ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಗಟ್ಟಿಯಾಗಿ ಮಾತಾಡುತ್ತಾರೆ. ಅಹಿಂದ ಸಂಘಟಿಸಿ ಆ ಮೂಲಕವೇ ಮುಖ್ಯಮಂತ್ರಿ ಸ್ಥಾನವನ್ನು ಎರಡನೇ ಬಾರಿಗೆ ಏರಿದ್ದಾರೆ. ಆದರೆ, ಈಗ ಒಳಮೀಸಲಾತಿ ನಿರ್ಧಾರದ ವಿಚಾರದಲ್ಲಿ ಎಡವಿದ್ದಾರೆ. ಪರಿಶಿಷ್ಟ ಜಾತಿಯಲ್ಲಿರುವ ಉಪ ಜಾತಿಗಳನ್ನು ವರ್ಗೀಕರಿಸುವಾಗ, ಮೀಸಲಾತಿ ಪ್ರಮಾಣ ಹಂಚಿಕೆ ಮಾಡುವಾಗ ಇದು ಸ್ಪಷ್ಟ. ಅಲೆಮಾರಿಗಳಿಗೆ ನ್ಯಾಯಯುತ ಪಾಲನ್ನು ನೀಡಿಲ್ಲ. ಪರಿಶಿಷ್ಟರಲ್ಲೇ ಬಲಿಷ್ಠರ ಜೊತೆ ತಬ್ಬಲಿ ಅಲೆಮಾರಿಗಳು ಸ್ಪರ್ಧಿಸಬೇಕಾದ ಪರಿಸ್ಥಿತಿ ಈಗ.
ಸಿದ್ದರಾಮಯ್ಯ ಅವರ ಸರಕಾರವೇ ನೇಮಿಸಿದ್ದ ನ್ಯಾ.ಎಚ್.ಎನ್. ನಾಗಮೋಹನದಾಸ್ ಅವರ ಆಯೋಗ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಿತ್ತು. ಎಡಗೈಗೆ ಶೇ.6, ಬಲಗೈಗೆ ಶೇ.5, ಅತಿ ಹಿಂದುಳಿದ ಜಾತಿಗಳು ಪ್ರವರ್ಗ ಎ ಗೆ ಶೇ.1, ಬಂಜಾರ, ಬೋವಿ, ಕೊರಚ, ಕೊರಮ (ಅಸ್ಪಶ್ಯರಲ್ಲದ ಜಾತಿಗಳು) ಶೇ.4, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಶೇ.1 ಮೀಸಲಾತಿ ಶಿಫಾರಸು ಮಾಡಿತ್ತು. ಪ್ರವರ್ಗ ಎ ಗೆ 59 ಸಣ್ಣ ಜಾತಿಗಳನ್ನು ಸೇರಿಸಿತ್ತು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮಾನದಂಡವನ್ನು ಆಧರಿಸಿ ಮೀಸಲಾತಿ ವರ್ಗೀಕರಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶವನ್ನು ಗಮನದಲ್ಲಿರಿಸಿ ಶಿಫಾರಸು ಮಾಡಿತ್ತು. ಆದರೆ ಸಿದ್ದರಾಮಯ್ಯ ಸರಕಾರ ಈ ಶಿಫಾರಸ್ಸನ್ನು ಬದಿಗೆ ಸರಿಸಿದೆ. ರಾಜಕೀಯ ತೀರ್ಮಾನ ಕೈಗೊಂಡಿದೆ. ಬಲಾಢ್ಯರ ಒತ್ತಡಕ್ಕೆ ಮಣಿದಿದೆ.
ರಾಜ್ಯ ಸರಕಾರ ಈಗ ಅಲೆಮಾರಿಗಳನ್ನು ಬಂಜಾರ, ಭೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳ ಜೊತೆಗೆ ಸೇರಿಸಿ ಈ ಪ್ರವರ್ಗಕ್ಕೆ ಶೇ.5ರಷ್ಟು ಮೀಸಲಾತಿ ನಿಗದಿಪಡಿಸಿದೆ. ಇಲ್ಲಿ ಸ್ಪೃಶ್ಯ ಜಾತಿಗಳ ಗುಂಪಿಗೆ 59 ಸಣ್ಣ ಜಾತಿಗಳ ಸೇರ್ಪಡೆಯಾಗಿದೆ. ಅಲೆಮಾರಿ ಜನಾಂಗವನ್ನು ಸ್ಪೃಶ್ಯ ಜಾತಿಗಳ ಗುಂಪಿಗೆ ಸೇರ್ಪಡೆ ಮಾಡಿದ್ದಕ್ಕೆ ಅಲೆಮಾರಿ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಸೌಲಭ್ಯದಿಂದ ವಂಚಿತವಾಗುವ ಆತಂಕ ಅವರನ್ನು ಕಾಡಿದೆ. ಸಾಮಾಜಿಕ ನ್ಯಾಯದ ಕಲ್ಪನೆಯೇ ಇಲ್ಲಿ ಸಾಕಾರವಾಗಿಲ್ಲ. ಅಲೆಮಾರಿಗಳ ಹೋರಾಟಕ್ಕೆ ಮಾದಿಗರು ಸಾಥ್ ನೀಡಿದ್ದಾರೆ.
ಪರಿಶಿಷ್ಟರಲ್ಲೇ ಅಲೆಮಾರಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದವರು. ಅಲೆಮಾರಿಗಳಲ್ಲಿ ಭಿಕ್ಷೆ ಬೇಡುತ್ತಾ ಊರೂರು ತಿರುಗುವವರೂ ಇದ್ದಾರೆ. ನ್ಯಾ.ಸದಾಶಿವ ಆಯೋಗ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಸಮಿತಿ, ನ್ಯಾ.ನಾಗಮೋಹನದಾಸ್ ಆಯೋಗ ಅಲೆಮಾರಿಗಳಿಗೆ ಶೇ.1 ಪ್ರತ್ಯೇಕ ಮೀಸಲಾತಿಯನ್ನು ಶಿಫಾರಸು ಮಾಡಿತ್ತು. ಆದರೆ, ಸಿದ್ದರಾಮಯ್ಯ ಸರಕಾರ ಇದನ್ನು ಒಪ್ಪಿಲ್ಲ.
ಚಿತ್ರದುರ್ಗದ ಲೋಕಸಭಾ ಸದಸ್ಯ ಬಿಜೆಪಿಯ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ನಿಯೋಗವು ಮೊನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸರಕಾರದ ನಿರ್ಧಾರದಿಂದ ಅಲೆಮಾರಿಗಳಿಗೆ ಆಗಿರುವ ಅನ್ಯಾಯವನ್ನು ವಿವರಿಸಿದ್ದಾರೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮುದಾಯಗಳಿಗೆ ಪ್ರತ್ಯೇಕ ಶೇ.1 ಮೀಸಲಾತಿ ನೀಡಿ ಇಲ್ಲವೇ ಆದಿ ದ್ರಾವಿಡ, ಆದಿ ಆಂಧ್ರ ಸಮುದಾಯಗಳನ್ನು ಪ್ರವರ್ಗ ಎ ಗೆ ಸೇರಿಸಬೇಕು. ಆದಿ ಕರ್ನಾಟಕವನ್ನು ಪ್ರವರ್ಗ ಬಿ ಗೆ ಸೇರಿಸಿ ಗೊಂದಲ ಬಗೆಹರಿಸಬೇಕು ಎಂಬ ಮನವಿಗೂ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.
ರಾಜ್ಯ ಸರಕಾರದ ನಿರ್ಧಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬಂತೆ ಇದೆ. ಅಲೆಮಾರಿಗಳ ಜೊತೆ ನಾವು ಇದ್ದೇವೆ. ಒಳ ಮೀಸಲಾತಿ ಜಾರಿಯಾಗಿದ್ದರೂ ನಮಗೆ ಇದು ಸಂಭ್ರಮ ತಂದಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ ಸಂಸದ ಗೋವಿಂದ ಕಾರಜೋಳ.
ರಾಜ್ಯ ಸರಕಾರವು ಸುಪ್ರೀಂಕೋರ್ಟ್ ತೀರ್ಪಿನ ಆಶಯಗಳಿಗೆ ವಿರುದ್ಧವಾಗಿ ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ರಾಜ್ಯ ಸರಕಾರದ ನಿರ್ಧಾರ ಸಾಮಾಜಿಕ ನ್ಯಾಯದ ತತ್ವಕ್ಕೂ ವಿರುದ್ಧವಾಗಿದೆ. ನ್ಯಾ.ನಾಗಮೋಹನದಾಸ್ ಅವರ ವರದಿಯನ್ನು ಸರಕಾರ ಸಂಪೂರ್ಣವಾಗಿ ತಿರಸ್ಕರಿಸಿದೆ ಎನ್ನುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗಗಳ ಪ್ರಾಧ್ಯಾಪಕ ಎ.ಎಸ್.ಪ್ರಭಾಕರ್.
ಸಿದ್ದರಾಮಯ್ಯ ಸರಕಾರವು ಪರಿಶಿಷ್ಟ 101 ಜಾತಿಗಳನ್ನು ಮೂರು ಪ್ರವರ್ಗಗಳಲ್ಲಿ ವಿಂಗಡಿಸಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.17ರಷ್ಟು ಮೀಸಲಾತಿ ಹಂಚಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಈಗ ಜಾರಿಯಲ್ಲಿರುವ ಶೇ.17ರಷ್ಟು ಮೀಸಲು ಪ್ರಮಾಣದಲ್ಲಿ ಎಡಗೈ ಸಮುದಾಯಕ್ಕೆ ಸಂಬಂಧಿ ಜಾತಿಗಳಿರುವ ಪ್ರವರ್ಗ ಎ ಗೆ ಶೇ.6, ಬಲಗೈ ಸಮುದಾಯಗಳಿಗೆ ಸಂಬಂಧಿತ ಜಾತಿಗಳಿರುವ ಪ್ರವರ್ಗ ಬಿ ಗೆ ಶೇ. 6, ಸ್ಪೃಶ್ಯ, ಅಲೆಮಾರಿ ಜಾತಿಗಳಿರುವ ಪ್ರವರ್ಗ ಸಿ ಗೆ ಶೇ.5ರಷ್ಟು ಒಳಮೀಸಲು ನಿಗದಿಪಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆಗಸ್ಟ್ 26ರಂದೇ ಆದೇಶ ಹೊರಡಿಸಿದೆ. ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ರಚಿಸುವುದಾಗಿಯೂ ಹೇಳಿದೆ. ದೇಶದಲ್ಲಿ ತೆಲಂಗಾಣ ಬಳಿಕ ಒಳಮೀಸಲಾತಿಯನ್ನು ಜಾರಿಗೊಳಿಸಿದ ರಾಜ್ಯ ಕರ್ನಾಟಕವಾಗಿದೆ.
ಭಾರತದ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯ ಒಂದು ಮೂಲ ತತ್ವ. ಮೀಸಲಾತಿಯು ಸಾಮಾಜಿಕ ನ್ಯಾಯದ ಒಂದು ಭಾಗ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಲ್ಲಿ ಇರುವ ಮಹಿಳೆಯರು, ಆದಿವಾಸಿಗಳು, ಅಲೆಮಾರಿಗಳು, ಸಫಾಯಿ ಕರ್ಮಚಾರಿಗಳು, ಕೊಳಚೆ ಪ್ರದೇಶದ ನಿವಾಸಿಗಳು ಮತ್ತು ಸಣ್ಣಸಣ್ಣ ಸಮುದಾಯಗಳ ಜನಜೀವನ ಇನ್ನೂ ಹೀನಾಯವಾಗಿದೆ. ಮೀಸಲಾತಿ ಜಾರಿಯಲ್ಲಿದ್ದರೂ ಇದರ ಸವಲತ್ತು ಈ ಜನವರ್ಗಗಳಿಗೆ ತಲುಪಲಿಲ್ಲ. ಈ ವರ್ಗದ ತಳಸಮುದಾಯಗಳಿಂದ ನಮ್ಮ ಪಾಲನ್ನು ನಮಗೆ ಕೊಡಿ ಎಂಬ ಹೋರಾಟ ಆರಂಭವಾಗಿ ದಶಕಗಳೇ ಕಳೆದಿವೆ. ಕೆಲವು ರಾಜ್ಯ ಸರಕಾರಗಳು ಒಳಮೀಸಲಾತಿಯನ್ನು ಜಾರಿಗೆ ತಂದವು. ರಾಜ್ಯ ಸರಕಾರಗಳ ಈ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಯಿತು. ನ್ಯಾಯಾಲಯಗಳು ಕೆಲವು ರಾಜ್ಯ ಸರಕಾರಗಳ ಒಳಮೀಸಲಾತಿ ನೀತಿಯನ್ನು ರದ್ದುಪಡಿಸಿದವು.
ರಾಜ್ಯದಲ್ಲಿ ಒಳಮೀಸಲಾತಿ ಹೋರಾಟದ ಪರಿಣಾಮ ರಾಜ್ಯ ಸರಕಾರ 2005ರಲ್ಲಿ ನ್ಯಾ.ಎನ್.ವೈ.ಹನುಮಂತಪ್ಪ ಆಯೋಗವನ್ನು ರಚಿಸಿತು. ಅವರು ರಾಜೀನಾಮೆ ನೀಡಿದರು. ನಂತರ ನ್ಯಾ.ಎಚ್.ಜಿ.ಬಾಲಕೃಷ್ಣ, ನ್ಯಾ.ಎ.ಜೆ.ಸದಾಶಿವ ಆಯೋಗದ ಅಧ್ಯಕ್ಷರಾದರು. ನ್ಯಾ.ಸದಾಶಿವ 2012ರಲ್ಲಿ ರಾಜ್ಯ ಸರಕಾರಕ್ಕೆ ವರದಿ ನೀಡಿದರು. ಸರಕಾರದ ನಿರ್ಲಕ್ಷ್ಯ ಪ್ರತಿಭಟಿಸಿ ಒಳಮೀಸಲಾತಿ ಹೋರಾಟ ಮುಂದುವರಿಯಿತು.
ಮಾದಿಗರು ಒಳಮೀಸಲಾತಿಗಾಗಿ ಹೋರಾಟ ಆರಂಭಿಸಿದ ನಂತರ ಇದು ರಾಜ್ಯ ರಾಜಕಾರಣದ ಮೇಲೆಯೂ ಪ್ರಭಾವ ಬೀರಿತು. ಪರಿಶಿಷ್ಟ ಜಾತಿಯಲ್ಲೇ ಎಡಗೈನವರು ನಿಧಾನವಾಗಿ ಕಾಂಗ್ರೆಸ್ ನಿಂದ ಬಿಜೆಪಿ ಕಡೆ ಒಲವು ತೋರಲು ಆರಂಭಿಸಿದರು. ಬಿಜೆಪಿ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಲು ಇದು ನೆರವಾಯಿತು. ಬಿಜೆಪಿ ಅಧಿಕಾರದಲ್ಲಿದ್ದಾಗ ಒಳಮೀಸಲಾತಿಗೆ ಪ್ರಯತ್ನಿಸಿದರೂ ಇದು ಸಾಧ್ಯವಾಗಲಿಲ್ಲ. ಆಗ ಬಸವರಾಜ ಬೊಮಾಯಿ ಸರಕಾರವು ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಒಳಮೀಸಲಾತಿ ಕುರಿತು ಅಧ್ಯಯನ ನಡೆಸಿ ವರದಿ ಪಡೆಯಿತು. ಈ ವರದಿಯನ್ನು ಅನುಮೋದನೆಗಾಗಿ ಕೇಂದ್ರ ಸರಕಾರಕ್ಕೆ ಕಳುಹಿಸಿತು. ಇದು ಅಲ್ಲಿಗೆ ನಿಂತಿತು. ಪರಿಸ್ಥಿತಿ ಹೀಗಿರುವಾಗ ಆಗಸ್ಟ್ 1, 2024ರಲ್ಲಿ ಒಳಮೀಸಲಾತಿಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದಿತು.
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಒಳಮೀಸಲಾತಿ ಅಥವಾ ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರಕಾರಗಳಿಗೆ ಸಂವಿಧಾನಿಕವಾಗಿ ದತ್ತವಾಗಿದೆ. ಸಮಾನತೆಯ ತತ್ವಕ್ಕೆ ಯಾವುದೇ ಚ್ಯುತಿ ಬರದಂತೆ ಇದರ ಮೂಲ ಆಶಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಪರಿಶಿಷ್ಟ ಜಾತಿಗಳು ವೈವಿಧ್ಯಮಯ (ಭಿನ್ನರೂಪತೆಯ) ಗುಂಪಾಗಿವೆ ಎಂದು ಅಭಿಪ್ರಾಯಪಟ್ಟಿದೆ. ಇದರ ಅನ್ವಯ ಸಿದ್ದರಾಮಯ್ಯ ಸರಕಾರ ನ್ಯಾ.ನಾಗಮೋಹನದಾಸ್ ಆಯೋಗವನ್ನು ರಚಿಸಿತು.
ಭಾರತದಲ್ಲಿ ಪರಿಶಿಷ್ಟ ಜಾತಿಗಳು ಏಕರೂಪತೆಯ ಗುಂಪಲ್ಲ. ಇವು ಭಿನ್ನರೂಪತೆಯ ಗುಂಪುಗಳು. ಇದನ್ನು ಸುಪ್ರೀಂಕೋರ್ಟ್ ದವಿಂದರ್ ಸಿಂಗ್ ಪ್ರಕರಣದ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಇದರಂತೆ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳು ಭಿನ್ನರೂಪತೆಯ ಗುಂಪುಗಳು. ಈ ಜಾತಿಗಳ ನಡುವೆ ಜಾತಿ ತಾರತಮ್ಯ, ವೃತ್ತಿ ತಾರತಮ್ಯ, ಸಾಮಾಜಿಕ ತಾರತಮ್ಯಗಳಿವೆ.
ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ ಕಡಿಮೆ ಜನಸಂಖ್ಯೆ ಇರುವ ಹಾಗೂ ಅಧಿಕ ಜನಸಂಖ್ಯೆ ಇರುವ ಜಾತಿಗಳೂ ಇವೆ. ಹತ್ತು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಜಾತಿಗಳೂ ಇವೆ. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಜಾತಿಗಳು ಸುಮಾರು 90 ಇವೆ. ಈ ಪೈಕಿ ಬಹುಪಾಲು ಜಾತಿಗಳು ಒಂದು ನಿರ್ದಿಷ್ಟ ಪ್ರದೇಶದಲ್ಲಿ ನೆಲೆಸಿಲ್ಲ. ಬೇರೆ ಬೇರೆ ಪ್ರದೇಶಗಳಲ್ಲಿ ಹಂಚಿ ಹೋಗಿದ್ದಾರೆ. ಸಣ್ಣಪುಟ್ಟ ಜಾತಿಗಳು ಜನಸಂಖ್ಯೆಯಲ್ಲಿ ಕಡಿಮೆ ಇರುವ ಕಾರಣ ರಾಜಕೀಯವಾಗಿ ಸಬಲರಲ್ಲ. ಮೀಸಲಾತಿ ಇದ್ದರೂ ಇತರ ಬಲಿಷ್ಠ ಜಾತಿಗಳ ಜೊತೆ ಸ್ಪರ್ಧಿಸುವ ಸ್ಥಿತಿಯಲ್ಲಿ ಇಲ್ಲ. ಇವರ ಶೈಕ್ಷಣಿಕ ಮಟ್ಟ ತೀರಾ ಹಿಂದುಳಿದಿದೆ.
ನ್ಯಾ. ನಾಗಮೋಹನದಾಸ್ ಆಯೋಗ ನಡೆಸಿದ ಸಮೀಕ್ಷೆ ಹಾಗೂ ಅಧ್ಯಯನದ ಪ್ರಕಾರ ಅತಿ ಹೆಚ್ಚು ಬಡವರು ಈ ಸಣ್ಣ ಜಾತಿಗಳಲ್ಲಿ ಕಂಡು ಬರುತ್ತಾರೆ. ತಮ್ಮ ಕುಲಕಸುಬುಗಳನ್ನೇ ಮಾಡಿಕೊಂಡು ಎರಡು ಹೊತ್ತಿನ ಊಟಕ್ಕೂ ಸಾಧ್ಯವಾಗದ ಜೀವನವನ್ನು ನಡೆಸುತ್ತಿದ್ದಾರೆ. ಸರಕಾರದ ಕಾರ್ಯಕ್ರಮಗಳ ಪ್ರಯೋಜನವನ್ನು ಈ ಜಾತಿಯ ಜನರು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ತಾಂತ್ರಿಕ ಪದವಿ ಪಡೆಯದೇ ಇರುವ 25 ಜಾತಿಗಳಿವೆ. ಸ್ನಾತಕೋತ್ತರ ಶಿಕ್ಷಣ ಪಡೆಯದ 14 ಜಾತಿಗಳಿವೆ. ಎಂಬಿಬಿಎಸ್ ಪದವಿ ಪಡೆಯದ 40 ಜಾತಿಗಳಿವೆ. ಪಿಎಚ್.ಡಿ ಪದವಿ ಪಡೆಯದ 54 ಜಾತಿಗಳಿವೆ. ಜನಸಂಖ್ಯೆ ಕಡಿಮೆ ಇರುವ, ಅತ್ಯಂತ ಹಿಂದುಳಿದಿರುವ ಜಾತಿಗಳ ಹೆಚ್ಚಿನ ಜನರಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಶಿಕ್ಷಣದಲ್ಲಿ ಮೀಸಲಾತಿ ಜಾರಿಯಲ್ಲಿದ್ದರೂ ಉನ್ನತ ಶಿಕ್ಷಣ ಪಡೆಯಲು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಅನೇಕ ಜಾತಿಗಳಿಗೆ ಇವತ್ತಿಗೂ ಸಾಧ್ಯವಾಗಿಲ್ಲ ಎಂದರೆ ಪರಿಶಿಷ್ಟರಲ್ಲೇ ಅವರಿಗೆ ಬಲಾಢ್ಯರ ಜೊತೆ ಸ್ಪರ್ಧಿಸಲು ಆಗುತ್ತಿಲ್ಲ ಎಂದೇ ಅರ್ಥ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 51 ಜಾತಿಗಳು ಸರಕಾರದ ಉದ್ಯೋಗಗಳಲ್ಲಿ ಕಡಿಮೆ ಪ್ರಾತಿನಿಧ್ಯ ಪಡೆದಿವೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಅತ್ಯಂತ ಹಿಂದುಳಿದ 12 ಜಾತಿಗಳು ಸರಕಾರದಲ್ಲಿ ಈಗ ಯಾವುದೇ ವೃಂದದಲ್ಲೂ ಉದ್ಯೋಗಗಳಲ್ಲಿ ಪ್ರಾತಿನಿಧ್ಯತೆಯನ್ನೇ ಪಡೆದುಕೊಂಡಿಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳು ಹಿಂದುಳಿದಿರುವುದು ಇದಕ್ಕೆ ಕಾರಣವಾಗಿರಬಹುದು. ಚಾಂಡಾಲ, ಗರೋಡ, ಗಾರೊ, ಕೆಪ್ ಮಾರೀಸ್, ಕುಡುಂಬನ್, ವಂಕಾರ್, ಮಯ್ಯವನ್ಶಿ, ಮಾಲಾ ಹನ್ನಾಯ್, ಮಸ್ತಿ, ಮವಿಲಾನ್, ಪನ್ನಿಅಂಡಿ, ಸಿಂಧೊಳ್ಳು ಹೀಗೆ ಕೆಲವು ಜಾತಿಗಳು ರಾಜ್ಯ ಸರಕಾರದಲ್ಲಿ ಈಗ ಉದ್ಯೋಗಳನ್ನೇ ಪಡೆದಿಲ್ಲ. ಇದನ್ನು ನ್ಯಾ.ನಾಗಮೋಹನದಾಸ್ ಆಯೋಗ ಸ್ಪಷ್ಟವಾಗಿ ಗುರುತಿಸಿದೆ.
ನ್ಯಾ.ನಾಗಮೋಹನದಾಸ್ ಆಯೋಗದ ವರದಿಯನ್ನು ಪರಿಶಿಷ್ಟ ಜಾತಿಯ ಬಲಗೈಯವರು ವಿರೋಧಿಸಿದ್ದರು. ತಮ್ಮ ಜಾತಿ , ಸಮುದಾಯಗಳ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ದತ್ತಾಂಶಗಳನ್ನು ಸರಿಯಾಗಿ ಕಲೆ ಹಾಕಿಲ್ಲ. ಹೀಗಾಗಿ, ವರದಿಯನ್ನು ಪರಿಷ್ಕರಿಸಬೇಕೆಂದು ಆಗ್ರಹಪಡಿಸಿದ್ದರು. ನ್ಯಾ.ನಾಗಮೋಹನದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂಬ ಒತ್ತಾಯವನ್ನು ಹಿರಿಯ ಸಾಹಿತಿ ದೇವನೂರು ಮಹದೇವ ಅವರು ಮುಂದಿಟ್ಟಿದ್ದರು. ಸಿದ್ದರಾಮಯ್ಯ ಅವರ ನಿರ್ಧಾರದಲ್ಲಿ ಸಾಮಾಜಿಕ ನ್ಯಾಯದ ತತ್ವ ಬದಿಗೆ ಸರಿಯಿತು. ರಾಜಕೀಯವೇ ಮೇಲುಗೈ ಸಾಧಿಸಿತು.
ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com