ಸಾಂದರ್ಭಿಕ ಚಿತ್ರ kaboompics.com / Pexels
ಅಂಕಣಗಳು

ಸ್ವಯಂ ವೈದ್ಯ: ಕ್ಷಣಿಕ ಪರಿಹಾರ, ದೀರ್ಘಕಾಲ ಅಪಾಯ (ಕುಶಲವೇ ಕ್ಷೇಮವೇ)

ಮನೆಯಲ್ಲಿರುವ ಔಷಧಿ, ಸ್ನೇಹಿತರು ಅಥವಾ ಸಂಬಂಧಿಕರ ಸಲಹೆ, ಹಿಂದಿನ ಚಿಕಿತ್ಸೆಯ ಚೀಟಿ ಮತ್ತು ಕೆಲವೊಮ್ಮೆ ಇಂಟರ್ನೆಟ್‌ನಲ್ಲಿ ಅಂದರೆ ಗೂಗಲ್ ಅದರಲ್ಲಿಯೂ ಕೆಲವರಲ್ಲಿ ಇತ್ತೀಚೆಗೆ ಚಾಟ್‌ಜಿಪಿಟಿಯಲ್ಲಿ ದೊರೆಯುವ ಮಾಹಿತಿಯ ಆಧಾರದ ಮೇಲೆ ಔಷಧಿ ಸೇವಿಸುವ ಪ್ರವೃತ್ತಿಯೂ ಹೆಚ್ಚಾಗಿದೆ.

ತಲೆನೋವು, ಜ್ವರ, ನೆಗಡಿ, ಕೆಮ್ಮು, ಹೊಟ್ಟೆನೋವು ಅಥವಾ ದೇಹದಲ್ಲಿ ಸಣ್ಣಪುಟ್ಟ ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವ ಬದಲು ಹಿಂದೆ ಬಳಸಿದ ಮಾತ್ರೆಯನ್ನೇ ತೆಗೆದುಕೊಳ್ಳುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಮನೆಯಲ್ಲಿರುವ ಔಷಧಿ, ಸ್ನೇಹಿತರು ಅಥವಾ ಸಂಬಂಧಿಕರ ಸಲಹೆ, ಹಿಂದಿನ ಚಿಕಿತ್ಸೆಯ ಚೀಟಿ ಮತ್ತು ಕೆಲವೊಮ್ಮೆ ಇಂಟರ್ನೆಟ್‌ನಲ್ಲಿಅಂದರೆ ಗೂಗಲ್ ಅದರಲ್ಲಿಯೂ ಕೆಲವರಲ್ಲಿ ಇತ್ತೀಚೆಗೆ ಚಾಟ್‌ಜಿಪಿಟಿಯಲ್ಲಿ ದೊರೆಯುವ ಮಾಹಿತಿಯ ಆಧಾರದ ಮೇಲೆ ಔಷಧಿ ಸೇವಿಸುವ ಪ್ರವೃತ್ತಿಯೂ ಹೆಚ್ಚಾಗಿದೆ. ಮೇಲ್ನೋಟಕ್ಕೆ ಇದು ಸಮಯ ಮತ್ತು ಹಣ ಉಳಿಸುವ ಸರಳ ಮಾರ್ಗದಂತೆ ಕಾಣಬಹುದು. ಹೀಗೆ ರೋಗದ ನಿಜವಾದ ಕಾರಣ ತಿಳಿಯದೇ ಔಷಧಿ ತೆಗೆದುಕೊಳ್ಳುವುದು ಅಂದರೆ ಸ್ವಯಂ ವೈದ್ಯ ಮಾಡಿಕೊಳ್ಳುವುದು ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು.

ಸ್ವಯಂ ವೈದ್ಯ ಎಂದರೇನು?

ಸ್ವಯಂ ವೈದ್ಯ ಎಂದರೆ ವೈದ್ಯರ ಸಲಹೆಯಿಲ್ಲದೆ ಸ್ವತಃ ಔಷಧಿ ತೆಗೆದುಕೊಳ್ಳುವುದು. ಎಲ್ಲ ಔಷಧಿಗಳೂ ಒಂದೇ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ವ್ಯಕ್ತಿಯ ವಯಸ್ಸು, ತೂಕ, ಇತರ ಕಾಯಿಲೆಗಳು, ಈಗಾಗಲೇ ಸೇವಿಸುತ್ತಿರುವ ಔಷಧಿಗಳು, ಅಲರ್ಜಿ ಮತ್ತು ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿಯೇ ಸೂಕ್ತ ಔಷಧಿ ಹಾಗೂ ಅದರ ಪ್ರಮಾಣವನ್ನು ನಿರ್ಧರಿಸಬೇಕು. ಹೀಗಾಗಿ ಒಬ್ಬರಿಗೆ ಪ್ರಯೋಜನ ನೀಡಿದ ಮಾತ್ರೆ ಮತ್ತೊಬ್ಬರಿಗೆ ಹಾನಿ ಉಂಟುಮಾಡುವ ಸಾಧ್ಯತೆಯಿದೆ.

ಸ್ವಯಂ ವೈದ್ಯದ ಅಪಾಯಗಳು

ಸ್ವಯಂ ವೈದ್ಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ಅಪಾಯವೆಂದರೆ ಆ್ಯಂಟಿಬಯಾಟಿಕ್‌ಗಳ ಅನಗತ್ಯ ಬಳಕೆ. ವೈರಸ್‌ನಿಂದ ಉಂಟಾಗುವ ನೆಗಡಿ ಅಥವಾ ಸಾಮಾನ್ಯ ಜ್ವರಕ್ಕೆ ಆ್ಯಂಟಿಬಯಾಟಿಕ್‌ಗಳು ಪರಿಣಾಮಕಾರಿಯಾಗುವುದಿಲ್ಲ. ಆದರೂ ವೈದ್ಯರ ಸಲಹೆಯಿಲ್ಲದೆ ಇವುಗಳನ್ನು ಸೇವಿಸುವುದು ಸಾಮಾನ್ಯವಾಗಿದೆ. ಇದರಿಂದ ದೇಹದಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳು ಔಷಧಿಗೆ ಪ್ರತಿರೋಧ ಬೆಳೆಸಿಕೊಳ್ಳಬಹುದು. ಮುಂದೆ ನಿಜವಾದ ಬ್ಯಾಕ್ಟೀರಿಯಾ ಸೋಂಕು ಉಂಟಾದಾಗ ಚಿಕಿತ್ಸೆ ಕಷ್ಟವಾಗುವ ಸಾಧ್ಯತೆಯಿದೆ. ಆದ್ದರಿಂದ ಆ್ಯಂಟಿಬಯಾಟಿಕ್‌ಗಳನ್ನು ವೈದ್ಯರ ಸಲಹೆಯಂತೆ ಮಾತ್ರ ಬಳಸಬೇಕು.

ನೋವು ನಿವಾರಕ ಮಾತ್ರೆಗಳ ಅತಿಯಾದ ಅಥವಾ ದೀರ್ಘಕಾಲದ ಬಳಕೆಯೂ ಅಪಾಯಕಾರಿ. ಕೆಲವು ಔಷಧಿಗಳು ಹೊಟ್ಟೆಯ ಒಳಪದರಕ್ಕೆ ತೊಂದರೆ ಉಂಟುಮಾಡಬಹುದು; ಕೆಲವು ಸಂದರ್ಭಗಳಲ್ಲಿ ಮೂತ್ರಪಿಂಡ ಅಥವಾ ಯಕೃತ್ತಿನ ಮೇಲೂ ಪರಿಣಾಮ ಬೀರಬಹುದು. ಇದೇ ರೀತಿ, ನಿದ್ರೆ ತರಿಸುವ ಔಷಧಿ, ಸ್ಟೀರಾಯ್ಡುಗಳು ಅಥವಾ ಇತರ ಪ್ರಬಲ ಔಷಧಿಗಳನ್ನು ಸ್ವಯಂ ಸೇವಿಸುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು.

ಸ್ವಯಂ ವೈದ್ಯದಿಂದ ತಕ್ಷಣವೇ ಪರಿಹಾರ, ಆದರೆ ದೀರ್ಘಕಾಲ ಅಪಾಯ

ಇನ್ನೊಂದು ಸಮಸ್ಯೆ ಎಂದರೆ ಔಷಧಿಯಿಂದ ಲಕ್ಷಣ ಕಡಿಮೆಯಾದ ತಕ್ಷಣ ರೋಗ ಗುಣವಾಗಿದೆ ಎಂದು ಭಾವಿಸುವುದು. ಉದಾಹರಣೆಗೆ ನೋವು ಕಡಿಮೆಯಾಗುವುದು ಅದರ ಮೂಲ ಕಾರಣ ಪರಿಹಾರವಾಗಿದೆ ಎಂಬುದಕ್ಕೆ ಸಾಕ್ಷಿಯಲ್ಲ. ನೋವು ಅಥವಾ ಜ್ವರದಂತಹ ಲಕ್ಷಣಗಳು ದೇಹದಲ್ಲಿ ನಡೆಯುತ್ತಿರುವ ಮತ್ತೊಂದು ಸಮಸ್ಯೆಯ ಸೂಚನೆಯಾಗಿರಬಹುದು. ಔಷಧಿ ತೆಗೆದುಕೊಂಡು ಲಕ್ಷಣವನ್ನು ಮುಚ್ಚಿಹಾಕುವುದರಿಂದ ಸೂಕ್ತ ಚಿಕಿತ್ಸೆ ಪಡೆಯುವುದು ವಿಳಂಬವಾಗಬಹುದು.

ಸ್ವಯಂ ವೈದ್ಯದ ಹಿಂದೆ ಮತ್ತೊಂದು ಪ್ರಮುಖ ಕಾರಣವೆಂದರೆ ಔಷಧಿಗಳ ಸುಲಭ ಲಭ್ಯತೆ. ವೈದ್ಯರು ಹಿಂದೆ ಬರೆದಿದ್ದ ಪ್ರಿಸ್ಕ್ರಿಪ್ಷನ್ ಅಥವಾ ಪರಿಚಿತರ ಸಲಹೆಯನ್ನು ಆಧರಿಸಿ ಔಷಧಿ ಖರೀದಿಸುವುದು ಕೆಲವರಲ್ಲಿ ಅಭ್ಯಾಸವಾಗಿರುತ್ತದೆ. ಆದರೆ ರೋಗದ ಲಕ್ಷಣ ಒಂದೇ ಇದ್ದರೂ ಅದರ ಕಾರಣ ಒಂದೇ ಆಗಿರಬೇಕೆಂದಿಲ್ಲ. ತಲೆನೋವು ನಿದ್ರೆಯ ಕೊರತೆ, ಒತ್ತಡ, ಕಣ್ಣಿನ ಸಮಸ್ಯೆ, ರಕ್ತದೊತ್ತಡ ಅಥವಾ ಇನ್ನಿತರ ಕಾರಣಗಳಿಂದ ಉಂಟಾಗಬಹುದು. ಹೀಗಾಗಿ ಕಾರಣ ತಿಳಿಯದೇ ಮಾತ್ರೆ ತೆಗೆದುಕೊಳ್ಳುವುದು ಸಮಸ್ಯೆಯ ಮೂಲವನ್ನು ಕಡೆಗಣಿಸುವಂತಾಗಬಹುದು.

ಔಷಧಿಗಳ ಪರಿಣಾಮಗಳ ಬಗ್ಗೆ ತಿಳಿದಿದೆಯೇ?

ಔಷಧಿಗಳ ಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ಅಗತ್ಯ. ಒಬ್ಬ ವ್ಯಕ್ತಿ ಈಗಾಗಲೇ ಹಲವು ಔಷಧಿಗಳನ್ನು ಸೇವಿಸುತ್ತಿದ್ದರೆ, ಹೊಸದಾಗಿ ತೆಗೆದುಕೊಳ್ಳುವ ಮಾತ್ರೆ ಅವುಗಳ ಪರಿಣಾಮವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಕೆಲವು ಸಂದರ್ಭಗಳಲ್ಲಿ ಅಡ್ಡ ಪರಿಣಾಮಗಳ ಅಪಾಯವೂ ಹೆಚ್ಚಬಹುದು. ವಿಶೇಷವಾಗಿ ವಯೋವೃದ್ಧರು, ಗರ್ಭಿಣಿಯರು, ಮಕ್ಕಳು ಹಾಗೂ ದೀರ್ಘಕಾಲದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರು ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವಿಸಬಾರದು.

ಅವಧಿ ಮೀರಿದ ಔಷಧಿಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಮಕ್ಕಳಿಗೆ ಔಷಧಿ ನೀಡುವಾಗ ಇನ್ನಷ್ಟು ಎಚ್ಚರಿಕೆ ಅಗತ್ಯ. ವಯಸ್ಕರಿಗೆ ಬಳಸುವ ಪ್ರಮಾಣವನ್ನು ಮಕ್ಕಳಿಗೆ ನೀಡುವುದು ಅಪಾಯಕಾರಿ.

ಸ್ವತಃ ಚಿಕಿತ್ಸೆ ಬೇಡ

ಔಷಧಿ ಒಂದು ಸಾಮಾನ್ಯ ವಸ್ತುವಲ್ಲ; ಅದನ್ನು ಸರಿಯಾದ ಕಾರಣಕ್ಕೆ, ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಅವಧಿಗೆ ಬಳಸಿದಾಗ ಮಾತ್ರ ಪ್ರಯೋಜನಕಾರಿಯಾಗುತ್ತದೆ. “ಹಿಂದೆ ತೆಗೆದುಕೊಂಡಿದ್ದೆ, ಈಗಲೂ ತೆಗೆದುಕೊಳ್ಳಬಹುದು”ಎಂಬ ಸರಳ ಮನೋಭಾವ ಆರೋಗ್ಯಕ್ಕೆ ಅಪಾಯ ತಂದೊಡ್ಡಬಹುದು. ಆರೋಗ್ಯದ ಬಗ್ಗೆ ಜಾಗೃತಿ ಎಂದರೆ ಪ್ರತಿಯೊಂದು ಸಮಸ್ಯೆಗೂ ಮಾತ್ರೆ ಹುಡುಕುವುದಲ್ಲ; ಯಾವಾಗ ಸ್ವತಃ ಚಿಕಿತ್ಸೆ ಮಾಡಿಕೊಳ್ಳಬಾರದು ಎಂಬುದನ್ನು ತಿಳಿದುಕೊಳ್ಳುವುದೂ ಹೌದು. ಆದ್ದರಿಂದ ಸ್ವಯಂ ವೈದ್ಯದಿಂದ ದೂರವಿರುವುದು ಒಳ್ಳೆಯದು.

ಕೊನೆಮಾತು: ಹಾಗಾದರೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಬಂದಾಗ ಏನು ಮಾಡಬೇಕು? ಅನಗತ್ಯವಾಗಿ ಔಷಧಿ ತೆಗೆದುಕೊಳ್ಳುವ ಅಭ್ಯಾಸವನ್ನು ಬಿಡಬೇಕು. ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯಬೇಕು. ಈಗಾಗಲೇ ಬೇರೆ ಕಾಯಿಲೆಗಳಿಗೆ ಔಷಧಿ ಸೇವಿಸುತ್ತಿದ್ದರೆ ಹೊಸ ಔಷಧಿ ಆರಂಭಿಸುವ ಮೊದಲು ಅದರ ಬಗ್ಗೆ ವೈದ್ಯರಿಗೆ ತಿಳಿಸಬೇಕು. ತೀವ್ರವಾದ ನೋವು, ಉಸಿರಾಟದ ತೊಂದರೆ, ನಿರಂತರ ಜ್ವರ, ಅಸಾಮಾನ್ಯ ರಕ್ತಸ್ರಾವ, ಪ್ರಜ್ಞೆ ತಪ್ಪುವುದು ಅಥವಾ ಇತರ ಗಂಭೀರ ಲಕ್ಷಣಗಳು ಕಂಡುಬಂದರೆ ಸ್ವಯಂ ವೈದ್ಯದ ಬದಲು ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ: ಪತನಕ್ಕೆ ಯತ್ನಿಸಿದ್ದ ಸಹ ಪೈಲಟ್‌ ಉಗ್ರವಾದ ಹಿನ್ನಲೆಯವನೇ?

ಏಷ್ಯನ್ ಗೇಮ್ಸ್ 2026: 'ರಿಕರ್ವ್ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮೊಹೋದ್ ಕುಂಕುಮ್!

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!