ಜಗತ್ತಿನ ಎಲ್ಲಾ ದೇಶಗಳು ಒಂದಷ್ಟು ಹಣವನ್ನು ರಿಸೆರ್ವ್ ಕರೆನ್ಸಿಯಲ್ಲಿ ಇಟ್ಟುಕೊಳ್ಳಬೇಕು. ಇಟ್ಟುಕೊಳ್ಳುತ್ತವೆ. ಜಗತ್ತಿನ ಎಲ್ಲಾ ದೇಶಗಳು ಕೂಡ ಡಾಲರ್ ಹಣವನ್ನು ರಿಸೆರ್ವ್ ಕರೆನ್ಸಿಯಾಗಿ ಇಟ್ಟುಕೊಂಡಿವೆ. ಹೀಗೇಕೆ ಇಟ್ಟುಕೊಳ್ಳಬೇಕು ಎನ್ನುವುದಕ್ಕೆ ಉದಾಹರಣೆ ನಮ್ಮ ಕಣ್ಣಮುಂದೆ ಇರಾನ್ ರೂಪದಲ್ಲಿದೆ. ಇರಾನಿನ ರಿಯಾಲ್ ತನ್ನ ಮೌಲ್ಯವನ್ನು ಕಳೆದುಕೊಂಡಿದೆ.
ಹೀಗಾಗಿ ಜಾಗತಿಕ ಮಟ್ಟದಲ್ಲಿ ವ್ಯಾಪಾರ , ವಹಿವಾಟು ನಡೆಸಲು ಬೇಕಾಗುವ ನಂಬಿಕೆಯನ್ನು ಈ ರಿಸೆರ್ವ್ ಕರೆನ್ಸಿ ನೀಡುತ್ತದೆ. ಒಂದೆಡೆ ಡಾಲರ್ ಹಣವನ್ನು ತಿರಸ್ಕರಿಸಬೇಕು ಎನ್ನುವ ಕೂಗು ಹೆಚ್ಚಾಗುತ್ತಿದೆ. ಇದರ ನಡುವೆ ಈ ಇರಾನ್ ರೀತಿಯ ಸನ್ನಿವೇಶಗಳು ಎದುರಾಗಿ ಡಾಲರ್ ಹಣವನ್ನು ಅಷ್ಟು ಸುಲಭವಾಗಿ ನಾವು ಬಿಡುವುದು ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ಕೂಡ ನೀಡುತ್ತದೆ. ಜಾಗತಿಕ ಮಟ್ಟದಲ್ಲಿ ಡಾಲರಿನ ಡಿಮ್ಯಾಂಡ್ ಜಾಸ್ತಿಯಾದಾಗ ಅದರ ಬೆಲೆ ಹೆಚ್ಚುತ್ತದೆ. ಆದರೆ ಆಂತರಿಕವಾಗಿ ಡಾಲರಿನ ಮೌಲ್ಯ ಕಳೆದ ವರ್ಷಗಳಿಗೆ ಹೋಲಿಸಿದರೆ 9/10 ಪ್ರತಿಶತ ಕುಸಿತವನ್ನು ಕಂಡಿದೆ.
ಅಮೇರಿಕಾ ದೇಶ ನಡೆಯುತ್ತಿರುವುದು ಸಾಲದ ಮೇಲೆ. ಈ ವರ್ಷ ಅಮೇರಿಕಾ ದೇಶವನ್ನು ನಡೆಸಲು ಬೇಕಾಗಿರುವುದು ಬರೋಬ್ಬರಿ 5.4 ಟ್ರಿಲಿಯನ್ ಡಾಲರ್ ! ಅಂದರೆ ಇದು ಭಾರತದ ವಾರ್ಷಿಕ ಜಿಡಿಪಿಗಿಂತ ಬಹಳ ಹೆಚ್ಚು ! ಇಷ್ಟು ದೊಡ್ಡ ಮೊತ್ತವನ್ನು ಅದು ಮಾರುಕಟ್ಟೆಯಿಂದ ಸಾಲದ ರೂಪದಲ್ಲಿ ಎತ್ತಬೇಕಿದೆ. ಆದರೆ ಕುಸಿಯುತ್ತಿರುವ ಡಾಲರಿನ ಮೌಲ್ಯ ಮತ್ತು ಪ್ರಸ್ತುತತೆ ಇಷ್ಟು ದೊಡ್ಡ ಮೊತ್ತವನ್ನು ಮಾರುಕಟ್ಟೆಯಿಂದ ಆ ಹಣವನ್ನು ಎತ್ತಲು ಸಾಧ್ಯವಿಲ್ಲ ಎನ್ನುವ ಹಂತಕ್ಕೆ ಬಂದು ನಿಂತಿದೆ. ಈ ಕಾರಣದಿಂದ ಅಮೇರಿಕಾ ತನ್ನ ಹಳೆ ಚಾಳಿಯನ್ನು ಮುಂದುವರಿಸಿ ಸಣ್ಣಪುಟ್ಟ ದೇಶಗಳಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತದೆ. ಇದೊಂದು ಆಟ. ಈ ಆಟದಲ್ಲಿ ಡಾಲರಿನ ಮೌಲ್ಯ ಕೂಡ ಕುಸಿಯುವ ಸಾಧ್ಯತೆಯನ್ನು ಅಲ್ಲಗೆಳೆಯಲು ಬಾರದು. ಹೀಗಾಗಿ ಭಾರತ ಕಳೆದ ನಾಲ್ಕು ವರ್ಷದಲ್ಲಿ ಪ್ರಥಮ ಬಾರಿಗೆ ತನ್ನ ಫಾರಿನ್ ರಿಸೆರ್ವ್ ನಲ್ಲಿ ಭಾರಿ ಪ್ರಮಾಣದಲ್ಲಿ ಡಾಲರಿನ ರಿಸೆರ್ವ್ ಕಡಿಮೆ ಮಾಡಿಕೊಂಡಿದೆ. 2024ರಲ್ಲಿ 240 ಬಿಲಿಯನ್ ಡಾಲರ್ ಹಣವನ್ನು ರಿಸೆರ್ವ್ ನಲ್ಲಿ ಇಟ್ಟುಕೊಂಡಿದ್ದ ಭಾರತ 2025 ರಲ್ಲಿ ಅದನ್ನು 190 ಬಿಲಿಯನ್ ಡಾಲರಿಗೆ ಇಳಿಸಿಕೊಂಡಿದೆ. ಚೀನಾ, ರಷ್ಯಾ , ಬ್ರೆಜಿಲ್ ದೇಶಗಳು ಕೂಡ ತಮ್ಮ ವಿದೇಶಿ ಮೀಸಲು ನಿಧಿಯಲ್ಲಿ ಡಾಲರನ್ನು ಬಹಳಷ್ಟು ಕಡಿಮೆ ಮಾಡಿಕೊಂಡಿದೆ. ಈ ಜಾಗದಲ್ಲಿ ಚಿನ್ನವನ್ನು ಅವುಗಳು ತುಂಬಿಕೊಳ್ಳುತ್ತಿವೆ.
ಅಮೇರಿಕಾ ಬಹಳ ಹಿಂದಿನಿಂದ ಜಗತ್ತನ್ನು ದಾರಿ ತಪ್ಪಿಸುತ್ತ ಬಂದಿದೆ. ತನ್ನ ದೇಶ ನಡೆಸಲು ಬೇಕಾಗುವ ಹಣವನ್ನು ಬಾಂಡ್ ಮಾರುವ ಮೂಲಕ ಅದು ಸಾಲದ ರೂಪದಲ್ಲಿ ಪಡೆದುಕೊಳ್ಳುತ್ತಿತ್ತು. ವಾಪಸ್ಸು ನೀಡಲು , ಬಡ್ಡಿ ನೀಡಲು ಯಥೇಚ್ಛವಾಗಿ ಡಾಲರ್ ಪ್ರಿಂಟ್ ಮಾಡುತ್ತಿತ್ತು. ಈ ರೀತಿ ಜಗತ್ತಿನ ಬೇರಾವ ದೇಶ ಮಾಡಿದ್ದರೂ ಆ ದೇಶ ಹಣದುಬ್ಬರದಲ್ಲಿ ಸಿಲುಕಿ ಕುಸಿತವನ್ನು ಕಾಣುತ್ತಿತ್ತು. ಅಮೇರಿಕಾ ಬಹಳಷ್ಟು ವರ್ಷ ಹೀಗೆ ಮಾಡಿ ಕೂಡ ಜಯಸಿಕೊಂಡದ್ದು ಕೇವಲ ಡಾಲರಿನ ಮೇಲಿರುವ ನಂಬಿಕೆ ಮತ್ತು ಅದು ಜಾಗತಿಕ ಹಣದ ರೂಪವನ್ನು ಪಡೆದುಕೊಂಡ ಕಾರಣದಿಂದ ಮಾತ್ರ. ಇದೀಗ ಜಗತ್ತಿನ ಎಲ್ಲಾ ದೇಶಗಳಿಗೆ ಡಾಲರಿನ ಮೌಲ್ಯದ ಮೇಲೆ ನಂಬಿಕೆ ಕಡಿಮೆ ಆಗುತ್ತಿರುವ ಕಾರಣ , ಆ ದೇಶಗಳು ನಿಧಾನವಾಗಿ ಡಾಲರನ್ನು ತಮ್ಮ ಮೀಸಲು ನಿಧಿಯಲ್ಲಿ ಕಡಿಮೆ ಮಾಡಿಕೊಳ್ಳುತ್ತಿವೆ. ಹಾಗೆ ನೋಡಲು ಹೋದರೆ ಡಾಲರ್ ಬಾಂಡ್ ಮೇಲಿನ ಬಡ್ಡಿದರ ಅತ್ಯಂತ ಆಕರ್ಷಕವಾಗಿದೆ. ಹೀಗಿದ್ದೂ ಈ ಬಾಂಡುಗಳಿಗೆ ಈಗ ಮೊದಲಿನ ಬೇಡಿಕೆ ಉಳಿದುಕೊಂಡಿಲ್ಲ. ಡಾಲರ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ವೆನಿಜುವೆಲಾ , ಇರಾನ್ ಮೇಲೆ ದಾಳಿ ಮಾಡುತ್ತಿದೆ. ಗ್ರೀನ್ ಲ್ಯಾಂಡ್ ಬೇಕು ಎನ್ನುತ್ತಿದೆ. ನ್ಯಾಟೋ ಒಕ್ಕೊಟಕ್ಕೆ ವಿದಾಯ ಹೇಳುತ್ತೇನೆ ಎಂದಿದೆ. ಪ್ರಮುಖ ಜಾಗತಿಕ ಸಂಸ್ಥೆಗಳಿಂದ ಅದಾಗಲೇ ಹೊರಬಂದಿದೆ. ಇದರ ಜೊತೆಗೆ ಆಂತರಿಕವಾಗಿ ಬಹಳಷ್ಟು ಕಡಿತವನ್ನು ಅದು ಮಾಡಿದೆ. ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿದ್ದ ಅನುದಾನದ ಜೊತೆಗೆ ಬಹಳಷ್ಟು ಸೋಶಿಯಲ್ ಸೆಕ್ಯುರಿಟಿ ಸ್ಕೀಮುಗಳಿಗೆ ಕೂಡ ಕಡಿತವನ್ನು ಮಾಡಲಾಗಿದೆ.
ಯಾವುದೇ ದೇಶದ ಸೆಂಟ್ರಲ್ ಬ್ಯಾಂಕ್ ತನ್ನ ಬಳಿ ಯಾವುದೇ ದೇಶದ ಕರೆನ್ಸಿ ನೋಟು , ಟ್ರೆಷರಿ ಬಿಲ್ ,ಬ್ಯಾಂಕ್ ಡೆಪೋಸಿಟ್ಸ್ , ಬಾಂಡ್ಸ್ ಮತ್ತು ಗವರ್ನಮೆಂಟ್ ಸೆಕ್ಯುರಿಟೀಸ್ ಹೊಂದಿದ್ದು ಇವುಗಳ ಒಟ್ಟು ಮೌಲ್ಯವನ್ನ ತನ್ನ ವಿದೇಶಿ ವಿನಿಮಯ ಎಂದು ಕರೆದು ಕೊಳ್ಳುತ್ತದೆ . ಇಂಟರ್ನ್ಯಾಷನಲ್ ಮೊನಿಟರಿ ಫಂಡ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಹಣ ಮತ್ತು ಚಿನ್ನದ ರೂಪದಲ್ಲಿ ಇರುವ ಹೂಡಿಕೆಯನ್ನ ಕೂಡ ವಿದೇಶಿ ವಿನಿಮಯ ಮೀಸಲು ಎಂದು ಪರಿಗಣಿಸಲಾಗುತ್ತದೆ . ಇದನ್ನ ಇನ್ನಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆ ನೋಡೋಣ .
ಭಾರತೀಯ ರಿಸರ್ವ್ ಬ್ಯಾಂಕ್ ಅಮೇರಿಕಾ ಡಾಲರ್ 100 ಬಿಲಿಯನ್ ಹೊಂದಿದ್ದು , 100 ಯುರೋ ಕರೆನ್ಸಿ , 50 ಕೆನಡಾ ದೇಶದ ಟ್ರಶರಿ ಬಿಲ್ , 50 ಚಿನ್ನದ ರೂಪದಲ್ಲಿ ಮತ್ತು ಉಳಿದ ಮೊತ್ತ 21 ಹಲವಾರು ದೇಶದ ಕರೆನ್ಸಿ ಹೊಂದಿದ್ದರೆ ಇವುಗಳೆಲ್ಲವ ಒಟ್ಟು ಮೊತ್ತವನ್ನ ಫಾರಿನ್ ಎಕ್ಸ್ಚೇಂಜ್ ರಿಸರ್ವ್ ಎಂದು ಕರೆಯಲಾಗುತ್ತದೆ.
ಜಗತ್ತಿನ ಅರ್ಧಕ್ಕೂ ಹೆಚ್ಚು ಫಾರಿನ್ ಎಕ್ಸ್ಚೇಂಜ್ ಇರುವುದು ಅಮೆರಿಕನ್ ಡಾಲರ್ ನಲ್ಲಿ . ಉಳಿದ ಅರ್ಧ ಯುರೋ , ಬ್ರಿಟಿಷ್ ಪೌಂಡ್ , ಚೈನೀಸ್ ಹಣ , ಜಪಾನೀಸ್ ಯೆನ್ ಗಳಲ್ಲಿ ವಿಭಜನೆಯಾಗಿದೆ .
ಜಗತ್ತಿನ ವಹಿವಾಟು ನೆಡೆಯುತ್ತಿರುವುದು ನಂಬಿಕೆಯ ಆಧಾರದ ಮೇಲೆ ಆ ನಂಬಿಕೆಯನ್ನ ಹೆಚ್ಚಿಸಲು ಇದು ಬೇಕು . ಫಾರಿನ್ ಎಕ್ಸ್ಚೇಂಜ್ ಹೊಂದಲು ಬಹು ಮುಖ್ಯ ಕಾರಣ ಆಕಸ್ಮಾತ್ ಯಾವುದೇ ದೇಶದ ಕರೆನ್ಸಿ ಅಪಮೌಲ್ಯ ಗೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಆ ಹಣ ಬೇಡಿಕೆ ಕಳೆದುಕೊಂಡೋ ಅಥವಾ ಚಾಲನೆಯನ್ನ ಕಳೆದುಕೊಂಡರೆ , ಇಲ್ಲಿ ನೋಡಿ ಹೆದರುವುದು ಬೇಡ ನನ್ನ ಬಳಿ ಬೇರೆ ಹಣವೂ ಉಂಟು ಎಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಹೇಳಲು ಇದು ಬೇಕು . ಜಗತ್ತಿನ ಇತರ ದೇಶಗಳ ಜೊತೆಗೆ ನಾವು ಮಾಡುವ ಎಲ್ಲಾ ವ್ಯವಹಾರಗಳು ನೆಡೆಯುವುದು ಮುಕ್ಕಾಲು ಪಾಲು ಅಮೇರಿಕನ್ ಡಾಲರ್ ನಲ್ಲಿ . ಬೇರೆ ದೇಶಗಳು ನಮ್ಮ ಬಳಿ ಅಮೇರಿಕನ್ ಡಾಲರ್ ರಿಸರ್ವ್ ನಲ್ಲಿದೆ ಎಂದರೆ ವ್ಯಾಪಾರ ಸುಲುಭವಾಗುತ್ತದೆ . ಭಾರತೀಯ ರೂಪಾಯಿ ಅದೆಷ್ಟೇ ಸಾವಿರ ಕೋಟಿ ಇದೆ ಎಂದರೂ ಬಾರದ ನಂಬಿಕೆ ಈ ಫಾರಿನ್ ಎಕ್ಸ್ಚೇಂಜ್ ನೀಡುತ್ತದೆ . ಇದಕ್ಕೆ ತಾಜಾ ಉದಾಹರಣೆ ಇರಾನ್. ತನ್ನ ದೇಶದ ರಿಯಾಲ್ ರದ್ದಿ ಪೇಪರಿಗೆ ಸಮ ಎನ್ನುವ ಮಟ್ಟಕ್ಕೆ ಅದು ಕುಸಿತ ಕಂಡಿದೆ.
ಉದಾಹರಣೆ ನೋಡಿ ನಾವು ಸೌದಿಯಿಂದ ಪೆಟ್ರೋಲ್ ಕೊಂಡರೆ ಅವರಿಗೆ ಹಣ ನೀಡುವುದು ಡಾಲರ್ ನಲ್ಲಿ . ಹೀಗೆ ಜಗತ್ತಿನ ಯಾವುದೋ ಒಂದು ದೇಶದಿಂದ ಇನ್ನೇನೋ ಕೊಂಡರೆ ಅವರಿಗೆ ಬದಲಿಗೆ ಹಣ ಸಂದಾಯವಾಗುವುದು ಡಾಲರ್ ನಲ್ಲಿ ಹೀಗಾಗಿ ವಿದೇಶಿ ವಿನಿಮಯ ಹಣ ಹೊಂದಿರುವುದು ಅತ್ಯವಶ್ಯಕ .
ಜಗತ್ತಿನ ಎಲ್ಲಾ ದೇಶಗಳು ಇಂದು ಫಾರಿನ್ ಎಕ್ಸ್ಚೇಂಜ್ ಹೊಂದಿರಲೇಬೇಕು . ಇದು ಅಲಿಖಿತ ನಿಯಮ . ಅದು ಸರಿ ಆದರೆ ಎಷ್ಟು ಹಣವನ್ನ ಫಾರಿನ್ ಎಕ್ಸ್ಚೇಂಜ್ ನಲ್ಲಿ ಹೊಂದಿರಬೇಕು ? ಎನ್ನುವ ಪ್ರಶ್ನೆಗೆ ಈ ವಿಷಯ ದಲ್ಲಿ ತಜ್ಞರು ಎನಿಸಿಕೊಂಡವರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿದೆ . ನಿಖರವಾಗಿ ಫಾರ್ಮುಲಾ ಹಾಕಿ ಇಷ್ಟು ಹಣ ಫಾರಿನ್ ಎಕ್ಸ್ಚೇಂಜ್ ನಲ್ಲಿರಲಿ ಎಂದು ಯಾರೂ ಹೇಳಲು ಬರುವುದಿಲ್ಲ . ಆಯಾ ದೇಶದ ಅವಶ್ಯಕತೆಗೆ ಅನುಗುಣವಾಗಿ ಇದನ್ನ ನಿರ್ಧರಿಸಬೇಕು . ಈ ನಿಟ್ಟಿನಲ್ಲಿ ಭಾರತ ತನ್ನ ಡಾಲರ್ ಮೀಸಲನ್ನು ೫೦ ಬಿಲಿಯನ್ ಡಾಲರ್ ಇಳಿಸಿಕೊಂಡಿದೆ. ಆ ಜಾಗದಲ್ಲಿ ಚಿನ್ನವನ್ನು ತುಂಬಿಸಿಕೊಂಡಿದೆ. ಇದು ಒಂದರ್ಥದಲ್ಲಿ ಡಾಲರಿಗೆ ಕೊಟ್ಟ ಪೆಟ್ಟು.
ಕೊನೆಮಾತು : ಜಾಗತಿಕ ವಿತ್ತ ಜಗತ್ತಿನಲ್ಲಿ ಅಸ್ಥಿರತೆ ಎನ್ನುವುದು ಸ್ಥಿರವಾಗಿ ಇನ್ನೊಂದು ವರ್ಷವಾದರೂ ಇರಲಿದೆ. ಅಸ್ಥಿರ ಸಮಯದ ಡಾರ್ಲಿಂಗ್ ಎಂದು ಕರೆಸಿಕೊಳ್ಳುವ ಚಿನ್ನದ ಮೇಲೆ ಹೂಡಿಕೆಯನ್ನು ಭಾರತ ಮಾಡಿರುವುದು ಮತ್ತು ಯಾವುದೇ ಚಿನ್ನದ ಬ್ಯಾಕ್ ಅಪ್ ಇಲ್ಲದ ಡಾಲರ್ ಮಾರಿರುವುದು ಸ್ಟ್ರಾಟ್ರೆಜಿಕ್ ಮೂವ್ ಎಂದು ವಿತ್ತಜಗತ್ತಿನಲ್ಲಿ ಬಣ್ಣಿಸಲಾಗುತ್ತಿದೆ. ಇವತ್ತಿನ ಜಗತ್ತಿನಲ್ಲಿ ಮದ್ದುಗುಂಡು ಸಿಡಿಸಿ ಯುದ್ಧ ಮಾಡುವುದಕ್ಕಿಂತ ಈ ರೀತಿಯ ನಡೆಗಳು ಬಹಳ ಪ್ರಭಾವಶಾಲಿ ಎನ್ನಲಾಗುತ್ತದೆ. ಆ ನಿಟ್ಟಿನಲ್ಲಿ ಭಾರತ ಹೆಚ್ಚು ಮಾತಾಡದೆ ಸುಭದ್ರ ಹೆಜ್ಜೆಯನ್ನು ಇಡುತ್ತಿದೆ.

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com