

ಅಮೆರಿಕ ಮತ್ತು ಇರಾನ್ ನಡುವಿನ ಹಳಸಿದ ಸಂಬಂಧ ಈಗ ಅಂತ್ಯದ ಹಂತಕ್ಕೆ ತಲುಪಿದಂತಿದೆ. ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್, ಇರಾನ್ ವಿರುದ್ಧ "ಆರ್ಥಿಕ ಡಿ-ಡೇ" (Economic D-Day) ಘೋಷಿಸಿದ್ದಾರೆ. ಇದು ಇರಾನ್ ಇತಿಹಾಸದಲ್ಲೇ ಅತ್ಯಂತ ಕಠಿಣ ಮತ್ತು ಕ್ರೂರ ಹಣಕಾಸು ದಾಳಿಯಾಗಿದ್ದು, ಆ ದೇಶದ ತೈಲ ರಫ್ತು ಮತ್ತು ಆದಾಯದ ಮೂಲಗಳನ್ನು ಸಂಪೂರ್ಣವಾಗಿ ಉಸಿರುಗಟ್ಟಿಸುವುದು ಅಮೆರಿಕದ ಮುಖ್ಯ ಗುರಿಯಾಗಿದೆ.
ಇರಾನ್‌ಗೆ ಆರ್ಥಿಕ ನೆರವು ನೀಡುವ ಯಾವುದೇ ಜಾಗತಿಕ ಬ್ಯಾಂಕ್, ವ್ಯಕ್ತಿ ಅಥವಾ ಹಡಗುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಎಚ್ಚರಿಸಿದೆ.\
ವಿಶೇಷವಾಗಿ, ಇರಾನ್‌ನಿಂದ ಅತಿ ಹೆಚ್ಚು ತೈಲ ಖರೀದಿಸುವ ಚೀನಾ ದೇಶದ ಮೇಲೂ ಅಮೆರಿಕ ತೀವ್ರ ಒತ್ತಡ ಹೇರಿದ್ದು, ಇರಾನ್ ಜಾಗತಿಕವಾಗಿ ಒಂಟಿಯಾಗುವ ಭೀತಿಯಲ್ಲಿದೆ.
ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಅವರು ಮಾತನಾಡಿ, ಇರಾನ್ ವಿರುದ್ಧದ ಟ್ರಂಪ್ ಆಡಳಿತದ ಅಭಿಯಾನ ಇದೀಗ ‘ಎಂಡ್‌ಗೇಮ್’ ಹಂತ ಪ್ರವೇಶಿಸಿದೆ ಎಂದು ಹೇಳಿದ್ದಾರೆ.
ಟೆಹ್ರಾನ್ ಮೇಲೆ ಒತ್ತಡ ಹೆಚ್ಚಿಸಲು ಲಭ್ಯವಿರುವ ಪ್ರತಿಯೊಂದು ಸಂಸ್ಥೆ ಹಾಗೂ ಅಧಿಕಾರವನ್ನು ಅಮೆರಿಕ ಬಳಸಲಿದೆ ಎಂದು ತಿಳಿಸಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬೆಸೆಂಟ್, “ಅಧ್ಯಕ್ಷ ಟ್ರಂಪ್ ಇರಾನ್‌ನ ಸೇನಾ ಸಾಮರ್ಥ್ಯವನ್ನು ನಾಶಗೊಳಿಸಿದ್ದಾರೆ, ಅದರ ಸುಮಾರು ಶೇ.100ರಷ್ಟು ಸೇನಾ ಕಾರ್ಖಾನೆಗಳನ್ನು ಧ್ವಂಸಗೊಳಿಸಿದ್ದಾರೆ ಮತ್ತು ಅದರ ಪರಮಾಣು ಕಾರ್ಯಕ್ರಮವನ್ನು ಸಮಾಧಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
“ನಾವು ಇದೀಗ ಅಂತಿಮ ಹಂತ ಪ್ರವೇಶಿಸುತ್ತಿದ್ದೇವೆ. ಮುಂಜಾನೆಯಿಂದ ಆರ್ಥಿಕ ‘ಡಿ-ಡೇ’ ಆರಂಭವಾಗಲಿದೆ. ಇದು ಎದುರಾಳಿಯ ವಿರುದ್ಧ ಇದುವರೆಗೆ ರೂಪಿಸಲಾದ ಅತಿದೊಡ್ಡ ಆರ್ಥಿಕ ದಾಳಿಯಾಗಿದೆ” ಎಂದು ತಿಳಿಸಿದ್ದಾರೆ.
ಇರಾನ್‌ನ ಆರ್ಥಿಕ ಸಂಪರ್ಕಗಳನ್ನು ಕಡಿತಗೊಳಿಸಿ, ಟೆಹ್ರಾನ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕಗೊಳಿಸುವುದು ಅಮೆರಿಕದ ಉದ್ದೇಶವಾಗಿದೆ. ಇರಾನ್‌ನೊಂದಿಗೆ ವ್ಯಾಪಾರ ನಡೆಸುವ ದೇಶಗಳು ಹಾಗೂ ಅದರ ಆರ್ಥಿಕ ಸಂಪರ್ಕಗಳನ್ನು ಮುಂದುವರಿಸಲು ನೆರವಾಗುತ್ತಿರುವ ಸಂಸ್ಥೆಗಳ ಮೇಲೂ ಹೊಸ ಕ್ರಮಗಳು ಗುರಿಯಾಗುವ ಸಾಧ್ಯತೆಯಿದೆ.
ದಬ್ಬಾಳಿಕೆಯ ಆಡಳಿತವನ್ನು ಬೆಂಬಲಿಸುವ ಪ್ರತಿಯೊಂದು ಆರ್ಥಿಕ ಜೀವನಾಡಿಯನ್ನು ಕಡಿತಗೊಳಿಸುವುದು ನಮ್ಮ ಉದ್ದೇಶ. ಟೆಹ್ರಾನ್ ಏಕಾಂಗಿಯಾಗುವವರೆಗೂ ಈ ಕ್ರಮ ಮುಂದುವರಿಯಲಿದೆ ಎಂದು ಬೆಸೆಂಟ್ ಹೇಳಿದ್ದಾರೆ.
ತೈಲ ರಫ್ತು ಸ್ಥಗಿತದ ಎಚ್ಚರಿಕೆ ನೀಡಿದ ಇರಾನ್
ಈ ನಡುವೆ ಅಮೆರಿಕದ ಆರ್ಥಿಕ ಒತ್ತಡಕ್ಕೆ ಇರಾನ್ ತೀವ್ರ ಪ್ರತಿಕ್ರಿಯೆ ನೀಡಿದೆ. ಆರ್ಥಿಕ ಒತ್ತಡ ಮುಂದುವರಿದರೆ ಪರ್ಷಿಯನ್ ಕೊಲ್ಲಿಯಿಂದ ನಡೆಯುವ ಎಲ್ಲ ತೈಲ ರಫ್ತನ್ನೇ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ಎಚ್ಚರಿಸಿದ್ದಾರೆ.
ಆರ್ಥಿಕ ಯುದ್ಧ ಮುಂದುವರಿದರೆ ಒಂದೇ ಒಂದು ಹನಿ ತೈಲವೂ ರಫ್ತಾಗುವುದಿಲ್ಲ. ಹಾರ್ಮುಜ್ ಜಲಸಂಧಿಯಿಂದಲೂ ಅಲ್ಲ, ಪರ್ಷಿಯನ್ ಕೊಲ್ಲಿಯ ಬೇರೆ ಯಾವುದೇ ಭಾಗದಿಂದಲೂ ಅಲ್ಲ. ಅಮೆರಿಕದ ಆರ್ಥಿಕ ಯುದ್ಧದಲ್ಲಿ ಭಾಗವಹಿಸುವ ಅಥವಾ ಬೆಂಬಲಿಸುವ ಯಾವುದೇ ದೇಶದ ಕ್ರಮವನ್ನು ಇರಾನ್ ತನ್ನ ವಿರುದ್ಧದ ಯುದ್ಧದ ಕೃತ್ಯವೆಂದು ಪರಿಗಣಿಸುತ್ತದೆ” ಎಂದು ರೆಜಾಯಿ ಹೇಳಿದ್ದಾರೆ.
ಈ ಎಚ್ಚರಿಕೆ ಜಾಗತಿಕ ಇಂಧನ ಪೂರೈಕೆಯ ಮೇಲೆ ಮತ್ತಷ್ಟು ಆತಂಕ ಮೂಡಿಸಿದೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ರೀತಿಯ ಅಡ್ಡಿ ಉಂಟಾದರೂ ತೈಲ ಪೂರೈಕೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.
ಹೊಸ ನಿರ್ಬಂಧಗಳಿಗೆ ಇರಾನ್ ತಿರುಗೇಟು
ಅಮೆರಿಕದ ಒತ್ತಡ ಅಭಿಯಾನವನ್ನು ಇರಾನ್ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಮಾತನಾಡಿ, ಅಮೆರಿಕದ ಹೊಸ ನಿರ್ಬಂಧಗಳ ಬೆದರಿಕೆ ಅದರ ಹತಾಶೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ದಶಕಗಳಿಂದ ನಿರ್ಬಂಧಗಳನ್ನು ಎದುರಿಸುತ್ತಿರುವ ಇರಾನ್, ಇಂತಹ ಕ್ರಮಗಳಿಂದ ನಮ್ಮನ್ನು ಮಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಕೂಡ ಅಮೆರಿಕದ ನೀತಿಯನ್ನು ವ್ಯಂಗ್ಯವಾಡಿದ್ದಾರೆ. ಆರ್ಥಿಕ ಒತ್ತಡ ಸಮಸ್ಯೆಗಳನ್ನು ಪರಿಹರಿಸುವ ಬದಲು ಮತ್ತಷ್ಟು ಬಿಕ್ಕಟ್ಟು ಸೃಷ್ಟಿಸಬಹುದು ಎಂದು ಟೀಕಿಸಿದ್ದಾರೆ.
ಏತನ್ಮಧ್ಯೆ ಅಮೆರಿಕ ಸೋಮವಾರ ಮತ್ತಷ್ಟು ನಿರ್ಬಂಧಗಳನ್ನು ಘೋಷಿಸುವ ನಿರೀಕ್ಷೆಯಿದೆ. ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುವುದಾಗಿ ಬೆಸೆಂಟ್ ಈಗಾಗಲೇ ಹೇಳಿದ್ದಾರೆ.
ಇರಾನ್ ಅನ್ನು ಆರ್ಥಿಕವಾಗಿ ಪ್ರತ್ಯೇಕಿಸುವ ಅಭಿಯಾನಕ್ಕೆ ಇತರ ದೇಶಗಳೂ ಕೈಜೋಡಿಸಬೇಕು ಎಂದು ವಾಷಿಂಗ್ಟನ್ ಒತ್ತಾಯಿಸಿದೆ.
ಇರಾನ್‌ನೊಂದಿಗೆ ವ್ಯಾಪಾರ ಮುಂದುವರಿಸುವ ದೇಶಗಳು ಮತ್ತು ಕಂಪನಿಗಳ ಮೇಲೂ ಹೊಸ ಕ್ರಮಗಳು ಪರಿಣಾಮ ಬೀರುವ ಸಾಧ್ಯತೆಯಿದೆ. ಇದರಿಂದ ಅಮೆರಿಕ-ಇರಾನ್ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೊಸ ಆತಂಕ
ಪರ್ಷಿಯನ್ ಕೊಲ್ಲಿಯಿಂದ ತೈಲ ಸಾಗಣೆಯಲ್ಲಿ ಯಾವುದೇ ದೊಡ್ಡ ಪ್ರಮಾಣದ ವ್ಯತ್ಯಯ ಉಂಟಾದರೆ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.
ತೈಲ ಬೆಲೆ ಏರಿಕೆಯಾಗುವುದರ ಜೊತೆಗೆ, ತೈಲ ಆಮದಿನ ಮೇಲೆ ಅವಲಂಬಿತವಾಗಿರುವ ದೇಶಗಳ ಆರ್ಥಿಕತೆಯ ಮೇಲೂ ಹೆಚ್ಚಿನ ಒತ್ತಡ ಬೀಳುವ ಆತಂಕ ಎದುರಾಗಿದೆ.