ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ನಡುವೆ ಇದ್ದಕ್ಕಿದ್ದಂತೆ ತೀವ್ರ ಗಡಿ ಚಕಮಕಿಗಳು ಆರಂಭಗೊಂಡಿದ್ದು, ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಿಂದೆ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಕಾರ್ಯಾಚರಣೆಗಳ ನೆಲೆಯಾಗಿದ್ದ ಬಾಗ್ರಾಮ್ ಮಿಲಿಟರಿ ನೆಲೆಯ ಮೇಲೆ ಮರಳಿ ಪಾರಮ್ಯ ಸಾಧಿಸಲು ಪ್ರಯತ್ನಿಸುತ್ತಿರುವ ಕುರಿತು ಅನುಮಾನಗಳನ್ನು ಮೂಡಿಸಿದೆ. ಅಫ್ಘಾನಿಸ್ತಾನದ ತಾಲಿಬಾನ್ ವಿದೇಶಾಂಗ ಸಚಿವರ ಭಾರತ ಭೇಟಿಯ ಸಮಯದಲ್ಲಿ ಪಾಕಿಸ್ತಾನ ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಅದಕ್ಕೂ ಕೆಲ ದಿನಗಳ ಮುನ್ನ, ಒಂದು ವೇಳೆ ತಾಲಿಬಾನ್ ಬಾಗ್ರಾಮ್ ಅನ್ನು ಅಮೆರಿಕಗೆ ಮರಳಿಸಲು ಒಪ್ಪದಿದ್ದರೆ, ಪರಿಸ್ಥಿತಿ ವಿಕೋಪಕ್ಕೆ ಹೋದೀತು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದೂ ಸಹ ಅಫ್ಘಾನಿಸ್ತಾನದ ಕುರಿತು ಬದಲಾಗುತ್ತಿರುವ ಅಮೆರಿಕದ ನಿಲುವಿಗೆ ಸಾಕ್ಷಿಯಾಗಿದೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಜೊತೆ ಟ್ರಂಪ್ ಆತ್ಮೀಯ ಸಂಬಂಧ ಹೊಂದಿದ್ದು, ಇದು ಕ್ರಿಪ್ಟೋ ಕರೆನ್ಸಿ ಒಪ್ಪಂದಗಳು, ರೇರ್ ಅರ್ತ್ ಖನಿಜಗಳ ಗಣಿಗಾರಿಕೆ ಒಪ್ಪಂದಗಳು ಮತ್ತು ಚೀನಾವನ್ನು ಹತ್ತಿಕ್ಕುವ ಅಮೆರಿಕದ ಪ್ರಯತ್ನಗಳ ಕುರಿತೂ ಊಹಾಪೋಹಗಳಿಗೆ ಕಾರಣವಾಗಿದೆ. ಬಾಗ್ರಾಮ್ ಮಿಲಿಟರಿ ನೆಲೆ ಅಮೆರಿಕಗೆ ಕೇವಲ ಒಂದು ಸೇನಾ ನೆಲೆ ಮಾತ್ರವಲ್ಲ. ಬದಲಿಗೆ, ಚೀನಾ, ರಷ್ಯಾ, ಮಧ್ಯ ಏಷ್ಯಾ ಮತ್ತು ಪಾಕಿಸ್ತಾನದ ಪರಮಾಣು ನೆಲೆಗಳನ್ನು ಗಮನಿಸಲು ಸೂಕ್ತ ತಾಣವಾಗಿದೆ.
ಅಮೆರಿಕನ್ ಪಡೆಗಳು 2021ರಲ್ಲಿ ರಾತ್ರೋರಾತ್ರಿ ಬಾಗ್ರಾಮ್ ನೆಲೆಯನ್ನು ಖಾಲಿ ಮಾಡಿದಾಗ, ಅವು ಬಿಲಿಯಾಂತರ ಡಾಲರ್ ಮೌಲ್ಯದ ವಸ್ತುಗಳನ್ನು ಬಿಟ್ಟು ಹೋಗಿದ್ದವು. ತಾಲಿಬಾನ್ ಅವುಗಳನ್ನು ವಶಪಡಿಸಿಕೊಂಡು, 20 ವರ್ಷಗಳ ಯುದ್ಧ ಕೊನೆಯಾಗಿದೆ ಎಂದಿತು. ಈಗ ಬಾಗ್ರಾಮ್ ಅನ್ನು ಮರಳಿ ವಶಪಡಿಸಿಕೊಳ್ಳುವುದು ಅಮೆರಿಕಗೆ ಚೀನಾ, ಇರಾನ್ ಮತ್ತು ರಷ್ಯಾಗಳ ಜೊತೆಗಿನ ಉದ್ವಿಗ್ನತೆಗಳ ನಡುವೆ ತನ್ನ ಉಪಸ್ಥಿತಿಯನ್ನು ಮರಳಿ ಸ್ಥಾಪಿಸಲು ನೆರವಾಗಲಿದೆ.
ಪಾಕಿಸ್ತಾನದ ಪಾಲಿಗೆ ಇದು ಲಾಭದಾಯಕವೇ ಆಗಿದೆ. ಹಣಕ್ಕಾಗಿ ಹಪಹಪಿಸುವ ಪಾಕಿಸ್ತಾನ, ಭೌಗೋಳಿಕತೆಯನ್ನು ಈಗಾಗಲೇ ಹಣವಾಗಿ ಪರಿವರ್ತಿಸಿದೆ. ಪೂರೈಕೆ ಸರಪಳಿಗಳಿಗೆ ಆಶ್ರಯ ನೀಡುವುದು ಮತ್ತು ಗುಪ್ತಚರ ಸಹಕಾರ ಒದಗಿಸುವುದರಿಂದ ಪಾಕಿಸ್ತಾನಕ್ಕೆ ಮಿಲಿಯನ್‌ಗಟ್ಟಲೆ ಆದಾಯ ಬರಬಹುದು. 1950ರಲ್ಲಿ ಸೋವಿಯತ್ ನಿರ್ಮಿಸಿದ, 9/11 ದಾಳಿಯ ಬಳಿಕ ಅಮೆರಿಕ ಅಭಿವೃದ್ಧಿ ಪಡಿಸಿರುವ ಬಾಗ್ರಾಮ್ ವಾಯುನೆಲೆ ಕಾಬೂಲ್‌ನ ಉತ್ತರಕ್ಕೆ 60 ಕಿಲೋಮೀಟರ್ ದೂರದಲ್ಲಿದ್ದು, ಜಗತ್ತಿನ ಅತ್ಯಂತ ಶಕ್ತಿಶಾಲಿ ವಾಯುನೆಲೆಗಳಲ್ಲಿ ಒಂದೆನಿಸಿತು.
ಒಂದುವೇಳೆ ಅಮೆರಿಕ ಬಾಗ್ರಾಮ್ ನೆಲೆಯನ್ನು ಮರಳಿ ಪಡೆದರೂ, ಪಾಕಿಸ್ತಾನದ ನೆರವಿಲ್ಲದೆ ಅದನ್ನು ಕಾರ್ಯಾಚರಿಸಲು ಸಾಧ್ಯವಿಲ್ಲ. ಅಫ್ಘಾನಿಸ್ತಾನ ಭೂಮಿಯಿಂದ ಸುತ್ತುವರಿದಿದ್ದು, ಯಾವುದೇ ಸಮುದ್ರ ಮಾರ್ಗ ಹೊಂದಿಲ್ಲ. ಇಂಧನ, ಆಹಾರ, ಮತ್ತು ಆಯುಧಗಳು ಪಾಕಿಸ್ತಾನದ ಕರಾಚಿ ಬಂದರು ಮತ್ತು ಉತ್ತರದ ಹೆದ್ದಾರಿಗಳಿಂದಲೇ ಪೂರೈಕೆಯಾಗಬೇಕು. ಇರಾನ್ ಮೂಲಕ ಅಫ್ಘಾನಿಸ್ತಾನದ ಹಾದಿ ಮುಚ್ಚಲ್ಪಟ್ಟಿದ್ದು, ಮಧ್ಯ ಏಷ್ಯಾದ ಕಾರಿಡಾರ್‌ಗಳಿಗೆ ರಷ್ಯಾದ ಅನುಮೋದನೆ ಬೇಕಿದ್ದು, ಅದೀಗ ಲಭಿಸುವುದಿಲ್ಲ. ಆದ್ದರಿಂದ, ವಾಷಿಂಗ್ಟನ್ ಮೊದಲಿನಂತೆ ಇಸ್ಲಾಮಾಬಾದ್ ಮೇಲೇ ಅವಲಂಬಿತವಾಗಬೇಕಿದೆ.
ಇದೇ ವೇಳೆ, ಅಫ್ಘಾನಿಸ್ತಾನದ ಆರು ನೆರೆರಾಷ್ಟ್ರಗಳಾದ ಪಾಕಿಸ್ತಾನ, ಇರಾನ್, ತುರ್ಕ್‌ಮೆನಿಸ್ತಾನ್, ಉಜ್ಬೆಕಿಸ್ತಾನ್, ತಜಿಕಿಸ್ತಾನ್, ಮತ್ತು ಚೀನಾಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಉಪಸ್ಥಿತಿ ಇದ್ದರೆ, ಪಾಕಿಸ್ತಾನದ ಕೈಮೀರಿ ಹೋಗುತ್ತಿರುವ ತಾಲಿಬಾನನ್ನು ನಿಯಂತ್ರಿಸಲು ಸಾಧ್ಯವಾದೀತು. ಕಾಬೂಲ್‌ನತ್ತ ಭಾರತದ ಸ್ನೇಹಹಸ್ತದ ಕುರಿತು ಆತಂಕ ಹೊಂದಿರುವ ಪಾಕಿಸ್ತಾನ, ತಾನು ಎರಡೂ ಕಡೆಯಿಂದ, ಅಂದರೆ ಭಾರತ ಮತ್ತು ಬಂಡುಕೋರ ತಾಲಿಬಾನ್ ಎಂಬ ಎರಡು ಶತ್ರುಗಳನ್ನು ಎದುರಿಸುವ ಸವಾಲು ಹೊಂದಿದೆ. ಇಷ್ಟಾದರೂ ಪಾಕಿಸ್ತಾನ ತನ್ನ ಸುರಕ್ಷತೆಗೆ ಅಫ್ಘಾನಿಸ್ತಾನವನ್ನು ಹಿತ್ತಲಿನಂತೆ ಬಳಸಿಕೊಳ್ಳುವ ಬಯಕೆ ಹೊಂದಿದೆ.
ಈ ಚಕಮಕಿಗಳ ಹೊರತಾಗಿಯೂ, ಸೌದಿ - ಪಾಕಿಸ್ತಾನ ರಕ್ಷಣಾ ಒಪ್ಪಂದ ಹಾಗೇ ಉಳಿದಿದ್ದು, ಪಾಕಿಸ್ತಾನ ಇಂದಿಗೂ ಅಫ್ಘಾನಿಸ್ತಾನವನ್ನು ಮುಖ್ಯವೆಂದು ಪರಿಗಣಿಸುವುದಕ್ಕೆ ಸಾಕ್ಷಿಯಾಗಿದೆ. ಸೌದಿ ಅರೇಬಿಯಾ ಸಹ ತನ್ನ ಮೈತ್ರಿಯನ್ನು ಬಲವಾಗಿ ಮುಂದುವರಿಸಿದ್ದು, ಅಫ್ಘಾನಿಸ್ತಾನ ವಿಶಾಲವಾದ ಪ್ರಾದೇಶಿಕ ಆಟಕ್ಕೆ ಮುಖ್ಯ ಎಂಬ ಸಂದೇಶ ನೀಡಿದೆ. ಇದೇ ವೇಳೆ, ಇರಾನ್ ತಾಲಿಬಾನ್ ಜೊತೆಗಿನ ಸಂಬಂಧವನ್ನು ಬಲಪಡಿಸಿದ್ದು, ಪಾಕಿಸ್ತಾನ ಹೊರಹಾಕಿರುವ ಅಫ್ಘಾನ್ ನಿರಾಶ್ರಿತರಿಗೆ ವಸತಿ ಮತ್ತು ಉದ್ಯೋಗ ನೀಡುವ ಭರವಸೆ ನೀಡಿದೆ. ಸೌದಿ ಅರೇಬಿಯಾ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಜಾರಿಗೆ ಬಂದ ದುರ್ಬಲ ಕದನ ವಿರಾಮ ಇನ್ನೂ ಜಾರಿಯಲ್ಲಿದೆ.
ಇದೇ ವೇಳೆ, ದೇಶಭ್ರಷ್ಟ ಅಫ್ಘನ್ ಮುಖಂಡರು ಮತ್ತು ಪ್ರತಿರೋಧ ಗುಂಪುಗಳು ಅಮೆರಿಕದ ಪುನರಾಗಮನವನ್ನು ಬೆಂಬಲಿಸುತ್ತಿದ್ದಾರೆ. ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ (ಎನ್ಆರ್‌ಎಫ್) ಮುಖಂಡ ಅಬ್ದುಲ್ಲಾ ಖೆಂಜಾನಿ ಒಂದು ವೇಳೆ ಟ್ರಂಪ್‌ಗೆ ಬಾಗ್ರಾಮ್ ನೆಲೆ ಬೇಕಾಗಿದ್ದರೆ, ಅವರು ತಾಲಿಬಾನ್ ವಿರೋಧಿ ಪಡೆಗಳೊಡನೆ, ಅದರಲ್ಲೂ ಅಮೆರಿಕನ್ ಸೇನೆಗೆ ಬೆಂಬಲವಾಗಿ ಯುದ್ಧ ಮಾಡಿದ್ದ ಅಫ್ಘನ್ ಯೋಧರೊಡನೆ ಕೈ ಜೋಡಿಸಬೇಕು ಎಂದಿದ್ದಾರೆ. ಇದೇ ರೀತಿ, ಪತ್ರಕರ್ತ ನತಿಕ್ ಮಾಲಿಕ್‌ಜಾ಼ದಾ ಅವರು ಭದ್ರತಾ ವಿಚಾರದಲ್ಲಿ ತಾಲಿಬಾನ್ ಅನ್ನು ನಂಬುವುದು ತಪ್ಪಾಗಬಹುದು ಎಂದಿದ್ದು, ಪ್ರತಿರೋಧಿ ಗುಂಪುಗಳಿಗೆ ಸಾರ್ವಜನಿಕರ ಬೆಂಬಲವಿದೆ ಎಂದಿದ್ದಾರೆ.
ತಜಕಿಸ್ತಾನದಲ್ಲಿ ನೆಲೆಸಿರುವ ಎನ್ಆರ್‌ಎಫ್, 1990ರ ದಶಕದ, 2001ರ ಅಮೆರಿಕ ಆಕ್ರಮಣಕ್ಕೂ ಮುನ್ನ ಭಾರತ, ಇರಾನ್ ಮತ್ತು ರಷ್ಯಾಗಳ ಬೆಂಬಲ ಹೊಂದಿದ್ದ ನಾರ್ದನ್ ಅಲಯನ್ಸ್ ಅನ್ನು ಹೋಲುತ್ತಿದೆ. ವಿಶ್ಲೇಷಕರ ಪ್ರಕಾರ, ಟ್ರಂಪ್ ಯೋಜನೆ ಈ ಮಾರ್ಗವನ್ನು ಅನುಸರಿಸುವ ಸಾಧ್ಯತೆಗಳಿವೆ ಎಂದಿದ್ದರೂ, ಭೂ ಆವೃತವಾದ ತಜಕಿಸ್ತಾನವೂ ಅಮೆರಿಕದ ಕ್ರಮವನ್ನು ಪ್ರಾಯೋಗಿಕವಲ್ಲದಂತೆ ಮಾಡುತ್ತದೆ.
ಆದರೂ ಇದನ್ನು ಅನುಸರಿಸಿದರೆ, ಇಂತಹ ಯೋಜನೆ ಯುದ್ಧ, ವಿನಾಶ ಮತ್ತು ಅಮೆರಿಕ ಹಿಂದೆ ಮರಳುವ ಇತಿಹಾಸದ ಪುನರಾವರ್ತನೆ ಆದೀತು. ಹಿಂದೆ 2014ರ ಆಪರೇಷನ್ ಎಂಡ್ಯುರಿಂಗ್ ಫ್ರೀಡಮ್ ಮುಕ್ತಾಯಗೊಂಡರೂ, ತಾಲಿಬಾನ್ ಮತ್ತೆ ಅಧಿಕಾರಕ್ಕೆ ಮರಳಿದೆ. ಈ ಬಾರಿ ತಾಲಿಬಾನ್ ಟ್ರಂಪ್ ಯೋಜನೆಯನ್ನು ನಿರಾಕರಿಸಿದ್ದು, ಅಫ್ಘಾನಿಸ್ತಾನದ ಸಾರ್ವಭೌಮತ್ವದಲ್ಲಿ ರಾಜಿಯಿಲ್ಲ ಎಂದಿದೆ.
2001ರಂತಲ್ಲದೆ, ಈಗ ಅಮೆರಿಕ ಜಾಗತಿಕ ಬೆಂಬಲದ ಕೊರತೆ ಎದುರಿಸುತ್ತಿದೆ. ಆಗ, ರಷ್ಯಾ, ಚೀನಾ ಮತ್ತು ಇರಾನ್ ಸಹ ಮೌನವಾಗಿಯೇ ಭಯೋತ್ಪಾದನೆಯ ವಿರುದ್ಧದ ಯುದ್ಧವನ್ನು ಬೆಂಬಲಿಸಿದ್ದವು. ಈಗ ಅವೇ ರಾಷ್ಟ್ರಗಳು ಯಾವುದೇ ಹೊಸ ಅಮೆರಿಕನ್ ನೆಲೆಯನ್ನು ವಿರೋಧಿಸುತ್ತಿವೆ. ಭಾರತ, ಚೀನಾ, ಇರಾನ್ ಮತ್ತು ರಷ್ಯಾಗಳು ಭಾಗವಹಿಸಿದ್ದ ಮಾಸ್ಕೋ ಫಾರ್ಮ್ಯಾಟ್ ಟಾಕ್ಸ್ ವಿದೇಶೀ ಮಿಲಿಟರಿ ನೆಲೆಗಳನ್ನು ತಿರಸ್ಕರಿಸಿದೆ. ಇವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ಒಡ್ಡುತ್ತವೆ ಎಂದು ಅಭಿಪ್ರಾಯ ಪಟ್ಟಿದೆ.
ಟ್ರಂಪ್ ತನ್ನ ಮೊದಲ ಸಂಪುಟ ಸಭೆಯಲ್ಲಿ ಬಾಗ್ರಾಮ್ ನೆಲೆ ಚೀನಾದ ಮೇಲೆ ಕಣ್ಣಿಡಲಿದೆಯೇ ಹೊರತು ಅಫ್ಘಾನಿಸ್ತಾನದ ಮೇಲಲ್ಲ ಎಂದಿದ್ದು, ಆ ಬಳಿಕ ಅಮೆರಿಕನ್ ವಾಯುಪಡೆಯ ಸಿ-17 ಬಾಗ್ರಾಮ್ ನೆಲೆಯಲ್ಲಿ ಉಪಕರಣಗಳು ಮತ್ತು ಸಿಐಎ ಅಧಿಕಾರಿಗಳೊಡನೆ ಆಗಮಿಸಿದೆ ಎನ್ನಲಾಗಿದೆ.
ತಾಲಿಬಾನ್ ಒಳಗೇ ಅಭಿಪ್ರಾಯ ಭೇದಗಳಿವೆ. ಕೆಲವು ನಾಯಕರು ಅಮೆರಿಕ ನಿರ್ಬಂಧಗಳನ್ನು ಹಿಂಪಡೆದು, ಅಮೆರಿಕನ್ ಬ್ಯಾಂಕುಗಳಲ್ಲಿ ಫ್ರೀ ಆಗಿರುವ 9 ಬಿಲಿಯನ್ ಡಾಲರ್ ಮೊತ್ತವನ್ನು ಬಿಡುಗಡೆಗೊಳಿಸಿದರೆ, ಅಮೆರಿಕನ್ ನೆಲೆಗೆ ಒಪ್ಪಬಹುದು ಎಂದಿದ್ದಾರೆ. 2020ರ ದೋಹಾ ಒಪ್ಪಂದದ ರಹಸ್ಯ ಅಂಶಗಳಲ್ಲಿ ಬಾಗ್ರಾಮ್ ನೆಲೆಯೂ ಒಳಗೊಂಡಿತ್ತು ಎನ್ನಲಾಗಿದೆ. ಇದರಿಂದಾಗಿಯೇ ಅಮೆರಿಕನ್ ಸೇನೆ ಹಿಂದೆ ಸರಿದು, ತಾಲಿಬಾನ್ ಅಧಿಕಾರಕ್ಕೆ ಮರಳಿತ್ತು.
ತಾಲಿಬಾನ್ ಯೋಧರು ಅಮೆರಿಕದ ಮರಳುವಿಕೆಯನ್ನು ಪ್ರತಿರೋಧಿಸುತ್ತಿದ್ದಾರೆ. ತಾಲಿಬಾನ್ ನಾಯಕರು ರಾಜಿಯಾದರೆ, ಐಸಿಸ್-ಕೆ ಮತ್ತು ಇತರ ತೀವ್ರವಾದಿ ಗುಂಪುಗಳು ಬಂಡೇಳಬಹುದು.
ಅಂತಿಮವಾಗಿ, ಅಮೆರಿಕ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಅವಲಂಬಿತವಾಗಿದೆ. ಭಯೋತ್ಪಾದನಾ ನಿಗ್ರಹ ಯುದ್ಧದ ಸಂದರ್ಭದಲ್ಲಿ, ಪಾಕಿಸ್ತಾನದ ದ್ವಿಮುಖ ನೀತಿಯನ್ನು ಜಗತ್ತು ಕಣ್ಣಾರೆ ನೋಡಿತ್ತು. ವಾಷಿಂಗ್ಟನ್ನಿನ ಬಾಗ್ರಾಮ್ ನಡೆ ಹಳೆಯ ಸಹಯೋಗಗಳಿಗೆ ಮರಳಿ ಚಾಲನೆ ನೀಡಬಹುದು. ಆದರೆ, ಹೊಸ ಗಾಯಗಳನ್ನೂ ಮಾಡಿ, ಇನ್ನೊಂದು ವಿದ್ರೋಹದ ಸರಣಿ ಆರಂಭಿಸಬಹುದು.
ತಾಲಿಬಾನ್ ಪಾಲಿಗೆ ಮುಂದಿನ ತಿಂಗಳುಗಳು ಒಗ್ಗಟ್ಟಿನ ಪರೀಕ್ಷೆಯಾಗಿದೆ. ಅಂತಿಮವಾಗಿ, ಬಾಗ್ರಾಮ್ ತಾಲಿಬಾನ್ ನಾಯಕತ್ವ ಮತ್ತು ಅಮೆರಿಕದ ಸುದೀರ್ಘ ಯುದ್ಧದ ನೆನಪುಗಳು ಎರಡಕ್ಕೂ ಪರೀಕ್ಷೆಯಾಗಲಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com