರ ಯಾವ ರೀತಿಯ ಸಂಸ್ಥೆ ಕಟ್ಟಬೇಕು ಎನ್ನವುದು ಬಹಳ ದೊಡ್ಡ ಪ್ರಶ್ನೆಯಾಗುತ್ತದೆ. ಏಕೆಂದರೆ ಸಂಸ್ಥೆ ತೆರೆಯಲು ಬೇಕಾಗುವ ಕಾಗದ ಪತ್ರಗಳಿಂದ ಹಿಡಿದು ಅದನ್ನು ನಡೆಸುವುದು , ಅದರ ತೆರಿಗೆ , ಕಡ್ಡಾಯವಾಗಿ ಸರಕಾರಕ್ಕೆ ಸಲ್ಲಿಸಬೇಕಾದ ಅಂಕಿ ಅಂಶಗಳು ಎಲ್ಲವೂ ಬದಲಾಗುತ್ತದೆ. ಹೀಗಾಗಿ ಯಾವ ರೀತಿಯ ಸಂಸ್ಥೆ ನಮ್ಮ ಇಂದಿನ ಸ್ಥಿತಿಗೆ ಹೊಂದುತ್ತದೆ ಎನ್ನುವುದನ್ನು ಮೊದಲು ನೋಡಿಕೊಳ್ಳಬೇಕು. ಆ ನಂತರ ಸಂಸ್ಥೆಯನ್ನು ತೆರೆಯುವ ಕೆಲಸಕ್ಕೆ ಕೈ ಹಾಕಬಹುದು. ಹೀಗಾಗಿ ಯಾವ ರೀತಿಯ ರಚನೆಯನ್ನು ನಮ್ಮ ಉದ್ದಿಮೆ ಹೊಂದಿರಬೇಕು ಎನ್ನುವುದನ್ನು ಕಂಡುಕೊಳ್ಳಲು ಕೆಳಗಿನ ಅಂಶಗಳನ್ನು ಸರಿಯಾಗಿ ಅಧ್ಯಯನ ಮಾಡಿ ಅದಕ್ಕೆ ಉತ್ತರ ನಿಗದಿಪಡಿಸಿಕೊಳ್ಳಬೇಕು .
ನಾವೆಷ್ಟು ಹೊಣೆಗಾರಿಕೆ ಹೊರಲು ಸಿದ್ದ?: ಎಲ್ಲಕ್ಕೂ ಮೊದಲಿಗೆ ನಮ್ಮಿಂದ ಎಷ್ಟು ಹೊಣೆಗಾರಿಕೆ ಹೊರಲು ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕು. ಉದಾಹರಣೆಗೆ ಏಕ ವ್ಯಕ್ತಿ ಸಂಸ್ಥೆ ತೆರೆಯುವುದು ಬಹು ಸುಲಭ. ಸರಕಾರಿ ಸಂಸ್ಥೆಗಳಿಗೆ ನೀಡಬೇಕಾದ ಡಾಕ್ಯುಮೆಂಟ್ಸ್ ಕೂಡ ಬಹಳ ಕಡಿಮೆ. ಆದರೆ ಇಲ್ಲಿ ವ್ಯಕ್ತಿ ಮತ್ತು ಸಂಸ್ಥೆಗೆ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ ಎರಡನ್ನೂ ಒಂದೇ ಎಂದು ಭಾವಿಸಲಾಗುತ್ತ. ಮುಂದೊಂದು ದಿನ ಉದ್ದಿಮೆ ಕುಸಿದರೆ ಆಗ ವ್ಯಕ್ತಿಯ ಖಾಸಗಿ ಆಸ್ತಿಯನ್ನು ಸಹ ಮಟ್ಟಗೋಲು ಹಾಕಿಕೊಳ್ಳಬಹುದು. ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ವ್ಯಕ್ತಿ ಬೇರೆ ಮತ್ತು ಉದ್ದಿಮೆ ಬೇರೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಉದ್ದಿಮೆ ಕುಸಿದರೆ ವ್ಯಕ್ತಿಯ ಖಾಸಗಿ ಆಸ್ತಿಯನ್ನು ಅಂದರೆ ಸಂಸ್ಥೆಯ ಡೈರೆಕ್ಟರ್ ಆಸ್ತಿಯನ್ನು ಮಟ್ಟಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿ ಎಷ್ಟು ಲಿಯಬಿಲಿಟಿ ಹೊರುವ ತಾಕತ್ತು ಇದೆ ಎನ್ನುವುದರ ಆಧಾರದ ಮೇಲೆ ಯಾವ ಸ್ಟ್ರಕ್ಚರ್ ಉತ್ತಮ ಎಂದು ನಿರ್ಧರಿಸಬಹುದು.
ನಮ್ಮ ಉದ್ದಿಮೆಗೆ ಎಷ್ಟು ಬಂಡವಾಳದ ಅವಶ್ಯಕತೆಯಿದೆ? : ಉದ್ದಿಮೆಗೆ ಬಂಡವಾಳವೇ ಜೀವಾಳ. ನಾವು ತೆರೆಯಲಿರುವ ಉದ್ದಿಮೆಗೆ ಎಷ್ಟು ಹಣ ಬೇಕಾಗುತ್ತದೆ ಎನ್ನುವ ಅರಿವು ನಮಗಿರಬೇಕಾಗುತ್ತದೆ. ಮುಂದಿನ ಮೂರು ವರ್ಷ ಉದ್ದಿಮೆ ನಡೆಸಲು ಬೇಕಾಗುವ ಹಣವನ್ನು ಅಂದಾಜಿಸಬೇಕಾಗುತ್ತದೆ. ಇದನ್ನು ಫೈನಾನ್ಸಿಯಲ್ ಪ್ರೊಜೆಕ್ಷನ್ಸ್ ಎನ್ನಲಾಗುತ್ತದೆ. ಇದರ ಬಗ್ಗೆ ವಿವರವಾಗಿ ಇನ್ನೊಂದು ಅಧ್ಯಾಯದಲ್ಲಿ ವಿವರಿಸಲಾಗಿದೆ. ಎಷ್ಟು ಬಂಡವಾಳ ಬೇಕು ಎನ್ನುವ ನಿಖರತೆ ಇದ್ದಾಗ ಅದಕ್ಕೆ ತಕ್ಕಂತೆ ನಾವು ನಮ್ಮ ಉದ್ದಿಮೆಯ ರಚನೆಯನ್ನು ಆಯ್ದು ಕೊಳ್ಳಬಹುದು. ಬಂಡವಾಳ ಹೆಚ್ಚು ಬೇಕಾಗಿದ್ದು ಒಬ್ಬರಿಂದ ಸಾಧ್ಯವಿಲ್ಲ ಎಂದಾಗ ಪಾರ್ಟ್ನರ್ ಶಿಪ್ ಫಾರ್ಮ್ಯಾಟ್ ಗೆ ಅಥವಾ ಪ್ರೈವೇಟ್ ಲಿಮಿಟೆಡ್ ಫಾರ್ಮ್ಯಾಟ್ ಗೆ ಹೊರಳಿಕೊಳ್ಳಬಹುದು. ಒಬ್ಬನಿಂದ ಸಾಧ್ಯ ಎಂದಾಗ ಏಕಮಾಲೀಕ ಸಂಸ್ಥೆ ತೆರೆಯಬಹುದು.
ನಮ್ಮ ಉದ್ದಿಮೆಯಲ್ಲಿ ನಮ್ಮಬಳಿ ಎಷ್ಟು ನಿಯಂತ್ರಣವಿರಬೇಕು?: ನಾವು ಒಬ್ಬರಂತೆ ಒಬ್ಬರಿಲ್ಲ. ಕೆಲವರಿಗೆ ತಮ್ಮ ಸಂಸ್ಥೆಯ ಮೇಲೆ ಪೂರ್ಣ ನಿಯಂತ್ರಣ ಅಂದರೆ ಕಂಟ್ರೋಲ್ ಹೊಂದಿರಬೇಕು ಎನ್ನುವ ಮನಸ್ಥಿತಿ ಇರುತ್ತದೆ. ಅಂತಹವರಿಗೆ ಏಕ ಮಾಲೀಕ ಸಂಸ್ಥೆ ಅಂದರೆ ಸೋಲ್ ಪ್ರೊಪೆರೈಟರಿ ಸಂಸ್ಥೆ ಹೊಂದುತ್ತದೆ. ಉಳಿದಂತೆ ಪಾರ್ಟ್ನರ್ ಶಿಪ್ ಸಂಸ್ಥೆಯಲ್ಲಿ , ಪ್ರೈವೇಟ್ ಲಿಮಿಟೆಡ್ ಕಂಪನಿಗಳಲ್ಲಿ ಕೂಡ ಎಷ್ಟು ನಿಯಂತ್ರಣ ಹೊಂದಿರಬೇಕು ಎನ್ನುವುದನ್ನು ಪೂರ್ವ ನಿರ್ಧಾರ ಮಾಡಬಹುದು. ಆದರೆ ನೆನಪಿರಲಿ ಇಲ್ಲೆಲ್ಲೂ ಪರಿಪೂರ್ಣ ನಿಯಂತ್ರಣ ಸಿಕ್ಕುವುದಿಲ್ಲ ಬೇರೆಯವರ ಪಾಲೆಷ್ಟಿರುತ್ತದೆ ಅಷ್ಟರ ಮಟ್ಟಿಗೆ ಅವರೂ ನಿರ್ಧಾರಗಳಲ್ಲಿ ಭಾಗಿಯಾಗುತ್ತಾರೆ. ನಿಯಂತ್ರಣದಲ್ಲಿ ನಮ್ಮ ಪಾಲೆಷ್ಟು ಎನ್ನುವುದು ಪ್ರಮುಖ ನಿರ್ಧಾರವಾಗುತ್ತದೆ. ಹೀಗಾಗಿ ಕನಿಷ್ಠ ೫೧ ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನ ಹೊಣೆಗಾರಿಕೆ ನಾವು ಹೊರಲು ಸಿದ್ಧವಿರಬೇಕಾಗುತ್ತದೆ.
ಯಾವ ರೀತಿಯ ಉದ್ದಿಮೆಗೆ ಎಷ್ಟು ತೆರಿಗೆ , ಸರಕಾರದ ನಿಯಂತ್ರವೇನು?: ಕೆಲವೊಂದು ಬಿಸಿನೆಸ್ ಫಾರ್ಮ್ಯಾಟ್ ಹೆಚ್ಚಿನ ತೆರಿಗೆ ಜೊತೆಗೆ ಸರಕಾರದ ನಿಗರಾಣಿ ಮತ್ತು ನಿಯಂತ್ರಣಕ್ಕೂ ಒಳಪಡುತ್ತದೆ. ಹೀಗಾಗಿ ಯಾವ ರಚನೆಯಲ್ಲಿ ಎಷ್ಟು ಈ ರೀತಿಯ ಸರಕಾರದ ಹೆಚ್ಚಿನ ಹಸ್ತಕ್ಷೇಪವಿದೆ , ನಾವು ಅದಕ್ಕೆ ಸಿದ್ಧವಿದ್ದೇವೆಯೇ ? ಭವಿಷ್ಯದಲ್ಲಿ ಇದರಿಂದ ಅನುಕೂಲ ಹೆಚ್ಚಾಗುತ್ತದೆಯೇ ಅಥವಾ ಅಡ್ಡಿ ಆತಂಕಗಳು ಹೆಚ್ಚಾಗುತ್ತವೆಯೇ ? ಹೀಗೆ ಹಲವಾರು ಆಯಾಮಗಳನ್ನು ಗಮನಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಉದ್ದಿಮೆಯನ್ನು ಮುಂದಿನ ಹತ್ತು ವರ್ಷದಲ್ಲಿ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ನಿಖರತೆ: ಏಕ ಮಾಲೀಕ ಸಂಸ್ಥೆ ಅದೆಷ್ಟೇ ದೊಡ್ಡದಾಗಲಿ ಅದಕ್ಕೆ ಸಮಾಜದಲ್ಲಿ ಅಷ್ಟು ಬೆಲೆಯಿಲ್ಲ. ನೂರಾರು ಕೋಟಿ ರೂಪಾಯಿ ಟರ್ನ್ಓವರ್ ಇರುವ ಸಂಸ್ಥೆಗೂ ಕೂಡ ಬೆಲೆಯಿರುವುದಿಲ್ಲ. ಏಕೆಂದರೆ ಳ್ಳಿ ವ್ಯಕ್ತಿಗೂ ಮತ್ತು ಸಂಸ್ಥೆಗೂ ವ್ಯತ್ಯಾಸವಿಲ್ಲ. ಎರಡನ್ನೂ ಒಂದೇ ಲೀಗಲ್ ಎಂಟಿಟಿ ಎನ್ನುವಂತೆ ನೋಡಲಾಗುತ್ತದೆ. ಹತ್ತು ವರ್ಷದಲ್ಲಿ ನೂರು ಕೋಟಿ ಸಂಸ್ಥೆಯಾದರೂ ಸಹ ಅಲ್ಲಿಗೆ ಬಂಡವಾಳ ಹೂಡಲು ಹೂಡಿಕೆದಾರರು ಬರುವುದಿಲ್ಲ. ಸಂಸ್ಥೆಯನ್ನು ಸಾವಿರ ಕೋಟಿ ಸಂಸ್ಥೆಯಾಗಿ ಮಾಡುವ ಕನಸಿದ್ದರೆ ಆಗ ಏಕ ಮಾಲೀಕ ಸಂಸ್ಥೆ , ಪಾಲುದಾರ ಸಂಸ್ಥೆಗಳಿಂದ ಸಾಧ್ಯವಾಗುವುದಿಲ್ಲ. ಆಗ ಪ್ರೈವೇಟ್ ಲಿಮಿಟೆಡ್ ಕಂಪನಿ ಬೇಕಾಗುತ್ತದೆ. ನಂತರ ಅದನ್ನು ಲಿಮಿಟೆಡ್ ಕಂಪನಿಯಾಗಿ ಕೂಡ ಪರಿವರ್ತಿಸಬಹುದು. ಹೀಗಾಗಿ ಭವಿಷ್ಯದ ಬಗ್ಗೆ ನಮ್ಮ ಕನಸುಗಳೇನು ಎನ್ನುವ ನಿಖರತೆ ಕೂಡ ಉದ್ದಿಮೆ ಯಾವ ರಚನೆ ಹೊಂದಿರಬೇಕು ಎನ್ನುವುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಯತ್ನಗಳನ್ನು ಮಾಡಿ ಗೆದ್ದಿರುವ ಸಂಸ್ಥೆಯ ಔಟ್ಲೆಟ್ ಬೇರೊಂದು ಕಡೆ ಅದೇ ಹೆಸರಿನಲ್ಲಿ , ಅದೇ ಲೋಗೋ , ಅದೇ ವ್ಯಾಪಾರವನ್ನು ಮಾಡುವ ಪ್ರಕ್ರಿಯೆಗೆ ಫ್ರಾಂಚೈಸ್ ಬಿಸಿನೆಸ್ ಫಾರ್ಮ್ಯಾಟ್ ಎನ್ನಲಾಗುತ್ತದೆ. ಸಾಮಾನ್ಯವಾಗಿ ಊಟ ,ತಿಂಡಿ , ರಿಟೇಲ್ ಅಂಗಡಿಗಳು , ಶಿಕ್ಷಣ ,ಸೇವೆ ನೀಡುವ ಸಂಸ್ಥೆಗಳು ಮತ್ತು ಲಾಜಿಸ್ಟಿಕ್ಸ್ ಗೆ ಸಂಬಂಧಿಸಿದ ಉದ್ದಿಮೆಗಳನ್ನು ಸುಲಭವಾಗಿ ಈ ಫಾರ್ಮ್ಯಾಟ್ ಅಡಿಯಲ್ಲಿ ಮಾಡಬಹುದು.
ಊಟ ತಿಂಡಿಯ ಉದಾಹರಣೆಯನ್ನು ತೆಗೆದುಕೊಂಡರೆ ಉತ್ತರ ಭಾರತದಲ್ಲಿ ಗೆದ್ದಿರುವ ಕೈಲಾಶ್ ಪರ್ಬತ್ ಎನ್ನುವ ರೆಸ್ಟುರೆಂಟ್ ಇಂದಿಗೆ ದಕ್ಷಿಣದ ಎಲ್ಲಾ ನಗರಗಳಲ್ಲೂ ಕಾಣಬಹುದು. ಹಾಗೆ ಗೋಲಿ ವಡ ಪಾವ್ , ಫೈವ್ ಸ್ಟಾರ್ ಚಿಕೆನ್ , ಮೈಸೂರಿನ ಮಹಾಲಕ್ಷ್ಮಿ ಸ್ವೀಟ್ಸ್, ಡಾಮಿನೊಸ್ , ಮ್ಯಾಕ್ ಡೊನಾಲ್ಡ್ , ಕೆಎಫ್ಸಿ ಇತ್ಯಾದಿಗಳನ್ನು ನೋಡಬಹುದು. ಶಿಕ್ಷಣ ಎಂದಾಕ್ಷಣ zee ಸ್ಕೂಲ್ಸ್ ನೆನಪಾಗುತ್ತದೆ. ಎನ್ ಪಿ ಎಸ್ ಇನ್ನೊಂದು ಉದಾಹರಣೆ.
ಗಮನಿಸಿ ಈ ರೀತಿಯ ವ್ಯಾಪಾರವನ್ನು ಯಾರೋ ಒಬ್ಬರು ಜಗತ್ತಿನ ಯಾವ ಭಾಗದಲ್ಲೂ ಮಾಡಿ ಗೆದ್ದಿರಬಹುದು. ಅದು ಅತ್ಯಂತ ಜನ ಮನ್ನಣೆ ಗಳಿಸಿದಾಗ ಬೇರೆ ಊರುಗಳಲ್ಲಿ ಕೂಡ ಅಂತಹುದೇ ಒಂದು ಸೆಲ್ಲಿಂಗ್ ಪಾಯಿಂಟ್ ಇರಬೇಕು ಎಂದು ಜನರು ಬಯಸತ್ತಾರೆ. ಊಟ ತಿಂಡಿಯ ವಿಷಯದಲ್ಲಿ ಇದು ಅತಿ ಹೆಚ್ಚು ಹೊಂದುತ್ತದೆ. ಹೀಗಾಗಿ ಬೇರೆ ಬೇರೆ ಊರುಗಳಲ್ಲಿ ಗೆದ್ದ ಚೌಕಟ್ಟಿನಲ್ಲಿ ವ್ಯಾಪಾರವನ್ನು ಮೂಲ ಉದ್ದಿಮೆದಾರನ ಅನುಮತಿ ಪಡೆದು ,ಆತನಿಗೆ ನೀಡಬೇಕಾಗಿರುವ ಹಣವನ್ನು ನಂತರದ ದಿನಗಳಲ್ಲಿ ರಾಯಲ್ಟಿಯನ್ನು ನೀಡಿ ನಡೆಸುವ ಉದ್ದಿಮೆಯಿದು.
ಸಾಮಾನ್ಯವಾಗಿ ಈ ಉದ್ದಿಮೆಯನ್ನು ಕೂಡ ಏಕವ್ಯಕ್ತಿ ನಡೆಸಬಹುದು , ಪಾಲುದಾರಿಕೆಯಲ್ಲಿ ನಡೆಸಬಹುದು ಅಥವಾ ಪ್ರೈವೇಟ್ ಲಿಮಿಟೆಡ್ ತೆರೆದು ಕೂಡ ನಡೆಸಬಹುದು. ಹೀಗಾಗಿ ಇಂತಹ ಸಂಸ್ಥೆಗಳನ್ನು ತೆಗೆದಾಗ ಕಾನೂನು ಹೇಳುವ ಎಲ್ಲಾ ರೀತಿಯ ಅನುಮತಿ ಪತ್ರಗಳನ್ನು ಇಲ್ಲಿಯೂ ಸಿದ್ದಪಡಿಸಿ ಕೊಳ್ಳಬೇಕಾಗುತ್ತದೆ. ಅದರಲ್ಲಿ ಯಾವುದೇ ವಿನಾಯ್ತಿ ಇಲ್ಲ.ಇದರ ಜೊತೆಗೆ ಫ್ರಾಂಚೈಸ್ ಅಗ್ರಿಮೆಂಟ್ ತಪ್ಪದೆ ಮಾಡಿಸಿಕೊಳ್ಳಬೇಕು. ಇದಕ್ಕೆ ಕಾನೂನು ತಜ್ಞರ ಸಹಾಯ ಪಡೆಯುವುದು ಒಳ್ಳೆಯದು. ನಿಯಮಗಳೇನು , ಭಾದ್ಯತೆಗಳು , ಹಕ್ಕುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ನಂತರ ಇಂತಹ ಒಪ್ಪಂದ ಪತ್ರಕ್ಕೆ ಸಹಿ ಹಾಕಬೇಕು. ಈ ಫಾರ್ಮ್ಯಾಟ್ ನಮ್ಮದಾಗಿಸಿಕೊಳ್ಳುವುದರಿಂದ ಒಂದಷ್ಟು ಅನುಕೂಲಗಳಿವೆ. ಅದೇನು ಎನ್ನುವುದನ್ನು ನೋಡೋಣ. ಹಾಗೆ ಒಂದಷ್ಟು ಅನಾನುಕೂಲಗಳು ಕೂಡ ಇವೆ ಅದನ್ನು ಕೂಡ ಪಟ್ಟಿ ಮಾಡೋಣ.
ಇದು ಈಗಾಗಲೇ ಗೆದ್ದ ಉದ್ದಿಮೆಯಾಗಿರುವುದರಿಂದ ಹೊಸ ಉದ್ದಿಮೆಯಲ್ಲಿ ಇರುವಷ್ಟು ಅಪಾಯ ಇರುವುದಿಲ್ಲ. ಅಂದರೆ ಇಲ್ಲಿ ಗೆಲುವಿನ ಸಾಧ್ಯತೆ ಹೆಚ್ಚಾಗಿರುತ್ತದೆ. ಹೊಸ ಹೋಟೆಲಿಗೆ ಜನ ಬರುತ್ತಾರೆಯೇ ಎನ್ನುವ ಪ್ರಶ್ನೆ ಮ್ಯಾಕ್ ಡೊನಾಲ್ಡ್ ಫ್ರಾಂಚೈಸ್ ತೆಗೆದುಕೊಂಡರೆ ಉದ್ಬವಾಗುವುದಿಲ್ಲ. ಮ್ಯಾಕ್ ಒಂದು ಬ್ರಾಂಡ್. ಯಾವುದೇ ಊರಿನಲ್ಲಿ ತೆರೆದರೂ ಜನ ಬರುತ್ತಾರೆ.
ಉದ್ದಿಮೆ ನಡೆಸಲು ಬೇಕಾಗುವ SOP ಅಂದರೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅವರ ಬಳಿ ಇರುತ್ತದೆ. ಹೀಗಾಗಿ ಅದನ್ನು ಅವರು ತಮ್ಮ ಫ್ರಾಂಚೈಸ್ ಗೆ ವರ್ಗಾವಣೆ ಮಾಡುತ್ತಾರೆ. ಗೆಲುವಿಗೆ ಬೇಕಾದ ಸಣ್ಣಪುಟ್ಟ ಅಂಶಗಳನ್ನೂ ಸಹ ಅವರು ಅರಿತಿರುತ್ತಾರೆ. ಅದು ಫ್ರಾಂಚೈಸ್ ತೆಗೆದುಕೊಂಡವರಿಗೆ ಸುಲಭವಾಗಿ ಸಿಗುತ್ತದೆ.
ಕೆಲಸಗಾರರಿಗೆ ಬೇಕಾಗುವ ಟ್ರೈನಿಂಗ್ ಜೊತೆಗೆ ವ್ಯಾಪಾರಕ್ಕೆ ಬೇಕಾಗುವ ಮೂಲ ಸಾಮಗ್ರಿಗಳನ್ನು ಸಹ ಅವರೇ ಒದಗಿಸುತ್ತಾರೆ. ಹೀಗಾಗಿ ಪದಾರ್ಥಗಳನ್ನು ಎಲ್ಲಿಂದ ಪಡೆಯುವುದು ಎನ್ನುವ ತಲೆನೋವು ಇಲ್ಲವಾಗುತ್ತದೆ. ಗುಣಮಟ್ಟವನ್ನು ಹೇಗೆ ಕಾಯ್ದು ಕೊಳ್ಳುವುದು ಎನ್ನುವುದನ್ನು ಕೂಡ ಅವರೇ ಹೇಳಿಕೊಡುತ್ತಾರೆ.
ಹೊಸದಾಗಿ ಉದ್ದಿಮೆ ಪ್ರಪಂಚಕ್ಕೆ ಕಾಲಿಟ್ಟವರಿಗೆ ಇದು ವರದಾನ. ಮಕ್ಕಳನ್ನು ಹೇಗೆ ಬೆರಳು ಹಿಡಿದು ನಡೆಸುತ್ತೇವೆ ಥೇಟ್ ಹಾಗೆ ಇಲ್ಲಿ ಉದ್ದಿಮೆದಾರನಿಗೆ ಎಲ್ಲಾ ರೀತಿಯ ಸಹಾಯವನ್ನು ಫ್ರಾಂಚೈಸಿ ನೀಡುವ ಮೂಲ ಸಂಸ್ಥೆ ನೀಡುತ್ತದೆ.
ಗೆದ್ದ ಬ್ರಾಂಡ್ ಜೊತೆಗೆ ಗುರುತಿಸಿಕೊಳ್ಳುವ ಲಾಭದ ಜೊತೆಗೆ ಫ್ರಾಂಚೈಸಿ ಒಪ್ಪಂದ ಇರುವವರೆಗೂ ಬೆಂಬಲವನ್ನು ಮುಂದುವರಿಸುತ್ತಾರೆ. ಅಂದರೆ ಒಮ್ಮೆ ಉದ್ದಿಮೆ ತೆರೆದ ನಂತರ ಅಲ್ಲಿಗೆ ಮುಗಿಯಿತು ಎನ್ನುವಂತಿಲ್ಲ. ಇರುವಷ್ಟು ಕಾಲವೂ ಫ್ರಾಂಚೈಸಿಗೆ ಮೂಲ ಸಂಸ್ಥೆಯಿಂದ ಎಲ್ಲಾ ರೀತಿಯ ಬೆಂಬಲ ಸಿಗುತ್ತಲೇ ಇರುತ್ತದೆ. ಹೊಸದಾಗಿ ಅನ್ವೇಷಣೆಗಳಾದರೆ ಅದು ಕೂಡ ಫ್ರಾಂಚೈಸಿಗೆ ಸಿಗುತ್ತದೆ.
ಒಂದಷ್ಟು ಅನಾನುಕೂಲಗಳು ಸಹ ಜೊತೆಯಾಗುತ್ತವೆ. ಇವುಗಳನ್ನು ನಾವು ನೋಡುವ ರೀತಿಯ ಮೇಲೆ ಇದು ಅನಾನುಕೂಲವೇ ಅಥಾವ ಅಲ್ಲವೇ ಎನ್ನುವುದು ಕೂಡ ನಿರ್ಧಾರವಾಗುತ್ತದೆ.
ಫ್ರಾಂಚೈಸಿ ಒಪ್ಪಂದಕ್ಕೆ ಅವರು ನಿಗದಿ ಪಡಿಸಿರುವ ಹಣವನ್ನು ಮುಂಗಡವಾಗಿ ನೀಡಬೇಕಾಗುತ್ತದೆ. ಇದರ ಜೊತೆಗೆ ಪ್ರತಿ ತಿಂಗಳೂ ವ್ಯಾಪಾರದಲ್ಲಿ ನಿಗದಿ ಪಡಿಸಿದ ಪ್ರತಿಶತ ಅಂಶವನ್ನು ಅವರಿಗೆ ರಾಯಲ್ಟಿ ರೂಪದಲ್ಲಿ ನೀಡಬೇಕಾಗುತ್ತದೆ.
ಅವರು ಹೇಳಿದ ನಿಯಮಾವಳಿಗೆ ಬದ್ಧರಾಗಿರಬೇಕಾಗುತ್ತದೆ. ಅಲ್ಲಿರುವುದು ಬಿಟ್ಟು ಹೊಸತನಕ್ಕೆ , ಅಂದರೆ ನಾವೇನಾದರೂ ಸ್ಥಳೀಯ ಬೇಡಿಕೆಗೆ ತಕ್ಕಂತೆ ಮಾಡುವುದು ಸಾಧ್ಯವಿಲ್ಲ. ಎಲ್ಲವುದಕ್ಕೂ ಮೂಲ ಸಂಸ್ಥೆಯ ಅನುಮತಿಗೆ ಕಾಯಬೇಕಾಗುತ್ತದೆ.
ಸಾಮನ್ಯವಾಗಿ ಇಂತಹ ಒಪ್ಪಂದಗಳು ೫ ರಿಂದ ೧೦ ವರ್ಷಗಳ ಕಾಲ ಇರುತ್ತದೆ. ಆ ನಂತರ ಅದನ್ನು ನವೀಕರಿಸಲು ಮತ್ತೆ ಹಣ ನೀಡಬೇಕಾಗುತ್ತದೆ. ಅವರ ನಿಯಮಗಳನ್ನು ಪಾಲಿಸಿಲ್ಲ ಎಂದು ಅವರಿಗೆ ಅನ್ನಿಸಿದರೆ ಒಪ್ಪಂದವನ್ನು ರದ್ದು ಪಡಿಸುವ ಹಕ್ಕು ಅವರಿಗಿರುತ್ತದೆ.
ಕೊನೆ ಮಾತು: ಉದ್ದಿಮೆ ಪ್ರಪಂಚಕ್ಕೆ ಹೊಸದಾಗಿ ಕಾಲಿಡುತ್ತಿರುವವರಿಗೆ ಇದು ಉತ್ತಮ ಮಾರ್ಗ ಎನ್ನಿಸುತ್ತದೆ. ಉದ್ದಿಮೆ ಜಗತ್ತಿನಲ್ಲಿ ಈಗಾಗಲೇ ಅಲ್ಪಸ್ವಲ್ಪ ಅನುಭವ ಇದ್ದವರು ಈ ರೀತಿಯ ಫ್ರಾಂಚೈಸ್ ತೆಗೆದುಕೊಳ್ಳುವುದಕ್ಕಿಂತ ಒಂದಷ್ಟು ಹೆಚ್ಚಿನ ಅಪಾಯವನ್ನು ತೆಗೆದುಕೊಂಡು ಸ್ವಂತ ಬ್ರಾಂಡ್ ಕಟ್ಟುವುದು ಉತ್ತಮ. ಏಕೆಂದರೆ ಅದೆಷ್ಟೇ ದೊಡ್ಡ ಬ್ರಾಂಡಿನ ಫ್ರಾಂಚೈಸ್ ತೆಗೆದುಕೊಂಡರೂ ಉದ್ದಿಮೆ ಸೋಲುವ ಅಪಾಯ ಸೊನ್ನೆಯಂತೂ ಆಗುವುದಿಲ್ಲ. ಅಪಾಯದ ಮಟ್ಟದಲ್ಲಿ ಒಂದಷ್ಟು ಬದಲಾವಣೆ ಖಂಡಿತ ಆಗುತ್ತದೆ. ಹೀಗಾಗಿ ಇದು ತೀರಾ ಹೊಸಬರಿಗೆ ಒಳ್ಳೆಯದು. ಅನುಭವವಿದ್ದವವರಿಗೆ ಈ ಮಾಡೆಲ್ ಅವಶ್ಯಕತೆಯಿಲ್ಲ.