ಸೆಪ್ಟೆಂಬರ್ 2ರಂದು, ಒಂದು ಸುಖೋಯಿ ಸು-30ಎಂಕೆಐ ವಿಮಾನ ಎತ್ತರಕ್ಕೆ ಹಾರಿ, ತನ್ನನ್ನು ತಾನು ಸ್ಥಿರಗೊಳಿಸಿ, ಒಂದು ತೂಕದ, ಸಿಲಿಂಡರ್ ಆಕಾರದ ವಸ್ತುವೊಂದನ್ನು ಬಿಡುಗಡೆಗೊಳಿಸಿತು. ಆ ವೇಳೆ ಯಾವುದೇ ರಾಕೆಟ್‌ನ ಗರ್ಜನೆಯಾಗಲಿ, ದಿಗಂತದಲ್ಲಿ ಬೆಂಕಿಯ ಸಾಲಾಗಲಿ ಕಾಣಲಿಲ್ಲ. ಆ ವಸ್ತು ವಿಮಾನದಿಂದ ಬೀಳತೊಡಗಿತು, ಬೀಳುತ್ತಾ ತನ್ನ ಬದಿಗಳಿಂದ ಒಂದು ಜೊತೆ ರೆಕ್ಕೆಯನ್ನು ತೆರೆಯಿತು, ಮತ್ತು ಹಾರಾಟ ನಡೆಸಲು ಆರಂಭಿಸಿತು!
ನೂರಾರು ಕಿಲೋಮೀಟರ್ ಕ್ರಮಿಸಿದ ಬಳಿಕ, ಅದು ತನ್ನ ಮುಖವನ್ನು ಕೆಳಗಿಳಿಸಿ, ತನ್ನ ಗುರಿಯ ಕೇಂದ್ರದ ಮೇಲೆ ನಿಖರವಾಗಿ ದಾಳಿ ನಡೆಸಿತು. ಕೆಲವೇ ಗಂಟೆಗಳ ಒಳಗೆ ಇದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದವು. ಬಳಿಕ ಭಾರತೀಯ ವಾಯು ಸೇನೆ ಸಂಪೂರ್ಣವಾಗಿ ಭಾರತೀಯ ನೆಲದಲ್ಲೇ ಸಿದ್ಧವಾದ ಆಯುಧದ ಆಗಮನವನ್ನು ಘೋಷಿಸಿತು.
ಈ ಆಯುಧದ ಹೆಸರು ಖಗಾಂತಕ್-243. ಇದನ್ನು ಕಲ್ಪಿಸಿಕೊಳ್ಳುವ ಸರಳ ವಿಧಾನವೆಂದರೆ, ಒಂದು ಉದ್ದೇಶ, ಗುರಿಯನ್ನು ಹೊತ್ತು ಹಾರುವ ಕಾಗದದ ವಿಮಾನವನ್ನು ಊಹಿಸುವುದು! ಒಂದು ಸಾಧಾರಣ ಬಾಂಬ್ ಮೇಲಿನಿಂದ ನೇರವಾಗಿ ಕೆಳಗೆ ಬೀಳುತ್ತದೆ. ಇದನ್ನು ಬೀಳಿಸಬೇಕೆಂದರೆ, ಯುದ್ಧ ವಿಮಾನ ತನ್ನ ಗುರಿಗೆ ಅಪಾಯಕಾರಿಯಾಗಿ ಹತ್ತಿರಕ್ಕೆ ಸಾಗಬೇಕಾಗುತ್ತದೆ.
ಆದರೆ, ಗ್ಲೈಡ್ ಬಾಂಬ್ ಬಳಕೆಯಲ್ಲಿ ಇದರ ಅವಶ್ಯಕತೆ ಇಲ್ಲ. ಒಂದು ಬಾರಿ ಬಿಡುಗಡೆಗೊಳಿಸಿದರೆ, ಮುಚ್ಚಿಟ್ಟಿರುವ ಅದರ ರೆಕ್ಕೆಗಳು ತೆರೆದುಕೊಂಡು, ಸಮುದ್ರದ ಗಾಳಿಯ ಮೇಲೆ ಆಲ್ಬಟ್ರಾಸ್ ಪಕ್ಷಿ ಸಾಗುವಂತೆ ಗಾಳಿಯನ್ನು ಹಿಡಿದು ಸಾಗುತ್ತದೆ. ಇದು ಕೆಲವು ಸೆಕೆಂಡುಗಳ ಬದಲು, ಹಲವಾರು ನಿಮಿಷಗಳ ಹಾರಾಟ ನಡೆಸುತ್ತದೆ. ವಾಯುಪಡೆ ಇದನ್ನು 'ಸ್ಟ್ಯಾಂಡ್ ಆಫ್ ಸಾಮರ್ಥ್ಯ' ಎಂದು ಕರೆದಿದೆ. ಸರಳವಾಗಿ ಹೇಳುವುದಾದರೆ, ಪೈಲಟ್ ಇದನ್ನು ಸಾಕಷ್ಟು ದೂರದಿಂದ ಬಿಡುಗಡೆಗೊಳಿಸಿ, ಶತ್ರುವಿನ ಕ್ಷಿಪಣಿಗಳು ಮತ್ತು ರೇಡಾರ್ ವ್ಯಾಪ್ತಿಗೆ ಸಿಲುಕದಂತೆ ಮನೆಯತ್ತ ಸಾಗಬಹುದು.
ಈ ಆಯುಧದ ಹೆಸರೂ ಒಂದು ಬೆದರಿಕೆಯನ್ನು ಹೊಂದಿದೆ. ಖಗಾಂತಕ ಎನ್ನುವ ಸಂಸ್ಕೃತ ಪದದಿಂದ ಈ ಹೆಸರು ಬಂದಿದ್ದು, 'ಪಕ್ಷಿಗಳ ನಾಶಕ' ಎನ್ನುವ ಅರ್ಥವನ್ನು ಹೊಂದಿದೆ. ಈ ಪದವನ್ನು ಸಾಮಾನ್ಯವಾಗಿ ಆಗಸದಲ್ಲಿನ ಬೇಟೆಗಾರರಾದ ಹದ್ದು, ಗಿಡುಗ, ಗರುಡಗಳಿಗೆ ಬಳಸಲಾಗುತ್ತದೆ. ಕೆಳಗಿಳಿದು ದಾಳಿ ನಡೆಸುವ ಮುನ್ನ ಮೌನವಾಗಿಯೇ ಮೇಲೇರುವ ಆಯುಧಕ್ಕೆ ಈ ಹೆಸರು ಸಮರ್ಪಕವಾಗಿ ಹೊಂದಿಕೆಯಾಗುತ್ತದೆ.
ಖಗಾಂತಕ್-243 ಆಯುಧ 300 ಕೆಜಿ ತೂಕದ ವರ್ಗಕ್ಕೆ ಸೇರುತ್ತದೆ. ಮತ್ತು ಇದು ನಿಖರ ಮಾರ್ಗದರ್ಶನ ವ್ಯವಸ್ಥೆ ಹೊಂದಿರುವ ಸ್ಮಾರ್ಟ್ ಬಾಂಬ್ ಆಗಿದೆ. ಅಂದರೆ, ಇದು ಕೇವಲ ಗುರುತ್ವಾಕರ್ಷಣೆಯ ಮೇಲೆ ಅವಲಂಬಿತವಾಗುವ ಬದಲು, ಗಾಳಿಯಲ್ಲೇ ತನ್ನ ಪಥವನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ. ಇದು 140ರಿಂದ 180 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಈ 40 ಕಿಲೋಮೀಟರ್ ವ್ಯತ್ಯಾಸ ಸಮಸ್ಯೆಯಲ್ಲ, ಬದಲಿಗೆ ಸರಳ ಭೌತಶಾಸ್ತ್ರ. ಇದನ್ನು ಹೆಚ್ಚು ಎತ್ತರದಿಂದ ಪ್ರಯೋಗಿಸಿದರೆ, ಅದಕ್ಕೆ ತೇಲುತ್ತಾ ಸಾಗಲು ಹೆಚ್ಚು ಗಾಳಿ ಸಿಗುತ್ತದೆ. ಬೆಟ್ಟದ ಮೇಲಿನಿಂದ ಎಸೆದ ಕಲ್ಲು ನೆಲ ಮುಟ್ಟುವ ಮುನ್ನ ಹೆಚ್ಚು ದೂರ ಸಾಗಿರುತ್ತದೆ. ಅದೇ, ನೆಲದಲ್ಲೇ ಎಸೆದ ಕಲ್ಲು ಅಷ್ಟು ದೂರ ಸಾಗುವುದಿಲ್ಲ. ಇಲ್ಲಿ ಎತ್ತರವೇ ಪರಿಣಾಮಕಾರಿ, ಉಚಿತ ಇಂಧನವಾಗುತ್ತದೆ.
ಭಾರತ ರಕ್ಷಿಸಲು ಉದ್ದೇಶಿಸಿರುವ ಭೂ ಪ್ರದೇಶವನ್ನು ನಮ್ಮ ಇಂಜಿನಿಯರ್‌ಗಳು ಎಷ್ಟು ಉತ್ತಮವಾಗಿ ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಎರಡು ವಿನ್ಯಾಸದ ಆಯ್ಕೆಗಳು ಸಾಕ್ಷಿಯಾಗಿವೆ. ಈ ಬಾಂಬ್ ಜಾಮಿಂಗ್ ನಿರೋಧಕತೆಯನ್ನು ಹೊಂದಿದೆ. ಶತ್ರುಗಳು ಗಾಳಿಯಲ್ಲಿ ತಪ್ಪು ಸಂಕೇತಗಳನ್ನು ರವಾನಿಸಿ, ತಮ್ಮತ್ತ ಸಾಗಿ ಬರುವ ಆಯುಧವನ್ನು ಗೊಂದಲಗೊಳಿಸುವ ಸಾಧ್ಯತೆಗಳಿವೆ. ಆದರೆ, ಈ ನಿರೋಧಕತೆ ಅದಕ್ಕೆ ಪ್ರತಿರೋಧ ಒಡ್ಡುತ್ತದೆ. ಈ ಬಾಂಬ್ -40 ಡಿಗ್ರಿ ಸೆಲ್ಸಿಯಸ್ ತಣ್ಣಗಿನ ವಾತಾವರಣದಿಂದ 70 ಡಿಗ್ರಿ ಸೆಲ್ಸಿಯಸ್ ತನಕ ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿದೆ. ಈ ಸಾಮರ್ಥ್ಯವೇ ಲೋಹಗಳು ಪುಡಿಯಾಗುವ, ಬ್ಯಾಟರಿಗಳು ಹಾಳಾಗುವ ಹಿಮಾಲಯದ ತಣ್ಣಗಿನ ವಾತಾವರಣದಿಂದ ಥಾರ್ ಮರುಭೂಮಿಯ ಸುಡುಬಿಸಿಲಿನ ವಾತಾವರಣದ ತನಕ ಎಲ್ಲೆಡೆಯೂ ಇದು ಕಾರ್ಯಾಚರಿಸುವಂತೆ ಮಾಡುತ್ತದೆ. ಒಂದೇ ಆಯುಧ ಎರಡು ತೀವ್ರ ಹವಾಮಾನಗಳಲ್ಲಿ ಯಾವುದೇ ನೆಪ ಹೇಳದೆ ಕಾರ್ಯಾಚರಿಸುತ್ತದೆ.
ಸದ್ಯದ ಮಟ್ಟಿಗೆ, ಕೇವಲ ಸು-30ಎಂಕೆಐ ಯುದ್ಧ ವಿಮಾನ ಮಾತ್ರವೇ ಈ ಬಾಂಬನ್ನು ತನ್ನೊಡನೆ ಒಯ್ಯಬಲ್ಲದು. ಮಿರೇಜ್-2000 ಮತ್ತು ಮಿಗ್-29 ಯುದ್ಧ ವಿಮಾನಗಳಿಗೂ ಇದನ್ನು ಅಳವಡಿಸಲು ಪ್ರಯತ್ನ ನಡೆಸಲಾಗುತ್ತಿದೆ. ಇದು ಬಾಂಬನ್ನು ಬಳಸುವ ಸ್ಕ್ವಾಡ್ರನ್‌ಗಳ ವ್ಯಾಪ್ತಿಯನ್ನೂ ಹೆಚ್ಚಿಸುತ್ತದೆ.
ಖಗಾಂತಕ್ ಕೇವಲ ಒಂದು ಆಯುಧ ಮಾತ್ರವಲ್ಲ. ಇದು ಒಂದು ಆಯುಧ ವ್ಯವಸ್ಥೆಯ ಆರಂಭ. ಇದನ್ನು ಜೆಎಸ್ಆರ್ ಡೈನಾಮಿಕ್ಸ್ ಮತ್ತು ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಜಂಟಿಯಾಗಿ ಅಭಿವೃದ್ಧಿ ಪಡಿಸಿವೆ. ಇನ್ನು ನಾಲ್ಕು ದೀರ್ಘ ವ್ಯಾಪ್ತಿಯ ಗ್ಲೈಡ್ ಬಾಂಬ್‌ಗಳು ಸಿದ್ಧಗೊಳ್ಳುತ್ತಿದ್ದು, 243 ಈ ವರ್ಗದ ಅತ್ಯಂತ ಸಣ್ಣ ಬಾಂಬ್ ಆಗಿದೆ. ಇವುಗಳನ್ನು ಒಂದೇ ಪರಿಕಲ್ಪನೆಯ ನಾಲ್ಕು ಗಾತ್ರಗಳು ಎಂದುಕೊಳ್ಳಿ. ಇವುಗಳು ಒಂದೇ ಹಾರಾಟದ ತಂತ್ರ ಹೊಂದಿದ್ದರೂ, ನೀಡುವ ಹೊಡೆತ ಭಿನ್ನವಾಗಿರುತ್ತವೆ. ಇನ್ನು ಖಗಾಂತಕ್ 450 ಎನ್ನುವುದು 500 ಕೆಜಿ ವಿಭಾಗದ ಆಯುಧವಾದರೆ, ಖಗಾಂತಕ್ 720 ಬಾಂಬ್ 720 ಕೆಜಿ ವರ್ಗದ ಆಯುಧವಾಗಿದೆ. ಇವೆರಡೂ ಬಹುತೇಕ ಅಷ್ಟೇ ಅಂತರದಲ್ಲಿ ಹೆಚ್ಚು ತೂಕದ ಸಿಡಿತಲೆಗಳನ್ನು ಒಯ್ಯುತ್ತವೆ. ವ್ಯಾಪ್ತಿಯಲ್ಲಿ ಸಮಾನವಾಗಿದ್ದರೂ, ಹೊಡೆತದಲ್ಲಿ ವ್ಯತ್ಯಾಸವಿದೆ. ಇನ್ನು ಇವುಗಳಲ್ಲಿ ಅತ್ಯಂತ ದೊಡ್ಡದಾದ ಕೆ1260 ಬಹುತೇಕ 1,000 ಕೆಜಿ ತೂಕದ ಬಾಂಬನ್ನು 100 ಕಿಲೋಮೀಟರ್ ವ್ಯಾಪ್ತಿಗೆ ಒಯ್ಯಬಲ್ಲದು. ಇದು ಕಡಿಮೆ ದೂರಕ್ಕೆ ಹಾರಾಟ ನಡೆಸುತ್ತದಾದರೂ, ತನ್ನ ವರ್ಗದಲ್ಲೇ ಅತ್ಯಧಿಕ ಪ್ರಮಾಣದ ದಾಳಿ ನಡೆಸುತ್ತದೆ.
ಈ ವರ್ಗದ ಆಚೆ ಒಂದು ಮಹತ್ವದ ಬದಲಾವಣೆ ನಡೆಯುತ್ತಿದೆ. ಭಾರತ ಮಾರಕ ಆಯುಧಗಳನ್ನು ವಿದೇಶಗಳಿಂದ ಖರೀದಿಸುವ ಬದಲು, ಅವುಗಳನ್ನು ತಾನೇ ನಿರ್ಮಿಸುವತ್ತ ಸಾಗುತ್ತಿದೆ. ನಮ್ಮ ವಿಜ್ಞಾನಿಗಳು ಏಕಕಾಲದಲ್ಲಿ ಕನಿಷ್ಠ ಮೂರು ಭಾರತೀಯ ಗ್ಲೈಡ್ ಆಯುಧಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು, ಅವು ಪರೀಕ್ಷಾ ಹಂತದಲ್ಲಿವೆ. ಗೌರವ್, ಗೌತಮ್, ಮತ್ತು ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್‌ಗಳು ಈ ದಶಕದ ಕೊನೆಯಲ್ಲಿ ಸೇವೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆಗಳಿವೆ.
ಇಂತಹ ಪ್ರತಿಯೊಂದು ಯೋಜನೆಯ ಹಿಂದೆಯೂ ವರ್ಷಗಳ ತಾಳ್ಮೆ, ಅವಿರತ ಪರಿಶ್ರಮ, ರೆಕ್ಕೆಗಳ ಕುರಿತು ಇಂಜಿನಿಯರ್‌ಗಳು ನಡೆಸಿರುವ ಕಾರ್ಯಗಳು, ರಾತ್ರಿಯ ವೇಳೆ ನಡೆಸುವ ಕೋಲ್ಡ್ ಟೆಸ್ಟ್‌ಗಳು, ಬಾಂಬ್ ಸರಿಯಾದ ಜಾಗದಲ್ಲೇ ಬೀಳುವಂತೆ ಖಾತ್ರಿಪಡಿಸಲು ವಾಯು ಪಡೆಯ ಸಿಬ್ಬಂದಿಗಳು ಒಂದರ ನಂತರ ಒಂದರಂತೆ ನಡೆಸಿರುವ ಅಸಂಖ್ಯ ಸಾರ್ಟೀಗಳು ಸೇರಿವೆ. ಅವರ ಕುಟುಂಬಗಳು ತಮ್ಮವರಿಂದ ಅದೆಷ್ಟೋ ದಿನಗಳು ದೂರಾಗಿರಬೇಕಿದೆ. ಇಂತಹ ಗ್ಲೈಡ್ ಬಾಂಬ್‌ಗಳು ಹೆಚ್ಚುವರಿಯಾಗಿ ಸಾಗುವ ಒಂದೊಂದು ಕಿಲೋಮೀಟರ್ ಸಹ ನಮ್ಮ ಪೈಲಟನ್ನು ಅಪಾಯದಿಂದ ಅಷ್ಟೇ ದೂರ ಇರಿಸುತ್ತದೆ. ಅದು ಈ ಆಯುಧಗಳು ನೀಡುವ ಮಾನವೀಯ ನೆರವು.
ಈ ಸಾಮರ್ಥ್ಯದ ಪರಿಣಾಮವಾಗಿ, ಭಾರತೀಯ ಯುದ್ಧ ವಿಮಾನಗಳಿಗೆ ಗುರಿ ವ್ಯಾಪ್ತಿಯೊಳಗೆ ಲಭಿಸಿ, ಪೈಲಟ್ ಅಪಾಯದಿಂದ ದೂರ ಉಳಿಯಲು ಸಾಧ್ಯವಾಗುತ್ತದೆ. ಇನ್ನು ಭಾರತದ ರಕ್ಷಣಾ ಉದ್ಯಮ ದೇಶೀಯ ತಂತ್ರಜ್ಞರ ಮೇಲೆ ನಂಬಿಕೆ ಇರಿಸಲಾರಂಭಿಸಿದೆ. ನಿಖರತೆ, ಶಕ್ತಿ ಮತ್ತು ಹೆಮ್ಮೆಗಳು ಈಗ ಆಮದಿಗೆ ಸೀಮಿತವಾಗಿಲ್ಲ. ಅವುಗಳನ್ನು ಇಲ್ಲಿ, ನಮ್ಮದೇ ನೆಲದಲ್ಲಿ, ನಮ್ಮ ಜನರೇ ಅಭಿವೃದ್ಧಿ ಪಡಿಸುತ್ತಿದ್ದು, ಈ ಆಯುಧಗಳು ನಮ್ಮ ಆಗಸವನ್ನು ರಕ್ಷಿಸಲಿವೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)