ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಒಂದು ಮಾತು ಹೇಳುತ್ತಿದ್ದರು - ಕಾಂಗ್ರೆಸ್ ವಿವಾದಗಳನ್ನು ಎಬ್ಬಿಸಿ ಕೂಡಿಸುತ್ತದೆ. ಬಿಜೆಪಿ ಆ ವಿವಾದಗಳ ಬೆನ್ನೇರಿ ಸವಾರಿ ಮಾಡುತ್ತದೆ. ಬಿಜೆಪಿಗೆ ಅನುಕೂಲವಾಗುವ ರೀತಿಯೇ ಕಾಂಗ್ರೆಸ್ ವರ್ತಿಸುತ್ತಿದೆ ಅಂದಿದ್ದರು. ರಾಜ್ಯದಲ್ಲಿ ಈಗ ಸಚಿವ ಬಿ.ನಾಗೇಂದ್ರ ಅವರ ಪ್ರಕರಣವನ್ನು ನೋಡಿದರೆ ಪಟೇಲರ ಈ ಮಾತು ನೆನಪಿಗೆ ಬರುತ್ತದೆ. ಭ್ರಷ್ಟಾಚಾರದ ಆರೋಪ ಹೊತ್ತ ನಾಗೇಂದ್ರ ಅವರನ್ನು ಕಾಂಗ್ರೆಸ್ ಪಕ್ಷವು ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಮಂತ್ರಿ ಮಾಡಿ ಕೈಕಟ್ಟಿಸಿಕೊಂಡಿದೆ. ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದು ಬಿಜೆಪಿ ವಿಧಾನಮಂಡಲ ಅಧಿವೇಶನದಲ್ಲಿ ಕಲಾಪಗಳನ್ನೇ ನಡೆಸಲು ಬಿಡದೇ ಗದ್ದಲ ಎಬ್ಬಿಸಿದೆ. ನಿಗದಿತ ವೇಳಾಪಟ್ಟಿಗಿಂತ ಎರಡು ದಿನಗಳ ಮುನ್ನವೇ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಮಾಡಿದೆ. ಪರಿಣಾಮ- ಜನಪರ ವಿಷಯಗಳ ಕುರಿತು ನಡೆಯದ ಚರ್ಚೆ. ಸದ್ದುಗದ್ದಲದ ನಡುವೆಯೇ ಅಂಗೀಕಾರಗೊಂಡ ಮಹತ್ವದ ವಿಧೇಯಕಗಳು. ಜನರ ತೆರಿಗೆ ಹಣ ಪೋಲು.
ವಿಧಾನಮಂಡಲ ಅಧಿವೇಶನದಲ್ಲಿ ಸ್ಪೀಕರ್, ಡೆಪ್ಯೂಟಿ ಸ್ಪೀಕರ್, ಸಭಾಪತಿ, ಉಪ ಸಭಾಪತಿಗಳ ಆಯ್ಕೆ, ಹನೂರು ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್ ವಿಷಯ ಹೊರತುಪಡಿಸಿ ಚರ್ಚೆಗಳೇ ನಡೆಯಲಿಲ್ಲ. ನಾಗೇಂದ್ರ ರಾಜೀನಾಮೆ ನೀಡುವವರೆಗೂ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಬಿಜೆಪಿ ಬಿಗಿಪಟ್ಟು ಹಿಡಿಯಿತು. ಸರಕಾರ ನಾಗೇಂದ್ರ ಅವರನ್ನು ಸಮರ್ಥಿಸಿಕೊಂಡಿತು. ಸರಕಾರ ಹಾಗೂ ಪ್ರತಿಪಕ್ಷಗಳ ನಡುವಿನ ಹಗ್ಗಜಗ್ಗಾಟದಲ್ಲಿ ಕಲಾಪ ಬಲಿಯಾಯಿತು. ರಾಜ್ಯ ಸರಕಾರದ ವೈಫಲ್ಯಗಳು ಹಾಗೂ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಈಗ ಪಾದಯಾತ್ರೆಯನ್ನೂ ಹಮ್ಮಿಕೊಂಡಿರುವುದು ಸರಕಾರದ ಮೇಲೆ ಒತ್ತಡ ಹೇರುವ ತಂತ್ರವಾಗಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನು ಪ್ರತಿನಿಧಿಸುವ ಯೋಜನಾ ಸಚಿವ ನಾಗೇಂದ್ರ ಕಳಂಕಿತರು. ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಆಗ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾಗಿ ಸುಮಾರು ಎರಡು ವರ್ಷಗಳ ನಂತರ ಮುಖ್ಯಮಂತ್ರಿ ಶಿವಕುಮಾರ್ ತಮ್ಮ ಸಚಿವ ಸಂಪುಟಕ್ಕೆ ನಾಗೇಂದ್ರ ಅವರನ್ನು ಸೇರ್ಪಡೆ ಮಾಡಿರುವುದು ವಿವಾದ ಹುಟ್ಟು ಹಾಕಿದೆ. ನಾಗೇಂದ್ರ ಕಳಂಕಿತರಲ್ಲ ಅಂದ ಮೇಲೆ ಈ ಹಿಂದೆ ಅವರಿಂದ ರಾಜೀನಾಮೆ ಪಡೆದಿದ್ದು ಏಕೆ? ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರ ಔಚಿತ್ಯವಾದರೂ ಏನು? ಸಚಿವ ಸ್ಥಾನದ ಪಟ್ಟಿಗೆ ಸಹಿ ಹಾಕಿದ ಕಾಂಗ್ರೆಸ್ ಹೈಕಮಾಂಡೇ ಉತ್ತರಿಸಬೇಕು. ಮುಖ್ಯಮಂತ್ರಿ ಶಿವಕುಮಾರ್ ಹಾಗೂ ನಾಗೇಂದ್ರ ಗುರುವಾರ ದೆಹಲಿಗೆ ತೆರಳಿರುವುದು ಕುತೂಹಲಕಾರಿ ವಿದ್ಯಮಾನ.
ರಾಜ್ಯದ 101 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಕಾವೇರಿ ನದಿ ನೀರಿನ ಹಂಚಿಕೆ ವಿವಾದ ತಲೆದೋರಿದೆ. ಬಿಡದಿ ಟೌನ್ ಶಿಪ್ ನಿರ್ಮಾಣದ ವಿವಾದ ಭುಗಿಲೆದ್ದಿದೆ. ನಕಲಿ ಔಷಧಿಗಳ ದಂಧೆ ಬಯಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ವಿಶ್ವಾಸಾರ್ಹತೆಯ ಪ್ರಶ್ನೆಯೇ ಎದುರಾಗಿದೆ. ಸರಕಾರಿ ನೇಮಕಾತಿ, ಉತ್ತರ ಕರ್ನಾಟಕದ ಸಮಸ್ಯೆಗಳು ಇವೆ. ನೈಸ್ ರಸ್ತೆಯ ವಿಚಾರದಲ್ಲಿ ಹೈಕೋರ್ಟ್ ತೀರ್ಪು ಹೊರಬಿದ್ದಿದೆ. ಇಂತಹ ಗಂಭೀರ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿತ್ತು. ಅಂತಹ ಅವಕಾಶವನ್ನು ಬಿಜೆಪಿ, ಜೆಡಿಎಸ್ ಕಳೆದುಕೊಂಡಿತು. ಸರಕಾರಕ್ಕೆ ಇದು ವರವಾಯಿತು.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಹೈಕಮಾಂಡ್ ಕೆಳಗಿಳಿಸಿದ ನಂತರ ನಡೆದ ಮೊದಲ ಅಧಿವೇಶನ ಇದು. ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಏಕೆ ಇಳಿಸಿದ್ದೀರಿ, ಮಂತ್ರಿ ಮಂಡಲ ವಿಸ್ತರಣೆಗೆ ಎರಡು ತಿಂಗಳು ಏಕೆ ಆಯಿತು, ಖಾತೆ ಹಂಚಿಕೆಗೆ ಹತ್ತು ದಿನ ಬೇಕಿತ್ತಾ ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದನದಲ್ಲಿ ಪ್ರಶ್ನಿಸಿ ಸರಕಾರ ಹಾಗೂ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಬಹುದಿತ್ತು. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಅಧಿವೇಶನ ಮುಗಿದ ನಂತರ ಸದನದ ಹೊರಗೂ ಹೋರಾಟ ನಡೆಸಬಹುದಿತ್ತು. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಸದನವನ್ನೇ ತನ್ನ ರಾಜಕೀಯ ಮೇಲಾಟಕ್ಕೆ ಬಳಸಿತು. ದೆಹಲಿಯ ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರತಿಪಕ್ಷಗಳ ಗದ್ದಲದಲ್ಲೇ ಕೊಚ್ಚಿ ಹೋದಂತೆ ಕರ್ನಾಟಕದ ಉಭಯ ಸದನಗಳ ಮಳೆಗಾಲದ ಅಧಿವೇಶನವೂ ಆಯಿತು. ಅಲ್ಲಿ ಕಾಂಗ್ರೆಸ್ ಮಾಡಿದ್ದನ್ನು ಇಲ್ಲಿ ಬಿಜೆಪಿ ಮಾಡಿತು.
ಅಧಿವೇಶನದ ಗದ್ದಲದ ನಡುವೆಯೇ ಯಾವುದೇ ಚರ್ಚೆ ಇಲ್ಲದೇ ಮಹತ್ವದ ವಿಧೇಯಕವೊಂದನ್ನು ಅಂಗೀಕಾರವಾಯಿತು. ಪ್ರತಿಪಕ್ಷಗಳಿಗೆ ಈ ಬಗ್ಗೆ ಗಮನವೇ ಇಲ್ಲ. ಅದುವೇ ಕರ್ನಾಟಕ ಸರಕಾರದ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ- 2026. ಈ ವಿಧೇಯಕಕ್ಕೆ ರಾಜ್ಯಪಾಲರ ಸಹಿ ಬಿದ್ದರೆ ಸರಕಾರಿ ಉದ್ಯಾನಗಳು ಹಾಗೂ ತೋಟಗಾರಿಕೆ ಫಾರ್ಮ್‌ಗಳ ಒಟ್ಟು ವಿಸ್ತೀರ್ಣದಲ್ಲಿ ಶೇ.5 ರಷ್ಟು ಭೂಮಿಯನ್ನು ಸಾರ್ವಜನಿಕ ಮೂಲಸೌಕರ್ಯಗಳ ಉದ್ದೇಶಕ್ಕಾಗಿ ಬಳಸಲು ಅವಕಾಶವಾಗಲಿದೆ.
ಈ ವಿಧೇಯಕದಿಂದ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಹಾಗೂ ಇತರ ಉದ್ಯಾನವನಗಳಿಗೆ ಕುತ್ತು ಉಂಟಾಗುವ ಅಪಾಯವಿದೆ. ಬೆಂಗಳೂರಿನ ಹೆಬ್ಬಾಳ-ಕೇಂದ್ರ ರೇಷ್ಮೆ ಮಂಡಳಿ ಸುರಂಗ ರಸ್ತೆಗೆ ಜಾಗ ಬೇಕು. ಇದು 17 ಕಿ.ಮೀ ಉದ್ದದ ಸುರಂಗ ಮಾರ್ಗ. ಲಾಲ್‌ಬಾಗ್ ಸ್ವಲ್ಪ ಜಾಗ ಈ ಸುರಂಗ ಮಾರ್ಗಕ್ಕೆ ಬಳಕೆಯಾಗಲಿದೆ ಎನ್ನಲಾಗಿದೆ. ನಿವೃತ್ತ ಐಎಫ್‌ಎಸ್ ಅಧಿಕಾರಿ ಅ.ನ.ಯಲ್ಲಪ್ಪ ರೆಡ್ಡಿ ನೇತೃತ್ವದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಈ ವಿಧೇಯಕಕ್ಕೆ ಸಮ್ಮತಿ ನೀಡಬಾರದೆಂದು ಮನವಿ ಸಲ್ಲಿಸಿದೆ. ಬೆಂಗಳೂರಿನ ‘ಜಾಗೃತ ನಾಗರಿಕರು ಕರ್ನಾಟಕ’ ಸಂಘಟನೆಯೂ ಈ ವಿಧೇಯಕವನ್ನು ಬಲವಾಗಿ ವಿರೋಧಿಸಿದೆ. ಈ ವಿಧೇಯಕಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ವಿಧೇಯಕ ಅಂಗೀಕಾರವಾಗುವ ಕೆಲವೇ ಗಂಟೆಗಳ ಮುನ್ನ ಉದ್ಯಮಿ ಗೌತಮ್ ಅದಾನಿ ಮುಖ್ಯಮಂತ್ರಿ ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿರುವುದು ಕುತೂಹಲದ ವಿದ್ಯಮಾನ.
ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿ) ಕುರಿತು ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರತಿಪಕ್ಷಗಳು ಸದನದಲ್ಲಿ ಚರ್ಚಿಸಬಹುದಿತ್ತು. ನೈಸ್ ರಸ್ತೆ ಅಕ್ರಮದ ಬಗ್ಗೆ ಪ್ರತಿಪಕ್ಷಗಳು ಸರಕಾರವನ್ನು ಕಟ್ಟಿ ಹಾಕಬಹುದಿತ್ತು. ಆದರೆ, ಪ್ರತಿಪಕ್ಷಗಳಿಗೂ ಇದು ಕಷ್ಟವಿತ್ತು. ಏಕೆಂದರೆ, ಅವುಗಳೂ ಒಂದು ಕಾಲದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿತ್ತಲ್ಲವೇ? ಆಗ ಆ ಸರಕಾರಗಳು ಮಾಡಿದ್ದಾದರೂ ಏನು ಎಂಬ ತಿರುಗೇಟಿಗೆ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ.
ಸಂಸತ್ತು ಹಾಗೂ ವಿಧಾನಮಂಡಲಗಳಲ್ಲಿ ಕೆಲವು ವರ್ಷಗಳಿಂದ ಕಲಾಪಗಳೇ ಸುಸೂತ್ರವಾಗಿ ನಡೆಯುತ್ತಿಲ್ಲ. ಗದ್ದಲ, ಧರಣಿ, ಪ್ರತಿಭಟನೆಗಳದ್ದೇ ಕಾರುಬಾರು. ಇದಕ್ಕೆ ಆಡಳಿತ ಪಕ್ಷ ಎಷ್ಟು ಹೊಣೆಯೋ ಅಷ್ಟೇ ಜವಾಬ್ದಾರಿ ಪ್ರತಿಪಕ್ಷಗಳದ್ದೂ ಇವೆ. ಎಲ್ಲದಕ್ಕೂ ರಾಜಕೀಯ ಬೆರೆಸಿದರೆ ಆಗುವ ಪಾಡು ಇದು. ಸಂಸತ್ತು ಹಾಗೂ ವಿಧಾನಮಂಡಲಗಳನ್ನು ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯುತ್ತಾರೆ. ಶಾಸನ ಸಭೆಗಳಿಂದ ಹೊರಗೆ ಮಾಡಬೇಕಾದ ಹೋರಾಟ, ಪ್ರತಿಭಟನೆ, ಧರಣಿ ಸದನದ ಒಳಗೆ ನಡೆಯುತ್ತಿವೆ. ರಾಜಕೀಯ ಪಕ್ಷಗಳು ಸದನವನ್ನು ತನ್ನ ರಾಜಕೀಯ ಪ್ರತಿಷ್ಠೆಗೆ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಸದನವು ಮಾತಿನ ಮನೆ ಎಂದೇ ಹೆಸರು. ಇಲ್ಲಿ ವಾದ ಮಂಡಿಸಬೇಕು, ಚರ್ಚೆ ಸಾಗಬೇಕು. ಆದರೆ, ಅಂತಹ ವಾತಾವರಣ ಈಗ ವಿರಳ.
ಎಲ್ಲ ರಾಜಕೀಯ ಪಕ್ಷಗಳದ್ದೂ ಗುಣಮಟ್ಟದ ಗಂಭೀರ ಚರ್ಚೆಗಳು ನಡೆಯಬೇಕೆಂಬ ಆಶಯವೇ. ಆದರೆ, ವಾಸ್ತವವಾಗಿ ಅದನ್ನು ಸಾಧ್ಯವಾಗಿಸಲು ಯಾವ ಪಕ್ಷಗಳೂ ಸಿದ್ದವಿಲ್ಲ. ರಾಜಕೀಯದಲ್ಲಿ ಮೇಲುಗೈ ಸಾಧಿಸಲು ಸದನವನ್ನು ವೇದಿಕೆಯನ್ನಾಗಿಸಿಕೊಳ್ಳುವ ಪ್ರವೃತ್ತಿಯೇ ಹೆಚ್ಚು. ಆಡಳಿತ ಪಕ್ಷದಲ್ಲಿದ್ದಾಗ ಒಂದು ಧೋರಣೆ, ಅದೇ ಪಕ್ಷಗಳು ಪ್ರತಿಪಕ್ಷದ ಸಾಲಿನಲ್ಲಿ ಕುಳಿತಾಗ ಮತ್ತೊಂದು ನಿಲುವು. ಆಡಳಿತದಲ್ಲಿದ್ದಾಗ ಸದನದಲ್ಲಿ ಧರಣಿ, ಪ್ರತಿಭಟನೆಯನ್ನು ವಿರೋಧಿಸುವುದು, ಅದೇ ಪಕ್ಷ ಪ್ರತಿಪಕ್ಷದಲ್ಲಿ ಕುಳಿತಾಗ ಪ್ರತಿಭಟನೆ, ಧರಣಿಗೆ ಸದಾ ಮುಂದಾಗುವುದು. ಇದು ದ್ವಂದ್ವ ನೀತಿ.
ಸಂಸತ್ತು ಹಾಗೂ ವಿಧಾನಮಂಡಲದ ಕಲಾಪಗಳೆಂದರೆ ಒಂದು ಕಾಲದಲ್ಲಿ ಇಡೀ ದೇಶ ಹಾಗೂ ರಾಜ್ಯ ಅತ್ತ ಮನಸ್ಸು ನೆಡುತ್ತಿತ್ತು. ತಮ್ಮ ಬದುಕಿನ ಸುಧಾರಣೆಗೆ ಪರಿಹಾರ ಸಿಗಬಹುದೆಂಬ ವಿಶ್ವಾಸ ಹೊಂದಿತ್ತು. ಆದರೆ, ವರ್ಷಗಳು ಕಳೆದಂತೆ ಸಂಸತ್ತು ಹಾಗೂ ವಿಧಾನಮಂಡಲಗಳಲ್ಲಿ ಧನಿಕರು, ಕ್ರಿಮಿನಲ್ ಹಿನ್ನೆಲೆಯವರು ಪ್ರವೇಶಿಸತೊಡಗಿದರು. ಆಸಕ್ತ ಹಿತಾಸಕ್ತಿಗಳದ್ದೇ ಪಾರಪತ್ಯವಾಯಿತು. ಜನಪರ ಕಾಳಜಿ ಮರೆಯಾಗ ತೊಡಗಿತು. ಚುನಾವಣೆಯಿಂದ ಚುನಾವಣೆಗೆ ಹಣ, ತೋಳ್ಬಲದ ಪ್ರಭಾವ ಹೆಚ್ಚಾದಂತೆ ಬದ್ಧತೆಯ ಜನಪ್ರತಿನಿಧಿಗಳ ಸಂಖ್ಯೆ ಇಳಿಮುಖವಾಯಿತು. ಸದನದಲ್ಲಿ ಗುಣಮಟ್ಟದ ಚರ್ಚೆಗಳೂ ಮರೀಚಿಕೆಯಾದವು. ಮಹತ್ವದ ವಿಧೇಯಕಗಳು ಚರ್ಚೆಗಳಿಲ್ಲದೇ ಸದ್ದುಗದ್ದಲದ ಮಧ್ಯೆ ಅಂಗೀಕಾರಗೊಳ್ಳುವುದು ಸಾಮಾನ್ಯವಾದವು. ಇವುಗಳ ಒಟ್ಟು ಪರಿಣಾಮವೇ ಜನತಂತ್ರದ ಮೌಲ್ಯಗಳ ಕುಸಿತ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com