ಪೆರೆಸಿಸ್ ಎಂದರೆ ದೇಹದ ಒಂದು ಭಾಗದಲ್ಲಿ ಸ್ನಾಯುಗಳ ಶಕ್ತಿ ಮತ್ತು ನಿಯಂತ್ರಣ ಸಂಪೂರ್ಣವಾಗಿ ನಷ್ಟವಾಗದೇ ಭಾಗಶಃ ಕಡಿಮೆಯಾಗುವ ಸ್ಥಿತಿ. ಇದನ್ನು ಸಾಮಾನ್ಯವಾಗಿ ಪಾರ್ಶ್ವವಾಯು (ಪ್ಯಾರಾಲಿಸಿಸ್) ಎಂದು ತಪ್ಪು ತಿಳಿಯಲಾಗುತ್ತದೆ.
ಪಾರ್ಶ್ವವಾಯು ದೇಹದಲ್ಲಿ ಸಂಪೂರ್ಣವಾಗಿ ಚಲನೆಯನ್ನು ನಿಲ್ಲಿಸಿದರೆ ಪೆರೆಸಿಸ್ ಕೇವಲ ಭಾಗಶಃ ದುರ್ಬಲತೆ ಅಥವಾ ನಿಯಂತ್ರಣದ ಕೊರತೆಯನ್ನು ಮಾತ್ರ ಉಂಟುಮಾಡುತ್ತದೆ. ಈ ಕಾಯಿಲೆಯು ಕೈ, ಕಾಲು, ಮುಖ, ಉಸಿರಾಟದ ಸ್ನಾಯುಗಳು ಅಥವಾ ಆಹಾರವನ್ನು ನುಂಗಲು ಸಹಾಯ ಮಾಡುವ ಸ್ನಾಯುಗಳ ಮೇಲೆ ಪರಿಣಾಮ ಬೀರಬಹುದು.
ಪೆರೆಸಿಸ್ ಆಗಲು ಕಾರಣ
ಪೆರೆಸಿಸ್ ಯಾರಿಗಾದರೂ ಬರಬಹುದಾದರೂ ಕೆಲವು ಆರೋಗ್ಯ ಸಮಸ್ಯೆಗಳಿರುವವರಲ್ಲಿ ಹೆಚ್ಚು ಕಂಡುಬರುತ್ತದೆ. ವಯಸ್ಸಾದವರಲ್ಲಿ ಸ್ಟ್ರೋಕ್ (ಮೆದುಳಿಗೆ ರಕ್ತಪ್ರವಾಹ ನಿಲ್ಲುವುದು ಅಥವಾ ಅಡ್ಡಿ ಉಂಟಾಗುವುದು-ಪಾರ್ಶ್ವವಾಯು) ಪ್ರಮುಖ ಕಾರಣ. ಸ್ಟ್ರೋಕ್‌ನಿಂದ ಮೆದುಳಿನ ಒಂದು ಭಾಗ ಹಾನಿಗೊಳಗಾದಾಗ ಅದರ ನಿಯಂತ್ರಣದಲ್ಲಿರುವ ಸ್ನಾಯುಗಳು ದುರ್ಬಲವಾಗುತ್ತವೆ.
ಮಲ್ಟಿಪಲ್ ಸ್ಕ್ಲೆರೋಸಿಸ್ ಎಂಬ ಕಾಯಿಲೆ ಇದ್ದಾಗಲೂ ಪೆರೆಸಿಸ್ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಯುವಕರು ಅಥವಾ ಮಧ್ಯವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಮೆದುಳು ಅಥವಾ ನರಗಳಿಗೇ ಗಾಯವಾದರೂ, ಮೆದುಳಿನ ಗಡ್ಡೆಗಳು ಒತ್ತಡ ಹಾಕಿದರೂ ಅಥವಾ ಮೆನಿಂಜೈಟಿಸ್, ಪೊಲಿಯೋ ಮುಂತಾದ ಸೋಂಕುಗಳಿಂದಲೂ ಪೆರೆಸಿಸ್ ಉಂಟಾಗಬಹುದು. ಮಧುಮೇಹ ಅಥವಾ ದೀರ್ಘಕಾಲದ ಸಮಸ್ಯೆಗಳಿಂದ ಸ್ನಾಯುಗಳು ಹಾನಿಗೊಳಗಾದಾಗಲೂ ಅವುಗಳ ಶಕ್ತಿ ಕುಗ್ಗಬಹುದು.
ಪೆರೆಸಿಸ್ ಲಕ್ಷಣಗಳು
ಪೆರೆಸಿಸ್ ದೇಹದ ಯಾವ ಭಾಗವನ್ನು ಪ್ರಭಾವಿಸುತ್ತದೆ ಎಂಬುದರ ಮೇಲೆ ಅದರ ಲಕ್ಷಣಗಳು ಬದಲಾಗುತ್ತವೆ. ಸಾಮಾನ್ಯ ಲಕ್ಷಣವೆಂದರೆ ಸ್ನಾಯುಗಳ ದುರ್ಬಲತೆ. ಕಾಲುಗಳಿಗೆ ಈ ರೋಗ ತಗುಲಿದರೆ ನಡೆಯುವುದು ಕಷ್ಟವಾಗುತ್ತದೆ. ಹೀಗಾಗಿ ಕಾಲುಗಳನ್ನು ಎಳೆದುಕೊಂಡು ನಡೆಯುವುದು, ಜಾರುವುದು ಮುಂತಾದವು ಕಾಣಿಸಬಹುದು. ಕೈಗಳಿಗೆ ತಗುಲಿದರೆ ವಸ್ತುಗಳನ್ನು ಹಿಡಿಯಲು, ಬರೆಯಲು ಮತ್ತು ದಿನನಿತ್ಯದ ಕೆಲಸಗಳನ್ನು ಮಾಡಲು ತೊಂದರೆ ಆಗುತ್ತದೆ.
ಮುಖದಲ್ಲಿ ಪೆರೆಸಿಸ್ ಇದ್ದರೆ ಮುಖದ ಒಂದು ಭಾಗ ಬಿದ್ದಂತೆ ಕಾಣಬಹುದು, ಆಡುವ ಮಾತುಗಳು ಅಸ್ಪಷ್ಟವಾಗಬಹುದು, ಕಣ್ಣು ಮುಚ್ಚಲು ಅಥವಾ ನಗಲು ಕಷ್ಟವಾಗಬಹುದು. ಕೆಲವರಿಗೆ ಅಂಗಗಳಲ್ಲಿ ಉರಿ, ಚುಮುಚುಮು ಅನುಭವ, ಅಥವಾ ಸಮತೋಲನ ಕಳೆದುಕೊಳ್ಳುವುದು ಕಾಣಬಹುದು. ಕೆಲವು ಸಂದರ್ಭಗಳಲ್ಲಿ ತೀವ್ರ ದಣಿವು ಮತ್ತು ದೇಹದ ಮೇಲೆ ನಿಯಂತ್ರಣ ಕಡಿಮೆಯಾಗಿರುವ ಅನುಭವವೂ ಉಂಟಾಗಬಹುದು.
ಪೆರೆಸಿಸ್ ಗೆ ಚಿಕಿತ್ಸೆ
ಪೆರೆಸಿಸ್ಸಿನ ಚಿಕಿತ್ಸೆ ಸಂಪೂರ್ಣವಾಗಿ ಅದರ ಮೂಲ ಕಾರಣದ ಮೇಲೆ ಅವಲಂಬಿತವಾಗಿದೆ. ಸ್ಟ್ರೋಕ್‌ನಿಂದಾಗಿ ಈ ಸಮಸ್ಯೆ ಬಂದಿದ್ದರೆ ತಕ್ಷಣ ಚಿಕಿತ್ಸೆ ನೀಡುವುದು ಬಹಳ ಮುಖ್ಯ. ಕೆಲವರಿಗೆ ರಕ್ತದ ಗಡ್ಡೆ ಕರಗಿಸುವ ಔಷಧಿ ಅಥವಾ ಶಸ್ತ್ರಚಿಕಿತ್ಸೆಯೂ ಅಗತ್ಯವಾಗಬಹುದು. ಮಲ್ಟಿಪಲ್ ಸ್ಕ್ಲೆರೋಸಿಸ್‌ನಂತಹ ಕಾಯಿಲೆಗಳಿಗೆ ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸುವ ಔಷಧಿ ಮತ್ತು ಸ್ಟಿರಾಯ್ಡ್ಸ್ ನೀಡಲಾಗುತ್ತದೆ.
ನರಗಳಿಗೆ ಒತ್ತಡ ಉಂಟಾಗುವ ಗಡ್ಡೆಗಳು ಅಥವಾ ಗಾಯಗಳಿಂದ ಬಂದಿದ್ದರೆ ಶಸ್ತ್ರಚಿಕಿತ್ಸೆ ಮಾಡಬಹುದು. ಯಾವ ಕಾರಣದಿಂದ ಬಂದಿದ್ದರೂ ಫಿಸಿಯೋಥೆರಪಿ ಅತ್ಯಂತ ಮುಖ್ಯ. ಇದರಿಂದ ಸ್ನಾಯು ಶಕ್ತಿ ಪುನಃ ಹೆಚ್ಚಿಸಲು, ಸಮತೋಲನ ಬೆಳೆಸಲು ಮತ್ತು ಚಲನೆ ಸುಲಭವಾಗಲು ಸಹಾಯವಾಗುತ್ತದೆ. ಆಕ್ಯುಪೇಷನಲ್ ಥೆರಪಿ ಮೂಲಕ ದಿನನಿತ್ಯದ ಕೆಲಸಗಳನ್ನು ಸುಲಭವಾಗಿ ಮಾಡಲು ಮಾರ್ಗದರ್ಶನ ನೀಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ನಾಯು ಶಕ್ತಿ ಹೆಚ್ಚಿಸುವ ಔಷಧಿಗಳನ್ನು ನೀಡಲಾಗುತ್ತದೆ. ಅಗತ್ಯವಿದ್ದಲ್ಲಿ ನಡಿಗೆಯನ್ನು ಸುಲಭವಾಗಿಸುವ ಸಾಧನಗಳನ್ನು ಬಳಸಿ ಸ್ವಾವಲಂಬನೆ ಹೆಚ್ಚಿಸಬಹುದು.
ಪೆರೆಸಿಸ್ ತಡೆಯುವುದು ಹೇಗೆ?
ಪೆರೆಸಿಸ್ ಸಮಸ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟುವುದು ಸಾಧ್ಯವಿಲ್ಲ. ಆದರೆ ಕೆಲವು ಅಪಾಯಕಾರಕ ಕಾರಣಗಳನ್ನು ಕಡಿಮೆ ಮಾಡುವ ಮೂಲಕ ಇದನ್ನು ಸಾಕಷ್ಟು ಮಟ್ಟಿಗೆ ತಡೆಗಟ್ಟಬಹುದು. ರಕ್ತದ ಒತ್ತಡ, ಕೊಲೆಸ್ಟ್ರಾಲ್ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟರೆ ಸ್ಟ್ರೋಕ್ ಮತ್ತು ನರಗಳಿಗೆ ಉಂಟಾಗುವ ಹಾನಿಯ ಅಪಾಯ ಕಡಿಮೆಯಾಗುತ್ತದೆ.
ನಿಯಮಿತ ವ್ಯಾಯಾಮ, ಸಮತೋಲನ ಆಹಾರ, ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿದರೆ ನರಮಂಡಲ ದೃಢಗೊಳ್ಳುತ್ತದೆ. ಪೊಲಿಯೋ ಹಾವಳಿಯನ್ನು ತಡೆಯಲು ಲಸಿಕೆ ಅತ್ಯಂತ ಪರಿಣಾಮಕಾರಿ. ಮಲ್ಟಿಪಲ್ ಸ್ಕ್ಲೆರೋಸಿಸ್ ಅಥವಾ ಗಡ್ಡೆಗಳಂತಹ ಕಾಯಿಲೆಗಳನ್ನು ಮೊದಲ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವುದರಿಂದ ಹೆಚ್ಚಿನ ಹಾನಿಯನ್ನು ತಪ್ಪಿಸಬಹುದು. ಈಗಾಗಲೇ ಸ್ವಲ್ಪ ದುರ್ಬಲತೆ ಇರುವವರು ನಿಯಮಿತ ವ್ಯಾಯಾಮ, ಫಿಸಿಯೋಥೆರಪಿ ಮತ್ತು ವೈದ್ಯಕೀಯ ಮೇಲ್ವಿಚಾರಣೆ ಮೂಲಕ ತಮ್ಮ ದೈಹಿಕ ಸ್ಥಿತಿಯನ್ನು ಉತ್ತಮವಾಗಿಟ್ಟುಕೊಳ್ಳಬಹುದು.
ಪೆರೆಸಿಸ್ ರೋಗಿಗಳಿಗೆ ಮಾನಸಿಕ ಬೆಂಬಲ ಅಗತ್ಯ
ಪೆರೆಸಿಸ್ ರೋಗಿಗಳು ನಿರಾಸಕ್ತಿ, ಹತಾಶೆ ಅಥವಾ ಖಿನ್ನತೆಯಿಂದ ಬಳಲಬಹುದು. ಇಂತಹ ಸಂದರ್ಭದಲ್ಲಿ ಮಾನಸಿಕ ಬೆಂಬಲ, ಕುಟುಂಬದವರ ಪ್ರೋತ್ಸಾಹ ಮತ್ತು ಸಮುದಾಯ ಗುಂಪುಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಯೋಗ, ಧ್ಯಾನ ಅಥವಾ ಇತರ ಮನರಂಜನಾ ಚಟುವಟಿಕೆಗಳು ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಜೊತೆಗೆ, ಸರಿಯಾದ ನಿದ್ರೆ, ಆರೋಗ್ಯಕರ ಆಹಾರ ಮತ್ತು ವೈದ್ಯರ ಸಲಹೆಯ ಮೇರೆಗೆ ಪೌಷ್ಟಿಕಾಂಶದ ಪೂರಕಗಳನ್ನು (ಸಪ್ಲಿಮೆಂಟ್ಸ್) ತೆಗೆದುಕೊಳ್ಳುವುದು ಸ್ನಾಯು ಮತ್ತು ನರಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ರೋಗಿಯ ಜೀವನವನ್ನು ಹೆಚ್ಚು ಸುಗಮಗೊಳಿಸಲು ಮನೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಉದಾಹರಣೆಗೆ, ಸುಲಭವಾಗಿ ನಡೆಯಲು ಬೇಕಾದ ರಾಂಪ್ ಅಥವಾ ಮೆಟ್ಟಿಲುಗಳಲ್ಲಿ ಹಿಡಿಕೆಗಳನ್ನು ಅಳವಡಿಸುವುದು.
ಕೊನೆಮಾತು: ಸಂಕ್ಷಿಪ್ತವಾಗಿ ಹೇಳುವುದಾದರೆ ಪೆರೆಸಿಸ್ ಎನ್ನುವುದು ಮೆದುಳು, ಬೆನ್ನುಹುರಿ ಅಥವಾ ನರಗಳಲ್ಲಿನ ಸಮಸ್ಯೆಗಳಿಂದ ಉಂಟಾಗುವ ಸ್ನಾಯುಗಳ ಭಾಗಶಃ ದೌರ್ಬಲ್ಯವಾಗಿದೆ. ಇದು ವಿವಿಧ ವಯೋಮಾನದ ಜನರ ಮೇಲೆ ಪರಿಣಾಮ ಬೀರಬಹುದು ಮತ್ತು ಪಾರ್ಶ್ವವಾಯು, ಮಲ್ಟಿಪಲ್ ಸ್ಕ್ಲೆರೋಸಿಸ್, ಗಾಯ, ಸೋಂಕು ಅಥವಾ ದೀರ್ಘಕಾಲದ ಕಾಯಿಲೆಗಳಂತಹ ಪರಿಸ್ಥಿತಿಗಳಿಂದ ಉಂಟಾಗುತ್ತದೆ.
ಇದರ ಲಕ್ಷಣಗಳು ಸೌಮ್ಯ ದೌರ್ಬಲ್ಯದಿಂದ ಗಮನಾರ್ಹ ದುರ್ಬಲತೆಯವರೆಗೆ ಇರುತ್ತವೆ. ಇದು ಹಾನಿಯ ವ್ಯಾಪ್ತಿಯನ್ನು ಅವಲಂಬಿಸಿರುತ್ತದೆ. ಚಿಕಿತ್ಸೆಯು ಇದರ ಕಾರಣವನ್ನು ಪರಿಹರಿಸುವುದು ಮತ್ತು ಔಷಧಿ, ಚಿಕಿತ್ಸೆ ಮತ್ತು ಜೀವನಶೈಲಿ ಹೊಂದಾಣಿಕೆಗಳ ಮೂಲಕ ಚೇತರಿಕೆಯನ್ನು ಬೆಂಬಲಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಸಕಾಲಿಕ ಆರೈಕೆಯೊಂದಿಗೆ ಪೆರೆಸಿಸ್ ಇರುವ ಅನೇಕ ಜನರು ಅರ್ಥಪೂರ್ಣ ಮತ್ತು ಸ್ವತಂತ್ರ ಜೀವನವನ್ನು ಮುಂದುವರಿಸಬಹುದು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com