ಉಕ್ರೇನ್-ರಷ್ಯ ಯುದ್ಧದಿಂದ ಆರಂಭಿಸಿ, ಟ್ರಂಪ್ ವ್ಯಾಪಾರ ಸಮರದವರೆಗೆ ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವ ಜಾಗತಿಕ ವಿದ್ಯಮಾನಗಳ್ಯಾವವೂ ಆಕಸ್ಮಿಕಗಳಲ್ಲ ಅಥವಾ ತತ್ಕಾಲದ ಸಂಘರ್ಷಗಳೂ ಅಲ್ಲ; ಬದಲಿಗೆ ಜಾಗತಿಕ ವ್ಯವಸ್ಥೆಯಲ್ಲಾಗುತ್ತಿರುವ ಪರಿವರ್ತನೆ ಎಂಬುದು ಈಗ ಎಲ್ಲರಿಗೂ ಸ್ಪಷ್ಟವಾಗುತ್ತಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಮಾತುಗಳಲ್ಲಿ ಈ ಅಂಶವನ್ನು ಹೇಳಿದ್ದಾರೆ. “ಎರಡನೇ ವಿಶ್ವಯುದ್ಧದ ನಂತರ ಭಿನ್ನ ಜಾಗತಿಕ ವ್ಯವಸ್ಥೆಯೊಂದು ರೂಪುಗೊಂಡಿತ್ತು. ಏಳು ದಶಕಗಳ ನಂತರ ಆ ವ್ಯವಸ್ಥೆ ಮರು ರಚನೆ ಆಗುತ್ತಿದೆ. ಈ ಹಂತದಲ್ಲಿ ಭಾರತದ ಪ್ರಾಮುಖ್ಯವು ಹೆಚ್ಚಾಗಿದೆ” ಎಂಬುದವರ ಮಾತಿನ ಸಾರ.
ಈ ಬದಲಾವಣೆ ಯಾವೆಲ್ಲ ಹಂತಗಳಲ್ಲಿ ಆಗುತ್ತಿದೆ ಎಂಬುದರ ಬಗ್ಗೆ ತೆರೆದ ಕಿಟಕಿಯಲ್ಲಿ ಹಲವು ನೋಟಗಳನ್ನು ಈ ಹಿಂದೆ ಒದಗಿಸಲಾಗಿದೆ. ಯುರೋಪ್, ಗಲ್ಫ್ ಜತೆ ಭಾರತದ ಖದರು ವ್ಯಾಪಾರದ್ದು ಮಾತ್ರವಾ ಎಂಬ ಬರಹವೂ ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದಲ್ಲದೇ ಅದು ಹಾಗೆ ಆಗುತ್ತಿರುವುದು ಏಕೆ ಎಂಬ ತರ್ಕವನ್ನೂ ಬಿಡಿಸಿಟ್ಟಿತ್ತು. ಇದೀಗ, ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಇನ್ನೊಂದು ಸೂಚನೆ ಹಾಗೂ ಮತ್ತೊಂದು ಕಥಾಭಾಗವನ್ನು ನೋಡೋಣ. ಅದೆಂದರೆ ಜಪಾನ್.
ಜಪಾನ್ ಮತ್ತೆ ಮಿಲಿಟರಿ ಬಲವಾಗುವತ್ತ ಸಿದ್ಧತೆ ನಡೆಸಿದೆ, ಈ ಬಗ್ಗೆ ಜಗತ್ತು ಎಚ್ಚೆತ್ತುಕೊಳ್ಳಬೇಕು ಎಂದು ಚೀನಾ ಅಲವತ್ತುಕೊಂಡಿದೆ! ಚೀನಾ ಮತ್ತು ಜಪಾನ್ ಹಲವು ದ್ವೀಪಗಳ ಯಜಮಾನಿಕೆ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿರುವುದು ತಿಳಿದಿರುವ ಸಂಗತಿಯೇ. ಪೂರ್ವ ಚೀನಾ ಸಮುದ್ರ ಭಾಗದಲ್ಲಿ ಈ ಎರಡು ದೇಶಗಳ ನಡುವೆ ಆಗಾಗ ಸಣ್ಣಪುಟ್ಟ ತಿಕ್ಕಾಟಗಳು ತೆರೆದುಕೊಳ್ಳುತ್ತಲೇ ಇರುತ್ತವೆ. ಆದರೆ, ಚೀನಾವು ಈವರೆಗೆ ಜಪಾನ್ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಅಮೆರಿಕದ ಜತೆ ಜಪಾನ್ ಕೈಜೋಡಿಸಿಕೊಂಡಿದೆ ಎಂಬುದಷ್ಟೇ ಚೀನಾಕ್ಕಿದ್ದ ತಲೆಬಿಸಿ ಆಗಿತ್ತೇ ಹೊರತು, ಸ್ವಂತ ಸಾಮರ್ಥ್ಯದಲ್ಲಿ ಜಪಾನಿನ ಸೇನಾಬಲವು ತನ್ನೆದುರು ಯಾವ ಲೆಕ್ಕಕ್ಕೂ ಇಲ್ಲ ಎಂಬುದು ಚೀನಾಕ್ಕೆ, ಅಷ್ಟೇ ಏಕೆ, ಜಗತ್ತಿಗೇ ಗೊತ್ತಿರುವ ಸಂಗತಿ.
ಇದೀಗ, ಅಮೆರಿಕವು ತಾನು ಬೇರೆ ದೇಶದ ಪರವಾಗಿ ಮಿಲಿಟರಿ ಖರ್ಚು ಮಾಡುವುದಕ್ಕೆ ತಯಾರಿಲ್ಲ ಎಂಬಂತಹ ಸೂಚನೆಗಳನ್ನು ಕೊಡುತ್ತಿರುವಾಗ, ಏಷ್ಯದ ವಿಚಾರದಲ್ಲಂತೂ ಚೀನಾಕ್ಕೆ ಅದು ನಿರಾಳ ಒದಗಿಸಬೇಕಿತ್ತು. ಆದರೆ, ಚೀನಾದ ವಿದೇಶ ಸಚಿವರೂ ಸೇರಿದಂತೆ ಅಲ್ಲಿನ ಸರ್ಕಾರದ ಪ್ರಮುಖರು ಜಪಾನ್ ವಿರುದ್ಧ ವಾಗ್ದಾಳಿಯ ಮೊನಚು ಹೆಚ್ಚಿಸಿದ್ದಾರೆ. ಅದಕ್ಕೆ ಕಾರಣವೆಂದರೆ ಜಪಾನ್ ಮರಳಿ ಪಡೆಯಲು ಹೊರಟಿರುವ ಕ್ಷಾತ್ರಭಾವ. ಇತ್ತೀಚೆಗೆ ಜಪಾನಿನ ಪ್ರಧಾನಿ, “ಚೀನಾ ಏನಾದರೂ ತೈವಾನ್ ವಿಚಾರದಲ್ಲಿ ಮುಂದುವರಿದರೆ, ಅದು ಜಪಾನಿಗೆ ಅಸ್ತಿತ್ವದ ಆತಂಕವನ್ನು ತಂದೊಡ್ಡುತ್ತದೆ. ಹೀಗಾಗಿ ಮಿಲಿಟರಿ ಕೋನದಿಂದಲೂ ನಾವು ಯೋಚಿಸಬೇಕಾಗಿದೆ” ಎಂದಿರುವುದು ಚೀನಾವನ್ನು ಇನ್ನಿಲ್ಲದ ಕ್ರೋಧಕ್ಕೆ ದೂಡಿದೆ. ಫೆಬ್ರವರಿ 14ರಂದು ಜರ್ಮನಿಯಲ್ಲಿ ನಡೆದ ಮ್ಯೂನಿಕ್ ಭದ್ರತಾ ಶೃಂಗದಲ್ಲೂ ಚೀನಾದ ವಿದೇಶ ಸಚಿವ ವಾಂಗ್ ಯಿ ಜಪಾನ್ ವಿರುದ್ಧವೇ ಧ್ವನಿ ಮೊಳಗಿಸಿದ್ದಾರೆ. ಚೀನಾದ ವಿದೇಶ ಸಚಿವರ ಮಾತಿನ ಸಾರಾಂಶವಿಷ್ಟು: ಜಗತ್ತಿನ ಇತರ ಭಾಗಗಳಿಗೆ ಹೋಲಿಸಿದರೆ ಏಷ್ಯದ ಫೆಸಿಫಿಕ್ ಪ್ರಾಂತ್ಯವು ಶಾಂತತೆಯಿಂದಿದೆ. ಆದರೆ ಆತಂಕವಿರುವುದು ಜಪಾನಿನಿಂದ. ಕಳೆದ 80 ವರ್ಷಗಳಲ್ಲಿ ಇರದಾಗಿದ್ದ ಮಿಲಿಟರಿ ಆಕ್ರಮಕ ಧೋರಣೆಯನ್ನು ಜಪಾನ್ ತೋರಿಸುತ್ತಿದೆ. ಈ ಬಗ್ಗೆ ಜಗತ್ತು ಎಚ್ಚೆತ್ತುಕೊಳ್ಳಬೇಕು ಎನ್ನುವುದು.
ಕಳೆದೊಂದು ದಶಕದಲ್ಲಿ ಜಪಾನ್ ತನ್ನ ಮಿಲಿಟರಿ ವೆಚ್ಚವನ್ನು ಹಂತಹಂತವಾಗಿ ಹೆಚ್ಚಿಸಿಕೊಳ್ಳುತ್ತಿರುವುದಂತೂ ಹೌದು. 2026ರಲ್ಲಿ ಅದು ಗುರುತು ಮಾಡಿಕೊಂಡಿರುವ ಮಿಲಿಟರಿ ಆಯವ್ಯಯವು ಡಾಲರಿನ ಲೆಕ್ಕದಲ್ಲಿ 60 ಬಿಲಿಯನ್. ಇದು ಅದರ ಇತಿಹಾಸದಲ್ಲೇ ಅತಿದೊಡ್ಡ ಮಿಲಿಟರಿ ಬಜೆಟ್.
ಅರೆ, ಯಾವುದೇ ದೇಶ ತನ್ನ ಮಿಲಿಟರಿ ಬಲ ವೃದ್ಧಿಸಿಕೊಳ್ಳುವುದು ಸಹಜ ಪ್ರಕ್ರಿಯೆ ಅಲ್ಲವೇ? ಜಪಾನ್ ಎಂಬುದು ತಂತ್ರಜ್ಞಾನ ಕೌಶಲದ ಪರಿಶ್ರಮಿಗಳ ದೇಶ. ಅದರ ವಿಚಾರದಲ್ಲಿ ಮಿಲಿಟರಿ ಬಲವರ್ಧನೆ ಎಂಬುದು ಅದೇಕೆ ಚರ್ಚೆಯ ಇಲ್ಲವೇ ಅಚ್ಚರಿಯ ವಿಷಯವಾಗಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಸಹಜವಾಗಿ ಮೂಡಬಹುದು. ಅದಕ್ಕೂ ಮೊದಲು, ವಾಹನೋದ್ದಿಮೆ, ಗ್ರಾಹಕ ಬಳಕೆಯ ಯಂತ್ರಗಳ ವಿಷಯದಲ್ಲಿ ತಂತ್ರಜ್ಞಾನದ ಮೇರುಗತಿಯನ್ನೇ ಸಾಧಿಸಿರುವ ಜಪಾನ್, ಅದನ್ನೇ ಮಿಲಿಟರಿ ವಿಚಾರದಲ್ಲೇಕೆ ಸಾಧಿಸಿದ ಸುದ್ದಿ ಹೆಚ್ಚಾಗಿ ಓದಲಿಕ್ಕೆ, ಕೇಳಲಿಕ್ಕೆ ಸಿಗುವುದಿಲ್ಲ ಎಂಬ ಕೌತುಕದ ಪ್ರಶ್ನೆಯೂ ಮೊಳೆಯಲೇಬೇಕಲ್ಲವೇ? ಇದಕ್ಕೆ ಉತ್ತರ ಇರುವುದು ಮತ್ತದೇ ಅಮೆರಿಕದಲ್ಲಿ. ಇದೀಗ ಅಮೆರಿಕ ಪ್ರಣೀತ ಜಾಗತಿಕ ವ್ಯವಸ್ಥೆಯಲ್ಲಿ ಬದಲಾವಣೆ ಸನ್ನಿಹಿತವಾಗುತ್ತಲೇ ಮತ್ತೆ ಜಪಾನಿನ ಮಿಲಿಟರಿ ಆಯಾಮದ ಮೇಲೆ ಗಮನ ಹೋಗುತ್ತಿರುವುದು ಸ್ವಾಭಾವಿಕವೇ ಆಗಿದೆ. ಅದೇಕೆ ಹಾಗೆ ಎಂಬುದಕ್ಕೆ ಮತ್ತೆ ಇತಿಹಾಸಕ್ಕೆ ಮರಳಬೇಕು. ಈಗ ಯಾವ ಜಾಗತಿಕ ವ್ಯವಸ್ಥೆ ಬದಲಾಗುವುದಕ್ಕೆ ಸಿದ್ಧವಾಗುತ್ತಿದೆಯೋ, ಅಂಥ ಜಾಗತಿಕ ವ್ಯವಸ್ಥೆ ರೂಪುಗೊಂಡಿದ್ದ ಎರಡನೇ ವಿಶ್ವಯುದ್ಧದ ಅಂತ್ಯದ ಭಾಗಕ್ಕೆ ಹೋಗಿ ನಿಲ್ಲಬೇಕು.
ಆಗಸ್ಟ್ 1945ರಲ್ಲಿ ಜಪಾನ್ ಶರಣಾಯಿತು. ಆಗ ಅಮೆರಿಕ ಪ್ರಣೀತ ಪಾಶ್ಚಾತ್ಯ ಪಡೆ ಜಪಾನಿನಿಂದ ಯುದ್ಧದ ಹಾನಿ ತುಂಬಿಸಿಕೊಳ್ಳುವುದಕ್ಕೆ ತಮ್ಮ ಪ್ರತಿಕ್ರಿಯೆಯನ್ನು ಸೀಮಿತವಾಗಿಸಲಿಲ್ಲ. ಬದಲಿಗೆ ಅಮೆರಿಕದ ಸೇನೆಯೇ ಜಪಾನಿಗೆ ಹೋಗಿ ಕುಳಿತಿತು. 1952ರವರೆಗೂ ಜಪಾನಿನಲ್ಲಿಯೇ ಬೀಡುಬಿಟ್ಟಿದ್ದ ಅಮೆರಿಕದ ಪ್ರತಿನಿಧಿತ್ವವು ಆ ದೇಶವನ್ನು ಅಕ್ಷರಶಃ ನಿಶ್ಶಸ್ತ್ರಗೊಳಿಸಿಬಿಟ್ಟಿತು. ಅಲ್ಲಿನ ಪ್ರತಿ ಸಂಸ್ಥೆಗಳು, ಅರ್ಥ ವ್ಯವಸ್ಥೆ ಎಲ್ಲವೂ ಅಮೆರಿಕದ ನೀತಿ ನಿರೂಪಣೆ ಅಡಿಗೆ ಬಂದಿತು. ಅಮೆರಿಕದ ಆಶಯದಂತೆಯೇ 1947ರಲ್ಲಿ ಜಪಾನಿನ ಸಂವಿಧಾನವನ್ನು ರೂಪಿಸಿ, ಅವತ್ತಿಗೆ ಜಗತ್ತಿನ ಅತಿ ಪ್ರಮುಖ ಸೇನಾಬಲವಾಗಿದ್ದ ಜಪಾನ್ ಅನ್ನು, ಭೂ-ಜಲ-ವಾಯುಸೇನೆಗಳಲ್ಲಿ ಪ್ರತಿಬಂಧಗಳನ್ನು ಹಾಕಿ, ಹೆಸರಿಗೆ ಮಾತ್ರ ಶಸ್ತ್ರಬಲವನ್ನಿರಿಸಿಕೊಳ್ಳುವಂತೆ ಮಾಡಲಾಯಿತು. ಅಲ್ಲಿಗೆ, ಹೇಗೆ ಅಮೆರಿಕವು ಮುಂದಿನ ವರ್ಷಗಳಲ್ಲಿ ತೈಲರಾಷ್ಟ್ರಗಳನ್ನು ಸುರಕ್ಷತೆಯ ಭರವಸೆ ಕೊಡುವ ಮೂಲಕ ಡಾಲರ್ ಅನ್ನು ಪ್ರತಿಷ್ಟಾಪಿಸಿಕೊಂಡಿತೋ, ಅಂತಹುದೊಂದು ಮಾದರಿಯನ್ನು ಬಹಳ ಹಿಂದೆಯೇ ಜಪಾನ್ ಪಾಲಿಗೆ ಅನಿವಾರ್ಯವನ್ನಾಗಿಸಿತ್ತು.
ಇದೇ ಕಾರಣಕ್ಕಾಗಿಯೇ ವಾಹನೋದ್ದಿಮೆ, ಗೃಹ ಬಳಕೆ ಉಪಕರಣಗಳು ಇಲ್ಲೆಲ್ಲ ತಂತ್ರಜ್ಞಾನದಲ್ಲಿ ಜಾಣ ಎನಿಸಿರುವ ಜಪಾನ್ ಅದೇ ಕೌಶಲವನ್ನು ಮಿಲಿಟರಿ ಸಲಕರಣೆಗಳಲ್ಲಿ ತೋರಿಸಿಲ್ಲ. ಏಕೆಂದರೆ, ಕಳೆದ ಎಂಟು ದಶಕಗಳಲ್ಲಿ ಅಲ್ಲಿ ಮಿಲಿಟರಿ ಉದ್ದಿಮೆ ತಲೆಎತ್ತದಂತೆ ಅಮೆರಿಕವೇ ಕಾದುಕೊಂಡು ಬಂದಿದೆ. ಯಾವೆಲ್ಲ ಕೈಗಾರಿಕೋದ್ದಿಮೆಗಳು ಜಪಾನಿನ ರಕ್ಷಣಾ ಉದ್ದಿಮೆಯೊಂದಿಗೆ ತಳುಕು ಹಾಕಿಕೊಂಡಿದ್ದವೋ ಅವನ್ನೆಲ್ಲ ಅಮೆರಿಕವು ನಾಲ್ಕೈದು ಭಾಗಗಳಲ್ಲಿ ವಿಭಜಿಸಿತು. ಜಪಾನಿನಲ್ಲಿ ಶಸ್ತ್ರಾಸ್ತ್ರ ಉತ್ಪಾದನೆ, ಸೇನಾ ತರಬೇತಿ ಎರಡಕ್ಕೂ ಅವಕಾಶವಿಲ್ಲದಂತೆ ಮಾಡಲಾಯಿತು. ವ್ಯಂಗ್ಯವೆಂದರೆ, ಹೀಗೆ ಜಪಾನ್ ಅನ್ನು ಹೋರಾಡಲು ಸಮರ್ಥವಿಲ್ಲದ ಹಾಗೆ ಮಾಡುತ್ತಿರುವ ಹೊತ್ತಿನಲ್ಲೇ, 1948-49ರ ವೇಳೆಗೆ ಅಮೆರಿಕವು ಅದೇ ಜಪಾನ್ ನೆಲದಲ್ಲಿ ನಿಂತುಕೊಂಡು ವಿಯೆಟ್ನಾಂ ಮತ್ತು ಕೊರಿಯಾ ಯುದ್ಧಗಳಲ್ಲಿ ಪಾಲ್ಗೊಂಡಿತು.
ಜಪಾನ್ ಮಿಲಿಟರಿ ತಂತ್ರಜ್ಞಾನಗಳ ಕಡೆಗೆ ಕಣ್ಣೆತ್ತಿಯೂ ನೋಡಬಾರದು. ಅದೇನಿದ್ದರೂ ಆರ್ಥಿಕ ಉತ್ಪಾದನೆಗಳತ್ತ ಗಮನಹರಿಸಲಿ. ಅದರ ಸುರಕ್ಷತೆಯ ಜವಾಬ್ದಾರಿಯನ್ನು ಅಮೆರಿಕವೇ ಹೊರುತ್ತದೆ ಎಂಬುದು ಅವತ್ತಿನ ತತ್ತ್ವವಾಗಿತ್ತು. ಆದರೆ, ಅಲ್ಲೂ ಪರಿಶ್ರಮಿ ಜಪಾನಿಯರು ದಾರಿ ಕಂಡುಕೊಂಡುಬಿಟ್ಟರು. ಮಿಲಿಟರಿ ಸುದ್ದಿಗೆ ಹೋಗದೇ ತಮ್ಮೆಲ್ಲ ಶಕ್ತಿಯನ್ನು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿದ ಪರಿಣಾಮವಾಗಿ 80ರ ದಶಕದಲ್ಲಿ ಜಪಾನಿನ ವಸ್ತುಗಳು ಜಗತ್ತಿನ ಮಾರುಕಟ್ಟೆಯನ್ನು ಆಳತೊಡಗಿದವು. ಜಪಾನಿನ ಕಂಪನಿಗಳು ಅಮೆರಿಕದ ಸಂಪನ್ಮೂಲಗಳನ್ನೇ ಖರೀದಿಸತೊಡಗಿದವು. ಎಚ್ಚೆತ್ತ ಅಮೆರಿಕವು ಪ್ಲಾಜಾ ಒಪ್ಪಂದ ಎಂಬ ಹೆಸರಿನಲ್ಲಿ ಮತ್ತೊಮ್ಮೆ ಜಪಾನ್ ಅನ್ನು ಬಲವಂತಕ್ಕೆ ತಳ್ಳಿತು. ಇಂಗ್ಲೆಂಡ್, ಫ್ರಾನ್ಸ್ ಥರದ ದೇಶಗಳೂ ಸೇರಿ ಜಪಾನ್ ತನ್ನ ಕರೆನ್ಸಿಯನ್ನು ಬಲವಂತವಾಗಿ ಮೌಲ್ಯ ಏರಿಸಿಕೊಳ್ಳುವಂತೆ ಮಾಡಿದವು. ಆಗ ಸಹಜವಾಗಿಯೇ ಅದಕ್ಕೆ ತನ್ನ ವಸ್ತುಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಇಡುವುದಕ್ಕೆ ಆಗದೇ ರಫ್ತು ಕುಸಿಯಿತು. ಒಟ್ಟಿನಲ್ಲಿ, ಎರಡನೇ ವಿಶ್ವಯುದ್ಧದ ನಂತರ ಜಪಾನ್ ಅನಿವಾರ್ಯವಾಗಿ ಅಮೆರಿಕದ ಬಾಲಂಗೋಚಿ ಆಗಬೇಕಾಯಿತು.
ಅಮೆರಿಕವು ಇನ್ನು ಮುಂದೆ ಯಾವುದೇ ದೇಶಕ್ಕೆ ನಿರಂತರ ಮಿಲಿಟರಿ ಛತ್ರದ ವಿಶ್ವಾಸ ಕೊಡುವ ಹಂತದಲ್ಲಿಲ್ಲ. ಹಾಗೆಂದೇ ಯುಎಇಯಂಥ ದೇಶವು ಭಾರತದ ಜತೆ ಮಿಲಿಟರಿ ಸಹಭಾಗಿತ್ವದತ್ತ ಹೆಜ್ಜೆ ಇಟ್ಟಿದೆ. ಯುರೋಪ್ ಒಕ್ಕೂಟ ಸಹ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಅಖೈರುಗೊಳಿಸಿ, ದೀರ್ಘಾವಧಿ ಭವಿಷ್ಯದಲ್ಲಿ ಅದರ ಮಿಲಿಟರಿ ತಂತ್ರಜ್ಞಾನಗಳು ಭಾರತದ ನೆರವಿಗೆ ಬರಬಲ್ಲವಾದಂತಹ ವಾತಾವರಣ ನಿರ್ಮಿಸಿದೆ. ಜಪಾನ್ ಸಹ ಈ ಹಾದಿ ಹಿಡಿಯಲೇಬೇಕು. ಏಕಾಏಕಿ ಅಮೆರಿಕದ ಸಖ್ಯ ಕಡಿಮೆ ಮಾಡಿಕೊಳ್ಳುವುದಕ್ಕೆ ಆಗಂದಂತಹ ಗೋಜಲುಗಳು ಜಪಾನಿಗೆ ಇರುವುದು ಹೌದಾದರೂ ದೀರ್ಘಾವಧಿಯಲ್ಲಿ ಅದಕ್ಕೆ ಬೇರೆ ದಾರಿ ಇಲ್ಲ. ಹಾಗೆಂದೇ ಅದು ಹಂತ-ಹಂತವಾಗಿ ಮಿಲಿಟರಿ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ.
ಆದರೆ, ಜನನ ಪ್ರಮಾಣ ಕುಸಿದಿರುವ ಜಪಾನ್ ಮತ್ತೆ ಎಂಟು ದಶಕಗಳ ಹಿಂದಿನ ಮಿಲಿಟರಿ ಬಲವನ್ನು ಸಾಕಾರಗೊಳಿಸಿಕೊಳ್ಳುವುದು ಸಾಧ್ಯವಿರದಿರುವ ಮಾತು. ಆದರೆ ತಂತ್ರಜ್ಞಾನದ ವಿಚಾರದಲ್ಲಿ ಆ ನೆಲವು ಕೆಲವು ಅಚ್ಚರಿಗಳನ್ನು ಸೃಷ್ಟಿಸಬಲ್ಲುದು. ಹೀಗೆ ಜಪಾನಿನಲ್ಲಿ ಮಿಲಿಟರಿ ತಂತ್ರಜ್ಞಾನ ಬೆಳೆದರೆ, ಸದ್ಯದ ಭವಿಷ್ಯದಲ್ಲಿ ಅದರ ಸಹಭಾಗಿತ್ವ ದೊರೆಯುವ ಸನ್ನಿವೇಶ ಇರುವುದು ಭಾರತಕ್ಕೆ ಮಾತ್ರವೇ.
ಇವತ್ತಿನ ಭಾರತದ ಪ್ರಧಾನಿ ತಾವು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೇ ಜಪಾನ್ ಜತೆಗೆ ದೊಡ್ಡಮಟ್ಟದ ವ್ಯಾವಹಾರಿಕ ಹೆಜ್ಜೆಗಳನ್ನು ಇಟ್ಟಿದ್ದರು. ದಿವಂಗತ ಶಿಂಜೊ ಅಬೆ - ಪ್ರಧಾನಿ ಮೋದಿ ನಡುವಿನ ರಾಜತಾಂತ್ರಿಕ ಬಾಂಧವ್ಯ ಬಹಳ ಢಾಳಾಗಿತ್ತು. ಆಗಿನಿಂದಲೇ ಜಪಾನ್ ಭಾರತದಲ್ಲಿ ಹೂಡಿಕೆ ಹಾಗೂ ಸಹಯೋಗಗಳಿಗೆ ಮುಂದಾಗಿತ್ತು. ಬುಲೆಟ್ ಟ್ರೈನ್ ವಿಚಾರದಲ್ಲಿ ಜಪಾನ್ ಭಾರತಕ್ಕೆ ಸಹಕರಿಸುತ್ತಿದೆ. ವಿರಳ ಲೋಹಗಳ ಪೂರೈಕೆ ಜಾಲದಲ್ಲಿ ಭಾರತಕ್ಕೆ ಸಹಕರಿಸುವ ಬದ್ಧತೆ ತೋರಿಸಿದೆ. ಜಪಾನಿಗೆ ಭವಿಷ್ಯದಲ್ಲಿ ಭಾರತದ ಮಾನವ ಸಂಪನ್ಮೂಲದ ಸಹಾಯ ಬೇಕು. ಇವೆಲ್ಲದಕ್ಕೆ ಪ್ರತಿಯಾಗಿ ಅದು ತನ್ನ ಮಿಲಿಟರಿ ತಂತ್ರಜ್ಞಾನದ ಕೈಗಾರಿಕೆಗಳು ಹಾಗೂ ಹೂಡಿಕೆಗಳಲ್ಲಿ ಭಾರತವನ್ನೇ ಆತುಕೊಳ್ಳಲಿದೆ. ಅದರ ಎದುರು ಸದ್ಯಕ್ಕಂತೂ ಬೇರೆ ಆಯ್ಕೆಗಳೂ ಇಲ್ಲ.
ಹಾಗೆಂದೇ, ಯಾವ ಸುದ್ದಿಗೆ ಚೀನಾ ದಿಗಿಲು ಪಡುತ್ತಿದೆಯೋ ಅದು ಭಾರತದ ಪಾಲಿಗೆ ಹರ್ಷದ ಹೊನಲು.
- ಚೈತನ್ಯ ಹೆಗಡೆ
cchegde@gmail.com