ಎಐ ಸೃಷ್ಟಿತ ಚಿತ್ರ 
ಅಂಕಣಗಳು

ಮೆಕ್ಕ ರಕ್ಷಣಾ ಒಪ್ಪಂದ; ಒಂದು ಅವಲೋಕನ! (ಹಣಕ್ಲಾಸು)

ಮೂರು ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೆ ಅದನ್ನು ಮೂರೂ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸುವ ಪರಸ್ಪರ ರಕ್ಷಣೆಯ ಬದ್ಧತೆ. ಇದೇ ಕಾರಣಕ್ಕೆ ಇದನ್ನು ಕೆಲವರು ಅನೌಪಚಾರಿಕವಾಗಿ “ಇಸ್ಲಾಮಿಕ್ ನ್ಯಾಟೋ” ಎಂದು ಕರೆಯುತ್ತಿದ್ದಾರೆ.

ಆಗಸ್ಟ್ ೭, ೨೦೨೬ ರಂದು ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನಗಳು ಮಕ್ಕಾದಲ್ಲಿ “ಮಕ್ಕೆ ಜಾಯಿಂಟ್ ಡಿಫೆನ್ಸ್ ಅಗ್ರಿಮೆಂಟ್”ಗೆ ಸಹಿ ಹಾಕಿರುವುದು ಪಶ್ಚಿಮ ಏಷ್ಯಾ ಹಾಗೂ ದಕ್ಷಿಣ ಏಷ್ಯಾದ ಭದ್ರತಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಒಪ್ಪಂದದ ಪ್ರಮುಖ ಅಂಶವೇನು ಗೊತ್ತಾ?

ಮೂರು ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೆ ಅದನ್ನು ಮೂರೂ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸುವ ಪರಸ್ಪರ ರಕ್ಷಣೆಯ ಬದ್ಧತೆ. ಇದೇ ಕಾರಣಕ್ಕೆ ಇದನ್ನು ಕೆಲವರು ಅನೌಪಚಾರಿಕವಾಗಿ “ಇಸ್ಲಾಮಿಕ್ ನ್ಯಾಟೋ” ಎಂದು ಕರೆಯುತ್ತಿದ್ದಾರೆ.

ಈ ಒಪ್ಪಂದದ ನಿಜವಾದ ಮಹತ್ವವನ್ನು ಅರ್ಥಮಾಡಿಕೊಳ್ಳಲು “ಯಾರು ಯಾರ ವಿರುದ್ಧ?” ಇದನ್ನು ಮಾಡಿಕೊಂಡಿದ್ದಾರೆ ಎನ್ನುವುದಕ್ಕಿಂತ ಮೂರು ದೇಶಗಳು ಏಕೆ ಈಗ ಒಂದಾಗಿವೆ, ಅಮೆರಿಕದ ಪಾತ್ರ ಏನು, ಇರಾನ್ ಮತ್ತು ಇಸ್ರೇಲ್ ಮೇಲೆ ಪರಿಣಾಮವೇನು, ಭಾರತಕ್ಕೆ ಇದರ ಅರ್ಥವೇನು ಮತ್ತು ಪಾಕಿಸ್ತಾನಕ್ಕೆ ಇದರ ಲಾಭ-ನಷ್ಟಗಳೇನು ಎಂಬ ಹಲವು ಆಯಾಮಗಳಲ್ಲಿ ನೋಡಬೇಕು.ಅಲ್ಲದೆ ಇವತ್ತಿಗೆ ಎಲ್ಲವೂ ನಿಂತಿರುವುದು ಹಣದ ಮೇಲೆ, ಅಂದರೆ ಲಾಭ, ನಷ್ಟದ ಮೇಲೆ! ಹೀಗಾಗಿ ಈ ಒಪ್ಪಂದ ಎಲ್ಲಿಯವರೆಗೆ ನಿಲ್ಲುತ್ತದೆ ಎನ್ನುವುದನ್ನು ಕೂಡ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

ಎಲ್ಲಕ್ಕೂ ಮೊದಲಿಗೆ ಈ ಮೂರು ದೇಶಗಳು ಏಕೆ ಒಂದಾದವು?

ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ಮೂರು ವಿಭಿನ್ನ ರೀತಿಯ ಶಕ್ತಿಗಳನ್ನು ಹೊಂದಿವೆ.ಸೌದಿ ಅರೇಬಿಯಾ ಬಳಿ ಅಪಾರ ತೈಲ ಸಂಪತ್ತು, ಹಣಕಾಸು ಸಾಮರ್ಥ್ಯ ಮತ್ತು ಪಶ್ಚಿಮ ಏಷ್ಯಾದ ಅತ್ಯಂತ ಮಹತ್ವದ ಭೌಗೋಳಿಕ ಸ್ಥಾನವಿದೆ. ಟರ್ಕಿ ನ್ಯಾಟೋ ಸದಸ್ಯ ರಾಷ್ಟ್ರವಾಗಿದ್ದು, ತನ್ನದೇ ಆದ ಬಲಿಷ್ಠ ರಕ್ಷಣಾ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಿದೆ.

ಡ್ರೋನ್‌ಗಳು, ಕ್ಷಿಪಣಿ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಯುದ್ಧ ತಂತ್ರಜ್ಞಾನ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಟರ್ಕಿ ವೇಗವಾಗಿ ಬೆಳೆಯುತ್ತಿದೆ. ಪಾಕಿಸ್ತಾನದ ಬಳಿ ದೊಡ್ಡ ಸೇನೆ, ಕ್ಷಿಪಣಿ ಸಾಮರ್ಥ್ಯ ಮತ್ತು ಎಲ್ಲಕ್ಕೂ ಮಿಗಿಲಾಗಿ ಅದರ ಬಳಿ ಪರಮಾಣು ಶಸ್ತ್ರಾಸ್ತ್ರಗಳಿರುವುದು ಮತ್ತು ನ್ಯೂಕ್ಲಿಯರ್ ಶಕ್ತಿ ಹೊಂದಿರುವ ಏಕೈಕ ಇಸ್ಲಾಮಿಕ್ ರಾಷ್ಟ್ರ ಎನ್ನುವ ಹೆಗ್ಗಳಿಕೆ ಅದರ ಬೆನ್ನಿಗಿದೆ.

ಅಂದರೆ, ಸರಳವಾಗಿ ಹೇಳುವುದಾದರೆ ಸೌದಿ ಹಣ ಮತ್ತು ಭೌಗೋಳಿಕ ಪ್ರಭಾವ, ಟರ್ಕಿ ರಕ್ಷಣಾ ತಂತ್ರಜ್ಞಾನ ಮತ್ತು ಕೈಗಾರಿಕೆ, ಪಾಕಿಸ್ತಾನದ ಅಣು ಶಕ್ತಿ ಮೂರು ಒಂದೇ ವೇದಿಕೆಯಲ್ಲಿ ಬಂದರೆ ಜಗತ್ತಿನ ಇತರ ಶಕ್ತಿಗಳು ಅಟ್ಯಾಕ್ ಮಾಡುವ ಮುನ್ನ ಚಿಂತಿಸುತ್ತವೆ. ಹೀಗಾಗಿ ಈ ಮೂರು ದೇಶಗಳು ಒಂದಾಗಿವೆ.

ಒಪ್ಪಂದದಲ್ಲಿರುವ “ಒಬ್ಬರ ಮೇಲಿನ ದಾಳಿ ಎಲ್ಲರ ಮೇಲಿನ ದಾಳಿ” ಎಂಬ ತತ್ವನ್ಯಾಟೋ ಆರ್ಟಿಕಲ್ ಐದನ್ನು ನೆನಪಿಸುತ್ತದೆ. ಟರ್ಕಿಯ ರಕ್ಷಣಾ ಸಚಿವರೂ ಕೂಡ ಇದೆ ಮಾತನ್ನು ಹೇಳಿದ್ದಾರೆ. ನ್ಯಾಟೋ ಒಪ್ಪಂದದ ಒಂದು ಆರ್ಟಿಕಲ್ ಕಾಪಿ ಮಾಡುವುದರಿಂದ ಈ ಒಪ್ಪಂದ ನ್ಯಾಟೋ ಒಪ್ಪಂದಕ್ಕೆ ಸಮ ಎನ್ನುವಂತಿಲ್ಲ.

ಸೌದಿಗೇನು ಲಾಭ ?

ದಶಕಗಳಿಂದ ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ರಾಷ್ಟ್ರಗಳ ಭದ್ರತಾ ವ್ಯವಸ್ಥೆಯಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗಲ್ಫ್ ರಾಷ್ಟ್ರಗಳು ತಮ್ಮ ಭದ್ರತೆಯನ್ನು ಕೇವಲ ಅಮೇರಿಕಾ ನಂಬಿ ಕೂರಲು ಸಿದ್ದವಿಲ್ಲ. ಇರಾನ್ ಸೌದಿ ಅರೇಬಿಯಾ ತೈಲ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದೆ. ಇರಾನ್ ಗೆ ಅಮೇರಿಕಾ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ಗೊತ್ತಿದೆ. ಅದಕ್ಕೆ ತನ್ನ ರಣನೀತಿಯನ್ನು ಎನರ್ಜಿ ಕ್ರೈಸಿಸ್ ಸೃಷ್ಟಿಸುವುದರ ಮೂಲಕ ಜಗತ್ತಿನ ಆರ್ಥಿಕತೆಯನ್ನು ಮಕಾಡೆ ಮಲಗಿಸಲು ಬಳಸುತ್ತಿದೆ. ಈ ಕಾರಣಕ್ಕಾಗಿ ಅದು ಸೌದಿ ಮೇಲೆ ದಾಳಿ ಮಾಡುತ್ತಿದೆ. ಯಾವಾಗ ಜಗತ್ತಿಗೆ ಮಧ್ಯ ಪ್ರಾಚ್ಯದಿಂದ ತೈಲ ಸರಬರಾಜು ಆಗುವುದಿಲ್ಲ ಆಗ ವಿಶ್ವ ವ್ಯವಸ್ಥೆ ಕುಸಿಯುತ್ತದೆ,

ನೆನಪಿರಲಿ ಇಂದಿಗೂ ಜಗತ್ತು ನಿಂತಿರುವುದು ತೈಲದ ಮೇಲೆ! ಆದರೆ ಇದರರ್ಥ ಸೌದಿ ಅರೇಬಿಯಾ ಅಮೆರಿಕವನ್ನು ಬಿಟ್ಟುಬಿಡುತ್ತಿದೆ ಎಂದಲ್ಲ. ವಾಸ್ತವದಲ್ಲಿ ರಿಯಾದ್ ಅಮೆರಿಕದೊಂದಿಗೆ ತನ್ನ ಭದ್ರತಾ ಸಂಬಂಧವನ್ನು ಮುಂದುವರಿಸುತ್ತಲೇ ಟರ್ಕಿ ಮತ್ತು ಪಾಕಿಸ್ತಾನದೊಂದಿಗೆ ಪರ್ಯಾಯ ಭದ್ರತಾ ಸಾಮರ್ಥ್ಯವನ್ನು ನಿರ್ಮಿಸಿಕೊಳ್ಳಲು ಮುಂದಾಗಿದೆ. ಸರಳವಾಗಿ ಹೇಳಬೇಕಂದರೆ ಸೌದಿ ಈ ಒಪ್ಪಂದವನ್ನು ಇನ್ಸೂರೆನ್ಸ್ ರೂಪದಲ್ಲಿ ನೋಡುತ್ತಿದೆ. ಆಕಸ್ಮಾತ್ ಏನಾದರೂ ಹೆಚ್ಚು ಕಡಿಮೆಯಾದರೆ ಇರಲಿ ಎನ್ನುವಂತೆ ಇದನ್ನು ಟ್ಯಾಪ್ ಅಪ್ ಇನ್ಶೂರೆನ್ಸ್ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ. ಮುಖ್ಯ ಇನ್ಸೂರೆನ್ಸ್ ಪಾಲಿಸಿ ಅಮೇರಿಕಾ ಜೊತೆಗೆ ಇದ್ದೆ ಇರುತ್ತದೆ. ಹೀಗಾಗಿ ಹೆಚ್ಚುಕಡಿಮೆಯಾದರೆ ಸೌದಿಗೆ ಇನ್ನೊಂದು ರಕ್ಷಣೆ ಇದ್ದಹಾಗೆ , ಏನೂ ಆಗಲಿಲ್ಲ ಎಂದರೆ ಅಲ್ಪಸ್ವಲ್ಪ ಹಣ ಕಳೆದುಕೊಳ್ಳುತ್ತದೆ ಅಷ್ಟೇ. ಇದು ಸೌದಿ ಪಾಲಿಗೆ ಹೆಚ್ಚು ಲಾಭ. ಸೌದಿ ಅರೇಬಿಯಾದ ದೃಷ್ಟಿಯಿಂದ ಇದು ಅತ್ಯಂತ ಮುಖ್ಯವಾಗಿ ಭದ್ರತಾ ವಿಮೆ.

ಟರ್ಕಿಗೇನು ಲಾಭ ?

ಟರ್ಕಿಗೆ ಇದು ಮಧ್ಯಪ್ರಾಚ್ಯದಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ವಿಸ್ತರಿಸುವ ಅವಕಾಶ.ಟರ್ಕಿ ಈಗಾಗಲೇ ನ್ಯಾಟೋ ಸದಸ್ಯ ದೇಶವಾಗಿದ್ದೂ ಕೂಡ , ತನ್ನದೇ ಆದ ಸ್ವತಂತ್ರ ರಕ್ಷಣಾ ಕೈಗಾರಿಕಾ ಶಕ್ತಿಯನ್ನು ನಿರ್ಮಿಸಿಕೊಂಡಿದೆ. ಸೌದಿ ಹಣಕಾಸು ಸಾಮರ್ಥ್ಯ ಮತ್ತು ಪಾಕಿಸ್ತಾನದ ಸೈನಿಕ ಅನುಭವದೊಂದಿಗೆ ಟರ್ಕಿಯ ರಕ್ಷಣಾ ಕೈಗಾರಿಕೆ ಸೇರಿಕೊಂಡರೆ ಡ್ರೋನ್‌ಗಳು, ಎಲೆಕ್ಟ್ರಾನಿಕ್ ಯುದ್ಧ, ಕೃತಕ ಬುದ್ಧಿಮತ್ತೆ, ಕ್ಷಿಪಣಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಹೊಸ ಸಹಕಾರ ಸಾಧ್ಯತೆಯಿದೆ.

ಒಪ್ಪಂದದಲ್ಲಿ ಭೂಮಿ, ಸಮುದ್ರ, ವಾಯು ಮತ್ತು ಸೈಬರ್ ಕ್ಷೇತ್ರಗಳಲ್ಲಿ ಜಂಟಿ ಸೇನಾ ಅಭ್ಯಾಸಗಳು ಹಾಗೂ ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿ ಮತ್ತು ಉತ್ಪಾದನೆಯ ಸಹಕಾರಕ್ಕೆ ಒತ್ತು ನೀಡಲಾಗಿದೆ. ಟರ್ಕಿ ಯ ಹಣ ಲಿರಾ ಕಳೆದ ಕೆಲವು ವರ್ಷಗಳಲ್ಲಿ ಸರಿಸುಮಾರು ೭೦ ಪ್ರತಿಶತ ಮೌಲ್ಯವನ್ನು ಕಳೆದುಕೊಂಡಿದೆ . ಕಳೆದ ತಿಂಗಳು ತನ್ನ ಹಣದ ಮೌಲ್ಯ ಉಳಿಸಿಕೊಳ್ಳಲು ಐವತ್ತು ಟನ್ನಿಗೂ ಮಿಗಿಲಾದ ಚಿನ್ನವನ್ನು ಮಾರಿದೆ. ಹಣವಿಲ್ಲದೆ ಕಂಗಾಲಾಗಿದೆ. ಸೌದಿ ನೀಡುವ ಹಣಕಾಸು ನೆರವು ಅದಕ್ಕೆ ಬೇಕು. ಅಲ್ಲದೆ ಈ ಒಪ್ಪಂದದಿಂದ ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ. ಹೀಗಾಗಿ ಅದು ಕೂಡ ಒಪ್ಪಂದಕ್ಕೆ ಸಹಿ ಹಾಕಿದೆ.

ಪಾಕಿಸ್ತಾನಕ್ಕೆ ಇದರಿಂದ ಏನು ಲಾಭ ?

ಇದು ಪಾಕಿಸ್ತಾನಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ಈ ಒಪ್ಪಂದದಿಂದ ಅತ್ಯಂತ ತಕ್ಷಣದ ರಾಜಕೀಯ ಲಾಭ ಸಿಗುವುದು ಪಾಕಿಸ್ತಾನಕ್ಕೆ ಮಾತ್ರ. ಮಿಕ್ಕೆರೆಡು ದೇಶಗಳಿಗಿಂತ ಹೆಚ್ಚು ಲಾಭ ಪಾಕಿಸ್ತಾನಕ್ಕೆ ಸಿಗುತ್ತದೆ. ಪಾಕಿಸ್ತಾನ ಈಗಾಗಲೇ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ಆದರೆ ಸೌದಿ ಅರೇಬಿಯಾ ಮತ್ತು ಟರ್ಕಿಯಂತಹ ಪ್ರಭಾವಿ ರಾಷ್ಟ್ರಗಳೊಂದಿಗೆ ಒಂದೇ ಭದ್ರತಾ ವೇದಿಕೆಯಲ್ಲಿ ನಿಲ್ಲುವುದು ಇಸ್ಲಾಮಿಕ್ ಜಗತ್ತಿನಲ್ಲಿ ಅದರ ರಾಜತಾಂತ್ರಿಕ ಸ್ಥಾನವನ್ನು ಹೆಚ್ಚಿಸುತ್ತದೆ.

ವಿಶೇಷವಾಗಿ ಪಾಕಿಸ್ತಾನದ ಸೇನೆ ಮತ್ತು ಅದರ ಪರಮಾಣು ಸಾಮರ್ಥ್ಯಕ್ಕೆ ಸೌದಿ ಅರೇಬಿಯಾದ ಆರ್ಥಿಕ ಶಕ್ತಿ ಹಾಗೂ ಟರ್ಕಿಯ ರಕ್ಷಣಾ ತಂತ್ರಜ್ಞಾನ ಸೇರಿಕೊಂಡರೆ, ಪಾಕಿಸ್ತಾನದ ಪ್ರಾದೇಶಿಕ ಪ್ರಭಾವ ಹೆಚ್ಚುತ್ತದೆ. ಭಾರತದ ವಿರುದ್ಧ ಬುಸುಗುಡಲು ಅದಕ್ಕೆ ಇನ್ನಷ್ಟು ಬಲ ಬರುತ್ತದೆ. ಈ ಮೂರು ದೇಶಗಲ್ಲಿ ಯಾವುದಾದರೂ ಒಂದು ದೇಶದ ಮೇಲಿನ ದಾಳಿಯನ್ನು ಮೂರು ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಭಾರತ ಸುಲಭವಾಗಿ ಪಾಕಿಸ್ತಾನದ ವಿರುದ್ಧ ದಾಳಿ ಮಾಡಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ಸೌದಿ ನೀಡುವ ಧನ ಸಹಾಯ ಕಂಗಾಲಾಗಿರುವ ಪಾಕಿಸ್ತಾನಕ್ಕೆ ವರದಾನ.

ಇರಾನ್‌ಗೆ ಇದರ ಅರ್ಥವೇನು?

ಮಕ್ಕೆ ಒಪ್ಪಂದಕ್ಕೆ ಹಿನ್ನೆಲೆಯಾಗಿ ಪಶ್ಚಿಮ ಏಷ್ಯಾದ ಹೆಚ್ಚುತ್ತಿರುವ ಉದ್ವಿಗ್ನತೆಯನ್ನೂ ನಿರ್ಲಕ್ಷಿಸಲಾಗುವುದಿಲ್ಲ. ಇರಾನ್‌ನ ಕ್ಷಿಪಣಿ ಸಾಮರ್ಥ್ಯ, ಪ್ರಾದೇಶಿಕ ಸಂಘರ್ಷಗಳು ಮತ್ತು ಗಲ್ಫ್ ರಾಷ್ಟ್ರಗಳ ಭದ್ರತಾ ಆತಂಕಗಳು ಈ ಹೊಸ ವ್ಯವಸ್ಥೆಗೆ ವೇಗ ನೀಡಿವೆ ಎಂದು ಹಲವು ವಿಶ್ಲೇಷಣೆಗಳು ಸೂಚಿಸುತ್ತವೆ. ಆದರೆ ಇಲ್ಲಿ ಒಂದು ಸೂಕ್ಷ್ಮ ಅಂಶವಿದೆ. ಒಪ್ಪಂದವು ಅಧಿಕೃತವಾಗಿ ಯಾವುದೇ ನಿರ್ದಿಷ್ಟ ದೇಶವನ್ನು ಶತ್ರು ಎಂದು ಹೆಸರಿಸಿಲ್ಲ. ಆದ್ದರಿಂದ ಇದನ್ನು ನೇರವಾಗಿ “ಇರಾನ್ ವಿರೋಧಿ ಮೈತ್ರಿ” ಎನ್ನಲಾಗುವುದಿಲ್ಲ.

ಇರಾನ್ ಕೂಡ ಈ ಬೆಳವಣಿಗೆಯನ್ನು ಕೇವಲ ಸೈನಿಕ ಬೆದರಿಕೆಯಾಗಿ ನೋಡುವ ಬದಲು ಮುಸ್ಲಿಂ ರಾಷ್ಟ್ರಗಳ ನಡುವೆ ಏಕತೆಯ ಅಗತ್ಯವನ್ನು ಒತ್ತಿಹೇಳಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೌದಿ ಮತ್ತು ಇರಾನ್ ಸಂಬಂಧಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ಸದ್ಯದ ಮಟ್ಟಿಗೆ ಇರಾನ್ ಸೌದಿ ಮೇಲೆ ದಾಳಿ ನಿಲ್ಲಸಿಲ್ಲ. ನಿಜಕ್ಕೂ ಈ ಒಪ್ಪಂದ ಕೆಲಸ ಮಾಡುತ್ತದೆಯೇ ಎನ್ನುವುದನ್ನು ಇರಾನ್ ಜಗತ್ತಿಗೆ ಸಾರುತ್ತದೆ.

ಇಸ್ರೇಲ್‌ನ ಮೇಲೆ ಇದರ ಪರಿಣಾಮವೇನು?

ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್‌ನೊಂದಿಗೆ ಸಂಬಂಧ ಸಾಮಾನ್ಯಗೊಳಿಸಿಕೊಂಡಿರುವ ರಾಷ್ಟ್ರಗಳು ಒಂದು ಕಡೆ ಇದ್ದರೆ, ಮತ್ತೊಂದೆಡೆ ಹೊಸ ಭದ್ರತಾ ವ್ಯವಸ್ಥೆ ರೂಪುಗೊಳ್ಳುತ್ತಿರುವುದು ಪ್ರಾದೇಶಿಕ ಶಕ್ತಿಯ ಸಮೀಕರಣವನ್ನು ಬದಲಾಯಿಸಬಹುದು. ಆದರೆ ಸೌದಿ ಅರೇಬಿಯಾ ನೇರವಾಗಿ ಇಸ್ರೇಲ್ ವಿರೋಧಿ ಯುದ್ಧ ಮೈತ್ರಿಗೆ ಸೇರುತ್ತಿದೆ ಎಂದು ಹೇಳಲು ಇನ್ನೂ ಸಾಕಷ್ಟು ಆಧಾರವಿಲ್ಲ.ಮಕ್ಕೆ ಒಪ್ಪಂದದ ಅಧಿಕೃತ ಭಾಷೆ ರಕ್ಷಣಾತ್ಮಕವಾಗಿದೆ. ಹೀಗಾಗಿ ಮುಂದಿನ ಬೆಳವಣಿಗೆಗಳು ಈ ಮೈತ್ರಿ ನಿಜವಾಗಿ ಯಾರ ವಿರುದ್ಧ ಎನ್ನುವುದನ್ನು ನಿಚ್ಚಳವಾಗಿಸುತ್ತದೆ.

ಭಾರತಕ್ಕೆ ಇದರಿಂದ ನಷ್ಟವಾಗುತ್ತದೆಯೇ?

ಈ ಒಪ್ಪಂದವನ್ನು ಭಾರತ ಅತ್ಯಂತ ಎಚ್ಚರಿಕೆಯಿಂದ ಗಮನಿಸಬೇಕಾದದ್ದು ಪಾಕಿಸ್ತಾನದ ಭಾಗವಹಿಸುವಿಕೆಯಿಂದ ಮಾತ್ರ ಏಕೆಂದರೆ ಸೌದಿ ಜೊತೆಗೆ ಭಾರತದ ರಾಜ ತಾಂತ್ರಿಕ ಸಂಬಂಧ ಚನ್ನಾಗಿದೆ. ಗಮನಿಸಿ ಯಾವಾಗ ವ್ಯಾಪಾರದಲ್ಲಿ ಡಿಫೆನ್ಡೆನ್ಸಿ ಇರುತ್ತದೆ , ವಿನ್ ವಿನ್ ಸನ್ನಿವೇಶ ಇರುತ್ತದೆ ಆಗೆಲ್ಲಾ ಸಂಬಂಧ ಚನ್ನಾಗೇ ಇರುತ್ತದೆ. ಸೌದಿಗೆ ಭಾರತ ಬೇಕು. ಭಾರತಕ್ಕೂ ಸೌದಿ ಬೇಕು. ಇಲ್ಲಿ ಇಬ್ಬರಿಗೂ ಲಾಭವಿದೆ. ಹೀಗಾಗಿ ಇವೆರೆಡೂ ದೇಶಗಳ ಬಾಂಧವ್ಯ ಚನ್ನಾಗಿದೆ. ಟರ್ಕಿ ಜೊತೆ ಭಾರತದ ಸಂಬಂಧ ಚನ್ನಾಗಿಲ್ಲ. ಆದರೆ ಟರ್ಕಿಯನ್ನು ಹಣಿಯಲು ಬೇಕಾದ ಎಲ್ಲವನ್ನೂ ಭಾರತ ಸಿದ್ಧಪಡಿಸಿಕೊಂಡಿದೆ.

ಟರ್ಕಿ ಭಾರತಕ್ಕೆ ಯಾವ ದೃಷ್ಟಿಯಲ್ಲೂ ಸರಿಸಾಟಿ ಅಲ್ಲವೇ ಅಲ್ಲ. ಪಾಕಿಸ್ತಾನ ಅತ್ತ ಅಮೇರಿಕಾ ಜೊತೆಗೂ ಇತ್ತ ಚೀನಾ ಜೊತೆಗೂ ಗುಲಾಮಗಿರಿ ಮಾಡಿಕೊಂಡು ಇದೀಗ ಈ ಹೊಸ ಒಪ್ಪಂದದಲ್ಲೂ ಭಾಗಿಯಾಗಿರುವುದು ಅದಕ್ಕೆ ಒಂದಷ್ಟು ಅಡ್ವಾಂಟೇಜ್ ನೀಡುತ್ತದೆ. ಹೀಗಾಗಿ ಪಾಕಿಸ್ತಾನದ ನಡೆಯನ್ನು ಭಾರತ ಹಿಂದಿಗಿಂತ ಹೆಚ್ಚು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ದೀರ್ಘಕಾಲದ ಭದ್ರತಾ ಸಂಘರ್ಷವಿದೆ. ಹೀಗಾಗಿ ಪಾಕಿಸ್ತಾನವು ಸೌದಿ ಅರೇಬಿಯಾ ಮತ್ತು ಟರ್ಕಿಯಂತಹ ರಾಷ್ಟ್ರಗಳೊಂದಿಗೆ ಒಟ್ಟಾಗಿ ಭದ್ರತಾ ಒಪ್ಪಂದ ಮಾಡಿಕೊಂಡಿರುವುದು ದೆಹಲಿಗೆ ಸ್ವಾಭಾವಿಕವಾಗಿ ಚಿಂತೆಯ ವಿಷಯ.ಭಾರತಕ್ಕೆ ತಕ್ಷಣದ ಅಪಾಯ ಸೌದಿ,ಪಾಕಿಸ್ತಾನ,ಟರ್ಕಿ ಸೇನೆಗಳು ಭಾರತ ವಿರುದ್ಧ ಒಟ್ಟಾಗಿ ಯುದ್ಧ ಮಾಡುತ್ತದೆ ಎನ್ನುವುದು ಅಲ್ಲವೇ ಅಲ್ಲ. ನಿಜವಾದ ಸವಾಲು ದೀರ್ಘಾವಧಿಯದು. ಈ ಮೈತ್ರಿಗೆ ಈಜಿಪ್ಟ್ ಸೇರಿದಂತೆ ಇನ್ನಷ್ಟು ದೇಶಗಳು ಸೇರುವ ಸಾಧ್ಯತೆ ಬಗ್ಗೆ ಟರ್ಕಿ ಈಗಾಗಲೇ ಸೂಚನೆ ನೀಡಿದೆ. ಇದು ದೊಡ್ಡ ಪ್ರಾದೇಶಿಕ ಭದ್ರತಾ ಜಾಲವಾಗಿ ಬೆಳೆದರೆ ಭಾರತದ ಪಶ್ಚಿಮ ಭಾಗದ ಭದ್ರತಾ ಲೆಕ್ಕಾಚಾರ ಹೆಚ್ಚು ಸಂಕೀರ್ಣವಾಗಬಹುದು.

ಈ ಮೈತ್ರಿಯ ದುರ್ಬಲತೆಗಳೇನು?

ಮೂರು ದೇಶಗಳು ಒಂದಾಗಿವೆ ಎಂದರೆ ಅವುಗಳ ಹಿತಾಸಕ್ತಿಗಳು ಒಂದೇ ಎಂದರ್ಥವಲ್ಲ.ಸೌದಿ ಅರೇಬಿಯಾದ ಪ್ರಮುಖ ಆದ್ಯತೆ ಗಲ್ಫ್ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿ. ಟರ್ಕಿಯ ಆದ್ಯತೆ ಪ್ರಾದೇಶಿಕ ಪ್ರಭಾವ ಮತ್ತು ರಕ್ಷಣಾ ಕೈಗಾರಿಕೆ. ಪಾಕಿಸ್ತಾನದ ಆದ್ಯತೆ ದಕ್ಷಿಣ ಏಷ್ಯಾ, ಕಾಶ್ಮೀರ ಮತ್ತು ತನ್ನ ಆರ್ಥಿಕ-ಸೈನಿಕ ಸ್ಥಾನವನ್ನು ಬಲಪಡಿಸುವುದು.ಈ ಮೂರು ರಾಷ್ಟ್ರಗಳ ಭದ್ರತಾ ಆದ್ಯತೆಗಳು ಬೇರೆಬೇರೆ.

ಒಪ್ಪಂದದ ಪ್ರಕಾರ “ಒಬ್ಬರ ಮೇಲೆ ದಾಳಿ ಎಲ್ಲರ ಮೇಲಿನ ದಾಳಿ” ಎಂದಾಗುತ್ತದೆ. ಆದರೆ ಇದನ್ನು ನಿಜವಾಗಿ , ಪ್ರಾಯೋಗಿಕವಾಗಿ ಜಾರಿಗೆ ತರಲು ಸಾಧ್ಯವೇ ? ಎನ್ನುವುದನ್ನು ಇರಾನ್ ಪರೀಕ್ಷೆ ಮಾಡುತ್ತಿದೆ. ಈ ಒಪ್ಪಂದದ ಬಹುದೊಡ್ಡ ಶಕ್ತಿ ಮತ್ತು ಬಹುದೊಡ್ಡ ದುರ್ಬಲತೆ ಎರಡೂ ಇದೇ ಆಗಿದೆ.

ನಾವೀಗ ಮೂರು ಬೆಳವಣಿಗೆಗಳನ್ನು ಗಮನಿಸುವುದು ಅತ್ಯಂತ ಮುಖ್ಯ...

ಮೊದಲನೆಯದು: ಈ ಒಪ್ಪಂದಕ್ಕೆ ಹೊಸ ದೇಶಗಳು ಸೇರುತ್ತವೆಯೇ? ಟರ್ಕಿ ಈಗಾಗಲೇ ಈ ವ್ಯವಸ್ಥೆ ವಿಸ್ತರಿಸಬಹುದೆಂಬ ಸೂಚನೆ ನೀಡಿದ್ದು, ಈಜಿಪ್ಟ್‌ನ ಹೆಸರನ್ನೂ ಪ್ರಸ್ತಾಪಿಸಿದೆ.

ಎರಡನೆಯದು: ಜಂಟಿ ಸೇನಾ ಕಮಾಂಡ್ ಅಥವಾ ಶಾಶ್ವತ ಸೈನಿಕ ವ್ಯವಸ್ಥೆ ರೂಪುಗೊಳ್ಳುತ್ತದೆಯೇ?

ಮೂರನೆಯದು: ಸೌದಿ,ಪಾಕಿಸ್ತಾನ ಸಂಬಂಧ ಕೇವಲ ರಕ್ಷಣಾ ಸಹಕಾರಕ್ಕಷ್ಟೇ ಸೀಮಿತವಾಗುತ್ತದೆಯೇ ಅಥವಾ ಪರಮಾಣು ಅಣು ಶಕ್ತಿ ವಿಸ್ತರಣೆಗೂ ಮುಂದುವರೆಯುತ್ತದೆಯೇ ?

ಈ ಮೂರು ಪ್ರಶ್ನೆಗಳಿಗೆ ಉತ್ತರ ಸಿಕ್ಕ ನಂತರವೇ ಮಕ್ಕೆ ಒಪ್ಪಂದದ ನಿಜವಾದ ಬರಲಿದೆ. ಮೂರನೆಯ ಅಂಶ ಜಗತ್ತಿನ ಶಾಂತಿಗೆ ಭಂಗ ತರುವುದು ಗ್ಯಾರಂಟಿ.

ಕೊನೆಮಾತು:

ಭಾರತದ ದೃಷ್ಟಿಯಿಂದ ಆತಂಕಕ್ಕಿಂತ ಎಚ್ಚರಿಕೆ ಮತ್ತು ತಂತ್ರಜ್ಞಾನದ ಮರುಸಮತೋಲನ ಮುಖ್ಯ. ಸೌದಿ ಅರೇಬಿಯಾದೊಂದಿಗೆ ಭಾರತದ ಆರ್ಥಿಕ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವುದು, ಟರ್ಕಿಯೊಂದಿಗೆ ರಾಜತಾಂತ್ರಿಕ ಸಂವಹನವನ್ನು ಮುಂದುವರಿಸುವುದು ಮತ್ತು ಪಾಕಿಸ್ತಾನದ ಸೈನಿಕ ಸಾಮರ್ಥ್ಯಗಳ ಮೇಲೆ ನಿಗಾ ಇಡುವುದು ದೆಹಲಿಯ ಮುಂದಿನ ಆದ್ಯತೆಗಲಾಗಬೇಕು. ಇಲ್ಲಿ ಭಾರತ ಒಂಟಿಯಲ್ಲ , ಅಮೇರಿಕಾ , ಇಸ್ರೇಲ್ ಜೊತೆಗೆ ಇರಾನ್ ಕೂಡ ಇದರ ಪರಿಣಾಮ ಎದುರಿಸಲಿದೆ. ಹೀಗಾಗಿ ಸದ್ಯದ ಮಟ್ಟಿಗೆ ಆತಂಕವಿಲ್ಲ. ಆದರೆ ಎಚ್ಚರಿಕೆ ಅಗತ್ಯವಿದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pakಗೆ ಭಾರತ ಬಿಗ್ ಶಾಕ್: ದೆಹಲಿಯಲ್ಲಿ ಗರ್ಜಿಸಿದ ಬುಲ್ಡೋಜರ್; ಪಾಕಿಸ್ತಾನ ರಾಯಭಾರ ಕಚೇರಿ ಮುಂಭಾಗದ ಅನಧಿಕೃತ ನಿರ್ಮಾಣಗಳು ಧ್ವಂಸ..!

ಇರಾನ್ ಬೆನ್ನೆಲುಬು ಮುರಿಯಲು ಅಮೆರಿಕಾ ಪ್ಲ್ಯಾನ್: 'Economic D-Day' ಘೋಷಣೆ; ನೆರವು ನೀಡುವ ರಾಷ್ಟ್ರಗಳಿಗೂ ಕಾದಿದೆ ಗಂಡಾಂತರ..!

ಭಯೋತ್ಪಾದಕರ ರಕ್ಷಣೆಗೆ ವಿಶ್ವಸಂಸ್ಥೆ ವೇದಿಕೆ ಬಳಸದಿರಿ: ಪಾಕ್-ಚೀನಾಗೆ ಭಾರತದ ಖಡಕ್‌ ಎಚ್ಚರಿಕೆ

‘ಯಾವುದೇ ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿಲ್ಲ’: ಸಚಿವ ನಾಗೇಂದ್ರ ಕುರಿತು DCM ಡಾ.ಜಿ.ಪರಮೇಶ್ವರ್ ಸಮರ್ಥನೆ

ಲೋಕಸಭೆ ಸದಸ್ಯ ಬಲ 25 ವರ್ಷ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಕಾಂಗ್ರೆಸ್ ಒತ್ತಾಯ; 2029ರಿಂದ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಆಗ್ರಹ