ಇರಾನ್ ಮತ್ತು ಅಮೆರಿಕಗಳ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ನಡುವೆ, ಟರ್ಕಿ ಸದ್ದಿಲ್ಲದೆ ಹೊಸದೊಂದು ಭೀತಿದಾಯಕ ಆಯುಧದೊಡನೆ ರಂಗ ಪ್ರವೇಶಿಸಿದೆ. ಟರ್ಕಿಯ ಪ್ರಮುಖ ರಕ್ಷಣಾ ಕಂಪನಿಗಳಲ್ಲಿ ಒಂದಾದ ರಾಕೆಟ್‌ಸಾನ್ 'ನೆಸ್ಟರ್' ಎನ್ನುವ ತನ್ನ ನೂತನ ಕ್ಷಿಪಣಿಯನ್ನು ಪ್ರದರ್ಶಿಸಿದ್ದು, ಟರ್ಕಿಶ್ ಭಾಷೆಯಲ್ಲಿ 'ಸಣ್ಣ ಚಾಕು' ಎನ್ನುವ ಅರ್ಥ ಹೊಂದಿದೆ. ಸಣ್ಣ ಚಾಕು ಎಂದರೆ ಸಾಮಾನ್ಯವಾಗಿ ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ರೀತಿಯದ್ದಾಗಿದೆ. ಈ ಆಯುಧವನ್ನು ಮೇ 5ರಂದು ಇಸ್ತಾಂಬುಲ್‌ನಲ್ಲಿ ನಡೆದ ಸಾಹಾ 2026 ಅಂತಾರಾಷ್ಟ್ರೀಯ ರಕ್ಷಣೆ ಮತ್ತು ಏರೋಸ್ಪೇಸ್ ಪ್ರದರ್ಶನದಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಪ್ರದರ್ಶನಗೊಂಡಿತು.
ಈ ಕ್ಷಿಪಣಿಯನ್ನು ಇಷ್ಟೊಂದು ವಿಶೇಷ ಮತ್ತು ಆತಂಕಕಾರಿಯಾಗಿಸುವುದು ಏನು? ಏನೆಂದರೆ, ಇದು ಸಾಮಾನ್ಯ ಕ್ಷಿಪಣಿಯಂತೆ ಸ್ಫೋಟಗೊಳ್ಳುವುದಿಲ್ಲ. ಬದಲಿಗೆ, ಇದು ಆರು ಬಚ್ಚಿಟ್ಟ, ತೀಕ್ಷ್ಣವಾದ ಬ್ಲೇಡ್‌ಗಳನ್ನು ಹೊಂದಿದ್ದು, ಇವು ಗುರಿಗೆ ಹೊಡೆಯುವ ಮುನ್ನ ಖಡ್ಗದ ರೀತಿಯಲ್ಲಿ ಹೊರಬರುತ್ತವೆ. ಇದರ ವಿಚಿತ್ರವಾದ ಹತ್ಯೆಯ ರೀತಿಯಿಂದ ಇಂತಹ ಆಯುಧಗಳನ್ನು 'ಫ್ಲೈಯಿಂಗ್ ಜಿನ್ಸು' ಅಥವಾ 'ನಿಂಜಾ ಮಿಸೈಲ್' ಎಂದು ಕರೆಯಲಾಗುತ್ತದೆ. ಈ ಯೋಜನೆ ಮೂಲತಃ ಅಮೆರಿಕದ ರಹಸ್ಯ ಆಯುಧವಾದ ಎಜಿಎಂ-114ಆರ್9ಎಕ್ಸ್ ಹೆಲ್‌ಫೈರ್ ಕ್ಷಿಪಣಿಯಿಂದ ಪ್ರೇರಿತವಾಗಿದೆ. ಇದರ ವಿಶಿಷ್ಟ ಬ್ಲೇಡ್ ವಿನ್ಯಾಸವನ್ನು ಟಿಡಬ್ಲ್ಯುಜೆಡ್ 2017ರಲ್ಲಿ ಮೊದಲಿಗೆ ವರದಿ ಮಾಡಿತ್ತು.
ನೆಸ್ಟರ್ ಎನ್ನುವುದು ರಾಕೆಟ್‌ಸಾನ್ ಸಂಸ್ಥೆ ಹಿಂದೆ ನಿರ್ಮಿಸಿದ ಎಂಎಎಮ್-ಎಲ್ ಎನ್ನುವ ಹಿಂದಿನ ಹಗುರವಾದ, ಸ್ಮಾರ್ಟ್ ಮೈಕ್ರೋ - ಮ್ಯುನಿಷನ್ ಆಯುಧದಿಂದ ಪ್ರೇರಿತವಾಗಿದೆ. ಸರಳವಾಗಿ ಹೇಳುವುದಾದರೆ, ಇದೊಂದು ಸಣ್ಣ ನಿರ್ದೇಶಿತ ಬಾಂಬ್ ಆಗಿದ್ದು ಇದನ್ನು ಡ್ರೋನ್‌ಗಳಿಗೆ (ಯುಎವಿಗಳು ಅಥವಾ ಅನ್‌ಕ್ರ್ಯೂಡ್ ಏರಿಯಲ್ ವೆಹಿಕಲ್ಸ್), ಸಣ್ಣ ದಾಳಿ ಏರ್‌ಕ್ರಾಫ್ಟ್‌ಗಳಿಗೆ ಅಳವಡಿಸಬಹುದು. ಎಂಎಎಂ-ಎಲ್ ಈಗಾಗಲೇ ಬೇರಾಕ್ತರ್ ಟಿಬಿ2 ಡ್ರೋನ್ ಎಂಬ ಟರ್ಕಿಯ ಅತ್ಯಂತ ಯಶಸ್ವಿ ಡ್ರೋನ್ ಜೊತೆ ಬಳಕೆಯಾಗಿ ಪ್ರಸಿದ್ಧವಾಗಿದೆ. ಈ ಅಪಾಯಕಾರಿ ಡ್ರೋನ್ ಮತ್ತು ಕ್ಷಿಪಣಿಗಳ ಸಂಯೋಜನೆ ಸಿರಿಯಾ, ಲಿಬಿಯಾ, ಉಕ್ರೇನ್‌ಗಳ ಯುದ್ಧಗಳಲ್ಲಿ, ಮತ್ತು ಅರ್ಮೇನಿಯಾ - ಅಜರ್‌ಬೈಜಾನ್ ನಡುವಿನ ಯುದ್ಧದಲ್ಲಿ ಬಳಕೆಯಾಗಿದ್ದು, ಅತ್ಯಂತ ಪರಿಣಾಮಕಾರಿ ಫಲಿತಾಂಶ ಒದಗಿಸಿದೆ.
ರಾಕೆಟ್‌ಸಾನ್ ಸಂಸ್ಥೆ ಈ ಹಿಂದೆ ಎಂಎಎಂ-ಎಲ್ ಕ್ಷಿಪಣಿಗಾಗಿ ವಿವಿಧ ರೀತಿಯ ಸಿಡಿತಲೆಗಳನ್ನು ತಯಾರಿಸಿದೆ. ಇವುಗಳಲ್ಲಿ ಟ್ಯಾಂಕ್‌ಗಳಂತಹ ಅತ್ಯಂತ ರಕ್ಷಣೆ ಹೊಂದಿರುವ ಗುರಿಗಳನ್ನು ನಾಶಪಡಿಸುವ ಆರ್ಮರ್ - ಪಿಯರ್ಸಿಂಗ್ ಆವೃತ್ತಿ, ಸ್ಫೋಟಗೊಂಡಾಗ ಅನಾಹುತಕಾರಿ ಲೋಹದ ತುಣುಕುಗಳನ್ನು ಸಿಡಿಸುವ ಹೈ ಎಕ್ಸ್‌ಪ್ಲೋಸಿವ್ ಬ್ಲಾಸ್ಟ್ ಫ್ರಾಗ್ಮಂಟೇಶನ್ ಆವೃತ್ತಿ, ಅತಿಯಾದ ಉಷ್ಣತೆ ಮತ್ತು ಒತ್ತಡದ ಅಲೆಗಳನ್ನು ಸೃಷ್ಟಿಸುವ ಥರ್ಮೋಬಾರಿಕ್ ಸಿಡಿತಲೆಗಳು ಸೇರಿವೆ. ಆದರೆ, ನೆಸ್ಟರ್ ಇವೆಲ್ಲಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಇದು ಮೂಲತಃ ಯಾರನ್ನಾದರೂ ಗುರಿಯಾಗಿಸಿ ಹತ್ಯೆಗೈಯುವ (ಟಾರ್ಗೆಟೆಡ್ ಅಸಾಸಿನೇಶನ್) ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಅಂದರೆ, ಸುತ್ತಮುತ್ತಲಿನ ಪ್ರದೇಶಗಳು ಮತ್ತು ಜನರಿಗೆ ಹಾನಿಯಾಗದ ರೀತಿಯಲ್ಲಿ ಓರ್ವ ವ್ಯಕ್ತಿಯನ್ನು ಸಂಹರಿಸುವ ಸಲುವಾಗಿ ವಿನ್ಯಾಸಗೊಂಡಿದೆ.
ಬಹಳಷ್ಟು ಬಾರಿ ಅಮೆರಿಕದ ಎಜಿಎಂ- 114ಆರ್9ಎಕ್ಸ್ ಸಹ ಇದೇ ಉದ್ದೇಶಕ್ಕಾಗಿಯೇ ಹಲವು ಬಾರಿ ಬಳೆಕೆಯಾಗಿದೆ. ಇಂತಹ ಆಯುಧಗಳು ಅತ್ಯಂತ ನಿಖರವಾಗಿದ್ದು, ಚಲಿಸುವ ವಾಹನದೊಳಗೆ ಕುಳಿತಿರುವ ವ್ಯಕ್ತಿ ಗುರಿಯಾಗಿದ್ದರೆ, ಚಾಲಕನಿಗೂ ಹಾನಿಯಾಗದಂತೆ ಆ ವ್ಯಕ್ತಿಯನ್ನು ಮಾತ್ರವೇ ಹತ್ಯೆ ಮಾಡುತ್ತವೆ. ಚೂಪಾದ ಬ್ಲೇಡುಗಳು ಗುರಿ ಕುಳಿತಿರುವ ಜಾಗದ ಮೇಲ್ಭಾಗವನ್ನು ಕತ್ತರಿಸಿ, ಒಳ ನುಗ್ಗಿ, ದಾಳಿ ಮಾಡುತ್ತವೆ. ಇದರಿಂದಾಗಿ ಕೇವಲ ಗುರಿಗೆ ಮಾತ್ರವೇ ಹಾನಿಯಾಗಿ, ಜೊತೆಗಿರುವವರಿಗೆ, ಸ್ಥಳಗಳಿಗೆ ಹಾನಿಯಾಗುವುದಿಲ್ಲ. ಅಮಾಯಕ ಜನರಿಗೆ, ಅಥವಾ ಪಕ್ಕದ ಕಟ್ಟಡಗಳಿಗೆ ಬಹುತೇಕ ಯಾವ ಹಾನಿಯೂ ಉಂಟಾಗುವುದಿಲ್ಲ.
ರಾಕೆಟ್‌ಸಾನ್ ಪ್ರಕಾರ, ಎಂಎಎಂ-ಎಲ್ ಕ್ಷಿಪಣಿ ಅಂದಾಜು 3.3 ಅಡಿ ಉದ್ದವಿದ್ದು, 6.3 ಇಂಚು ಅಗಲವಿದೆ. ಬಹುತೇಕ 22 ಕೆಜಿ ತೂಕ ಹೊಂದಿರುವ ಕ್ಷಿಪಣಿ, ಗರಿಷ್ಠ 15 ಕಿಲೋಮೀಟರ್ ದೂರದ ತನಕ ದಾಳಿ ನಡೆಸಬಲ್ಲದು. ಇದಕ್ಕೆ ಹೋಲಿಸಿದರೆ, ಅಮೆರಿಕದ ಹೆಲ್‌ಫೈರ್ ಕ್ಷಿಪಣಿ ಹೆಚ್ಚು ದೊಡ್ಡದಾಗಿದ್ದು, 5.2 ಅಡಿ ಉದ್ದ ಮತ್ತು ಬಹುತೇಕ 45 ಕೆಜಿ ಭಾರ ಹೊಂದಿದೆ. ಆದರೆ, ನೆಸ್ಟರ್ ತನ್ನದೇ ಆದ ಇಂಜಿನ್ ಹೊಂದಿದೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಇದು ಇಂಜಿನ್ ಹೊಂದಿಲ್ಲದಿದ್ದರೂ, ಅದರ ದಾಳಿ ಸಾಮರ್ಥ್ಯ ಬಹುತೇಕ ಅದು ಬೀಳುವ ವೇಗವನ್ನು ಅವಲಂಬಿಸಿದೆ. ಏಕೆಂದರೆ, ನೆಸ್ಟರ್ ಯಾವುದೇ ಸ್ಫೋಟಕ ವಸ್ತುವನ್ನು ಹೊಂದಿಲ್ಲ.
ನೆಸ್ಟರ್ ಹೊಂದಿರುವ ನಿರ್ದೇಶನ ವ್ಯವಸ್ಥೆಯೂ ಅತ್ಯಂತ ಆಸಕ್ತಿಕರವಾಗಿದೆ. ಸಾಮಾನ್ಯ ಎಂಎಎಂ-ಎಲ್ ಕ್ಷಿಪಣಿ ಲೇಸರ್ ನಿರ್ದೇಶನವನ್ನು ಅನುಸರಿಸುವುದಾಗಿದ್ದು, ಕ್ಷಿಪಣಿ ಗುರಿಯತ್ತ ಸಾಗಿರುವ ಲೇಸರ್ ಕಿರಣವನ್ನು ಹಿಂಬಾಲಿಸಿ ಸಾಗುತ್ತದೆ. ಆದರೆ, ಅಮೆರಿಕದ ರಹಸ್ಯ ಎಜಿಎಂ-114ಆರ್9ಎಕ್ಸ್ ಹೆಚ್ಚು ಆಧುನಿಕವಾದ ಐಐಆರ್ (ಇಮೇಜಿಂಗ್ ಇನ್‌ಫ್ರಾರೆಡ್) ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ ಎನ್ನಲಾಗಿದೆ. ಇದು ಕ್ಷಿಪಣಿಯ ಒಳಗಿರುವ ಒಂದು ಸ್ಮಾರ್ಟ್, ಉಷ್ಣವನ್ನು ಗುರುತಿಸುವ ಕ್ಯಾಮರಾ ರೀತಿ ಕಾರ್ಯಾಚರಿಸುತ್ತದೆ. ಇದು ಸ್ವಯಂಚಾಲಿತವಾಗಿ ತನ್ನ ಗುರಿಯಾದ ವಾಹನವನ್ನು ಪತ್ತೆಹಚ್ಚಿ, ಸರಿಯಾದ ಸ್ಥಳವನ್ನೇ ಗುರಿಯಾಗಿಸಿ ದಾಳಿ ನಡೆಸುತ್ತದೆ. ನೆಸ್ಟರ್ ಒಂದೋ ಇದೇ ಮಾದರಿಯ ವ್ಯವಸ್ಥೆಯನ್ನು ಬಳಸಬಹುದು, ಅಥವಾ ಇಸ್ರೇಲ್ ಅಭಿವೃದ್ಧಿ ಪಡಿಸಿರುವ 'ಹ್ಯುಮನ್ ಇನ್ ದ ಲೂಪ್' ತಂತ್ರಜ್ಞಾನವನ್ನು ಬಳಸಬಹುದು. ಇಲ್ಲಿ ಅತ್ಯಧಿಕ ನಿಖರತೆಗಾಗಿ ಮಾನವ ನಿರ್ವಾಹಕ ಕೊನೆ ಕ್ಷಣದ ತನಕ ಅದನ್ನು ನಿರ್ದೇಶಿಸಬಹುದು.
ಈ ಕ್ಷಿಪಣಿ ಒಂದು ಪ್ರಾಕ್ಸಿಮಿಟಿ ಸೆನ್ಸರ್ ಅನ್ನೂ ಹೊಂದಿದೆ. ಅಂದರೆ, ಇದು ತಾನು ಗುರಿಗೆ ಅತ್ಯಂತ ಸನಿಹ ಬಂದಿರುವುದನ್ನು ಗಮನಿಸಬಲ್ಲದು. ಆ ಕ್ಷಣದಲ್ಲಿ, ಆರು ಚೂಪಾದ ಬ್ಲೇಡುಗಳು ಕ್ಷಿಪಣಿಯ ದೇಹದ ಒಳಗೆ ಅವಿತಿರುವ ಸ್ಥಳಗಳಿಂದ ಇದ್ದಕ್ಕಿದ್ದಂತೆ ಹೊರಬರುತ್ತವೆ.
ಅಮೆರಿಕದ ಸಿಐಎ ಮತ್ತು ಜೆಎಸ್ಒಸಿ (ಜಾಯಿಂಟ್ ಸ್ಪೆಷಲ್ ಆಪರೇಶನ್ಸ್ ಕಮಾಂಡ್) ಕಳೆದ ದಶಕದಲ್ಲಿ ಶತ್ರು ದೇಶಗಳ ಉನ್ನತ ನಾಯಕರನ್ನು ಹತ್ಯೆಗೈಯಲು ಎಂಕ್ಯು-9 ರೀಪರ್ ಡ್ರೋನ್‌ಗಳಲ್ಲಿ ಎಜಿಎಂ-114ಆರ್9ಎಕ್ಸ್ ಕ್ಷಿಪಣಿಯನ್ನು ಬಳಸಿವೆ. ಟರ್ಕಿ ಕ್ಷಿಪ್ರವಾಗಿ ತನ್ನ ಡ್ರೋನ್ ಸಾಮರ್ಥ್ಯಗಳನ್ನು ವೃದ್ಧಿಸುತ್ತಿದ್ದು, ಪಶ್ಚಿಮ ಏಷ್ಯಾದ ಉದ್ವಿಗ್ನತೆಗಳು ಕುದಿಬಿಂದುವಿಗೆ ತಲುಪಿರುವುದರಿಂದ, ನೆಸ್ಟರ್ ಸದ್ಯದಲ್ಲೇ ಅಂಕಾರಾದ ಪ್ರಮುಖ ಆಯ್ಕೆಯ ಆಯುಧವಾಗಬಹುದು. ಒಂದು ಮೋಟಾರ್ ಅಳವಡಿಸಿದರೆ, ಇದನ್ನು ಟಿ129 ಎಟಿಎಕೆ ಹೆಲಿಕಾಪ್ಟರ್ ಮೂಲಕವೂ ಬಳಸಲು ಸಾಧ್ಯವಿದ್ದು, ಟರ್ಕಿಯ ಬೆಳೆಯುತ್ತಿರುವ ರಕ್ಷಣಾ ಬತ್ತಳಿಕೆಗೆ ಇನ್ನಷ್ಟು ಶಕ್ತಿ ತುಂಬಲಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)