ಸಂಗ್ರಹ ಚಿತ್ರ online desk
ಅಂಕಣಗಳು

ತಮಿಳುನಾಡಿನ ಆಳುವ ಡಿಎಂಕೆಗೆ ಠಕ್ಕರ್‌ ಕೊಡುವವರು ಯಾರು..? (ನೇರ ನೋಟ)

ತಮಿಳುನಾಡಿನ ಜನರಲ್ಲಿ ಸಿನಿಮಾ ಹಾಸುಹೊಕ್ಕಾಗಿದೆ. ಚಲನಚಿತ್ರ ನಟ ಎಂ.ಜಿ.ರಾಮಚಂದ್ರನ್‌ ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದವರು. ಕಲಾವಿದೆ ಜಯಲಲಿತಾ 14 ವರ್ಷಗಳ ಕಾಲ ಆಳ್ವಿಕೆ ನಡೆಸಿದರು...

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣಾ ಕಾವು ನಿಧಾನವಾಗಿ ಏರುತ್ತಿದೆ. ಅಲ್ಲಿ ಏಪ್ರಿಲ್ - ಮೇನಲ್ಲಿ ಎಲೆಕ್ಷನ್‌. ಆಳುವ ಡಿಎಂಕೆ ಸರಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ. ಆದರೆ, ಡಿಎಂಕೆಯನ್ನು ಸಮರ್ಥವಾಗಿ ಎದುರಿಸುವವರು ಯಾರು ಎಂಬುದೇ ಈಗಿನ ಪ್ರಶ್ನೆ. ತಮಿಳು ಚಿತ್ರರಂಗದ ಜನಪ್ರಿಯ ನಟ ವಿಜಯ್‌ ಅವರ ರಾಜಕೀಯ ಪ್ರವೇಶದ ನಂತರ ತಮಿಳುನಾಡಿನ ರಾಜಕೀಯ ಚಿತ್ರಣವೇ ಬದಲಾಗುತ್ತಿದೆ.

ತಮಿಳುನಾಡಿನ ರಾಜಕಾರಣ ಅಂದರೆ ಅದು ಡಿಎಂಕೆ ಹಾಗೂ ಅಣ್ಣಾಡಿಎಂಕೆ ನಡುವಿನ ಜಿದ್ದಾಜಿದ್ದಿ ಕಣ. ಸುಮಾರು 60 ವರ್ಷಗಳಿಂದಲೂ ಈ ದ್ರಾವಿಡ ಪಕ್ಷಗಳದ್ದೇ ರಾಜಕೀಯ ಮೇಲಾಟ, ಪಾರುಪತ್ಯ. ಅದು ದ್ರಾವಿಡ ಪಕ್ಷಗಳ ರಾಜಕೀಯ ಆಡುಂಬೋಲ. ತಮಿಳುನಾಡಿನ ಚುನಾವಣೆ ಈ ಬಾರಿ ಪ್ರಾರಂಭದಿಂದಲೇ ಕದನ ಕುತೂಹಲ. ನಟ ವಿಜಯ್‌ ಅವರ ಪ್ರವೇಶದಿಂದ ತ್ರಿಕೋನ ಸ್ಪರ್ಧೆಗೆ ಅಖಾಡ ಸಜ್ಜು.

ತಮಿಳುನಾಡಿನಲ್ಲಿ ಒಟ್ಟು 234 ಅಸೆಂಬ್ಲಿ ಕ್ಷೇತ್ರಗಳಿವೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರಿಗೆ ತಮ್ಮ ಡಿಎಂಕೆ ಪಕ್ಷದ ಮೇಲೆ ಸಂಪೂರ್ಣ ಹಿಡಿತ. ಮಾಜಿ ಮುಖ್ಯಮಂತ್ರಿ, ಅಣ್ಣಾಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರು. ಈ ಬಾರಿ ಪ್ರತಿಪಕ್ಷಗಳದ್ದು ಒಂದೇ ಉದ್ದೇಶ. ಅದು ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಆದರೆ, ಅವರಲ್ಲಿ ಒಗ್ಗಟ್ಟಿಲ್ಲ. ಇದು ಆಡಳಿತಾರೂಢ ಡಿಎಂಕೆಗೆ ಅನುಕೂಲ. ಆದರೆ, ನಟ ವಿಜಯ್‌ ಅವರ ರಾಜಕೀಯ ಸಮಾವೇಶಗಳಿಗೆ ಸೇರುತ್ತಿರುವ ಜನಸ್ತೋಮದಿಂದ ಡಿಎಂಕೆಗೆ ಕಳವಳ.

ವಿಜಯ್‌ ತಮಿಳುಚಿತ್ರರಂಗದ ಜನಪ್ರಿಯ ಸ್ಟಾರ್‌ ನಟ. ಪೂರ್ಣ ಹೆಸರು ಜೋಸೆಫ್‌ ವಿಜಯ್‌ ಚಂದ್ರಶೇಖರ್‌. ದೇಶ-ವಿದೇಶಗಳ ಅಭಿಮಾನಿಗಳ ಪ್ರೀತಿಯ ದಳಪತಿ. ಬಾಲನಟನಾಗಿ ಬೆಳ್ಳೆತೆರೆಗೆ. ಐವತ್ತೊಂದು ವರ್ಷದ ವಿಜಯ್‌ ಸುಮಾರು 40 ವರ್ಷಗಳಿಂದ ಚಿತ್ರರಂಗದ ಜೀವನದಲ್ಲಿ. ಸುಮಾರು 70 ಚಿತ್ರಗಳಲ್ಲಿ ಅಭಿನಯ. ಸಂಕ್ರಾಂತಿ ಹೊತ್ತಿಗೆ ಬಿಡುಗಡೆಯಾಗಲಿರುವ ಚಿತ್ರ ಜನನಾಯಗನ್‌. ಅಂದರೆ ಜನನಾಯಕ. ವಿಜಯ್‌ ಹುಟ್ಟುಹಾಕಿರುವ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ). ಆ ಪಕ್ಷಕ್ಕೆ ಅವರೇ ಅಧ್ಯಕ್ಷರು. ವಿಜಯ್‌ ಅವರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಕನಸು.

ತಮಿಳುನಾಡಿನ ಜನರಲ್ಲಿ ಸಿನಿಮಾ ಹಾಸುಹೊಕ್ಕಾಗಿದೆ. ಚಲನಚಿತ್ರ ನಟ ಎಂ.ಜಿ.ರಾಮಚಂದ್ರನ್‌ ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದವರು. ಕಲಾವಿದೆ ಜಯಲಲಿತಾ 14 ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ಸಿನಿಮಾ ಕ್ಷೇತ್ರದಲ್ಲಿದ್ದ ಕರುಣಾನಿಧಿ 19 ವರ್ಷಗಳ ಕಾಲ ಆಳಿದರು. ನಟ ವಿಜಯ್‌ ಕಾಂತ್‌ ಡಿಎಂಡಿಕೆ ಪಕ್ಷ ಸ್ಥಾಪಿಸಿ ಪ್ರತಿಪಕ್ಷದ ನಾಯಕರೂ ಆಗಿದ್ದರು.

ಆದರೆ, ನಟ ಕಮಲ್‌ ಹಾಸನ್‌ ಅವರು ಸ್ಥಾಪಿಸಿದ ಮಕ್ಕಳ ನೀಧಿ ಮಯ್ಯಂ ಪಕ್ಷಕ್ಕೆ ಎಂಟು ವರ್ಷಗಳಾದರೂ ಬೆಂಬಲ ಸಿಕ್ಕಿಲ್ಲ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಸ್ವತಃ ಕಮಲ್‌ ಹಾಸನ್‌ ಪರಾಭವಗೊಂಡರು. ಕಮಲ್‌ ಹಾಸನ್‌ ಈಗ ರಾಜ್ಯಸಭಾ ಸದಸ್ಯರು. ಆಗ ಡಿಎಂಕೆಯ ಕಟು ಟೀಕಾಕಾರರು. ಈಗ ದೋಸ್ತಿ.

ನಟ ವಿಜಯ್‌ ಅವರ ರಾಜಕೀಯ ಜೀವನದ ಆರಂಭದಲ್ಲೇ ಒಂದು ಕಳಂಕ. ಅದು ಕರೂರಿನಲ್ಲಿ ಸೆಪ್ಟೆಂಬರ್‌ 27 ರಂದು ನಡೆದ ಸಮಾವೇಶ. ಜನಜಂಗುಳಿ. ಕಾಲ್ತುಳಿತದಲ್ಲಿ 41 ಮಂದಿ ದುರ್ಮರಣ. ವಿಜಯ್‌ ಸ್ಥಳದಿಂದ ಪಲಾಯನ. ದುರಂತದಲ್ಲಿ ಏನಾಯಿತು ಎಂದು ನೋಡುವಷ್ಟು ತಾಳ್ಮೆ, ಕಾಳಜಿಯೂ ಇರಲಿಲ್ಲ. ಅದು ಅವರ ಬೇಜವಾಬ್ದಾರಿಯ ವರ್ತನೆ. ಅದಕ್ಕಾಗಿ ಕಟು ಟೀಕೆ.

ಕರೂರಿನ ಕಾಲ್ತುಳಿತ ದುರಂತದ 83 ದಿನಗಳ ನಂತರ ಈರೋಡ್‌ ನಲ್ಲಿ ಡಿಸೆಂಬರ್‌ 18 ರಂದು ವಿಜಯ್‌ ಅವರ ಮೊದಲ ಬಹಿರಂಗ ಸಭೆ ನಡೆಯಿತು. ಡಿಎಂಕೆ ಸರಕಾರದ ವಿರುದ್ಧ ವಿಜಯ್‌ ಆಕ್ರೋಶ. ತಮ್ಮನ್ನು ಟಾರ್ಗೆಟ್‌ ಮಾಡಿದೆ ಎಂದು ಕಿಡಿ. ತಮ್ಮ ಪಕ್ಷ ಟಿವಿಕೆ ಶುದ್ಧ ಶಕ್ತಿ. ಡಿಎಂಕೆ ದುಷ್ಟ ಶಕ್ತಿ. ಇದು ಶುದ್ಧ ಮತ್ತು ದುಷ್ಟ ಶಕ್ತಿಗಳ ನಡುವಿನ ಸಂಘರ್ಷ ಎಂದು ಆವೇಶಭರಿತ ಘೋಷಣೆ.

ಎಂ.ಜಿ.ರಾಮಚಂದ್ರನ್‌ ಹಾಗೂ ಜಯಲಲಿತಾ ಅವರು ಡಿಎಂಕೆಯನ್ನು ದುಷ್ಟ ಶಕ್ತಿ ಎಂದು ಪದೇ ಪದೇ ಜರಿಯುತ್ತಿದ್ದರು. ವಿಜಯ್‌ ಅದೇ ಎಳೆಯನ್ನು ಹಿಡಿದು ಹೊರಟಿರುವುದು ಸ್ಪಷ್ಟ. ವಿಜಯ್‌ ಡಿಎಂಕೆಯನ್ನು ಇವಿಲ್‌ ಫೋರ್ಸ್‌ ಅಂತ ಕರೆದರೆ ಡಿಎಂಕೆ ವಿಜಯ್‌ ಅವರನ್ನು ಮರ್ಡರ್‌ ಫೋರ್ಸ್‌ ಎಂದು ಕುಟುಕಿದೆ.

ವಿಜಯ್‌ ತಮಿಳುನಾಡಿನ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪ್ರಸ್ತಾಪಿಸುತ್ತಿದ್ದಾರೆ. ಡಿಎಂಕೆ ಮತ್ತು ಸಮಸ್ಯೆಗಳು ಫೆವಿಕಾಲ್‌ನಂತೆ ಒಂದಕ್ಕೊಂದು ಅಂಟಿಕೊಂಡಿವೆ. ಇದನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಡಿಎಂಕೆ ವಿರುದ್ಧ ವಿಜಯ್‌ ನಿಲುವು ಸ್ಪಷ್ಟ. ಆದರೆ, ರಾಜ್ಯವನ್ನು ಕಾಡುತ್ತಿರುವ ಕೆಲವು ವಿವಾದಗಳ ಬಗ್ಗೆ ಅವರ ಪ್ರತಿಕ್ರಿಯೆ ಇಲ್ಲ. ವಿಜಯ್‌ ಅವರ ಪಕ್ಷದ ತತ್ವ, ಸಿದ್ಧಾಂತಗಳೇನು? ಸ್ಪಷ್ಟವಿಲ್ಲ. ಈ ಬಗ್ಗೆ ವಿಜಯ್‌ ಮೌನ. ಮಾಧ್ಯಮಗಳಿಂದಲೂ ಅಂತರ. ವಿಜಯ್‌ ಮಧುರೈನಲ್ಲಿ ಆಗಸ್ಟ್‌ನಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿಯನ್ನು ಫ್ಯಾಸಿಸ್ಟ್‌ ಶಕ್ತಿ. ತಮಿಳುನಾಡಿಗೆ ಈ ಪಕ್ಷದ ಅಗತ್ಯವಿಲ್ಲ ಎಂದು ಟೀಕಿಸಿದ್ದನ್ನು ಬಿಟ್ಟರೆ ನಂತರ ಆ ಬಗ್ಗೆ ಚಕಾರವಿಲ್ಲ.

ಮಧುರೈನ ತಿರುಪರನ್ ಕುಡ್ರಂನಲ್ಲಿ ಮುರುಘ ದೇವಸ್ಥಾನದಲ್ಲಿ ದೀಪ ಹಚ್ಚುವ ಕುರಿತು ಧಾರ್ಮಿಕ ವಿವಾದ ಎದ್ದಿದೆ. ವಿಜಯ್‌ ನಿಲುವು ಏನು ಎಂದು ವಿರೋಧಿಗಳು ಕೇಳುತ್ತಿದ್ದಾರೆ. ವಿಜಯ್‌ ಈವರೆಗೂ ಪ್ರತಿಕ್ರಿಯಿಸಿಲ್ಲ.

ಪ್ರತಿಪಕ್ಷ ಅಣ್ಣಾಡಿಎಂಕೆಯಲ್ಲಿರುವ ಬಣ ರಾಜಕಾರಣ ವಿಜಯ್‌ಗೆ ನೆರವಾಗಿದೆ. ಅಣ್ಣಾಡಿಎಂಕೆಯಿಂದ ಉಚ್ಛಾಟನೆಯಾಗಿರುವ ಮಾಜಿ ಸಿಎಂ ಓ. ಪನ್ನೀರ್ ಸೆಲ್ವಂ (ಓಪಿಎಸ್) ಹಾಗೂ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ನಾಯಕ ಟಿಟಿವಿ ದಿನಕರನ್‌ ಅವರು ವಿಜಯ್‌ ಪಕ್ಷವನ್ನು ಸೇರುವ ಸಾಧ್ಯತೆ ಇದೆ. ಅಣ್ಣಾಡಿಎಂಕೆ ಮಾಜಿ ನಾಯಕ ಕೆ.ಎ.ಸಂಗೋಟಿಯನ್ ಈಗಾಗಲೇ ವಿಜಯ್‌ ಅವರ ಟಿವಿಕೆ ಸೇರಿದ್ದಾರೆ. ಪನ್ನೀರ್‌ ಸೆಲ್ವಂ ಕೆಲವು ತಿಂಗಳ ಹಿಂದೆ ಸಿಎಂ ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದು ಸದ್ದು ಮಾಡಿತ್ತು.

ವಿಜಯ್‌ ಮುಂದೆ ಹತ್ತು ಹಲವು ಸವಾಲುಗಳಿವೆ. ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಅಣ್ಣಾಡಿಎಂಕೆ ನಡುವೆಯೇ ಮತದಾರರ ಆಯ್ಕೆ ಇರುವುದು. ವಿಜಯ್‌ ಇದನ್ನು ಭೇದಿಸುತ್ತಾರೆಯೇ?

ಇನ್ನು ಆಡಳಿತಾರೂಢ ಡಿಎಂಕೆ ಮೈತ್ರಿಕೂಟದಲ್ಲಿ 14 ಪಕ್ಷಗಳಿವೆ. ಅವುಗಳನ್ನು ಒಟ್ಟಾಗಿ ಇಟ್ಟುಕೊಳ್ಳಬೇಕು. ಇದು ಡಿಎಂಕೆಗೆ ಸವಾಲು. ಡಿಎಂಕೆ ನಾಯಕರು ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯವಿದೆ. ಡಿಎಂಕೆ ಸರಕಾರದ ಆಡಳಿತ ವೈಖರಿ ಬಗ್ಗೆ ಅಸಮಾಧಾನವಿದೆ. ಆದರೆ, ಇದರ ಲಾಭ ಪಡೆಯಲು ಪ್ರತಿಪಕ್ಷಗಳು ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿದೆ.

ಪ್ರತಿಪಕ್ಷ ನಾಯಕ ಪಳನಿಸ್ವಾಮಿ ಅವರ ಅಣ್ಣಾಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಅಣ್ಣಾಡಿಎಂಕೆ ಬಣಗಳು ಒಗ್ಗೂಡಬೇಕೆಂಬ ಬಯಕೆ. ಏಕೆಂದರೆ ಅಣ್ಣಾಡಿಎಂಕೆ ಬಣಗಳು ಒಗ್ಗೂಡಿದರೆ ಮತಗಳ ವಿಭಜನೆ ತಡೆಯಬಹುದು. ಅದು ತಾನು ನೆಲೆ ಕಂಡುಕೊಳ್ಳಲು ಅನುಕೂಲ ಎಂಬುದು ಬಿಜೆಪಿ ಲೆಕ್ಕಾಚಾರ.

ಆದರೆ, ಪಳನಿಸ್ವಾಮಿ ಈ ವಿಲೀನಕ್ಕೆ ಅಡ್ಡಿ. ಪಳನಿಸ್ವಾಮಿ ರಾಜಕೀಯವಾಗಿ ಚಾಣಾಕ್ಷ್ಯರು. ಅಣ್ಣಾಡಿಎಂಕೆಯ ಬಹುತೇಕ ಶಾಸಕರ ಬೆಂಬಲ ಅವರಿಗೆ ಇದೆ. ಆ ಪಕ್ಷದ ಎರಡು ಎಲೆ ಚಿಹ್ನೆ ಪಳನಿಸ್ವಾಮಿ ಅವರ ಅಣ್ಣಾಡಿಎಂಕೆ ಬಳಿಯೇ ಇದೆ.

ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆ ಇಲ್ಲ. ಅಣ್ಣಾಡಿಎಂಕೆ ಜೊತೆ ಸ್ಥಾನ ಹೊಂದಾಣಿಕೆಯ ತೀರ್ಮಾನ ಆಗಿದ್ದರೂ ಗೊಂದಲಗಳಿವೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಚೆನ್ನೈಗೆ ಆಗಮಿಸಿ ಪಳನಿಸ್ವಾಮಿ ಅವರ ನೇತೃತ್ವದಲ್ಲಿ 2026ರ ಅಸೆಂಬ್ಲಿ ಚುನಾವಣೆಯನ್ನು ಎದುರಿಸುತ್ತೇವೆ. ಒಟ್ಟಿಗೆ ಸಮ್ಮಿಶ್ರ ಸರಕಾರ ರಚಿಸುತ್ತೇವೆ ಎಂದಿದ್ದರು.

ಆದರೆ, ಪಳನಿಸ್ವಾಮಿ ನಂತರ ಇದಕ್ಕೆ ಸ್ವಲ್ಪ ವ್ಯತಿರಿಕ್ತ ಅಭಿಪ್ರಾಯ ನೀಡಿದ್ದಾರೆ. ಬಿಜೆಪಿ ಜೊತೆ ಸ್ಥಾನ ಹೊಂದಾಣಿಕೆ ಇದೆ. ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಉದ್ದೇಶದಿಂದ ದೋಸ್ತಿ ಆಗಿದೆ. ಚುನಾವಣೆ ನಂತರ ಅಣ್ಣಾಡಿಎಂಕೆ ಸರಕಾರ ರಚಿಸುತ್ತದೆ. ಅಧಿಕಾರ ಹಂಚಿಕೆ ಇರುವುದಿಲ್ಲ ಎಂದಿದ್ದಾರೆ. ಅಲ್ಲಿಗೆ ಈ ಗೊಂದಲ ಇದ್ದೇ ಇದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾಡಿಎಂಕೆ ಹಾಗೂ ಬಿಜೆಪಿ ಮಧ್ಯೆ ಮೈತ್ರಿ ಇತ್ತು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಈ ಸಖ್ಯ ಇರಲಿಲ್ಲ. ಈ ಎರಡೂ ಪಕ್ಷಗಳು ಒಂದೇ ಒಂದು ಲೋಕಸಭಾ ಸ್ಥಾನವನ್ನೂ ಗೆಲ್ಲಲಿಲ್ಲ.

ಡಿಎಂಕೆ ನೇತೃತ್ವದ ಮೈತ್ರಿಕೂಟ 2021ರ ಅಸೆಂಬ್ಲಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿತು. ಡಿಎಂಕೆ 133 ( ಮತ ಹಂಚಿಕೆ ಶೇ.38), ಅಣ್ಣಾಡಿಎಂಕೆ 66 (ಶೇ.33.5), ಕಾಂಗ್ರೆಸ್‌ 18 (ಶೇ.4.3), ಪಿಎಂಕೆ 5 ( ಶೇ.3.8) ಬಿಜೆಪಿ 4 ಸ್ಥಾನಗಳನ್ನು ಪಡೆದಿತ್ತು. ಡಿಎಂಕೆ ನೇತೃತ್ವದ ಮೈತ್ರಿಕೂಟ 159, ಅಣ್ಣಾಡಿಎಂಕೆ ನೇತೃತ್ವದ ಮೈತ್ರಿಕೂಟ 75 ಸ್ಥಾನಗಳಲ್ಲಿ ಗೆದ್ದಿತ್ತು. ತಮಿಳುನಾಡು ನಿಧಾನವಾಗಿ ಚುನಾವಣಾ ಕದನಕ್ಕೆ ತೆರೆದುಕೊಳ್ಳುತ್ತಿದೆ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

9 ವರ್ಷಗಳ ಬಳಿಕ ಇಸ್ರೇಲ್ ಗೆ ಪ್ರಧಾನಿ ಮೋದಿ ಭೇಟಿ; ಅದ್ದೂರಿ ರೆಡ್ ಕಾರ್ಪೆಟ್ ಸ್ವಾಗತ

Epstein ties ಆರೋಪದ ಕುರಿತು ಮೌನ ಮುರಿದ ಬಿಲ್ ಗೇಟ್ಸ್; ಉದ್ಯಮಿ ಹೇಳಿದ್ದೇನು?

ಹಾರ್ಡ್‌ವೇರ್ ಗೋಡೌನ್ ನಲ್ಲಿ ಅಗ್ನಿದುರಂತ: ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೂ ಗಾಯ!

ಬೆಂಗಳೂರು: GST ಅಧಿಕಾರಿಗಳೆಂದು ಹೇಳಿಕೊಂಡು 5 ಲಕ್ಷ ರೂ. ಸುಲಿಗೆ; ಇಬ್ಬರು ಹೌಸ್‌ಕೀಪಿಂಗ್ ಸಿಬ್ಬಂದಿ ಬಂಧನ!

Shikhar Dhawanಗೆ ಬಿಗ್ ರಿಲೀಫ್: 5.7 ಕೋಟಿ ರೂ ಹಣ ಹಿಂದಿರುಗಿಸಿ.. ಮಾಜಿ ಪತ್ನಿ ಆಯೇಷಾ ಮುಖರ್ಜಿಗೆ ಕೋರ್ಟ್ ಸೂಚನೆ!

SCROLL FOR NEXT