ಅಂಕಣಗಳು

ಹೊಸ ಅವತಾರದಲ್ಲಿ ಗರ್ಜಿಸಲು ಸಜ್ಜಾದ ಬ್ರಹ್ಮೋಸ್ ಕ್ಷಿಪಣಿ

ಭಾರತದ ಗಡಿಗಳಾಚೆಯೂ ಬ್ರಹ್ಮೋಸ್ ಅನ್ನು ಮೆಚ್ಚುವವರಿದ್ದಾರೆ. ಭಾರತದ ಮೊದಲ ರಫ್ತು ಗ್ರಾಹಕನಾದ ಫಿಲಿಪೈನ್ಸ್ ಇನ್ನಷ್ಟು ಕ್ಷಿಪಣಿಗಳಿಗೆ ಬೇಡಿಕೆ ಇರಿಸಿದೆ.

ಹಿಂದೂ ಮಹಾಸಾಗರದ ಮೇಲಿನ ಆಗಸದಲ್ಲಿ ಎಲ್ಲೋ ಒಂದು ಸುಖೋಯಿ-30 ಯುದ್ಧ ವಿಮಾನ ತನ್ನ ಹೊಟ್ಟೆಯ ಕೆಳಗೆ ಬ್ರಹ್ಮೋಸ್ ಕ್ಷಿಪಣಿಯನ್ನು ಅಳವಡಿಸಿಕೊಂಡು ಹಾರಾಡುತ್ತಿರುತ್ತದೆ. ಪೈಲಟ್ ಅದನ್ನು ಬಿಡುಗಡೆಗೊಳಿಸಲು ಗುಂಡಿ ಅದುಮಿದಾಗ, ಆ ಕ್ಷಿಪಣಿಯ ವೇಗ ಶೂನ್ಯದಿಂದ ಆರಂಭಗೊಳ್ಳುವುದಿಲ್ಲ. ಅದು ಯುದ್ಧ ವಿಮಾನದ ವೇಗವನ್ನೂ ತನ್ನೊಡನೆ ಸೇರಿಸಿಕೊಂಡಿರುತ್ತದೆ. ಕ್ರಿಕೆಟ್ ಆಟದಲ್ಲಿ ಕ್ಷೇತ್ರರಕ್ಷಕನೊಬ್ಬ ಓಡುತ್ತಾ ಚೆಂಡೆಸೆದಾಗ ಆ ಚೆಂಡು ವೇಗವಾಗಿ, ಹೆಚ್ಚು ದೂರಕ್ಕೆ ಸಾಗುವುದನ್ನು ಇದಕ್ಕೆ ಹೋಲಿಸಬಹುದು. ವಿಮಾನದಿಂದ ಪಡೆದುಕೊಳ್ಳುವ ಆರಂಭಿಕ ವೇಗ, ಕ್ಷಿಪಣಿ ಭೂಮಿಯಿಂದ ಉಡಾವಣೆಗೊಳ್ಳುವುದಕ್ಕೆ ಹೋಲಿಸಿದರೆ ಕೆಲವು ನೂರು ಕಿಲೋಮೀಟರ್ ಹೆಚ್ಚು ದೂರಕ್ಕೆ ಸಾಗುವಂತೆ ಮಾಡುತ್ತದೆ ಎಂದು ಡಾ. ಸುಧೀರ್ ಕುಮಾರ್ ಮಿಶ್ರಾ ಅವರು ವಿವರಿಸಿದ್ದಾರೆ. ಇದೊಂದು ಸಣ್ಣ ವಿವರವಾದರೂ, ಒಂದೊಮ್ಮೆ ಬ್ರಹ್ಮೋಸ್ ಏರೋಸ್ಪೇಸ್ ನೇತೃತ್ವ ವಹಿಸಿದ್ದ ವ್ಯಕ್ತಿ ಆಯುಧಗಳನ್ನು ಜೀವಂತ ವ್ಯವಸ್ಥೆಗಳಾಗಿ, ಮತ್ತು ತಾವು ಇನ್ನೂ ಹೆಚ್ಚಿನ ದೂರ ಕ್ರಮಿಸಲು ಹೊಸ ಮಾರ್ಗಗಳನ್ನು ಹುಡುಕುವ ಆಯುಧಗಳಾಗಿ ಪರಿಗಣಿಸುವುದನ್ನು ತೋರಿಸಿದೆ.

ಡಾ. ಮಿಶ್ರಾ ಅವರಷ್ಟು ಆಳವಾಗಿ ಬ್ರಹ್ಮೋಸ್ ಕ್ಷಿಪಣಿಯ ಕುರಿತು ಜ್ಞಾನ ಹೊಂದಿರುವ ಭಾರತೀಯರು ಬಹಳ ವಿರಳ. ಅವರೊಬ್ಬ ಮಹತ್ವದ ಕ್ಷಿಪಣಿ ವಿಜ್ಞಾನಿಯಾಗಿದ್ದು, ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಯೋಜನೆಯ ಅಭಿವೃದ್ಧಿಯಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸಿದ್ದಾರೆ. ಅವರು ಡಿಆರ್‌ಡಿಒದ ಬ್ರಹ್ಮೋಸ್ ಯೋಜನೆಯ ಮಹಾ ನಿರ್ದೇಶಕರಾಗಿ, ಮತ್ತು ಬ್ರಹ್ಮೋಸ್ ಕ್ಷಿಪಣಿಯನ್ನು ತಯಾರಿಸುವ ಭಾರತ - ರಷ್ಯಾಗಳ ಜಂಟಿ ಸಹಭಾಗಿತ್ವದ ಬ್ರಹ್ಮೋಸ್ ಏರೋಸ್ಪೇಸ್ ಸಂಸ್ಥೆಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಪ್ರಸ್ತುತ ಡಿಆರ್‌ಡಿಒದ ಗೌರವಾಧ್ಯಕ್ಷರೂ ಆಗಿದ್ದಾರೆ. ವಿಯಾನ್ ಮಾಧ್ಯಮ ಸಂಸ್ಥೆಯ ರಕ್ಷಣಾ ಮತ್ತು ತಂತ್ರಜ್ಞಾನ ಕಾರ್ಯಕ್ರಮವಾದ 'ಡಿಫೆನ್ಸ್‌ ಪ್ಲಸ್'ನಲ್ಲಿ ಮಾತನಾಡಿದ ಡಾ. ಮಿಶ್ರಾ ಅವರು ಭಾರತದ ಅತ್ಯಂತ ಪ್ರಸಿದ್ಧವಾದ ಕ್ಷಿಪಣಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವ ಕುರಿತು ಬೆಳಕು ಚೆಲ್ಲಿದರು. ಅವರ ಉತ್ತರಗಳು ಮೂರು ಭಾಗಗಳಲ್ಲಿದ್ದವು.

ಮೊದಲನೆಯ ಭಾಗ, ಕ್ಷಿಪಣಿಯ ವ್ಯಾಪ್ತಿ. ಪ್ರಸ್ತುತ ಭಾರತೀಯ ಭೂಸೇನೆ, ನೌಕಾಪಡೆ ಮತ್ತು ವಾಯುಸೇನಾ ಆವೃತ್ತಿಗಳ ಬಳಿ ಇರುವ ಬ್ರಹ್ಮೋಸ್ ಕ್ಷಿಪಣಿಗಳ ವ್ಯಾಪ್ತಿ ಅವುಗಳ ಅವಶ್ಯಕತೆಗೆ ಅನುಗುಣವಾಗಿ ದುಪ್ಪಟ್ಟು ಅಥವಾ ಮೂರು ಪಟ್ಟು ಹೆಚ್ಚಾಗಲಿದೆ. ಕ್ಷಿಪಣಿಯ ಗಾತ್ರವನ್ನು ದೊಡ್ಡದಾಗಿಸದೆ ಅದರ ವ್ಯಾಪ್ತಿಯನ್ನು ಹೆಚ್ಚಿಸುವುದು ಹೇಗೆ? ಇದಕ್ಕೆ ಉತ್ತರ ಕ್ಷಿಪಣಿಯ ವಯಸ್ಸಿನಲ್ಲಿದೆ. ಇಂದಿನ ಬ್ರಹ್ಮೋಸ್ ಕ್ಷಿಪಣಿ ಬಹುತೇಕ ಇಪ್ಪತ್ತರಿಂದ ಇಪ್ಪತ್ತೈದು ವರ್ಷ ಹಳೆಯ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಹೇಗೆ ಈ ಅವಧಿಯಲ್ಲಿ ಮೊಬೈಲ್ ಫೋನ್‌ಗಳ ಇಲೆಕ್ಟ್ರಾನಿಕ್ಸ್ ಅನ್ನು ಗಾತ್ರದಲ್ಲಿ ಸಣ್ಣದಾಗಿಸಲಾಯಿತೋ, ಕ್ಷಿಪಣಿಯಲ್ಲೂ ಹಾಗೇ ಮಾಡಿದರೆ ಅದರ ದೇಹದೊಳಗೆ ಒಂದಷ್ಟು ಮುಕ್ತ ಜಾಗ ಲಭಿಸುತ್ತದೆ. ಆ ಜಾಗದಲ್ಲಿ ಹೆಚ್ಚುವರಿ ಇಂಧನ, ಕ್ಷಿಪಣಿಯ ಕಣ್ಣಿನಂತೆ ಕಾರ್ಯಾಚರಿಸುವ ಹೆಚ್ಚು ಸಮರ್ಥವಾದ ಸೀಕರ್, ಮತ್ತು ಶತ್ರುಗಳ ಜಾಮಿಂಗ್ ಪ್ರಯತ್ನಗಳನ್ನು ಎದುರಿಸಲು ಉತ್ತಮ ಇಲೆಕ್ಟ್ರಾನಿಕ್ ಪ್ರತಿತಂತ್ರಗಳನ್ನು ಅಳವಡಿಸಬಹುದು. ಬ್ರಹ್ಮೋಸ್ ಕ್ಷಿಪಣಿಯಲ್ಲಿ ಅದರ ಹೆಸರು ಮಾತ್ರವೇ ಸ್ಥಿರವಾಗಿದ್ದು, ಕಳೆದ ಇಪ್ಪತ್ತೈದು ವರ್ಷಗಳ ಹಿಂದಿನ ಕ್ಷಿಪಣಿಗೂ ಇಂದಿನ ಕ್ಷಿಪಣಿಗೂ ಸಾಕಷ್ಟು ಸುಧಾರಣೆಗಳಾಗಿವೆ ಎಂದು ಡಾ. ಮಿಶ್ರಾ ಹೇಳಿದ್ದಾರೆ.

ಇನ್ನು ಎರಡನೇ ಭಾಗವೆಂದರೆ ಕ್ಷಿಪಣಿಯ ಗಾತ್ರ. ಗಾತ್ರದಲ್ಲಿ ಸಣ್ಣದಾದ, ಮುಂದಿನ ತಲೆಮಾರಿ‌ನ ಬ್ರಹ್ಮೋಸ್ ಕ್ಷಿಪಣಿ ಬಹುತೇಕ ಹಿಂದಿನ ಕ್ಷಿಪಣಿಯ 300 ಕಿಲೋಮೀಟರ್ ವ್ಯಾಪ್ತಿಯನ್ನೇ ಉಳಿಸಿಕೊಂಡು, ಸಾಕಷ್ಟು ಕಡಿಮೆ ಸ್ಥಳದಲ್ಲಿ ಅಳವಡಿಸಬಹುದಾಗಿದೆ. ಇದನ್ನು ಅದೇ ಬಸ್ಸಿನಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದಕ್ಕೆ ಹೋಲಿಸಬಹುದು. ಒಂದು ಕಾಲದಲ್ಲಿ ಒಂದೇ ಬ್ರಹ್ಮೋಸ್ ಕ್ಷಿಪಣಿಯನ್ನು ಒಯ್ಯುತ್ತಿದ್ದ ನೌಕೆ, ಸಬ್‌ಮರೀನ್, ಭೂ ಲಾಂಚರ್, ಅಥವಾ ಯುದ್ಧ ವಿಮಾನ ಇಂದು ಹೆಚ್ಚಿನ ಸಂಖ್ಯೆಯ ಕ್ಷಿಪಣಿಗಳನ್ನು ಒಯ್ಯಬಲ್ಲವು. ಸುಖೋಯಿ-30 ಒಂದೇ ಬ್ರಹ್ಮೋಸ್ ಕ್ಷಿಪಣಿಯನ್ನು ಒಯ್ದರೆ, ಸ್ವದೇಶಿ ತೇಜಸ್ ಯುದ್ಧ ವಿಮಾನ ಎರಡು ಕ್ಷಿಪಣಿಗಳನ್ನು ಒಯ್ಯಬಲ್ಲದು. ಭವಿಷ್ಯದ ಭಾರತೀಯ ಯುದ್ಧ ವಿಮಾನಗಳು ಬಹುಶಃ ನಾಲ್ಕು ಕ್ಷಿಪಣಿಗಳನ್ನು ಒಯ್ಯಬಹುದು. ತೇಜಸ್ ವಿಮಾನ ಭಾರತದ ಸ್ವಂತ ವಿನ್ಯಾಸ ಮತ್ತು ಸ್ವಂತ ಸಾಫ್ಟ್‌ವೇರ್ ಹೊಂದಿರುವುದರಿಂದ ಇದಕ್ಕೆ ಕ್ಷಿಪಣಿಯ ಅಳವಡಿಕೆ ಸುಲಭ. ಈ ಪ್ರಕ್ರಿಯೆಗೆ ನಾಲ್ಕರಿಂದ ಐದು ವರ್ಷಗಳಷ್ಟೇ ಸಾಕು ಎಂದು ಡಾ. ಮಿಶ್ರಾ ಭಾವಿಸಿದ್ದಾರೆ. ಹಿಂದೆ ಮೊದಲು ನೌಕಾಪಡೆಯ ಆವೃತ್ತಿ, ಬಳಿಕ ಸೇನಾ ಆವೃತ್ತಿ, ಮತ್ತು ಕೊನೆಯದಾಗಿ ವಾಯುಪಡೆಯ ಬ್ರಹ್ಮೋಸ್ ಆವೃತ್ತಿಯನ್ನು ನಿರ್ಮಿಸಲಾಗುತ್ತಿತ್ತು. ಈ ಹಳೆಯ ಅಭ್ಯಾಸವನ್ನು ಇನ್ನು ಕೈಬಿಡಬೇಕು ಎಂದು ಅವರು ಸಲಹೆ ನೀಡಿದ್ದು, ಎಲ್ಲವನ್ನೂ ಜೊತೆಯಾಗಿ ಉತ್ಪಾದಿಸಬೇಕು ಎಂದಿದ್ದಾರೆ. ಅಂತಿಮವಾಗಿ ಈ ನಿರ್ಧಾರ ಬ್ರಹ್ಮೋಸ್ ಏರೋಸ್ಪೇಸ್, ಡಿಆರ್‌ಡಿಒ ಮತ್ತು ಭಾರತ ಸರ್ಕಾರದ ಕೈಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಮೂರನೇ ಭಾಗವೆಂದರೆ ವೇಗ. ಬ್ರಹ್ಮೋಸ್ 2 ಹೈಪರ್‌ಸಾನಿಕ್ ವೇಗದಲ್ಲಿ, ಅಂದರೆ ಶಬ್ದದ ವೇಗಕ್ಕಿಂತ ಕನಿಷ್ಠ ಐದು ಪಟ್ಟು ಹೆಚ್ಚಿನ ವೇಗದಲ್ಲಿ ಸಾಗಬೇಕಿದೆ. ಇಂಜಿನಿಯರ್‌ಗಳು ಈ ವೇಗವನ್ನು ಮ್ಯಾಕ್ 5 ಎಂದು ಕರೆದಿದ್ದಾರೆ. ಕ್ಷಿಪಣಿ ಸ್ಕ್ರ್ಯಾಮ್‌ಜೆಟ್ ಇಂಜಿನ್ ಹೊಂದಿದ್ದು, ಗಾಳಿ ಶಬ್ದದ ವೇಗಕ್ಕಿಂತಲೂ ಹೆಚ್ಚು ವೇಗವಾಗಿ ಸೀಳಿಬರುವಾಗಲೂ ಇದು ಇಂಧನವನ್ನು ದಹಿಸುತ್ತಿರುತ್ತದೆ. ಇಷ್ಟೊಂದು ಒತ್ತಡದಲ್ಲಿ ಸಾಮಾನ್ಯ ಇಂಜಿನ್ ಉಳಿಯಲಾರದು. ಡಾ. ಮಿಶ್ರಾ ಎಂಟರಿಂದ ಒಂಬತ್ತು ತಿಂಗಳ ಹಿಂದೆ ಡಿಆರ್‌ಡಿಒ ನಡೆಸಿದ ಪರೀಕ್ಷೆಯನ್ನು ಉಲ್ಲೇಖಿಸಿದ್ದು, ಆ ಪರೀಕ್ಷೆಯಲ್ಲಿ ಅಂತಹ ಇಂಜಿನ್ ಅಂದಾಜು ಹತ್ತು ನಿಮಿಷಗಳ ಕಾಲ ಕಾರ್ಯಾಚರಿಸಿತ್ತು. ಮ್ಯಾಕ್ 7ರಿಂದ ಮ್ಯಾಕ್ 10ರ ವೇಗದಲ್ಲಿ, ಅಂದರೆ ಶಬ್ದದ ವೇಗಕ್ಕಿಂತ ಏಳರಿಂದ ಹತ್ತು ಪಟ್ಟು ಹೆಚ್ಚು ವೇಗದಲ್ಲಿ ಸಾಗಲು ನಿರ್ಮಾಣಗೊಂಡಿರುವ ಇಂಜಿನ್ ಅಷ್ಟು ಸುದೀರ್ಘ ಕಾಲ ಕಾರ್ಯಾಚರಿಸಿರುವುದು ತನ್ನದೇ ಆದ ಕಥೆಯನ್ನು ಹೇಳುತ್ತದೆ.

ಆದರೆ, ಇಂಜಿನ್ ಕೇವಲ ಆರಂಭವಷ್ಟೇ. ಹೇಗೆ ಓರ್ವ ಸರ್ಫರ್ ಸಮುದ್ರದ ಅಲೆಗಳ ಮೇಲೆ ಚಲಿಸುತ್ತಾನೋ, ಅದೇ ರೀತಿ ಕ್ಷಿಪಣಿಯ ದೇಹ ತಾನೇ ಸೃಷ್ಟಿಸುವ ಶಾಕ್‌ವೇವ್ ಮೇಲೆ ಚಲಿಸಲು ಶಕ್ತವಾಗಿರುವಂತೆ ನಿರ್ಮಾಣಗೊಳ್ಳಬೇಕು. ಇಂತಹ ಅಸಾಧಾರಣ ವೇಗದಲ್ಲಿ ಕ್ಷಿಪಣಿಯ ಸುತ್ತಲಿನ ಗಾಳಿ ವಿಪರೀತ ಬಿಸಿಯಾಗಿ, ಹೊಳೆಯಲಾರಂಭಿಸಿ, ವಿದ್ಯುತ್ ಚಾರ್ಜ್ ಹೊಂದುತ್ತದೆ‌. ಇದು ಕ್ಷಿಪಣಿಯನ್ನು ಪ್ಲಾಸ್ಮಾ ಎನ್ನುವ ಬೆಂಕಿಯ ಪರದೆಯಲ್ಲಿ ಮುಚ್ಚಿಡುತ್ತದೆ. ಸಾಮಾನ್ಯ ಸೆನ್ಸರ್‌ಗಳು ಇದರಿಂದ ಕುರುಡಾಗಿ ಬಿಡುತ್ತವೆ. ಇದಕ್ಕಾಗಿ ಸೀಕರ್‌ಗೆ ಪ್ಲಾಸ್ಮಾ ಮೂಲಕ ನೋಡಲು ಹೆಚ್ಚು ಗಟ್ಟಿಮುಟ್ಟಾದ ಆಪ್ಟಿಕಲ್ ವಿಂಡೋಸ್ ಮತ್ತು ವಿಶೇಷ ರೇಡಾರ್‌ಗಳು ಬೇಕಾಗುತ್ತವೆ. ಗೈಡೆನ್ಸ್ ಮತ್ತು ನಿಯಂತ್ರಣ ವ್ಯವಸ್ಥೆಗಳನ್ನು ಮೂಲದಿಂದಲೇ ನಿರ್ಮಿಸಬೇಕು. ಇನ್ನು ಕ್ಷಿಪಣಿಯ ಹೊರಪದರ ಬಹುತೇಕ 1,500 ಡಿಗ್ರಿ ಸೆಲ್ಸಿಯಸ್ ತನಕ ತಾಪಮಾನವನ್ನು ವಹಿಸಬೇಕಾಗುತ್ತದೆ. ಈ ತಾಪಮಾನ ದ್ರವ ರೂಪದ ಲಾವಾಗಿಂತಲೂ ಹೆಚ್ಚು ಬಿಸಿಯಾಗಿದ್ದು, ಇದರಿಂದ ರಕ್ಷಣೆ ಹೊಂದಲು ವಿಶೇಷ ವಸ್ತುಗಳು ಮತ್ತು ರಕ್ಷಣಾ ಪದರಗಳ ಅವಶ್ಯಕತೆ ಇರುತ್ತದೆ. ಡಾ. ಮಿಶ್ರಾ ಇದೊಂದು ಪ್ರಯಾಣ ಎಂದಿದ್ದು, ಹಾಗೆಂದು ಸಣ್ಣ ಪ್ರಯಾಣ ಎಂದೇನೂ ಕರೆದಿಲ್ಲ.

ಭಾರತದ ಗಡಿಗಳಾಚೆಯೂ ಬ್ರಹ್ಮೋಸ್ ಅನ್ನು ಮೆಚ್ಚುವವರಿದ್ದಾರೆ. ಭಾರತದ ಮೊದಲ ರಫ್ತು ಗ್ರಾಹಕನಾದ ಫಿಲಿಪೈನ್ಸ್ ಇನ್ನಷ್ಟು ಕ್ಷಿಪಣಿಗಳಿಗೆ ಬೇಡಿಕೆ ಇರಿಸಿದೆ. ಇಂಡೋನೇಷ್ಯಾ ಮತ್ತು ವಿಯೆಟ್ನಾಂಗಳು ಕ್ಷಿಪಣಿ ಖರೀದಿಗೆ ಮುಂದೆ ಬಂದಿದ್ದು, ವಿಶ್ಲೇಷಕರು ಈಗ ಒಂದು ಬ್ರಹ್ಮೋಸ್ ಬೆಲ್ಟ್ ತಯಾರಾಗುವ ಕುರಿತು ಮಾತನಾಡುತ್ತಿದ್ದಾರೆ. ರಕ್ಷಣಾ ಸಚಿವರು 12ರಿಂದ 13 ದೇಶಗಳು ಬ್ರಹ್ಮೋಸ್ ಕುರಿತು ಆಸಕ್ತಿ ಹೊಂದಿವೆ ಎಂದಿದ್ದು, ಡಾ. ಮಿಶ್ರಾ ಅವರು ಯಾವ ದೇಶವನ್ನು ಹೆದರಿಸದಿದ್ದರೂ, ಮಧ್ಯ ಪೂರ್ವ, ಆಫ್ರಿಕಾ ಮತ್ತು ದಕ್ಷಿಣ ಆಫ್ರಿಕಾಗಳಿಂದಲೂ ಕ್ಷಿಪಣಿಗೆ ಬೇಡಿಕೆ ಇರುವುದನ್ನು ಉಚಿತಪಡಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಏಳರಿಂದ ಎಂಟು ರಫ್ತು ಒಪ್ಪಂದಗಳು ಏರ್ಪಡುವ ನಿರೀಕ್ಷೆಯನ್ನು ಅವರು ಹೊಂದಿದ್ದಾರೆ. ಆದರೆ, ಕ್ಷಿಪಣಿಯ ಸಿಡಿತಲೆಗಳನ್ನು ಈಗಾಗಲೇ ಎಲ್ಲ ಬಳಕೆಗಳಿಗೆ ತಕ್ಕಂತೆ ರೂಪಿಸಿರುವುದರಿಂದ, ಕ್ಷಿಪಣಿಯನ್ನು ಖರೀದಿದಾರರ ನಿರೀಕ್ಷೆಗೆ ತಕ್ಕಂತೆ ಮಾರ್ಪಡಿಸುವುದು ಕೊಂಚ ಕಷ್ಟ ಎಂದು ಅವರು ತಿಳಿಸಿದ್ದಾರೆ. ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಗ್ರಾಹಕರನ್ನು ಸಂತೋಷಪಡಿಸುವುದು ಈಗ ನೈಜ ಪರೀಕ್ಷೆಯಾಗಿದೆ. ಆದರೆ, ಭಾರತೀಯ ಸೇನಾ ವಿಭಾಗಗಳೇ ಅತ್ಯಂತ ಕಟ್ಟುನಿಟ್ಟಿನ ಗ್ರಾಹಕರಾಗಿದ್ದು, ಅವರು ಮೆಚ್ಚಿದ ಆಯುಧ ಜಗತ್ತೇ ಮೆಚ್ಚಬಹುದು ಎಂದು ಡಾ. ಮಿಶ್ರಾ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಸ್ವಾವಲಂಬನೆಯ ವಿಚಾರದಲ್ಲೂ ಬ್ರಹ್ಮೋಸ್ ಮಹತ್ವದ್ದಾಗಿದೆ. ಕ್ಷಿಪಣಿ ಬಹುತೇಕ 80ರಿಂದ 85% ದೇಶೀಯ ನಿರ್ಮಾಣದ್ದಾಗಿದ್ದು, ಸಂಪೂರ್ಣ ದೇಶೀಯ ನಿರ್ಮಾಣವೂ ಕೈಗೆಟುಕುವ ಅಂತರದಲ್ಲಿದೆ. ಆದರೆ, ಬ್ರಹ್ಮೋಸ್ ರಷ್ಯಾ ಜೊತೆಗಿನ ಜಂಟಿ ಉದ್ಯಮವಾಗಿದ್ದು, ಒಂದು ಪಕ್ಷಕ್ಕೆ ಉದ್ಯಮದಲ್ಲಿ ಪಾಲು ಲಭಿಸದಿದ್ದರೆ ಅದು ಸಹಭಾಗಿತ್ವವಾಗಲಾರದು.

ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಳಿಕ ಕ್ಷಿಪಣಿಯಲ್ಲಿ ಏನು ಮಾರ್ಪಾಡು ಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಸುಧಾರಣೆ ಎಂದಿಗೂ ಮುಕ್ತಾಯವಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬ್ರಹ್ಮೋಸ್, ಆಕಾಶ್ ಮತ್ತು ನೇತ್ರಾ ಎಲ್ಲವೂ ಮುಂದಿನ ಹಂತಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಎಲ್ಲ ಪ್ರಮುಖ ಆಯುಧಗಳೂ ಇದೇ ರೀತಿ ಸುಧಾರಣೆ ಹೊಂದಲೇಬೇಕಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್ ಗಾಂಧಿಗೆ ಬಿಗ್ ರಿಲೀಫ್: 2018ರ ಮಾನನಷ್ಟ ಮೊಕದ್ದಮೆ ಕೇಸ್ ವಜಾಗೊಳಿಸಿದ ಸುಲ್ತಾನ್‌ಪುರ ಕೋರ್ಟ್..!

ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ: ಆ್ಯಂಬುಲೆನ್ಸ್ ಸೇರಿ ಹಲವರು ವಾಹನಗಳಿಗೆ ಡಿಕ್ಕಿ; ಕೂದಲೆಳೆ ಅಂತರದಲ್ಲಿ ವಿಪಕ್ಷ ನಾಯಕ ಪಾರು, ಹಲವರಿಗೆ ಗಾಯ..!

ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು!

ಸಿದ್ದರಾಮಯ್ಯ ವಿರುದ್ಧದ 'ಸ್ಟಿಂಗ್ ಆಪರೇಷನ್' ಪ್ರಕರಣ: ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ವಿಚಾರಣೆ!

ಬ್ರೆಜಿಲ್ ನಲ್ಲಿ ಟ್ರಂಪ್ ವಿರೋಧಿ ಲೂಯಿಜ್ ಇನಾಸಿಯೊ ಲುಲಾಗೆ ಮತ್ತೆ ಅಧಿಕಾರ; ನಾಲ್ಕನೇ ಬಾರಿಗೆ ಅಧ್ಯಕ್ಷ ಸ್ಥಾನ