ಅಂಕಣಗಳು

ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಭಾರತದ ಬಾಹ್ಯಾಕಾಶ ಕನಸಿನ ಹಿಂದಿನ ಬಿಕ್ಕಟ್ಟು

ಬಾಹ್ಯಾಕಾಶ ಎನ್ನುವುದು ಈಗ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿ ರೂಪುಗೊಳ್ಳುತ್ತಿದ್ದು, ಖಾಸಗಿ ಸಂಸ್ಥೆಗಳು, ಹೂಡಿಕೆದಾರರು, ಮರುಬಳಕೆ ಮಾಡಬಲ್ಲ ರಾಕೆಟ್‌ಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ನೂತನ ತಂತ್ರಜ್ಞಾನಗಳು ಬಾಹ್ಯಾಕಾಶ ಉದ್ದಿಮೆಗೆ ಶಕ್ತಿ ನೀಡುತ್ತಿವೆ.

ಪ್ರತಿ ವರ್ಷ ಆಗಸ್ಟ್ 23ರಂದು ಭಾರತ ತನ್ನ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸುತ್ತದೆ. ಆಗಸ್ಟ್ 23, 2023ರಂದು ಭಾರತದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ದಿನವನ್ನು ಸ್ಮರಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಮೊದಲನೇ ಬಾಹ್ಯಾಕಾಶ ದಿನವನ್ನು 2024ರಲ್ಲಿ ಆಚರಿಸಿದ್ದು, 2026 ಈ ಯಶಸ್ಸಿನ ಮೂರನೇ ವರ್ಷಾಚರಣೆಯಾಗಲಿದೆ. ಈ ವರ್ಷ 'ವಿಕಸಿತ ಭಾರತ: ಜಾಗತಿಕ ಬಾಹ್ಯಾಕಾಶ ನಾಯಕತ್ವಕ್ಕಾಗಿ ನಾವೀನ್ಯತೆ, ಸಹಯೋಗ, ಮತ್ತು ಸ್ಫೂರ್ತಿ' ಎನ್ನುವ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ. ಸರಳವಾಗಿ ವಿವರಿಸುವುದಾದರೆ, ನಾವು ನಮ್ಮದೇ ತಂತ್ರಜ್ಞಾನವನ್ನು ನಿರ್ಮಿಸಬಲ್ಲೆವು, ದೇಶದೊಳಗೆ ಮತ್ತು ವಿದೇಶಗಳ ಸಹಯೋಗಿಗಳೊಡನೆ ಕಾರ್ಯಾಚರಿಸಬಲ್ಲೆವು, ಮತ್ತು ಮುಂದಿನ ತಲೆಮಾರುಗಳನ್ನು ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತಶಾಸ್ತ್ರದತ್ತ ಬರಲು ಸ್ಫೂರ್ತಿ ನೀಡಬಲ್ಲೆವು ಎನ್ನುವ ಸಂದೇಶವನ್ನು ಹೊಂದಿದೆ.

ಭಾರತದ ಬಾಹ್ಯಾಕಾಶ ಯಾನ ಮೌನವಾಗಿಯೇ ಆರಂಭಗೊಂಡಿತು. ನಮ್ಮ ಮೊದಲ ಉಪಗ್ರಹವಾದ ಆರ್ಯಭಟವನ್ನು ಸೋವಿಯತ್ ನೆರವಿನಿಂದ 1975ರಲ್ಲಿ ಉಡಾವಣೆಗೊಳಿಸಲಾಯಿತು. 2008ರಲ್ಲಿ ಚಂದ್ರಯಾನ-1 ಯೋಜನೆ ಚಂದ್ರನಲ್ಲಿ ನೀರಿನ ಕಣಗಳು ಇರುವುದಕ್ಕೆ ಸಾಕ್ಷಿಗಳನ್ನು ನೀಡಿತು. 2019ರಲ್ಲಿ ಚಂದ್ರಯಾನ-2 ಒಯ್ದ ಆರ್ಬಿಟರ್ ಇಂದಿಗೂ ಚಂದ್ರನಿಂದ ಅಂದಾಜು 100 ಕಿಲೋಮೀಟರ್ ಎತ್ತರದಲ್ಲಿ ಪರಿಭ್ರಮಣೆ ನಡೆಸುತ್ತಿದ್ದು, ಕೇವಲ 30 ಸೆಂಟಿಮೀಟರ್ ಗಾತ್ರದಷ್ಟು ಸಣ್ಣ ವಸ್ತುಗಳನ್ನೂ ಗುರುತಿಸುವಷ್ಟು ಸ್ಪಷ್ಟವಾದ ಚಿತ್ರಗಳನ್ನು ಒದಗಿಸುತ್ತಿದೆ. ನಮ್ಮ ಮಂಗಳ ಗ್ರಹ ಅನ್ವೇಷಣಾ ಯೋಜನೆಯಾದ ಮಂಗಳಯಾನ 2014ರ ಸೆಪ್ಟೆಂಬರ್ 24ರಂದು ಮಂಗಳನ ಕಕ್ಷೆಯನ್ನು ತಲುಪಿತು. ಆರು ತಿಂಗಳ ಕಾಲ ಕಾರ್ಯಾಚರಿಸಲು ನಿರ್ಮಿಸಿದ್ದ ಯೋಜನೆ ಮುಂದಿನ ಎಂಟಕ್ಕೂ ಹೆಚ್ಚು ವರ್ಷ ಕಾರ್ಯಾಚರಿಸಿತು.

ಈ ವೇಗ ಇನ್ನಷ್ಟು ಹೆಚ್ಚಿತು. ನಮ್ಮ ಮೊದಲ ಖಗೋಳಶಾಸ್ತ್ರ ಉಪಗ್ರಹವಾದ ಆ್ಯಸ್ಟ್ರೋಸ್ಯಾಟ್, ಕ್ಷ ಕಿರಣಗಳು, ದೃಗ್ಗೋಚರ ಮತ್ತು ನೇರಳಾತೀತ ಬೆಳಕುಗಳನ್ನು ಜೊತೆಯಾಗಿ ಬಳಸಿಕೊಂಡು ನಕ್ಷತ್ರಗಳನ್ನು ಅಧ್ಯಯನ ಮಾಡುತ್ತಿದೆ. 2023ರಲ್ಲಿ ಉಡಾವಣೆಗೊಂಡ ಆದಿತ್ಯ-ಎಲ್1 ಅಂದಾಜು 1.5 ಕಿಲೋಮೀಟರ್ ದೂರದಲ್ಲಿರುವ ಬಿಂದುವಿನಿಂದ ಸೂರ್ಯನ ಅಧ್ಯಯನ ನಡೆಸುತ್ತಿದೆ. ಎಕ್ಸ್‌ರೇ ಪೋಲಾರಿಮೀಟರ್ ಸ್ಯಾಟಲೈಟ್ ಎನ್ನುವುದರ ಹೃಸ್ವರೂಪವಾದ ಎಕ್ಸ್‌ಪೋಸ್ಯಾಟ್ ಜನವರಿ 2024ರಲ್ಲಿ ಉಡಾವಣೆಗೊಂಡಿದ್ದು, ಇದು ಕಪ್ಪುಕುಳಿಗಳಂತಹ ಅತ್ಯಂತ ತೀಕ್ಷ್ಣ ಬಾಹ್ಯಾಕಾಶ ವಸ್ತುಗಳ ಅಧ್ಯಯನ ನಡೆಸುತ್ತದೆ. ಜನವರಿ 2025ರಲ್ಲಿ, ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ ಅಥವಾ ಸ್ಪೇಡೆಕ್ಸ್ ಯಶಸ್ಸಿನ ಮೂಲಕ ಬಾಹ್ಯಾಕಾಶದಲ್ಲಿ ಎರಡು ಬಾಹ್ಯಾಕಾಶ ನೌಕೆಗಳು ಸ್ವಯಂಚಾಲಿತವಾಗಿ ಜೋಡಿಸಿಕೊಳ್ಳುವ ಮತ್ತು ಬಿಡುಗಡೆಗೊಳ್ಳುವ ಸಾಮರ್ಥ್ಯ ಸಾಧಿಸಿದ ಜಗತ್ತಿನ ಕೇವಲ ನಾಲ್ಕನೇ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಜೂನ್ 2025ರಲ್ಲಿ, ಆ್ಯಕ್ಸಿಯಮ್-4 ಯೋಜನೆಯಲ್ಲಿ ಪಾಲ್ಗೊಂಡ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ ಮೊದಲ ಭಾರತೀಯ ಗಗನಯಾತ್ರಿ ಎನಿಸಿಕೊಂಡರು. ಜುಲೈ 2025ರಲ್ಲಿ, ಇಸ್ರೋ ಮತ್ತು ನಾಸಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ರೇಡಾರ್ ಉಪಗ್ರಹವಾದ ನಿಸಾರ್, ನಮ್ಮ ಭೂಮಿ, ಅರಣ್ಯ ಪ್ರದೇಶಗಳು, ಹಿಮನದಿಗಳು ಮತ್ತು ಸಮುದ್ರಗಳನ್ನು ಗಮನಿಸುತ್ತದೆ.

ಭಾರತದ‌ ಮುಂದಿನ ಬಾಹ್ಯಾಕಾಶ ಹಾದಿಯೂ ಅಷ್ಟೇ ನಿಬಿಡವಾಗಿದೆ. 2026ರಲ್ಲಿ ಭಾರತ - ಫ್ರಾನ್ಸ್ ಜಂಟಿಯಾಗಿ ನಡೆಸಲು ಯೋಜಿಸಿರುವ ತೃಷ್ಣಾ ಯೋಜನೆ ಕೃಷಿ, ನೀರು ನಿರ್ವಹಣೆ ಮತ್ತು ಹವಾಮಾನ ಅಧ್ಯಯನಕ್ಕೆ ನೆರವಾಗಲು ಭೂಮಿಯ ಉಷ್ಣತೆ ಆಧಾರಿತ ಛಾಯಾಚಿತ್ರಗಳನ್ನು ತೆಗೆಯಲಿದೆ. ಗಗನಯಾನ ಯೋಜನೆ ಮೂವರು ಗಗನಯಾತ್ರಿಗಳನ್ನು ಭೂಮಿಯಿಂದ 400 ಕಿಲೋಮೀಟರ್ ಎತ್ತರಕ್ಕೆ ಮೂರು ದಿನಗಳ ಅವಧಿಗೆ ಕರೆದೊಯ್ಯಲಿದ್ದು, ಇದಕ್ಕಾಗಿ ಮಾನವ ರಹಿತ ಪರೀಕ್ಷಾ ಹಾರಾಟ 2026ರ ಕೊನೆಯ ಭಾಗದಲ್ಲಿ ಯೋಜಿಸಲಾಗಿದೆ. ಇನ್ನು ಮಾನವ ಸಹಿತ ಉಡಾವಣೆಯನ್ನು 2027ರಲ್ಲಿ ಯೋಜಿಸಲಾಗಿದೆ. 2027ರಲ್ಲಿ ನಡೆಸಲು ಉದ್ದೇಶಿಸಿರುವ ಚಂದ್ರಯಾನ-4 ಯೋಜನೆ ಚಂದ್ರನ ಮಾದರಿಗಳನ್ನು ಭೂಮಿಗೆ ತರಲಿದೆ. ಜಪಾನ್ ಜೊತೆಗೂಡಿ ನಡೆಸಲಿರುವ ಚಂದ್ರಯಾನ-5 ಅಥವಾ ಲೂಪೆಕ್ಸ್ ಯೋಜನೆ ಚಂದ್ರನ ದಕ್ಷಿಣ ಧ್ರುವದ ಬಳಿ ನೀರಿನ ಲಭ್ಯತೆಯನ್ನು ಅಧ್ಯಯನ ಮಾಡಲಿದೆ. ಶುಕ್ರ ಗ್ರಹವನ್ನು ಅಧ್ಯಯನ ನಡೆಸಲು ವೀನಸ್ ಆರ್ಬಿಟರ್ ಮಿಷನ್ ಅನ್ನು ಮಾರ್ಚ್ 2028ರಲ್ಲಿ ಉಡಾವಣೆಗೊಳಿಸಲು ಯೋಜಿಸಲಾಗಿದ್ದು, ಇದಕ್ಕಾಗಿ ಸ್ವಲ್ಪಮಟ್ಟಿಗೆ ಮರುಬಳಕೆ ಮಾಡಬಹುದಾದ ನೆಕ್ಸ್ಟ್ ಜನರೇಶನ್ ಲಾಂಚ್ ವೆಹಿಕಲ್ ಅನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇನ್ನು ಭಾರತೀಯ ಅಂತರಿಕ್ಷ ಸ್ಟೇಷನ್ 2035ರ ವೇಳೆಗೆ ಸಂಪೂರ್ಣವಾಗಿ ಕಾರ್ಯಾಚರಣೆಗೆ ಸಜ್ಜಾಗಲಿದೆ.

ಇವೆಲ್ಲ ಯೋಜನೆಗಳ ಹಿಂದೆ, ಒಂದಷ್ಟು ಮಹತ್ವದ ಬದಲಾವಣೆಗಳೂ ನಡೆಯುತ್ತಿವೆ. ಬಾಹ್ಯಾಕಾಶ ಎನ್ನುವುದು ಈಗ ಕೇವಲ ಒಂದು ಸರ್ಕಾರಿ ಚಟುವಟಿಕೆಯಲ್ಲ. ಇದೊಂದು ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿ ರೂಪುಗೊಳ್ಳುತ್ತಿದ್ದು, ಖಾಸಗಿ ಸಂಸ್ಥೆಗಳು, ಹೂಡಿಕೆದಾರರು, ಮರುಬಳಕೆ ಮಾಡಬಲ್ಲ ರಾಕೆಟ್‌ಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ನೂತನ ತಂತ್ರಜ್ಞಾನಗಳು ಬಾಹ್ಯಾಕಾಶ ಉದ್ದಿಮೆಗೆ ಶಕ್ತಿ ನೀಡುತ್ತಿವೆ. ಜಾಗತಿಕ ಬಾಹ್ಯಾಕಾಶ ಉದ್ಯಮ ಇಂದು ಬಹುತೇಕ 650 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದು, 2035ರ ವೇಳೆಗೆ 1 ಟ್ರಿಲಿಯನ್ ಡಾಲರ್ ಮೌಲ್ಯವನ್ನು ದಾಟುವ ನಿರೀಕ್ಷೆಗಳಿವೆ. ಈ ಉದ್ಯಮದ ಬಹುತೇಕ 80% ಮೌಲ್ಯ ರಾಕೆಟ್‌ಗಳಿಂದ ಬರುತ್ತಿಲ್ಲ. ಬದಲಿಗೆ, ಉಪಗ್ರಹಗಳ ಆಧಾರದಲ್ಲಿ ನಿರ್ಮಿತವಾಗಿರುವ ಪ್ರತಿದಿನದ ಸೇವೆಗಳಾದ ಡಿಜಿಟಲ್ ಬ್ಯಾಂಕಿಂಗ್, ನ್ಯಾವಿಗೇಶನ್ (ಸಂಚರಣೆ), ಆಧುನಿಕ ಕೃಷಿ, ವಿಪತ್ತು ನಿರ್ವಹಣೆ, ಮತ್ತು ರಾಷ್ಟ್ರೀಯ ಭದ್ರತೆಗಳಿಂದ ಲಭಿಸುತ್ತಿದೆ.

ಭಾರತ ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದೆ. ನೀತಿಯ ಸುಧಾರಣೆಗಳು ಬಾಹ್ಯಾಕಾಶ ಉದ್ಯಮವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದ್ದು, ಇನ್‌ಸ್ಪೇಸ್ ಅನ್ನು ಸ್ಥಾಪಿಸಿ, ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಅನ್ನು ಬಲಪಡಿಸಿದೆ. 2019ರ ವೇಳೆ ಹತ್ತಕ್ಕೂ ಕಡಿಮೆ ಬಾಹ್ಯಾಕಾಶ ಸ್ಟಾರ್ಟಪ್‌ಗಳಿದ್ದವು. ಆದರೆ ಈಗ, ಸ್ಕೈರೂಟ್ ಏರೋಸ್ಪೇಸ್, ಅಗ್ನಿಕುಲ್ ಕಾಸ್ಮೋಸ್, ಪಿಕ್ಸೆಲ್, ಧ್ರುವ ಸ್ಪೇಸ್ ಮತ್ತು ಬೆಲಾಟ್ರಿಕ್ಸ್ ಏರೋಸ್ಪೇಸ್ ಸೇರಿದಂತೆ 300ಕ್ಕೂ ಹೆಚ್ಚು ಬಾಹ್ಯಾಕಾಶ ಸ್ಟಾರ್ಟಪ್‌ಗಳಿವೆ. ಸರ್ಕಾರ ನಮ್ಮ ಬಾಹ್ಯಾಕಾಶ ಆರ್ಥಿಕತೆ ಇಂದಿರುವ 8.4 ಬಿಲಿಯನ್ ಡಾಲರ್‌ಗಳಿಂದ 2040ರ ವೇಳೆಗೆ ಬಹುತೇಕ 100 ಬಿಲಿಯನ್ ಡಾಲರ್ ಮೌಲ್ಯಕ್ಕೆ ವೃದ್ಧಿಸಬೇಕು ಎನ್ನುವ ಗುರಿ ಹೊಂದಿದೆ.

ಆದರೆ, ಒಂದು ಸಮಸ್ಯೆ ಈ ಪ್ರಗತಿಯನ್ನು ಕುಂಠಿತಗೊಳಿಸಬಹುದು. ಈ ಹಿಂದೆ, ಹೊಸದಾದ ಬಾಹ್ಯಾಕಾಶ ಕಂಪನಿಗಳಿಗೆ ಹಣ ಬಹುದೊಡ್ಡ ಚಿಂತೆಯ ವಿಷಯವಾಗಿತ್ತು. ಆದರೆ ಇಂದು, ಸರ್ಕಾರ ಮತ್ತು ಹೂಡಿಕೆದಾರರಿಂದ ಹಣ ಹರಿದುಬರುತ್ತಿದೆ. ಆದ್ದರಿಂದ ಈಗ ಎದುರಾಗಿರುವ ನೈಜ ಕೊರತೆ ಎಂದರೆ ಕುಶಲ ಉದ್ಯೋಗಿಗಳದ್ದು.

ಆಧುನಿಕ ಬಾಹ್ಯಾಕಾಶ ಕಾರ್ಯಗಳು ಏರೋಸ್ಪೇಸ್ ಇಂಜಿನಿಯರಿಂಗ್ ಗಿಂತಲೂ ಹೆಚ್ಚಿನ ಅವಶ್ಯಕತೆ ಹೊಂದಿವೆ. ಇಂದು ಉಪಗ್ರಹ ನಿರ್ಮಿಸಲು ಕೃತಕ ಬುದ್ಧಿಮತ್ತೆಯ ಜ್ಞಾನ, ಸೆಮಿಕಂಡಕ್ಟರ್ ಚಿಪ್‌ಗಳು, ಕ್ವಾಂಟಮ್ ಸಂವಹನ, ಫೋಟೋನಿಕ್ಸ್, ಆಧುನಿಕ ಉಷ್ಣತಾ ನಿರೋಧಕ ವಸ್ತುಗಳು, ಸೈಬರ್ ಭದ್ರತೆ, ರೋಬಾಟಿಕ್ಸ್, ಜಿಯೋಸ್ಪೇಶಿಯಲ್ ಅನಾಲಿಟಿಕ್ಸ್, ಮತ್ತು ಎಂಬೆಡೆಡ್ ಸಿಸ್ಟಮ್‌ಗಳು ಬೇಕಾಗುತ್ತವೆ. ಬಾಹ್ಯಾಕಾಶ ಕಂಪನಿಗಳಿಗೆ ಪೇಟೆಂಟ್, ಹಣಕಾಸು, ಅಂತಾರಾಷ್ಟ್ರೀಯ ಕಾನೂನು, ಸುಸ್ಥಿರತೆ ಮತ್ತು ತಂತ್ರಜ್ಞಾನ ನಿರ್ವಹಣೆಗಳ ತಜ್ಞರ ಅಗತ್ಯವಿದೆ. ಭವಿಷ್ಯಕ್ಕೆ ಇಂತಹ ಸಂಯೋಜಿತ ತಂಡಗಳು ಬೇಕೇ ಹೊರತು, ಕೇವಲ ಒಂದೊಂದೇ ವಿಷಯ ತಜ್ಞರಲ್ಲ.

ಭಾರತ ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಇಂಜಿನಿಯರಿಂಗ್ ಪದವೀಧರರನ್ನು ಉತ್ಪಾದಿಸುತ್ತಿದೆಯಾದರೂ, ಬಹಳಷ್ಟು ಕಡಿಮೆ ಸಂಖ್ಯೆಯ ಪದವೀಧರರಿಗೆ ಅನುಭವ ಇರುತ್ತದೆ. ಅವರು ಪೇಲೋಡ್ ಇಂಟಗ್ರೇಶನ್, ಅಂದರೆ ಉಪಗ್ರಹದ ಉಪಕರಣಗಳನ್ನು ಜೊತೆಯಾಗಿ ಜೋಡಿಸಿ, ಅವುಗಳನ್ನು ಪರೀಕ್ಷಿಸುವ ಕಾರ್ಯ, ಅಥವಾ ಕ್ಲೀನ್ ರೂಮ್ ವರ್ಕ್, ಅಂದರೆ ಸೂಕ್ಷ್ಮ ಉಪಕರಣಗಳನ್ನು ಧೂಳು ಮುಕ್ತವಾದ ಪ್ರಯೋಗಾಲಯಗಳಲ್ಲಿ ಜೋಡಿಸುವ ಪ್ರಕ್ರಿಯೆಗಳಲ್ಲಿ ಅನುಭವ ಹೊಂದಿರುವುದಿಲ್ಲ. ಯೋಜನಾ ರೂಪಿಸುವಿಕೆ ಮತ್ತು ಉಪಗ್ರಹ ಸಾಫ್ಟ್‌ವೇರ್‌ಗಳು ಸಹ ಅವರಿಗೆ ಅಪರಿಚಿತವಾಗಿರುತ್ತವೆ. ಸ್ಟಾರ್ಟಪ್‌ಗಳು ತಿಂಗಳುಗಟ್ಟಲೆ ಸಮಯವನ್ನು ಹೊಸ ನೇಮಕಾತಿಯವರನ್ನು ತರಬೇತುಗೊಳಿಸಲು ಬಳಸುವುದರಿಂದ, ಇದು ವೆಚ್ಚವನ್ನು ಹೆಚ್ಚಿಸಿ, ತಂತ್ರಜ್ಞಾನವನ್ನು ವಿಳಂಬಗೊಳಿಸುತ್ತದೆ. ನಮಗೆ ಪದವಿಗಳ ಕೊರತೆಯಿಲ್ಲ. ಆದರೆ, ಮೊದಲ ದಿನದಿಂದಲೂ ಇರಬೇಕಾದ ಸಿದ್ಧತೆಯ ಕೊರತೆಯಿದೆ.

ಇದಕ್ಕೆ ಉತ್ತರ ಕೇವಲ ಹೆಚ್ಚಿನ ವಿದ್ಯಾರ್ಥಿಗಳಿಗೆ ಸೀಟ್ ಒದಗಿಸುವುದಲ್ಲ. ಬದಲಿಗೆ, ಬೋಧನೆಯನ್ನು ಉತ್ತಮಗೊಳಿಸುವುದಾಗಿದೆ. ಎಂಐಟಿ, ಸ್ಟ್ಯಾಂಡ್‌ಫೋರ್ಡ್, ಕ್ಯಾಲ್‌ಟೆಕ್, ಟಿಯು ಡೆಲ್ಫ್, ಮತ್ತು ಕ್ರೇನ್‌ಫೀಲ್ಡ್‌ಗಳ ಯುವ ವಿದ್ಯಾರ್ಥಿಗಳು ಉಪಗ್ರಹ ವಿನ್ಯಾಸ, ಕ್ಯೂಬ್‌ಸ್ಯಾಟ್ಸ್ (ಶೂ ಪೆಟ್ಟಿಗೆಯ ಗಾತ್ರದ ಉಪಗ್ರಹಗಳು) ನಿರ್ಮಾಣ, ಸಿಮ್ಯುಲೇಶನ್‌ ಪ್ರಯೋಗಾಲಯಗಳಲ್ಲಿ ಯೋಜನಾ ಅಭ್ಯಾಸ ನಡೆಸುವುದರಲ್ಲಿ ತೊಡಗಿರುತ್ತಾರೆ. ಭಾರತದಲ್ಲಿ, ಐಐಎಸ್‌ಟಿ ತಿರುವನಂತಪುರದಲ್ಲಿ, ಐಐಆರ್‌ಎಸ್ ಡೆಹ್ರಾಡೂನ್ ಮತ್ತು ಮುಂಬೈ, ಕಾನ್‌ಪುರ, ಮದ್ರಾಸ್, ಮತ್ತು ಖರಗಪುರದ ಐಐಟಿಗಳು ಇಸ್ರೋ ಹೂಡಿಕೆ ಹೊಂದಿರುವ ಉಪಗ್ರಹ ಯೋಜನೆಗಳನ್ನು ನಡೆಸುತ್ತವೆ. ಬಿಟ್ಸ್ ಪಿಲಾನಿ, ವಿಐಟಿ ವೆಲ್ಲೂರು ಮತ್ತು ಎಸ್ಆರ್‌ಎಂಗಳು ಸಂಶೋಧನಾ ತಂಡಗಳು ಮತ್ತು ಬಾಹ್ಯಾಕಾಶ ಸ್ಟಾರ್ಟಪ್‌ಗಳಿಗೆ ಬೆಂಬಲ ನೀಡುತ್ತವೆ. ಇಂತಹ ಪ್ರಾಯೋಗಿಕ ಕಾರ್ಯಗಳು ಸಹಜವಾಗಬೇಕೇ ಹೊರತು, ಆಯ್ಕೆ ಆಗಿರಬಾರದು.

ಭಾರತದ ನೈಜ ಲಾಂಚ್‌ಪ್ಯಾಡ್‌ಗಳೆಂದರೆ ತರಬೇತಿ ಹೊಂದಿರುವ ಯುವ ಪ್ರತಿಭೆಗಳು. 2047ರಲ್ಲಿ ವಿಕಸಿತ ಭಾರತ ಸಾಧನೆಗೆ ಭಾರತದ ಯಾನವನ್ನು ಇಂತಹ ಪ್ರತಿಭೆಗಳು ನಿರ್ಧರಿಸುತ್ತಾರೆಯೇ ಹೊರತು, ಹಣವಲ್ಲ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ, ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್..!

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ಆಗಸ್ಟ್.31ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ವಾಲ್ಮೀಕಿ ನಿಗಮ ಹಗರಣ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ BJP ಬೃಹತ್ ಪ್ರತಿಭಟನೆ, ಅಶೋಕ್-ವಿಜಯೇಂದ್ರ ಸೇರಿ ಹಲವರು ಪೊಲೀಸರ ವಶಕ್ಕೆ..!

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!

ಇರಾನ್ ಉಸಿರುಗಟ್ಟಿಸಲು ಟ್ರಂಪ್ ಮಾಸ್ಟರ್ ಪ್ಲ್ಯಾನ್: ಆರ್ಥಿಕ 'ಡಿ-ಡೇ’ ಘೋಷಣೆ, ಅಮೆರಿಕ ಹೊಸ ನಿರ್ಬಂಧದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ..!