ಕರ್ನಾಟಕದ ರಾಜಕಾರಣ ಮುಂಬರುವ ದಿನಗಳಲ್ಲಿ ಹೊಸ ಆಯಾಮ ಪಡೆದುಕೊಳ್ಳುವ ಎರಡು ಪ್ರಮುಖ ವಿದ್ಯಮಾನಗಳು ಬುಧವಾರ ನಡೆದಿವೆ. ಒಂದು- ಮುಖ್ಯಮಂತ್ರಿಯಾಗಿ ದೊಡ್ಡ ಆಲದಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರ ಪ್ರಮಾಣವಚನ. ಮತ್ತೊಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ನೇಮಕ. ರಾಜ್ಯ ರಾಜಕಾರಣದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಪ್ರಮಾಣವಚನ ದಿನದಂದೇ ಆಳುವ ಪಕ್ಷದ ರಾಜ್ಯಾಧ್ಯಕ್ಷರ ನೇಮಕದ ಪ್ರಕಟಣೆ ಹೊರಬಿದ್ದಿದೆ. ಕಾಂಗ್ರೆಸ್ಸಿನ ಈ ಎರಡು ಬೆಳವಣಿಗೆ ರಾಜ್ಯ ರಾಜಕಾರಣದ ಮುಂದಿನ ಹೊಸ ಹಾದಿಗೆ ನಾಂದಿ ಹಾಡಿದೆ.
ರಾಜ್ಯ ಕಾಂಗ್ರೆಸ್ಸಿನ ಆಂತರಿಕ ಈ ಬೆಳವಣಿಗೆ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿದೆ. ಅದರಲ್ಲೂ ಮೂಲ ಕಾಂಗ್ರೆಸ್ಸಿಗರಿಗೆ ಸಂಭ್ರಮವೋ ಸಂಭ್ರಮ. ಏಕೆಂದರೆ, ಶಿವಕುಮಾರ್ ಹಾಗೂ ಹರಿಪ್ರಸಾದ್ ಮೂಲ ಕಾಂಗ್ರೆಸ್ಸಿಗರು. ಕಾಂಗ್ರೆಸ್ ಬಿಟ್ಟು ಎಂದೂ ಬೇರೆ ಪಕ್ಷಕ್ಕೆ ಜಿಗಿದವರಲ್ಲ. ಶಿವಕುಮಾರ್ ಅವರಿಗೆ 1994ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನಿರಾಕರಿಸಿದರೂ ಬಂಡೆದ್ದು ಸ್ಪರ್ಧಿಸಿ ಗೆದ್ದರೆ ವಿನಾ ಪಕ್ಷಾಂತರ ಮಾಡಲಿಲ್ಲ. ಈ ಇಬ್ಬರು ನಾಯಕರು ಅಧಿಕಾರ ಬಂದಾಗ ಮೂಲ ಕಾಂಗ್ರೆಸ್ಸಿಗರನ್ನು ನಿರ್ಲಕ್ಷಿಸಿದವರೂ ಅಲ್ಲ. ಪಕ್ಷ ನಿಷ್ಠೆ ಹಾಗೂ ದುಡಿಮೆ ಅವರ ಶಕ್ತಿ.
ಹಿಂದುಳಿದ ಈಡಿಗ ಸಮಾಜದ ಹರಿಪ್ರಸಾದ್ ತಾವು ನಂಬಿದ ತತ್ವ, ಸಿದ್ದಾಂತಗಳಿಗೆ ಕಟಿಬದ್ಧ. ಸೈದ್ಧಾಂತಿಕವಾಗಿ ಗಟ್ಟಿ. ಪ್ರಗತಿಪರ ಚಿಂತಕರು. ಶಿವಕುಮಾರ್ ಅವರದು ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಅಚಲ ನಿಷ್ಠೆ. ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾದ ಮರುದಿನವೇ ಹರಿಪ್ರಸಾದ್ ಪಕ್ಷದ ಶಾಸಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಯಾರಿಗೆ ಅಧಿಕಾರ ಹಾಗೂ ಸ್ಥಾನಮಾನ ಬೇಕೋ ಅಂಥವರು ಶಿವಕುಮಾರ್ ಕಡೆಗೆ ಹೋಗಿ, ಪಕ್ಷವನ್ನು ಸದೃಢವಾಗಿ ಬೆಳಸಬೇಕು ಎನ್ನುವವರು ನಮ್ಮ ಜೊತೆ ಬನ್ನಿ ಎಂದಿರುವುದು ಪಕ್ಷದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ. ಪಕ್ಷದ ಅಧ್ಯಕ್ಷರಾಗಿ ತಮ್ಮ ಮುಂದಿನ ದಾರಿ ಹೇಗಿರುತ್ತದೆ ಎಂಬ ಸಂದೇಶವನ್ನೂ ಅವರು ಸಾರಿದ್ದಾರೆ.
ರಾಜ್ಯ ಕಾಂಗ್ರೆಸ್ಸಿನ ಶಿವಕುಮಾರ್-ಹರಿಪ್ರಸಾದ್ ಅವರ ಈ ಜೋಡಿ ಈಗ ಪ್ರತಿಪಕ್ಷದವರ ಲೆಕ್ಕಾಚಾರವನ್ನೇ ಗೊಂದಲಕ್ಕೆ ದೂಡಿದೆ. ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಬಿಜೆಪಿ ಈಗ ಹೊಸ ತಂತ್ರಗಳನ್ನು ಹೊಸೆಯಬೇಕಾಗಿದೆ. ಒಕ್ಕಲಿಗ ಸಮಾಜದ ಶಿವಕುಮಾರ್ ಅವರ ಪ್ರಾಬಲ್ಯ ವಿಸ್ತಾರವಾಗದಂತೆ ತಡೆಯಲು ಒಕ್ಕಲಿಗ ಸಮುದಾಯ ಅಧಿಕ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಜೆಡಿಎಸ್ ಹೊಸ ಪಟ್ಟುಗಳನ್ನು ಹಾಕಬೇಕಿದೆ. ಕರ್ನಾಟಕದ ರಾಜಕಾರಣ ಹೊಸ ಆಯಾಮ ಪಡೆದುಕೊಳ್ಳಲು ಭೂಮಿಕೆ ಸಿದ್ದವಾಗಿದೆ.
ರಾಜ್ಯ ಕಾಂಗ್ರೆಸ್ಸಿಗೆ ಈಗ ಅಧಿಕಾರದಲ್ಲಿದ್ದರೂ ಸವಾಲಿನ ಕಾಲ. ಕಾರಣವಿಷ್ಟೇ. ಮಾಸ್ ಲೀಡರ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದೆ. ಆ ಮೂಲಕ ಮುಂದಿನ ಚುನಾವಣೆಗಳಲ್ಲಿ ಅಹಿಂದ ಮತ ಬ್ಯಾಂಕ್ ಮುನಿಸಿಕೊಳ್ಳಬಹುದಾದ ಅಪಾಯವನ್ನು ಮೈಮೇಲೆ ಎಳೆದುಕೊಂಡಿದೆ. ಸಿದ್ದರಾಮಯ್ಯ ಅವರೇನೋ ಹೈಕಮಾಂಡ್ ಸೂಚನೆ ಮೇರೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತ್ಯಂತ ಘನತೆಯಿಂದ ವರ್ತಿಸಿ ಅಧಿಕಾರ ಹಸ್ತಾಂತರಿಸಿದ್ದಾರೆ. ಆದರೆ, ಅವರ ನಾಯಕತ್ವದಲ್ಲಿ ವಿಶ್ವಾಸವಿರಿಸಿರುವ ಅಹಿಂದ ಮತದಾರರು ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಕೈ ಹಿಡಿಯುವರೇ ಎಂಬ ಪ್ರಶ್ನೆ ಇದೆ. ಅದರಲ್ಲೂ ಸಿದ್ದರಾಮಯ್ಯ ಅವರ ಕುರುಬ ಸಮಾಜದ ಮತದಾರರು ತೋರುವ ಒಲವು-ನಿಲುವು ಕುತೂಹಲಕಾರಿಯಾಗಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣಕ್ಕೆ ಕುರುಬ ಸಮಾಜದವರು ಸಿದ್ದರಾಮಯ್ಯ ಅವರನ್ನು ಕಳೆದ ಅನೇಕ ವರ್ಷಗಳಿಂದ ಸಂಘಟಿತರಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಇನ್ನು ಆ ಪ್ರಶ್ನೆ ದೂರವೇ ಉಳಿಯಿತು. ತಮ್ಮ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆಂಬ ಕಾರಣಕ್ಕೆ ಅಹಿಂದ ಮತದಾರರು ಕಾಂಗ್ರೆಸ್ ಬೆಂಬಲಿಸುವುದಕ್ಕೂ, ಕಾಂಗ್ರೆಸ್‌ನಲ್ಲಿಯೇ ಮತ್ತೊಬ್ಬರು ಮುಖ್ಯಮಂತ್ರಿ ಆಗುತ್ತಾರೆ ಎಂದಾಗ ಅಹಿಂದ ಮತದಾರರು ಕಾಂಗ್ರೆಸ್ ಬೆಂಬಲಿಸುವುದಕ್ಕೂ ವ್ಯತ್ಯಾಸವಿದೆ.
ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್‌ಗೆ ಶಿವಕುಮಾರ್ ಅವರಲ್ಲಿ ಧೃಡ ವಿಶ್ವಾಸವಿದೆ. ಶಿವಕುಮಾರ್ ಅವರ ಸಂಘಟನಾ ಶಕ್ತಿ, ಆಡಳಿತ ವೈಖರಿಯಲ್ಲಿ ಅಪಾರ ನಂಬಿಕೆ ಇದೆ. ಜೊತೆಯಲ್ಲಿ ಸಿದ್ದರಾಮಯ್ಯ ಅವರನ್ನು ವಿಶ್ವಾಸದಲ್ಲೇ ಇರಿಸಿಕೊಂಡಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಿದೆ. ರಾಜ್ಯಸಭಾ ಸದಸ್ಯತ್ವ ಸ್ಥಾನ ಒಪ್ಪಿಕೊಳ್ಳುವಂತೆ ಸಲಹೆ ನೀಡಿದೆ. ಶಿವಕುಮಾರ್ ಸಚಿವ ಸಂಪುಟ ರಚನೆಯಲ್ಲಿ ಸಿದ್ದರಾಮಯ್ಯ ಅವರ ಛಾಯೆಯನ್ನು ಕಾಣಬಹುದು. ಶಿವಕುಮಾರ್ ಸಂಪುಟದಲ್ಲಿ ತಮ್ಮ ಆಪ್ತರನ್ನು ಸೇರಿಸಲು ಸಿದ್ದರಾಮಯ್ಯ ಯಶಸ್ವಿಯೂ ಆಗಿದ್ದಾರೆ. ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿದ್ದಾರೆ. ಹಿಂದುಳಿದ ವರ್ಗಗಳಲ್ಲಿ ತಮ್ಮ ಪುತ್ರ ಡಾ.ಯತೀಂದ್ರ ಹಾಗೂ ತಮ್ಮ ಆಪ್ತ ಬೈರತಿ ಸುರೇಶ್ ಅವರಿಗೆ ಸಚಿವ ಸ್ಥಾನ ಲಭ್ಯವಾಗುವಂತೆ ನೋಡಿಕೊಂಡಿದ್ದಾರೆ. ಸಂಪುಟ ರಚನೆಯ ಮೊದಲ ಕಂತಿನಲ್ಲಿ ಶಿವಕುಮಾರ್ ಅವರಿಗೆ ಅವರ ಆಯ್ಕೆಯ ಮುಕ್ತ ಸ್ವಾತಂತ್ರ್ಯ ದೊರೆತಿಲ್ಲ ಎಂಬುದು ಸ್ಪಷ್ಟ. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್ ಅವರ ನೇಮಕದಲ್ಲೂ ಸಿದ್ದರಾಮಯ್ಯ ಅವರ ಪ್ರಭಾವ ಇದೆ.
ಶಿವಕುಮಾರ್ ಅವರಿಗೆ ಆಡಳಿತದಲ್ಲಿ ಹತ್ತು ಹಲವು ಸವಾಲುಗಳಿವೆ. ಕಳೆದ ಮೂರು ವರ್ಷಗಳಿಂದ ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಮೊದಲು ಚುರುಕು ಮುಟ್ಟಿಸಬೇಕಿದೆ. ರಾಜ್ಯ ಸರಕಾರದ ಸಾಲದ ಹೊರೆ ಅಗಾಧವಾಗಿದೆ. ಸಾಲದ ಸುಳಿಯಿಂದ ರಾಜ್ಯವನ್ನು ಪಾರು ಮಾಡಬೇಕಿದೆ. ಗ್ಯಾರಂಟಿ ಯೋಜನೆ ಜಾರಿ ಹೊರತುಪಡಿಸಿದರೆ ಸರಕಾರ ಮೇಲೆದ್ದಿಲ್ಲ. ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನ, ಬೆಂಗಳೂರಿನ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಸಿದ್ದರಾಮಯ್ಯ ಅವರ ಪ್ರಕಾರವೇ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಇನ್ನೂ ಶೇಕಡ 50ರಷ್ಟು ಈಡೇರಬೇಕಿದೆ. ಬಿಡದಿ ಟೌನ್ ಶಿಪ್ ಯೋಜನೆಗೆ ಸ್ಥಳೀಯ ರೈತರ ವಿರೋಧ ಇದೆ. ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಶಿವಕುಮಾರ್ ಅಧಿಕಾರ ಅವಧಿ ಎರಡು ವರ್ಷಗಳು ಮಾತ್ರ. ಆದರೆ, ನಿರೀಕ್ಷೆ ಅಪಾರ. ಅದೇ ಬಹುದೊಡ್ಡ ಸವಾಲು.
ಶಿವಕುಮಾರ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾಗ ಜಾತಿ ಸಮೀಕ್ಷೆ ವರದಿಯನ್ನು ವಿರೋಧಿಸಿದ್ದರು. ಸಿದ್ದರಾಮಯ್ಯ ಜಾತಿ ಗಣತಿ ವರದಿ ಬಿಡುಗಡೆಗೆ ಮುಂದಾಗಿದ್ದಾಗ ರಾಹುಲ್ ಗಾಂಧಿ ಮಧ್ಯೆಪ್ರವೇಶಿಸಿ ಬಿಡುಗಡೆ ಮಾಡಬಾರದೆಂದು ಸೂಚಿಸಿದ್ದರು. ನಂತರ ಸಿದ್ದರಾಮಯ್ಯ ಮತ್ತೊಂದು ಜಾತಿ ಸಮೀಕ್ಷೆಯನ್ನು ಮಾಡಿಸಿ ರಾಜೀನಾಮೆ ನೀಡುವ ಒಂದು ದಿನದ ಮುಂಚೆ ತರಾತುರಿಯಲ್ಲಿ ವರದಿ ಸ್ವೀಕರಿಸಿದ್ದರು. ಮಧುಸೂದನ್ ಆರ್.ನಾಯಕ್ ಅಧ್ಯಕ್ಷರಾಗಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ದಪಡಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಈ ವರದಿಯ ಅಂಶಗಳು ಬಹಿರಂಗಗೊಂಡಿಲ್ಲ. ಸಿದ್ದರಾಮಯ್ಯ ಅವರು ಮುಂಬರುವ ದಿನಗಳಲ್ಲಿ ಈ ವರದಿ ಜಾರಿಗೆ ಪಟ್ಟು ಹಿಡಿದರೆ ಶಿವಕುಮಾರ್ ಇಕ್ಕಟ್ಟಿಗೆ ಸಿಲುಕಬಹುದು. ಜಾತಿ ಸಮೀಕ್ಷಾ ವರದಿ ಈಗ ಸಿದ್ದರಾಮಯ್ಯ ಅವರ ಕೈಯಲ್ಲಿರುವ ಒಂದು ಪ್ರಬಲ ಅಸ್ತ್ರ.
ಶಿವಕುಮಾರ್ ಮುಖ್ಯಮಂತ್ರಿಯಾಗಿ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿ ಪರಿಣಾಮಕಾರಿಯಾಗಿ ಆಡಳಿತ ನೀಡಿದರೆ ಮಾಸ್ ಲೀಡರ್ ಆಗಿ ಹೊರಹೊಮ್ಮುವ ಅವಕಾಶ ಇದ್ದೇ ಇದೆ. ಅವರು ಡೈನಾಮಿಕ್ ಲೀಡರ್. ಕಾಂಗ್ರೆಸ್‌ನಲ್ಲಿ ಟ್ರಬಲ್ ಶೂಟರ್ ಎಂದೇ ಹೆಸರು. ಆದರೆ, ಸರಕಾರದ ಟ್ರಬಲ್ ಶೂಟರ್ ಆಗುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಅಧಿಕಾರಿಗಳ ಸಾಥ್ ಬೇಕು. ಸಮರ್ಥವಾದ ಸಚಿವ ಸಂಪುಟ ಇರಬೇಕು.
ಶಿವಕುಮಾರ್ ಒಕ್ಕಲಿಗ ಸಮಾಜದವರು. ಅವರು ಮುಖ್ಯಮಂತ್ರಿಯಾಗಿರುವುದು ಒಕ್ಕಲಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಸಂಚಲನ ಸೃಷ್ಟಿಸಿದೆ. ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಅವರ ಪುತ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳಲ್ಲಿ ಪ್ರಭಾವ ಹೊಂದಿದ್ದಾರೆ. ಶಿವಕುಮಾರ್ ಲಾಗಾಯ್ತಿನಿಂದಲೂ ದೇವೇಗೌಡರು ಹಾಗೂ ಕುಮಾರಸ್ವಾಮಿ ವಿರುದ್ಧ ರಾಜಕೀಯವಾಗಿ ಸೆಣಸಾಡುತ್ತಲೇ ಬಂದಿದ್ದಾರೆ. ಶಿವಕುಮಾರ್ ಅವರಿಗೆ ಈಗ ಒಲಿದಿರುವ ಮುಖ್ಯಮಂತ್ರಿ ಪಟ್ಟ ಈ ಸೆಣಸಾಟಕ್ಕೆ ಮತ್ತಷ್ಟು ಕಾವು ತುಂಬುವುದು ಗ್ಯಾರಂಟಿ. ವಿಧಾನಸಭೆ ಚುನಾವಣೆ ಹತ್ತಿರವಾದಷ್ಟು ಈ ಸಂಘರ್ಷ ಬಿರುಸು ಪಡೆಯಲಿದೆ.
ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ನೆಲೆ ಇದೆ. ಶಿವಕುಮಾರ್ ಈಗ ಮುಖ್ಯಮಂತ್ರಿ ಆಗಿರುವುದರಿಂದ ಒಕ್ಕಲಿಗ ಸಮಾಜದ ಮೇಲೆ ರಾಜಕೀಯವಾಗಿ ಹಿಡಿತ ಸಾಧಿಸಬಹುದು. ಆದರೆ, ಒಕ್ಕಲಿಗ ಸಮಾಜದ ಉಳಿದ ನಾಯಕರಿಗೆ ಹೋಲಿಸಿದರೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಆ ಸಮಾಜದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಶಿವಕುಮಾರ್ ಜೆಡಿಎಸ್ ಕೋಟೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಇದೆ ಎಂಬುದನ್ನು ಮರೆಯಬಾರದು.
ಒಕ್ಕಲಿಗ ಸಮುದಾಯ 2023ರ ವಿಧಾನಸಭಾ ಚುನಾವಣೆಯಲ್ಲಿ ಶಿವಕುಮಾರ್ ಮುಖ್ಯಮಂತ್ರಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ಸಿಗೆ ಹೆಚ್ಚಿನ ಬೆಂಬಲವನ್ನು ನೀಡಿತ್ತು. ಶಿವಕುಮಾರ್ ಉಳಿದ ಎರಡು ವರ್ಷಗಳ ಅವಧಿಯಲ್ಲಿ ಉತ್ತಮ ಆಡಳಿತ ನೀಡಿ 2028ರಲ್ಲಿ ತಮ್ಮ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನೆಲೆಯನ್ನು ಆಕ್ರಮಿಸಿಕೊಳ್ಳಲು ಒಕ್ಕಲಿಗ ಸಮಾಜದ ಪ್ರಬಲ ನಾಯಕರಾಗಿ ಬೇರುಮಟ್ಟದಲ್ಲಿ ಗಟ್ಟಿಯಾಗಬೇಕಾದ ಸವಾಲು ಅವರ ಮುಂದಿದೆ. ಇದಕ್ಕೆ ಪ್ರತಿತಂತ್ರ ಹೂಡುವ ಅನಿವಾರ್ಯತೆಯೂ ಜೆಡಿಎಸ್‌ಗೆ ಇದೆ. ಇದು ಜೆಡಿಎಸ್‌ಗೂ ಸವಾಲು.
ಇನ್ನು ಬಿಜೆಪಿಗೂ ಶಿವಕುಮಾರ್ ಅವರನ್ನು ವೈಯಕ್ತಿಕವಾಗಿ ಧಾರ್ಮಿಕ ನೆಲೆಯಲ್ಲಿ ವಿರೋಧಿಸುವುದು ಕಷ್ಟ. ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ಟೀಕಿಸಿದ ಹಾಗೇ ಶಿವಕುಮಾರ್ ಅವರನ್ನು ಟೀಕಿಸಲು ಸಾಧ್ಯವಿಲ್ಲ. ಶಿವಕುಮಾರ್ ಅವರ ಧಾರ್ಮಿಕ ನಿಷ್ಠೆ, ಹಿಂದೂ ಧರ್ಮದ ಆಚರಣೆಗಳು, ಸಂಪ್ರದಾಯದ ಪಾಲನೆಯು ಗೊತ್ತಿರುವ ಸಂಗತಿಯೇ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಪ್ರದೇಶದಲ್ಲಿ ಕಳೆದ ವರ್ಷ ನಡೆದ ಕುಂಭಮೇಳವನ್ನು ಟೀಕಿಸಿದಾಗ ಶಿವಕುಮಾರ್ ಅದೇ ಕುಂಭಮೇಳದಲ್ಲಿ ಕುಟುಂಬದೊಂದಿಗೆ ಪಾಲ್ಗೊಂಡು ನದಿಯಲ್ಲಿ ಪವಿತ್ರ ಸ್ನಾನ ಮಾಡಿ ತಮ್ಮ ನಂಬಿಕೆಯನ್ನು ಸಾರಿದ್ದರು. ಅಲ್ಲಿನ ವ್ಯವಸ್ಥೆಯನ್ನು ಪ್ರಶಂಸಿಸಿದ್ದರು.
ಶಿವಕುಮಾರ್ ಅವರು ಮುಖ್ಯಮಂತ್ರಿ ಗಾದಿಗೆ ಏರಿರುವುದು ಕಾಂಗ್ರೆಸ್‌ನಲ್ಲಷ್ಟೇ ಅಲ್ಲ, ಪ್ರತಿಪಕ್ಷಗಳಲ್ಲೂ ಸಂಚಲನಕ್ಕೆ ದಾರಿ ಮಾಡಿದೆ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com