ಕಳೆದ ಹಲವಾರು ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಆತ್ಮಹತ್ಯೆಯ ಪ್ರಕರಣಗಳು ಪ್ರತಿ ವರ್ಷ ಹೆಚ್ಚಾಗುತ್ತಿದೆ. ಈ ಕಾರಣದಿಂದಲೇ ಆತ್ಮಹತ್ಯೆ ಗಂಭೀರ ಸಾರ್ವಜನಿಕ ಸಮಸ್ಯೆಯಾಗಿ ಪರಿಣಮಿಸಿದೆ. ಆತ್ಮಹತ್ಯೆಯು ಕೇವಲ ವೈಯಕ್ತಿಕ ನಿರ್ಧಾರವಲ್ಲದೆ ಆಳವಾದ ಮನೋವೈಜ್ಞಾನಿಕ, ಸಾಮಾಜಿಕ ಮತ್ತು ಆರ್ಥಿಕ ಒತ್ತಡಗಳ ಸಂಕೀರ್ಣ ಪ್ರತಿಫಲನವಾಗಿದೆ. ಅಂಕಿ-ಅಂಶಗಳನ್ನು ನೋಡಿದರೆ ರಾಜ್ಯದಲ್ಲಿ ಆತ್ಮಹತ್ಯೆಯ ಪ್ರಮಾಣದಲ್ಲಿ ಆಗುತ್ತಿರುವ ನಿರಂತರ ಏರಿಕೆ ಬಗ್ಗೆ ಕಳವಳ ಮೂಡುತ್ತದೆ. ವಿಶೇಷವಾಗಿ ಬೆಂಗಳೂರಿನAತಹ ಮಹಾನಗರಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿ ಕಂಡುಬರುತ್ತಿದೆ.
ಈ ದುರಂತಕ್ಕೆ ಪ್ರಮುಖ ಕಾರಣಗಳನ್ನು ವಿಶ್ಲೇಷಿಸಿದಾಗ ಕುಟುಂಬ ಮತ್ತು ಸಂಬಂಧಗಳಲ್ಲಿ ಬಿರುಕುಗಳು, ವೈವಾಹಿಕ ಕಲಹ ಮತ್ತು ಏಕಾಂಗಿತನವು ಪ್ರಮುಖ ಪಾತ್ರ ವಹಿಸುತ್ತಿವೆ. ಇದರೊಂದಿಗೆ ಆರ್ಥಿಕ ಸಂಕಷ್ಟಗಳು, ಸಾಲದ ಹೊರೆ ಮತ್ತು ನಿರುದ್ಯೋಗವು ಜನರನ್ನು ಇಂತಹ ಕಠಿಣ ನಿರ್ಧಾರಕ್ಕೆ ತಳ್ಳುತ್ತಿವೆ. ಇಷ್ಟೇ ಅಲ್ಲದೆ ಕೆಲವು ಪ್ರಕರಣಗಳಲ್ಲಿ ರೋಗರುಜಿನಗಳು, ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳು ಕಾರಣಗಳಾಗಿವೆ.
ವಯಸ್ಸಿನ ಆಧಾರದಲ್ಲಿ ಹೇಳುವುದಾದರೆ 18 ರಿಂದ 45 ವರ್ಷದೊಳಗಿನ ಕ್ರಿಯಾಶೀಲ ವಯೋಮಾನದವರು ಆತ್ಮಹತ್ಯೆಗೆ ಹೆಚ್ಚು ಶರಣಾಗುತ್ತಿರುವುದು ಕಂಡುಬಂದಿದೆ. ಲಿಂಗಾನುಪಾತದ ದೃಷ್ಟಿಯಿಂದ ಹೇಳುವುದಾದರೆ ಪುರುಷರಲ್ಲಿ ಆತ್ಮಹತ್ಯೆಯ ಪ್ರಮಾಣ ಮಹಿಳೆಯರಿಗಿಂತ ಹೆಚ್ಚಾಗಿದ್ದು ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುವುದು ಮತ್ತು ಆರ್ಥಿಕ ಜವಾಬ್ದಾರಿಯ ಒತ್ತಡ ಇದಕ್ಕೆ ಕಾರಣವಾಗಿವೆ. ಮಹಿಳೆಯರ ವಿಷಯದಲ್ಲಿ ಕೌಟುಂಬಿಕ ದೌರ್ಜನ್ಯ ಮತ್ತು ವೈವಾಹಿಕ ಸಮಸ್ಯೆಗಳು ಆತ್ಮಹತ್ಯೆಗೆ ಪ್ರೇರೇಪಿಸುವ ಪ್ರಮುಖ ಅಂಶಗಳಾಗಿವೆ. ಉದ್ಯೋಗದ ಅನಿಶ್ಚಿತತೆ, ಕೆಲಸದ ಸ್ಥಳದ ಒತ್ತಡ, ಮತ್ತು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಒತ್ತಡ ಹಾಗೂ ಭವಿಷ್ಯದ ಬಗೆಗಿನ ಭಯಗಳು ಆತ್ಮಹತ್ಯೆಯ ಕಾರಣಗಳಲ್ಲಿ ಸೇರಿವೆ.
ಸರಾಸರಿ ಪ್ರತಿ ವರ್ಷ ರಾಜ್ಯದಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗುತ್ತಿದ್ದು ಇದು ಸಾಮಾಜಿಕ ಬೆಂಬಲ ವ್ಯವಸ್ಥೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ. ಶಾಲಾ-ಕಾಲೇಜು ಹಂತದಿಂದಲೇ ಮಾನಸಿಕ ಒತ್ತಡ ನಿರ್ವಹಣಾ ಕೌಶಲ್ಯಗಳನ್ನು ಕಲಿಸುವುದು ಮತ್ತು ಖಿನ್ನತೆಯ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೃತ್ತಿಪರರ ನೆರವು ಪಡೆಯುವ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಸಿ ಆರ್ ಬಿ) ವರದಿಗಳ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಬೆಂಗಳೂರು ನಗರದಲ್ಲಿ 2022ರಲ್ಲಿ 2,313 ಪ್ರಕರಣಗಳು ವರದಿಯಾಗಿದ್ದರೆ 2023ರಲ್ಲಿ ಈ ಸಂಖ್ಯೆ 2,370ಕ್ಕೆ ಏರಿಕೆ ಕಂಡಿದೆ ಮತ್ತು 2024ರಲ್ಲಿ ಇದು 2,430 ಪ್ರಕರಣಗಳಿಗೆ ತಲುಪಿದೆ. ಬೆಂಗಳೂರಿನಲ್ಲಿ ಆತ್ಮಹತ್ಯೆ ಪ್ರಮಾಣ ದೇಶದ ಇತರ ಪ್ರಮುಖ ಮಹಾನಗರಗಳ ಪೈಕಿ ಅತ್ಯಧಿಕವಾಗಿದೆ.
ರಾಜ್ಯ ಮಟ್ಟದಲ್ಲಿ ಆತ್ಮಹತ್ಯೆಯ ಪ್ರಕರಣಗಳನ್ನು ಗಮನಿಸಿದಾಗ ಕರ್ನಾಟಕವು ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗುವ ಪ್ರಮುಖ ರಾಜ್ಯಗಳ ಪಟ್ಟಿಯಲ್ಲಿದೆ. ರಾಷ್ಟ್ರೀಯ ಮಟ್ಟದಲ್ಲಿ 2023ರಲ್ಲಿ ಒಟ್ಟು 1,71,418 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು ರಾಷ್ಟ್ರೀಯ ಆತ್ಮಹತ್ಯೆ ಪ್ರಮಾಣವು ಪ್ರತಿ ಲಕ್ಷ ಜನಸಂಖ್ಯೆಗೆ 12.3ರಷ್ಟಿದೆ. ಈ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣಗಳಾಗಿ ಕೌಟುಂಬಿಕ ಸಮಸ್ಯೆಗಳು, ದೈಹಿಕ ಹಾಗೂ ಮಾನಸಿಕ ಅನಾರೋಗ್ಯ, ಆರ್ಥಿಕ ಒತ್ತಡ ಮತ್ತು ವೈಯಕ್ತಿಕ ಸಂಬಂಧಗಳ ಬಿಕ್ಕಟ್ಟುಗಳನ್ನು ಗುರುತಿಸಲಾಗಿದೆ. ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ, ಕೆಲಸದ ಒತ್ತಡ ಮತ್ತು ಸಾಮಾಜಿಕ ಬೆಂಬಲ ವ್ಯವಸ್ಥೆಯ ಕೊರತೆಯು ಈ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುತ್ತಿದೆ.
ಈ ಅಂಕಿ-ಅಂಶಗಳು ಸಮಾಜದಲ್ಲಿನ ಆಳವಾದ ಆತಂಕ ಮತ್ತು ಒತ್ತಡವನ್ನು ಪ್ರತಿಬಿಂಬಿಸುತ್ತವೆ. ಇಂತಹ ಸಂದರ್ಭದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಮತ್ತು ಆಪತ್ತಿನಲ್ಲಿರುವವರಿಗೆ ನೆರವಾಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಆತ್ಮಹತ್ಯೆ ಎಂಬುದು ಸಮಸ್ಯೆಗೆ ಪರಿಹಾರವಲ್ಲ, ಬದಲಿಗೆ ಕೇವಲ ಬಿಕ್ಕಟ್ಟಿನ ಸಮಯ ಎಂಬುದನ್ನು ಅರಿತುಕೊಳ್ಳಬೇಕು. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಲ್ಲುವ ಸಹಾನುಭೂತಿಯ ಸಂಸ್ಕೃತಿಯನ್ನು ಬೆಳೆಸಿಕೊಂಡಾಗ ಮಾತ್ರ ಇಂತಹ ದುರಂತಗಳನ್ನು ತಡೆಯಲು ಸಾಧ್ಯ. ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಯೊಂದಿಗೆ ಮಾತನಾಡುವುದು ಅನೇಕ ಜೀವಗಳನ್ನು ಉಳಿಸಬಲ್ಲದು ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಿದೆ.
ಆತ್ಮಹತ್ಯೆಯ ಅಂಕಿಅಂಶಗಳು ಕೇವಲ ಸಂಖ್ಯೆಗಳಲ್ಲ. ಇವು ಸಮಾಜದಲ್ಲಿನ ಆಳವಾದ ಆತಂಕ ಮತ್ತು ಒತ್ತಡವನ್ನು ಸೂಚಿಸುತ್ತವೆ. ನಿಮಗೆ ಅಥವಾ ನಿಮಗೆ ಪರಿಚಯವಿರುವ ಯಾರಿಗಾದರೂ ತೊಂದರೆ ಇದ್ದಲ್ಲಿ, ಸಹಾಯ ಪಡೆಯಲು ಹಿಂಜರಿಯಬೇಡಿ. 'ಟೆಲಿ-ಮಾನಸ್' ಸಹಾಯವಾಣಿ (14416) ಅಥವಾ 'ಆರೋಗ್ಯ ಸಹಾಯವಾಣಿ' (104) ಮೂಲಕ ವೃತ್ತಿಪರರ ನೆರವು ಉಚಿತವಾಗಿ ಜನರಿಗೆ ಲಭ್ಯವಿದೆ.
ಕೊನೆಮಾತು: ಒಟ್ಟಾರೆ ಹೇಳುವುದಾದರೆ ಆತ್ಮಹತ್ಯೆಯು ಕೇವಲ ಒಂದು ಅಂಕಿಅಂಶವಾಗಿ ಉಳಿಯಬಾರದು. ಬದಲಿಗೆ ಸಮಾಜದ ಪ್ರತಿಯೊಬ್ಬರೂ ಇದರ ವಿರುದ್ಧ ಒಗ್ಗೂಡಿ ಹೋರಾಡಬೇಕಾದ ಅಗತ್ಯವಿದೆ. ನಾವು ಪ್ರತಿಯೊಬ್ಬರನ್ನೂ ಒಳಗೊಳ್ಳುವ, ಅವರ ಸಮಸ್ಯೆಗಳನ್ನು ಆಲಿಸುವ ಮತ್ತು ಪರಸ್ಪರ ಬೆಂಬಲ ನೀಡುವ ಸಹಾನುಭೂತಿಯ ವಾತಾವರಣವನ್ನು ನಿರ್ಮಿಸಬೇಕಿದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com