ಸಂಗ್ರಹ ಚಿತ್ರ  online desk
ಅಂಕಣಗಳು

ಸಿದ್ಧ ಸೂತ್ರಗಳು ಎಲ್ಲರಿಗೂ ಅನ್ವಯ ಆಗುತ್ತಾ? (ಹಣಕ್ಲಾಸು)

ಗಮನಿಸಿ ವೈದ್ಯಕೀಯ ಜಗತ್ತಿನಲ್ಲಿ ಆರೋಗ್ಯ ಸರಿಯಾಗಿದೆ ಅಥವಾ ಇಲ್ಲ ಎನ್ನುವುದಕ್ಕೆ ಕೆಲವೊಂದು ಪ್ಯಾರಾಮೀಟರ್ ಇದೆ ಅಲ್ಲವೇ ? ಥೇಟ್ ಹಾಗೆ ಹಣಕಾಸು ಆರೋಗ್ಯಕ್ಕೂ ಇದೆ....

ರಮೇಶ್ ಅವರು 24 ರ ಹರಯದ ಸಾಫ್ಟ್ವೆರ್ ಇಂಜಿನಿಯರ್. ಅವರು ಬಹಳ ಮಹತ್ವಾಕಾಂಕ್ಷಿ. ನಲವತ್ತರ ವೇಳೆಗೆ ಬದುಕಿಗೆ ಬೇಕಾದಷ್ಟು ಸಂಪನ್ಮೂಲವನ್ನು ಕ್ರೋಢಿಸಿಕರಿಸಿ ಆ ನಂತರ ಕನಸಿನ ಹಿಂದೆ ಓಡುವ ಇರಾದೆ ಅವರದು.

ಹೀಗಾಗಿ ನನ್ನನ್ನು ಭೇಟಿ ಮಾಡಿ ಇದನ್ನು ಸಾಧಿಸಲು ಇರುವ ಮಾರ್ಗವನ್ನು ತಿಳಿಯಲು ಬಂದಿದ್ದರು. ಮುಂದಿನ ಆರು ವರ್ಷಗಳ ಕಾಲ ಮದುವೆಯಾಗುವ ಪ್ಲಾನ್ ಇಲ್ಲ ಎನ್ನುವುದನ್ನು ಕೂಡ ತಿಳಿಸಿದರು. ಕೆಲಸಕ್ಕೆ ಸೇರಿದ ಪ್ರಥಮ ದಿನಗಳಿಂದ ಮದುವೆಯಾಗುವ ತನಕದ ಸಮಯದಲ್ಲಿ ಹೆಚ್ಚಿನ ಜನ ಇಲ್ಲ ಸಲ್ಲದ ಖರ್ಚುಗಳನ್ನು ಹೊಂಚಿಕೊಳ್ಳುತ್ತಾರೆ. ಹೀಗಾಗಿ ಬದುಕಿನ ಆರಂಭದಲ್ಲಿ ಗಳಿಸಿಕೊಳ್ಳಬಹುದಾದ ವೇಗವನ್ನು ಅವರು ಕಳೆದುಕೊಂಡು ಬಿಡುತ್ತಾರೆ. ನಾನೇನು ಮಾಡಬೇಕು ತಿಳಿಸಿ ಎಂದಿದ್ದರು. ಅವರಿಗೆ ಹೇಳಿದ ಫಾರ್ಮುಲಾ ನಿಮ್ಮ ಮುಂದಿದೆ.

ನಾವು ಸಾಮಾನ್ಯವಾಗಿ 50:30:20 ರೇಶಿಯೋ ಬಗ್ಗೆ ಹೇಳುತ್ತೇವೆ. ಅಂದರೆ 50 ಪ್ರತಿಶತದಲ್ಲಿ ದೈನಂದಿನ ಎಲ್ಲಾ ಖರ್ಚುಗಳನ್ನು ಮುಗಿಸಿಬಿಡಬೇಕು. 30 ಪ್ರತಿಶತ ನಮ್ಮ ಬೇಡಿಕೆಗಳಿಗೆ ಮೀಸಲು ಇಡಬೇಕು. ಉಳಿದ 20 ಪ್ರತಿಶತವನ್ನು ಹೂಡಿಕೆ ಮಾಡಬೇಕು ಎನ್ನುವುದು ಆ ರೂಲ್ ಹೇಳುತ್ತದೆ.

ಗಮನಿಸಿ ವೈದ್ಯಕೀಯ ಜಗತ್ತಿನಲ್ಲಿ ಆರೋಗ್ಯ ಸರಿಯಾಗಿದೆ ಅಥವಾ ಇಲ್ಲ ಎನ್ನುವುದಕ್ಕೆ ಕೆಲವೊಂದು ಪ್ಯಾರಾಮೀಟರ್ ಇದೆ ಅಲ್ಲವೇ ? ಥೇಟ್ ಹಾಗೆ ಹಣಕಾಸು ಆರೋಗ್ಯಕ್ಕೂ ಇದೆ. ಮೆಡಿಕಲ್ ಸೈನ್ಸ್ ಪ್ರಿವೆನ್ಷನ್ ಇಸ್ ಬೆಟರ್ ದಾನ್ ಕ್ಯೂರ್ ಎನ್ನುತ್ತದೆ.ಅದಕ್ಕಾಗಿ ಕೆಲವೊಂದು ಪಥ್ಯವನ್ನು, ಕಸರತ್ತುಗಳನ್ನು ಮಾಡುವುದು ಉತ್ತಮ ಎನ್ನುತ್ತದೆ. ಈ 50:3೦:20 ರೂಲ್ ಆ ಪಥ್ಯದ ತರಹ! ಇದು ಎಲ್ಲರನ್ನೂ ಉದ್ದೇಶಿಸಿ ಸಾಮಾನ್ಯವಾಗಿ ಹೇಳುವ ರೂಲ್. ಕನಿಷ್ಟ ಈ ಪಥ್ಯವನ್ನು ಪಾಲಿಸಬೇಕು ಎನ್ನುವುದು ಆಶಯ. ಹೀಗಾಗಿ ಇದನ್ನು ಎಲ್ಲರೂ ಹೇಳುತ್ತಾರೆ. ಆದರೆ ಎಲ್ಲರೂ ಇದನ್ನೇ ಪಾಲಿಸಬೇಕು ಎನ್ನುವ ನಿಯಮವಿಲ್ಲ.

ಇಲ್ಲಿಯವರೆಗಿನ ನನ್ನ ಬದುಕಿನಲ್ಲಿ ಹಲವಾರು ಪ್ರಯೋಗಗಳನ್ನು ನನ್ನ ಮೇಲೆ ಮಾಡಿಕೊಂಡು ಕೆಲವೊಂದು ಅಂಶಗಳನ್ನು ಕಂಡುಕೊಂಡಿದ್ದೇನೆ. ಇದರಿಂದ ನಾನು ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದೇನೆ. ಆ ನಂತರದ ದಿನಗಳಲ್ಲಿ ಹಲವಾರು ನನ್ನ ಗ್ರಾಹಕರಿಗೆ ಈ ಸಲಹೆಯನ್ನು ನೀಡಿದ್ದೇನೆ. ಹಲವಾರು ಗೆದ್ದಿದ್ದಾರೆ. ಇನ್ನೊಂದಷ್ಟು ಜನ ಗೆಲುವಿನ ಹಾದಿಯಲ್ಲಿದ್ದಾರೆ. ಅದೇನು ಹೊಸ ಫಾರ್ಮುಲಾ ? ಈ ನಿಯಮವಿದೆಯಲ್ಲ ಇದು ಬಹಳ ಸರಳವಾಗಿದೆ. ಆದರೆ ಇದನ್ನು ತಪ್ಪದೆ ಪಾಲಿಸುವುದು ಮಾತ್ರ ಕಷ್ಟದ ಕೆಲಸ. ಯಾರಿಗೆಲ್ಲಾ ಇದನ್ನು ತಪ್ಪದೆ ಮಾಡಲು ಸಾಧ್ಯ ಅವರಿಗೆ ಗೆಲುವು ನಿಶ್ಚಿತ.

ಈ ನಿಯಮದ ಪ್ರಕಾರ ಒಬ್ಬ ವ್ಯಕ್ತಿಗೆ ಎಷ್ಟು ಮ್ಯಾಕ್ಸಿಮಮ್ ಉಳಿಸಲು , ಹೂಡಿಕೆ ಮಾಡಲು ಸಾಧ್ಯ ಅಷ್ಟು ಉಳಿಸುವುದು. ಅಂದರೆ ಗಳಿಕೆಯ 20 ಪ್ರತಿಶತ ಎನ್ನುವುದನ್ನು ಮರೆತು ಬಿಡಬೇಕು. ಅದೊಂದು ಜನರಲ್ ಹೇಳಿಕೆ. ನನ್ನ ಬದುಕಿನ ಪ್ರಥಮ ದಿನಗಳಲ್ಲಿ ನಾನು ಗಳಿಕೆಯ 80 ಪ್ರತಿಶತ ಹಣವನ್ನು ಉಳಿತಾಯ ಮಾಡುತ್ತಿದೆ. ಅದನ್ನು ಸರಿಯಾಗಿ ಹೂಡಿಕೆ ಮಾಡುತ್ತಿದ್ದೆ. ವರ್ಷದ ಕೊನೆಯಲ್ಲಿ ಸಿಕ್ಕಿದ ಹೆಚ್ಚುವರಿ ಹಣವನ್ನು ಸಹ ಹೂಡಿಕೆ ಮಾಡುತ್ತಿದ್ದೆ. 20 ಪ್ರತಿಶತದಲ್ಲಿ 5 ಪ್ರತಿಶತ ಹಣವನ್ನು ಕಲಿಕೆಯ ಮೇಲೆ ಹೂಡಿಕೆ ಮಾಡುತ್ತಿದ್ದೆ. ನಾವು ಗಳಿಸುವ , ಉಳಿಸುವ ಮತ್ತು ಹೂಡಿಕೆ ಮಾಡುವ ಭರದಲ್ಲಿ ಕಲಿಯುವುದನ್ನು ಮರೆತು ಬಿಡುತ್ತೇವೆ. ಇದು ಮಹಾ ಅಪರಾಧ. ಗಳಿಕೆಯ ಕನಿಷ್ಠ 5 ಪ್ರತಿಶತ ಹಣವನ್ನು ಕಲಿಕೆಗಾಗಿ ಮೀಸಲಿಡಬೇಕು. ಇನ್ನೈದು ಪ್ರತಿಶತ ಸುತ್ತಾಟಕ್ಕೆ ಎಂದು ತೆಗೆದಿಡಬೇಕು. ಸುತ್ತಾಟ ಕೂಡ ಕಲಿಕೆಯ ಭಾಗ ಎನ್ನುವುದನ್ನು ಮರೆಯಬಾರದು. ಮನುಷ್ಯ ಹೊಸ ದೇಶಗಳನ್ನು , ನಗರಗಳನ್ನು , ಜನರನ್ನು ಭೇಟಿ ಮಾಡುತ್ತಾ ಬಹಳ ಕಲಿಯುತ್ತಾನೆ. ಆತನಿಗೆ ಅರಿವಿಲ್ಲದೆ ಆತನ ಚಿಂತನ ಕ್ರಮ ಬದಲಾಗುತ್ತದೆ.

ಹೀಗಾಗಿ ಗಳಿಕೆಯ ಪ್ರಥಮ ಐದಾರು ವರ್ಷ ಗಳಿಕೆಯ 70 ರಿಂದ 80 ಪ್ರತಿಶತ ಉಳಿಕೆ ಮತ್ತು ಹೂಡಿಕೆಗಾಗಿ ಮೀಸಲಿಡಬೇಕು. ಇದಕ್ಕಿಂತ ಹೆಚ್ಚು ಸಾಧ್ಯ ಎನ್ನಿಸಿದರೆ ಅದನ್ನು ಮಾಡಬಹುದು. ಈಗ ಓದುಗರಲ್ಲಿ ಇಷ್ಟು ಪ್ರತಿಶತ ಹಣ ಉಳಿಸಲು ಸಾಧ್ಯವೇ ? ಉಳಿಸಬೇಕೇಕೆ ? ಇಂದಿನ ಅನಿಶ್ಚಿತ ಬದುಕಿನಲ್ಲಿ ನಾಳೆಗಾಗಿ ಅಷ್ಟೊಂದು ಹಣವನ್ನು ಇಂದಿನ ಸುಖವನ್ನು ಬಲಿ ಕೊಟ್ಟು ಉಳಿಸಬೇಕೇಕೆ ? ಎನ್ನುವ ಅಂಶಗಳು ಉದ್ಭವವಾಗಿರುತ್ತದೆ. ಅದಕ್ಕೆ ಹೇಳಿದ್ದು , ಈ ನಿಯಮ ಎಲ್ಲರಿಗೂ ಅಲ್ಲ. ಆದರೆ ಎಲ್ಲರೂ ತಮ್ಮದಾಗಿಸಿಕೊಳ್ಳಬಹುದು. ಅದಕ್ಕೆ ಒಂದಷ್ಟು ಮಾನಸಿಕ ಸಿದ್ಧತೆ ಮತ್ತು ಪ್ರಯತ್ನದ ಅವಶ್ಯಕತೆ ಇರುತ್ತದೆ.

ಇದರ ಜೊತೆಗೆ ಬದುಕಿನ ಉದ್ದೇಶವೇನು ಎನ್ನುವುದನ್ನು ಕೂಡ ಕಂಡುಕೊಂಡರೆ ಇದನ್ನು ಸಾಧಿಸುವುದು ಕಷ್ಟದ ಕೆಲಸವಲ್ಲ. ನಲವತ್ತರ ನಂತರ ನನಗಿಷ್ಟ ಬಂದದ್ದು ಮಾಡಬೇಕು ಎನ್ನುವುದು ಉದ್ದೇಶವಾಗಿದ್ದವರು ಈ ನಿಯಮವನ್ನು ಪಾಲಿಸಬೇಕು. ನೆನಪಿರಲಿ ಯಶಸ್ಸಿಗೆ ಶಾರ್ಟ್ ಕಟ್ ಇಲ್ಲ. ಹಣದ ಹರಿವು ಹೆಚ್ಚುತ್ತಾ ಹೋದಂತೆ ಸುತ್ತಾಟಕ್ಕೆ 5 ರ ಬದಲು 10 ಪ್ರತಿಶತ ಹಣವನ್ನು ಮೀಸಲಿಡುವುದು ಮಾಡಬೇಕು. 5 ಪ್ರತಿಶತದಲ್ಲಿ ಕಲಿಕೆ ಸಾಗುತ್ತಿದ್ದರೆ ಉತ್ತಮ , ಇಲ್ಲವಾದಲ್ಲಿ ಅದನ್ನು ಕೂಡ ಹೆಚ್ಚಿಸಿ ಕೊಳ್ಳಬೇಕು. ಬದಲಾವಣೆಯೇ ಬದುಕು ಎನ್ನುವ ಇವತ್ತಿನ ಕಾಲಘಟ್ಟದಲ್ಲಿ ಬದಲಾವಣೆಗೆ ಸಿದ್ಧವಾಗಿರುವುದು ಬಹಳ ಮುಖ್ಯ.

ಆ ನಂತರದ ಹತ್ತು ವರ್ಷದಲ್ಲಿ ಅಂದರೆ ಮದುವೆಗೆ ಮುಂಚೆ ಹೆಣ್ಣು ಮತ್ತು ಗಂಡು ಇಬ್ಬರೂ ಕುಳಿತು ತಮ್ಮ ಫೈನಾನ್ಸಿಯಲ್ ಜರ್ನಿ ಹೇಗಿರಬೇಕು ಎನ್ನುವುದನ್ನು ಪ್ಲಾನ್ ಮಾಡಬೇಕು. 40ಕ್ಕೆ ನಿವೃತ್ತಿ ಪಡೆದು ಕನಸಿನ ಹಿಂದೆ ಹೋಗುವುದರ ಕುರಿತು ಚರ್ಚೆ ಮಾಡಬೇಕು. ಒಮ್ಮತಕ್ಕೆ ಬರಬೇಕು. ಮುಂದಿನ ಹತ್ತು ವರ್ಷ ಒಂದು ಆದಾಯದಲ್ಲಿ ಅಂದರೆ ಗಂಡ ಅಥವಾ ಹೆಂಡತಿಯ ಆದಾಯದಲ್ಲಿ ಬದುಕಬೇಕು. ಇನ್ನೊಂದು ಆದಾಯ ಪೂರ್ಣವಾಗಿ ಉಳಿಕೆ ಮತ್ತು ಹೂಡಿಕೆಗೆ ಮೀಸಲಿಡಬೇಕು.

ಈ ಫಾರ್ಮುಲಾ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಪ್ರಯತ್ನ ಪಟ್ಟು ನೋಡಿ. ಇದು ಅಸಾಧ್ಯ ಎನ್ನಿಸಿದರೆ ಆಗ ಮಾಸಿಕ ಆದಾಯ ಎಷ್ಟೇ ಇರಲಿ ಅದನ್ನು ನೀವು ಈ ಅನುಪಾತದಲ್ಲಿ ವಿಭಾಗಿಸಿ. 30:20:10:10:30 ಅಂದರೆ ನೂರು ರೂಪಾಯಿಯಲ್ಲಿ 30 ರೂಪಾಯಿ ಬದುಕಿಗೆ, ಊಟ ಬಟ್ಟೆ , ಬಡ್ಡಿ, ಸಕಲವೂ ಇದರಲ್ಲಿ ಆಗಬೇಕು . 20 ರೂಪಾಯಿ ಸ್ನೇಹ , ನೆಟ್ ವರ್ಕಿಂಗ್ ಬೆಳಸಿಕೊಳ್ಳಲು. 10 ರೂಪಾಯಿ ಓದಿಗೆ,ಕಲಿಕೆಗೆ . 10 ರೂಪಾಯಿ ಓಡಾಟಕ್ಕೆ ,ಪ್ರವಾಸಕ್ಕೆ , ಕೊನೆಯ 30 ರೂಪಾಯಿ ತಪ್ಪದೆ ಹೂಡಿಕೆ ಮಾಡಬೇಕು. ಕಲಿಕೆ, ಓಡಾಟ ಮತ್ತು ಸಂಬಂಧ ವೃದ್ಧಿಸಿ ಕೊಳ್ಳುವುದು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಹಳ ಮುಖ್ಯ. ಕೇವಲ ಗಳಿಕೆ , ಉಳಿಕೆ ಮತ್ತು ಹೂಡಿಕೆ ಎನ್ನುವ ತತ್ವದಲ್ಲಿ ಕಳೆದು ಹೋಗುವುದು ಬೇಡ.

ಎಲ್ಲಿ ಮತ್ತು ಎಷ್ಟು ಹಣ ಹೂಡಬೇಕು ಎನ್ನುವುದರ ಬಗ್ಗೆ ಹಣಕಾಸು ಮಾರ್ಗದರ್ಶಕರಿಂದ ಸಲಹೆ ಮತ್ತು ಸೂಚನೆ ಪಡೆದು ಮುಂದುವರೆಯುವುದು ಉತ್ತಮ. ಈ ವಯೋಮಾನದಲ್ಲಿ ಒಂದಷ್ಟು ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳಬೇಕು. ಪ್ರಥಮ ಐದಾರು ವರ್ಷ ಪೂರವಾಗಿ ಈಕ್ವಿಟಿ ಮೇಲೆ ಹೂಡಿಕೆ ಮಾಡಬೇಕು. ಆ ನಂತರದ ಹತ್ತು ವರ್ಷ ಡೆಟ್ ಮತ್ತು ಈಕ್ವಿಟಿ ನಡುವೆ ಚರ್ಚಿಸಿ ಅಪಾಯವನ್ನು ವಿಂಗಡಿಸಿ ಕೊಳ್ಳಬೇಕು.

ಬಡವ ಎನ್ನುವುದು ಕೀಳಿರಿಮೆ ಹುಟ್ಟುಹಾಕಬಾರದು ಆಗ ಗೆಲುವು ಸಿಗುತ್ತದೆ. ಸಿರಿತನ ಎನ್ನುವುದು ಅಹಮಿಕೆಗೆ ಕಾರಣವಾಗಬಾರದು ಆಗ ಸಿರಿತನವನ್ನು ಉಳಿಸಿಕೊಳ್ಳಬಹುದು. ನಾನು ಈ ಸಮಾಜದಲ್ಲಿ ಬಡವನ ? ಮಧ್ಯಮವರ್ಗದವನ ? ಶ್ರೀಮಂತನ ? ಎನ್ನುವ ಗ್ರಹಿಕೆ ಬಹಳ ಮುಖ್ಯ. ಎಲ್ಲಿದ್ದೇವೆ ಎನ್ನುವುದು ತಿಳಿದರೆ ಎಲ್ಲಿಗೆ ಹೋಗಬೇಕು ಎನ್ನುವ ಜ್ಞಾನ ತಾನಾಗೇ ಹುಟ್ಟುತ್ತದೆ. ಎಲ್ಲಿದ್ದೇವೆ -ಎಲ್ಲಿಗೆ ಹೋಗಬೇಕು ಇವರೆಡರ ನಡುವಿನ ಅಂತರ ಕಡಿಮೆಯಾದಷ್ಟು ನಾವು ನಮ್ಮ ಉದ್ದೇಶಕ್ಕೆ ಹತ್ತಿರವಾಗುತ್ತಿದ್ದೇವೆ ಎಂದರ್ಥ

ಕೊನೆಮಾತು: ಗೆದ್ದವರ ಸೂತ್ರಗಳು ಎಲ್ಲವೂ ನಮಗೆ ಸೂಕ್ತ ಎನ್ನುವಂತಿಲ್ಲ. ನಮ್ಮ ಸಮಯ , ಸಂದರ್ಭಕ್ಕೆ ತಕ್ಕಹಾಗೆ ನಾವು ಬದಲಾಯಿಸಿಕೊಳ್ಳಬೇಕು. ನಕಲು ಮಾಡುವುದು ಬೇಡ , ಅವರಿಂದ ಪ್ರೇರಣೆ ಪಡೆಯೋಣ. ಕಾಣದ ನಾಳೆಗಾಗಿ ನಾವೇಕೆ ಉಳಿಸಬೇಕು ? ನಾಳೆ ಕಂಡವರಾರು? ನಾವಿರುತ್ತೇವೆ ಎನ್ನುವುದಕ್ಕೆ ಗ್ಯಾರಂಟಿ ಏನು ? ಇತ್ಯಾದಿ ಪ್ರಶ್ನೆಗಳನ್ನು ಕೇಳುವವರಿಗೆ, ಹೌದು ಈ ಬದುಕಿನಲ್ಲಿ ಯಾವ ಗ್ಯಾರಂಟಿ ಕೂಡ ಇಲ್ಲ.

ಇದು ಇವತ್ತು ಅಂತಲ್ಲ ಯಾವಾಗಲೂ ಇದು ಇರುವುದು ಹೀಗೆ. ಇಂದು ನಾವು ನಮ್ಮ ಸಮಾಜದಲ್ಲಿ ಕಾಣುತ್ತಿರುವ ಅದೆಷ್ಟೋ ಮಾವಿನ ಮರ ಮತ್ತು ತೆಂಗಿನ ಮರವನ್ನು ನಾವು ನೆಟ್ಟಿಲ್ಲ. ನೀರೂಡಿಸಿಲ್ಲ. ಆದರೆ ನಾವು ಅದರ ಪಲವನ್ನು ಸವಿಯುತ್ತಿದ್ದೇವೆ. ಹೂಡಿಕೆ ಎನ್ನುವುದು ಕೂಡ ಹಾಗೆ ಕೆಲವೊಮ್ಮೆ ಅದರ ಫಲಿತಾಂಶ ನಮಗೆ ಸಿಗದಿದ್ದರೂ ನಮ್ಮನ್ನು ನಂಬಿಕೊಂಡವರಿಗೆ ಖಂಡಿತ ಲಭಿಸುತ್ತದೆ. ಮನಸ್ಥಿತಿ ಬದಲಾದರೆ ಮಾತ್ರ ಪರಿಸ್ಥಿತಿ ಬದಲಾಗುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಭಾರೀ ದುರಂತ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರು ಸಾವು

ಜೈಲು ಪಾಲಾದ್ರೆ CM, PM ಕುರ್ಚಿ ಖಾಲಿ: ಕೇಂದ್ರದ 130ನೇ ಸಂವಿಧಾನ ತಿದ್ದುಪಡಿ ಬಿಲ್'ಗೆ ವಿಪಕ್ಷಗಳ ವಿರೋಧ; ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಹೈಡ್ರಾಮಾ ಫಿಕ್ಸ್..!

''ಲೋ-ವೇಜ್ ಫಾರಿನರ್ಸ್ ಬೇಡ'' ಎಂದ ಜೆಡಿ ವ್ಯಾನ್ಸ್: 'ನಿಮ್ಮ ಹಿಂದೂ ಪತ್ನಿಯೂ ವಿದೇಶಿಯಲ್ಲವೇ?' ಉಷಾ ವ್ಯಾನ್ಸ್ ಹಿನ್ನೆಲೆ ಹಿಡಿದು ನೆಟ್ಟಿಗರ ಹಿಗ್ಗಾಮುಗ್ಗಾ ಟ್ರೋಲ್..!

'ಪನಾಮ ಕಾಲುವೆ ಬಿಟ್ಟುಕೊಟ್ಟಿದ್ದು ದೊಡ್ಡ ಮೂರ್ಖತನದ ನಿರ್ಧಾರ': ಚೀನಾ ಕಬಳಿಸಲು ಯತ್ನಿಸುತ್ತಿದೆ; ಟ್ರಂಪ್

'ಗುರುದಕ್ಷಿಣೆಯೇ ನಮ್ಮ ಆದಾಯ, ಪ್ರತಿಯೊಂದು ರೂಪಾಯಿಗೂ ಲೆಕ್ಕವಿದೆ', ನಮಗೆ ನೋಂದಣಿಯ ಅಗತ್ಯವಿಲ್ಲ: ಪ್ರಿಯಾಂಕ್ ಖರ್ಗೆಗೆ RSS ತಿರುಗೇಟು