ಬಿಜೆಪಿ online desk
ಅಂಕಣಗಳು

ಡಿ-ಕೋಡ್: ಕಂಬಳಿ ಹುಳದಿಂದ ಚಿಟ್ಟೆಯಾಗುವ ಕಡೆಗೆ 'ಬಿಜೆಪಿ' ರೂಪಾಂತರ

1984ರ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಾಗ, ಈ ಪಕ್ಷದ ಅಸ್ತಿತ್ವವೇ ಪ್ರಶ್ನಾರ್ಹವಾಗಿತ್ತು. ಆಗ ಅದಕ್ಕೆ ಗ್ರಾಮೀಣ ಭಾಗದಲ್ಲಾಗಲಿ, ಕೆಳವರ್ಗದ ಸಮುದಾಯಗಳಲ್ಲಾಗಲಿ ಯಾವುದೇ ಭದ್ರ ನೆಲೆ ಇರಲಿಲ್ಲ.

ಪ್ರಕೃತಿಯಲ್ಲಿ ಒಂದು ಕಂಬಳಿ ಹುಳ ಹೇಗೆ ಹಂತ ಹಂತವಾಗಿ ಬೆಳೆದು, ಗೂಡು ಕಟ್ಟಿ, ಕೊನೆಗೆ ಬಣ್ಣಬಣ್ಣದ ಚಿಟ್ಟೆಯಾಗಿ ಹೊರಬಂದು ಎಲ್ಲೆಡೆ ಹಾರಾಡುತ್ತದೆಯೋ, ಬಿಜೆಪಿಯ ಕಥೆಯೂ ಅಷ್ಟೇ ಕುತೂಹಲಕಾರಿಯಾದ ಒಂದು ರಾಜಕೀಯ ರೂಪಾಂತರವಾಗುತ್ತಿದೆ.

ಆರಂಭದ ದಿನಗಳಲ್ಲಿ ಭಾರತೀಯ ಜನತಾ ಪಕ್ಷವು ಒಂದು ಕಂಬಳಿ ಹುಳದಂತೆಯೇ ಇತ್ತು. ಅದು ಹುಟ್ಟಿದ್ದು ಸೀಮಿತವಾದ ಪರಿಸರದಲ್ಲಿ ಎಂದೇ ಹೇಳಬಹುದು. ದೇಶದಲ್ಲಿ ಅತಿದೊಡ್ಡ ಮಾನವ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಬಲ ಅದಕ್ಕಿತ್ತು. ಆದರೂ ಸಂಖ್ಯಾತ್ಮಕವಾಗಿ ನೋಡಿದರೆ ಒಂದು ರಾಜಕೀಯ ಪಕ್ಷದ ವ್ಯಾಪ್ತಿಯ ಅವಶ್ಯಕತೆಯನ್ನು ಯಾವ ಸಂಘಟನೆಯೂ ಪೂರೈಸಲು ಸಾಧ್ಯವಿಲ್ಲ. ಜನರನ್ನು ತಲುಪುವ ಕೆಲಸವನ್ನು ಪಕ್ಷವು ತಾನೇ ಮಾಡಿಕೊಳ್ಳಬೇಕಾಗುತ್ತದೆ. ಜನಸಂಘದ ಹಿನ್ನೆಲೆ, ತುರ್ತು ಪರಿಸ್ಥಿತಿ ವೇಳೆ ದೊರಕಿದ ಪ್ರಸಿದ್ಧಿ ಎಲ್ಲದರ ನಂತರವೂ 1980ರ ದಶಕದಲ್ಲಿ ಆರಂಭವಾದ ಬಿಜೆಪಿಯು ಕೇವಲ ನಗರ ಪ್ರದೇಶದ, ಮೇಲ್ವರ್ಗದ ಮತ್ತು ವ್ಯಾಪಾರಿಗಳ ಪಕ್ಷ ಎಂಬ ಹಣೆಪಟ್ಟಿಯನ್ನೇ ಹೊತ್ತುಕೊಂಡಿತ್ತು. ಕಂಬಳಿ ಹುಳ ಹೇಗೆ ಒಂದೇ ಗಿಡದ ಎಲೆಗಳಿಗೆ ಸೀಮಿತವಾಗಿರುತ್ತದೆಯೋ, ಹಾಗೆಯೇ ಬಿಜೆಪಿ ಕೂಡ ಕೇವಲ ಉತ್ತರ ಭಾರತದ ಕೆಲವೇ ನಗರಗಳಿಗೆ ಸೀಮಿತವಾಗಿತ್ತು. ಈಗಲೂ ಕೆಲವರು ಬಿಜೆಪಿಯನ್ನು ಟೀಕಿಸುವಾಗ ಉತ್ತರ ಭಾರತದ ಪಕ್ಷ ಎಂದು ಟೀಕಿಸುತ್ತಾರೆ, ಆದರೆ ಪಕ್ಷ ಅದನ್ನು ಮೀರಿ ಬೆಳೆದಿದೆ ಎನ್ನುವುದು ಬೇರೆ ಮಾತು. 1984ರ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಾಗ, ಈ ಪಕ್ಷದ ಅಸ್ತಿತ್ವವೇ ಪ್ರಶ್ನಾರ್ಹವಾಗಿತ್ತು. ಆಗ ಅದಕ್ಕೆ ಗ್ರಾಮೀಣ ಭಾಗದಲ್ಲಾಗಲಿ, ಕೆಳವರ್ಗದ ಸಮುದಾಯಗಳಲ್ಲಾಗಲಿ ಯಾವುದೇ ಭದ್ರ ನೆಲೆ ಇರಲಿಲ್ಲ.

ಮೊದಲ ರೂಪಾಂತರ

ಆದರೆ 90ರ ದಶಕದಲ್ಲಿ ಈ ಕಂಬಳಿ ಹುಳ ತನ್ನ ರೂಪಾಂತರದ ಪ್ರಕ್ರಿಯೆಯನ್ನು (Metamorphosis) ಆರಂಭಿಸಿತು. ಎಲ್.ಕೆ. ಆಡ್ವಾಣಿಯವರ ರಥಯಾತ್ರೆ ಮತ್ತು ರಾಮಜನ್ಮಭೂಮಿ ಹೋರಾಟವು ಪಕ್ಷಕ್ಕೆ ಒಂದು ಹೊಸ ಚೈತನ್ಯ ನೀಡಿತು. ಇದು ಕಂಬಳಿ ಹುಳ ಒಂದು ಎಲೆಯಿಂದ ಮುಂದೆ ಸಾಗಿ ತನ್ನ ಸುತ್ತಲೂ ಗೂಡು (Cocoon) ಕಟ್ಟಿಕೊಂಡ ಸಮಯ. ಈ ಹಂತದಲ್ಲಿ ಪಕ್ಷವು ಹಿಂದುತ್ವದ ಅಡಿಯಲ್ಲಿ ಜನರನ್ನು ಒಗ್ಗೂಡಿಸಲು ಆರಂಭಿಸಿತು. ತೀರಾ ಕಟ್ಟ‌ರಪಂಥೀಯ ಎನ್ನುವಂತೆ ಕಾಣುವ ಹಿಂದುತ್ವದ ಘೋಷಣೆ ಜೊತೆಜೊತೆಗೇ ಅಟಲ್ ಬಿಹಾರಿ ವಾಜಪೇಯಿಯವರ ಅವಧಿಯಲ್ಲಿ ಮೈತ್ರಿ ರಾಜಕಾರಣದ ಮೂಲಕ ಅದು ತನ್ನ ಕಠಿಣ ನಿಲುವನ್ನು ಸ್ವಲ್ಪ ಸಡಿಲಿಸಿ, ಬೇರೆ ಬೇರೆ ಪಕ್ಷಗಳನ್ನು ಮತ್ತು ಜನವರ್ಗಗಳನ್ನು ಮುಟ್ಟಲು ಪ್ರಯತ್ನಿಸಿತು. ಹಾಗೆ ನೋಡಿದರೆ ವಾಜಪೇಯಿ ಪ್ರಸಿದ್ಧವಾದಷ್ಟು ಬಿಜೆಪಿ ಪ್ರಸಿದ್ಧವಾಗಲಿಲ್ಲ. ಇದೇ ಕಾರಣದಿಂದ ವಾಜಪೇಯಿ‌ ಅವರನ್ನು ಅನೇಕರು 'Right man in the Wrong party' ಎನ್ನುತ್ತಿದ್ದರು. ಅಂದರೆ ಆಗಲೂ ಬಿಜೆಪಿ ಸಂಪೂರ್ಣವಾಗಿ ಎಲ್ಲ ವರ್ಗದ ಪಕ್ಷವಾಗಿರಲಿಲ್ಲ. 2004ರ‌ ಚುನಾವಣೆಯಲ್ಲಿ ವಾಜಪೇಯಿ ಪ್ರಸಿದ್ಧಿಯ ಲಾಭ ಪಡೆದು ಮತ್ತೆ ಅಧಿಕಾರಕ್ಕೆ ಬರುವ ಬಿಜೆಪಿ ಹಾಗೂ ಒಟ್ಟಾರೆ ಎನ್‌ಡಿಎ ಪ್ರಯತ್ನ ಫಲ‌ ನೀಡದೆ ಸೋಲನುಭವಿಸಿತು.

ಪ್ರಮೋದ್ ಮಹಾಜನ್ ಎಂಬ ಮಿಂಚು

ಬಿಜೆಪಿಯು ಗೂಡಿನಿಂದ ಹೊರಬರಲು ಪ್ರಯತ್ನಗಳು ಪ್ರಮೋದ್ ಮಹಾಜನ್ ಕಾಲದಲ್ಲಿಯೇ ನಡೆದಿತ್ತು‌. ಬಡತನದಲ್ಲಿದ್ದುಕೊಂಡು, ಸರಳತೆಯ ಸೂತ್ರದಲ್ಲಿಯೇ ಪಕ್ಷವನ್ನು ಸಂಘಟಿಸುತ್ತಾಹೋದರೆ ಆಗುವುದಿಲ್ಲ. ಮುಖ್ಯವಾಗಿ ಉದ್ಯಮ ಜಗತ್ತನ್ನು ಸೆಳೆದುಕೊಳ್ಳಬೇಕು, ಶ್ರೀಮಂತಿಕೆಯಲ್ಲಿ ಪಕ್ಷವನ್ನು ನಡೆಸಬೇಕು ಎಂದು ತೀರ್ಮಾನಿಸಲಾಯಿತು. ಸಣ್ಣಪುಟ್ಟ ಕಲ್ಯಾಣಮಂಟಪದಲ್ಲಿ ನಡೆಯುತ್ತಿದ್ದ ಸಭೆಗಳು ದೊಡ್ಡ ಕನ್ವೆನ್ಷನ್ ಸೆಂಟರ್‌ಗಳು, ರೆಸಾರ್ಟ್‌ಗಳಲ್ಲಿ ನಡೆಯಲಾರಂಭಿಸಿದವು. ರಾಜ್ಯಗಳ ಪ್ರವಾಸಕ್ಕೆ ಬಂದಾಗ ಕಾರ್ಯಕರ್ತರ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದ ರಾಷ್ಟ್ರೀಯ ನಾಯಕರು ಹೋಟೆಲ್‌ಗಳಲ್ಲೇ ಉಳಿಯಲು ಆರಂಭಿಸಿದರು. ರಾಜ್ಯಮಟ್ಟದಲ್ಲಿ ದೊಡ್ಡದೊಡ್ಡ ಸುಸಜ್ಜಿತ ಕಾರ್ಯಾಲಯಗಳೂ ನಿರ್ಮಾಣಗೊಂಡವು. ಆದರೆ ಪ್ರಮೋದ್ ಮಹಾಜನ್ ಅವರ ಅಕಾಲಿಕ ಸಾವು ಈ ರೂಪಾಂತರದ ವೇಗವನ್ನು ತಗ್ಗಿಸಿತು.

ಮೋದಿ ಎಂಬ ಆಶಾವಾದ

ಇದೆಲ್ಲದರ ನಡುವೆಯೇ ಗುಜರಾತ್‌ನಲ್ಲಿ ಈ ರೂಪಾಂತರದ ಪ್ರಯತ್ನದ ಮೊಳಕೆ, ಬಿಜೆಪಿಯ ಆಶಾವಾದ ಜೀವಂತವಾಗಿತ್ತು. ನಿಜವಾದ ಪವಾಡ ನಡೆದದ್ದು 2014ರ ನಂತರದ 'ಮೋದಿ ಯುಗ'ದಲ್ಲಿ. ದೀರ್ಘಕಾಲದ ಸುಪ್ತಾವಸ್ಥೆಯ ನಂತರ ಗೂಡಿನಿಂದ ಹೊರಬಂದ ಆಕರ್ಷಕ ಚಿಟ್ಟೆಯಂತೆ ಬಿಜೆಪಿ ಸಂಪೂರ್ಣ ಹೊಸ ರೂಪದಲ್ಲಿ ಕಾಣಿಸಿಕೊಂಡಿತು. ಈ 'ಹೊಸ ಬಿಜೆಪಿ'ಗೆ ಈಗ ಕೇವಲ ಮೇಲ್ವರ್ಗದ ಬೆಂಬಲದ ರೆಕ್ಕೆ ಮಾತ್ರ ಇರಲಿಲ್ಲ, ಬದಲಿಗೆ ದಲಿತರು, ಹಿಂದುಳಿದವರು (OBC) ಮತ್ತು ಬುಡಕಟ್ಟು ಸಮುದಾಯದ ಬೆಂಬಲದ ಬಲವಾದ ರೆಕ್ಕೆಗಳೂ ಮೂಡಿದ್ದವು. ಈ ಹೊಸ ವರ್ಗವು ಬಿಜೆಪಿ ಬೆನ್ನಿಗೆ ನಿಂತಿದ್ದರಿಂದಲೇ ಪೂರ್ಣ ಬಹುಮತಕ್ಕೆ ಏರಲು ಸಾಧ್ಯವಾಯಿತು. ಆದರೆ ಈ ಬಾರಿ ಬಂದ ಹೊಸ ಅಲೆಯು ಮುಂದಿನ ಚುನಾವಣೆ ವೇಳೆಗೆ ಮತ್ತೆ ಸಮುದ್ರ ಸೇರುವ ಅಪಾಯ ಇತ್ತು.

ಆ ಅಲೆಯನ್ನು ತನ್ನಲ್ಲಿಯೇ ಇಂಗಿಸಿಕೊಳ್ಳಲು 'ಫಲಾನುಭವಿ' ಅಥವಾ 'ಲಾಭಾರ್ಥಿ' ಎಂಬ ಹೊಸ ವರ್ಗದ ಸೃಷ್ಟಿಗೆ ಕೇಂದ್ರ ಸರ್ಕಾರ ಮುಂದಾಯಿತು. ಈ ವೇಳೆಗಾಗಲೆ ಸರ್ಕಾರ ಹಾಗೂ ಪಕ್ಷದ 'ಕೇಂದ್ರ'ಗಳು ಒಂದೇ ಆಗಿದ್ದರಿಂದ ಕಾರ್ಯಯೋಜನೆಯ ಅನುಷ್ಠಾನಕ್ಕೆ ಯಾವ ಅಡ್ಡಿಯೂ ಬರಲಿಲ್ಲ. ಚಿಟ್ಟೆಯು ಹೂವಿನಿಂದ ಮಕರಂದ ಹೀರುವಂತೆ, ಜಾತಿ ಭೇದವಿಲ್ಲದೆ ತಲುಪಿದ ಉಚಿತ ಅನಿಲ ಸಂಪರ್ಕ, ಮನೆ, ಮತ್ತು ಬ್ಯಾಂಕ್ ಖಾತೆಗಳಂತಹ ಯೋಜನೆಗಳು, ಬಡವರು ಮತ್ತು ಹಿಂದುಳಿದ ವರ್ಗದವರು ಬಿಜೆಪಿಯತ್ತ ಆಕರ್ಷಿತರಾಗುವಂತೆ ಮಾಡಿದವು. ಇದರ ಫಲವನ್ನು 2019 ಹಾಗೂ 2024ರ ಚುನಾವಣೆಯಲ್ಲಿ ಪಕ್ಷವು ಕಂಡಿತು. ಈ ಅಲೆಯು (ಎಸ್‌ಸಿಎಸ್‌ಟಿ, ಒಬಿಸಿ) ಚುನಾವಣೆಗಳಲ್ಲಿ ತನ್ನ ಜೊತೆಗೆ ಇದೆಯಾದರೂ ಸಾಮಾಜಿಕ ಚರ್ಚೆ, ಹೋರಾಟ, ಕಥನ ನಿರೂಪಣೆ ವೇಳೆ ದೂರವಾಗುತ್ತಿರುವುದನ್ನು ಬಿಜೆಪಿ ಗುರುತಿಸಿದಂತೆ ಕಾಣುತ್ತದೆ. ಇದಕ್ಕೆ ಮುಖ್ಯ ಕಾರಣ, ಆ ಸಮುದಾಯಗಳಲ್ಲಿರುವ ಜನರು ಬಿಜೆಪಿ ಜೊತೆಗೆ ಇದ್ದಾರಾದರೂ ಅಲ್ಲಿನ ನಾಯಕತ್ವವು ಇನ್ನೂ ಪಕ್ಷದೊಟ್ಟಿಗೆ ಬಂದಿಲ್ಲ. ಆ ಸಮುದಾಯಗಳಿಂದ ಬಂದು ಬಿಜೆಪಿಯೊಟ್ಟಿಗೆ ಗುರುತಿಸಿಕೊಂಡವರಿಗೆ ಸಮುದಾಯದ ಮಟ್ಟದಲ್ಲಿ ಅಷ್ಟು ಬಲ ಇಲ್ಲ. ಹಾಗಾಗಿ ತನ್ನ ಪಕ್ಷದಲ್ಲಿರುವ ನಾಯಕರನ್ನು ನಿಜವಾಗಿ ಸಮುದಾಯದ ನಾಯಕರಾಗಿಸುವ ಅಥವಾ ಸಮುದಾಯದ ನಾಯಕರನ್ನು ತನ್ನವರನ್ನಾಗಿಸುವ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ.

ಇದಕ್ಕಾಗಿಯೇ ಪಕ್ಷವು ಅತ್ಯಂತ ಜಾಣ್ಮೆಯ ಆಟವಾಡುತ್ತಿದೆ. ಹಿಂದುಳಿದ ಮತ್ತು ದಲಿತ ಸಮುದಾಯವನ್ನು ಹಿಡಿದಿಟ್ಟುಕೊಳ್ಳಲು ಅವರಿಗೆ ಕೇವಲ ಯೋಜನೆಗಳನ್ನು ನೀಡುವುದಲ್ಲದೆ, ಅಧಿಕಾರದ ಪಾಲುದಾರರನ್ನಾಗಿಯೂ ಮಾಡುತ್ತಿದೆ. ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಮತ್ತು ಸಂಪುಟದಲ್ಲಿ ಅತಿ ಹೆಚ್ಚು ಒಬಿಸಿ ಸಚಿವರಿಗೆ ಸ್ಥಾನ ನೀಡಿರುವುದು ಇದಕ್ಕೆ ಸಾಕ್ಷಿ. ಇದರ ಜೊತೆಗೆ, ದೊಡ್ಡ ಹಿಂದುಳಿದ ಜಾತಿಗಳಿಗಿಂತ ಹೆಚ್ಚಾಗಿ, ಇದುವರೆಗೂ ಯಾರು ಗಮನಿಸದ ಸಣ್ಣ ಸಣ್ಣ ಹಿಂದುಳಿದ ಉಪಜಾತಿಗಳನ್ನು (ಉದಾಹರಣೆಗೆ ವಿಶ್ವಕರ್ಮ ಸಮುದಾಯ) ಗುರುತಿಸಿ ಅವರಿಗೆ ಗೌರವ ನೀಡುವ ಮೂಲಕ ಪಕ್ಷವು ತಳಮಟ್ಟದಲ್ಲಿ ಭದ್ರವಾಗಿ ಬೇರೂರುತ್ತಿದೆ.

ಮೂಲದಲ್ಲಿ ಅಸಮಾಧಾನ

ಇಷ್ಟೆಲ್ಲಾ ಹೊಸ ವರ್ಗಗಳನ್ನು ತಲುಪುವಾಗ, ತನ್ನ ಹಳೆಯ ಮತ್ತು ಮೂಲ ಮತಬ್ಯಾಂಕ್ ಆಗಿರುವ ತಥಾಕಥಿತ ಮೇಲ್ವರ್ಗ ಅಥವಾ 'ಜನರಲ್ ಕೆಟಗರಿ'ಯನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂಬ ಮಾತು ಆಗಾಗ್ಗೆ ಕೇಳಿ ಬರುತ್ತಲೇ ಇದೆ. ಚಿಟ್ಟೆಗೆ ಹಾರಲು ಎರಡೂ ರೆಕ್ಕೆಗಳು ಹೇಗೆ ಮುಖ್ಯವೋ, ಹಾಗೆಯೇ ಬಿಜೆಪಿಗೆ ಹಳೆಯ ಮತ್ತು ಹೊಸ ಮತದಾರರು ಇಬ್ಬರೂ ಮುಖ್ಯ. ಮೇಲ್ವರ್ಗದ ಮತದಾರರಿಗೆ ತಾನು ಎಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದೇನೆಯೋ ಎಂಬ ಆತಂಕ ಬಂದಾಗಲೆಲ್ಲಾ, ಬಿಜೆಪಿ ಅವರಿಗೆ ಶೇ.10 ಆರ್ಥಿಕ ಮೀಸಲಾತಿಯಂತಹ (EWS) ಉಡುಗೊರೆ ನೀಡಿದೆ. ಯಾವಾಗೆಲ್ಲಾ ಜಾತಿ ಸಮೀಕರಣಗಳು ಪಕ್ಷಕ್ಕೆ ಕಷ್ಟ ತಂದೊಡ್ಡುತ್ತವೆಯೋ, ಆಗ 'ಹಿಂದುತ್ವ' ಮತ್ತು 'ರಾಷ್ಟ್ರೀಯ ಭದ್ರತೆ' ಎಂಬ ಭಾವನಾತ್ಮಕ ನಂಟು ಈ ಎಲ್ಲ ವರ್ಗಗಳನ್ನು ಒಂದೇ ಸೂರಿನಡಿ ಹಿಡಿದಿಡುತ್ತದೆ.

ಹೊಸ ಅಲೆಯನ್ನು ಹಿಡಿದಿಡಲು ಬಿಜೆಪಿ ಪ್ರಯತ್ನ ತೀವ್ರಗೊಂಡಂತೆಯೇ ತನ್ನ ಸಾಂಪ್ರದಾಯಿಕ ಮತಬ್ಯಾಂಕಿನಿಂದ ಹೆಚ್ಚೆಚ್ಚು ಬೆದರಿಕೆಯನ್ನೂ ಎದುರಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಮೇಲ್ವರ್ಗದವರನ್ನು ಕಡೆಗಣಿಸಲಾಗುತ್ತಿದೆ ಎಂಬ ಕೂಗು ಹೆಚ್ಚೆಚ್ಚು ಕೇಳಿಬರುತ್ತಿದೆ. ಇದೀಗ ಯುಜಿಸಿ ಸಮಾನತೆ ನಿಯಮಾವಳಿಗಳು ಜನರಲ್ ಕೆಟಗರಿ ಮತದಾರರನ್ನು ಅಸಮಾಧಾನಕ್ಕೆ ದೂಡಿದೆ. ಆದರೆ ಬಿಜೆಪಿ ತನ್ನ ಹೆಜ್ಜೆಯನ್ನು ಹಿಂದಿಡುವ ಹಂತವನ್ನು ದಾಟಿ ಮುಂದೆ ಸಾಗಿದೆ. ಆ ಪಕ್ಷದ ಮೇಲೆ ಥತಾಕಥಿತ ಮೇಲ್ವರ್ಗ ಹೊಂದಿದ್ದ 'Exlusivity' ಮುಂದಿನ ದಿನಗಳಲ್ಲಿ ಹೋಗಲಿದೆ.

ಇನ್ನೊಂದೆಡೆ ಕಾಂಗ್ರೆಸ್ ಪಕ್ಷಕ್ಕೆ ಈ 'ರೂಪಾಂತರದ' ಸಮಸ್ಯೆ ಇಲ್ಲ. ಆ ಪಕ್ಷವು ರಾಷ್ಟ್ರೀಯತೆಯ ತನ್ನ ಆರಂಭದ ದಿನಗಳಿಂದ ಮುಸ್ಲಿಂ ಓಲೈಕೆ,‌ ಇಂದಿರಾ ಗಾಂಧಿ ಕಾಲದಲ್ಲಿ ಹಿಂದುತ್ವದ ಪರವಾದ ಐಡೆಂಟಿಟಿ, ಅಂಬೇಡ್ಕರ್ ಪರ ಎನ್ನುವ ಹಣೆಪಟ್ಟಿ... ಹೀಗೆ ಸಮಾಜದ ಎಲ್ಲ ವರ್ಗಗಳನ್ನೂ ತಲುಪುವ ಪ್ರಕ್ರಿಯೆಯಲ್ಲಿ ಪೂರ್ಣವೃತ್ತವನ್ನು ಮುಗಿಸಿಯಾಗಿದೆ. ಆ ಪಕ್ಷ ಇನ್ನೇನಿದ್ದರೂ, ಈ ಹಿಂದೆ ಮಾಡಿದ ಯಾವುದಾದರೊಂದು 'ಸಫಲ ಪ್ರಯೋಗ'ವನ್ನು ಗುರುತಿಸಿ ಈಗಿನ ಸಂದರ್ಭಕ್ಕೆ ಹೊಂದಿಸಿಕೊಂಡು ಪ್ರಸ್ತುತವಾಗಬೇಕು ಅಷ್ಟೆ. ಬಿಜೆಪಿಯಂತೆ, ಹೊಸದಾಗಿ ರೂಪಾಂತರ ಆಗಬೇಕಾಗ ಅಗತ್ಯವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಒಂದು ಕಾಲದಲ್ಲಿ ಕೇವಲ ನಗರದ ಕೆಲವೇ ಜನರಿಗೆ ಸೀಮಿತವಾಗಿದ್ದ ಬಿಜೆಪಿ ಎಂಬ ಕಂಬಳಿ ಹುಳ, ಇಂದು ಜಾತಿ, ಪ್ರಾದೇಶಿಕತೆ ಮತ್ತು ಭಾಷೆಯ ಗಡಿಗಳನ್ನು ಮೀರಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಾರಾಡುವ ಬಲಿಷ್ಠವಾದ ಚಿಟ್ಟೆಯಾಗಿ ರೂಪಾಂತರಗೊಂಡಿದೆ. ಹಳೆಯ ಬೇರುಗಳನ್ನು ಕತ್ತರಿಸದೆ, ಹೊಸ ಚಿಗುರುಗಳನ್ನು ಸೇರಿಸಿಕೊಳ್ಳುವ, ಹಿಡಿದಿಟ್ಟುಕೊಳ್ಳುವ ಈಗಿನ ಪ್ರಯತ್ನದಲ್ಲಿ ಒಂದಷ್ಟು ಮೂಲ ಬೇರುಗಳು ದೂರಾಗುವುದು ಅನಿವಾರ್ಯ. ಇದರ ಲಾಭ ಒಂದಷ್ಟುಮಟ್ಟಿಗಾದರೂ ಕಾಂಗ್ರೆಸ್‌ಗೆ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

- ರಮೇಶ್ ದೊಡ್ಡಪುರ

journoramesha@gmail.com

ವಿ.ಸೂ: ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ವೈಯಯಕ್ತಿಕವಾದವು. ಅವರು ಕಾರ್ಯನಿರ್ವಹಿಸುವ ಸಂಸ್ಥೆಗಾಗಲಿ, ಇದೀಗ ಲೇಖನ ಪ್ರಕಟಿಸಿರುವ ಸಂಸ್ಥೆಗಾಗಲಿ ಅದು ಸಂಬಂಧಿಸಿರುವುದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಯೋತ್ಪಾದನೆ ಬಗ್ಗೆ ಭಾರತ ಯಾವುದೇ ದ್ವಿಮುಖ ನೀತಿಯನ್ನು ಹೊಂದಿಲ್ಲ, ರಾಜಿಯ ಪ್ರಶ್ನೆಯೇ ಇಲ್ಲ: ಪ್ರಧಾನಿ ಮೋದಿ-Video

ಆಪ್ತ ಮಿತ್ರನಿಗೆ ಕೈ ಕೊಟ್ಟ ಭಾರತ?; ಅಮೆರಿಕಾ ಹೇಳಿದ್ದೇ ನಿಜವಾಯ್ತಾ?

300ಕ್ಕೂ ಹೆಚ್ಚು ಪತ್ರಕರ್ತರ ಉದ್ಯೋಗಕ್ಕೆ ಕತ್ತರಿ: ಆಕ್ರೋಶ ಬೆನ್ನಲ್ಲೇ 'The Washington Post' CEO ವಿಲ್ ಲೂಯಿಸ್ ರಾಜೀನಾಮೆ

ಹಂಪಿ ಬಳಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಆರೋಪಿಗಳು ದೋಷಿ ಎಂದು ಕೋರ್ಟ್ ಮಹತ್ವದ ತೀರ್ಪು, ಫೆ.16ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ..!

ನಂಬಿಕೆಯೇ ಭಾರತದ ಬಲಿಷ್ಠ ಕರೆನ್ಸಿ: ಮಲೇಷ್ಯಾದಲ್ಲಿ ಪ್ರಧಾನಿ ಮೋದಿ

SCROLL FOR NEXT