ತಮಿಳುನಾಡು CM ರಾಜೀನಾಮೆ ಅಂಗೀಕಾರ; DMK ಸೋಲಿನ ಬಗ್ಗೆ ಸ್ಟಾಲಿನ್ ಹೇಳಿದ್ದೇನು?

ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವು ನಮಗಿಂತ ಕೇವಲ 17.43 ಲಕ್ಷ ಹೆಚ್ಚು ಮತಗಳನ್ನು ಪಡೆದಿದೆ. ಅವರ ಮತ್ತು ನಮ್ಮ ನಡುವಿನ ಮತ ಹಂಚಿಕೆಯ ವ್ಯತ್ಯಾಸ ಕೇವಲ ಶೇ. 3.52.
M K Stalin
ಎಂ ಕೆ ಸ್ಟಾಲಿನ್
Updated on

ಚೆನ್ನೈ: ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಡಿಎಂಕೆ ಹೀನಾಯ ಸೋಲು ಅನುಭವಿಸಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಸ್ಟಾಲಿನ್ ಅವರ ರಾಜೀನಾಮೆ ಅಂಗೀಕರಿಸಿದ್ದಾರೆ.

ಸ್ಥಾಪಿತ ಸಾಂವಿಧಾನದ ಪ್ರಕಾರ, ಹೊಸ ಸರ್ಕಾರ ರಚನೆಯಾಗುವವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ರಾಜ್ಯಪಾಲರು ಸ್ಟಾಲಿನ್ ಅವರನ್ನು ವಿನಂತಿಸಿದ್ದಾರೆ.

ಏಪ್ರಿಲ್ 23 ರಂದು ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 4 ರಂದು ಪ್ರಕಟವಾಗಿದ್ದು, ನಟ, ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ(ಟಿವಿಕೆ) 108 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

M K Stalin
ತಮಿಳುನಾಡಿನಲ್ಲಿ 'ಜನ ನಾಯಕ' ಆಗಿ ಹೊರಹೊಮ್ಮಿದ ವಿಜಯ್‌ಗೆ ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಸುರಿಮಳೆ! ಹೇಳಿದ್ದೇನು?

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ 59 ಸ್ಥಾನಗಳನ್ನು ಗೆದ್ದಿದೆ ಮತ್ತು ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಎಐಎಡಿಎಂಕೆ 47 ಸ್ಥಾನಗಳನ್ನು ಗೆದ್ದಿದೆ.

ಸೋಲಿನ ಬಗ್ಗೆ ಸ್ಟಾಲಿನ್ ಹೇಳಿದ್ದೇನು?

ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ(ಎಸ್‌ಪಿಎ)ವನ್ನು ಬೆಂಬಲಿಸಿದ ಮತದಾರರಿಗೆ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರು ಧನ್ಯವಾದ ಹೇಳಿದ್ದಾರೆ. ಮೈತ್ರಿಕೂಟಕ್ಕೆ ನೀಡಿದ ಪ್ರತಿಯೊಂದು ಮತವೂ ಅವರು ಪಕ್ಷದ ಮೇಲೆ ಇಟ್ಟುಕೊಂಡಿದ್ದ "ಅಮೂಲ್ಯ ನಂಬಿಕೆ" ಎಂದಿದ್ದಾರೆ.

ಎಸ್‌ಪಿಎ ಇದುವರೆಗೆ 1.54 ಕೋಟಿ ಮತಗಳನ್ನು ಪಡೆದಿದೆ ಎಂದು ಸ್ಟಾಲಿನ್ ಅವರು ಹೇಳಿದ್ದಾರೆ.

"ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವು ನಮಗಿಂತ ಕೇವಲ 17.43 ಲಕ್ಷ ಹೆಚ್ಚು ಮತಗಳನ್ನು ಪಡೆದಿದೆ. ಅವರ ಮತ್ತು ನಮ್ಮ ನಡುವಿನ ಮತ ಹಂಚಿಕೆಯ ವ್ಯತ್ಯಾಸ ಕೇವಲ ಶೇ. 3.52. ನನ್ನ ಮಟ್ಟಿಗೆ ಹೇಳುವುದಾದರೆ, ತಮಿಳುನಾಡಿನ ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯೇ ಪ್ರಬಲವೆಂದು ನಾನು ಪರಿಗಣಿಸುತ್ತೇನೆ" ಎಂದು ಟಿವಿಕೆ ಹೆಸರಿಸದೆ ಸ್ಟಾಲಿನ್ ಹೇಳಿದ್ದಾರೆ.

ಗೆದ್ದ ಎಲ್ಲಾ ಡಿಎಂಕೆ ಅಭ್ಯರ್ಥಿಗಳು ತಕ್ಷಣವೇ ಮತದಾರರನ್ನು ತಲುಪಿ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಬೇಕೆಂದು ಸ್ಟಾಲಿನ್ ಕರೆ ನೀಡಿದ್ದಾರೆ.

“ಪ್ರಜಾಪ್ರಭುತ್ವದಲ್ಲಿ, ಜನರು ನಮ್ಮ ಗೌರವಕ್ಕೆ ಅರ್ಹರು. ನಾವು ಅವರಿಗಾಗಿ ಪಕ್ಷವನ್ನು ನಡೆಸುತ್ತೇವೆ. ನಾವು ಅವರಿಗಾಗಿ ರಾಜಕೀಯದಲ್ಲಿ ಕಾರ್ಯನಿರ್ವಹಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಅಧಿಕಾರದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ, ಡಿಎಂಕೆ ಜನ ಸೇವೆ ಮುಂದುವರೆಸಲಿದೆ. ನಾವು ಸರ್ಕಾರದಲ್ಲಿದ್ದರೆ, ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತೇವೆ. ನಾವು ವಿರೋಧ ಪಕ್ಷದಲ್ಲಿದ್ದರೆ, ಜನರ ಬೇಡಿಕೆಗಳಿಗಾಗಿ ಹೋರಾಡುತ್ತೇವೆ” ಎಂದು ಸ್ಟಾಲಿನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com