ಸಾಂಕೇತಿಕ ಚಿತ್ರ online desk
ಅಂಕಣಗಳು

ಪ್ರಕ್ಷುಬ್ಧ ಇರಾನ್: ಖಮೇನಿ ಸಾವಿನ ಬೆನ್ನಲ್ಲೇ ಅಧಿಕಾರದ ಕಿತ್ತಾಟ (ಜಾಗತಿಕ ಜಗಲಿ)

ನೂತನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿಯ ವಿಚಿತ್ರವಾದ ಮೌನ. ಮೊಜ್ತಾಬಾ ಸಾರ್ವಜನಿಕರ ದೃಷ್ಟಿಯಿಂದ ಬಹುತೇಕ ಸಂಪೂರ್ಣವಾಗಿ ಮರೆಯಾಗಿಯೇ ಉಳಿದಿದ್ದಾರೆ.

ಇರಾನ್ ತನ್ನ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಅನಿಶ್ಚಿತತೆಯ ಅವಧಿಯನ್ನು ಎದುರಿಸುತ್ತಿದೆ. ಸರ್ವೋಚ್ಚ ನಾಯಕ ಅಲಿ ಖಮೇನಿ ಸಾವಿನ ಬಳಿಕ, ಮೌನವಾಗಿ ಶೋಕಾಚರಣೆ ಮಾಡಬೇಕಾಗಿದ್ದ ಅವಧಿ ಈಗ ಅತ್ಯಂತ ಉನ್ನತ ಹಂತದಲ್ಲೇ ಅಧಿಕಾರದ ಕಿತ್ತಾಟದ ಸಮಯವಾಗಿ ರೂಪುಗೊಂಡಿದೆ. ಜನರ ಕಣ್ಣೀರು, ಪ್ರಾರ್ಥನೆಗಳ ನಡುವೆ, ಈಗ ಒಂದು ದೊಡ್ಡ ಪ್ರಶ್ನೆಯೂ ಕಾಣಿಸಿಕೊಂಡಿದೆ. ಅದೇನೆಂದರೆ, ದೇಶವನ್ನು ಇನ್ನು ಮುಂದೆ ನಿಜಕ್ಕೂ ನಿಯಂತ್ರಿಸುವುದು ಯಾರು?

ಟೆಹರಾನ್‌ನಲ್ಲಿ ಅಲಿ ಖಮೇನಿ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಈ ಉದ್ವಿಗ್ನತೆ ಅತ್ಯಂತ ಸ್ಪಷ್ಟವಾಗಿ ಗೋಚರಿಸಿತ್ತು. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅಲಿ ಖಮೇನಿ ಶವ ಪೆಟ್ಟಿಗೆಯ ಬಳಿ ನಡೆದು ಸಾಗುತ್ತಿದ್ದಾಗ, ಅಲ್ಲಿ ಸೇರಿದ್ದ ಒಂದಷ್ಟು ಜನರು ಅವರ ವಿರುದ್ಧವೇ ಘೋಷಣೆಗಳನ್ನು ಕೂಗಿದರು. 'ರಾಜಿ ಮಾಡಿಕೊಳ್ಳುವವನಿಗೆ ಸಾವಾಗಲಿ' (ಡೆತ್ ಟು ದ ಕಾಂಪ್ರಮೈಸರ್) ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕೋಪವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಬಹಳಷ್ಟು ತೀವ್ರಗಾಮಿ ಇರಾನಿಯನ್ ನಾಯಕರು ಪಾಶ್ಚಾತ್ಯ ದೇಶಗಳೊಡನೆ ಯಾವುದೇ ರಾಜಿ ಮಾಡಿಕೊಳ್ಳುವುದು ಎಂದರೆ ಅಲಿ ಖಮೇನಿ ತನ್ನ ಜೀವನದುದ್ದಕ್ಕೂ ಪ್ರತಿಪಾದಿಸಿದ್ದ ಇಸ್ಲಾಮಿಕ್ ಕ್ರಾಂತಿಗೆ ದ್ರೋಹ ಮಾಡಿದಂತೆ ಎಂದು ಭಾವಿಸಿರುವುದನ್ನು ನೆನಪಿಡಬೇಕು.

ಅವರ ಕೋಪ ಅಲ್ಲಿಗೇ ನಿಲ್ಲಲಿಲ್ಲ. ಡೊನಾಲ್ಡ್ ಟ್ರಂಪ್ ಜೊತೆ ಕದನ ವಿರಾಮ ಏರ್ಪಡಿಸಲು ನೆರವಾದ, ಇರಾನ್‌ಗೆ ಅಮೆರಿಕದ ತೀವ್ರ ನಿರ್ಬಂಧಗಳಿಂದ ಒಂದಷ್ಟು ನೆಮ್ಮದಿ ತಂದ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರನ್ನು ಅಂತ್ಯ ಸಂಸ್ಕಾರದ ಸ್ಥಳದಿಂದ ತೆರಳುವಂತೆ ಮಾಡಲಾಯಿತು. ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರು ಅರಾಘ್ಚಿಯತ್ತ ಕಲ್ಲು ತೂರಾಟ ನಡೆಸಿ, ಅವರನ್ನು ಓರ್ವ 'ದ್ರೋಹಿ' ಎಂದು ಕರೆದರು. ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಬದಲು ಅಮೆರಿಕದ ಜೊತೆ ಮಾತುಕತೆಗೆ ಕುಳಿತದ್ದು ತೀವ್ರಗಾಮಿಗಳಿಗೆ ಅಕ್ಷಮ್ಯ ಅಪರಾಧವಾಗಿ ಕಂಡಿತ್ತು.

ಈಗಾಗಲೇ ಹಬ್ಬಿದ್ದ ಗೊಂದಲಗಳನ್ನು ಇನ್ನಷ್ಟು ಹೆಚ್ಚಿಸಿದ್ದು ನೂತನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿಯ ವಿಚಿತ್ರವಾದ ಮೌನ. ಮೊಜ್ತಾಬಾ ಸಾರ್ವಜನಿಕರ ದೃಷ್ಟಿಯಿಂದ ಬಹುತೇಕ ಸಂಪೂರ್ಣವಾಗಿ ಮರೆಯಾಗಿಯೇ ಉಳಿದಿದ್ದಾರೆ. ರಾಜಕೀಯದಲ್ಲಿ ಇಂತಹ ಮೌನ ಅತ್ಯಂತ ಅಪಾಯಕಾರಿಯಾಗಿದ್ದು, ಉನ್ನತ ಹಂತದಲ್ಲಿನ ಖಾಲಿ ಕುರ್ಚಿ ಉಳಿದವರಿಗೆ ತಾವು ಪಡೆದುಕೊಳ್ಳಬೇಕಾದ ಬಹುಮಾನದಂತೆ ಕಾಣುವುದು ಸಹಜವಾಗಿದೆ.

ವರದಿಗಳ ಪ್ರಕಾರ, ಮೊಜ್ತಾಬಾ ಗೈರು ಹಾಜರಿ ಒಂದು ದೊಡ್ಡ, ನೈಜ ಅಧಿಕಾರದ ನಿರ್ವಾತವನ್ನೇ ಇರಾನಿನಲ್ಲಿ ಸೃಷ್ಟಿಸಿದೆ. ಒಂದಷ್ಟು ತೀವ್ರಗಾಮಿಗಳು ಮೊಜ್ತಾಬಾ ನಿಜಕ್ಕೂ ದೇಶದ ನೇತೃತ್ವ ವಹಿಸಲು ಸಮರ್ಥರೇ ಎಂದು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ಇನ್ನುಳಿದವರು, ಮೊಜ್ತಾಬಾ ಸುತ್ತಲಿನ ಅಧಿಕಾರಿಗಳು ಮೊಜ್ತಾಬಾ ನೇರ ಪಾಲ್ಗೊಳ್ಳುವಿಕೆ ಇಲ್ಲದೆ ತಾವೇ ಮೊಜ್ತಾಬಾ ಹೆಸರಿನಲ್ಲಿ ದೇಶದ ಆಡಳಿತ ನಡೆಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೇವಲ ಬೆರಳೆಣಿಕೆಯ ಜನರಷ್ಟೇ ನೂತನ ಸರ್ವೋಚ್ಚ ನಾಯಕನನ್ನು ಭೇಟಿಯಾಗಲು ಅವಕಾಶ ಇರುವುದರಿಂದ, ಸಂಸತ್ತಿನ ಸ್ಪೀಕರ್ ಆದ ಮೊಹಮ್ಮದ್ ಬಘೇರ್ ಘಾಲಿಬಾಫ್ ಮತ್ತು ಆತನ ಸಹಯೋಗಿಗಳೇ ಈಗ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವವರಂತೆ ಕಾಣುತ್ತಿದ್ದಾರೆ. ಇರಾನಿನ ಅತ್ಯಂತ ತೀವ್ರಗಾಮಿಗಳಿಗೆ ಈ ಬೆಳವಣಿಗೆ ಅನುಮಾನಾಸ್ಪದವಾಗಿ ಕಾಣುತ್ತಿದೆ. ಅವರು ಘಾಲಿಬಾಫ್ ಮತ್ತು ಅವರ ಗುಂಪು ಮೊಜ್ತಾಬಾಗೆ ನಿಷ್ಠರಂತೆ ವರ್ತಿಸುತ್ತಲೇ ದೇಶವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಲಾರಂಭಿಸಿದ್ದಾರೆ. ಇದನ್ನು 'ಮೌನ ದಂಗೆ' ಎಂದೂ ವಿರೋಧಿಗಳು ಕರೆಯುತ್ತಿದ್ದಾರೆ.

ಇವೆಲ್ಲ ಈಗ ಪಿಸುಮಾತುಗಳಾಗಿ ಉಳಿದಿಲ್ಲ. ತೀವ್ರಗಾಮಿ ಸಂಸದ ಮಹ್ಮೂದ್ ನಬಾವಿಯಾನ್ ಒಂದು ದಂಗೆ ಈಗಾಗಲೇ ಚಾಲ್ತಿಯಲ್ಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಸಿದ್ದಾರೆ ಎನ್ನಲಾಗಿದೆ. ಇನ್ನೊರ್ವ ಸಂಸತ್ ಸದಸ್ಯ ಕಮ್ರಾನ್‌ ಘಜನ್‌ಫರಿ ಸರಳ ಮಾತುಗಳಲ್ಲಿ ಇಂತಹದ್ದೇ ಆರೋಪ ಮಾಡಿದ್ದಾರೆ. ದೇಶದ ನೈಜ ಅಧಿಕಾರ ಈಗ ಮೌನವಾಗಿಯೇ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕೈಗೆ ವರ್ಗಾವಣೆಯಾಗಿದೆ ಎಂದು ಅವರು ಹೇಳಿದ್ದು, ಸರ್ವೋಚ್ಚ ನಾಯಕ ಮತ್ತು ಸಂಸತ್ತಿನ ಅಧಿಕಾರವನ್ನು ಹಂತ ಹಂತವಾಗಿ ದುರ್ಬಲಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಭಿನ್ನಾಭಿಪ್ರಾಯ ಈಗಾಗಲೇ ಬಹಿರಂಗ ಬೆದರಿಕೆಯ ಹಂತವನ್ನು ತಲುಪಿದೆ. ಭದ್ರತಾ ಪಡೆಗಳೊಡನೆ ಸಂಪರ್ಕ ಹೊಂದಿರುವ ಓರ್ವ ಧಾರ್ಮಿಕ ಗಾಯಕ ಅಧ್ಯಕ್ಷ ಪೆಜೆಶ್ಕಿಯಾನ್ ಅವರಿಗೆ ಬಹಿರಂಗ ಬೆದರಿಕೆ ಒಡ್ಡಿದ್ದಾನೆ. ಒಂದು ವೇಳೆ ಸರ್ವೋಚ್ಚ ನಾಯಕನ ಷರತ್ತುಗಳನ್ನು ಕಡೆಗಣಿಸಿದರೆ ನಿಮ್ಮ ಜೀವನವನ್ನೇ ನರಕವಾಗಿಸುವುದಾಗಿ ಆತ ಬೆದರಿಸಿದ್ದಾನೆ. ಆತನ ಮಾತುಗಳು ಬಹಳಷ್ಟು ಜನರಿಗೆ ಆಘಾತ ಉಂಟುಮಾಡಿದ್ದರೂ, ಆತನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿರುವ ವರದಿಗಳಿಲ್ಲ. ಇದು ತೀವ್ರಗಾಮಿಗಳು ಇಂದಿಗೂ ಎಷ್ಟರಮಟ್ಟಿನ ಭದ್ರತೆಯನ್ನು ಹೊಂದಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಇದೇ ವೇಳೆ, ಅಮೆರಿಕದ ಜೊತೆಗಿನ ದುರ್ಬಲ ಕದನ ವಿರಾಮವೂ ಕುಸಿಯುತ್ತಿದೆ. ಇರಾನಿನ ರೆವಲ್ಯೂಷನರಿ ಗಾರ್ಡ್ಸ್ ಪಡೆ ಜಗತ್ತಿನ ಬಹುದೊಡ್ಡ ಪಾಲು ತೈಲ ಮತ್ತು ಅನಿಲ ಸಂಚರಿಸುವ ಮಹತ್ವದ ಸಮುದ್ರ ಮಾರ್ಗವಾದ ಹೊರ್ಮುಸ್ ಜಲಸಂಧಿಯಲ್ಲಿ ಸಾಗುವ ಹಡಗುಗಳ ಮೇಲೆ ದಾಳಿ ಮಾಡಿದ ಬಳಿಕ ಈ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಯಿತು. ಅಮೆರಿಕ ಇರಾನ್ ಮೇಲೆ ಪ್ರತಿದಾಳಿ ನಡೆಸಿದ್ದು, ಇದರಿಂದ ಕುಪಿತರಾದ ತೀವ್ರಗಾಮಿಗಳು ಸಂಪೂರ್ಣ ಕದನ ವಿರಾಮ ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಕೆಲವರಂತೂ ತಮ್ಮ ಆಗ್ರಹದಲ್ಲಿ ಇನ್ನಷ್ಟು ಮುಂದಕ್ಕೆ ಸಾಗಿದ್ದಾರೆ. ಒಂದಷ್ಟು ನಾಯಕರಂತೂ ತೀವ್ರ ಆಲೋಚನೆಗಳನ್ನು ಪ್ರಕಟಿಸಿದ್ದು, ಪಶ್ಚಿಮ ಏಷ್ಯಾ ಪ್ರದೇಶದ ಅಮೆರಿಕನ್ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿ, ಅಮೆರಿಕನ್ ಸೈನಿಕರನ್ನು ಒತ್ತೆಯಾಳುಗಳಾಗಿ ಹೊಂದಬೇಕು ಎಂದು ಸಲಹೆ ನೀಡಿದ್ದಾರೆ. ಇವೆಲ್ಲ ಬೆಳವಣಿಗೆಗಳು ಇರಾನ್ ಒಳಗಿನ ಮನಸ್ಥಿತಿ ಎಷ್ಟು ತೀವ್ರವಾಗಿದೆ ಎನ್ನುವುದನ್ನು ತೋರಿಸುತ್ತದೆ.

ಆದರೆ, ತೀವ್ರಗಾಮಿಗಳು ನಿಧಾನವಾಗಿ ತಮ್ಮ ಬಿಗಿ ಕಳೆದುಕೊಳ್ಳುತ್ತಿರುವಂತೆ ಕಂಡುಬರುತ್ತಿದ್ದಾರೆ. ಜುಲೈ 14ರಂದು, ನಬಾವಿಯನ್ ಮತ್ತು ಅಮೆರಿಕನ್ ಒಪ್ಪಂದದ ಕಟು ಟೀಕಾಕಾರನಾದ ಇನ್ನೋರ್ವ ಸದಸ್ಯನನ್ನು ಸಂಸತ್ತಿನ ಪ್ರಬಲ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನಿಂದ ಹೊರ ಹಾಕಲಾಗಿದೆ. ಕುತೂಹಲಕಾರಿಯಾಗಿ, ನಬಾವಿಯನ್ ಒಪ್ಪಂದದ ಅತಿದೊಡ್ಡ ವಿರೋಧಿಯಾಗಿ ಮಾರ್ಪಡುವ ಮುನ್ನ, ಸ್ವತಃ ಮಾತುಕತೆಯ ತಂಡದ ಸದಸ್ಯನಾಗಿದ್ದರು.

ಇವರಿಬ್ಬರು ಸದಸ್ಯರನ್ನು ತೆಗೆದು ಹಾಕಿರುವುದು ಅತ್ಯಂತ ತೀವ್ರಗಾಮಿ ಧ್ವನಿಗಳ ಪ್ರಭಾವವನ್ನು ಕಡಿಮೆಗೊಳಿಸುವ ಸಲುವಾಗಿಯೂ ಇರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ತೀವ್ರಗಾಮಿಗಳು ವ್ಯವಸ್ಥೆಗೆ ಒಂದು ಭಾರವಾಗಿದ್ದು, ದೇಶಕ್ಕೆ ಈಗ ಒಗ್ಗಟ್ಟು ಮತ್ತು ಶಾಂತಿಯ ಅಗತ್ಯವಿರುವಾಗ ಅವರು ಬಹಿರಂಗವಾಗಿಯೇ ಒಳ ಜಗಳಗಳಲ್ಲಿ ನಿರತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇವೆಲ್ಲದರ ಪರಿಣಾಮ ಇರಾನ್ ಮೇಲೆ ಹೇಗಿರಲಿದೆ? ತಮ್ಮ ಮನೆಗಳಿಂದ ಗಮನಿಸುತ್ತಿರುವ ಜನ ಸಾಮಾನ್ಯರಿಗೆ ಈ ಚಿತ್ರಣ ಏಕಕಾಲದಲ್ಲಿ ಆತಂಕಕಾರಿ ಮತ್ತು ವಾಸ್ತವ ಬಿಚ್ಚಿಡುವುದೂ ಆಗಿದೆ. ಇರಾನಿನ ನಾಯಕರು ಪರಸ್ಪರ ಕೋಪ, ಅನುಮಾನ, ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಗಳಿಂದ ವಿಭಜಿಸಲ್ಪಟ್ಟಿದ್ದಾರೆ. ಇರಾನಿನ ನಾಯಕರಿಗೆ ಈಗ ಯುದ್ಧ ನಿಲ್ಲಿಸುವುದು, ನಿರ್ಬಂಧಗಳನ್ನು ತೆಗೆದುಹಾಕುವುದು, ಮತ್ತು ಹೊರ್ಮುಸ್ ಜಲಸಂಧಿಯ ಮೇಲೆ ನಿಯಂತ್ರಣ ಹೊಂದುವುದು ಅತ್ಯಂತ ಮುಖ್ಯವಾಗಿದೆ.

ದಿನದ ಕೊನೆಗೆ, ಈ ಸಮಾನ ಗುರಿಗಳೇ ವಿಭಜಿತವಾಗಿರುವ ನಾಯಕತ್ವವನ್ನು ಹಿಡಿದಿಡುವ ಏಕೈಕ ಸೂತ್ರವಾಗಿದೆ. ಆದರೆ, ಮೇಲಿನ ಹಂತದಲ್ಲೇ ಇಂತಹ ಕಹಿ ವಿಭಜನೆಗಳು, ಪ್ರತೀಕಾರಕ್ಕಾಗಿ ಕಾತರಿಸುತ್ತಿರುವ ತೀವ್ರಗಾಮಿಗಳು, ದಿನದಿಂದ ದಿನಕ್ಕೆ ಶಕ್ತಿಶಾಲಿಯಾಗುತ್ತಿರುವ ರೆವಲ್ಯೂಷನರಿ ಗಾರ್ಡ್ಸ್ ಪಡೆಗಳ ಕಾರಣದಿಂದ ಮುಂದಿನ ದಿನಗಳು ಇರಾನ್ ಪಾಲಿಗೆ ಅತ್ಯಂತ ಅನಿಶ್ಚಿತ ಮತ್ತು ಊಹಿಸಲು ಸಾಧ್ಯವಿಲ್ಲದಂತಾಗಿಸಿವೆ. ಇರಾನ್ ಅಂತಿಮವಾಗಿ ಯಾವುದೇ ಮಾರ್ಗವನ್ನು ಆರಿಸಿದರೂ, ಜಗತ್ತು ಅದನ್ನು ಸೂಕ್ಷ್ಮವಾಗಿ ಗಮನಿಸಲಿದೆ. ಏಕೆಂದರೆ, ಟೆಹರಾನ್‌ನಲ್ಲಿ ಇಂದು ಕೈಗೊಳ್ಳುವ ತೀರ್ಮಾನಗಳು ನಾಳೆ ಸಂಪೂರ್ಣ ಪ್ರದೇಶದ ಶಾಂತಿ ಮತ್ತು ಸ್ಥಿರತೆಯನ್ನು ರೂಪಿಸಲಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿಯಲ್ಲಿ 'ಕೈ' ಕಮಾಂಡ್ ನಿರ್ಣಾಯಕ ಸಭೆ: 20 ಸಚಿವರ ಪಟ್ಟಿಗೆ ಇಂದೇ ಅಂತಿಮ ಮುದ್ರೆ ಸಾಧ್ಯತೆ, ಯಾರಿಗೆ ಒಲಿಯಲಿದೆ ಅದೃಷ್ಟ?

ಸಚಿವ ಸಂಪುಟಕ್ಕೆ ಹೊಸ ಮುಖಗಳ ಸೇರ್ಪಡೆಯಿಂದ ಕಾಂಗ್ರೆಸ್ ಮತ್ತಷ್ಟು ಬಲಿಷ್ಠ: ಸತೀಶ್ ಜಾರಕಿಹೊಳಿ

'vote chori' ಆರೋಪದ ಕೇಂದ್ರಬಿಂದುವಾಗಿದ್ದ ಬಿ.ಆರ್. ಪಾಟೀಲ್‌ಗೆ ಸಚಿವ ಸ್ಥಾನ ಭಾಗ್ಯ?

ನ್ಯಾಯ ಕೇಳಿದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್; ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಂತಿದೆ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರಿಗರೇ ಗಮನಿಸಿ! ನಾಳೆ 12 ಗಂಟೆ ಕಾವೇರಿ ನೀರು ಪೂರೈಕೆ ಸ್ಥಗಿತ; ನಿಮ್ಮ ಏರಿಯಾ ಪಟ್ಟಿಯಲ್ಲಿದೆಯೇ ಚೆಕ್ ಮಾಡಿ..!