ಶಿಸ್ತಾಗಿ ಇರುವುದು ಎಂದರೆ ಅದು ಸುಲಭವಲ್ಲ. ಅದು ಬೋರ್ ಹೊಡೆಸುತ್ತದೆ. ಅದು ದೈಹಿಕ ಮತ್ತು ಮಾನಸಿಕ ಕಿರಿಕಿರಿ ನೀಡುತ್ತದೆ. ಆರಾಮಾಗಿ ಕುಳಿತು ಕೈಯಲ್ಲಿ ಪಾಪಕಾರ್ನ್ ಡಬ್ಬ ಹಿಡಿದು ಕೊಂಡು ಎಸಿ ಥಿಯೇಟರ್ನಲ್ಲಿ ಕುಳಿತು ಸಿನಿಮಾ ವೀಕ್ಷಣೆ ಮಾಡುವುದು ಖುಷಿ ನೀಡುತ್ತದೆ. ಎರಡು ಅಥವಾ ಮೂರು ತಾಸು ಕಳೆದದ್ದು ತಿಳಿಯುವುದೇ ಇಲ್ಲ ಅಲ್ವಾ? ಅದೇ ದೇಹವನ್ನು ತ್ರೆಡ್ ಮಿಲ್ ಓಡಲು ಅಥವಾ ಕ್ರಾಸ್ ಟ್ರೈನರ್ ಮೇಲೆ ದಂಡಿಸಲು ಬಿಡಿ, ಎರಡು ತಾಸು ಬಹಳ ದೊಡ್ಡದು. ಅರ್ಧ ಗಂಟೆ ಕಳೆಯುವಷ್ಟರಲ್ಲಿ ಐದು ಬಾರಿ ಗಡಿಯಾರ ನೋಡಿರುತ್ತೇವೆ. ಪಾಪಕಾರ್ನ್ ತಿನ್ನುತ್ತಾ, ಕೊಕ್ ಕುಡಿಯುವುದು, ಸಿನಿಮಾ ನೋಡುವುದು ಮನಸ್ಸಿಗೆ ಮುದ ನೀಡುತ್ತದೆ. ಆದರೆ ಅದು ಆರೋಗ್ಯಕ್ಕೆ ಹಾನಿಕರ.
ಜಿಮ್ ನಲ್ಲಿ ಕಸರತ್ತು ಮಾಡುವುದು ನೋವು ನೀಡುತ್ತದೆ. ಆದರೆ ಅದು ಆರೋಗ್ಯಕ್ಕೆ ಒಳ್ಳೆಯದು. ಪ್ರತಿ ದಿನ ತಪ್ಪದೆ ಅದದೇ ಕೆಲಸವನ್ನು ಮಾಡುವುದು ಮನಸ್ಸಿಗೆ ಒಂದಷ್ಟು ತ್ರಾಸು ಕೊಡುವುದು ಸಹಜ. ಆದರೆ ನೆನಪಿರಲಿ ನೋ ಪೈನ್, ನೋ ಗೈನ್. ಹತ್ತಾರು ವರ್ಷ ಜಿಮ್ ನಲ್ಲಿ ದೇಹ ದಂಡಿಸಿದವರನ್ನು ನೋಡಿ. ಅವರ ದೇಹಾರೋಗ್ಯ ಚೆನ್ನಾಗಿರುತ್ತದೆ. ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ.
ಹಣಕಾಸು ಆರೋಗ್ಯದ ವಿಷಯದಲ್ಲೂ ಇದೆ ಫಾರ್ಮುಲಾ ಅನ್ವಯವಾಗುತ್ತದೆ. ಕೆಲಸಕ್ಕೆ ಸೇರಿದ ಮೊದಲ ತಿಂಗಳಿಂದ 30 ಅಥವಾ 35 ವರ್ಷ ಉಳಿಕೆ ಮತ್ತು ಹೂಡಿಕೆಯನ್ನು ತಪ್ಪದೆ ಮಾಡಿಕೊಂಡು ಬಂದರೆ ಬಹು ಕೋಟ್ಯಧಿಪತಿಯಾಗುವುದು ಬಹಳ ಕಷ್ಟವೇನಲ್ಲ. ಇದು ಸಾಧ್ಯವೇ? ಸಾಮಾನ್ಯ ಮಧ್ಯಮ ವರ್ಗದ ವ್ಯಕ್ತಿಗಳು ಕೋಟ್ಯಧಿಪತಿಯಾಗಲು ಸಾಧ್ಯವೇ? ಎನ್ನುವ ಪ್ರಶ್ನೆ ಸಹಜವಾಗೇ ಹುಟ್ಟುತ್ತದೆ. ಅದಕ್ಕೆ ನನ್ನ ಉತ್ತರ ಖಂಡಿತ ಸಾಧ್ಯವಿದೆ. ಆದರೆ ನೀವು ಇಲ್ಲಿ ಹೇಳಿದ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ಅಂದರೆ ಯಾವುದೇ ಕಾರಣಕ್ಕೂ ನಿಯಮಗಳನ್ನು ಮುರಿಯಬಾರದು. ಹೀಗಾಗಿ ನಿಯಮಗಳನ್ನು ಮುರಿಯದ ನಿಯಮ ಕೂಡ ಇಲ್ಲಿ ಸ್ಥಾನ ಪಡೆದುಕೊಂಡಿದೆ.
ಬಜೆಟ್ ನಿಯಮ : ಹಣ ಮತ್ತು ವೇಳೆ ಇವೆರಡನ್ನೂ ಬಜೆಟ್ ಮಾಡಬೇಕು. ಬಜೆಟ್ ಎಂದರೆ ಖರ್ಚಿನ ಮೇಲೆ ಕಡಿವಾಣ ಎನ್ನುವ ದೃಷ್ಟಿಯಲ್ಲಿ ನೋಡಬಾರದು. ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎನ್ನುದರ ಅಲೋಕೇಷನ್ ಎಂದು ನೋಡಬೇಕು. ಇದು ಜೀವನ ಶೈಲಿ ಆಗಬೇಕು. ಪ್ರಥಮ ಒಂದೆರೆಡು, ಐದು ವರ್ಷದ ವರೆಗೂ ಹೆಚ್ಚಿನ ಫಲಿತಾಂಶ ಸಿಗುವುದಿಲ್ಲ. ನಮ್ಮ ಜನರಿಗೆ ಎಲ್ಲವೂ ಚಿಟಿಕೆ ಹೊಡೆಯುವುದರಲ್ಲಿ ಆಗಬೇಕು. ನಿಜವಾದ ಬದುಕಿನಲ್ಲಿ ಇದು ಸಾಧ್ಯವಿಲ್ಲ. ನೆನಪಿರಲಿ ಶಿಸ್ತು ಮತ್ತು ಸಂಯಮ ಇವೆರೆಡೂ ಇದ್ದವರು ಕೋಟ್ಯಧಿಪತಿಯಾಗಬಹುದು.ಈ ಎರಡು ಗುಣಗಳು ಸಾಕು , ಮಿಕ್ಕಂತೆ ಅತಿ ಹೆಚ್ಚಿನ ಬುದ್ಧಿವಂತಿಕೆಯ ಅವಶ್ಯಕತೆಯಿಲ್ಲ.
ಕೊಳ್ಳುವಿಕೆ ನಿಯಮ : ನಮಗೇನು ಬೇಕು ಎನ್ನಿಸುತ್ತದೆ ಅದೇ ಚಿಂತೆಯಲ್ಲಿ ಹತ್ತಾರು ದಿನ ಕಳೆಯಬೇಕು. ಮುಕ್ಕಾಲು ಪಾಲು ಪ್ರಥಮವಾಗಿ ನೋಡಿದಾಗ ಬೇಕು ಎನ್ನಿಸಿದ್ದು ವಾರದಲ್ಲಿ ಬೇಕಿಲ್ಲ ಎನ್ನಿಸುತ್ತದೆ. ಹೀಗಾಗಿ ಕೊಳ್ಳುವಿಕೆಯ ನಿಯಮ, ಎಂದಿಗೂ ಕಂಡ ತಕ್ಷಣ, ಇಷ್ಟವಾಯ್ತು ಎಂದ ತಕ್ಷಣ ಕೊಳ್ಳದಿರುವುದು. ಇದನ್ನು ಎಂದಿಗೂ ಮರೆಯಬಾರದು. ಇಂದಿನ ಜಾಹಿರಾತು ಯುಗದಲ್ಲಿ ಪ್ರಲೋಭನೆಗಳು ಸಾವಿರ. ಹೀಗಾಗಿ ತಕ್ಷಣ ಕೊಳ್ಳದೆ ವಾರ ಕಾದು ನೋಡುವ ತಂತ್ರ ಉಪಯೋಗಿಸುವವರು ಇಂದಿನ ಕಾಲಘಟ್ಟದಲ್ಲಿ ಯೋಗಿ ಎಂದು ಹೇಳಬಹುದು! ಹೌದು ಇದು ಕಷ್ಟ , ಅದಕ್ಕೆ ಹೇಳಿದ್ದು ನೋ ಪೈನ್ ನೋ ಗೈನ್. ಬದುಕು ನಶ್ವರ, ಯಾವಾಗ ಯಾರಿಗೆ ಏನಾಗುತ್ತೆ ಹೇಳಲು ಬಾರದು ಹೀಗಾಗಿ ನಾವು ನಮ್ಮ ಆಸೆಗಳನ್ನು ಅದುಮಿಡಬೇಕು ಎನ್ನುವ ಪ್ರಶ್ನೆ ಕೂಡ ಸಹಜ. ಬದುಕು ನಿಮಗೆ ಎರಡು ದೋಣಿಗಳಲ್ಲಿ ಪ್ರಯಾಣ ಮಾಡಲು ಅವಕಾಶ ನೀಡುವುದಿಲ್ಲ. ಬದುಕು ಬಂದಂತೆ ತೆಗೆದುಕೊಳ್ಳುತ್ತೇನೆ ಎಂದು ಯವ್ವನದಲ್ಲಿ ಹೇಳಿದವರು ನಿವೃತ್ತಿ ವಯಸ್ಸಿನಲ್ಲಿ ಕೂಡ ಪಾರ್ಟ್ ಟೈಮ್ ಕೆಲಸ ಸಿಕ್ಕರೆ ಸಾಕು ಎಂದು ಪರದಾಡುವುದು ಸಾಮಾನ್ಯವಾಗಿದೆ. ನಮ್ಮ ಬದುಕು ಹೀಗಿರಬೇಕು ಎಂದು ಕನಸು ಕಾಣುವ, ಅದರ ಬಗ್ಗೆ ನಿರ್ಧಾರ ಮಾಡುವ ಹಕ್ಕು ನಿಮ್ಮದು. ಸುಲಭದ ದಾರಿಯಲ್ಲಿ ಸಾಗಿದಾಗ ಸುಲಭಕ್ಕೆ ಸಿಗುವ ದೃಶ್ಯಗಳು ಮಾತ್ರ ಕಾಣಸಿಗುತ್ತವೆ ಎನ್ನುವುದು ನೆನಪಿರಲಿ.
ಹಣ ದುಪ್ಪಟ್ಟು ನಿಯಮ : ಇದು ಪ್ರಲೋಭನೆಯ ಯುಗ. ಹಣ ಮಾಡಲು ಬಹಳಷ್ಟು ಜನ ಸುಲಭದ ದಾರಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಆಹಾರವಾಗದೆ ಇರುವುದು ಅತಿ ಮುಖ್ಯ. ಹಣ ದುಪಟ್ಟಾಗಲು ರೂಲ್ ನಂಬರ್ 72 ಬಳಸಿ. ಇವತ್ತಿನ ಜಗತ್ತಿನಲ್ಲಿ ಸಿಗುತ್ತಿರುವ ಅತಿ ಹೆಚ್ಚು ಮತ್ತು ಅತಿ ಕಡಿಮೆ ರಿಟರ್ನ್ಸ್ ನೀಡುತ್ತಿರುವ ಹೂಡಿಕೆಗಳ ಬಗ್ಗೆ ಸ್ವಲ್ಪ ಜ್ಞಾನವಿರಲಿ. ಐದತ್ತು ಪ್ರತಿಶತ ಆಚೀಚೆ ಒಪ್ಪಬಹುದು. ಆರು ತಿಂಗಳಲ್ಲಿ, ವರ್ಷ ಅಥವಾ ಎರಡು ವರ್ಷದಲ್ಲಿ ಡಬಲ್ ಮಾಡುತ್ತೇನೆ ಎಂದ ತಕ್ಷಣ ಎಚ್ಚರವಾಗಬೇಕು. ರೂಲ್ ನಂಬರ್ 72 ರ ನಿಯಮ ಸದಾ ನೆನಪಿನಲ್ಲಿರಲಿ
ನಿವೃತ್ತಿ ನಿಯಮ : ನಿವೃತ್ತಿ ಬಯಸಿದಂತೆ ಇರಬೇಕು ಎಂದರೆ ಅದಕ್ಕೆ ನಾವು ಅಡಿಪಾಯ ೨೫ ನೇ ವಯಸ್ಸಿನಿಂದ ಹಾಕಿರಬೇಕು. ಹೀಗೆ ಒಂದು ಫಂಡ್ ಸೃಷ್ಟಿಸಿಕೊಂಡ ಮೇಲೆ ಹಿರಿಯ ನಾಗರೀಕರು ಸಮಾಜದ ಹಿತಕ್ಕೆ, ಸ್ವ ಹಿತಕ್ಕೆ ಇಷ್ಟವಾಗುವ ಕೆಲಸ ಮಾಡುತ್ತಾ ಹೋಗಬೇಕು. ಹೆಚ್ಚಿನ ಹಣಕಾಸು ರಿಸ್ಕ್ ತೆಗೆದುಕೊಳ್ಳಬಾರದು. ಇಲ್ಲಸಲ್ಲದ ಸ್ಕೀಮ್ಗಳಲ್ಲಿ ಹಣ ಹೂಡುವುದು, ಮಕ್ಕಳಿಗೆ ವ್ಯಾಪಾರಕ್ಕೆ ಹಣ ನೀಡುವುದು ಇತ್ಯಾದಿ ಮಾಡಬಾರದು. 30/35 ವರ್ಷ ದುಡಿದ ಹಿರಿಯ ಜೀವಗಳು ಘನತೆಯಿಂದ ಬಾಳುವ ಹಕ್ಕನ್ನು ಹೊಂದಿರುತ್ತಾರೆ. ಹಾಗೆ ಬಾಳಬೇಕು. ಸಾಧ್ಯವಾದಷ್ಟೂ ಹಣಕಾಸು ನಿರ್ವಹಣೆಯಿಂದ ದೂರಾಗಿ ಮಾಸಿಕ ಖರ್ಚಿಗೆ ಬೇಕಾದ ಹಣ ಬ್ಯಾಂಕಿನ ಖಾತೆಗೆ ಆಟೋಮ್ಯಾಟಿಕ್ ಆಗಿ ಬರುವಂತೆ ವ್ಯವಸ್ಥೆ ಮಾಡಿಕೊಂಡಿರಬೇಕು. ಉತ್ತಮ ಗುಣಮಟ್ಟದ ಜೀವನ ಬಿಟ್ಟು ಬೇರಾವುದೂ ಮುಖ್ಯವಾಗಬಾರದು.
ಆಪತ್ಕಾಲದ ನಿಯಮ : ಫೈನಾನ್ಸಿಯಲ್ ಫ್ರೀಡಂ ಗಳಿಸಿಕೊಂಡು ಬಿಟ್ಟರೆ ಈ ಆಪತ್ಕಾಲದ ನಿಧಿ ಅವಶ್ಯಕತೆಯಿರುವುದಿಲ್ಲ. ಬದುಕು ಬಹಳ ಅಸ್ಥಿರ, ಜಗತ್ತು ಬಹಳ ತಲ್ಲಣಗಳನ್ನು ಸೃಷ್ಟಿಸುತ್ತಿದೆ. ಹೀಗಾಗಿ ಎಮೆರ್ಜೆನ್ಸಿ ಫಂಡ್ ಬಹಳ ಅಗತ್ಯ. ನಮ್ಮ ಮಾಸಿಕ ಆದಾಯಕ್ಕೆ ತಕ್ಕಹಾಗೆ, ನಮ್ಮ ಮಾಸಿಕ ಖರ್ಚಿಗೆ ತಕ್ಕಂತೆ ಇಂತಹ ಒಂದು ನಿಧಿಯನ್ನು ಸ್ಥಾಪಿಸಿಕೊಳ್ಳಬೇಕು. ಇದರ ಮಹತ್ವ ಅರಿವಾಗುವುದು ಕಷ್ಟ ಬಂದಾಗ ಮಾತ್ರ. ಕಷ್ಟ ಬರಲಿ ಅಥವಾ ಬಾರದೆ ಇರಲಿ ಇಂತಹ ಒಂದು ನಿಧಿ ಸೃಷ್ಟಿಸಿಕೊಳ್ಳುವುದು ಪ್ರತಿಯೊಬ್ಬರೂ ಮಾಡಲೇ ಬೇಕಾದ ಕೆಲಸ. ಇದರಲ್ಲಿ ಯಾವುದೇ ಡೀವಿಯೇಷನ್ ಗೆ ದಾರಿಯಿಲ್ಲ.
ಡಿಫಾಲ್ಟ್ ನಿಯಮ : ಇವತ್ತಿನ ದಿನದಲ್ಲಿ ಇರುವ ತಂತ್ರಜ್ಞಾನವನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು. ನಾವು ಯಾವುದನ್ನೂ ನೆನಪಿಡುವ ಅವಶ್ಯಕತೆಯಿಲ್ಲ. ಎಲ್ಲವೂ ಆಟೋಮ್ಯಾಟಿಕ್ ಆಗಿ ನಡೆದು ಹೋಗುತ್ತದೆ. ಪ್ರಥಮಬಾರಿಗೆ ನಾವು ಇಂತಹ ವ್ಯವಸ್ಥೆಯನ್ನು ಪ್ರಾರಂಭಿಸ ಬೇಕು. ಮಿಕ್ಕದ್ದು ತಾನಾಗೇ ಆಗುತ್ತದೆ. ಬದಲಾವಣೆ ಬೇಕು ಎನ್ನಿಸಿದಾಗ ಮಾತ್ರ ಇದರ ಕಡೆ ನೋಡಬೇಕು. ಇದು ನಮ್ಮಲ್ಲಿ ಶಿಸ್ತು ಕಾಪಾಡಲು ಸಹಕಾರಿ. ಹೀಗಾಗಿ ಈ ನಿಯಮವನ್ನು ತಪ್ಪದೆ ಪಾಲಿಸಬೇಕು.
ಸರಳ ಜೀವನ ನಿಯಮ : ಇವತ್ತು ನಮ್ಮ ಬದುಕನ್ನು ನಾವೇ ಅವಲೋಕಿಸಿಕೊಂಡು ನೋಡೋಣ. ಅಲ್ಲಿ ಸಿಗುವ, ನಾವು ದಿನ ನಿತ್ಯ ಬಳಸುವ ವಸ್ತುಗಳೆಷ್ಟು? ವಾರಕ್ಕೊಮ್ಮೆ ಬಳಸುವ ವಸ್ತುಗಳೆಷ್ಟು? ತಿಂಗಳಿಗೊಮ್ಮೆ ಬಳಸುವ ವಸ್ತುಗಳೆಷ್ಟು? ವರ್ಷವಾದರೂ ಒಮ್ಮೆಯೂ ಮುಟ್ಟದ ವಸ್ತುಗಳೇನಿವೆ ಪಟ್ಟಿ ಮಾಡಿ ನೋಡಿ. ಈ ಪ್ರಯೋಗ ನೂರಲ್ಲಿ ತೊಂಬತ್ತು ಜನರಿಗೆ ಶಾಕ್ ನೀಡುವುದು ಗ್ಯಾರಂಟಿ. ನಮ್ಮಲ್ಲಿ ನಮಗೆ ನಿತ್ಯ ಜೀವನಕ್ಕೆ ಬೇಡವಾದ ವಸ್ತುಗಳ ಪಟ್ಟಿಯೇ ದೊಡ್ಡದಿರುತ್ತದೆ. ಬ್ಯಾಂಕಿನಲ್ಲಿ ಕೋಟಿ ರೂಪಾಯಿ ಇಟ್ಟುಕೊಂಡು ಖಾದಿ ಜುಬ್ಬಾ ಧರಿಸುವುದು ಸಾಲ ಮಾಡಿ ಕೊಂಡು ಅರ್ಮಾನಿ ಸೂಟ್ ಹಾಕುವುದಕ್ಕಿಂತ ಸಾವಿರಪಾಲು ವಾಸಿ ಎನ್ನುವ ನಿಯಮ ಎಂದಿಗೂ ಮರೆಯುವುದು ಬೇಡ.
ಮೊದಲಿನ ಸಾಲುಗಳಲ್ಲಿ ಶಿಸ್ತು ಮತ್ತು ಸಂಯಮ ಇದ್ದರೆ ಸಾಕು ಹೆಚ್ಚಿನ ಬುದ್ದಿಯ ಅವಶ್ಯಕೆತೆಯಿಲ್ಲ ಎಂದು ಬರೆದಿದ್ದೇನೆ. ಇದರ ಜೊತೆಗೆ ಅರ್ಲಿ ಸ್ಟಾರ್ಟ್ ಅಂದರೆ ಜೀವನದ ಆರಂಭದ ದಿನಗಳಲ್ಲಿ ಉಳಿಸಲು ಶುರು ಮಾಡಿದರೆ ಮ್ಯಾಜಿಕ್ ಸೃಷ್ಟಿಸುತ್ತದೆ, ಕೋಟ್ಯಧಿಪತಿಯಾಗುವುದಕ್ಕೆ ಹೆಣಗಬೇಕಾಗಿಲ್ಲ, ತಿಣುಕಬೇಕಾಗಿಲ್ಲ, ಮೇಲಿನ ನಿಯಮಗಳನ್ನು ಪಾಲಿಸುತ್ತಾ ಶಿಸ್ತು ಮತ್ತು ಸಂಯಮ ಎನ್ನುವ ಎರಡು ಆಯುಧಗಳನ್ನು ಜೊತೆಗಿಟ್ಟು ಕೊಂಡರೆ ಅಷ್ಟು ಸಾಕು. ಮೇಲಿನ ಎಲ್ಲಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವುದು ಅಂದರೆ ಈ ನಿಯಮಗಳನ್ನು ಮುರಿಯದೆ ಇರುವುದು ಕೂಡ ಒಂದು ನಿಯಮ ಎನ್ನುವುದು ಬುದ್ದಿವಂತ ಓದುಗರಿಗೆ ಅರ್ಥವಾಗಿರುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com