ಮಾರ್ಚ್ 15, ಭಾನುವಾರದಂದು ಇರಾನ್ ಹಲವು ಕ್ಷಿಪಣಿಗಳನ್ನು ಇಸ್ರೇಲಿ ಮತ್ತು ಅಮೆರಿಕನ್ ನೆಲೆಗಳತ್ತ ಪ್ರಯೋಗಿಸಿತು. ಅವುಗಳಲ್ಲಿ ಒಂದು ವಿಶೇಷ ಕ್ಷಿಪಣಿ ಜಗತ್ತಿನ ಗಮನ ಸೆಳೆಯಿತು. ಅದುವೇ ಸೆಜ್ಜಿಲ್ ಕ್ಷಿಪಣಿ. ಇರಾನ್ ಫೆಬ್ರವರಿ 28ರಿಂದ ಆರಂಭಗೊಂಡ ಯುದ್ಧದಲ್ಲಿ ಈ ಕ್ಷಿಪಣಿಯನ್ನು ಇದೇ ಮೊದಲ ಬಾರಿಗೆ ಪ್ರಯೋಗಿಸಿತು. ಆದರೆ, ಈ ಕ್ಷಿಪಣಿ ನಿಜಕ್ಕೂ ಏನು? ಈಗ ಏಕೆ ಎಲ್ಲರೂ ಈ ಕ್ಷಿಪಣಿಯ ಕುರಿತು ಮಾತನಾಡುತ್ತಿದ್ದಾರೆ?
ಸೆಜ್ಜಿಲ್ ಎನ್ನುವುದು ಒಂದು ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಅಂದರೆ, ಅದನ್ನು ಮೊದಲು ಬಾಹ್ಯಾಕಾಶದತ್ತ ಪ್ರಯೋಗಿಸಲಾಗುತ್ತದೆ. ಬಳಿಕ, ಅದು ಆಗಸದಿಂದ ತನ್ನ ಗುರಿಯತ್ತ ಶರವೇಗದಲ್ಲಿ ಕೆಳಗೆ ಧುಮುಕುತ್ತದೆ. ಇದನ್ನು ಆಗಸದತ್ತ ಒಂದು ಕಲ್ಲನ್ನು ಎಸೆಯುವುದಕ್ಕೆ ಹೋಲಿಸಬಹುದು. ಆದರೆ, ಇಲ್ಲಿ ಈ 'ಕಲ್ಲಿನ' ತೂಕ 23,000 ಕೆಜಿಗೂ ಹೆಚ್ಚಿರುತ್ತದೆ. ಇದು ಒಂದು ಗುಂಡಿಗಿಂತಲೂ ಹೆಚ್ಚು ವೇಗದಲ್ಲಿ ಸಾಗುತ್ತದೆ. ಜೊತೆಗೆ 1,000 ಕೆಜಿಗೂ ಹೆಚ್ಚು ತೂಕದ ಸಿಡಿತಲೆಯನ್ನು ಹೊಂದಿರುತ್ತದೆ.
ಸೆಜ್ಜಿಲ್ ಕ್ಷಿಪಣಿಯನ್ನು ವಿಶೇಷವಾಗಿಸುವುದು ಏನೆಂದರೆ, ಇದು ಘನ ಇಂಧನದ ಆಧಾರದಲ್ಲಿ ಚಲಿಸುತ್ತದೆ. ಯಾವ ರೀತಿ ಒಂದು ರಾಕೆಟ್ ಪಟಾಕಿಗೆ ಬೆಂಕಿ ಹಚ್ಚಿದ ತಕ್ಷಣವೇ ಅದು ಹಾರುತ್ತದೋ, ಅದೇ ರೀತಿಯಲ್ಲಿ ಇದೂ ಸಾಗುತ್ತದೆ. ಶಹಾಬ್ ಸರಣಿಯಂತಹ ಹಳೆಯ ಇರಾನಿಯನ್ ಕ್ಷಿಪಣಿಗಳು ದ್ರವ ಇಂಧನದಲ್ಲಿ ಸಾಗುತ್ತವೆ. ಉಡಾವಣೆಗೂ ಮುನ್ನ ಕಾರಿಗೆ ಪೆಟ್ರೋಲ್ ತುಂಬುವಂತೆ ಈ ಕ್ಷಿಪಣಿಗೆ ದ್ರವ ಇಂಧನ ತುಂಬಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸಮಯವೂ ಹಿಡಿಯುತ್ತದೆ. ಆದರೆ, ಸೆಜ್ಜಿಲ್ ಕ್ಷಿಪಣಿಗೆ ಯಾವುದೇ ಸಿದ್ಧತೆಯ ಅಗತ್ಯವಿಲ್ಲ. ಇದನ್ನು ಬಹಳ ಕ್ಷಿಪ್ರವಾಗಿ ಉಡಾವಣೆಗೊಳಿಸಬಲ್ಲದಾಗಿದ್ದು, ಶತ್ರುಗಳಿಗೆ ಇದಕ್ಕೆ ಪ್ರತಿಕ್ರಿಯಿಸಲು ಯಾವುದೇ ಸಮಯ ಸಿಗುವುದಿಲ್ಲ.
ಈ ಕ್ಷಿಪಣಿ ಎರಡು ಹಂತಗಳ ಕ್ಷಿಪಣಿಯಾಗಿದ್ದು, ಒಂದರ ನಂತರ ಒಂದರಂತೆ ಉರಿಯುವ ಎರಡು ಪ್ರತ್ಯೇಕ ಇಂಜಿನ್ ವಿಭಾಗಗಳನ್ನು ಹೊಂದಿದೆ. ಮೊದಲನೆಯ ಇಂಜಿನ್ ಕ್ಷಿಪಣಿಯನ್ನು ವಾತಾವರಣದತ್ತ ತಳ್ಳುತ್ತದೆ. ಇನ್ನು ಎರಡನೆಯ ಇಂಜಿನ್ ವಿಭಾಗ ಕ್ಷಿಪಣಿಯನ್ನು ಗುರಿಯತ್ತ ಶರವೇಗದಲ್ಲಿ ತಳ್ಳುತ್ತದೆ. ಇದು ಬಹುತೇಕ 2,000 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಇದು ಇರಾನಿನಿಂದ ಇಸ್ರೇಲ್ ನೆಲದ ತನಕ ತಲುಪಬಲ್ಲದು.
ಈ ಕ್ಷಿಪಣಿಯ ಹೆಚ್ಚು ರೋಚಕ ಘಟ್ಟ ಇಲ್ಲಿದೆ. ಏನೆಂದರೆ, ಈ ಕ್ಷಿಪಣಿಗೆ 'ಡ್ಯಾನ್ಸಿಂಗ್ ಕ್ಷಿಪಣಿ' ಎನ್ನುವ ಅಡ್ಡ ಹೆಸರೂ ಇದೆ! ತನ್ನ ಅಂತಿಮ ಇಳಿಕೆಯ ಹಂತದಲ್ಲಿ, ಸೆಜ್ಜಿಲ್ ಕ್ಷಿಪಣಿ ಕ್ಷಿಪ್ರವಾಗಿ ಚಲಿಸಿ, ಬಹಳ ಎತ್ತರದಲ್ಲಿರುವಾಗಲೂ ಪಥ ಬದಲಿಸಬಲ್ಲದು. ಕ್ರಿಕೆಟ್ ಆಡುವ ವೇಳೆ, ನಿಮ್ಮ ಕೈಯತ್ತ ಬರುವಾಗ ಅಂತಿಮ ಹಂತದಲ್ಲಿ ಅತ್ತಿತ್ತ ಓಲಾಡುತ್ತಾ, ಪಥ ಬದಲಿಸುತ್ತಾ ಬರುವ ಚೆಂಡೊಂದನ್ನು ಹಿಡಿಯುವುದನ್ನು ಊಹಿಸಿ. ಇಸ್ರೇಲಿನ ಐರನ್ ಡೋಮಿನಂತಹ ವಾಯು ರಕ್ಷಣಾ ವ್ಯವಸ್ಥೆಗಳಿಗೂ ಇದೇ ರೀತಿಯ ಕಷ್ಟ ಎದುರಾಗುತ್ತದೆ. ಕ್ಷಿಪಣಿಯ ಊಹಿಸಲಸಾಧ್ಯವಾದ ಚಲನೆಗಳ ಕಾರಣದಿಂದ, ಅದನ್ನು ಹೊಡೆದುರುಳಿಸುವುದು ಅತ್ಯಂತ ಕಷ್ಟಕರವಾಗುತ್ತದೆ.
ಈ ಕ್ಷಿಪಣಿ ಮ್ಯಾಕ್ 13ಗೂ ಹೆಚ್ಚಿನ ವೇಗದಲ್ಲಿ, ಅಂದರೆ, ಪ್ರತಿ ಗಂಟೆಗೆ ಅಂದಾಜು 17,000 ಕಿಲೋಮೀಟರ್ ವೇಗದಲ್ಲಿ ಸಾಗುತ್ತದೆ. ಇದು ಶಬ್ದದ ವೇಗಕ್ಕಿಂತ 13 ಪಟ್ಟು ಹೆಚ್ಚಿನ ವೇಗವಾಗಿದೆ! ಇಷ್ಟೊಂದು ಭಾರೀ ವೇಗದಲ್ಲಿ, ಅತ್ಯಂತ ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳಿಗೂ ಪ್ರತಿಕ್ರಿಯಿಸಲು ಹೆಚ್ಚಿನ ಸಮಯ ಇರುವುದಿಲ್ಲ.
ಇರಾನ್ ಈ ಕ್ಷಿಪಣಿಯನ್ನು 1990ರ ದಶಕದ ಆರಂಭದಲ್ಲಿ ಅಭಿವೃದ್ಧಿ ಪಡಿಸಲು ಆರಂಭಿಸಿತು. ಇದರ ಮೊದಲ ಪ್ರಯೋಗವನ್ನು 2008ರಲ್ಲಿ ನಡೆಸಿದಾಗ, ಕ್ಷಿಪಣಿ ಅಂದಾಜು 800 ಕಿಲೋಮೀಟರ್ ವ್ಯಾಪ್ತಿ ಹೊಂದಿತ್ತು. ಆ ಬಳಿಕ, ಕ್ಷಿಪಣಿಯ ಆರು ಪರೀಕ್ಷೆಗಳನ್ನು ನಡೆಸಲಾಗಿದೆ. ಆರನೇ ಪರೀಕ್ಷೆಯಲ್ಲಿ, ಸೆಜ್ಜಿಲ್ ಕ್ಷಿಪಣಿ ಬಹುತೇಕ 1,900 ಕಿಲೋಮೀಟರ್‌ಗಳಷ್ಟು ಹಾರಾಟ ನಡೆಸಿ, ಬಹುತೇಕ ಹಿಂದೂ ಮಹಾಸಾಗರದ ತನಕ ವ್ಯಾಪ್ತಿಯನ್ನು ಪ್ರದರ್ಶಿಸಿತ್ತು.
ಇರಾನ್ ಈಗಾಗಲೇ ಕ್ಷಿಪಣಿಯ ಸುಧಾರಿತ ಆವೃತ್ತಿಯನ್ನೂ ಅಭಿವೃದ್ಧಿ ಪಡಿಸಿದ್ದು, ಇದನ್ನು ಸೆಜ್ಜಿಲ್-2 ಎಂದು ಕರೆಯಲಾಗಿದೆ. ಇದು ಸುಧಾರಿತ ನ್ಯಾವಿಗೇಶನ್ ವ್ಯವಸ್ಥೆಗಳನ್ನು ಹೊಂದಿದೆ. ಕೆಲವು ವರದಿಗಳ ಪ್ರಕಾರ, ಈ ಕ್ಷಿಪಣಿ 10 ಮೀಟರ್‌ಗೂ ಕಡಿಮೆ ತಪ್ಪಿನ ಸಾಧ್ಯತೆಗಳಷ್ಟು ನಿಖರವಾಗಿ ದಾಳಿ ನಡೆಸಬಲ್ಲದು. ಆದರೆ, ಈ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸರಳವಾಗಿ ಹೇಳುವುದಾದರೆ, ಸೆಜ್ಜಿಲ್ ಒಂದು ವೇಗವಾದ, ತಡೆಗಟ್ಟಲು ಕಷ್ಟಕರವಾದ, ಕ್ಷಿಪ್ರವಾಗಿ ಉಡಾವಣೆ ನಡೆಸಬಲ್ಲ, ಸಂಪೂರ್ಣವಾಗಿ ಇರಾನಿನ ಒಳಗೇ ನಿರ್ಮಾಣಗೊಂಡಿರುವ ಆಧುನಿಕ ಕ್ಷಿಪಣಿ. ಮಾರ್ಚ್ 15ರಂದು ಇರಾನ್ ಸೆಜ್ಜಿಲ್ ಕ್ಷಿಪಣಿಯನ್ನು ಬಳಸಿರುವುದು ಯುದ್ಧದಲ್ಲಿ ಗಂಭೀರ ತೀವ್ರತೆ ತಂದಿದ್ದು, ಇನ್ನು ಮುಂದೆ ಏನಾಗಲಿದೆ ಎನ್ನುವುದನ್ನು ಜಗತ್ತು ಕುತೂಹಲದ ಕಣ್ಣುಗಳಿಂದ ನೋಡುತ್ತಿದೆ.