ಹ್ಯಾಂಟ ವೈರಸ್ (ಸಾಂಕೇತಿಕ ಚಿತ್ರ) online desk
ಅಂಕಣಗಳು

ಹಂಟಾ ವೈರಸ್ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ (ಕುಶಲವೇ ಕ್ಷೇಮವೇ)

ಈವರೆಗೆ ನಮ್ಮ ದೇಶದಲ್ಲಿ ಹಂಟಾ ವೈರಸ್ ಪ್ರಕರಣಗಳು ಯಾವುದೂ ವರದಿಯಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸಾರ್ವಜನಿಕರಿಗೆ ಇದರಿಂದ ಇರುವ ಅಪಾಯ ತೀರಾ ಕಡಿಮೆ.

ಕೋವಿಡ್ ಮಹಾಮಾರಿಯ ನಂತರ ಜಗತ್ತಿನಾದ್ಯಂತ ಯಾವುದೇ ಹೊಸ ವೈರಸ್ ಸುದ್ದಿಯೇ ಬಂದರೂ ಜನರಲ್ಲಿ ಸಹಜವಾಗಿಯೇ ಆತಂಕ ಮೂಡುತ್ತದೆ. ಇತ್ತೀಚೆಗೆ ಯೂರೋಪ್ ಖಂಡದ ಸ್ಪೇನ್ ದೇಶದಲ್ಲಿ ಐಷಾರಾಮಿ ಪ್ರವಾಸಿ ಹಡಗು ‘ಎಂವಿ ಹೊಂಡಿಯಸ್’ನಲ್ಲಿ ಹಂಟಾ ವೈರಸ್ ಸೋಂಕಿನ ಶಂಕೆ ಕಾಣಿಸಿಕೊಂಡಿರುವ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

ಇದರೊಂದಿಗೆ ಇಬ್ಬರು ಭಾರತೀಯ ಸಿಬ್ಬಂದಿಯನ್ನು ನೆದರ್ಲ್ಯಾಂಡ್ಸ್ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತ್ಯೇಕವಾಗಿ ಇರಿಸಲಾಗಿದೆ. ಈ ಸುದ್ದಿ ಹೊರಬಂದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಯ ಮತ್ತು ಗೊಂದಲ ಎರಡೂ ಹೆಚ್ಚಿದವು. ಆದರೆ ಸಾರ್ವಜನಿಕರು ಅತಿಯಾಗಿ ಗಾಬರಿಪಡುವ ಅಗತ್ಯವಿಲ್ಲ. ಈ ಘಟನೆ ಹೊಸ ವೈರಸ್ ಭೀತಿಗಿಂತಲೂ, ಜಾಗತಿಕ ಸಂಚಾರ ಮತ್ತು ಪರಿಸರ ಬದಲಾವಣೆಗಳ ನಡುವೆ ಸೋಂಕುಗಳ ಬಗ್ಗೆ ಎಚ್ಚರಿಕೆಯ ಅಗತ್ಯವನ್ನು ಮತ್ತೆ ನೆನಪಿಸಿದೆ.

ಈವರೆಗೆ ನಮ್ಮ ದೇಶದಲ್ಲಿ ಹಂಟಾ ವೈರಸ್ ಪ್ರಕರಣಗಳು ಯಾವುದೂ ವರದಿಯಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸಾರ್ವಜನಿಕರಿಗೆ ಇದರಿಂದ ಇರುವ ಅಪಾಯ ತೀರಾ ಕಡಿಮೆ. ಹಾಗಾಗಿ ಆತಂಕಪಡುವ ಅಗತ್ಯವಿಲ್ಲ, ಕೇವಲ ಜಾಗೃತಿ ಮುಖ್ಯವಾಗಿದೆ.

ಹಂಟಾ ವೈರಸ್ ಪತ್ತೆಯಾಗಿದ್ದು ಎಲ್ಲಿ?

ವಿಶ್ವದ ಅತ್ಯಂತ ಮೊದಲ ಹಂಟಾ ವೈರಸ್ಸನ್ನು ಪ್ರಸ್ತುತ ಉತ್ತರ ಮತ್ತು ದಕ್ಷಿಣ ಕೊರಿಯಾದ ಗಡಿ ಪ್ರದೇಶದಲ್ಲಿ ಹರಿಯುವ ಹಂಟನ್ ನದಿಯ ಬಳಿ ದಕ್ಷಿಣ ಕೊರಿಯಾ ದೇಶದಲ್ಲಿ ಪತ್ತೆಹಚ್ಚಲಾಯಿತು. ಆದ್ದರಿಂದ ಇದನ್ನು ಹಂಟಾ ವೈರಸ್ ಎಂಬ ಹೆಸರು ಬಂದಿತು. ಕಳೆದ ಶತಮಾನದ ಐವತ್ತರ ದಶಕದಲ್ಲಿಯೇ ಸೈನಿಕರು ಆ ದೇಶದಲ್ಲಿ ಈ ವೈರಾಸ್ಸಿಗೆ ಗುರಿಯಾದರು. ಕೊರಿಯನ್ ವೈರಸ್ ಶಾಸ್ತ್ರಜ್ಞ ಹೊ ವಾಂಗ್ ಲೀ ಈ ವೈರಾಣುವನ್ನು ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಪ್ರತ್ಯೇಕಿಸಿ ಹಂಟಾ ವೈರಸ್ ಎಂಬ ಹೆಸರು ನೀಡಿದರು.

ಹಂಟಾ ವೈರಸ್ ಎಂದರೇನು?

ಹಂಟಾ ವೈರಸ್ ಎನ್ನುವುದು ಮುಖ್ಯವಾಗಿ ಇಲಿಗಳು ಮತ್ತು ಹೆಗ್ಗಣಗಳಂತಹ ದಂಷ್ಟ್ರಕ ಪ್ರಾಣಿಗಳ ಮೂಲಕ ಹರಡುವ ಒಂದು ಅಪರೂಪದ ವೈರಸ್ ಸೋಂಕು. ಸಾಮಾನ್ಯವಾಗಿ ಈ ವೈರಸ್ ಪ್ರಾಣಿಗಳ ದೇಹದಲ್ಲೇ ಇರುತ್ತದೆ. ಅವುಗಳ ಮಲ, ಮೂತ್ರ ಅಥವಾ ಲಾಲಾರಸದ ಸಂಪರ್ಕಕ್ಕೆ ಮನುಷ್ಯರು ಬಂದಾಗ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಹಲವಾರು ಬಾರಿ ಇಲಿಗಳ ಮಲಮೂತ್ರ ಒಣಗಿ ಧೂಳಿನ ರೂಪದಲ್ಲಿ ಗಾಳಿಯಲ್ಲಿ ಹರಡಿದಾಗ ಅದನ್ನು ಉಸಿರಾಟದ ಮೂಲಕ ಒಳಗೆಳೆದರೂ ಸೋಂಕು ತಗುಲಬಹುದು. ಹೀಗಾಗಿ ಗೋದಾಮುಗಳು, ಹಳೆಯ ಕಟ್ಟಡಗಳು, ಅಸ್ವಚ್ಛ ಪ್ರದೇಶಗಳು ಅಥವಾ ಇಲಿಗಳ ಕಾಟ ಹೆಚ್ಚಿರುವ ಸ್ಥಳಗಳಲ್ಲಿ ಹೆಚ್ಚು ಜಾಗ್ರತೆ ಅಗತ್ಯವಾಗುತ್ತದೆ.

ʼಎಂವಿ ಹೊಂಡಿಯಸ್ʼ ಹಡಗಿನಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ‘ಆಂಡಿಸ್’ತಳಿಯ ಹಂಟಾ ವೈರಸ್ ವಿಶೇಷ ಗಮನ ಸೆಳೆದಿದೆ. ಏಕೆಂದರೆ ಸಾಮಾನ್ಯ ಹಂಟಾವೈರಸ್‌ಗಳು ಮನುಷ್ಯರಿಂದ ಮನುಷ್ಯರಿಗೆ ಸುಲಭವಾಗಿ ಹರಡುವುದಿಲ್ಲ. ಆದರೆ ʼಆಂಡಿಸ್ʼ ತಳಿ ಮಾತ್ರ ಅಪರೂಪವಾಗಿ ಮನುಷ್ಯರಿಂದ ಮತ್ತೊಬ್ಬರಿಗೆ ಹರಡುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದೇ ಕಾರಣಕ್ಕೆ ಈ ಪ್ರಕರಣವನ್ನು ಆರೋಗ್ಯ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿವೆ. ಆದರೂ ಇದು ಕೋವಿಡ್‌ನಂತೆ ವೇಗವಾಗಿ ಜಗತ್ತಿನಾದ್ಯಂತ ಹರಡುವ ಸೋಂಕು ಅಲ್ಲ ಎಂಬುದನ್ನು ತಜ್ಞರು ಒತ್ತಿ ಹೇಳುತ್ತಿದ್ದಾರೆ.

ಕೋವಿಡ್ ವೈರಸ್ ಮತ್ತು ಹಂಟಾ ವೈರಸ್ ನಡುವೆ ವ್ಯತ್ಯಾಸಗಳು

ಕೋವಿಡ್ ವೈರಸ್ ಮತ್ತು ಹಂಟಾ ವೈರಸ್ ನಡುವೆ ಮಹತ್ವದ ವ್ಯತ್ಯಾಸಗಳಿವೆ. ಕೋವಿಡ್ ಮುಖ್ಯವಾಗಿ ಗಾಳಿಯ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಆದರೆ ಹಂಟಾ ವೈರಸ್ ಬಹುತೇಕ ಸಂದರ್ಭಗಳಲ್ಲಿ ದಂಷ್ಟ್ರಕ ಪ್ರಾಣಿಗಳ ಸಂಪರ್ಕದಿಂದ ಮಾತ್ರ ಹರಡುತ್ತದೆ. ಕೋವಿಡ್ ಸೋಂಕು ವಿಶ್ವದ ಕೋಟ್ಯಂತರ ಜನರಿಗೆ ತಗುಲಿದ್ದರೆ, ಹಂಟಾವೈರಸ್ ಪ್ರಕರಣಗಳು ಅಪರೂಪದಲ್ಲೇ ಕಾಣಿಸಿಕೊಳ್ಳುತ್ತವೆ. ಆದರೆ ಹಂಟಾ ವೈರಸ್ ತಗುಲಿದ ಕೆಲವರಲ್ಲಿ ಗಂಭೀರ ಉಸಿರಾಟದ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.

ಹಂಟಾ ವೈರಸ್ ಲಕ್ಷಣಗಳು

ಈ ಸೋಂಕಿನ ಲಕ್ಷಣಗಳು ಮೊದಲಿಗೆ ಸಾಮಾನ್ಯ ಜ್ವರದಂತೆ ಕಾಣಬಹುದು. ಜ್ವರ, ತಲೆನೋವು, ಸ್ನಾಯು ನೋವು, ಸುಸ್ತು ಮತ್ತು ವಾಂತಿ ಕಾಣಿಸಿಕೊಳ್ಳಬಹುದು. ಕೆಲವು ಪ್ರಕರಣಗಳಲ್ಲಿ ನಂತರ ಉಸಿರಾಟದ ತೊಂದರೆ ಗಂಭೀರವಾಗಬಹುದು. ಹೀಗಾಗಿ ಸೋಂಕು ಬೇಗ ಪತ್ತೆಯಾಗುವುದು ಬಹಳ ಮುಖ್ಯ. ಸದ್ಯಕ್ಕೆ ಹಂಟಾ ವೈರಸ್‌ಗೆ ವಿಶೇಷ ಔಷಧಿ ಅಥವಾ ಲಸಿಕೆ ಲಭ್ಯವಿಲ್ಲ. ಆದ್ದರಿಂದ ಚಿಕಿತ್ಸೆ ಮುಖ್ಯವಾಗಿ ರೋಗಿಯ ಲಕ್ಷಣಗಳನ್ನು ನಿಯಂತ್ರಿಸುವುದರ ಮೇಲೆ ಅವಲಂಬಿತವಾಗಿದೆ.

ಹಡಗಿನಲ್ಲಿ ಇದ್ದ ಇಬ್ಬರು ಭಾರತೀಯ ಸಿಬ್ಬಂದಿಯಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಅವರನ್ನು ಕೇವಲ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತ್ಯೇಕವಾಗಿ ಇರಿಸಲಾಗಿದೆ. ಇದು ಸೋಂಕು ಹರಡುವುದನ್ನು ತಡೆಯುವ ಸಾಮಾನ್ಯ ಆರೋಗ್ಯ ಕ್ರಮವಾಗಿದ್ದು, ಸಾರ್ವಜನಿಕರು ಇದರಿಂದ ಅತಿಯಾದ ಭಯಪಡಬೇಕಾದ ಪರಿಸ್ಥಿತಿ ಇಲ್ಲ. ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ಕೂಡ ಈ ಬೆಳವಣಿಗೆಯನ್ನು ನಿಗಾದಲ್ಲಿಟ್ಟುಕೊಂಡಿದೆ.

ಕೊರೊನಾ ವೈರಸ್ ಸಾಂಕ್ರಾಮಿಕ ಎಂದು ತಿಳಿದಾಗ ತಜ್ಞರು ಅದಕ್ಕೆ ಲಸಿಕೆ ಕಂಡುಹಿಡಿಯಲು ಮುಂದಾದರು. ಆದರೆ ಹಂಟಾ ವೈರಸ್‌ಗೆ ಈವರೆಗೂ ಯಾವುದೇ ಚಿಕಿತ್ಸೆ ಇಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಕೊರೊನಾ ವೈರಸ್ ಮತ್ತು ಹಂಟಾ ವೈರಸ್ ಪರಸ್ಪರ ಬಹಳ ಭಿನ್ನವಾಗಿವೆ. ಅದಕ್ಕೂ ಮುಖ್ಯವಾಗಿ ಹಂಟಾದಿಂದ ಕೋವಿಡ್ ತರಹದ ಸಾಂಕ್ರಾಮಿಕ ರೋಗ ಉಂಟಾಗದು.

ಎಚ್ಚರಿಕೆ ಈಗಲೂ ಅಗತ್ಯ

ಕೋವಿಡ್ ಮಹಾಮಾರಿಯ ನಂತರ ಜಗತ್ತು ಆರೋಗ್ಯದ ವಿಷಯದಲ್ಲಿ ಹೆಚ್ಚು ಎಚ್ಚರಿಕೆಯಿಂದಿರಲು ಕಲಿತಿದೆ. ಇದೇ ಎಚ್ಚರಿಕೆ ಈಗಲೂ ಅಗತ್ಯವಾಗಿದೆ. ಯಾವುದೇ ವೈರಸ್ ಬಗ್ಗೆ ಅತಿಯಾದ ಭಯ ಅಥವಾ ಸುಳ್ಳು ಮಾಹಿತಿಗಿಂತ, ಸರಿಯಾದ ವೈಜ್ಞಾನಿಕ ಅರಿವು ಮುಖ್ಯ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಇಲಿಗಳ ಕಾಟ ತಡೆಯುವುದು, ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವುದು ಮತ್ತು ಆರೋಗ್ಯ ಸಮಸ್ಯೆಗಳು ಕಂಡುಬAದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಮುನ್ನೆಚ್ಚರಿಕೆಗಳಾಗಿವೆ.

ಜಾಗತಿಕ ಸಂಚಾರ ಮತ್ತು ಪ್ರವಾಸೋದ್ಯಮ ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ ಇಂತಹ ಸೋಂಕುಗಳು ಕೆಲವೊಮ್ಮೆ ಕಾಣಿಸಿಕೊಳ್ಳುವುದು ಅಸಾಮಾನ್ಯವಲ್ಲ. ಆದರೆ ಪ್ರತಿಯೊಂದು ಹೊಸ ವೈರಸ್ ಸುದ್ದಿಯನ್ನೂ ಮಹಾಮಾರಿ ಎಂದು ಭಾವಿಸುವ ಅಗತ್ಯವಿಲ್ಲ. ಎಚ್ಚರಿಕೆಯ ಜೊತೆಗೆ ಸಮತೋಲನದ ಮನಸ್ಥಿತಿ ಕೂಡ ಇಂದಿನ ಸಮಾಜಕ್ಕೆ ಅತ್ಯಂತ ಮುಖ್ಯವಾಗಿದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕದಲ್ಲಿ ಜೂನ್ 20 ರಿಂದ SIR ಪ್ರಾರಂಭ: ಅಕ್ಟೋಬರ್ 7ಕ್ಕೆ ಅಂತಿಮ ಪಟ್ಟಿ ಪ್ರಕಟ! ಹೇಗೆ ಮಾಡಲಾಗುತ್ತದೆ?

NEET-UG 2026 ಪೇಪರ್ ಲೀಕ್ ಕಿಂಗ್ ಪಿನ್, ಪುಣೆಯ ಕೆಮಿಸ್ಟ್ರಿ'ಲೆಕ್ಚರರ್' ಬಂಧಿಸಿದ ಸಿಬಿಐ!

ಭೋಜಶಾಲಾ ಸರಸ್ವತಿ ದೇವಸ್ಥಾನಕ್ಕೆ ಸೇರಿದ್ದು; ಮಸೀದಿಗೆ ಪರ್ಯಾಯ ಭೂಮಿ: ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು

ಪೆಟ್ರೋಲ್ ಬೆಲೆ ಏರಿಕೆ ಸಂತೋಷದ ವಿಚಾರ, ಮೋದಿ ಏನೇ ಮಾಡಿದ್ರು ಅಂಧ ಭಕ್ತರು ಖುಷಿ ಪಡುತ್ತಾರೆ: ಸಚಿವ ಎಂ.ಸಿ.ಸುಧಾಕರ್

ಇರಾನ್-ಅಮೆರಿಕ ಸಂಘರ್ಷಕ್ಕೆ ಭಾರತದ ಮಧ್ಯಸ್ಥಿಕೆಯೇ ಪರಿಹಾರ: ರಷ್ಯಾ ವಿಶ್ವಾಸ

SCROLL FOR NEXT