ನೇಪಾಳ ಹೊತ್ತಿ ಉರಿಯುತ್ತಿದೆ. ಅದರ ಬೆನ್ನಲ್ಲಿ ಹಲವು ವಿಶ್ಲೇಷಣೆಗಳಾಗುತ್ತಿವೆ. ಆದರೆ, ಈ ಎಲ್ಲ ಅಭಿಮತಗಳಲ್ಲಿರುವ ವೈರುಧ್ಯಗಳು ಕುತೂಹಲಕಾರಿಯಾಗಿವೆ. ಭಾರತದಲ್ಲಿ ಎಡಪಂಥೀಯರು ಎಂದು ಗುರುತಿಸಿಕೊಳ್ಳುವವರ ಪ್ರತಿಕ್ರಿಯೆಯನ್ನು ಸಾಮಾಜಿಕ ಮಾಧ್ಯಮದ ಮಟ್ಟದಲ್ಲಿ ಗಮನಿಸುತ್ತಿದ್ದರೆ, “ನೋಡಿ…ನೇಪಾಳದ ಯುವಕರಿಗೆ ಬುದ್ಧಿ ಬಂದು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಇಲ್ಲೂ ಆ ಥರ ಆಗುವುದು ಯಾವಾಗ?” ಎಂದು ಮೋದಿ ಸರ್ಕಾರದ ವಿರುದ್ಧದ ತಮ್ಮ ಅಸಹನೆಯನ್ನು ವ್ಯಕ್ತಪಡಿಸುವುದಕ್ಕೆ ಈ ಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನು, ಬಲಪಂಥೀಯರು ಎಂದು ಕರೆಸಿಕೊಳ್ಳುವ ಹೆಚ್ಚಿನವರಿಗೆ ಒಂದು ಗ್ರಹಿಕೆ ಇದೆ. ಇವರ ವಾದದ ಸಾರಾಂಶ ಏನೆಂದರೆ - “ಈಗ ಅಲ್ಲಿದ್ದ ಸರ್ಕಾರ ಚೀನಾ ಪ್ರೇರಿತವಾಗಿತ್ತು. ನೇಪಾಳದಲ್ಲಿ ಮತ್ತೆ ಹಿಂದು ರಾಜಪ್ರಭುತ್ವ ಬರಬೇಕೆಂಬ ಆಸೆ ಬಹುದಿನಗಳಿಂದ ವ್ಯಕ್ತವಾಗುತ್ತಿತ್ತು. ಕಮ್ಯುನಿಸ್ಟರ ಅಂಗಳವಾಗಿದ್ದ ಅಲ್ಲಿನ ಭಾರತ ವಿರೋಧಿ ಸರ್ಕಾರ ತೊಲಗುತ್ತಿರುವುದು ಒಳ್ಳೆಯದೇ…” ಎಂಬ ಧಾಟಿ.
ನೇಪಾಳದಲ್ಲಿ ನಡೆಯುತ್ತಿರುವ ಘಟನೆಗಳಿಗೆ ನಿರ್ದಿಷ್ಟ ಕಾರಣ ನೀಡುವುದು ಸುಲಭದಲ್ಲಿಲ್ಲ. ಮೇಲ್ನೋಟಕ್ಕೆ ಕಾಣುತ್ತಿರುವ ಹಾಗೂ ಮಾಧ್ಯಮದಲ್ಲಿ ಹೆಚ್ಚಿನದಾಗಿ ವರದಿಯಾಗುತ್ತಿರುವ ಕಾರಣಗಳೇ ಅಂತಿಮ ಎಂಬುದಂತೂ ಅಲ್ಲ. ಹೀಗಾಗಿ ಸದ್ಯಕ್ಕೆ ನೇಪಾಳದಲ್ಲಿ ನಡೆಯುತ್ತಿರುವ ದಂಗೆಯ ನಿಜ ಕಾರಣಗಳು ಯಾವವಲ್ಲ ಎಂಬುದನ್ನು ಪಟ್ಟಿ ಮಾಡಬೇಕಿದೆ.
ಇದು ಬಹುತೇಕವಾಗಿ ಮಾಧ್ಯಮ ಕಟ್ಟಿಕೊಡುತ್ತಿರುವ ರಮ್ಯ ಚಿತ್ರಣ. ನೇಪಾಳದ ಯುವ ಜನತೆಗೆ ಭ್ರಷ್ಟಾಚಾರದ ಬಗ್ಗೆ, ಅಲ್ಲಿ ನಿರಂತರ ಬದಲಾಗುತ್ತಿರುವ ಸರ್ಕಾರಗಳು ಅಭಿವೃದ್ಧಿಯಲ್ಲಿ ವಿಫಲವಾಗುತ್ತಿರುವ ಬಗ್ಗೆ, ನ್ಯಾಯದ ಹೆಸರಲ್ಲಿ ಶಸ್ತ್ರ ಸಂಘರ್ಷವನ್ನೇ ನಡೆಸಿ ಈಗ ಅಧಿಕಾರದ ಭಾಗವಾಗಿದ್ದುಕೊಂಡು ಭ್ರಷ್ಟರೇ ಆಗಿಬಿಟ್ಟಿರುವ ಅಲ್ಲಿನ ಕಮ್ಯುನಿಸ್ಟರ ಕುರಿತು ಆಕ್ರೋಶಗಳಿಲ್ಲ ಎಂದೇನಲ್ಲ. ಆದರೆ ಅದರ ಮೇಲೆ ಶುರುವಾದ ತಾತ್ತ್ವಿಕ ಹೋರಾಟವಿದು ಎಂಬ ಬಗ್ಗೆ ಯಾವ ಸೂಚನೆಗಳೂ ಕಾಣುತ್ತಿಲ್ಲ. ಯುವಜನರ ಹತಾಶೆಯನ್ನು ಇನ್ಯಾರೋ ತೆರೆಮರೆಯಲ್ಲಿ ನಿಂತು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿರಬಹುದೇ ಹೊರತು, “ವ್ಯವಸ್ಥೆ ಸರಿಪಡಿಸಿಕೊಳ್ಳುತ್ತೇವೆ” ಎಂಬ ನೈತಿಕ ನೆಲೆಗಟ್ಟಿನ ಮೇಲೆ ಯುಕರೇನೂ ಒಂದಾಗಿಲ್ಲ ಎಂಬುದು ಅದರ ಸ್ವರೂಪವನ್ನು ನೋಡಿದರೇ ತಿಳಿಯುತ್ತದೆ. ತಮ್ಮದೇ ಪಾರ್ಲಿಮೆಂಟಿಗೆ ಬೆಂಕಿ ಹಚ್ಚುವ, ಕೊಲೆ-ದೊಂಬಿಗಳಿಗೆ ಮುಂದಾಗುತ್ತಿರುವ ಈ “ಯುವ ಶಕ್ತಿ” ಬದಲಾವಣೆಯ ಪ್ರತೀಕವಂತೂ ಅಲ್ಲ.
ನೇಪಾಳದಲ್ಲಿ ಮತ್ತೆ ರಾಜಪ್ರಭುತ್ವವೇ ಬರಲಿ ಹಾಗೂ ಯಾವ ಕಮ್ಯುನಿಷ್ಟರು ನೇಪಾಳಕ್ಕೆ ಹಿಂದುರಾಷ್ಟ್ರ ಎಂಬ ಪಟ್ಟ ತೆಗೆದುಹಾಕಿದ್ದರೋ ಅದು ಮರುಪ್ರತಿಷ್ಠಾಪನೆ ಆಗಲಿ ಎಂದು ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ಹಲವರು ಅಭಿಪ್ರಾಯ ಹೇಳುತ್ತಿದ್ದದ್ದು ವ್ಯಾಪಕವಾಗಿ ವರದಿಯಾಗಿರುವುದೇನೋ ಹೌದು. ಆದರೆ, ಈಗಲ್ಲಿ ದಂಗೆ ಎಬ್ಬಿಸುತ್ತಿರುವ ತಥಾಕಥಿತ ಯುವಶಕ್ತಿ ಹಿಂದುತ್ವ-ರಾಜಪ್ರಭುತ್ವಗಳ ಪರವಾಗಿನ ಸೈದ್ಧಾಂತಿಕ ಧ್ವನಿ ಅಲ್ಲವೇ ಅಲ್ಲ. ಹೀಗೆ ಹಿಂದುತ್ವದ ಮಾತನಾಡುತ್ತಿದ್ದವರು ಜನಾಭಿಪ್ರಾಯ ರೂಪಿಸುವ ಮೂಲಕ ಅಂತಹುದೊಂದು ಬದಲಾವಣೆಗೆ ಯತ್ನಿಸುತ್ತಿದ್ದರು. ಇದೀಗ ಬೆಂಕಿ ಹಚ್ಚುತ್ತಿರುವ ಯುವಕರ ಗುಂಪಿನಿಂದಲೇ ಭವಿಷ್ಯದ ನೇಪಾಳದ ನಾಯಕರೇನಾದರೂ ಹೊರಹೊಮ್ಮಿದ್ದೇ ಆದರೆ ಅಲ್ಲಿ ಹಿಂದುತ್ವಕ್ಕೆ ಲಾಭಕ್ಕಿಂತ ಅಪಾಯವೇ ಹೆಚ್ಚಿದೆ.
ನೇಪಾಳದಲ್ಲಿರುವುದು ಹಿಂದು ಜನಸಂಖ್ಯೆ, ಈಗ ಕೆಲವು ದಶಕಗಳ ಮುಂಚೆ ಅದು ಹಿಂದುರಾಷ್ಟ್ರವೆಂದೇ ಗುರುತಿಸಿಕೊಂಡಿತ್ತು, ಅಲ್ಲಿನ ಪಶುಪತಿನಾಥ ಮಂದಿರದಲ್ಲಿ ಪ್ರತಿಫಲಿಸುತ್ತಿರುವುದು ಸನಾತನ ಶ್ರದ್ಧೆಯೇ ಎಂಬೆಲ್ಲ ವಿವರಗಳನ್ನು ಎದುರಿಗಿರಿಸಿಕೊಂಡು ಭಾರತೀಯರು ಒಂದು ಭಾವನಾತ್ಮಕ ವಿಶ್ಲೇಷಣೆ ಮಾಡುತ್ತಾರೆ. ರಾಜಕೀಯವಾಗಿ ಅದು ಬೇರೆ ಇದ್ದಿರಬಹುದು, ಆದರೆ ನೇಪಾಳವು ಸಾಂಸ್ಕೃತಿಕ ಭಾರತದ ಭಾಗವೇ ಎಂಬಂತಹ ಮಾತುಗಳನ್ನೆಲ್ಲ ನಾವು ಆಗಾಗ ಕೇಳುತ್ತಿರುತ್ತೇವೆ. ಅವೆಲ್ಲ ನಿಜವೇ. ಆದರೆ, ರಾಜಕೀಯ ನೆಲೆಯಲ್ಲಿ ಭಾರತದೊಂದಿಗೆ ನೇಪಾಳಕ್ಕಿರುವ ತಿಕ್ಕಾಟದ ಬೇರುಗಳು ಸಹ ಕಡಿಮೆ ಆಳದ್ದೇನಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ರಾಜಕೀಯ ಮೇಲಾಟವು ನೇಪಾಳದಲ್ಲಿ ಚೀನಾ ಪ್ರವೇಶದ ನಂತರವಷ್ಟೇ ಆಗಿದ್ದು ಎಂಬ ಗ್ರಹಿಕೆ ಹೆಚ್ಚಿನವರಲ್ಲಿದೆ. ಆದರೆ ವಾಸ್ತವವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇತಿಹಾಸದಲ್ಲಿ ಸ್ವಲ್ಪ ಹಿಂದಕ್ಕೆ ಹೋಗಬೇಕು.
ನೇಪಾಳವು ಭಾರತದ ವಿಶಾಲ ಭೂಭಾಗಕ್ಕೆ ಹೊಂದಿಕೊಂಡಂತೆ ಇರುವ ಇನ್ನೊಂದು ರಾಜ್ಯದಂತೆ ಕಾಣುತ್ತದೆ ಎಂದೆಲ್ಲ ಭಾರತೀಯರೇನೋ ಹೇಳಿಕೊಳ್ಳಬಹುದು. ಆದರೆ ನೇಪಾಳದ ಜನಮಾನಸವು ಈ ವಿಚಾರದಲ್ಲಿ ತಾನು ಭಾರತಕ್ಕಿಂತ ಮೇಲ್ಮಟ್ಟದವ ಎಂದೇ ಯೋಚಿಸುತ್ತದೆ. ಕಾರಣವೇನೆಂದರೆ, ಭಾರತವು ನೇರವಾಗಿ ವಸಹಾತುಶಾಹಿ ಅಡಿ ಗುಲಾಮಿತನದಲ್ಲಿದ್ದಾಗ, ತಾನು ಸ್ವಾಯತ್ತೆ ಉಳಿಸಿಕೊಂಡಿದ್ದೆ ಎಂದು ನೇಪಾಳ ವಾದಿಸುತ್ತದೆ. 1814-16ರ ಸಂದರ್ಭದಲ್ಲಿ ಅದು ಭಾರತದಲ್ಲಿದ್ದ ಬ್ರಿಟಿಷರೊಂದಿಗೆ ಯುದ್ಧಗಳನ್ನು ಮಾಡಿತ್ತು. ಈ ಹಂತದಲ್ಲಿ ಇವತ್ತಿನ ಶಿಮ್ಲಾ ಸೇರಿದಂತೆ ಹಲವು ಜಾಗಗಳನ್ನು ನೇಪಾಳದಿಂದ ಬ್ರಿಟಿಷರು ವಶಪಡಿಸಿಕೊಂಡರು.
ಯುದ್ಧ ಮುಂದುವರಿಸಿ ಇಡೀ ನೇಪಾಳವನ್ನು ತನ್ನ ಆಡಳಿತಕ್ಕೊಳಪಡಿಸುವುದು ಬ್ರಿಟಿಷರಿಗೇನೂ ಅಸಾಧ್ಯವಾಗಿರಲಿಲ್ಲ. ಆದರೆ ನೇಪಾಳದ ಗೊರ್ಖಾಗಳು ಬಹಳ ಭೀಕರವಾಗಿ ಹೋರಾಡಿದ್ದೂ ಹೌದಾಗಿತ್ತು. ಆಗ ಬ್ರಿಟಿಷರಿಗೆ ಅನ್ನಿಸಿದ್ದೇನೆಂದರೆ, ನೇಪಾಳವೆಂಬ ಈ ಪರ್ವತಮಯ ಪ್ರದೇಶವನ್ನು ನೇರವಾಗಿ ತನ್ನ ಆಡಳಿತದಲ್ಲಿರಿಸಿಕೊಳ್ಳುವುದು ವ್ಯಾವಹಾರಿಕವಾಗಿ ತುಂಬ ಲಾಭದ ವಿಷಯವೇನೂ ಅಲ್ಲ. ಹೀಗಾಗಿ, ನೇಪಾಳವನ್ನು ನಿಯಂತ್ರಿಸೋಣ ಆದರೆ ತಾಂತ್ರಿಕವಾಗಿ ಅದರ ಸ್ವಾತಂತ್ರ್ಯ ಕಸಿಯುವುದು ಬೇಡ ಎಂಬ ತೀರ್ಮಾನವಾಯಿತು. ನೇಪಾಳದಲ್ಲಿ ಬ್ರಿಟಿಷ್ ಪ್ರತಿನಿಧಿ ಇರಬೇಕು, ಗೊರ್ಕಾಗಳು ಬ್ರಿಟಿಷ್ ಸೇನೆ ಸೇರಬೇಕು, ವ್ಯಾಪಾರ ಮಾರ್ಗಗಳ ಮೇಲಿನ ತೀರ್ಮಾನಗಳನ್ನು ಬ್ರಿಟಿಷರ ಸಲಹೆ ಮೇರೆಗಷ್ಟೇ ನೇಪಾಳವು ತೆಗೆದುಕೊಳ್ಳಬೇಕು ಎಂದೆಲ್ಲ ನಿರ್ಬಂಧಗಳನ್ನು ಹೇರಿ ಅಲ್ಲಿನ ರಾಜಪ್ರಭುತ್ವಕ್ಕೆ ಮುಂದುವರಿಯಲು ಬಿಡಲಾಯಿತು. ವಾಸ್ತವದಲ್ಲಿ ಅದೊಂದು ಅಘೋಷಿತ ಗುಲಾಮಿತನವೇ.
ಆದರೆ ಇವೆಲ್ಲದರ ಪರಿಣಾಮ ಏನಾಯಿತೆಂದರೆ, ನೇಪಾಳದ ರಾಜಪ್ರಭುತ್ವವು ಭಾರತದ ಅವತ್ತಿನ ಸ್ವಾತಂತ್ರ್ಯ ಸಂಘರ್ಷದೊಂದಿಗೆ ಅಂತರ ಕಾಪಾಡಿಕೊಂಡಿತು. ಕ್ರಾಂತಿಕಾರಿಗಳು ನೇಪಾಳದಲ್ಲಿ ಆಶ್ರಯ ಪಡೆಯದಂತೆ ಅಲ್ಲಿನ ಪ್ರಭುತ್ವ ಪ್ರತಿಬಂಧಿಸಿತ್ತು. 1857ರ ಕ್ರಾಂತಿ ಹತ್ತಿಕ್ಕುವ ಸಂದರ್ಭದಲ್ಲಿ ಬ್ರಿಟಿಷರು ಗೊರ್ಖಾ ಯೋಧರನ್ನು ಬಂಡೆದ್ದ ಭಾರತೀಯ ಸಿಪಾಯಿಗಳ ವಿರುದ್ಧ ಪರಿಣಾಮಕಾರಿಯಾಗಿ ಬಳಸಿಕೊಂಡರು.
ಸ್ವಾತಂತ್ರ್ಯಾನಂತರ ಸಹ ನೇಪಾಳದ ಹಿಂದು ಅರಸೊತ್ತಿಗೆಯೊಂದಿಗೆ ಭಾರತದ ಸಂಬಂಧ ಸುಮಧುರವಾಗಿತ್ತು ಎಂದೇನೂ ಇಲ್ಲ. “ಭಾರತವು ದೊಡ್ಡಣ್ಣನ ರೀತಿ ವರ್ತಿಸುತ್ತಿದೆ” ಎಂದು ನೇಪಾಳ ಆರೋಪಿಸಿದ ಸಂದರ್ಭಗಳು ಬಹಳ ಇವೆ. ನೇಪಾಳದಲ್ಲಿ ರಾಜಪ್ರಭುತ್ವ ತೆಗೆದು ಕಮ್ಯುನಿಸ್ಟರು ಆಡಳಿತಕ್ಕೆ ಬರಲು ಚೀನಾದ ಕುಮ್ಮಕ್ಕೇ ಕಾರಣ ಎಂದು ಭಾರತೀಯರು ಸಾಮಾನ್ಯವಾಗಿ ನಂಬಿದ್ದಾರೆ. ಆದರೆ ನೇಪಾಳದ ಜನಾಭಿಪ್ರಾಯದ ಧ್ವನಿಗಳು ಭಿನ್ನ ಇವೆ. ಪ್ರಜಾಪ್ರಭುತ್ವದ ಹೆಸರಲ್ಲಿ ರಾಜಪ್ರಭುತ್ವದ ಧ್ವನಿ ಕುಗ್ಗಿಸುವಲ್ಲಿ ಭಾರತದ ತೆರೆಮರೆ ಪಾತ್ರವೂ ದೊಡ್ಡದಿದೆ ಎಂದು ಅಲ್ಲಿನವರು ಲೇಖನಗಳನ್ನು ಬರೆದಿದ್ದಾರೆ. ಅಷ್ಟೇ ಏಕೆ, ರಾಜಪ್ರಭುತ್ವವನ್ನು ಕೊನೆಗಾಣಿಸುವುದಕ್ಕೆ ಮುಂಚೆ ದಶಕಗಳ ನಡುವೆ ನಡೆದ ಮಾವೋವಾದಿಗಳ ಬಂಡಾಯಕ್ಕೆ ಭಾರತದ ಕುಮ್ಮಕ್ಕೂ ಇತ್ತು ಎಂದು ವಾದಿಸುವವರೂ ಇದ್ದಾರೆ. ಆ ಸಮಯದಲ್ಲಿ ಭಾರತದಲ್ಲಿ ತೀವ್ರವಾಗಿದ್ದ ನಕ್ಸಲಿಸಂ ಹಾಗೂ ಎಡಪಂಥೀಯರಿಗೆ ಅವತ್ತಿನ ಸರ್ಕಾರಗಳ ನೀತಿ ನಿರೂಪಣೆಯಲ್ಲಿ ಸಿಕ್ಕಿದ್ದ ಪ್ರಾಶಸ್ತ್ಯ ಇವನ್ನೆಲ್ಲ ಗಮನಿಸಿದರೆ ಈ ಆರೋಪಗಳಲ್ಲಿ ಕೆಲವು ಸತ್ಯವಾಗಿದ್ದರೂ ಅಚ್ಚರಿ ಏನಿಲ್ಲ.
2005-06ರ ನಡುವೆ ನೇಪಾಳದ ರಾಜಕೀಯ ಪಕ್ಷಗಳು ಹಾಗೂ ಅಲ್ಲಿನ ಮಾವೋವಾದಿಗಳ ನಡುವೆ ಮಾತುಕತೆಗೆ ಭಾರತದಲ್ಲಿ ಅವತ್ತಿಗೆ ಇದ್ದ ಸರ್ಕಾರ ಮಧ್ಯಸ್ತಿಕೆ ವಹಿಸಿತ್ತು. ಇದರ ಆಧಾರದಲ್ಲೇ 2006ರ ಆಂದೋಲನವು ನೇಪಾಳದಲ್ಲಿ ರಾಜಪ್ರಭುತ್ವವನ್ನು ಕೊನೆಗಾಣಿಸಿತ್ತು.
1969, 1989 ಹಾಗೂ 2015ರಲ್ಲಿ ಭಾರತವು ನೇಪಾಳಕ್ಕೆ ಆರ್ಥಿಕ ದಿಗ್ಬಂಧನದ ರುಚಿಯನ್ನೂ ತೋರಿಸಿದೆ. ಈ ಎಲ್ಲ ದಿಗ್ಬಂಧನಗಳಿಗೆ ಅವುಗಳದ್ದೇ ಆದ ಕಾರಣಗಳಿದ್ದವು. ಆದರೆ ಭಾರತವು ನೇಪಾಳವನ್ನು ಹತ್ತಿಕ್ಕುವುದಕ್ಕೆ ಪ್ರಯತ್ನಿಸುತ್ತಿದೆ ಎಂಬ ವ್ಯಾಖ್ಯಾನ ಎದ್ದು ನಿಲ್ಲುವುದನ್ನು ಮಾತ್ರ ತಪ್ಪಿಸಲಾಗಲಿಲ್ಲ.
ಈ ಎಲ್ಲ ಹಿನ್ನೆಲೆ ಇಟ್ಟು ನೋಡಿದಾಗ, ನೇಪಾಳದಲ್ಲಿ ರಾಜಪ್ರಭುತ್ವವೆಂದರೆ ಅದುವೇ ಹಿಂದುತ್ವ, ಹಿಂದುತ್ವ ಎಂದರೆ ಭಾರತ ಎಂದೆಲ್ಲ ಸರಳವಾಗಿ ವಿಶ್ಲೇಷಿಸಿಬಿಡುವಷ್ಟು ಸುಲಭದಲ್ಲಿಲ್ಲ ಭಾರತ ಹಾಗೂ ನೇಪಾಳಗಳ ಸಂಬಂಧ.
ಈ ಲೇಖನ ಬರೆಯುತ್ತಿರುವಾಗ ನೇಪಾಳದಲ್ಲಿ ಕೆ ಪಿ ಶರ್ಮ ಒಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಅಲ್ಲಿನ ಸೇನೆ ಆಡಳಿತ ವಹಿಸಿಕೊಂಡಿದ್ದಾಗಿತ್ತು. ಇದು ಪಕ್ಕಾ ಅಮೆರಿಕದ ಡೀಪ್ ಸ್ಟೇಟ್ ಕಾರ್ಯಾಚರಣೆ, ಏನೇ ಆದರೂ ಚೀನಾಕ್ಕಿದು ಹಿನ್ನಡೆ ಎಂದೆಲ್ಲ ವಿಶ್ಲೇಷಣೆಗಳಾಗುತ್ತಿವೆ.
ಇದು ಅಮೆರಿಕದ ಡೀಪ್ ಸ್ಟೇಟ್ ಎಂದು ಕರೆಸಿಕೊಳ್ಳುವ ಶಕ್ತಿಶಾಲಿ ಗುಂಪಿನ ಕಾರ್ಯಾಚರಣೆಯೇ ಆಗಿದ್ದಿರಬಹುದು. ಹಾಗೆಂದ ಮಾತ್ರಕ್ಕೆ ಅದು ಚೀನಾ ವಿರೋಧಿಯೇ ಆಗಿದ್ದಿರಬೇಕಿಲ್ಲ. ಅರೇ, ಇದೇನಿದು ಎಂದಿರಾ? ಕಮ್ಯುನಿಸಂ ಹಾಗೂ ಕ್ಯಾಪಿಟಲಿಸಂ ಇವೆರಡೂ ಧ್ರುವಗಳನ್ನು ಕಟ್ಟಿ ನಿಲ್ಲಿಸಿರುವುದೇ ಅಮೆರಿಕದ ಡೀಪ್ ಸ್ಟೇಟ್ ಆಗಿರುವುದರಿಂದ ಅದು ಯಾವಾಗ, ಯಾವ ಲೆಕ್ಕಾಚಾರದೊಂದಿಗೆ, ಯಾರ ಜತೆ ಕೈಜೋಡಿಸುತ್ತದೆ ಎಂದು ಊಹಿಸುವುದೇ ಕಷ್ಟ. ಹೀಗಾಗಿಯೇ ಮೇಲ್ನೋಟಕ್ಕೆ ತುಂಬ ಸುಲಭದಲ್ಲಿ ಕಾಣಿಸುತ್ತಿರುವ ಅಂಶಗಳಾದ ಸಾಮಾಜಿಕ ಮಾಧ್ಯಮದ ಬ್ಯಾನ್, ಜೆನ್-ಜಿಯ ಭ್ರಷ್ಟಾಚಾರ ವಿರೋಧಿ ಆಕ್ರೋಶ ಇವ್ಯಾವವೂ ನಿಜ ಕಾರಣಗಳಾಗಿರುವುದಿಲ್ಲ.
ನೇಪಾಳದಲ್ಲಿ ಚೀನಾದ ಬೆಲ್ಟ್ ಆ್ಯಂಡ್ ರೋಡ್ ಯೋಜನೆಗಳು, ಮೂಲಸೌಕರ್ಯ ಯೋಜನೆಯಲ್ಲಿನ ಹೂಡಿಕೆಗಳು ಇವೆಲ್ಲ ಗೊತ್ತಿರುವಂಥದ್ದೇ. ಇವೆಲ್ಲದರ ಜತೆ ಇತ್ತೀಚಿನ ವರ್ಷಗಳಲ್ಲಿ ಚೀನಾ ಹೂಡಿಕೆ ಮಾಡಿರುವುದು ನೇಪಾಳದ ಯುವ ಜನಸಂಖ್ಯೆಯಲ್ಲಿ. ಅದು ನೇಪಾಳದ ಸರ್ಕಾರಿ ಶಾಲೆಗಳಿಗೆ ಮ್ಯಾಂಡರೀನ್ ಕಲಿಸುವ ಸುಮಾರು 900 ಶಿಕ್ಷಕರನ್ನು ಕಳುಹಿಸಿದೆ. ನೇಪಾಳದ ಹಲವು ವಿಶ್ವವಿದ್ಯಾಲಯಗಳಲ್ಲಿ ಚೀನಾ ಶಿಷ್ಯವೇತನಗಳನ್ನು ನೀಡುತ್ತಿದೆ. ನೇಪಾಳದ ಯುವಕರ ಗುಂಪುಗಳನ್ನು ಬೀಜಿಂಗ್ ಗೆ ಕರೆಸಿಕೊಂಡು ಸಮ್ಮೇಳನಗಳನ್ನು ನಡೆಸಿದ ಉದಾಹರಣೆಗಳೂ ಇವೆ. ಇನ್ನು, ಚೀನಾದ ಪುರುಷರು ನೇಪಾಳಿ ಹೆಣ್ಣುಗಳನ್ನು ಮದುವೆಯಾಗುತ್ತಿರುವ ವಿದ್ಯಮಾನ ತೀರ ದಟ್ಟವಾಗಿ ಅಲ್ಲದಿದ್ದರೂ ನಿಧಾನಕ್ಕೆ ತೆರೆದುಕೊಳ್ಳುತ್ತಿದೆ.
ಇವನ್ನೆಲ್ಲ ಹೇಗೆ ಗ್ರಹಿಸಬೇಕು? ಇವತ್ತಿಗೆ ಸರಾಸರಿ ವಯಸ್ಸು 39 ವರ್ಷಗಳು. ಹಲವು ಕಾರಣಗಳಿಂದಾಗಿ ಅಲ್ಲಿ ಮದುವೆ ಮತ್ತು ಕುಟುಂಬ ವ್ಯವಸ್ಥೆಗಳು ಕುಸಿದಿವೆ. ಅವನ್ನು ಉತ್ತೇಜಿಸುತ್ತ, ಮೂರು ಮಕ್ಕಳನ್ನು ಮಾಡಿಕೊಳ್ಳಿ ಎಂದೆಲ್ಲ ಸರ್ಕಾರ ಈಗ ಉತ್ತೇಜಿಸುತ್ತಿರುವುದಕ್ಕೆ ಅಷ್ಟಾಗಿ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ, ಚೀನಾವು ತಂತ್ರಜ್ಞಾನದಲ್ಲಿ ಎಷ್ಟೇ ಪ್ರಗತಿ ಸಾಧಿಸಿದ್ದರೂ ದಿನಗಳೆದಂತೆ ಯುವ ಜನಸಂಖ್ಯೆಯ ಹೊಸ ಸೇರ್ಪಡೆ ಇಲ್ಲದೇ ವಯೋವೃದ್ಧವಾಗಿ ಸಾಗುತ್ತಿದೆ ಎಂಬುದು ವಾಸ್ತವ. ಹೀಗಾದಾಗ ಭವಿಷ್ಯದಲ್ಲಿ ಟಿಬೆಟ್ ಥರದ ಭೂಭಾಗಗಳನ್ನು ತನ್ನ ಜನಸಂಖ್ಯೆ ಬಲ ಉಪಯೋಗಿಸಿ ನಿಯಂತ್ರಣದಲ್ಲಿರಿಸುವುದು ಚೀನಾಕ್ಕೆ ಕಷ್ಟವಾದೀತು. ಚೀನಾಕ್ಕೆ ಹೋಲಿಸಿದರೆ ಭಾರತದ ಸರಾಸರಿ ವಯೋಮಾನ 28 ವರ್ಷಗಳು. ಭಾರತ ಎಂದಿದ್ದರೂ ಚೀನಾಕ್ಕೆ ಪ್ರತಿಸ್ಪರ್ಧಿ.
ನೇಪಾಳದ ಜನಸಂಖ್ಯೆ ಹತ್ತಿರ ಹತ್ತಿರ ಮೂರು ಕೋಟಿ. ಸಂಖ್ಯೆ ದೃಷ್ಟಿಯಿಂದ ಇದು ದೊಡ್ಡದಲ್ಲದಿದ್ದರೂ ಇದರ ಬಹುಭಾಗ ಯುವಜನಸಂಖ್ಯೆಯೇ ಎಂಬುದು ಗಮನಿಸಬೇಕಾದ ವಿಚಾರ. ನೇಪಾಳದ ಸರಾಸರಿ ವಯೋಮಾನ 25 ವರ್ಷಗಳು. ಒಂದು ಕಾಲದಲ್ಲಿ ಬ್ರಿಟಿಷರು ನೇಪಾಳವನ್ನು ಉಪಯೋಗಿಸಿಕೊಂಡಂತೆಯೇ, ಭವಿಷ್ಯದಲ್ಲಿ ಚೀನಾದ ಯುವ ಸಮೂಹವನ್ನು ತನಗಾಗಿ ದುಡಿಸಿಕೊಳ್ಳುವುದಕ್ಕೆ ಚೀನಾ ಯೋಚಿಸಿದೆಯೇ? ಇವರನ್ನೇನೂ ಚೀನಾ ಭವಿಷ್ಯದಲ್ಲಿ ತನ್ನ ಸೇನೆಗೆ ಸೇರಿಸಿಕೊಳ್ಳುತ್ತದೆ ಎಂದೇನಲ್ಲ, ಆದರೆ ಟಿಬೆಟ್ಟಿಗೆ ತಾಗಿಕೊಂಡಿರುವ ಬಫರ್ ಜೋನ್ ಆಗಿ ನೇಪಾಳವನ್ನು ಬಳಸಲಿದೆಯೇ? ಈಗ ನೇಪಾಳದಲ್ಲಿರುವವರು ಕಮ್ಯುನಿಸ್ಟ್ ರಾಜಕಾರಣಿಗಳೇ ಆಗಿದ್ದರೂ ಜನಪ್ರಿಯತೆ ಕಳೆದುಕೊಂಡಿರುವುದರಿಂದ, ಆ ಜಾಗದಲ್ಲಿ ಹಿಂದುತ್ವದಂಥ ಸಿದ್ಧಾಂತ ಬರುವುದಕ್ಕೆ ಮುಂಚೆ, ಯುವಕ್ರಾಂತಿ ಹೆಸರಲ್ಲಿ ತನಗೆ ಬೇಕಾದ ಹೊಸ ಗುಂಪು ಚುಕ್ಕಾಣಿ ಹಿಡಿಯುವಂತೆ ಚೀನಾ ತೆರೆಮರೆಯಲ್ಲಿ ಯೋಜಿಸಿದೆಯೇ?
ಸದ್ಯಕ್ಕೆ ಇವೆಲ್ಲವೂ ಕೇವಲ ಪ್ರಶ್ನೆಗಳಷ್ಟೆ. ಆದರೆ ನೇಪಾಳದ ಈಗಿನ ಘಟನೆಗಳು ಭಾರತಕ್ಕೆ ಸಹಾಯಕ ಎಂದು ತೀರ್ಮಾನಿಸಬಹುದಾದ ಅಂಶಗಳಂತೂ ತಕ್ಷಣಕ್ಕೆ ಸಿಗುತ್ತಿಲ್ಲ.
- ಚೈತನ್ಯ ಹೆಗಡೆ
cchegde@gmail.com