ಅವತ್ತು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಕುರಿತು ಅವರ ಆಪ್ತರು, ಹಿತೈಷಿಗಳು ಒಂದು ಪುಸ್ತಕ ಹೊರತಂದರು. ಆ ಪುಸ್ತಕಕ್ಕೆ ಅವರಿಟ್ಟ ಹೆಸರು ‘ಇಟ್ಟ ಗುರಿ-ದಿಟ್ಟ ಹೆಜ್ಜೆ’. ಸಾಹಿತಿಗಳು, ಚಿಂತಕರು, ಪತ್ರಕರ್ತರ ದೃಷ್ಟಿಕೋನದಲ್ಲಿ ಸಿದ್ದರಾಮಯ್ಯನವರ ವ್ಯಕ್ತಿತ್ವ, ಜನಪರ ಯೋಜನೆಗಳ ಕುರಿತು ಇಲ್ಲಿ ಬರಹವಿತ್ತು. ಆಗಿನ ಸರಕಾರದ ಎರಡು ವರ್ಷಗಳ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಎರಡನೇ ಅವಧಿಯಲ್ಲಿ ಸಿದ್ದರಾಮಯ್ಯ ಸರಕಾರಕ್ಕೆ ಈಗ ಭರ್ತಿ ಮೂರು ವರ್ಷಗಳು. ಅವರ ಸರಕಾರದ ಗುರಿ ಮತ್ತು ಹೆಜ್ಜೆಗಳ ಬಗ್ಗೆ ಮೊದಲ ಅವಧಿಯಲ್ಲಿದ್ದ ಅಭಿಪ್ರಾಯ ಮತದಾರರಲ್ಲಿ ಈಗಲೂ ಹಾಗೆಯೇ ಇದೆಯೇ? ಉತ್ತರ ನಕಾರಾತ್ಮಕ.
ಏಕೆ ಹೀಗಾಯಿತು? ಎಲ್ಲರಿಗಿಂತ ಚೆನ್ನಾಗಿ ಸಿದ್ದರಾಮಯ್ಯ ಅವರೇ ಬಲ್ಲರು. ವಿಧಾನಸಭೆಗೆ 2023ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ದೊರೆತಿದ್ದು ಸ್ಪಷ್ಟ ಬಹುಮತ. ಆದರೆ, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಕಗ್ಗಂಟಾಗಿತ್ತು. ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ಕಸರತ್ತು ನಡೆದು ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಕೆ ಎಂಬ ಸೂತ್ರ ಸಿದ್ದವಾಯಿತು. ಅಷ್ಟೊತ್ತಿಗೆ ಹೈಕಮಾಂಡ್ ಹೈರಾಣಾಗಿತ್ತು. ಮೊನ್ನೆ ಕೇರಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲೂ ಹೈಕಮಾಂಡ್ ಮಣಿದಿದ್ದನ್ನು ಕಾಣಬಹುದು. ಕೇರಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ವಿ.ಡಿ.ಸತೀಶನ್ ಆಯ್ಕೆ ಆಗಿದ್ದು ಹೈಕಮಾಂಡ್ ಕೃಪಾಕಟಾಕ್ಷದಿಂದ ಅಲ್ಲ, ಕಾರ್ಯಕರ್ತರ ಒತ್ತಾಸೆಯಿಂದ ಎಂಬುದನ್ನು ಮರೆಯಬಾರದು.
ಯಾವ ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಲ್ಲಿ ಪ್ರಾರಂಭದಲ್ಲಿ ಸಚಿವ ಸಂಪುಟಕ್ಕೆ ತೆಗೆದುಕೊಂಡಿರಲಿಲ್ಲವೋ ಅದೇ ಶಿವಕುಮಾರ್ ಎರಡನೇ ಅವಧಿಯಲ್ಲಿ ಉಪ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದರು. ತಮ್ಮ ನಾಯಕತ್ವವನ್ನು ಪ್ರತಿಪಾದಿಸಿದ್ದರು. ಸಿದ್ದರಾಮಯ್ಯ ಅವರಿಗೆ ಇವತ್ತು ಅವರದ್ದೇ ಸಡ್ಡು. ಮುಖ್ಯಮಂತ್ರಿ ಗಾದಿ ಬಿಟ್ಟುಕೊಡಬೇಕೆಂಬ ಹಟ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ಉಡದ ಪಟ್ಟು. ಮಾತು ಕೊಟ್ಟಿದ್ದು ನಿಜವೇ? ಸಾಕ್ಷಿ ಯಾರು? ಯಾರೂ ಬಾಯಿ ಬಿಡುತ್ತಿಲ್ಲ. ಹೈಕಮಾಂಡ್ ಮೌನವಹಿಸಿದಷ್ಟು ಪಕ್ಷಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಸಿದ್ದರಾಮಯ್ಯ ಮೊದಲು ಹೈಕಮಾಂಡ್ ಮಟ್ಟದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಯೇ ಆಗಿಲ್ಲ. ತಾವು ಐದು ವರ್ಷಗಳ ಕಾಲ ಮುಖ್ಯಮಂತ್ರಿ. 2028ಕ್ಕೂ ತಮ್ಮ ನಾಯಕತ್ವದಲ್ಲೇ ಚುನಾವಣೆ ಅಂದರು. ಅಷ್ಟಕ್ಕೇ ಸುಮ್ಮನಾಗಿರಲಿಲ್ಲ. ಶಿವಕುಮಾರ್ ಅವರಿಗೆ ಬೆರಳೆಣಿಕೆಯಷ್ಟು ಶಾಸಕರ ಬೆಂಬಲ ಮಾತ್ರ ಇದೆ. ಮುಖ್ಯಮಂತ್ರಿಯಾಗಲು ಶಾಸಕರ ಬೆಂಬಲ ಹಾಗೂ ಹೈಕಮಾಂಡ್ ಆಶೀರ್ವಾದ ಎರಡೂ ಬೇಕು ಎಂದಿದ್ದರು. ನಂತರ ಹೈಕಮಾಂಡ್ ಒಪ್ಪಿದರೆ ತಾವೇ ಐದು ವರ್ಷ ಮುಖ್ಯಮಂತ್ರಿ ಅಂದರು. ಅನಂತರ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಹೈಕಮಾಂಡ್ ಹೇಳಿದಾಗ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎನ್ನುತ್ತಾ ಮೆದುವಾದರು. ಹೀಗೆನ್ನುತ್ತಲೇ ಚದುರಂಗದ ಆಟದಲ್ಲಿ ಎಚ್ಚರಿಕೆಯಿಂದಲೇ ಕಾಯಿಗಳನ್ನು ನಡೆಸುತ್ತಿದ್ದಾರೆ. ತಮ್ಮ ಕುರ್ಚಿ ಅಲುಗಾಡುತ್ತಿದೆ ಎನ್ನುವಾಗ ದಲಿತ ಸಿಎಂ ಕೂಗು ಅವರ ಆಪ್ತರಿಂದಲೇ ಏಳುತ್ತದೆ. ಇದು ಅಧಿಕಾರ ಹಸ್ತಾಂತರದ ಚರ್ಚೆಯ ದಿಕ್ಕು ತಪ್ಪಿಸುವ ಆಟವಲ್ಲವೇ?
ಈ ಮಧ್ಯೆ ತಮ್ಮ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ನಾಯಕತ್ವದ ಬದಲಾವಣೆ ವಿಚಾರದ ಕೆಲವು ಹೇಳಿಕೆಗಳು ಸಿದ್ದರಾಮಯ್ಯ ಅವರಿಗೆ ಮುಜುಗರ ತಂದಿದ್ದು ಉಂಟು. ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆಯ ಬಿಕ್ಕಟ್ಟು ಎಷ್ಟೇ ಚರ್ಚೆ ಮಾಡಿದರೂ ಕೊನೆಗೆ ಬಂದು ನಿಲ್ಲುವುದು ದೆಹಲಿಯ ಹೈಕಮಾಂಡ್ ಅಂಗಳದಲ್ಲೇ. ಇದು ಅಲ್ಲೇ ತೀರ್ಮಾನ ಆಗಬೇಕು. ಬ್ರೇಕ್ ಫಾಸ್ಟ್ ಮೀಟಿಂಗ್, ಭೋಜನದ ಸಭೆಯಾದರೂ ಸಮಸ್ಯೆ ಬಗೆಹರಿಯುವುದಿಲ್ಲ.
ಸಿದ್ದರಾಮಯ್ಯ ಅವರದು ಬಹುಮತದ ಸರಕಾರ. ಆದರೆ, ಸಮ್ಮಿಶ್ರ ಸರಕಾರದ ಗುಣ. ಪಕ್ಷದಲ್ಲೇ ಬಣ ರಾಜಕಾರಣ. ಎರಡು ಅಧಿಕಾರ ಕೇಂದ್ರ. ಈ ಸರಕಾರಕ್ಕೆ ಎರಡೂವರೆ ವರ್ಷಗಳು ತುಂಬುವ ಸಮಯ ಬಂದಾಗ ಮೊದಲು ನವೆಂಬರ್ ಕ್ರಾಂತಿ ಅಂದರು, ಇದಾಗಲಿಲ್ಲ. ಸುಮಾರು ಎಂಟು ತಿಂಗಳಿನಿಂದ ನಾಯಕತ್ವದ್ದೇ ಗೊಂದಲ. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬೆಂಬಲಿಗ ಶಾಸಕರ ಬಣಗಳ ಮಧ್ಯೆ ತಂತ್ರ, ಪ್ರತಿತಂತ್ರಗಳದ್ದೇ ಪಟ್ಟು. ಮುಖ್ಯಮಂತ್ರಿ ಪಟ್ಟವನ್ನು ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕೆಂಬುದು ಅವರ ಬೆಂಬಲಿಗ ಶಾಸಕರ ಒತ್ತಡ. ಸಚಿವ ಸಂಪುಟವನ್ನು ಪುನರ್ ರಚಿಸಲು ಅವಕಾಶ ನೀಡಬೇಕು ಎಂಬುದು ಸಿದ್ದರಾಮಯ್ಯ ಬಣದ ಸಚಿವರು, ಶಾಸಕರ ಲಾಬಿ. ದೆಹಲಿಗೆ ಯಾತ್ರೆ. ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಚರ್ಚೆ ಒಂದು ರೀತಿ ಚರ್ವಿತ ಚರ್ವಣ. ಇದರಿಂದ ಆಡಳಿತ ಯಂತ್ರದ ಮೇಲೆ ದುಷ್ಪರಿಣಾಮ. ಈ ಹಗ್ಗ ಜಗ್ಗಾಟಗಳ ನಡುವೆಯೇ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ದಾಖಲೆಯ ಅವಧಿಗೆ ಮುಖ್ಯಮಂತ್ರಿಯಾದ ಹೆಗ್ಗಳಿಕೆ. ಜೊತೆಯಲ್ಲೇ ದಾಖಲೆಗಳ ಬಜೆಟ್ ಮಂಡನೆ.
ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಸ್ತಾಂತರದ ಚರ್ಚೆ ಬಿಸಿಯಾಗಿದ್ದಾಗಲೇ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ದಿನದಂದು ಪತ್ರಿಕೆಯೊಂದರಲ್ಲಿ ಬರೆದ ಲೇಖನ ಹೆಚ್ಚು ಸದ್ದು ಮಾಡಿತ್ತು. ಸಾಮಾಜಿಕ ಬದಲಾವಣೆಗೆ ಕೈಹಾಕಿದವರನ್ನು ಇತಿಹಾಸದಲ್ಲಿ ವ್ಯವಸ್ಥಿತವಾಗಿ ದಮನ ಮಾಡಲಾಗಿದೆ. ಈಗ ಅದೇ ಇತಿಹಾಸ ಪುನರಾವರ್ತನೆ ಆಗುತ್ತಿದೆ. ರಾಜಕೀಯ ಷಡ್ಯಂತ್ರಗಳಿಗೆ ಮಣಿಯದೇ ಶೋಷಿತರ ಪರವಾಗಿ ಹೋರಾಡುವೆ. ನೀವು ನನ್ನನ್ನು ಎಷ್ಟು ತುಳಿಯಲು ಪ್ರಯತ್ನಿಸುತ್ತೀರೋ ನಾನು ಅಷ್ಟೇ ಬಲವಾಗಿ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಎದ್ದು ಬರುತ್ತೇನೆ ಎಂದು ಸಿದ್ದರಾಮಯ್ಯ ಗುಡುಗಿದ್ದರು. ಇದು ಸ್ವಪಕ್ಷೀಯರಿಗೆ ಎಚ್ಚರಿಕೆ ಗಂಟೆ ಆಗಿತ್ತು. ಹೈಕಮಾಂಡ್‌ಗೆ ಸಂದೇಶ ರವಾನಿಸಿತ್ತು.
ಇಲ್ಲಿ ಒಂದನ್ನು ಗಮನಿಸಬಹುದು. ಶಿವಕುಮಾರ್ ಎಲ್ಲಿಯೂ ಭಿನ್ನಮತೀಯ ನಾಯಕನೆಂದು ಬಿಂಬಿಸಿಕೊಂಡವರಲ್ಲ. ಅವರದು ಬಹು ಎಚ್ಚರಿಕೆ ಹೆಜ್ಜೆ. ನುಡಿಗಳು ತೂಕ. ನಾಯಕತ್ವ ವಿಚಾರವಾಗಿ ನಾನು, ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಎಲ್ಲರೂ ಸೇರಿ ಕೈಗೊಂಡಿರುವ ನಿರ್ಧಾರ. ಸಿದ್ದರಾಮಯ್ಯ ಅವರೇ ಸಮಯ ಬಂದಾಗ ರಾಜ್ಯದ ಜನರಿಗೆ ಸಂದೇಶ ನೀಡುತ್ತಾರೆ ಎಂಬುದು ಶಿವಕುಮಾರ್ ಅವರ ರಕ್ಷಣಾತ್ಮಕ ಆಟ. ಅವರಿಗೂ ಚೆನ್ನಾಗಿ ಗೊತ್ತಿದೆ. ಶಾಸಕರ ಬಲಾಬಲದಿಂದ ತಾವು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ, ಏನಿದ್ದರೂ ಹೈಕಮಾಂಡ್ ಆಶೀರ್ವಾದದಿಂದಲೇ ಆ ಪಟ್ಟ ದಕ್ಕಿಸಿಕೊಳ್ಳಬೇಕು ಎಂಬುದು. ಆದರೆ, ಹೈಕಮಾಂಡ್ ದುರ್ಬಲ. ಸಿದ್ದರಾಮಯ್ಯ ಮಾಸ್ ಲೀಡರ್. ಜೊತೆಯಲ್ಲಿ ಶಾಸಕರ ಬಲ. ಶಿವಕುಮಾರ್ ಅವರದು ಸಂಘಟನೆಯ ತಾಕತ್ತು. ಇದು ಹೈಕಮಾಂಡ್‌ಗೆ ಜಿಜ್ಞಾಸೆ.
ಸರಕಾರಕ್ಕೆ ಮೂರು ವರ್ಷಗಳು ತುಂಬಿವೆ. ಇನ್ನು ಉಳಿದಿರುವುದು ಎರಡು ವರ್ಷ. ಸಿದ್ದರಾಮಯ್ಯ ಅವರಲ್ಲಿ ಮೊದಲ ಅವಧಿಯಲ್ಲಿದ್ದ ಉತ್ಸಾಹ, ಹುಮ್ಮಸ್ಸು, ಆಡಳಿತದಲ್ಲಿ ಬಿಗಿ ಎರಡನೇ ಅವಧಿಯಲ್ಲಿ ಕಾಣುತ್ತಿಲ್ಲ. ಆ ಸಾಧನೆಯೂ ಎರಡನೇ ಅವಧಿಯಲ್ಲಿ ಇಲ್ಲ. ಇದಕ್ಕೆ ಕಾರಣ ಹಲವು. ಅದು ಗ್ಯಾರಂಟಿ ಯೋಜನೆಗಳ ಆರ್ಥಿಕ ಭಾರ ಆಗಿರಬಹುದು, ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಿ ಪರ್ಯಾಯ ಅಧಿಕಾರ ಕೇಂದ್ರ ಆಗಿರಬಹುದು, ಸಿದ್ದರಾಮಯ್ಯ ಅವರ ವಯೋ ಸಹಜ ಗುಣವಿರಬಹುದು ಏನೇ ಇರಲಿ ಎರಡನೇ ಬಾರಿಯ ಮುಖ್ಯಮಂತ್ರಿ ಅವಧಿ ನಿರೀಕ್ಷಿತ ಮಟ್ಟದಲ್ಲಿಲ್ಲ.
ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಗುರಿಗಳು ಸ್ಪಷ್ಟವಾಗಿತ್ತು. ಹೆಜ್ಜೆಗಳು ದಿಟ್ಟವಾಗಿದ್ದವು. ಎರಡನೇ ಅವಧಿಯಲ್ಲಿ ಗುರಿಗಳು ಸ್ಪಷ್ಟವಿರಬಹುದು. ಆದರೆ, ಹೆಜ್ಜೆಗಳು ಭಾರ. ಗುರಿ ತಲುಪಲು ನಿರುತ್ಸಾಹ. ಸಂಪನ್ಮೂಲದ ಕೊರತೆ. ತುಮಕೂರಿನಲ್ಲಿ ನಡೆದ ಸಾಧನೆಯ ಸಮರ್ಪಣಾ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರೇ ಹೇಳಿದಂತೆ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳು 580. ಈಡೇರಿದ್ದು 290ಕ್ಕೂ ಹೆಚ್ಚು . ಅಂದರೆ ಶೇ.50ರಷ್ಟು ಭರವಸೆಗಳು ಈಡೇರಿವೆ. ಉಳಿದ ಶೇ.50ರಷ್ಟು ಭರವಸೆಗಳನ್ನು ಇನ್ನು ಎರಡು ವರ್ಷಗಳಲ್ಲಿ ಈಡೇರಿಸಬೇಕಿದೆ. ಇದು ಸಾಧ್ಯವಾಗಬೇಕಾದರೆ ಮೊದಲು ತಂಡದ ನಾಯಕತ್ವದ ಬದಲಾವಣೆ ಪ್ರಶ್ನೆ ಬಗೆಹರಿಯಬೇಕು.
ಸಿದ್ದರಾಮಯ್ಯ ಅವರು ಜನತಾದಳದಲ್ಲಿ ಅಧಿಕಾರದಲ್ಲಿದ್ದಾಗ ಆಡಳಿತದಲ್ಲಿ ಬಿಗಿ. ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಪಾಲಿಗೆ ಖಡಕ್. ಸರಕಾರದ ಖಜಾನೆಗೆ ಸಂಪನ್ಮೂಲ ಕ್ರೂಢೀಕರಣದಲ್ಲಿ ಕಟ್ಟುನಿಟ್ಟು. ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಗಾದಿ ಏರಿದ ಮೊದಲ ಐದು ವರ್ಷಗಳ ಆಡಳಿತದಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು. ಅನೇಕ ಭಾಗ್ಯಗಳ ಯೋಜನೆಗಳನ್ನು ಜಾರಿಗೆ ತಂದರು. ಆ ಐದು ವರ್ಷಗಳು ಅವರು ಸರಕಾರದಲ್ಲಿ ಪ್ರಶ್ನಾತೀತ ನಾಯಕರಾಗಿದ್ದರು. ಆದರೆ, 2023ರಲ್ಲಿ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದಾಗ ಆಡಳಿತದಲ್ಲಿ ಬಿಗಿ ಕಂಡು ಬರುತ್ತಿಲ್ಲ.
ಮುಡಾ ಹಗರಣ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಒಳಪಡುವಂತೆ ಮಾಡಿತು. ಸಿದ್ದರಾಮಯ್ಯ ಮೈಸೂರಿನ ಲೋಕಾಯುಕ್ತ ಪೊಲೀಸ್ ಕಚೇರಿಗೆ ಆಗಮಿಸಿ ತನಿಖಾಧಿಕಾರಿ ಮುಂದೆ ಕುಳಿತು ವಿಚಾರಣೆ ಎದುರಿಸಿದರು. ಇದು ಸಿದ್ದರಾಮಯ್ಯ ಅವರ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ತಂದಿತು.
ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವರಾಗಿದ್ದ ನಾಗೇಂದ್ರ ಅವರ ಬಂಧನವಾಯಿತು. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕುರಿತು ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರ ಹೇಳಿಕೆಯಿಂದ ಅವರನ್ನು ಸಂಪುಟದಿಂದ ವಜಾ ಮಾಡಲಾಯಿತು. ರಾಜಣ್ಣ ಹೇಳಿದ್ದು ಸರಿಯೇ ಇತ್ತು. ಆದರೆ, ಸಮಯ, ಸಂದರ್ಭ ಅದಾಗಿರಲಿಲ್ಲ.ಸಿದ್ದರಾಮಯ್ಯ ಮೂರು ವರ್ಷ ಅಧಿಕಾರ ಅವಧಿ ಮುಗಿಸಿದ ನಂತರವೂ ಉಳಿಯುವ ಪ್ರಶ್ನೆ ಒಂದೇ- ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸುವರೇ?
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com