ಜೋರಾಗಿ ಮಳೆ ಬರುತ್ತಿರುವ ಸಂದರ್ಭದಲ್ಲಿ, ನಿಮ್ಮ ಮನೆಗೆ ವಾಹನ ಚಲಾಯಿಸಲು ನಿಮ್ಮ ಫೋನಿನಲ್ಲಿರುವ ಮ್ಯಾಪ್ ಮೇಲೆ ಅವಲಂಬಿತರಾಗುವುದನ್ನು, ಅಥವಾ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ರೈಲು ಚಾಲಕ ಸಿಗ್ನಲ್‌ಗಳನ್ನು ಅವಲಂಬಿಸುವುದನ್ನು ಒಮ್ಮೆ ಊಹಿಸಿಕೊಳ್ಳಿ. ಈ ವ್ಯವಸ್ಥೆಗಳು ಕಾರ್ಯಾಚರಿಸುವುದು ನಾವು ಪ್ರತಿದಿನವೂ ಎರಡನೇ ಯೋಚನೆಯೇ ಮಾಡದೆ ಬಳಸುವ ಅಮೆರಿಕದ ಜಿಪಿಎಸ್ ನಂತಹ ಉಪಗ್ರಹ ಸಂಚರಣಾ (ನ್ಯಾವಿಗೇಶನ್) ವ್ಯವಸ್ಥೆಗಳ ಮ್ಯಾಜಿಕ್‌ನ ಪರಿಣಾಮವಾಗಿ. ಆದರೆ, ಜಿಪಿಎಸ್ ವ್ಯವಸ್ಥೆಗೆ ಭಾರತದ ದೇಶೀಯ ಉತ್ತರವಾದ ನಾವಿಕ್ (NavIC) ಈಗ ಗಂಭೀರವಾದ ಸಮಸ್ಯೆಗೆ ಸಿಲುಕಿದೆ. ನಾವಿಕ್ ವ್ಯವಸ್ಥೆ ಈಗ ಕೇವಲ ಮೂರು ಕಾರ್ಯಾಚರಿಸುವ ಉಪಗ್ರಹಗಳನ್ನು ಹೊಂದಿದೆ. ಇವುಗಳೊಡನೆ ಕಾರ್ಯಾಚರಿಸುವುದು ಎಂದರೆ, ಮೈದಾನದಲ್ಲಿ ನಮ್ಮ ತಂಡದಲ್ಲಿ ಕೇವಲ ಬೆರಳೆಣಿಕೆಯ ಆಟಗಾರರನ್ನು ಮಾತ್ರ ಹೊಂದಿ, ಬಲಾಢ್ಯ ಕ್ರಿಕೆಟ್ ತಂಡದ ವಿರುದ್ಧ ಗೆಲುವು ಸಾಧಿಸಲು ಪ್ರಯತ್ನ ನಡೆಸಿದಂತಾಗಲಿದೆ. ಇಂತಹ ಪಂದ್ಯವನ್ನು ಗೆಲ್ಲುವುದು ಕಷ್ಟಕರವಾಗಲಿದೆ. ಜಾಗತಿಕ ದೈತ್ಯನಾದ ಜಿಪಿಎಸ್ 30ಕ್ಕೂ ಹೆಚ್ಚು ಉಪಗ್ರಹಗಳನ್ನು ಹೊಂದಿದ್ದು, ಇದರೆದುರು ನಾವಿಕ್ ಕಾರ್ಯಾಚರಿಸಲೂ ಕಷ್ಟಪಡುವ ಪರಿಸ್ಥಿತಿಯಲ್ಲಿ ಸಿಲುಕಿದೆ. ಇದೊಂದು ಕೇವಲ ತಾಂತ್ರಿಕ ದೋಷ ಮಾತ್ರವಲ್ಲ. ಇದು ನಮ್ಮ ರೈತರು, ಮೀನುಗಾರರು, ಮತ್ತು ನನ್ನ ನಿಮ್ಮಂತಹ ದೈನಂದಿನ ಬಳಕೆಯಲ್ಲಿ ತಂತ್ರಜ್ಞಾನವನ್ನು ಉಪಯೋಗಿಸುವ ನಮ್ಮ ನಿಮ್ಮಂಥವರಿಗೆ ನೆರವಾಗುವ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಒಂದು ಎಚ್ಚರಿಕೆಯ ಕರೆಯಾಗಿದೆ.
ನಾವು ಈ ವಿಚಾರವನ್ನು ಸರಳವಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ನಾವಿಕ್ ಎನ್ನುವುದು ನ್ಯಾವಿಗೇಶನ್ ವಿದ್ ಇಂಡಿಯನ್ ಕಾನ್ಸ್ಟೆಲೇಶನ್ ಎನ್ನುವುದರ ಹೃಸ್ವರೂಪವಾಗಿದ್ದು, ಜಿಪಿಎಸ್ ರೀತಿಯಲ್ಲೇ ನಿಖರ ಸ್ಥಾನದ ಮಾಹಿತಿಯನ್ನು ಒದಗಿಸುವ ಸಲುವಾಗಿ ವಿನ್ಯಾಸಗೊಂಡಿರುವ ಭಾರತೀಯ ಉಪಗ್ರಹ ವ್ಯವಸ್ಥೆಯಾಗಿದೆ. ಇದು ವಾಹನಗಳ ಸ್ಥಾನವನ್ನು ಗಮನಿಸಿ ಗುರುತಿಸುವುದರಿಂದ, ವಿಪತ್ತು ಮುನ್ನೆಚ್ಚರಿಕೆ ನೀಡುವ ತನಕ ಎಲ್ಲದರಲ್ಲೂ ನೆರವಾಗುತ್ತದೆ. ಆದರೆ, ಇತ್ತೀಚೆಗೆ, ಮಾರ್ಚ್ 10ರಂದು ಈ ವ್ಯವಸ್ಥೆಯಲ್ಲಿನ ಒಂದು ಪ್ರಮುಖ ಉಪಗ್ರಹವಾದ ಐಆರ್‌ಎನ್ಎಸ್ಎಸ್-1ಎಫ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಮಾರ್ಚ್ 2016ರಲ್ಲಿ ಉಡಾವಣೆಗೊಂಡಿದ್ದ ಈ ಉಪಗ್ರಹ, ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿತ್ತು. ಇದಕ್ಕೆ ಕಾರಣವೇನು? ಉಪಗ್ರಹದ ಅತ್ಯಂತ ನಿಖರವಾದ ಹೃದಯದಂತಿರುವ ಅಟಾಮಿಕ್ ಕ್ಲಾಕ್ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತು. ಅಟಾಮಿಕ್ ಕ್ಲಾಕ್ ಎನ್ನುವುದು ಒಂದು ಗಡಿಯಾರವಿದ್ದಂತಿದ್ದು, ಬಿಲಿಯನ್ನಿನಲ್ಲಿ ಒಂದು ಭಾಗದಷ್ಟು ಮಾತ್ರವೇ ಆಚೀಚೆಯಾಗುವ ಮಟ್ಟಿನ ನಿಖರತೆಯನ್ನು ಹೊಂದಿದೆ. ಇದು ಒಂದು ಸಂಕೇತ ಬಾಹ್ಯಾಕಾಶದಿಂದ ನಿಮ್ಮ ಉಪಕರಣಕ್ಕೆ ಪ್ರಯಾಣಿಸಲು ಬೇಕಾದ ಸಮಯವನ್ನು ಲೆಕ್ಕ ಹಾಕಿ, ಭೂಮಿಯಲ್ಲಿನ ನಿಮ್ಮ ನಿಖರವಾದ ಸ್ಥಾನವನ್ನು ಗುರುತಿಸುತ್ತದೆ. ಇದರಲ್ಲಿನ ಒಂದು ಅತ್ಯಂತ ಸಣ್ಣ ದೋಷವೂ ನಿಮ್ಮ ಸ್ಥಾನವನ್ನು ನೂರಾರು ಕಿಲೋಮೀಟರ್ ದೂರಕ್ಕೆ ತೋರಬಲ್ಲದು! ಅಂದರೆ, ಬೆಂಗಳೂರಿನ ಜಾಗದಲ್ಲಿ ಮೈಸೂರನ್ನು ತೋರಿಸಿದಂತಾದೀತು.
ಈ ಕ್ಲಾಕ್ ಹೊರತಾಗಿ, ಐಆರ್‌ಎನ್ಎಸ್ಎಸ್-1ಎಫ್ ಉಪಗ್ರಹ ಕೇವಲ ಒಂದು ಬದಿ ಸಂಕೇತವನ್ನು ಮಾತ್ರ ಕಳುಹಿಸಬಲ್ಲದು. ಅಂದರೆ, ಇದು ಮಾಹಿತಿಯನ್ನು ಭೂಮಿಗೆ ಕಳುಹಿಸುತ್ತದೆಯೇ ಹೊರತು, ದ್ವಿಮುಖ ಸಂವಹನ ನಡೆಸಲು ಸಾಧ್ಯವಿಲ್ಲ. ಇದೊಂದು ರೀತಿಯಲ್ಲಿ ಹಾಡುಗಳನ್ನು ಪ್ರಸಾರ ಮಾಡುವ ರೇಡಿಯೋದ ರೀತಿ ಇರಲಿದ್ದು, ಕೇಳುಗರ ಕೋರಿಕೆಯನ್ನು ಪೂರೈಸಲಾರದು. ನಾವಿಕ್ ವ್ಯವಸ್ಥೆ ನಿಖರವಾದ ಸ್ಥಾನವನ್ನು ತೋರಿಸಬೇಕಾದರೆ, ಅದಕ್ಕೆ ಕನಿಷ್ಠ ನಾಲ್ಕು ಉಪಗ್ರಹಗಳು ಏಕಕಾಲದಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಈಗ ನಮ್ಮಲ್ಲಿ ಕೇವಲ ಮೂರು ಸಂಪೂರ್ಣ ಕಾರ್ಯಾಚರಿಸುವ ಉಪಗ್ರಹಗಳಿವೆ. ಅವೆಂದರೆ, ಐಆರ್‌ಎನ್ಎಸ್ಎಸ್-1ಬಿ (2014 ಎಪ್ರಿಲ್ ತಿಂಗಳಲ್ಲಿ ಉಡಾವಣೆ), ಐಆರ್‌ಎನ್ಎಸ್ಎಸ್-1ಎಲ್ (ಎಪ್ರಿಲ್ 2018), ಮತ್ತು ನೂತನ ಎನ್‌ವಿಎಸ್-01 (ಮೇ 2023). ಐಆರ್‌ಎನ್ಎಸ್ಎಸ್-1ಬಿ ಈಗಾಗಲೇ ಹತ್ತು ವರ್ಷಗಳ ತನ್ನ ಜೀವಿತಾವಧಿಯನ್ನು ಪೂರೈಸಿದ್ದು, ಅದು ಯಾವ ದಿನ, ಯಾವ ಕ್ಷಣದಲ್ಲಿ ಬೇಕಾದರೂ ಕೈಕೊಡಬಹುದು. ಇದು ಒಂದು ರೀತಿಯಲ್ಲಿ ಹಳೆಯದಾದ, ಯಾವಾಗ ಬೇಕಾದರೂ ರಸ್ತೆಯಲ್ಲೇ ನಿಂತುಬಿಡಬಹುದಾದ ಸ್ಕೂಟರ್‌ನಂತಿದೆ. ಎನ್‌ವಿಎಸ್-01 ನೂತನ ಮತ್ತು ನಂಬಿಕಾರ್ಹ ಉಪಗ್ರಹವಾಗಿದೆ. ಆದರೆ, ಅದೊಂದೇ ಏಕಾಂಗಿಯಾಗಿ ಏಳು ಉಪಗ್ರಹಗಳ ಪುಂಜ ನಿರ್ವಹಿಸಬೇಕಾದ ಕಾರ್ಯವನ್ನು ನಡೆಸಲು ಸಾಧ್ಯವಿಲ್ಲ.
ಇದನ್ನು ದೊಡ್ಡ ವ್ಯವಸ್ಥೆಗಳಿಗೆ ಹೋಲಿಸಿ ನೋಡಿ. ಅಮೆರಿಕದ ಜಿಪಿಎಸ್ ವ್ಯವಸ್ಥೆ 31 ಕಾರ್ಯಾಚರಿಸುವ ಉಪಗ್ರಹಗಳನ್ನು ಹೊಂದಿದ್ದು, ಅವು ಭೂಮಿಯ ಸುತ್ತಲೂ ಪರಿಭ್ರಮಣೆ ನಡೆಸುತ್ತಿವೆ. ಇದು ಜಿಪಿಎಸ್ ವ್ಯವಸ್ಥೆಯನ್ನು ವಿಮಾನಗಳಿಗೆ ಮಾರ್ಗದರ್ಶನ ನೀಡುವುದರಿಂದ, ನಿಮ್ಮ ಆಹಾರವನ್ನು ಆನ್‌ಲೈನ್ ಬುಕಿಂಗ್ ಮೂಲಕ ಮನೆಗೆ ತಲುಪಿಸುವ ತನಕ ಎಲ್ಲ ರೀತಿಯ ಜಾಗತಿಕ ಬಳಕೆಗೆ ಸೂಕ್ತವಾಗಿಸಿದೆ. ಇನ್ನು ರಷ್ಯಾದ ಗ್ಲೊನಾಸ್ 24 ಉಪಗ್ರಹಗಳನ್ನು ಹೊಂದಿದ್ದರೆ, ಚೀನಾದ ಬೈದು 35 ಉಪಗ್ರಹಗಳನ್ನು ಹೊಂದಿದೆ. ಯುರೋಪಿನ ಗೆಲಿಲಿಯೋ ಅಂದಾಜು 30 ಉಪಗ್ರಹಗಳೊಡನೆ ಕಾರ್ಯಾಚರಿಸುತ್ತದೆ. ಇವೆಲ್ಲ ವ್ಯವಸ್ಥೆಗಳೂ ಹೆಚ್ಚುವರಿ ಉಪಗ್ರಹಗಳನ್ನು ಹೊಂದಿ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಯಾಚರಣಾ ಹಿನ್ನಡೆ ಅನುಭವಿಸುವುದು ಅತ್ಯಂತ ಅಪರೂಪವಾಗಿದೆ. ಆದರೆ ನಾವಿಕ್ ಸ್ಥಿತಿ ಏನು? ಮಾರ್ಚ್ 13ರ ವೇಳೆಗೆ, ಇಲ್ಲಿಯ ತನಕ ಉಡಾವಣೆಗೊಳಿಸಿರುವ 11 ಉಪಗ್ರಹಗಳ ಪೈಕಿ, ಕೇವಲ ಮೂರು ಉಪಗ್ರಹಗಳು ಮಾತ್ರವೇ ಸಮರ್ಥ ಸ್ಥಾನ, ಸಂಚರಣೆ, ಮತ್ತು ಸಮಯದ (ಪೊಸಿಷನ್, ನ್ಯಾವಿಗೇಶನ್, ಟೈಮಿಂಗ್ - ಪಿಎನ್‌ಟಿ) ಸೇವೆಗಳನ್ನು ಒದಗಿಸುತ್ತಿವೆ. ನಾಲ್ಕು ಉಪಗ್ರಹಗಳು ನ್ಯಾವಿಗೇಶನ್ ಸಾಮರ್ಥ್ಯ ಕಳೆದುಕೊಂಡಿದ್ದು, ಕೇವಲ ಏಕಮುಖ ಸಂವಹನ ನಡೆಸುತ್ತಿವೆ. ಒಂದು ಉಪಗ್ರಹ ನಿವೃತ್ತಿಗೊಂಡಿದೆ. ಇನ್ನು ಎರಡು ಉಪಗ್ರಹಗಳಂತೂ ಸರಿಯಾದ ಕಕ್ಷೆಯನ್ನೇ ತಲುಪಿಲ್ಲ. 'ಮೇಕ್ ಇನ್ ಇಂಡಿಯಾ' ಯೋಜನೆಗೆ ಹೆಮ್ಮೆ ತರುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ, ಶ್ರಮ ವಹಿಸಿ ನಿರ್ಮಿಸಿರುವ ಈ ಉಪಗ್ರಹಗಳು ಸರಿಯಾದ ಸ್ಥಾನವನ್ನೇ ತಲುಪದಿರುವುದು ನಿಜಕ್ಕೂ ದುಃಖಕರ ಬೆಳವಣಿಗೆಯಾಗಿದೆ.
ಹಳೆಯ ಉಪಗ್ರಹಗಳಿಗಾಗಿ ಭಾರತ ಆಮದು ಮಾಡಿಕೊಂಡಿರುವ ಅಟಾಮಿಕ್ ಕ್ಲಾಕ್‌ಗಳ ಸಮಸ್ಯೆಯಿಂದಾಗಿ ಈ ತೊಂದರೆಗಳು ಆರಂಭಗೊಂಡವು. ವಿದೇಶೀ ತಂತ್ರಜ್ಞಾನಗಳು ಪದೇ ಪದೇ ವಿಫಲವಾಗಿ, ಸಮರ್ಥ ಉಪಗ್ರಹಗಳನ್ನು ಕೇವಲ ಅರ್ಧ ಪಾಲು ಉಪಯೋಗಕರವಾಗಿಸಿ, ತಾವು ನಂಬಿಕಾರ್ಹವಲ್ಲ ಮತ್ತು ಅಪಾಯಕಾರಿ ಎನ್ನುವುದನ್ನು ಸಾಬೀತುಪಡಿಸಿದವು. ಆದ್ದರಿಂದಲೇ ಎನ್‌ವಿಎಸ್ ಸರಣಿಯ ನೂತನ ಉಪಗ್ರಹಗಳು ಒಂದು ಹೆಜ್ಜೆ ಮುಂದಿಟ್ಟಿವೆ. ಎನ್‌ವಿಎಸ್-01 ಉಪಗ್ರಹ ದೇಶೀಯ ನಿರ್ಮಾಣದ ಕ್ಲಾಕ್‌ಗಳನ್ನು ಬಳಸುತ್ತಿದ್ದು, ಎಲ್1 ಸಿಗ್ನಲ್ ಬ್ಯಾಂಡಿಗೆ ಬೆಂಬಲ ನೀಡುತ್ತಿದೆ. ಅಂದರೆ, ಭವಿಷ್ಯದ ಫೋನ್‌ಗಳು ಕೇವಲ ಒಂದು ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ನಾವಿಕ್ ಬಳಸಬಲ್ಲವಾಗಿದ್ದವು. ಇದಕ್ಕಾಗಿ ಯಾವುದೇ ಹೆಚ್ಚುವರಿ ಹಾರ್ಡ್‌ವೇರ್ ಅಗತ್ಯವಿಲ್ಲ. ಆದರೆ, ಈಗ ಆ ಅಭಿವೃದ್ಧಿಯೂ ನಿಲುಗಡೆಗೆ ಬಂದಿದೆ. ಜನವರಿ 2025ರಲ್ಲಿ ಉಡಾವಣೆಗೊಂಡ ಎನ್‌ವಿಎಸ್-02 ಉಪಗ್ರಹಕ್ಕೆ ಒಂದು ಇಲೆಕ್ಟ್ರಿಕಲ್ ದೋಷ ತಲೆದೋರಿತು. ಇದರ ಪರಿಣಾಮವಾಗಿ, ಉಪಗ್ರಹದ ಇಂಜಿನ್ ಸರಿಯಾಗಿ ಕಾರ್ಯಾಚರಿಸಲಿಲ್ಲ. ಬಳಿಕ ಉಪಗ್ರಹ ತಪ್ಪಾದ ಕಕ್ಷೆಯಲ್ಲಿ ಉಳಿದು, ಸಂಚರಣಾ ಸೇವೆಗೆ ಲಭ್ಯವಾಗಲಿಲ್ಲ. ಇನ್ನು ಹಳೆಯ ಉಪಗ್ರಹಗಳಿಗೆ ಪರ್ಯಾಯ ಉಪಗ್ರಹಗಳ ಅಳವಡಿಕೆಯೂ ವಿಳಂಬಗೊಳ್ಳುತ್ತಿದೆ. ಈಗ ಕೇವಲ ಮೂರು ಉಪಗ್ರಹಗಳು ಮಾತ್ರವೇ ಉಳಿದಿರುವುದರಿಂದ, ನಾವಿಕ್ ತನ್ನ ವಿನ್ಯಾಸದ ಏಳು ಉಪಗ್ರಹಗಳಿಂದ ಸಾಕಷ್ಟು ಹಿಂದುಳಿದಿದೆ.
ಇದು ನಮಗೆ ಸರಿಯಾಗಿ ಎಲ್ಲಿ ನೋಯುತ್ತದೋ ಅಲ್ಲಿಗೇ ಹೊಡೆಯುತ್ತಿದೆ. ಅಂದರೆ, ನೇರವಾಗಿ ನಮ್ಮ ದೈನಂದಿನ ಬಳಕೆಗೇ ತೊಂದರೆ ನೀಡುತ್ತಿದೆ. ಈಗಾಗಲೇ ಅಂದಾಜು 8,700 ರೈಲುಗಳು ನಾವಿಕ್ ಟ್ರ್ಯಾಕಿಂಗ್ ಬಳಸುತ್ತಿದ್ದು, ಇದನ್ನು 1,200 ರೈಲುಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ನಾವಿಕ್ ವ್ಯವಸ್ಥೆ ವಿಪತ್ತು ಮುನ್ಸೂಚನೆ ಒದಗಿಸುತ್ತದೆ, ಹಡಗುಗಳಿಗೆ ಮಾರ್ಗದರ್ಶನ ನೀಡುತ್ತದೆ, ವಾಹನಗಳನ್ನು ಗಮನಿಸುತ್ತಾ, ರಸ್ತೆಗಳನ್ನು ಸುರಕ್ಷಿತವಾಗಿಸುತ್ತದೆ. ಮೀನುಗಾರರು ಭಾರತದ ಗಡಿಯನ್ನು ದಾಟದೆ, ಮೀನುಗಳನ್ನು ಹುಡುಕಲು, ರೈತರು ನಿಖರ ಕೃಷಿ ಕಾರ್ಯಗಳನ್ನು ನಡೆಸಲು ಇದನ್ನು ಬಳಸುತ್ತಾರೆ. ಆದರೆ, ನಾವಿಕ್ ವ್ಯವಸ್ಥೆಯೇ ವಿಫಲವಾಗುತ್ತಿದ್ದು, ಅದರ ಸೇವೆಯೇ ಅಪಾಯದ ಅಂಚಿಗೆ ಸಿಲುಕಿದೆ. ಸಂಕೇತಗಳು ಬಲವಾಗಿಲ್ಲದ ಕಾರಣದಿಂದ, ಚಂಡಮಾರುತದ ಮುನ್ಸೂಚನೆ ವಿಳಂಬವಾಗುವುದನ್ನು ಒಮ್ಮೆ ಊಹಿಸಿಕೊಳ್ಳಿ. ಇದರಿಂದಾಗಿ ಜೀವಗಳು ಅಪಾಯಕ್ಕೆ ಸಿಲುಕಬಹುದು. ಇದು ಕೇವಲ ಮ್ಯಾಪ್‌ಗೆ ಮಾತ್ರವೇ ಸೀಮಿತವಲ್ಲ. ಬದಲಿಗೆ, ಆಟೋ ಚಾಲಕರು, ಆಹಾರ - ವಸ್ತುಗಳ ಡೆಲಿವರಿ ಮಾಡುವವರು, ಮತ್ತು ಗ್ರಾಮೀಣ ಜನರಂತಹ ಸಾಮಾನ್ಯರಿಗೆ ಸುರಕ್ಷತೆ ಮತ್ತು ಪ್ರಗತಿಯನ್ನು ಒದಗಿಸುತ್ತದೆ.
ಒಂದು ವೇಳೆ ಭಾರತ ಕ್ಷಿಪ್ರವಾಗಿ ಕ್ರಮ ಕೈಗೊಂಡರೆ ನಮಗೆ ಆಶಾದಾಯಕ ಪರಿಸ್ಥಿತಿ ಇದೆ. ಹೆಚ್ಚುವರಿ ಉಪಗ್ರಹಗಳ ಉಡಾವಣೆ ನಡೆಸುತ್ತಾ, ಬಾಹ್ಯಾಕಾಶ ವ್ಯವಸ್ಥೆಗಳನ್ನು ಸಮರ್ಥವಾಗಿಡುವ ಜಾಗತಿಕ ಸಂಸ್ಥೆಗಳಿಂದ ಭಾರತವೂ ಪಾಠ ಕಲಿತರೆ, ಆಗ ಭಾರತ ಬದಲಿ ಉಪಗ್ರಹಗಳ ಉಡಾವಣೆ ನಡೆಸಿ, ಈ ಲೋಪ ದೋಷಗಳನ್ನು ಪರಿಹರಿಸಬಹುದು. ನಾವಿಕ್ ಭಾರತವನ್ನು ಸ್ವಾವಲಂಬಿಯಾಗಿಸುವ ಉದ್ದೇಶದಿಂದ ನಿರ್ಮಿತವಾಗಿತ್ತೇ ಹೊರತು, ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಮನಬಂದಂತೆ ನಮಗೆ ಸೇವೆಯನ್ನು ಸ್ಥಗಿತಗೊಳಿಸುವ ವಿದೇಶೀ ವ್ಯವಸ್ಥೆಗಳ ಮೇಲೆ ಅವಲಂಬನೆ ಹೊಂದಲಲ್ಲ. ಈಗ ಭಾರತಕ್ಕೆ ತನ್ನ ಬಾಹ್ಯಾಕಾಶ ಪ್ರಯತ್ನಗಳನ್ನು ವೇಗಗೊಳಿಸುವ ಸಮಯ ಬಂದಿದೆ. ಮಳೆಗಾಲಕ್ಕೂ ಮುನ್ನ ಮನೆಯ ಮಹಡಿಯನ್ನು ಸರಿಪಡಿಸುವಂತೆ ನಾವು ನಾವಿಕ್ ವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲವಾದರೆ, ಬಲವಾದ, ಸ್ವಾವಲಂಬಿಯಾದ ನ್ಯಾವಿಗೇಶನ್ ವ್ಯವಸ್ಥೆಯನ್ನು ಹೊಂದುವ ಭಾರತದ ಕನಸುಗಳು ಕ್ರಮೇಣ ಕಮರಿ ಹೋಗಬಹುದು. ಆಗ ಜಗತ್ತು ದಾಪುಗಾಲಿಟ್ಟು ನಮ್ಮಿಂದ ಮುಂದೆ ಸಾಗಿ ಹೋಗಿರಬಹುದು. ಆದ್ದರಿಂದ ನಾವು ಈಗ ನಮ್ಮ ದೋಷಗಳನ್ನು ಕ್ಷಿಪ್ರವಾಗಿ ಪರಿಹರಿಸಿಕೊಂಡು, ನಮ್ಮ ರೈಲುಗಳನ್ನು ಸುರಕ್ಷಿತವಾಗಿಸಿ, ನಿಖರ ಮಾಹಿತಿಗಳನ್ನು ಹೊಂದಿ, ಭಾರತಕ್ಕೆ ಹೆಮ್ಮೆ ತರುವಂತಹ ವ್ಯವಸ್ಥೆಯನ್ನು ಹೊಂದಬಹುದು.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com