ಕರ್ನಾಟಕದಲ್ಲಿ ಭಾರತೀಯ ಜನತಾಪಕ್ಷಕ್ಕೆ ಇಂತಹ ದುಸ್ಥಿತಿ ಬಹುಶಃ ಹಿಂದೆಂದೂ ಬಂದಿರಲಿಲ್ಲ. ಬಿಜೆಪಿ ಕರ್ನಾಟಕದಲ್ಲಿ ಆಡಳಿತವನ್ನೂ ನಡೆಸಿದೆ, ಪ್ರತಿಪಕ್ಷವಾಗಿಯೂ ಕೆಲಸ ಮಾಡಿದೆ. ಆದರೆ, ಇವತ್ತಿನ ರಾಜ್ಯ ಬಿಜೆಪಿ ಇದೆಯಲ್ಲಾ ಪ್ರತಿಪಕ್ಷವಾಗಿ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲು ವಿಫಲವಾಗಿದೆ. ಇದಕ್ಕೆ ಮುಖ್ಯ ಕಾರಣ ಆ ಪಕ್ಷದ ಆಂತರಿಕ ದುಸ್ಥಿತಿ.
ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ, ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ ಅವರಂತಹ ಘಟಾನುಘಟಿಗಳು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೂ ಬಿಜೆಪಿ ವಿರೋಧಪಕ್ಷವಾಗಿ ಕೆಲಸ ಮಾಡಿದೆ. ಎ.ಕೆ.ಸುಬ್ಬಯ್ಯ, ಬಿ.ಬಿ.ಶಿವಪ್ಪ, ಬಿ.ಎಸ್.ಯಡಿಯೂರಪ್ಪ, ಡಾ.ಎಂ.ಆರ್.ತಂಗಾ ಅವರು ಪ್ರತಿಪಕ್ಷದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದವರು. ಅಂತಹ ಬಿಜೆಪಿಯಲ್ಲಿ ಇವತ್ತು ಸಿದ್ದರಾಮಯ್ಯ ಸರಕಾರವನ್ನು ಎದುರಿಸಲು ಸಮರ್ಥ ನಾಯಕರೇ ಇಲ್ಲ. ಸಿದ್ದರಾಮಯ್ಯ ಅವರ ಮಾಸ್ ಲೀಡರ್ ಇಮೇಜಿನ ಮುಂದೆ ಮಂಕಾಗಿ ಕಂಡು ಬರುತ್ತಾರೆ. ಒದಗಿ ಬಂದಿರುವ ಅವಕಾಶವನ್ನು ಬಳಸಿಕೊಂಡು ರಾಜ್ಯಾದ್ಯಂತ ತಮ್ಮ ವರ್ಚಸ್ಸನ್ನು ವೃದ್ಧಿಸಿಕೊಳ್ಳುವ, ಗಟ್ಟಿ ನಾಯಕರಾಗಿ ಬೆಳೆಯುವ ಪ್ರಯತ್ನವೂ ಅವರಲ್ಲಿ ಕಂಡು ಬರುತ್ತಿಲ್ಲ. ವಿಧಾನಮಂಡಲದ ಒಳಗೆ ಹಾಗೂ ಹೊರಗೆ ಸಿದ್ದರಾಮಯ್ಯ ಸರಕಾರದ ವೈಫಲ್ಯದ ವಿರುದ್ಧ ಸಂಘಟನಾತ್ಮಕವಾಗಿ, ಪರಿಣಾಮಕಾರಿಯಾಗಿ ಹೋರಾಟ ನಡೆಸುವ ನಾಯಕತ್ವದ ಕೊರತೆ ಬಿಜೆಪಿಯಲ್ಲಿ ನಿಚ್ಛಳವಾಗಿ ಕಂಡು ಬರುತ್ತದೆ.
ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾಖಾನ್ ಎಂದು ಹೀಗೆಳೆಯುವುದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ ಎಂಬುದನ್ನೂ ಲೆಕ್ಕಿಸದೇ ಅವರನ್ನು ಏಕವಚನದಲ್ಲಿ ವಾಚಾಮಗೋಚರವಾಗಿ ನಿಂದಿಸುವುದೇ ಸಮರ್ಥ ಪ್ರತಿಪಕ್ಷ ಎಂದು ತಿಳಿದಿರುವವರು ಇದ್ದಾರೆ. ಅವರಿಗೆ ವಿವಾದಾತ್ಮಕ ಹೇಳಿಕೆಗಳ್ನು ನೀಡಿ ವಿವಾದದ ಅಲೆಯಲ್ಲಿ ತೇಲುವ ಗೀಳು.
ಆರೋಗ್ಯ, ಶಿಕ್ಷಣ, ವಸತಿ, ಕೃಷಿ, ನೀರಾವರಿ, ಕೈಗಾರಿಕೆ, ಕಂದಾಯ ಹೀಗೆ ನಾನಾ ಪ್ರಮುಖ ಇಲಾಖೆಗಳಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಸರಕಾರದ ವೈಫಲ್ಯಗಳಿವೆ. ಅಂತಹ ವಿಷಯಗಳನ್ನು ಕೈಗೆತ್ತಿಕೊಂಡು ಹೋರಾಡುವುದಕ್ಕಿಂತ ಧರ್ಮದಂತಹ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಸ್ಕೋರ್ ಮಾಡಬೇಕೆಂಬ ಉನ್ಮಾದವೇ ಹೆಚ್ಚು. ಮೈಸೂರು ದಸರಾ ಉತ್ಸವಕ್ಕೆ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ಚಾಲನೆ ನೀಡುವುದನ್ನು ವಿರೋಧಿಸಿ ಬಿಜೆಪಿ ನಡೆಸಿದ ಚಾಮುಂಡಿಬೆಟ್ಟ ಚಲೋ ಇದಕ್ಕೆ ಒಂದು ಉದಾಹರಣೆ.
ಬಾನು ಮುಷ್ತಾಕ್ ತಮ್ಮ ನಡೆ, ನುಡಿಯಿಂದ ಬಿಜೆಪಿಯವರನ್ನು ಕಟ್ಟಿ ಹಾಕಿದರು. ಇನ್ನು ಮುಂದೆ ಬಾನು ಮುಷ್ತಾಕ್ ಅವರನ್ನು ವಿರೋಧಿಸುವುದಿಲ್ಲ ಎಂದು ಬಿಜೆಪಿ ನಾಯಕರೇ ಹೇಳಬೇಕಾದ ಪರಿಸ್ಥಿತಿಗೆ ಅವರನ್ನು ದೂಡಿದರು. ಬಿಜೆಪಿ ಕೋಮು ವಿಚಾರಗಳಲ್ಲಿ ಆಕ್ರಮಣಕಾರಿ ಮನೋಭಾವನೆಯನ್ನು ತೋರುತ್ತಿದೆ. ಆದರೆ, ರೈತರು, ಕಾರ್ಮಿಕರು, ಜನಸಾಮಾನ್ಯರ ಬವಣೆಗಳು, ಭ್ರಷ್ಟಾಚಾರದ ವಿಚಾರದಲ್ಲಿ ಇಂತಹ ಆಕ್ರಮಣಕಾರಿ ಧೋರಣೆಯನ್ನು ಪ್ರದರ್ಶಿಸುತ್ತಿಲ್ಲ.
ಬಿಜೆಪಿ ಕೇಡರ್ ಆಧರಿತ ಪಕ್ಷ. ಅಧಿಕಾರಕ್ಕಾಗಿ ಲವಲೇಶವೂ ಯೋಚಿಸದೇ ನಂಬಿದ ತತ್ವ, ಸಿದ್ದಾಂತಕ್ಕಾಗಿ ಹೋರಾಟ ನಡೆಸುವ ಬದ್ಧತೆಯ ಕಾರ್ಯಕರ್ತರಿದ್ದಾರೆ. ಚುನಾವಣೆ ಬಂದಾಗ ಬಿಜೆಪಿಗೆ ದುಡಿದು ನಂತರ ತೆರೆಮರೆಯಲ್ಲಿ ಸದ್ದಿಲ್ಲದೇ ಸಾಮಾಜಿಕ ಕಾರ್ಯಕರ್ತರಾಗಿ ದುಡಿಯುತ್ತಾ ಸರಳ ಜೀವನ ನಡೆಸುವವರಿದ್ದಾರೆ. ಅಂಥವರ ತ್ಯಾಗದಿಂದಲೇ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಲು ಸಾಧ್ಯವಾಗಿದ್ದು. ಅಂಥವರೂ ಇವತ್ತು ರಾಜ್ಯ ಬಿಜೆಪಿಯ ಸ್ಥಿತಿಯನ್ನು ಕಂಡು ಮಮ್ಮಲ ಮರುಗುತ್ತಾರೆ.
ರಾಜ್ಯದಲ್ಲಿ ಆ ಪಕ್ಷ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದೆ. ಚುನಾವಣೆಗಳಲ್ಲಿ ಮತಗಳಿಕೆಯ ಪ್ರಮಾಣವನ್ನೂ ಹೆಚ್ಚಿಸಿಕೊಂಡಿದೆ. ಆದರೆ, ನಾಯಕರ ನಡುವಿನ ಭಿನ್ನಾಭಿಪ್ರಾಯ, ಸಮರ್ಥ ನಾಯಕತ್ವದ ಕೊರತೆ, ಸಮನ್ವಯದ ಅಭಾವ ಇವತ್ತು ಆ ಪಕ್ಷವನ್ನು ಕಾಡಿದೆ. ರಾಜ್ಯ ಸರಕಾರದ ವೈಫಲ್ಯಗಳ ವಿರುದ್ದ ಹೋರಾಟ ನಡೆಸಿ ರಾಜಕೀಯ ಲಾಭ ಪಡೆಯಲು ಸಾಧ್ಯವಾಗದಂತಹ ಶೋಚನೀಯ ಸ್ಥಿತಿಗೆ ತಲುಪಿದೆ. ವಿಧಾನಮಂಡಲದ ಅಧಿವೇಶನದಲ್ಲೂ ಬಿಜೆಪಿ ಅನೇಕ ಬಾರಿ ರಾಜ್ಯ ಸರಕಾರದ ವೈಫಲ್ಯವನ್ನು ತನ್ನ ಹೋರಾಟಕ್ಕೆ ಸರಿಯಾಗಿ ಬಳಸಿಕೊಳ್ಳಲು ವಿಫಲವಾಗಿದೆ.
ಅದೊಂದು ಕಾಲ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತು ಚಾಲ್ತಿಯಲ್ಲಿತ್ತು. ಪ್ರತಿಪಕ್ಷದ ನಾಯಕರಾಗಿ ಯಡಿಯೂರಪ್ಪ ಬೆಂಕಿಚೆಂಡಿನಂತೆ ಇದ್ದವರು. ಆದರೆ, ಇವತ್ತು ಯಡಿಯೂರಪ್ಪ ಅವರಿಗೆ ಆ ಶಕ್ತಿ ಇಲ್ಲ. ವಯೋಸಹಜದಿಂದ ಬಳಲಿದ್ದಾರೆ. ದೇಹ ಬಲ ಕುಗ್ಗಿದೆ. ಪಕ್ಷದ ಚಟುವಟಿಕೆಗಳಲ್ಲಿ ಮೊದಲಿನಂತೆ ಸಕ್ರಿಯವಾಗಿಲ್ಲ. ಯಡಿಯೂರಪ್ಪ ಅವರ ನಾಮಬಲದಿಂದ ಅವರ ಪುತ್ರ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟ ಗಿಟ್ಟಿಸಿದರೆ ವಿನಾ ತಮ್ಮ ಕಾರ್ಯನಿರ್ವಹಣೆಯಲ್ಲಿ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಸೋತರು. ಹಿರಿಯ ನಾಯಕರು ವಿಜಯೇಂದ್ರ ಅವರ ನಾಯಕತ್ವವನ್ನು ಒಪ್ಪುತ್ತಿಲ್ಲ. ಹೀಗಾಗಿ, ರಾಜ್ಯ ಬಿಜೆಪಿಯ ಹೋರಾಟಕ್ಕೆ ಚಾಲನಾ ಶಕ್ತಿಯೇ ಇಲ್ಲದಂತಾಗಿದೆ.
ಜನತಂತ್ರದಲ್ಲಿ ಒಂದು ಮಾತಿದೆ. ಪ್ರತಿಪಕ್ಷದ ನಾಯಕನನ್ನು ಶಾಡೋ ಅಂದರೆ ಛಾಯಾ ಮುಖ್ಯಮಂತ್ರಿ ಎನ್ನುತ್ತಾರೆ. ಪ್ರತಿಪಕ್ಷದ ನಾಯಕ ಸ್ಥಾನ ಅಷ್ಟು ಜವಾಬ್ದಾರಿಯುತವಾದುದು. ಪ್ರತಿಪಕ್ಷದ ನಾಯಕರಿಗೆ ಸರಕಾರದಿಂದ ಅನೇಕ ಸವಲತ್ತುಗಳು ಇರುತ್ತವೆ. ಅಧಿಕಾರಿಗಳೊಂದಿಗೆ ಸಭೆ ನಡೆಸುವ ಅಧಿಕಾರವೂ ಅವರಿಗಿದೆ. ಆದರೆ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಎಡವಿದ್ದಾರೆ. ರಾಜ್ಯಾದ್ಯಂತ ತಮ್ಮ ಛಾಪು ಮೂಡಿಸಲು ವಿಫಲರಾಗಿದ್ದಾರೆ. ಅಶೋಕ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಅವರ ಮಧ್ಯೆ ಸಮನ್ವಯದ ಕೊರತೆ ಇದೆ.
ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಆರ್‌ಸಿಬಿ ಕಾಲ್ತುಳಿತ ಪ್ರಕರಣ, ಜಾತಿ ಗಣತಿಯ ಜಂಜಾಟ ಈ ವಿಷಯಗಳಲ್ಲಿ ಬಿಜೆಪಿಯು ಪ್ರತಿಪಕ್ಷವಾಗಿ ತಾರ್ಕಿತ ಅಂತ್ಯಕ್ಕೆ ಹೋರಾಟವನ್ನು ಒಯ್ಯಲು ವಿಫಲವಾಗಿದೆ. ಕಮಲ ಪಡೆಯಲ್ಲಿ ಈ ಹಿಂದೆ ಈಗ ಇರುವುದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಶಾಸಕರು ಇದ್ದಾಗಲೂ ಪರಿಣಾಮಕಾರಿಯಾಗಿ ಪ್ರತಿಪಕ್ಷವಾಗಿ ಕೆಲಸ ಮಾಡಿದೆ. ಈಗ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು, ಮುಖಂಡರು, ಮಾಜಿ ಸಚಿವರು, ಮಾಜಿ ಶಾಸಕರಿದ್ದರೂ ಪರಿಣಾಮಕಾರಿಯಾಗಿ ಸಂಘಟನಾತ್ಮಕ ಹೋರಾಟ ಸಾಧ್ಯವಾಗುತ್ತಿಲ್ಲ. ರಾಜ್ಯ ಬಿಜೆಪಿಯ ಸ್ಥಿತಿ ಈಗ ಹೇಗಿದೆ ಅಂದರೆ ಮನೆಯೊಂದು ಮೂರು ಬಾಗಿಲು.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸರಕಾರದಲ್ಲಿ ಶೇ.40ರಷ್ಟು ಕಮೀಷನ್ ನಡೆಯುತ್ತಿದೆ ಎಂದು ಆಗ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ದೊಡ್ಡ ಹೋರಾಟವನ್ನೇ ನಡೆಸಿತ್ತು. ಇದು ಬಹಳ ಪರಿಣಾಮಕಾರಿಯಾಗಿತ್ತು. ರಾಜ್ಯದ ಜನರ ಗಮನ ಸೆಳೆದಿತ್ತು. ಆದರೆ, ಈಗ ಬಿಜೆಪಿ ಸರಕಾರಕ್ಕಿಂತಲೂ ಕಾಂಗ್ರೆಸ್ ಸರಕಾರದಲ್ಲಿ ಭ್ರಷ್ಟಾಚಾರ ದುಪ್ಪಟ್ಟು ಆಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಆರೋಪಿಸಿದರೂ ಬಿಜೆಪಿಗೆ ಸರಕಾರದ ವಿರುದ್ಧ ಈ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸುವ ದಿಟ್ಟತನ ಇಲ್ಲ. ಆ ಕೆಚ್ಚು ಇಲ್ಲ. ಸರಕಾರದ ಕಚೇರಿಯೊಂದಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭ್ರಷ್ಟಾಚಾರದ ವಿರುದ್ಧ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿತ್ತು. ಇಂತಹ ಕೆಚ್ಚನ್ನು ಪ್ರತಿಪಕ್ಷವಾಗಿ ಬಿಜೆಪಿ ನಾಯಕರೇ ಪ್ರದರ್ಶಿಸಿಲ್ಲ.
ರಾಜ್ಯದಲ್ಲಿ ಅಧಿಕಾರ ಅನುಭವಿಸಿರುವ ಬಿಜೆಪಿಯು ಪ್ರತಿಪಕ್ಷವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ತೀಕ್ಷ್ಣತೆ ಕಳೆದುಕೊಂಡಿದೆ. ಬಿಜೆಪಿಯಲ್ಲಿ ಇವತ್ತು ಎಲ್ಲ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ಪಡೆದು ಸಾಮೂಹಿಕ ನಾಯಕತ್ವದಡಿ ಮುಂದೆ ಸಾಗುವಂತಹ ಸಮರ್ಥ ನಾಯಕತ್ವ ಅಗತ್ಯ.
ರಾಜ್ಯ ಬಿಜೆಪಿಯ ಇವತ್ತಿನ ದುಸ್ಥಿತಿಗೆ ಆ ಪಕ್ಷದ ಹೈಕಮಾಂಡ್‌ನ ಕೊಡುಗೆಯೂ ಇದೆ. ಯಥಾಪ್ರಕಾರ ಚೆಂಡು ಹೈಕಮಾಂಡ್ ಅಂಗಳದಲ್ಲೇ ಇದೆ.
ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com