‘ತಮಸೋಮಾ ಜ್ಯೋತಿರ್ಗಮಯಾ’ – ಕತ್ತಲಿನಿಂದ ಬೆಳಕಿನೆಡೆಗೆ ಎಂಬ ಮಂತ್ರವು ನಮ್ಮ ಸಂಸ್ಕೃತಿಯ ಆಪ್ತಮಾತು. ದೇವರ ಮುಂದೊಂದು ದೀಪ ಹಚ್ಚುವುದು, ಗುರುಗಳ ಚಿತ್ರದಲ್ಲಿ ಪ್ರಭಾವಳಿ ತೋರಿಸುವುದು – ಈ ಎಲ್ಲವೂ ಬೆಳಕಿನತ್ತ ಮನುಷ್ಯನ ಆಕರ್ಷಣೆಯ ಸಂಕೇತ. ದೇವರು, ಸೃಷ್ಟಿ, ಜೀವನ – ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಮಾನವನು ಬೆಳಕನ್ನೇ ಉಪಮೆಯಾಗಿ ತೆಗೆದುಕೊಂಡಿದ್ದಾನೆ.
ಇವೆಲ್ಲ ಭಾವನೆಗಳ ಮಾತಾಯಿತು ಎನ್ನುವುದಾದರೆ, ನಾವು ಯಾವುದನ್ನು ತಾರ್ಕಿಕ, ವೈಜ್ಞಾನಿಕ ಎಂದು ಗುರುತಿಸುತ್ತೇವೋ ಆ ಯೋಚನೆ ಸಹ ನಿರಂತರ ಬೆಳಕಿನ ಕುರಿತು ತನ್ನ ಅರಿವನ್ನು ಹೆಚ್ಚಿಸಿಕೊಳ್ಳುತ್ತಿದೆ. ಕೆಲವು ಶತಮಾನಗಳ ಹಿಂದಕ್ಕೆ ಹೋಗಿ ಕಲ್ಪಿಸಿಕೊಳ್ಳಿ. ಆಗ ಯಾರಾದರೂ ನಾನು ಕತ್ತಲಿನಲ್ಲಿ ನಿಂತಿರುವ ವೈರಿಯನ್ನೂ ಕಂಡು ಕೊಲ್ಲಬಲ್ಲೆ ಎಂದಿದ್ದರೆ, ಇಲ್ಲವೇ ಊದಿಕೊಂಡಿರುವ ನಿನ್ನ ದೇಹದಲ್ಲಿ ನಿರ್ದಿಷ್ಟವಾಗಿ ಯಾವ ಮೂಳೆ ಮುರಿದಿದೆ ಎಂದು ‘ನೋಡಬಲ್ಲೆ’ ಎಂದಿದ್ದರೆ, ನಾವದನ್ನು ಒಂದೋ ಸುಳ್ಳೆಂದು ವಾದಿಸುತ್ತಿದ್ದೆವು, ಇಲ್ಲವೇ ಪವಾಡದ ಸಾಲಿಗೆ ಸೇರಿಸುತ್ತಿದ್ದೆವು. ಏಕೆಂದರೆ ಆ ಕಾಲಕ್ಕೆ ನಮಗೆ ದೃಗ್ಗೋಚರ ಬೆಳಕಷ್ಟೇ ಬೆಳಕಾಗಿತ್ತು. ಈಗ ನಮಗೆ ಗೊತ್ತು, ಇನ್ಫ್ರಾರೆಡ್ ಸಾಧನವನ್ನು ಕಣ್ಣಿಗೆ ಸಿಗಿಸಿಕೊಂಡ ಯೋಧನಿಗೆ ಕತ್ತಲಲ್ಲಿರುವ ವೈರಿಯೂ ಕಾಣಬಲ್ಲ ಎಂದು. ಅದು ದೃಗ್ಗೋಚರ ಬೆಳಕಿನಲ್ಲಿ ಕಾಣುವ ಬಗೆ ಅಲ್ಲದಿದ್ದರೂ ದೇಹದಿಂದ ಹೊರಚಿಮ್ಮುವ ಉಷ್ಣವನ್ನೇ ಆಧರಿಸಿ ಅಲ್ಲೊಂದು ಇರುವಿಕೆಯ ಚಿತ್ರವನ್ನು ಕಾಣಿಸುತ್ತದದು. ಮೂಳೆ ಎಲ್ಲಿ ಮುರಿದಿದೆ ಎಂಬುದು ಬರಿಗಣ್ಣಿಗೆ ಕಾಣದಿದ್ದರೇನೆಂತೆ, ಎಕ್ಸರೇ ಬೆಳಕಲ್ಲಿಟ್ಟಾಗ ಎಲ್ಲವೂ ಸುಸ್ಪಷ್ಟ.
ಹೀಗಾಗಿ ವಿಶ್ವವನ್ನೂ ಆ ಮೂಲಕ ನಮ್ಮನ್ನೂ ಅರ್ಥಮಾಡಿಕೊಳ್ಳುವುದಕ್ಕೆ ಬೆಳಕೆಂಬ ದರ್ಶನದ ಬೆನ್ನು ಹತ್ತಲೇಬೇಕು. ಬೆಳೆಕೆಂಬುದು ಕೇವಲ ಬರಿಗಣ್ಣಿಗೆ ಕಾಣುವುದೇ ಆಗಿರಬೇಕಿಲ್ಲ ಎಂಬುದನ್ನು ವಿಜ್ಞಾನವೂ ಅರ್ಥಮಾಡಿಸಿದೆ.
ವಿಜ್ಞಾನದ ಬೆಳಕಿನ ಕಥೆ
ಪ್ರಾರಂಭದಲ್ಲಿ ರೆನೇ ಡೆಸ್ಕಾರ್ತೆ ಬೆಳಕನ್ನು ‘ಏಥರ್’ ಎನ್ನುವ ಸೂಕ್ಷ್ಮ ಮಾಧ್ಯಮದೊಳಗೆ ಹರಿಯುವ ಅಲೆ ಎಂದು ವಿವರಿಸಿದ. ಅದೇ ಕಾಲಘಟ್ಟದಲ್ಲಿ ಐಸಾಕ್ ನ್ಯೂಟನ್ ಬೆಳಕನ್ನು ‘ಕಣಗಳ ಪ್ರವಾಹ’ವೆಂದು ಪ್ರತಿಪಾದಿಸಿದನು. ಈ ಎರಡು ವಿರೋಧಾಭಾಸದ ದೃಷ್ಟಿಕೋನಗಳ ನಡುವೆ ಕ್ರಿಸ್ಟಿಯನ್ ಹುಗೆನ್ಸ್ ತನ್ನ ಅಲೆಸಿದ್ಧಾಂತವನ್ನು ರೂಪಿಸಿದನು.
ನಂತರ 1801ರಲ್ಲಿ ಥಾಮಸ್ ಯೂಂಗ್ ನಡೆಸಿದ ಪ್ರಸಿದ್ಧ ‘ಡಬಲ್ ಸ್ಪ್ಲಿಟ್’ ಪ್ರಯೋಗವು ಬೆಳಕಿನ ಅಲೆಸ್ವರೂಪವನ್ನು ಸಾಬೀತು ಮಾಡಿದಂತೆ ಆಯಿತು. ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್ ಬೆಳಕನ್ನು ವಿದ್ಯುತ್ಕಾಂತೀಯ ಅಲೆ ಎಂದು ವಿವರಿಸಿದಾಗ, ಬೆಳಕು ಅಲೆ ಎಂಬ ಭಾವನೆ ವಿಜ್ಞಾನದಲ್ಲಿ ಸ್ಥಿರವಾಯಿತು.
ಆದರೆ 1900ರ ದಶಕದ ಆರಂಭದಲ್ಲಿ ಮ್ಯಾಕ್ಸ್ ಪ್ಲಾಂಕ್‌ನ ಕ್ವಾಂಟಂ ಸಿದ್ಧಾಂತ ಮತ್ತು ಆಲ್ಬರ್ಟ್ ಐನಸ್ಟೀನ್‌ನ ಫೋಟೋಎಲೆಕ್ಟ್ರಿಕ್ ಪರಿಣಾಮದ ವಿವರಣೆ ಹೊಸ ತಿರುವು ತಂದವು. ಐನಸ್ಟೀನ್ ತೋರಿಸಿದಂತೆ, ಬೆಳಕು ಕೆಲವೊಮ್ಮೆ ಅಲೆ ಅಲ್ಲ – ಬದಲಿಗೆ ಚಿಕ್ಕ ಚಿಕ್ಕ ಶಕ್ತಿಪುಂಜಗಳಾಗಿ (‘ಫೊಟಾನ್’) ವರ್ತಿಸುತ್ತದೆ.
ಅಂದರೆ ಬೆಳಕು ಒಂದು ನಿರಂತರ ಅಲೆ ಮಾತ್ರವಲ್ಲ, ಕಣಗಳ ಸರಮಾಲೆಯೂ ಹೌದು. ಈ ದ್ವಂದ್ವ ಸ್ವಭಾವವೇ ಇಂದಿನ ಕ್ವಾಂಟಂ ಮೆಕಾನಿಕ್ಸ್‌ನ ಮೂಲಭೂತ ತತ್ತ್ವವಾಗಿದ್ದು, ಸೌರಕೋಶಗಳಿಂದ ಡಿಜಿಟಲ್ ಕ್ಯಾಮೆರಾವರೆಗೆ ಅನೇಕ ತಂತ್ರಜ್ಞಾನಗಳ ಆಧಾರವಾಗಿದೆ. ಹೀಗೆ ಬೆಳಕನ್ನು ಸೀಳಿನೋಡುತ್ತ ಪರಿಷ್ಕೃತಗೊಳ್ಳುತ್ತ ಬಂದ ವಿಶ್ಲೇಷಣೆಯೇ ಇವತ್ತಿಗೆ ಸ್ಟ್ರಿಂಗ್ ಥಿಯರಿ, ಏಕಕಾಲದಲ್ಲಿ ಹಲವು ಲೋಕಗಳು ಇತ್ಯಾದಿಗಳ ಚರ್ಚೆಯವರೆಗೆ ಬಂದು ನಿಂತಿದೆ.
ಫಿಲಾಸಫಿ ಮತ್ತು ವಿಜ್ಞಾನದ ನಡುವೆ ಬೆಳಕಿನ ಸೇತುವೆ
ಭೌತಶಾಸ್ತ್ರ ಹಾಗೂ ಖಗೋಳದ ಬಗ್ಗೆ ಅಧ್ಯಯನ ನಡೆಸಿರುವ, ಆ ವಲಯದಲ್ಲಿ ಸಾಧನೆ ಮಾಡಿರುವ ಹಲವರಿಗೆ ಭಾರತೀಯ ತತ್ತ್ವಸಾರ, ಅದರಲ್ಲೂ ವಿಶೇಷವಾಗಿ ಅದ್ವೈತ ವೇದಾಂತ ತುಂಬ ಆಕರ್ಷಿಸುತ್ತದೆ. ಉದಾಹರಣೆಗೆ, ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ಎರ್ವಿನ್ ಶ್ರಾಡಿಂಗರ್ ತಮ್ಮ ಮೇಲೆ ಅದ್ವೈತ ವೇದಾಂತವು ಬೀರಿರುವ ಪ್ರಭಾವವನ್ನು ಪ್ರಶಂಸಿಸಿದ್ದಿದೆ. ಅಂತೆಯೇ, ಕಾರ್ಲ್ಸ್ ಸಗಾನ್ ಥರದ ಜನಪ್ರಿಯ ವಿಜ್ಞಾನ ನಿರೂಪಕರು ಸಹ, “ಈ ವಿಶ್ವವು ನಿರಂತರ ಸೃಷ್ಟಿ-ಸ್ಥಿತಿ-ಲಯಗಳಿಗೆ ಒಳಪಟ್ಟಿದೆ ಎಂಬುದನ್ನು ಹಿಂದು ತತ್ತ್ವಶಾಸ್ತ್ರಗಳಷ್ಟು ಚೆಂದವಾಗಿ ವಿವರಿಸಿದವರು ಬೇರಿಲ್ಲ” ಎಂದಿದ್ದಾರೆ.
ಈ ಪೈಕಿ, ಶ್ರಾಂಡಿಂಗರ್ ಪ್ರತಿಪಾದಿಸಿರುವ ‘ಬೆಕ್ಕಿನ ಪ್ರಕರಣ’ವೆಂಬ ‘ವಿಚಾರ ಪ್ರಯೋಗ’ವೊಂದು ಆಸಕ್ತಿಕರವಾಗಿದೆ. ಅದನ್ನು ನೆನಪಿಸಿಕೊಳ್ಳುವ ಮುನ್ನ ಮತ್ತೆ ಬೆಳಕಿನ ಕತೆಯನ್ನು ಸ್ವಲ್ಪ ಮುಂದುವರಿಸೋಣ. ಬೆಳಕೆಂಬುದು ಅಲೆಯಾಗಿಯೂ ಕಣವಾಗಿಯೂ ಇರಬಹುದು ಎಂಬ ತೀರ್ಮಾನವೊಂದಾಯ್ತಲ್ಲ? ಅದರ ಮುಂದುವರಿದ ಮಾಹಿತಿ ಏನೆಂದರೆ, ಯಾರಾದರೂ ನೋಡುವವರೆಗೆ ಇಲ್ಲವೇ ಯಾವುದಾದರೂ ಮಾಪನವು ಅಳೆಯುವುದಕ್ಕೆ ಹೋಗುವುದರವರೆಗೆ ಬೆಳಕು ಅಲೆ ಮತ್ತು ಕಣಗಳೆರಡರ ಸ್ಥಿತಿಯಲ್ಲೂ ಇರುತ್ತದೆ. ಆಬ್ಸರ್ವರ್ ಎಫೆಕ್ಟ್ ಉಂಟಾದಾಗ, ಅಂದರೆ ಬೆಳಕನ್ನು ಗ್ರಹಿಕೆಗೆ ತೆಗೆದುಕೊಂಡಾಗ ಅದರ ಅಲೆ ಸ್ವರೂಪವು ಕುಸಿದುಹೋಗಿ, ಕಣ ಸ್ವರೂಪ ಮಾತ್ರ ನಿಲುಕಿಗೆ ಸಿಗುತ್ತದೆ!
ವಿಜ್ಞಾನ ಕೂಡ ಒಗಟೆನಿಸುವುದು ಇಲ್ಲಿಯೇ. ಈಗ ಶ್ರಾಂಡಿಗರ್ ಬೆಕ್ಕಿನ ಪ್ರಕರಣವನ್ನು ಗಮನಿಸೋಣ. ಇದನ್ನು ನೀವು ಪರಮಾಣು ಹಂತದಲ್ಲಿ ಕಲ್ಪನೆ ಮಾಡಿಕೊಳ್ಳಬೇಕು. ಮುಚ್ಚಿದ ಪೆಟ್ಟಿಗೆಯೊಂದರಲ್ಲಿ ಬೆಕ್ಕು, ವಿಕಿರಣ ಪದಾರ್ಥ ಹಾಗೂ ವಿಕಿರಣ ಅಳೆಯುವ ಸಾಧನವಿದೆ. ಒಂದು ತಾಸಿನ ಅವಧಿಯಲ್ಲಿ ಆ ವಿಕಿರಣ ಪದಾರ್ಥವು ಕ್ಷೀಣಿಸುವುದಕ್ಕೆ ಶುರುವಾಗುವ ಸಾಧ್ಯತೆ ಶೇ. 50ರಷ್ಟಿದೆ. ಅದು ಅಳತೆ ಸಾಧನದ ಪತ್ತೆಗೆ ಸಿಗುತ್ತಲೇ ಪೆಟ್ಟಿಗೆಯಲ್ಲಿ ವಿಷಾನಿಲ ವ್ಯಾಪಿಸಿ ಬೆಕ್ಕನ್ನು ಕೊಲ್ಲುತ್ತದೆ. ಕ್ಸಾಸಿಕ್ ಭೌತನಿಯಮವನ್ನು ಅನ್ವಯಿಸಿದಾಗ, ಒಂದು ಗಂಟೆ ನಂತರ ಆ ಬೆಕ್ಕು ಬದುಕಿರುತ್ತದೆ ಇಲ್ಲವೇ ಸತ್ತಿರುತ್ತದೆ ಎಂಬ ಸಾಧ್ಯತೆ ಎದುರಿಗೆ ಬರುತ್ತದೆ. ಆದರೆ ಕ್ವಾಟಂ ಮೆಕಾನಿಕ್ಸ್ ಪ್ರಕಾರ ಆ ಬೆಕ್ಕು ಪೆಟ್ಟಿಗೆ ತೆಗೆದು ಪರಿಶೀಲನೆ ಮಾಡುವವರೆಗೂ ಸಾವು ಮತ್ತು ಬದುಕು ಎರಡೂ ಸ್ಥಿತಿಗಳಲ್ಲಿರುತ್ತದೆ, ಆದರೆ ಅಳತೆಗೊಳಪಟ್ಟಾಗ ಯಾವುದಾದರೂ ಒಂದು ಸ್ಥಿತಿಯಲ್ಲಿ ವ್ಯಕ್ತಗೊಳ್ಳುತ್ತದೆ!
ಅರೆ, ಇದೊಳ್ಳೆ ಕತೆಯಾಯ್ತಲ್ಲ! ಏಕಕಾಲದಲ್ಲಿ ಮೃತವಾಗಿಯೂ ಜೀವಂತವಾಗಿಯೂ ಇರುವುದು ಹೇಗೆ ಸಾಧ್ಯ ಅಂತೆಲ್ಲ ಶ್ರಾಂಡಿಂಗರ್ ಬೆಕ್ಕಿನ ಬಗ್ಗೆ ಶಾಸ್ತ್ರಬದ್ಧ ಚರ್ಚೆಗಳೆಲ್ಲ ಬಹಳ ನಡೆದಿವೆ. ಈ ಪೈಕಿ ಡೇವಿಡ್ ಡಾಯಿಶ್ ಎಂಬ ಬ್ರಿಟಿಷ್ ವಿಜ್ಞಾನಿಯು ಶ್ರಾಂಡಿಂಗರ್ ಬೆಕ್ಕಿನ ಪ್ರಕರಣ ವಿವರಿಸಿದ ಬಗೆ ಆಸಕ್ತಿಕರವಾಗಿದೆ. ನೋಡಿ…ಪರಮಾಣು ಹಂತದಲ್ಲಿ ಶ್ರಾಂಡಿಂಗರ್ ಬೆಕ್ಕಿನ ಬಾಕ್ಸ್ ಬಹುವಿಶ್ವಗಳಲ್ಲಿ ಏಕಕಾಲದಲ್ಲಿರುತ್ತದೆ. ಆ ಸಾಧನದಿಂದ ವಿಷಾನಿಲ ಚಿಮ್ಮುವ ಹಂತದವರೆಗೂ ಎಲ್ಲವೂ ಸೇಮ್ ಸೇಮ್. ಆ ನಂತರ ಕೆಲವು ವಿಶ್ವಗಳಲ್ಲಿ ಬೆಕ್ಕು ಸಾಯುತ್ತದೆ, ಇನ್ನು ಕೆಲವದರಲ್ಲಿ ಬದುಕುತ್ತದೆ. ಆನಂತರದ ಇತಿಹಾಸಪಥ ಬೇರೆ ದಾರಿಯಲ್ಲೇ ಸಾಗುತ್ತದೆ. ನೀವು ಪರಿಶೀಲನೆಗೊಳಪಡಿಸಿದ ವಿಶ್ವದಲ್ಲಿ ಬೆಕ್ಕು ಯಾವ ಸ್ಥಿತಿಯಲ್ಲಿತ್ತೆಂಬುದರ ಅಳತೆ ಮಾತ್ರ ನಿಮಗೆ ಸಿಗುತ್ತದೆ. ಏಕೆಂದರೆ ಈ ಸಮಾನಾಂತರ ವಿಶ್ವಗಳು ಒಂದರೊಂದಿಗೆ ಇನ್ನೊಂದು ಸಂವಾದಿಸುವ ವ್ಯವಸ್ಥೆ ಇಟ್ಟುಕೊಂಡಿಲ್ಲ. ಆದರೆ ಮುಂದೆ ಕ್ವಾಟಂ ಕಂಪ್ಯೂಟಿಂಗ್ ಏನಾದರೂ ಸಾಕ್ಷಾತ್ಕಾರವಾದರೆ ಅದೂ ಸಾಧ್ಯವಾದೀತೆಂಬುದು ಡಾಯಿಶ್ ಅವರ ಪರಿಕಲ್ಪನೆ.
ತತ್ತ್ವದ ಬೆಳಕು
ಕಿಂ ಜ್ಯೋತಿಸ್ತವ… ಎಂದು ಶುರುವಾಗುವ ಶಂಕರಾಚಾರ್ಯ ವಿರಚಿತ ಒಂದೇ ಶ್ಲೋಕದ ತತ್ತ್ವಪದವೊಂದಿದೆ. ಗುರುವಿನ ಪದತಲದಲ್ಲಿ ಕುಳಿತ ಶಿಷ್ಯರು ಬೆಳಕೆಂದರೆ ಯಾವುದು ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ತೊಡಗುತ್ತಾರೆ.
ಆಚಾರ್ಯರು ಕೇಳುತ್ತಾರೆ – “ನಿನಗೆ ಯಾವುದು ಬೆಳಕು?”
ಶಿಷ್ಯರ ಉತ್ತರ – “ಸೂರ್ಯ!”
“ರಾತ್ರಿಯಲ್ಲಿ?” – “ದೀಪ!”
“ಈ ಸೂರ್ಯನೋ, ದೀಪವೋ ಇವೆಲ್ಲ ಇವೆ ಅಂತ ತೋರಿಸುವ ಬೆಳಕೊಂದಿದೆಯಲ್ಲ, ಅದಾವುದು?” – “ಕಣ್ಣು.”
“ಕಣ್ಣು ಮುಚ್ಚಿದಾಗಲೂ ಮನಸಿನೊಳಗೆ ಏನೇನೋ ಚಿತ್ರಗಳು ಸರಿದಾಡುತ್ತವಲ್ಲ, ಅವನ್ನೆಲ್ಲ ತೋರಿಸುತ್ತಿರುವಂಥದ್ದು ಯಾವುದು?” – “ಬುದ್ಧಿ.”
“ಆ ಬುದ್ಧಿಯನ್ನು ಬೆಳಗಿಸುವ ಬೆಳಕು?” – “ಅರ್ಥವಾಗುತ್ತಿದೆ ಆಚಾರ್ಯರೇ…ನಾನೇ ಆ ಬೆಳಕು!”
ಈ ಸಂಭಾಷಣೆಯ ತಾತ್ಪರ್ಯ – ಎಲ್ಲ ಬೆಳಕುಗಳ ಮೂಲ ನಮ್ಮೊಳಗಿದೆ. ಸೂರ್ಯ, ದೀಪ, ಕಣ್ಣು, ಬುದ್ಧಿ – ಇವೆಲ್ಲ ಅದೇ ಪ್ರಜ್ಞೆಯ ಪ್ರತಿಫಲನ.
ಬೆಳಕು ಕೇವಲ ಪ್ರಕಾಶವಲ್ಲ; ಅದು ಜ್ಞಾನ, ಅನುಭವ ಮತ್ತು ಚೈತನ್ಯದ ಪ್ರತೀಕ. ವಿಜ್ಞಾನವು ಅದನ್ನು ಅಳೆಯಲು ಪ್ರಯತ್ನಿಸುತ್ತಿದೆ, ತತ್ತ್ವವು ಅದನ್ನು ಅನುಭವಿಸಲು ಆಹ್ವಾನಿಸುತ್ತಿದೆ.
- ಚೈತನ್ಯ ಹೆಗಡೆ
cchegde@gmail.com