ಇಂದಿನ ಜಗತ್ತಿನಲ್ಲಿ ಇಂಧನ ಎಂಬುದು ಕೇವಲ ವಿದ್ಯುತ್ , ಕಚ್ಚಾ ತೈಲ , ಪೆಟ್ರೋಲ್ , ಡೀಸೆಲ್ , ಸೀಮೆಎಣ್ಣೆ ಎನ್ನುವ ಸೀಮಿತ ಡೆಫಿನಿಶನ್ ಆಗಿ ಉಳಿದಿಲ್ಲ. ಅದು ದೇಶದ ಆರ್ಥಿಕತೆ, ಕೈಗಾರಿಕೆ, ಸಾರಿಗೆ, ಕೃಷಿ ಮತ್ತು ಜನರ ದೈನಂದಿನ ಜೀವನವನ್ನು ನಿಯಂತ್ರಿಸುವ ಮಹಾನ್ ಶಕ್ತಿ. ಇಂತಹ ಪರಿಸ್ಥಿತಿಯಲ್ಲಿ ಇಂಧನದ ಕೊರತೆ ಅಥವಾ ಇಂಧನದ ಬೆಲೆಗಳಲ್ಲಿ ಅತಿಯಾದ ಏರಿಕೆ ಸಂಭವಿಸಿದಾಗ ಅದನ್ನು Energy Crisis ಎಂದು ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ರಾಜಕೀಯ ಸಂಘರ್ಷಗಳು, ಯುದ್ಧಗಳು, ಹವಾಮಾನ ಬದಲಾವಣೆ ಮತ್ತು ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗಳಿಂದ ಇಂಧನ ಸಂಕಷ್ಟವು ಜಗತ್ತಿನ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ಇದರ ಪರಿಣಾಮ ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಗಂಭೀರವಾಗಿ ಬೀಳುತ್ತಿದೆ.
ಅಮೇರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ಇರಾನಿನ ಮೇಲೆ ಯುದ್ಧ ಸಾರಿದ ದಿನದಿಂದ ಇಲ್ಲಿಯವರೆಗಿನ ಘಟನೆಗಳನ್ನು ಗಮನಿಸುತ್ತಾ ಬಂದರೆ , ಜಗತ್ತಿನ ಎಲ್ಲಾ ದೇಶಗಳೂ ಕೂಡ ಈ ಇಂಧನ ಕೊರತೆಯಿಂದ ಬಳಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಭಾರತ ಇಲ್ಲಿಯವರೆಗಿನ ಪರಿಸ್ಥಿತಿಯನ್ನು ಬಹಳಷ್ಟು ಚನ್ನಾಗಿ ನಿಭಾಯಿಸಿದೆ. ಭಾರತದ ಡಿಪ್ಲೊಮೆಸಿ ಇದಕ್ಕೆ ಕಾರಣ. ಇಸ್ರೇಲ್ ಮತ್ತು ಅಮೇರಿಕಾ ಜೊತೆಗಿನ ನಂಟು ಕೂಡ ಚನ್ನಾಗಿ ಇಟ್ಟು ಕೊಂಡು ಇರಾನಿನ ಜೊತೆಗೂ ಉತ್ತಮ ಬಾಂಧ್ಯವವನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ.
ಒಂದು ದೇಶಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ತೈಲ, ಅನಿಲ, ಕಲ್ಲಿದ್ದಲು ಅಥವಾ ವಿದ್ಯುತ್ ದೊರೆಯದ ಪರಿಸ್ಥಿತಿಯನ್ನು ಇಂಧನ ಸಂಕಷ್ಟ ಎಂದು ಕರೆಯಬಹುದು. ಇದು ಸಾಮಾನ್ಯವಾಗಿ ಏಕೆ ಉಂಟಾಗುತ್ತದೆ ಮತ್ತು ಇವತ್ತಿನ ದಿನದಲ್ಲಿ ಆ ರೀತಿ ಆಗಿದೆಯೇ , ಇಲ್ಲವಾದಲ್ಲಿ ನಿಜ ಕಾರಣವೇನು ಎನ್ನುವುದನ್ನು ತಿಳಿಯುವ ಪ್ರಯತ್ನವನ್ನು ಮಾಡೋಣ.
ಕಚ್ಚಾ ತೈಲದ ಉತ್ಪಾದನೆ ಕಡಿಮೆಯಾಗುವುದು: ಇಲ್ಲಿಯವರೆಗೆ ಈ ತೈಲವನ್ನು ಉತ್ಪಾದಿಸುವ ದೇಶಗಳು ಒಂದು ಒಕ್ಕೊಟವನ್ನು ಮಾಡಿಕೊಂಡಿದ್ದವು. ಅದಕ್ಕೆ ಒಪೆಕ್ ಎನ್ನಲಾಗುತ್ತದೆ. ಇತ್ತೀಚಿಗೆ uae ಈ ಒಕ್ಕೊಟದಿಂದ ಹೊರಬಂದಿರುವುದು ನಮಗೆಲ್ಲಾ ಗೊತ್ತಿದೆ. ಈ ಒಕ್ಕೊಟ ತೈಲ ಉತ್ಪಾದನೆಯ ಮೇಲೆ ನಿಯಂತ್ರಣ ಹೊಂದಿದೆ. ಅವು ಕಡಿಮೆ ಉತ್ಪಾದನೆಯನ್ನು ಮಾಡಿದರೆ ಅದು ಜಗತ್ತಿನ ಮೇಲೆ ಪರಿಣಾಮವನ್ನು ಬೀರುತ್ತದೆ. ೨೦೨೬ ರಲ್ಲಿ ಉತ್ಪಾದನೆ ಗಣನೀಯವಾಗಿ ಕುಸಿತವನ್ನು ಕಂಡಿದೆ. ಇದು ಅವರು ಪ್ರಜ್ಞಾಪೂರ್ವಕವಾಗಿ ಮಾಡಿದ್ದಲ್ಲ. ಉತ್ಪಾದನೆಯಾದ ತೈಲವನ್ನು ಕೊಂಡ ರಾಷ್ಟ್ರಗಳಿಗೆ ತಕ್ಷಣ ಕಳಿಸಬೇಕು. ಏಕೆಂದರೆ ಹೀಗೆ ಉತ್ಪಾದನೆಯಾದ ತೈಲವನ್ನು ಸಂಗ್ರಹಿಸಿಡಲು ಆಗುವುದಿಲ್ಲ. ಯುದ್ಧದ ಕಾರಣ ಹರ್ಮೊಜ್ ಜಲಸಂಧಿಯ ಮೂಲಕ ತೈಲ ಸಾಕಾಣಿಕೆಯಾಗುತ್ತಿಲ್ಲ. ಹೀಗಾಗಿ ಇವರು ಉತ್ಪಾದನೆಯನ್ನು ಕಡಿಮೆ ಮಾಡಿದ್ದಾರೆ.
ಯುದ್ಧ ಅಥವಾ ರಾಜಕೀಯ ಉದ್ವಿಗ್ನತೆ: ಯುದ್ಧ ಮತ್ತು ರಾಜಕೀಯ ಉದ್ವಿಗ್ನತೆ ಎರಡೂ ಇವತ್ತಿಗೆ ಹೆಚ್ಚಾಗಿದೆ. ಈ ಕಾರಣದಿಂದ ಜಗತ್ತು ಇವತ್ತಿಗೆ ತೈಲದ ಕೊರತೆಯನ್ನು ಎದುರಿಸುವಂತಾಗಿದೆ.
ಪ್ರಕೃತಿ ವಿಕೋಪಗಳು: ಸದ್ಯದ ಸಮಯದಲ್ಲಿ ಪ್ರಕೃತಿ ವಿಕೋಪವಿಲ್ಲ. ಆದರೆ ನಾವು ಟ್ರಂಪ್ ಮತ್ತು ಬೆಂಜಮಿನ್ ನೇತಾನ್ಯೂಹು ಅವರ ಪ್ರಕೋಪವನ್ನು ಎದರಿಸುತ್ತಿದ್ದೇವೆ. ಪುಟಾಣಿ ದೇಶ ,ಸಣ್ಣ ದೇಶ ಎಂದು ಉದಾಸೀನ ಮಾಡುವುದು ,ಅದನ್ನು ಕೇವಲವಾಗಿ ಕಾಣುವುದು ,ಎರಡು ದಿನದಲ್ಲಿ ಹೊಸಕಿ ಹಾಕಿಬಿಡುತ್ತೇವೆ ಎಂದು ಹುಂಬತನದಿಂದ ಯುದ್ಧ ಸಾರುವುದು ಅದೆಷ್ಟು ದೊಡ್ಡ ಪರಿಣಾಮವನ್ನು ಬಿರುತ್ತದೆ ಎನ್ನುವುದಕ್ಕೆ ನಾವೆಲ್ಲಾ ಸಾಕ್ಷಿಯಾಗುತ್ತಿದ್ದೇವೆ. ಗಮನಿಸಿ ರಷ್ಯಾ ಮತ್ತು ಚೀನಾ ದೇಶಗಳು ಇರಾನಿಗೆ ಬೇಕಾದ ತಂತ್ರಜ್ಞಾನದ ಸಹಾಯವನ್ನು ಮಾಡುತ್ತಿವೆ. ಇರಾನಿನ ಬಳಿ ಈಗಾಗಲೇ ಬೇಕಾದಷ್ಟು ಶಶಾಸ್ತ್ರಗಳು ಇವೆ. ಆದರೆ ಅವುಗಳನ್ನು ಎಲ್ಲಿ ಸಿಡಿಸಬೇಕು ಎನ್ನುವ ನಿಖರತೆ ಇಲ್ಲ. ಚೀನಾ ಇರಾನಿಗೆ ನಿಖರವಾದ ಲೊಕೇಶನ್ ತಿಳಿಸುವ ಮೂಲಕ ಸಹಾಯ ಮಾಡುತ್ತಿದೆ. ಹೀಗಾಗಿ ಈ ಯುದ್ಧ ನಿಲ್ಲುವ ಸಾಧ್ಯತೆ ಕಡಿಮೆ.
ಎನೆರ್ಜಿ ಬಳಕೆ ಹೆಚ್ಚಾಗುವುದು: ಕಳೆದ ಐವತ್ತು ವರ್ಷದಿಂದ ಎನೆರ್ಜಿ ಬಳಕೆ ಏರುಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಏಷ್ಯಾ ಖಂಡದಲ್ಲಿ ಚೀನಾ ಎನ್ನುವ ಉತ್ಪಾದಕ ರಾಷ್ಟ್ರದ ಮಹಾನ್ ಬೆಳವಣಿಗೆ . ಇವತ್ತಿಗೆ ಜಗತ್ತಿನ ಎನೆರ್ಜಿ ಬಳಕೆಯ ೨೭ ಪ್ರತಿಶತ ಚೀನಾ ಒಂದೇ ಬಳಸುತ್ತಿದೆ . ಇದರ ಜೊತೆಗೆ ಭಾರತ , ಇಂಡೋನೇಶಿಯಾ , ವಿಯೆಟ್ನಾಮ್ ದೇಶಗಳು ಕೂಡ ಚೀನಾಗೆ ಸ್ಪರ್ಧೆಗೆ ಬಿದ್ದವರಂತೆ ಬೆಳವಣಿಗೆಯ ಓಟವನ್ನು ಮುಂದುವರಿಸುತ್ತಿವೆ. ಆದರೆ ಇವತ್ತಿನ ಎನೆರ್ಜಿ ಕೊರತೆ ಇವತ್ತು ಹೆಚ್ಚು ಬಳಸುತ್ತಿದ್ದಾರೆ ಎನ್ನುವ ಕಾರಣದಿಂದ ಆಗಿಲ್ಲ.ಇಂದು AI ಡೇಟಾ ಸೆಂಟರ್‌ಗಳು, ಎಲೆಕ್ಟ್ರಿಕ್ ವಾಹನಗಳು, ಕೈಗಾರಿಕೆಗಳು ಮತ್ತು ನಗರೀಕರಣದಿಂದ ವಿದ್ಯುತ್ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಬೇಡಿಕೆ ಹೆಚ್ಚಾದರೂ ಉತ್ಪಾದನೆ ಅದೇ ಮಟ್ಟದಲ್ಲಿ ಹೆಚ್ಚಾಗದಿದ್ದರೆ ಸಂಕಷ್ಟ ಉಂಟಾಗುತ್ತದೆ.
ಇಂಧನ ಮೂಲಗಳ ಮೇಲಿನ ಅತಿಯಾದ ಅವಲಂಬನೆ: ಚರಿತ್ರೆಯನ್ನು ನಾವು ನೋಡಿದರೆ ಅಲ್ಲಿ ಕಾಣುವುದು ತೈಲದ ಮೇಲಿನ ಅವಲಂಬನೆ. ಅದರಲ್ಲೂ ಕೊಲ್ಲಿ ದೇಶಗಳ ಮೇಲಿನ ಅತಿಯಾದ ಅವಲಂಬನೆ. ಇದಕ್ಕೆ ಕಾರಣ ನಮ್ಮಲ್ಲಿ ತೈಲ ನಿಕ್ಷೇಪ ಬೇಕಾದಷ್ಟು ಪ್ರಮಾಣದಲ್ಲಿ ಇಲ್ಲದಿರುವುದು ಮತ್ತು ಪರ್ಯಾಯ ಎನೆರ್ಜಿ ಮೂಲವನ್ನು ನಾವು ಸಾಧಿಸದೆ ಇರುವುದು. ಈ ನಿಟ್ಟಿನಲ್ಲಿ ನೋಡಿದಾಗ ಇತ್ತೀಚಿನ ವರ್ಷಗಳಲ್ಲಿ ಭಾರತ ಒಂದಷ್ಟು ಪರ್ಯಾಯ ಮೂಲಗಳನ್ನು ಹುಡುಕಿ ಕೊಳ್ಳುತ್ತಿದೆ.
ಅಮೇರಿಕಾ ಅಧ್ಯಕ್ಷ ತನ್ನ ದೇಶದ 15/20 ಪ್ರಭಾವಿ ಸಂಸ್ಥೆಯ ಮುಖ್ಯಸ್ಥರನ್ನು ಕರೆದುಕೊಂಡು ಚೀನಾಗೆ ಹೋಗಿದ್ದಾರೆ. ಅವರಿಗೆ ಚೀನಾದ ಕುಮ್ಮಕ್ಕು ಇಲ್ಲದೆ ಇರಾನ್ ಹೆಚ್ಚು ಕಾಲ ಸೆಣೆಸಲು ಆಗುವುದಿಲ್ಲ ಎನ್ನುವುದು ಗೊತ್ತಿದೆ. ಚೀನಾದ ಗ್ರೋಥ್ ರೇಟ್ ಕೂಡ ಗಣನೀಯವಾಗಿ ಕುಸಿದಿದೆ. ಇಂತಹ ಸಮಯದಲ್ಲಿ ವ್ಯಾಪಾರ ವೃದ್ಧಿಯ ಮಾತುಗಳ ಮೂಲಕ ಚೀನಾವನ್ನು ಒಲಿಸಿಕೊಳ್ಳುವ ಪ್ರಯತ್ನ ಟ್ರಂಪ್ ಅವರದ್ದು ಎನ್ನುವುದು ಸ್ಪಷ್ಟ. ಅಲ್ಲಿನ ಪಲಿತಾಂಶವೇನೆ ಇದ್ದರೂ ತಕ್ಷಣಕ್ಕೆ ತೈಲದ ಬೆಳೆಗಳು ಏರುವುದು ತಪ್ಪಿಸಲಾಗುವುದಿಲ್ಲ. ತೈಲದ ಜಾಗತಿಕ ಬೆಲೆ ಏರಿದಾಗ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹೆಚ್ಚಾಗುತ್ತವೆ. ಇದರ ಪರಿಣಾಮ ಸಾರಿಗೆ ವೆಚ್ಚ ಹೆಚ್ಚಳವಾಗುತ್ತದೆ. ಲಾರಿ, ಬಸ್ ಮತ್ತು ರೈಲುಗಳ ವೆಚ್ಚ ಹೆಚ್ಚಿದಾಗ ಎಲ್ಲ ವಸ್ತುಗಳ ಬೆಲೆ ಕೂಡ ಏರುತ್ತದೆ.
ಭಾರತದಲ್ಲಿ ಏನಾಗಬಹುದು ಎನ್ನುವುದನ್ನು ನೋಡೋಣ.
ದರ ಏರಿಕೆ (Inflation)
ಇಂಧನ ಬೆಲೆ ಏರಿದಾಗ ಆಹಾರ ಪದಾರ್ಥಗಳು, ಗೃಹೋಪಯೋಗಿ ವಸ್ತುಗಳು ಮತ್ತು ನಿರ್ಮಾಣ ಸಾಮಗ್ರಿಗಳ ಬೆಲೆ ಕೂಡ ಏರುತ್ತದೆ. ಇದು ಸಾಮಾನ್ಯ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ.
ಕೈಗಾರಿಕೆಗಳ ಮೇಲೆ ಒತ್ತಡ
ಉಕ್ಕು, ಸಿಮೆಂಟ್, ರಾಸಾಯನಿಕ ಮತ್ತು ಉತ್ಪಾದನಾ ಕೈಗಾರಿಕೆಗಳಿಗೆ ಹೆಚ್ಚಿನ ವಿದ್ಯುತ್ ಮತ್ತು ಇಂಧನ ಅಗತ್ಯವಿರುತ್ತದೆ. ಇಂಧನದ ಬೆಲೆ ಏರಿದರೆ ಉತ್ಪಾದನಾ ವೆಚ್ಚ ಹೆಚ್ಚಾಗಿ ಕಂಪನಿಗಳ ಲಾಭ ಕಡಿಮೆಯಾಗುತ್ತದೆ.
ವಿದ್ಯುತ್ ಕೊರತೆ
ಭಾರತದಲ್ಲಿ ಹಲವಾರು ರಾಜ್ಯಗಳು ಇನ್ನೂ ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿವೆ. ಕಲ್ಲಿದ್ದಲು ಕೊರತೆ ಉಂಟಾದರೆ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ವಿದ್ಯುತ್ ಕಡಿತ ಮತ್ತು ಕೈಗಾರಿಕಾ ಉತ್ಪಾದನೆಯಲ್ಲಿ ವ್ಯತ್ಯಯ ಉಂಟಾಗಬಹುದು.
ರೂಪಾಯಿ ಮೌಲ್ಯದ ಮೇಲೆ ಪರಿಣಾಮ
ಭಾರತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಡಾಲರ್ ಬೇಡಿಕೆ ಹೆಚ್ಚುತ್ತದೆ. ಇದರಿಂದ ರೂಪಾಯಿ ಮೌಲ್ಯ ಕುಸಿಯುವ ಸಾಧ್ಯತೆ ಇದೆ. ಈಗಾಗಲೇ ಒಂದು ಡಾಲರಿಗೆ ೯೫ ರೂಪಾಯಿಗೂ ಮೀರಿದೆ. ರೂಪಾಯಿ ದಿನೇ ದಿನೇ ಹೊಸ ಕುಸಿತವನ್ನು ದಾಖಲಿಸುತ್ತಿದೆ. ಈ ಕಾರಣದಿಂದ ಭಾರತದ ವಿದೇಶಿ ವಿನಿಮಯ ಗಣನೀಯ ಕುಸಿತವನ್ನು ಕೂಡ ಕಾಣುತ್ತದೆ. ಮೂರು ತಿಂಗಳ ಹಿಂದೆ ೭೨೦ ಬಿಲಿಯನ್ ಡಾಲರ್ ಇದ್ದ ಫಾರಿನ್ ಎಕ್ಸ್ಚೇಂಜ್ ರಿಸೆರ್ವ್ ಇವತ್ತಿಗೆ ೬೮೦ ಬಿಲಿಯನ್ ಡಾಲರ್ ಆಗಿದೆ. ಈ ಕಾರಣದಿಂದ ಭಾರತ ಪ್ರಧಾನಿಯವರು ಚಿನ್ನ ಕೊಳ್ಳುವುದು ಬೇಡ , ಹೆಚ್ಚು ಓಡಾಡುವುದು ಬೇಡ , ಅಡುಗೆ ಎಣ್ಣೆಯನ್ನು ಕೂಡ ಕಡಿಮೆ ಮಾಡಿ ಎಂದಿರುವುದು. ನಿಮಗೆಲ್ಲಾ ಗೊತ್ತಿರಲಿ ಕಚ್ಚಾ ತೈಲ ಆಮದಿನ ಪ್ರಥಮ ಸ್ಥಾನದಲ್ಲಿ ಕುಳಿತಿದ್ದರೆ ಚಿನ್ನ ಮತ್ತು ಕುಕಿಂಗ್ ಆಯಿಲ್ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಹೀಗಾಗಿ ಇವುಗಳ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬೇಕಿದೆ.
ಷೇರು ಮಾರುಕಟ್ಟೆಯ ಮೇಲೆ ಪರಿಣಾಮ
ಇಂಧನ ಸಂಕಷ್ಟದ ಸಮಯದಲ್ಲಿ ಕೆಲವು ಕ್ಷೇತ್ರಗಳ ಷೇರುಗಳು ಏರಿಕೆಯಾಗುತ್ತದೆ . ತೈಲ ಮತ್ತು ಅನಿಲ ಕಂಪನಿಗಳು,ನವೀಕರಿಸಬಹುದಾದ ಇಂಧನ ಕಂಪನಿಗಳು, ರಕ್ಷಣಾ ಕ್ಷೇತ್ರ ಮತ್ತು ವಿದ್ಯುತ್ ಉತ್ಪಾದನಾ ಕಂಪನಿಗಳು ಈ ಸಮಯದ ಲಾಭವನ್ನು ಪಡೆದುಕೊಳ್ಳಲಿವೆ. ಆದರೆ ವಿಮಾನಯಾನ, ವಾಹನ ಮತ್ತು ರಾಸಾಯನಿಕ ಕ್ಷೇತ್ರಗಳು ಒತ್ತಡಕ್ಕೆ ಒಳಗಾಗಬಹುದು. ಮುಂದಿನ ಒಂದು ವರ್ಷದಲ್ಲಿ ನಾವು ಮಾರುಕಟ್ಟೆಯಲ್ಲಿ ಇನ್ನಷ್ಟು ಕುಸಿತವನ್ನು ಕಾಣುವ ಸಾಧ್ಯತೆಯಿದೆ.
ಒಂದು ನಾಣ್ಯಕ್ಕೆ ಎರಡು ಮುಖದಂತೆ ಪ್ರತಿ ಸವಾಲುಗಳು ಒಂದಷ್ಟು ಅವಕಾಶವನ್ನು ಕೂಡ ಹೊತ್ತುತರುತ್ತವೆ. ಭಾರತದಲ್ಲಿ ಕೆಳಗಿನ ಪರ್ಯಾಯ ಎನರ್ಜಿ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿವೆ. ಅವು ಇನ್ನಷ್ಟು ವೇಗವನ್ನು ಪಡೆದುಕೊಳ್ಳಲಿವೆ.
ಸೌರ ಮತ್ತು ಗಾಳಿ ಇಂಧನ: ಭಾರತ ಸೌರಶಕ್ತಿ ಉತ್ಪಾದನೆಯಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗುವ ಸಾಮರ್ಥ್ಯ ಹೊಂದಿದೆ. ರಾಜಸ್ಥಾನ, ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸೌರಶಕ್ತಿ ಯೋಜನೆಗಳು ವೇಗವಾಗಿ ಬೆಳೆಯುತ್ತಿವೆ.
ಎಲೆಕ್ಟ್ರಿಕ್ ವಾಹನಗಳು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ EV ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಇದು ಭವಿಷ್ಯದ ಪ್ರಮುಖ ಕ್ಷೇತ್ರವಾಗಲಿದೆ.
ಹಸಿರು ಹೈಡ್ರೋಜನ್: ಭಾರತ ಸರ್ಕಾರ “Green Hydrogen Mission” ಮೂಲಕ ಪರ್ಯಾಯ ಇಂಧನ ಅಭಿವೃದ್ಧಿಗೆ ಒತ್ತು ನೀಡುತ್ತಿದೆ.
ಆತ್ಮನಿರ್ಭರ ಇಂಧನ ವ್ಯವಸ್ಥೆ: ವಿದೇಶಿ ಅವಲಂಬನೆ ಕಡಿಮೆ ಮಾಡಲು ಭಾರತವು ನವೀಕರಿಸಬಹುದಾದ ಇಂಧನ, ಅಣುಶಕ್ತಿ ಮತ್ತು ಸ್ಥಳೀಯ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ.ತೀರಾ ಇತ್ತೀಚಿಗೆ ಅಣು ಶಕ್ತಿಯನ್ನು ವಿದ್ಯುತ್ ಉತ್ಪಾದನೆಗೂ ಬಳಸುವ ಸಾಮರ್ಥ್ಯವನ್ನು ಭಾರತ ಪಡೆದುಕೊಂಡಿದೆ. 2025ರಿಂದ 7 ಅಣುವಿದ್ಯುತ್ ಘಟಕಗಳನ್ನು ಸ್ಥಾಪಿಸಿ ಭಾರತದ 3 ಪ್ರತಿಶತ ವಿದ್ಯುತ್ ಉತ್ಪಾದನೆ ಮಾಡುತ್ತಿದೆ.
ಕೊನೆಮಾತು: ವರ್ಷದಲ್ಲಿ ಇವತ್ತಿನ ಯುದ್ಧ , ಸಂಕಷ್ಟ ಮುಗಿಯಬಹುದು. ಆದರೆ ಮುಂದೆ ಈ ರೀತಿ ಆಗುವುದಿಲ್ಲ ಎನ್ನಲಾಗುವುದಿಲ್ಲ. ಹೀಗಾಗಿ ಎನರ್ಜಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಭಾರತದ ಗುರಿಯಾಗಬೇಕು. ಇದು ಬಹಳ ಕಷ್ಟವೇನೂ ಅಲ್ಲ. ನವೀಕರಿಸಬಹುದಾದ ಇಂಧನದ ಬಳಕೆ ಹೆಚ್ಚಿಸುವುದು, ವಿದ್ಯುತ್ ಉಳಿಸುವ ಅಭ್ಯಾಸ ಬೆಳೆಸುವುದು,ಸಾರ್ವಜನಿಕ ಸಾರಿಗೆಗೆ ಉತ್ತೇಜನ ನೀಡುವುದು,ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸುವುದು,ಗ್ರಾಮೀಣ ಪ್ರದೇಶಗಳಲ್ಲಿ ಸೌರಶಕ್ತಿ ಬಳಕೆ ವಿಸ್ತರಿಸುವುದು,ಇಂಧನ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಹೂಡಿಕೆ ಮಾಡಿದರೆ ಮುಂಬರುವ ವರ್ಷಗಲ್ಲಿ ಅವಲಂಬನೆ ತಪ್ಪುತ್ತದೆ. ಭವಿಷ್ಯದ ಭಾರತವು ಇಂಧನ ಸ್ವಾವಲಂಬಿ ರಾಷ್ಟ್ರವಾಗಬೇಕಾದರೆ ಇಂದಿನಿಂದಲೇ ಶಾಶ್ವತ ಮತ್ತು ಪರಿಸರ ಸ್ನೇಹಿ ಇಂಧನ ವ್ಯವಸ್ಥೆಯತ್ತ ಹೆಜ್ಜೆ ಇಡದೆ ಅನ್ಯ ಮಾರ್ಗವಿಲ್ಲ.

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com