ಬಹುತೇಕ ಎರಡು ವರ್ಷಗಳ ಕಾಲ ನಡೆದ ವಿಧ್ವಂಸಕ ಯುದ್ಧದ ಬಳಿಕ, ಗಾಜಾದಲ್ಲಿ ಕಡೆಗೂ ಶಾಂತಿ ಸ್ಥಾಪನೆಗೊಳ್ಳುವ ಸಾಧ್ಯತೆಯೊಂದು ಕಂಡುಬರುತ್ತಿದೆ. ಇಂದು, ಅಂದರೆ ಅಕ್ಟೋಬರ್ 6ರ ಸೋಮವಾರದಂದು, ಹಮಾಸ್, ಇಸ್ರೇಲ್ ಮತ್ತು ಅಮೆರಿಕದ ನಿಯೋಗಗಳು ಈಜಿಪ್ಟ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಿವೆ. ಈ ಮಹತ್ವದ ಶಾಂತಿ ಮಾತುಕತೆ ಉಭಯ ಪಕ್ಷಗಳಿಗೂ ಅಪಾರ ನಷ್ಟ ಉಂಟುಮಾಡಿರುವ ಭೀಕರ ಯುದ್ಧಕ್ಕೆ ಕೊನೆ ನೀಡುವ ನಿರೀಕ್ಷೆಗಳಿವೆ.
ಈ ಮಾತುಕತೆಯ ಸಮಯವೂ ಅತ್ಯಂತ ಮಹತ್ವದ್ದಾಗಿದೆ. ನಾಳೆ, ಅಂದರೆ ಅಕ್ಟೋಬರ್ 7ರಂದು ಪ್ರಸ್ತುತ ಯುದ್ಧಕ್ಕೆ ಮೂಲ ಕಾರಣವಾದ ಇಸ್ರೇಲ್ ಮೇಲಿನ 2023ರ ಹಮಾಸ್ ದಾಳಿ ನಡೆದು ಭರ್ತಿ ಎರಡು ವರ್ಷಗಳಾಗಲಿದೆ. ಈಗ ಇಸ್ರೇಲ್ ಮತ್ತು ಹಮಾಸ್ ಎರಡೂ ಮಾತುಕತೆಗೆ ಕೂರಲು ಸಿದ್ಧವಾಗಿರುವುದು ಅವೆರಡೂ ಈ ದುರಂತ ಪರಿಸ್ಥಿತಿಗೆ ಸೂಕ್ತವಾದ ಪರಿಹಾರ ಕಂಡುಕೊಳ್ಳಲು, ಯುದ್ಧವನ್ನು ಮುಕ್ತಾಯಗೊಳಿಸಲು ಮನಸ್ಸು ಹೊಂದಿರುವಂತೆ ತೋರುತ್ತಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಒಂದು ಶಾಂತಿ ಒಪ್ಪಂದಕ್ಕಾಗಿ ಬಹಳ ಒತ್ತು ನೀಡಿದ್ದಾರೆ. ಅಕ್ಟೋಬರ್ 5ರ ಭಾನುವಾರದಂದು ಅವರು ಯುದ್ಧ ನಿರತವಾಗಿರುವ ಎಲ್ಲ ಪಕ್ಷಗಳಿಗೂ ʼವೇಗವಾಗಿ ಹೆಜ್ಜೆ ಇಡಿʼ ಎಂದಿದ್ದು, ಈ ವಾರದಲ್ಲೇ ಶಾಂತಿ ಒಪ್ಪಂದದ ಮೊದಲ ಹಂತ ಪೂರ್ಣಗೊಳ್ಳಬೇಕು ಎಂದಿದ್ದಾರೆ. ಅವರು ತನ್ನ ಇಬ್ಬರು ನಂಬಿಕಸ್ತ ಪ್ರತಿನಿಧಿಗಳನ್ನು, ಅಂದರೆ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್‌ಕಾಫ್ ಹಾಗೂ ತನ್ನ ಅಳಿಯ ಜರೆದ್ ಕುಶ್ನರ್ ಅವರನ್ನು ಒಪ್ಪಂದವನ್ನು ಅಂತಿಮಗೊಳಿಸಲು ನೆರವಾಗಲು ಕಳುಹಿಸಿದ್ದಾರೆ. ಹಿಂದಿನ ಅಮೆರಿಕನ್ ಆಡಳಿತಗಳು ವಿಫಲವಾದಲ್ಲಿ ತಾನು ಯಶಸ್ವಿಯಾಗಲೇಬೇಕೆಂದು ಟ್ರಂಪ್ ನಿರ್ಧಾರಕ್ಕೆ ಬಂದಿರುವಂತೆ ಕಾಣುತ್ತಿದ್ದಾರೆ.
ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಯೋಜನೆಯ ಹಾದಿ ಬಹಳ ಸರಳ ಮತ್ತು ನೇರವಾಗಿದೆ: ಹಮಾಸ್ ಒತ್ತೆಯಾಳುಗಳಾಗಿರುವ ಇಸ್ರೇಲಿ ನಾಗರಿಕರನ್ನು ಬಿಡುಗಡೆಗೊಳಿಸಬೇಕು. ಇದಕ್ಕೆ ಪ್ರತಿಯಾಗಿ, ಇಸ್ರೇಲಿ ಸೆರೆಮನೆಗಳಲ್ಲಿರುವ ಪ್ಯಾಲೆಸ್ತೀನಿಯನ್ ಖೈದಿಗಳನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ಬಂಧಿಗಳ ಹಸ್ತಾಂತರ ಯೋಜನೆಯ ಆಧಾರದಲ್ಲೇ ಸಮಗ್ರ ಶಾಂತಿ ಒಪ್ಪಂದವನ್ನೂ ರೂಪಿಸಲಾಗಿದೆ. ಈ ಯೋಜನೆಯ ಪ್ರಕಾರ, ಒಪ್ಪಂದ ಜಾರಿಗೆ ಬಂದ 72 ಗಂಟೆಗಳ ಒಳಗಾಗಿ, ಎಲ್ಲ ಒತ್ತೆಯಾಳುಗಳು, ಅವರು ಜೀವಂತವಾಗಿದ್ದರೂ ಅಥವಾ ಮೃತಪಟ್ಟಿದ್ದರೂ, ಬಿಡುಗಡೆಗೊಳ್ಳಬೇಕು.
ಈ ಯುದ್ಧಕ್ಕೆ ಮಾನವ ಜೀವಗಳು ತೆತ್ತಿರುವ ಬೆಲೆ ಅಪಾರವಾದುದು. ಅಕ್ಟೋಬರ್ 7, 2023ರಂದು ನಡೆದ ದಾಳಿಯಲ್ಲಿ ಪ್ಯಾಲೆಸ್ತೀನಿ ಉಗ್ರರು 251 ಒತ್ತೆಯಾಳುಗಳನ್ನು ತಮ್ಮೊಡನೆ ಒಯ್ದಿದ್ದರು. ಇಂದಿಗೂ ಅವರ ಪೈಕಿ 47 ಜನರು ಗಾಜಾದಲ್ಲೇ ಇದ್ದಾರೆ. ಅವರಲ್ಲಿ 25 ಜನರು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ಅಭಿಪ್ರಾಯ ಪಟ್ಟಿದೆ. ಒತ್ತೆಯಾಳುಗಳ ಕುಟುಂಬಗಳಿಗಂತೂ ಅವರಿಗಾಗಿ ಕಾಯುವ ಒಂದೊಂದು ದಿನವೂ ಯುಗದಂತಾಗಿದ್ದು, ಮಾನಸಿಕ ಯಾತನೆ ನೀಡುತ್ತಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೆಲವೇ ದಿನಗಳಲ್ಲಿ ಒತ್ತೆಯಾಳುಗಳು ಬಿಡುಗಡೆಗೊಳ್ಳಲಿದ್ದಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದು, ಇದು ಹತಾಶರಾಗಿ ಕಾಯುತ್ತಿರುವ ಕುಟುಂಬಗಳಲ್ಲಿ ಒಂದು ಹೊಸ ನಿರೀಕ್ಷೆ ಮೂಡಿಸಿದೆ.
ಇನ್ನು ಪ್ಯಾಲೆಸ್ತೀನಿಯರು ಈ ಒಪ್ಪಂದದಿಂದ ಏನು ಪಡೆದುಕೊಳ್ಳಲಿದ್ದಾರೆ ಎಂದು ನೋಡಿದರೆ, ಇಸ್ರೇಲ್ ಜೀವಾವಧಿ ಕಾರಾಗೃಹ ಶಿಕ್ಷೆ ಅನುಭವಿಸುತ್ತಿರುವ 250 ಪ್ಯಾಲೆಸ್ತೀನಿ ಖೈದಿಗಳನ್ನು ಮತ್ತು ಯುದ್ಧದ ಸಂದರ್ಭದಲ್ಲಿ ಗಾಜಾದಲ್ಲಿ ಬಂಧಿತರಾದ 1,700 ಸೆರೆಯಾಳುಗಳನ್ನು ಬಿಡುಗಡೆಗೊಳಿಸಲಿದೆ. ತಮ್ಮ ಪ್ರೀತಿಪಾತ್ರರು ಇಸ್ರೇಲಿ ಸೆರೆಮನೆಯಲ್ಲಿರುವುದರಿಂದ ನೊಂದಿದ್ದ ಬಹಳಷ್ಟು ಪ್ಯಾಲೆಸ್ತೀನಿ ಕುಟುಂಬಗಳಿಗೆ ಇದು ಸುದೀರ್ಘ ಕಾಯುವಿಕೆಯ ಅಂತ್ಯವಾಗಲಿದೆ.
ಉಭಯ ಪಕ್ಷಗಳೂ ಬಹಳ ಜಾಗರೂಕವಾಗಿದ್ದು, ಒಂದಷ್ಟು ಆಶಾಭಾವನೆ ಹೊಂದಿರುವಂತೆ ಕಾಣುತ್ತಿವೆ. ಹಮಾಸ್ ಸಂಘಟನೆಯ ಓರ್ವ ಹಿರಿಯ ಅಧಿಕಾರಿ ಈ ಕುರಿತು ಹೇಳಿಕೆ ನೀಡಿದ್ದು, ಹಮಾಸ್ ಸಾಧ್ಯವಾದಷ್ಟು ಶೀಘ್ರವಾಗಿ ಒಂದು ಒಪ್ಪಂದಕ್ಕೆ ಬಂದು, ಬಂಧಿಗಳ ಹಸ್ತಾಂತರವನ್ನು ಆರಂಭಿಸಲು ಉತ್ಸುಕವಾಗಿದೆ ಎಂದಿದ್ದಾರೆ. ಹಮಾಸ್ ಸಂಘಟನೆಯ ಮುಖ್ಯ ಸಂಧಾನಕಾರ ಖಲೀಲ್ ಅಲ್ ಹಯ್ಯಾ ತನ್ನ ನಿಯೋಗದ ನೇತೃತ್ವ ವಹಿಸಲು ಅಕ್ಟೋಬರ್ 5, ಭಾನುವಾರವೇ ಈಜಿಪ್ಟಿಗೆ ಆಗಮಿಸಿದ್ದಾರೆ. ಇಸ್ರೇಲಿ ನಿಯೋಗ ಮಾತುಕತೆಯಲ್ಲಿ ಪಾಲ್ಗೊಳ್ಳಲು ಸೋಮವಾರ ಈಜಿಪ್ಟಿಗೆ ತೆರಳಿದೆ. ಅಮೆರಿಕ, ಈಜಿಪ್ಟ್ ಮತ್ತು ಕತಾರ್ ಹಲವು ತಿಂಗಳುಗಳಿಂದ ನಡೆಸುತ್ತಿದ್ದ ಶಾಂತಿ ಸ್ಥಾಪನಾ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ, ಪ್ರಸ್ತುತ ಸಭೆ ಸುದೀರ್ಘ ಶಾಂತಿ ಸ್ಥಾಪನೆಗೆ ಇರುವ ನೈಜ ಅವಕಾಶ ಎಂದು ಹಲವು ದೇಶಗಳ ವಿದೇಶಾಂಗ ಸಚಿವರುಗಳು ಅಭಿಪ್ರಾಯ ಪಟ್ಟಿದ್ದಾರೆ.
ಹಾಗೆಂದು ಶಾಂತಿ ಸ್ಥಾಪನೆಯ ಮಾರ್ಗದಲ್ಲಿ ಈಗ ಅಡಚಣೆಗಳು ಇಲ್ಲವೆಂದಲ್ಲ. ಅಮೆರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಮಾರ್ಕೋ ರುಬಿಯೋ ಅವರು ಅಕ್ಟೋಬರ್ 5, ಭಾನುವಾರ ಒಂದು ಪ್ರಾಯೋಗಿಕ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅವರು ಮಾತುಕತೆಗೂ ಮುನ್ನ ಇಸ್ರೇಲ್ ಗಾಜಾ ಮೇಲಿನ ಬಾಂಬ್ ದಾಳಿಗಳನ್ನು ನಿಲ್ಲಿಸಬೇಕು ಎಂದು ಕರೆ ನೀಡಿದ್ದಾರೆ. ವಾಯು ದಾಳಿಗಳು ನಡೆಯುತ್ತಿರುವ ಸಂದರ್ಭದಲ್ಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇಷ್ಟಾದರೂ ಅದೇ ದಿನ ಇಸ್ರೇಲ್ ಗಾಜಾ ಮೇಲೆ ನಡೆಸಿರುವ ದಾಳಿಗಳಲ್ಲಿ ಗಾಜಾದಾದ್ಯಂತ ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದೆ. ಇದು ಗಾಜಾದ ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿದೆ ಎನ್ನುವುದನ್ನು ತೋರಿಸಿದೆ.
ಒಂದು ವೇಳೆ ಇಸ್ರೇಲ್ ಏನಾದರೂ ತನ್ನ ಮಿಲಿಟರಿ ಕ್ರಮಗಳನ್ನು ನಿಲ್ಲಿಸಿದರೆ, ಹಮಾಸ್ ಬಂಡುಕೋರರೂ ತಮ್ಮ ದಾಳಿ ನಿಲ್ಲಿಸಲು ಸಿದ್ಧರಿದ್ದಾರೆ ಎಂದು ಪ್ಯಾಲೆಸ್ತೀನಿಯನ್ ಮೂಲಗಳು ಹೇಳಿವೆ. ಬಂಧಿಗಳ ಹಸ್ತಾಂತರ ಸುರಕ್ಷತಿವಾಗಿ ನಡೆಯಲು ಮತ್ತು ಶಾಂತಿ ಮಾತುಕತೆಗಳಲ್ಲಿ ಪ್ರಗತಿ ಸಾಧಿಸಲು ಈ ಹಿಂಸಾಚಾರ ಕಡಿಮೆಯಾಗುವುದು ಅವಶ್ಯಕವಾಗಿದೆ.
ಆದರೆ, ಖೈದಿಗಳ ಹಸ್ತಾಂತರ ಕೇವಲ ಮೊದಲ ಹೆಜ್ಜೆಯಷ್ಟೇ. ಅದಾದ ನಂತರದ ಹೆಜ್ಜೆಗಳಲ್ಲಿ ನಿಜವಾದ ಸವಾಲು ಎದುರಾಗಲಿದೆ. ಡೊನಾಲ್ಡ್ ಟ್ರಂಪ್ ಯೋಜನೆಯ ಪ್ರಕಾರ, ಒಂದು ಬಾರಿ ಬಂಧಿಗಳ ಹಸ್ತಾಂತರ ಪೂರ್ಣಗೊಂಡ ಬಳಿಕ, ಇಸ್ರೇಲ್ ಹಂತ ಹಂತವಾಗಿ ಗಾಜಾದಿಂದ ತನ್ನ ಪಡೆಗಳನ್ನು ಹಿಂಪಡೆಯಲಿದೆ. ಈ ಹಂತದಲ್ಲಿ ಪರಿಸ್ಥಿತಿ ಸಂಕೀರ್ಣ ಸ್ವರೂಪ ತಾಳಲಿದೆ. ಟ್ರಂಪ್ ಯೋಜನೆಯ ಪ್ರಕಾರ, ಹಮಾಸ್ ಸಂಘಟನೆ ತನ್ನ ಆಯುಧಗಳನ್ನು ತ್ಯಜಿಸಬೇಕು. ಆದರೆ ಹಮಾಸ್ ನಿರಂತರವಾಗಿ ಈ ಅಂಶವನ್ನು ತಿರಸ್ಕರಿಸುತ್ತಾ ಬಂದಿದ್ದು, ಶಸ್ತ್ರತ್ಯಾಗದ ಹೆಜ್ಜೆಯನ್ನು ತಾನು ಎಂದಿಗೂ ಇಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಿನ್ನಾಭಿಪ್ರಾಯ ಇರುವ ಇನ್ನೊಂದು ಪ್ರಮುಖ ಅಂಶವೆಂದರೆ, ಯುದ್ಧ ಮುಕ್ತಾಯಗೊಂಡ ಬಳಿಕ ಗಾಜಾ಼ದ ಆಡಳಿತವನ್ನು ಯಾರು ನಿರ್ವಹಿಸಬೇಕು ಎನ್ನುವುದಾಗಿದೆ. ಗಾಜಾದ ಭವಿಷ್ಯವನ್ನು ನಿರ್ಧರಿಸುವಲ್ಲಿ ತನ್ನ ಪಾತ್ರ ಇರಬೇಕು ಎನ್ನುವುದು ಹಮಾಸ್ ವಾದ. ಆದರೆ, ಡೊನಾಲ್ಡ್ ಟ್ರಂಪ್ ಯೋಜನೆ ಹಮಾಸ್ ಅಥವಾ ಇನ್ನಾವುದೇ ಭಯೋತ್ಪಾದಕ ಸಂಘಟನೆ ಗಾಜಾದ ಆಡಳಿತದಲ್ಲಿ ಪಾತ್ರವಹಿಸಲು ಸಾಧ್ಯವಿಲ್ಲ ಎಂದು ಖಚಿತಪಡಿಸಿದೆ.
ಇಂತಹ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಬದಲಿಗೆ, ಗಾಜಾದ ಆಡಳಿತವನ್ನು ವೃತ್ತಿಪರ ತಜ್ಞರ ಒಂದು ಗುಂಪು ನಿರ್ವಹಿಸಲಿದೆ. ಈ ತಾತ್ಕಾಲಿಕ ಆಡಳಿತ ವ್ಯವಸ್ಥೆ ಡೊನಾಲ್ಡ್ ಟ್ರಂಪ್ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಲಿದ್ದು, ಯುದ್ಧಾನಂತರದ ಗಾಜಾ ಆಡಳಿತದಲ್ಲಿ ಮಾಜಿ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಸಹ ಒಂದು ಮುಖ್ಯ ಪಾತ್ರವನ್ನು ನಿರ್ವಹಿಸುವ ನಿರೀಕ್ಷೆಗಳಿವೆ.
ಇವೆಲ್ಲ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಲ್ಲ. ಇಂತಹ ಕ್ರಮಗಳು ಕದನದ ಕೇಂದ್ರಕ್ಕೇ ಇರಿಯುವಂತವಾಗಿದ್ದು, ಅಧಿಕಾರ, ಭದ್ರತೆ ಮತ್ತು ಗಾಜಾದ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಲಿವೆ. ಇಂತಹ ವಿಚಾರಗಳ ಕುರಿತು ಕಾರ್ಯಾಚರಿಸಬೇಕಾದರೆ ಉಭಯ ಪಕ್ಷಗಳೂ ಒಂದಷ್ಟು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ. ಆದರೆ, ಇಂತಹ ಹೊಂದಾಣಿಕೆ ಸಾಧಿಸುವುದು ಹಿಂದೆಯೂ ಬಹಳ ಕಷ್ಟಕರವಾಗಿತ್ತು.
ಗಾಜಾದ ಜನರು ಊಹಿಸಲೂ ಸಾಧ್ಯವಿಲ್ಲದಷ್ಟು ಕಷ್ಟ ನಷ್ಟಗಳನ್ನು ಈಗಾಗಲೇ ಅನುಭವಿಸಿದ್ದಾರೆ. ಬಹುತೇಕ ಎರಡು ವರ್ಷಗಳ ಕಾಲ ನಡೆದಿರುವ ಯುದ್ಧ ಅವರ ಮನೆಗಳನ್ನು ಧ್ವಂಸಗೊಳಿಸಿದ್ದು, ಕುಟುಂಬಗಳನ್ನು ನಾಶಪಡಿಸಿ, ಗಾಜಾ ಇಂದು ಅವಶೇಷಗಳಲ್ಲಿ ಉಳಿಯುವಂತೆ ಮಾಡಿದೆ. ಇದೇ ರೀತಿ, ಅಕ್ಟೋಬರ್ 7, 2023ರ ಭಯೋತ್ಪಾದಕ ದಾಳಿಯ ಬಳಿಕ ಇಸ್ರೇಲಿ ಕುಟುಂಬಗಳು ಅದೇ ಆಘಾತದಲ್ಲಿ ಜೀವಿಸುತ್ತಿವೆ. ಗಾಜಾದಲ್ಲಿ ಒತ್ತೆಯಾಳುಗಳಾಗಿರುವ ತಮ್ಮ ಪ್ರೀತಿಪಾತ್ರರ ಪರಿಸ್ಥಿತಿ ಏನಾಗಿದೆಯೋ ಎಂಬ ಆತಂಕ ಅವರನ್ನು ಕಾಡುತ್ತಿದೆ. ಪ್ಯಾಲೆಸ್ತೀನಿಯರು ಮತ್ತು ಇಸ್ರೇಲಿಗರು ಇಬ್ಬರಿಗೂ ಈಗ ಶಾಂತಿ ಸ್ಥಾಪನೆ ಅತ್ಯಂತ ಅನಿವಾರ್ಯವಾಗಿದೆ.
ಅಂತಾರಾಷ್ಟ್ರೀಯ ಸಮುದಾಯ ಶಾಂತಿ ಮಾತುಕತೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಕದನದ ಆರಂಭದಿಂದಲೂ ಶಾಂತಿ ಮಾತುಕತೆಗಳ ಆಯೋಜಕನಾಗಿರುವ ಈಜಿಪ್ಟ್ ಮಾತುಕತೆಯ ಕುರಿತು ತನ್ನ ಅಭಿಪ್ರಾಯ ತಿಳಿಸಿದೆ. ಈಗಿನ ಮಾತುಕತೆಗಳು ಬಂಧಿಗಳು, ಒತ್ತೆಯಾಳುಗಳ ಸಂಪೂರ್ಣ ಹಸ್ತಾಂತರಕ್ಕೆ ಬೇಕಾದ ಮೂಲಭೂತ ಶರತ್ತುಗಳು ಮತ್ತು ಮಾಹಿತಿಗಳನ್ನು ರೂಪಿಸುವತ್ತ ಹೆಚ್ಚಿನ ಗಮನ ಹರಿಸಲಿವೆ ಎಂದಿದೆ. ಶಾಂತಿ ಮಾತುಕತೆಗಳ ಕುರಿತು ಬಹಳಷ್ಟು ದೇಶಗಳು ಆಸಕ್ತಿ ತೋರುತ್ತಿರುವುದು ಪ್ರಾದೇಶಿಕ ಸ್ಥಿರತೆಗೆ ಈ ಪ್ರಕ್ರಿಯೆ ಎಷ್ಟು ಮುಖ್ಯ ಎನ್ನುವುದನ್ನು ಸಾಬೀತುಪಡಿಸಿದೆ.
ಈಜಿಪ್ಟಿನ ರೆಸಾರ್ಟ್ ಪಟ್ಟಣವಾದ ಶರ್ಮ್ ಎಲ್ ಶೇಖ್ ತನ್ನ ಸುಂದರ ಸಮುದ್ರ ತೀರಗಳು ಮತ್ತು ಸುಂದರ ವಾತಾವರಣಕ್ಕೆ ಹೆಸರುವಾಸಿಯಾಗಿದ್ದು, ಇಂತಹ ಮುಖ್ಯ ವಿಚಾರಗಳ ಚರ್ಚೆಗೆ ಸೂಕ್ತವಾದ ತಾಣವಾಗಿದೆ. ಇಲ್ಲಿನ ಶಾಂತ ವಾತಾವರಣ ಮಧ್ಯಸ್ಥಿಕೆದಾರರಿಗೆ ಒಂದು ಸಮಾನ ಅಂಶವನ್ನು ಕಂಡುಕೊಳ್ಳಲು ನೆರವಾಗಬಹುದು ಎನ್ನುವ ನಿರೀಕ್ಷೆಗಳೂ ಇವೆ. ಹಿಂದಿನ ಹಲವು ತಿಂಗಳುಗಳ ಮಾತುಕತೆಗಳು ವಿಫಲವಾದಂತೆ ಇದೂ ವಿಫಲವಾಗದಿರಲಿ ಎನ್ನುವುದು ಜಾಗತಿಕ ನಿರೀಕ್ಷೆಯಾಗಿದೆ.
ಬೇರೆಲ್ಲ ಶಾಂತಿ ಮಾತುಕತೆಗಳು ವಿಫಲವಾಗಿರುವಾಗ, ಟ್ರಂಪ್ ಯೋಜನೆ ಯಶಸ್ಸು ಕಾಣಬಹುದೇ? ಇದನ್ನು ಇಷ್ಟು ಬೇಗನೇ ಹೇಳಲು ಸಾಧ್ಯವಿಲ್ಲ. ಆದರೆ, ಅಮೆರಿಕಾ ಅಧ್ಯಕ್ಷ ಟ್ರಂಪ್ ಶಾಂತಿ ಮಾತುಕತೆಗಳಲ್ಲಿ ನೇರವಾಗಿ ಭಾಗಿಯಾಗಿರುವುದು ಮತ್ತು ಶಾಂತಿ ಒಪ್ಪಂದ ಸಾಧ್ಯವಾದಷ್ಟು ಬೇಗ ಜಾರಿಗೆ ಬರಬೇಕು ಎಂದು ಅವರು ಒತ್ತಾಯಿಸುತ್ತಿರುವುದು ಸಹ ಒಪ್ಪಂದ ಏರ್ಪಡಲು ಬೇಕಾದ ಭೂಮಿಕೆಯನ್ನು ಸಿದ್ಧಪಡಿಸುವ ಸಾಧ್ಯತೆಗಳಿವೆ. ಅಕ್ಟೋಬರ್ 5ರ ಭಾನುವಾರ ಈ ಕುರಿತು ಮಾತನಾಡಿದ ಟ್ರಂಪ್, ಮಾತುಕತೆಗಳು ಸಾಕಷ್ಟು ಧನಾತ್ಮಕವಾಗಿ ಸಾಗಿವೆ ಎಂದಿದ್ದು, ಬಹಳಷ್ಟು ಚರ್ಚೆಗಳು ಬೇಗನೇ ಸಾಗಿವೆ ಎಂದಿದ್ದಾರೆ. ಅವರ ಮಾತುಗಳು ಒಂದಷ್ಟು ಪ್ರೋತ್ಸಾಹದಾಯಕವಾಗಿದ್ದರೂ, ಅಂತಿಮ ಸಾಕ್ಷಿ ನೈಜ ಶಾಂತಿ ಒಪ್ಪಂದದಲ್ಲೇ ಇರಲಿದೆ.
ಆದರೆ, ಈಗ ಸ್ಪಷ್ಟವಾಗಿರುವ ಅಂಶವೆಂದರೆ, ಮುಂದಿನ ತಿಂಗಳುಗಳಲ್ಲಿ ನಿಜವಾದ ಶಾಂತಿ ಸ್ಥಾಪನೆಯಾಗಲು ಪ್ರಸ್ತುತ ಮಾತುಕತೆಗಳು ಅತ್ಯುತ್ತಮ ಅವಕಾಶ ನೀಡುತ್ತಿವೆ. ಉಭಯ ಪಕ್ಷಗಳೂ ಮಾತನಾಡುತ್ತಿದ್ದು, ಇಬ್ಬರೂ ಹೊಂದಾಣಿಕೆಗೆ ಸಿದ್ಧರಾಗಿರುವಂತೆ ಕಾಣುತ್ತಿದ್ದಾರೆ. ಈಗಾಗಲೇ ಒಪ್ಪಂದಕ್ಕೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಆದ್ದರಿಂದ ಮುಂಬರುವ ದಿನಗಳು ಅತ್ಯಂತ ಮಹತ್ವದ್ದಾಗಿವೆ. ಇಲ್ಲಿಯತನಕ ಸಾಕಷ್ಟು ನರಳಿರುವ ಒತ್ತೆಯಾಳುಗಳು ಮತ್ತು ಅವರ ಕುಟುಂಬಸ್ತರು, ಬಂಧಿಗಳು ಮತ್ತು ಅವರ ಪ್ರೀತಿಪಾತ್ರರು, ಮತ್ತು ಯುದ್ಧದಲ್ಲಿ ಸಿಲುಕಿ ನರಳಿರುವ ಅಸಂಖ್ಯಾತ ನಾಗರಿಕರು ಕನಿಷ್ಠಪಕ್ಷ ಈ ಸಲವಾದರೂ ಶಾಂತಿ ನೆಲೆಸಲಿ ಎಂಬ ಒಂದೇ ಬಯಕೆ ಹೊಂದಿದ್ದಾರೆ.
ಈ ವಾರ ಈಜಿಪ್ಟಿನಲ್ಲಿ ನಡೆಯವ ಬೆಳವಣಿಗೆಗಳನ್ನು ಜಗತ್ತು ಕುತೂಹಲದಿಂದ ನೋಡುತ್ತಿದೆ. ಇವೆಲ್ಲದರ ಮಧ್ಯೆ ಒಂದು ಪ್ರಶ್ನೆ ಎದ್ದು ಕಾಣುತ್ತಿದೆ: ಗಾಜಾ ಯುದ್ಧದ ಎರಡನೇ ವರ್ಷಾಚರಣೆ ಕೇವಲ ಆ ದುರಂತದ ಕಹಿ ನೆನಪಾಗಿ ಮುಂದುವರಿಯಲಿದೆಯೇ? ಅಥವಾ ದೀರ್ಘಕಾಲೀನ ಶಾಂತಿಯ ಆರಂಭಕ್ಕೆ ನಾಂದಿ ಹಾಡಲಿದೆಯೇ?
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com