ಸಾಂದರ್ಭಿಕ ಚಿತ್ರ 
ಅಂಕಣಗಳು

ನಿದ್ರೆಯಲ್ಲಿ ಉಸಿರಾಟದ ಅಡಚಣೆ (Obstructive Sleep Apnea-OSA)

ಈ ಸಮಸ್ಯೆಯ ಪ್ರಮುಖ ಲಕ್ಷಣವೆಂದರೆ ಜೋರಾಗಿ ಗೊರಕೆ ಹೊಡೆಯುವುದು. ಜೊತೆಗೆ ನಿದ್ರೆಯಲ್ಲಿ ಉಸಿರಾಟ ನಿಂತಂತೆ ಕಾಣುವುದು, ಹಠಾತ್ತನೆ ಉಸಿರುಗಟ್ಟಿ ಎಚ್ಚರವಾಗುವುದು.

ನಾವು ಆರೋಗ್ಯದಿಂದ ಮತ್ತು ಚಟುವಟಿಕೆಯಿಂದ ಇರಲು ಪ್ರತಿದಿನ ರಾತ್ರಿ ಉತ್ತಮ ನಿದ್ರೆ ಮಾಡುವುದು ಬಹಳ ಅವಶ್ಯಕ. ದೇಹ ಮತ್ತು ಮನಸ್ಸು ವಿಶ್ರಾಂತಿ ಪಡೆಯಲು ಗುಣಮಟ್ಟದ ನಿದ್ರೆ ಬೇಕಾಗುತ್ತದೆ. ಆದರೆ ಕೆಲವರಿಗೆ ನಿದ್ರೆಯ ಸಮಯದಲ್ಲಿ ಉಸಿರಾಟವು ಪದೇಪದೇ ಅಡಚಣೆಯಾಗುವ ಸಮಸ್ಯೆ ಕಂಡುಬರುತ್ತದೆ. ಇದನ್ನು ನಿದ್ರೆಯಲ್ಲಿ ಉಸಿರಾಟ ಅಡಚಣೆ (Obstructive Sleep Apnea) ಎಂದು ಕರೆಯಲಾಗುತ್ತದೆ.

ಈ ಸಮಸ್ಯೆ ಇದ್ದವರಲ್ಲಿ ನಿದ್ರೆಯ ಸಮಯದಲ್ಲಿ ಗಂಟಲಿನ ಹಿಂಭಾಗದ ಸ್ನಾಯುಗಳು ಸಡಿಲಗೊಂಡು ಉಸಿರಾಟದ ಮಾರ್ಗವು ಕಿರಿದಾಗುತ್ತದೆ ಅಥವಾ ಸಂಪೂರ್ಣವಾಗಿ ಮುಚ್ಚಿಕೊಳ್ಳುತ್ತದೆ. ಇದರಿಂದ ಕೆಲವು ಸೆಕೆಂಡುಗಳ ಕಾಲ ಉಸಿರಾಟಕ್ಕೆ ಅಡ್ಡಿಯುಂಟಾಗಿ ಮತ್ತೆ ಉಸಿರಾಟ ಪ್ರಾರಂಭವಾಗುತ್ತದೆ. ಹೀಗೆ ಒಂದು ರಾತ್ರಿಯಲ್ಲಿ ಹೀಗೆ ಒಂದಲ್ಲಾ ಹಲವಾರು ಬಾರಿ ಉಸಿರಾಟಕ್ಕೆ ಅಡಚಣೆ ಉಂಟಾಗಬಹುದು.

OSA ಲಕ್ಷಣಗಳು

ಈ ಸಮಸ್ಯೆಯ ಪ್ರಮುಖ ಲಕ್ಷಣವೆಂದರೆ ಜೋರಾಗಿ ಗೊರಕೆ ಹೊಡೆಯುವುದು. ಜೊತೆಗೆ ನಿದ್ರೆಯಲ್ಲಿ ಉಸಿರಾಟ ನಿಂತಂತೆ ಕಾಣುವುದು, ಹಠಾತ್ತನೆ ಉಸಿರುಗಟ್ಟಿ ಎಚ್ಚರವಾಗುವುದು, ರಾತ್ರಿ ವೇಳೆ ಪದೇ ಪದೇ ನಿದ್ರೆ ಭಂಗವಾಗುವುದು, ಬೆಳಿಗ್ಗೆ ತಲೆನೋವು, ಬಾಯಿ ಒಣಗುವುದು, ದಿನವಿಡೀ ಆಯಾಸ ಮತ್ತು ನಿದ್ರಾಮಗ್ನತೆ, ಕಿರಿಕಿರಿ ಹಾಗೂ ಏಕಾಗ್ರತೆಯ ಕೊರತೆ ಕಂಡುಬರಬಹುದು. ವಾಹನ ಚಾಲನೆ ಮಾಡುವಾಗ ಅಥವಾ ಕೆಲಸದ ವೇಳೆ ನಿದ್ರೆ ಬರುವುದು ಕೂಡ ಈ ಸಮಸ್ಯೆಯ ಸೂಚನೆಯಾಗಿರಬಹುದು.

ಅಧಿಕ ತೂಕ, ಕುತ್ತಿಗೆಯ ಸುತ್ತ ಹೆಚ್ಚು ಕೊಬ್ಬು, ಧೂಮಪಾನ, ಮದ್ಯಪಾನ, ಮೂಗಿನ ಅಡಚಣೆ, ಕೆಲವು ಔಷಧಿಗಳ ಬಳಕೆ ಹಾಗೂ ಕುಟುಂಬದಲ್ಲಿ ಇದೇ ಸಮಸ್ಯೆಯ ಇತಿಹಾಸ ಇರುವುದು ನಿದ್ರೆಯಲ್ಲಿ ಉಸಿರಾಟ ಅಡಚಣೆಯ ಅಪಾಯವನ್ನು ಹೆಚ್ಚಿಸುತ್ತದೆ. ಪುರುಷರಲ್ಲಿ ಮತ್ತು ಮಧ್ಯವಯಸ್ಕರಲ್ಲಿ ಇದು ಹೆಚ್ಚು. ಮಹಿಳೆಯರಲ್ಲಿಯೂ ಕಾಣಿಸಬಹುದು.

ಈ ಕಾಯಿಲೆಯನ್ನು ನಿರ್ಲಕ್ಷಿಸಿದರೆ ರಕ್ತದೊತ್ತಡ, ಹೃದಯ ಕಾಯಿಲೆಗಳು, ಮಧುಮೇಹ, ಪಾರ್ಶ್ವವಾಯು ಹಾಗೂ ನೆನಪಿನ ಶಕ್ತಿ ಕುಂಠಿತವಾಗುವಂತಹ ತೊಂದರೆಗಳು ಉಂಟಾಗಬಹುದು. ಆದ್ದರಿಂದ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ನಿದ್ರೆಯ ಅಭ್ಯಾಸದ ಪರೀಕ್ಷೆಯ ಮೂಲಕ ಈ ಸಮಸ್ಯೆಯನ್ನು ಪತ್ತೆಹಚ್ಚಬಹುದು.

OSA ಸಮಸ್ಯೆಗೆ ಪರಿಹಾರಗಳು

ಇದಕ್ಕೆ ಪರಿಹಾರವೇನೆಂದರೆ ತೂಕ ಇಳಿಸಿಕೊಳ್ಳುವುದು, ನಿಯಮಿತ ವ್ಯಾಯಾಮ ಮಾಡುವುದು, ಧೂಮಪಾನ ಮತ್ತು ಮದ್ಯಪಾನ ತ್ಯಜಿಸುವುದು, ಬೆನ್ನಿನ ಬದಲು ಬದಿಗೆ ಮಲಗುವುದು ಮುಂತಾದ ಕ್ರಮಗಳು.

ಈ ಸಮಸ್ಯೆಯನ್ನು ನಿರ್ಲಕ್ಷಿಸುವುದು ಆರೋಗ್ಯಕ್ಕೆ ಹಾನಿಕಾರಕ. ದೀರ್ಘಕಾಲಿಕ ಓಎಸ್ಎಯು ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮಧುಮೇಹಕ್ಕೆ (ಟೈಪ್ 2) ದಾರಿ ಮಾಡಿಕೊಡಬಹುದು. ಆದ್ದರಿಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ನಿದ್ರೆ ಅಭ್ಯಾಸದ ಪರೀಕ್ಷೆ (ಸ್ಲೀಪ್ ಸ್ಟಡಿ) ಎಂಬ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಅನಿವಾರ್ಯ.

ಈ ಚಿಕಿತ್ಸೆಯ ಭಾಗವಾಗಿ ಸಾಮಾನ್ಯವಾಗಿ ಸಿಪಿಎಪಿ ಎಂಬ ವಿಶೇಷ ಯಂತ್ರವನ್ನು ಶಿಫಾರಸು ಮಾಡಲಾಗುತ್ತದೆ. ಇದು ಮಲಗುವಾಗ ಮುಖಕ್ಕೆ ಅಳವಡಿಸುವ ಮಾಸ್ಕ್ ಮೂಲಕ ಗಾಳಿಯನ್ನು ನಿರಂತರ ಒತ್ತಡದಲ್ಲಿ ಪೂರೈಸಿ ಉಸಿರಾಟದ ನಾಳವನ್ನು ತೆರೆದಿಡಲು ಸಹಾಯ ಮಾಡುತ್ತದೆ. ಅಗತ್ಯವಿದ್ದಲ್ಲಿ ದವಡೆಯ ಆಕಾರ ಸರಿಪಡಿಸುವ ಸಾಧನಗಳನ್ನು ಬಳಸಲಾಗುತ್ತದೆ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಅಡಚಣೆ ಉಂಟುಮಾಡುವ ಅಂಗಾಂಶಗಳನ್ನು ತೆಗೆಯಲಾಗುತ್ತದೆ.

OSA ಸಮಸ್ಯೆ ತಡೆಗಟ್ಟುವುದು ಹೇಗೆ?

ಈ ಸಮಸ್ಯೆಯನ್ನು ತಡೆಗಟ್ಟಲು ಜೀವನಶೈಲಿಯಲ್ಲಿ ಕಠಿಣ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ. ಮೊದಲನೆಯದಾಗಿ ದೇಹದ ತೂಕವನ್ನು ಇಳಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಆರೋಗ್ಯಕರ ಆಹಾರ ಸೇವನೆ ಮತ್ತು ಪ್ರತಿದಿನದ ವ್ಯಾಯಾಮದಿಂದ ಇದನ್ನು ಸಾಧಿಸಬಹುದು. ಮಲಗುವ ಭಂಗಿಯನ್ನು ಬದಲಾಯಿಸಿ ಬೆನ್ನಿನ ಬದಲು ಪಕ್ಕಕ್ಕೆ ಮಲಗುವುದರಿಂದ ಉಸಿರಾಟದ ನಾಳ ಸರಾಗವಾಗಿರಲು ಸಹಾಯವಾಗುತ್ತದೆ.

ಧೂಮಪಾನ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದು ಬಹಳ ಮುಖ್ಯ. ಅದರಲ್ಲೂ ಮಲಗುವ ಮುನ್ನ ಮದ್ಯಪಾನ ಮಾಡುವುದನ್ನು ನಿಲ್ಲಿಸಬೇಕು. ಏಕೆಂದರೆ ಅದು ಗಂಟಲಿನ ಸ್ನಾಯುಗಳನ್ನು ಹೆಚ್ಚು ಸಡಿಲಗೊಳಿಸಿ ಉಸಿರಾಟದ ಅಡಚಣೆಯನ್ನು ಹೆಚ್ಚಿಸುತ್ತದೆ. ಈ ಜೀವನಶೈಲಿಯ ಮಾರ್ಪಾಡುಗಳು ಮತ್ತು ಸರಿಯಾದ ವೈದ್ಯಕೀಯ ಚಿಕಿತ್ಸೆಯು ಓಎಸ್ಎಯನ್ನು ನಿಯಂತ್ರಿಸಿ ಉತ್ತಮ ನಿದ್ರೆ ಪಡೆಯಲು ಮತ್ತು ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.

ಆಯುರ್ವೇದದ ದೃಷ್ಟಿಯಲ್ಲಿ OSA ಸಮಸ್ಯೆ 

ಆಯುರ್ವೇದದ ದೃಷ್ಟಿಯಲ್ಲಿ ಇದನ್ನು ಮುಖ್ಯವಾಗಿ ಕಫದೋಷದ ಹೆಚ್ಚಳ, ಮೇದಧಾತುವಿನ (ಕೊಬ್ಬಿನ) ಅಧಿಕ ಸಂಗ್ರಹ, ಹಾಗೂ ಪ್ರಾಣವಾಯುವಿನ ಅಸಮತೋಲನದೊಂದಿಗೆ ಸಂಬಂಧಿಸಿ ನೋಡಲಾಗುತ್ತದೆ.

ಅತಿಯಾದ ದೇಹಭಾರ, ವ್ಯಾಯಾಮದ ಕೊರತೆ, ಹಗಲಿನ ನಿದ್ರೆ, ಹೆಚ್ಚು ಸಿಹಿ ಮತ್ತು ಕೊಬ್ಬಿನ ಆಹಾರ ಸೇವನೆ, ಅನಿಯಮಿತ ಜೀವನಶೈಲಿ ಇವುಗಳಿಂದ ಕಫದೋಷ ಹೆಚ್ಚಾಗುತ್ತದೆ. ಇದರಿಂದ ಗಂಟಲು ಮತ್ತು ಉಸಿರಾಟದ ಮಾರ್ಗಗಳ ಸುತ್ತಲಿನ ಅಂಗಾಂಶಗಳು ಭಾರವಾಗಿ ಉಸಿರಾಟಕ್ಕೆ ಅಡಚಣೆ ಉಂಟುಮಾಡಬಹುದು. ಪರಿಣಾಮವಾಗಿ ನಿದ್ರೆಯಲ್ಲಿ ಗೊರಕೆ, ಉಸಿರಾಟದ ತಾತ್ಕಾಲಿಕ ಸಮಸ್ಯೆ, ಬೆಳಿಗ್ಗೆ ಆಯಾಸ, ತಲೆನೋವು ಮತ್ತು ಹಗಲಿನಲ್ಲಿ ನಿದ್ರಾಹೀನತೆ ಕಂಡುಬರಬಹುದು.

ಆಯುರ್ವೇದದಲ್ಲಿ ಚಿಕಿತ್ಸೆಯ ಮುಖ್ಯ ಉದ್ದೇಶ ಕಫವನ್ನು ಕಡಿಮೆ ಮಾಡುವುದು, ದೇಹದ ತೂಕ ನಿಯಂತ್ರಿಸುವುದು ಹಾಗೂ ಉಸಿರಾಟದ ಮಾರ್ಗಗಳ ಕಾರ್ಯಕ್ಷಮತೆಯನ್ನು ಸುಧಾರಿಸುವುದಾಗಿದೆ. ಇದಕ್ಕಾಗಿ ಆಹಾರ-ವಿಹಾರದಲ್ಲಿ ಬದಲಾವಣೆ, ನಿಯಮಿತ ವ್ಯಾಯಾಮ, ಯೋಗ, ಪ್ರಾಣಾಯಾಮ, ನಸ್ಯಕರ್ಮ ಹಾಗೂ ವೈದ್ಯರ ಸಲಹೆಯಂತೆ ಕೆಲವು ಆಯುರ್ವೇದ ಔಷಧಿಗಳನ್ನು ಬಳಸಬಹುದು.

ಆಯುರ್ವೇದವು ಆರೋಗ್ಯಕರ ಜೀವನಶೈಲಿ, ಸರಿಯಾದ ಆಹಾರ ಪದ್ಧತಿ ಮತ್ತು ದೇಹದ ಸಮತೋಲನ ಕಾಪಾಡಿಕೊಳ್ಳುವುದರ ಮೂಲಕ ಈ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯಕವಾಗಬಹುದು. ತೀವ್ರ ಸಮಸ್ಯೆ ಇರುವವರು ವೈದ್ಯಕೀಯ ಪರೀಕ್ಷೆ ಮತ್ತು ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಅತ್ಯಗತ್ಯ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran war: ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ; ರಾಡಾರ್ ಕೇಂದ್ರಗಳ ಮೇಲೆ ಭಾರೀ ದಾಳಿ, ಹಾರ್ಮುಜ್ ಜಲಸಂಧಿ ಬಳಿ ಉದ್ವಿಗ್ನತೆ ಹೆಚ್ಚಳ..!

ನಾರ್ವೆ ಚೆಸ್ ಟೂರ್ನಿ: ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಗೆದ್ದು ಇತಿಹಾಸ ಬರೆದ ಪ್ರಜ್ಞಾನಂದ!

‘ನೀವು ಇಂಡಿಯಾದವರಾ?’: ಭಾರತೀಯ ಪತ್ರಕರ್ತನಿಗೆ ಟ್ರಂಪ್ ಪ್ರಶ್ನೆ, ಭಾರೀ ವಿವಾದ

ಆರು ವರ್ಷಗಳಲ್ಲಿ ದುಪ್ಪಟ್ಟಾಯ್ತು ಮಲ್ಲಿಕಾರ್ಜುನ ಖರ್ಗೆ ಆಸ್ತಿ: AICC ಅಧ್ಯಕ್ಷ ಎಷ್ಟು ಕೋಟಿಯ ಒಡೆಯ?

ಸಿಎಂ ಡಿಕೆಶಿ ರಣತಂತ್ರ: ಪರಿಷತ್ ಚುನಾವಣೆಗೆ 5ನೇ ಅಭ್ಯರ್ಥಿ ಕಣಕ್ಕೆ, DKS ಆಪ್ತನಿಗೆ ಟಿಕೆಟ್ ಘೋಷಣೆ!

SCROLL FOR NEXT