ಬಿಜೆಪಿ, ಜೆಡಿಎಸ್ ಸಾಂದರ್ಭಿಕ ಚಿತ್ರ online desk
ಅಂಕಣಗಳು

ಬಿಜೆಪಿ- ಜೆಡಿಎಸ್‌ ಮೈತ್ರಿಗೆ ಸಾರಥಿ ಯಾರು...?

ರಾಜ್ಯದಲ್ಲಿ 2018 ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 104 (ಶೇಕಡಾವಾರು ಮತ ಪಡೆದ ಪ್ರಮಾಣ 36.2), ಕಾಂಗ್ರೆಸ್ 80 ( ಶೇ. 39), ಜೆಡಿಎಸ್‌ 37 (ಶೇ.18.3) ಸ್ಥಾನಗಳನ್ನು ಪಡೆದಿತ್ತು.

ಕರ್ನಾಟಕದ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದಲ್ಲಿ ಒಂದು ಮಾತು ಈಗ ಕೇಳಿ ಬರುತ್ತಿದೆ. ಅದು ಮುಂದಿನ 2028ರ ಅಸೆಂಬ್ಲಿ ಚುನಾವಣೆಯಲ್ಲಿ ಮೈತ್ರಿಕೂಟದ ಸಾರಥಿ ಯಾರು ಎಂಬ ಪ್ರಶ್ನೆ.

ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಗಟ್ಟಿಯಾಗಿದೆ. ಬಿಜೆಪಿಯಲ್ಲಿ ಒಳಜಗಳವಿದೆ. ಜೆಡಿಎಸ್‌ನಲ್ಲೂ ಅಸಮಾಧಾನಗಳಿವೆ. ಆದರೆ, ಉಭಯ ಪಕ್ಷಗಳ ಮೈತ್ರಿ ವಿಚಾರದಲ್ಲಿ ಸಂಬಂಧ ಉತ್ತಮವಾಗಿದೆ. ವಿಧಾನಸಭೆಗೆ 2028ರಲ್ಲಿ ನಡೆಯುವ ಚುನಾವಣೆಯಲ್ಲಿ ಈ ಮೈತ್ರಿಕೂಟದ ಸಾರಥ್ಯವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಥವಾ ಬಿಜೆಪಿಯಲ್ಲಿ ಯಾರಾದರೂ ನಾಯಕರು ವಹಿಸುವರೇ?

ರಾಜ್ಯ ಬಿಜೆಪಿ ಗುಂಪುಗಾರಿಕೆಯಿಂದ ನಲುಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ.ವೈ.ವಿಜಯೇಂದ್ರ ಅವರ ಕಾರ್ಯಶೈಲಿ ಅನೇಕ ಹಿರಿಯ ನಾಯಕರಿಗೆ ಬೇಸರ ತಂದಿದೆ. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ವಿಜಯೇಂದ್ರ ಪ್ರಾರಂಭದಿಂದಲೂ ಮಾಡಲಿಲ್ಲ. ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಆರ್.ಅಶೋಕ್‌ ಅವರ ಕಾರ್ಯ ನಿರ್ವಹಣೆ ಬಗ್ಗೆಯೂ ಪಕ್ಷದಲ್ಲಿ ಅಪಸ್ವರಗಳಿವೆ. ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂಪ್ಪ ಅವರ ನಂತರ ಸರ್ವಸಮ್ಮತ ನಾಯಕರಾಗಿ ಯಾರೂ ಹೊರಹೊಮ್ಮಿಲ್ಲ. ಯಡಿಯೂರಪ್ಪ ಅವರನ್ನೂ ಪ್ರಶ್ನೆ ಮಾಡುವ ನಾಯಕರು ಕೊನೆಗೆ ಹುಟ್ಟಿಕೊಂಡರೆಂಬ ಮಾತು ಬೇರೆ.

ಜೆಡಿಎಸ್‌ ಸೀಮಿತ ಪ್ರದೇಶದಲ್ಲಿ ತನ್ನ ನೆಲೆ ಹೊಂದಿದ್ದರೂ ಕುಮಾರಸ್ವಾಮಿ ಜನರ ಮಧ್ಯೆ ಇರುವ ನಾಯಕರು. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಅವರ ಪಕ್ಷದಲ್ಲಿ ಪ್ರಶ್ನಾತೀತ ನಾಯಕರು. ಬಿಜೆಪಿ ಹಾಗೂ ಜೆಡಿಎಸ್‌ ಈ ಎರಡು ಪಕ್ಷಗಳಲ್ಲಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರನ್ನು ಹೊರತುಪಡಿಸಿದರೆ ಉಳಿದ ನಾಯಕರಿಗೆ ವೋಟುಗಳನ್ನು ಮತ್ತೊಬ್ಬರಿಗೆ ಟ್ರಾನ್ಸ್‌ಫರ್‌ ಮಾಡುವ ಶಕ್ತಿ ಇಲ್ಲ. ಹೀಗಾಗಿ, ಮುಂದಿನ ಅಸೆಂಬ್ಲಿ ಚುನಾವಣೆ ಹೊತ್ತಿಗೆ ಮೈತ್ರಿಕೂಟದ ಸಾರಥ್ಯದ ಪಟ್ಟವನ್ನು ಕುಮಾರಸ್ವಾಮಿ ಅವರಿಗೆ ವಹಿಸಲಾಗುತ್ತದೆಯೇ ಎಂಬ ಪ್ರಶ್ನೆ ಉಭಯ ಪಕ್ಷಗಳಲ್ಲಿದೆ. ಅಥವಾ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ನಂತರ ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಹತ್ತಿರವಾಗಿದ್ದಾರೆ. ಕರ್ನಾಟಕದ ಅನೇಕ ವಿಚಾರಗಳಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕೆಗಳಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಏಕಕಾಲದಲ್ಲಿ ಎದುರಿಸಿ ನಿಂತಿದ್ದಾರೆ. ಪಕ್ಷದಲ್ಲಿ ಎಲ್ಲ ನಾಯಕರನ್ನು ಸಂಭಾಳಿಸಬಲ್ಲರು. ಮುಖ್ಯಮಂತ್ರಿಯಾಗಿದ್ದಾಗ ಗ್ರಾಮವಾಸ್ತವ್ಯದ ಮೂಲಕ ಸರಕಾರವನ್ನು ಜನರ ಬಳಿಗೆ ಒಯ್ದಿದ್ದವರು. ಈ ಎಲ್ಲ ಅನುಕೂಲಕರ ಅಂಶಗಳು ಕುಮಾರಸ್ವಾಮಿ ಅವರ ಬೆನ್ನಿಗಿದೆ. ಕೇಂದ್ರ ಬೃಹತ್‌ ಕೈಗಾರಿಕಾ ಸಚಿವರಾಗಿ ಸಾರ್ವಜನಿಕ ಉದ್ದಿಮೆಗಳನ್ನು ಪುನಶ್ಚೇತನಗೊಳಿಸುವ ಅವರ ಕಾರ್ಯ ಮೆಚ್ಚುಗೆ ಪಡೆದಿದೆ.

ಮುಂದಿನ ಅಸೆಂಬ್ಲಿ ಚುನಾವಣೆ ಇನ್ನೂ ಎರಡೂವರೆ ವರ್ಷಗಳಿವೆ. ಹೀಗಾಗಿ, ಮೈತ್ರಿಕೂಟದ ಸಾರಥ್ಯದ ಪ್ರಶ್ನೆ ಇಷ್ಟು ಬೇಗ ತೀರ್ಮಾನವಾಗುವ ವಿಷಯವೂ ಅಲ್ಲ. ಆದರೆ, ಅಂಥದ್ದೊಂದು ಚರ್ಚೆ ಮೈತ್ರಿಕೂಟದಲ್ಲಂತೂ ಇದೆ. “ರಾಜ್ಯ ರಾಜಕಾರಣಕ್ಕೆ ಯಾವತ್ತಿದ್ದರೂ ಒಂದು ದಿನ ವಾಪಸ್‌ ಆಗಲೇಬೇಕು. ರಾಜ್ಯ ರಾಜಕಾರಣದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ. ಜನರು ಅಪೇಕ್ಷಿಸಿದಾಗ ರಾಜ್ಯ ರಾಜಕಾರಣಕ್ಕೆ ವಾಪಸಾಗುತ್ತೇನೆ” ಎಂದು ಕುಮಾರಸ್ವಾಮಿ ಅವರು ಸಂಕ್ರಾಂತಿ ಹಬ್ಬದ ದಿನ ಗುರುವಾರವಷ್ಟೇ ಹೇಳಿರುವುದು ಕುತೂಹಲ ಕೆರಳಿಸಿದೆ.

ಇನ್ನು ಜೆಡಿಎಸ್‌ ಪಕ್ಷದ ವಿಚಾರವನ್ನೇ ನೋಡುವುದಾದರೆ ಈ ಪಕ್ಷ ಅಸ್ತಿತ್ವಕ್ಕೆ ಬಂದು ಈಗ 25 ವರುಷಗಳು. ಜೆಡಿಎಸ್‌ 1999ರಲ್ಲಿ ಅಸ್ತಿತ್ವಕ್ಕೆ ಬಂದರೂ ನೋಂದಣಿಯಾಗಿದ್ದು 2000ನೇ ಇಸವಿಯಲ್ಲಿ. ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಎರಡು ಬಾರಿ, ಬಿಜೆಪಿ ಜೊತೆ ಒಮ್ಮೆ ಅಧಿಕಾರ ನಡೆಸಿದೆ.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದು ಇಷ್ಟು ಸುದೀರ್ಘ ಕಾಲ ಅಸ್ತಿತ್ವದಲ್ಲಿರುವುದು ಇದೇ ಮೊದಲು. ಅದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜಕೀಯ ಶಕ್ತಿ, ಹೋರಾಟ. ಆದರೆ, ಜೆಡಿಎಸ್‌ ನೆಲೆ ಕುಸಿಯುತ್ತಿದೆ ವಿನಾ ವಿಸ್ತರಿಸುತ್ತಿಲ್ಲ. ಇದಕ್ಕೆ ಕಾರಣ ಹಲವು. ಜೆಡಿಎಸ್‌ ರಾಜಕೀಯವಾಗಿ ನಿರ್ಣಾಯಕ ಘಟ್ಟದಲ್ಲಿ ಕೈಗೊಂಡ ಕೆಲವು ನಿರ್ಧಾರಗಳು ಆ ಪಕ್ಷದ ಇವತ್ತಿನ ಸ್ಥಿತಿಗೆ ಕಾರಣ. ಅದು ಕುಮಾರಸ್ವಾಮಿ ಅವರ 20 ತಿಂಗಳ ಮುಖ್ಯಮಂತ್ರಿ ಅಧಿಕಾರ ಅವಧಿಯ ನಂತರ ಬಿಜೆಪಿಗೆ 2008ರಲ್ಲಿ ಅಧಿಕಾರ ಹಸ್ತಾಂತರಿಸದೇ ವಚನಭ್ರಷ್ಟರಾಗಿರುವುದೇ ಇರಬಹುದು, 2018ರಲ್ಲಿ ಕಾಂಗ್ರೆಸ್‌ ಜೊತೆ ಸೇರಿ ಸರಕಾರ ರಚಿಸಿದ್ದೇ ಆಗಿರಬಹುದು ಇಂತಹ ನಿಲುವುಗಳು ಜೆಡಿಎಸ್‌ಗೆ ಹಿನ್ನಡೆ ತಂದಿದೆ. ಬಿಜೆಪಿ ಬೆಳವಣಿಗೆಗೂ ಕಾರಣವಾಗಿದೆ.

ಜೆಡಿಎಸ್‌ ಕುಟುಂಬ ಪಕ್ಷ. ಆ ಪಕ್ಷಕ್ಕೆ ಇದು ಒಂದು ರೀತಿ ಶಕ್ತಿ. ಮತ್ತೊಂದು ಕಡೆ ದೌರ್ಬಲ್ಯ. ಪಕ್ಷದಲ್ಲಿ ಬೆಳೆದ ನಾಯಕರನ್ನು ಹೊರಹೋಗುವ ವಾತಾವರಣವನ್ನೂ ಸೃಷ್ಟಿಸಲಾಗಿದೆ. ಇದೇ ವೇಳೆ ಪಕ್ಷದಲ್ಲಿ ಬೆಳೆದ ನಾಯಕರೂ ಪಕ್ಷಕ್ಕೆ ಕೈಕೊಟ್ಟು ಕಾಂಗ್ರೆಸ್‌, ಬಿಜೆಪಿಗೆ ಸೇರಿರುವ ಉದಾಹರಣೆಗಳೂ ಸಾಕಷ್ಟಿವೆ. ಪಕ್ಷವನ್ನು ಕುಟುಂಬದಿಂದ ಹೊರ ತರುವ ಪ್ರಯತ್ನ ನಡೆದಿಲ್ಲ. ಇದರ ಬದಲು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮೂರನೇ ತಲೆಮಾರಿಗೆ ಪಕ್ಷದ ಜವಾಬ್ದಾರಿಯನ್ನು ವಹಿಸಲಾಗಿದೆ. ದೇವೇಗೌಡರ ಮೊಮ್ಮಗ, ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಪಕ್ಷದ ಸಂಘಟನೆಯಲ್ಲಿ ಈಗ ಕ್ರಿಯಾಶೀಲರು.

ನಿಖಿಲ್‌ ಕುಮಾರಸ್ವಾಮಿ ಮೂರು ಚುನಾವಣೆಗಳಲ್ಲಿ ಸೋತರೂ ಧೃತಿಗೆಟ್ಟಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯರು. ಇದು ಅವರ ಛಲ. ಆದರೆ, ಜೆಡಿಎಸ್‌ ಪಕ್ಷವು ಕುಟುಂಬಕ್ಕೆ ಸೀಮಿತವಾದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಇದರ ಲಾಭ ಪಡೆದಿರುವುದು ವಾಸ್ತವ. ಕರ್ನಾಟಕದಲ್ಲಿ ಬಿಜೆಪಿ ಬೆಳೆಯಲು ಕುಮಾರಸ್ವಾಮಿ ಅವರ ಪಾತ್ರ ಕಡಿಮೆ ಇಲ್ಲ.

ರಾಜ್ಯದಲ್ಲಿ 2018 ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 104 (ಶೇಕಡಾವಾರು ಮತ ಪಡೆದ ಪ್ರಮಾಣ 36.2), ಕಾಂಗ್ರೆಸ್ 80 ( ಶೇ. 39), ಜೆಡಿಎಸ್‌ 37 (ಶೇ.18.3) ಸ್ಥಾನಗಳನ್ನು ಪಡೆದಿತ್ತು.

ನಂತರ 2023 ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ 135 (ಶೇಕಡಾ ಮತ ಗಳಿಕೆ ಪ್ರಮಾಣ 43.2) ಸ್ಥಾನಗಳನ್ನು ಪಡೆದು ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಏರಿತು. ಬಿಜೆಪಿ 66 (ಶೇ.36.3), ಜೆಡಿಎಸ್‌ 19 (ಶೇ.13.4) ಗಳಿಸಿತ್ತು.

ವಿಧಾನಸಭೆಯಲ್ಲಿ ಜೆಡಿಎಸ್‌ ಸ್ಥಾನಗಳು ಕಳೆದ ಚುನಾವಣೆಯಲ್ಲಿ ಕಡಿಮೆಯಾಗಿದೆ. ಶೇಕಡಾವಾರು ಮತಗಳ ಗಳಿಕೆ ಪ್ರಮಾಣವೂ ಕುಗ್ಗಿದೆ. ಆಗ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳವು ಬಿಜೆಪಿ ಜೊತೆ ಮೈತ್ರಿ ಸಾಧಿಸಿ ಎರಡು ಸ್ಥಾನಗಳಲ್ಲಿ ಗೆದ್ದಿತು. ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯೂ ಆದರು. ಜೆಡಿಎಸ್‌ ಕಾರ್ಯಕರ್ತರಲ್ಲಿ ಸ್ವಲ್ಪ ಹುರುಪು ಮೂಡಿತು. ಲೋಕಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳವು ಬಿಜೆಪಿ ಜೊತೆ ಹೆಜ್ಜೆ ಹಾಕಿಲ್ಲದಿದ್ದರೆ ಪಕ್ಷಕ್ಕೆ ಮತ್ತಷ್ಟು ಹಿನ್ನಡೆ ಆಗಿರುತ್ತಿತ್ತು.

ಹಾಗೇ ನೋಡಿದರೆ ಜೆಡಿಎಸ್‌ ಅಸ್ತಿತ್ವ ತಳೆದಿದ್ದೇ ಬಿಜೆಪಿಯನ್ನು ವಿರೋಧಿಸುವ ಕಾರಣದಿಂದ. ಆದರೆ, ಇವತ್ತು ಅದೇ ಪಕ್ಷ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರದಲ್ಲಿ ಅಧಿಕಾರ ಹಂಚಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಟು ಟೀಕಾಕಾರರಾಗಿದ್ದ ದೇವೇಗೌಡರು ಇವತ್ತು ನರೇಂದ್ರ ಮೋದಿ ಅವರ ಆಡಳಿತವನ್ನು ಪ್ರಶಂಸಿಸುತ್ತಿದ್ದಾರೆ. ಇದು ರಾಜಕೀಯ ವಿಪರ್ಯಾಸ.

ರಾಜ್ಯದಲ್ಲಿ 1999ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಹಾಗೂ ಜೆ.ಎಚ್.ಪಟೇಲ್ ಅವರು ಬಿಜೆಪಿ ಜೊತೆ ಮೈತ್ರಿಯನ್ನು ನಿರ್ಧರಿಸಿದಾಗ ದೇವೇಗೌಡರು, ಎಸ್.ಆರ್.ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಇದನ್ನು ವಿರೋಧಿಸಿದರು. ಕೋಮುವಾದಿ ಬಿಜೆಪಿ ಜೊತೆ ಸಖ್ಯ ಸಾಧ್ಯವಿಲ್ಲವೆಂದರು. ಆಗ ಜನತಾದಳ ವಿಭಜನೆಯಾಗಿ ದೇವೇಗೌಡರು, ಎಸ್‌.ಆರ್.ಬೊಮ್ಮಾಯಿ, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜೆಡಿಎಸ್‌ ಅಸ್ತಿತ್ವಕ್ಕೆ ಬಂತು. ಹೆಗಡೆ ಹಾಗೂ ಪಟೇಲರು ಜೆಡಿಯು ಪಕ್ಷವನ್ನು ಕಟ್ಟಿದರು.

ಕಾಲಚಕ್ರ ಉರುಳಿದಂತೆ ಕರ್ನಾಟಕದಲ್ಲಿ ಇವತ್ತು ಜೆಡಿಎಸ್‌ಗೆ ಬಿಜೆಪಿಯೇ ಸಹಜ ಮೈತ್ರಿ. ಏಕೆಂದರೆ, ಜೆಡಿಎಸ್‌ ಪ್ರಾಬಲ್ಯವಿರುವ ಕಡೆ ಬಿಜೆಪಿ ದುರ್ಬಲ. ಬಿಜೆಪಿ ಶಕ್ತಿಯುತವಾಗಿರುವ ಕಡೆ ಜೆಡಿಎಸ್‌ಗೆ ನೆಲೆ ಇಲ್ಲ. ಇದು ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಉಭಯತ್ರರ ನಡುವೆ ಸ್ಥಾನ ಹೊಂದಾಣಿಕೆಗೂ ಹೆಚ್ಚು ಸಮಸ್ಯೆ ಆಗುವುದಿಲ್ಲ.

ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಸದ್ಯಕ್ಕೆ ಸವಾಲು ಇರುವುದು ಗ್ರೇಟರ್‌ ಬೆಂಗಳೂರಿನ ಪಂಚ ಪಾಲಿಕೆ ಚುನಾವಣೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಜೆಡಿಎಸ್‌ ವರಿಷ್ಠ ದೇವೇಗೌಡರು ಈಗಾಗಲೇ ಹೇಳಿದ್ದಾರೆ. ಆದರೆ, ಗ್ರೇಟರ್‌ ಬೆಂಗಳೂರಿನ ಪಂಚಪಾಲಿಕೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಇದರ ಲಾಭ ಕಾಂಗ್ರೆಸ್‌ ಪಡೆಯುವ ಸಾಧ್ಯತೆ ಹೆಚ್ಚು.

ಬೆಂಗಳೂರಿನ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್‌ಗೆ ನೆಲೆ ಇದೆ. ಇಡೀ ಬೆಂಗಳೂರು ವ್ಯಾಪ್ತಿಯಲ್ಲಿ ಜೆಡಿಎಸ್‌ ಪ್ರಭಾವವಿಲ್ಲ. ಆದರೆ, ಬಿಜೆಪಿಯು ಇಡೀ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ತನ್ನ ನೆಲೆ ಹೊಂದಿದೆ. ಹೀಗಾಗಿ, ಗ್ರೇಟರ್‌ ಬೆಂಗಳೂರಿನ ಪಂಚ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದರೆ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧಿಸಿದರೆ ಮಾತ್ರವೇ ಆ ಪಕ್ಷ ಆಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ.

ಜೆಡಿಎಸ್‌ ಮೊದಲು ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕು. ಸೀಮಿತ ಪ್ರದೇಶದಲ್ಲಿರುವ ತನ್ನ ನೆಲೆಯನ್ನು ಭದ್ರಪಡಿಸಿಕೊಂಡು ವಿಸ್ತರಿಸಿಕೊಳ್ಳಬೇಕು. ಹಾಗಾದಾಗ ಮಾತ್ರವೇ ಬಿಜೆಪಿಯು ಜೆಡಿಎಸ್ ಮೈತ್ರಿಯನ್ನು ಬಯಸುವುದು. ಜೆಡಿಎಸ್‌ ದುರ್ಬಲವಾದರೆ ಇದರ ಲಾಭ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ದಕ್ಕುತ್ತದೆ. ಇದನ್ನು ದೇವೇಗೌಡರು, ಕುಮಾರಸ್ವಾಮಿ ಅವರೂ ಚೆನ್ನಾಗಿ ಬಲ್ಲರು.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಸಂಘರ್ಷ: ಭಾರತೀಯರ ಕರೆತರಲು 'ಕೇಂದ್ರ' ಸಜ್ಜು, ಇಂದೇ ಮೊದಲ ವಿಮಾನದ ಹಾರಾಟ!

ಕುರ್ಚಿ ಹಗ್ಗ ಜಗ್ಗಾಟ: ದೆಹಲಿಗೆ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಜೊತೆ ಮಹತ್ವದ ಭೇಟಿ!

ಪುರುಷರ ವೇಷಧರಿಸಿ ಕಳ್ಳತನ; ಖತರ್ನಾಕ್ ಕಳ್ಳಿಯರು ಸಿಕ್ಕಿಬಿದ್ದಿದ್ದೇ ರೋಚಕ! Video

The UP Story: 'ಚೆನ್ನಾಗಿ ಕಾಣ್ತೀಯಾ..' ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿದ ಮುಸ್ಲಿಂ ಸ್ನೇಹಿತೆಯರು!, Video

ಸೂರ್ಯಕುಮಾರ್ ಯಾದವ್ ವಿರುದ್ಧ ಹೇಳಿಕೆ: ಬಾಲಿವುಡ್ ನಟಿಗೆ ಬಿಗ್ ಶಾಕ್, 100 ಕೋಟಿ ರೂ ಮಾನನಷ್ಟ ಮೊಕದ್ದಮೆ!

SCROLL FOR NEXT